ಗಿರೀಶ್ ಕಾಸರವಳ್ಳಿ-ಕಿರು ಪರಿಚಯಗಿರೀಶ್ ಹುಟ್ಟಿದ್ದು ಕಾಸರವಳ್ಳಿಯೆಂಬ ಶೃಂಗೇರಿ ಸಮೀಪದ ಊರಿನ ಒಂದು ಕೃಷಿ ಕುಟುಂಬದಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ಶೃಂಗೇರಿ ಮತ್ತು ಶಿವಮೊಗ್ಗೆಯಲ್ಲಿ. ಮಣಿಪಾಲಿನ ಕಾಲೇಜಿನಿಂದ ಫಾರ್ಮಸಿ ಪದವಿ; ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣ. ೧೯೭೦: ನವ್ಯ ಚಳುವಳಿ, ಕನ್ನಡದ ಸಾಂಸ್ಕೃತಿಕ ಚಿತ್ರ ಬದಲಾಯಿಸಿದ ಸಮಯ. ಈ ಸಮಯದಲ್ಲಿಯೇ ಕನ್ನಡ ರಂಗಭೂಮಿ, ಸಾಹಿತ್ಯ ಮತ್ತು ಸಿನೆಮಾದಲ್ಲಿ ಹೊಸ ಗಾಳಿ ಬೀಸಲಾರಂಭಿಸಿತ್ತು. ಸಹಜವಾಗಿಯೇ ತರುಣ ಗಿರೀಶ್ ಈ ಸಮಯದ ಗುಣಗಳಿಂದ ಆಕರ್ಷಿತರಾದರು, ಮತ್ತು ಈ ಚಳುವಳಿಯಲ್ಲಿ ಸಕ್ರಿಯರಾದರು. ಬಳಿಕ ಪುಣೆಯ ಫಿಲಮ್ ಇನ್ಸ್ಟಿಟ್ಯೂಟ್ ಸೇರಿ ಅಲ್ಲಿಂದ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣ. ಇವರ ಮೊದಲ ಚಿತ್ರ ‘ಅವಶೇಷ’ ಕೇವಲ ವಿದ್ಯಾರ್ಥಿ ಚಿತ್ರವಾಗಿ ಪುಣೆ ಫಿಲಮ್ ಇನ್ಸ್ಟಿಟ್ಯೂಟ್ ನಲ್ಲಿ ಗೆದ್ದದ್ದು ಮಾತ್ರವಲ್ಲದೇ ಗಿರೀಶ್ ರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನೂ ತಂದು ಕೊಟ್ಟಿತು. ತಮ್ಮ ಇಪ್ಪತ್ತೈದು ವರ್ಷಗಳ ವೃತ್ತಿ ಜೀವನದಲ್ಲಿ ಗಿರೀಶ್ ನಿರ್ದೇಶಿಸಿದ್ದು ಕೇವಲ ಒಂಬತ್ತು ಚಿತ್ರಗಳನ್ನು. ಇದು ಅವರ ಚಿತ್ರಗಳ ಆಯ್ಕೆಯಲ್ಲಿನ ಸೂಕ್ಷ್ಮತೆಯನ್ನು ತೋರಿಸುತ್ತದೆ. ಆದರೆ ಈ ಒಂಬತ್ತು ಚಿತ್ರಗಳು ಅವರಿಗೆ ಎಂಟು ರಾಷ್ಟ್ರೀಯ ಮಟ್ಟದ , ಆರು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ತಂದುಕೊಟ್ಟಿತು. ಹದಿನೈದು ರಾಷ್ಟ್ರ ಮಟ್ಟದ ಮೂವತ್ತೆರಡು ರಾಜ್ಯ ಮಟ್ಟದ ಪ್ರಶಸ್ತಿ ಅವರ ಚಿತ್ರಗಳಿಗೆ ಪ್ರಾಪ್ತವಾಗಿದೆ. ಅವರು ರಾಷ್ಟ್ರಪತಿ ಪುರಸ್ಕಾರವನ್ನು ಎಂಟು ಬಾರಿ ಪಡೆದುಕೊಂಡಿದ್ದಾರೆ. ಅದರಲ್ಲಿ ನಾಲ್ಕು ಸ್ವರ್ಣ ಕಮಲ (ಘಟಶ್ರಾದ್ಧ ೧೯೭೮, ತಬರನ ಕತೆ ೧೯೮೭, ತಾಯಿಸಾಹೇಬ ೧೯೯೮, ದ್ವೀಪ ೨೦೦೨). ಇವರು ಅತ್ಯಂತ ಕಿರಿ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವರ್ಣ ಕಮಲ ಗೆದ್ದ ದಿಗ್ದರ್ಶಕರು. ಎರಡು ಬಾರಿ ಸ್ವರ್ಣ ಕಮಲ ಗೆದ್ದ ಏಕೈಕ ಭಾರತೀಯ ನಿರ್ದೇಶಕ. ಈ ಪ್ರತಿಷ್ಟಿತ ಪ್ರಶಸ್ತಿಯನ್ನು ನಾಲ್ಕು ಬಾರಿ ಪಡೆದುಕೊಂಡ ಮೂವರು ನಿರ್ದೇಶಕರಲ್ಲಿ ಇವರೂ ಒಬ್ಬರು (ಇನ್ನಿಬ್ಬರು ಸತ್ಯಜಿತ್ ರೇ ಮತ್ತು ಮೃಣಾಲ್ ಸೇನ್). ದಕ್ಷಿಣ ಭಾರತದಿಂದ ಏಕೈಕ ನಿರ್ದೇಶಕ. ಇವರ ಚಿತ್ರಗಳು ಮಾಸ್ಕೋ, ನ್ಯೂ ಯಾರ್ಕ್, ಲಂಡನ್, ಸಿಡ್ನಿ. ಕೊಲಂಬೊ ಇನ್ನಿತರ ನಗರಗಳಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿವೆ.೧೯೯೬ರಲ್ಲಿ ಸಿನೆಮಾದ ನೂರನೇ ವರ್ಷದ ಸಂಭ್ರಮಾಚರಣೆಯಲ್ಲಿ Cinematheque De France ಪ್ಯಾರಿಸ್ ನಲ್ಲಿ ಪ್ರದರ್ಶಿಸಲು ಆಯ್ಕೆ ಮಾಡಿದ ಜಗತ್ತಿನ ನೂರು ಚಿತ್ರಗಳಲ್ಲಿ ಭಾರತದಿಂದ ಆಯ್ಕೆಯಾದ ಏಕೈಕ ಚಿತ್ರ ಗಿರೀಶರ ’ಘಟಶ್ರಾದ್ಧ’. ಕಳೆದ ವರ್ಷ ಢಾಕಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇವರ ಚಿತ್ರಗಳೆಲ್ಲ ಪ್ರದರ್ಶಿತವಾಗಿದ್ದವು. ೧೯೯೮ ರಲ್ಲಿ ಟೈಮ್ಸ್ ಆಫ್ ಇಂಡಿಯಾ ಇವರನ್ನು ಭಾರತದ ಅತ್ಯಂತ ಪ್ರಮುಖ ನಿರ್ದೇಶಕ ಎಂದು ಗುರುತಿಸಿತು. ಕನ್ನಡದ ಸಿನೆಮಾಕ್ಕೆ ನೀಡಿದ ಕೊಡುಗೆಗಾಗಿ ೯೮ ರಲ್ಲಿ ಇವರನ್ನು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯಿಂದ ಸನ್ಮಾನಿಸಲಾಯಿತು. ಆದರ್ಶ ಫಿಲ್ಂ ಇನ್ಸ್ಟಿಟ್ಯೂಟ್ ನ ಪ್ರಾಂಶುಪಾಲರಾಗಿ ಎಂಟು ವರ್ಷ ಸೇವೆ ಸಲ್ಲಿಸಿದ್ದಾರೆ. ಮೂರು ಬಾರಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಚೇರಮನ್ ಮತ್ತು ಜೂರಿಯಾಗಿ, ಮತ್ತು ಐದು ಬಾರಿ ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಈ ಹುದ್ದೆಯನ್ನು ನಿರ್ವಹಿಸಿದ್ದಾರೆ. ಸಿನೆಮಾದ ಕಲೆ ಮತ್ತು ಸೌಂದರ್ಯದ ಕುರಿತು ಕನ್ನಡದಲ್ಲಿ ಮೂರು ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಗಿರೀಶ್ ಕನ್ನಡ ಚಿತ್ರರಂಗದ ಕ್ರಿಯಾತ್ಮಕ ಚಳುವಳಿಗಳ ಆಧಾರ ಸ್ತಂಭ. ಈ ಟಿವಿಗಾಗಿ ಇವರು ನಿರ್ದೇಶಿಸಿದ ಗೃಹಭಂಗ ಎಂಬ ಕಿರುತೆರೆಯ ಧಾರಾವಾಹಿ ಅತ್ಯಂತ ಜನಪ್ರಿಯತೆ ಪಡೆದುಕೊಂಡಿತ್ತು. ಮೂರು ವರ್ಷ ಅತ್ಯಂತ ಜನಪ್ರಿಯ ಸಿನೆಮಾ ಪತ್ರಿಕೆಯ ಸಂಪಾದಕರಿಗೆ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಿನೆಮಾದ ಕುರಿತ ತಿಳುವಳಿಕೆ ಮೂಡಿಸಲು ಕೆ.ವಿ ಸುಬ್ಬಣ್ಣ ನವರ ಕನಸಿನ ’ಜನಸ್ಪಂದನ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಇವರು ಮುನ್ನಡೆಸಿದ್ದರು. ಪುಣೆಯ ಟಿವಿ ಮತ್ತು ಫಿಲ್ಂ ಇನ್ಸ್ಟಿಟ್ಯೂಟ್ ನಲ್ಲಿ ಅಕಾಡೆಮಿಕ್ ಕೌನ್ಸಿಲ್ ಮತ್ತು ಗವರ್ನಿಂಗ್ ಕೌನ್ಸಿಲರ್ ಆಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಕಾಸರವಳ್ಳಿ ಕಲಾಕೃತಿಗಳು: ೧. ಘಟಶ್ರಾದ್ಧ ೧೯೭೭ Photo by Shekharpoorna
|
|