ಚಿತ್ರ ವಿಮರ್ಶೆ • ಎನ್.ಸಿ.ಮಹೇಶ್ ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನ-ಈ ಮೂರೂ ವಿಭಾಗಳಲ್ಲಿ ಕಾರ್ಯತತ್ಪರರಾಗುವ ಯಾರೇ ಆಗಲಿ ಸೃಜನಶೀಲತೆಯನ್ನು ಸವಾಲನ್ನಾಗಿ ಸ್ವೀಕರಿಸುವ ಮನೋಧರ್ಮ ಇರಿಸಿಕೊಳ್ಳುವ ಬದಲು ತಾವು ನಿಜಕ್ಕೂ ಸೃಜನಶೀಲರಾಗಿರುವುದು ಯಾವ ವಿಭಾಗದಲ್ಲಿ ಎಂದು ಗುರುತಿಸಿಕೊಂಡು ಮುಂದುವರೆಯುವುದು ಒಳಿತು. ಪಿ.ಶೇಷಾದ್ರಿ ನಿರ್ದೇಶನದ ವಿಮುಕ್ತಿ ಚಿತ್ರ ನೋಡಿದಾಗ ಈ ಅಂಶ ಸ್ಪಷ್ಟವಾಗುತ್ತದೆ. ಶೇಷಾದ್ರಿಯವರು ತಾವೇ ಕತೆ ಬರೆಯುವ ಜವಾಬ್ದಾರಿ ತೆಗೆದುಕೊಂಡು( ಅದೂ ನಾಲ್ಕು ಕಥೆಗಾರರೊಂದಿಗೆ ಚರ್ಚಿಸಿ!) ಮತ್ತು ಬರೆದ ನಂತರದಲ್ಲೂ ತಮ್ಮ ಕಥೆ ಎಲ್ಲೆಲ್ಲಿ ಪೇಲವವಾಗಿದೆ ಎಂಬುದನ್ನು ಗುರುತಿಸಿಕೊಳ್ಳಲು ವಿಫಲರಾಗಿರುವುದರ ಸ್ಪಷ್ಟ ಚಿತ್ರಣ ವಿಮುಕ್ತಿಯಲ್ಲಿ ಸಿಗುತ್ತದೆ. ಹೋಗಲಿ ದೃಶ್ಯಗಳನ್ನ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆಯೆ ಎಂದು ನೋಡೋಣ ಎಂದರೆ ಕಥಾಸಂರಚನೆಯಲ್ಲೇ ಅನೇಕ ತಾತ್ವಿಕ ಬಿಕ್ಕಟ್ಟುಗಳಿರುವುದರಿಂದ ಇಡೀ ಚಿತ್ರ ಬಿಳುಚಿಕೊಂಡಿದೆ. ಇಲೆಕ್ಟ್ರ ಕಾಂಪ್ಲೆಕ್ಸ್‌ನಂಥ ಸೈದ್ಧಾಂತಿಕ ಥಿಯರಿಯನ್ನ ಹೆಚ್ಚು ಥಿಯರೈಸ್ ಮಾಡಲಿಕ್ಕೂ ಗೊತ್ತಾಗದೆ, ಅದನ್ನ ಧ್ವನಿಪೂರ್ಣವಾಗಿ ಕಟ್ಟಿಕೊಡಲೂ ಬಾರದೆ ಕ್ರಮೇಣ ವಾಚ್ಯವಾಗಿಸುತ್ತ ಕಡೆಗೆ ಆಧ್ಯಾತ್ಮೀಕರಣಗೊಳಿಸಿ ಚಿತ್ರ ಮುಗಿಸಿದ್ದಾರೆ. ಮಗಳು ತನ್ನ ಅಪ್ಪನ ಬಗೆಗೆ ಬೆಳೆಸಿಕೊಳ್ಳುವ ಅತಿಯಾದ ವ್ಯಾಮೋಹ-ಈ ಎಳೆ ಅನೇಕರಿಗೆ ಹಲವು ಬಗೆಗಳಲ್ಲಿವಿಸ್ತರಣೆಗೆ ದಕ್ಕುತ್ತದೆ. ಆದರೆ ಕಥೆ ಹೆಣೆಯುವಾತ ಅರಿಯಬೇಕಾದ ಎರಡು ನೆಲೆಗಳಿವೆ. ದಟ್ಟ ಅನುಭವಗಳ ನೆಲೆಯಲ್ಲೇ ನು ಕಂಡ ಅಥವಾ ಅರ್ಥೈಸಿಕೊಂಡ ಜಗತ್ತನ್ನ ಕಟ್ಟುವುದು ಒಂದು ನೆಲೆಯಾದರೆ ಕಲ್ಪನೆಗಳ ಮೂಲಕವೇ ಕೃತಿಗೆ ಒಂದು ಹೊಸ ಆಯಾಮ ದೊರಕಿಸಿಕೊಡಲು ಪ್ರಯತ್ನಿಸುವುದು ಎರಡನೆಯ ನೆಲೆ. ಅಥವಾ ಈ ಎರಡೂ ನೆಲೆಗಳನ್ನು ಒಟ್ಟುಗೂಡಿಸಿ ಕಲ್ಪನೆ ಮತ್ತು ವಾಸ್ತವಗಳನ್ನ ಬೇರ್ಪಡಿಸಿ ಕಾಣಲು ಸಾಧ್ಯವಾಗದಂತೆ ಒಂದುಗೂಡಿಸುವುದು ನಿಜವಾದ ಮ್ಯಾಜಿಕ್. ಈ ಚಿತ್ರದ ಕಥೆಯಲ್ಲಿನ ಸಂಗತಿಗಳು ಪ್ರಾರಂಭದಿಂದಲೇ ಅನೇಕ ಸಂದಿಗ್ಧಗಳನ್ನ ಎದಿರುಗೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೆಲ ಹೆಣ್ಣುಮಕ್ಕಳು ತಮ್ಮ ಅಪ್ಪನ ಬಗೆಗೆ ಅತಿಯಾದ ವ್ಯಾಮೋಹ ಬೆಳೆಸಿಕೊಳ್ಳುವುದು ನಮ್ಮ ಅರಿವಿಗೆ ಬಂದಿರುವ ಸ್ಥಾಪಿತ ಸತ್ಯ. ಈ ನಿಜದ ಎಳೆ ಸಿನಿಮ್ಯಾಟಿಕ್ ಆಗಿಯೂ ಮತ್ತು ಕಲೆಗಾರಿಕೆಯ ದೃಷ್ಟಿಯಿಂದಲೂ ಜಸ್ಟಿಫೈಗೊಳಿಸುವುದು ಹೇಗೆ ಎಂದು ತಲೆಕೆಡಿಸಿಕೊಂಡಿರುವುದರಿಂದ ಒಂದು ಅತೀ ವೀಕ್ ಮತ್ತು ಅತೀ ವಾಚ್ಯ ಮೆಟಫರ್ ಶೇಷಾದ್ರಿಯವರಿಗೆ ಹೊಳೆದಿದೆ.ಇದನ್ನು ಚರ್ಚಿಸಲು ಕಥಾಹಂದರದ ಅಗತ್ಯತೆ ಇದೆ. ಅಪ್ಪ ಒಬ್ಬ ಪ್ರಖ್ಯಾತ ಚಿತ್ರಕಲಾವಿದ; ಅದರಲ್ಲೂ ಮೈಸೂರಿನ ಸಾಂಪ್ರದಾಯಿಕ ಶೈಲಿಯ ಚಿತ್ರಕಲೆಯಲ್ಲಿತನ್ನದೇ ಛಾಪು ಮೂಡಿಸಿರುವಾತ. ಈತನ ಮಗಳು ಮಾಧವಿಗೆ ಅಪ್ಪನ ಬಗೆಗೆ ಅತೀ ವ್ಯಾಮೋಹ. ಗಂಡನ ಬಗೆಗಿರಬೇಕಾದ ಕಾಮನೆಗಳೆಲ್ಲ ಅಪ್ಪನ ಕಡೆಗೆ ವರ್ಗಾವಣೆಯಾಗಿ ಅತೀ ಪೊಸೆಸಿವ್ ಆಗಿದ್ದಾಳೆ. ಇದು ಈಕೆಯಲ್ಲಿರುವ ಇಲೆಕ್ಟ್ರಾ ಕಾಂಪ್ಲೆಕ್ಸ್. ಈಕೆಯ ಅಪ್ಪನ ಬಳಿ ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆಯನ್ನ ಅಭ್ಯಾಸ ಮಾಡಲು ಬರುವ ನುವ ಎಂಬ ವಿದೇಶಿ ಮಹಿಳೆ ಮಾಧವಿಯಲ್ಲಿನ ಕಾಂಪ್ಲೆಕ್ಸಿಟಿ ಹೆಚ್ಚಾಗಲು೨ಕಾರಣಳಾಗುತ್ತಾಳೆ. ತನಗೀಗ ಕಲಿಸುವಷ್ಟು ತ್ರಾಣವಿಲ್ಲ ಎಂದಿದ್ದ ಅಪ್ಪ ನುವಳ ಒತ್ತಾಯಕ್ಕೆ ಮಣಿದು ನಂತರದಲ್ಲಿ ತುಂಬ ಉತ್ಸಾಹದಲ್ಲಿ ಕಲಿಸಲು ಆರಂಭಿಸುತ್ತಾನೆ. ಈ ಸಾಹಚರ್ಯ ಮಾಧವಿಯ ಅಸಹನೆಗೆ ಗುರಿಯಾಗುತ್ತಲೇ ಒಂದು ದಿನ ಸ್ಪೋಟಗೊಳ್ಳುತ್ತದೆ. ತನ್ನ ಮಗಳು ಇಂಥ ಮನೋಧರ್ಮದವಳೆಂದು ತಿಳಿದಿರಲಿಲ್ಲವೆಂದು ನೊಂದುಕೊಂಡು ಅಪ್ಪ ಮನೆಬಿಟ್ಟು ಹೊರಡುತ್ತಾನೆ. ಮಂದಿರ ಮತ್ತಷ್ಟು ತತ್ತರಿಸುತ್ತಾಳೆ. ತನ್ನ ಕಾಂಪ್ಲೆಕ್ಸಿಟಿ ಅರಿತುಕೊಳ್ಳುತ್ತಾಳೆ.ಅಲ್ಲಿಗೆ ಅವಳ ವ್ಯಾಮೋಹಕ್ಕೆ ತಾತ್ಕಾಲಿಕ ವಿಮುಕ್ತಿ ಸಿಗುತ್ತದೆ.ನಂತರದಲ್ಲಿ ಎಂಟು ವರ್ಷಗಳು ಕಳೆಯುತ್ತವೆ. ಮಂದಿರ ತಾಯಿಯಾಗಿದ್ದಾಳೆ.ಆಕೆಗೆ ಪುಟ್ಟ ಹೆಣ್ಣುಮಗಳಿದ್ದಾಳೆ. ಜೊತೆಗೆ ಡಿವೋರ್ಸ್ ಆಗಿದೆ. ಯಾಕೆ ಏನು ಇತ್ಯಾದಿಗಳೆಲ್ಲ ಕಡೆಗೂ ಇತ್ಯರ್ಥವಾಗದಸಸ್ಪೆನ್ಸ್. ದಿನಪತ್ರಿಕೆಯೊಂದರಲ್ಲಿ ಕಾಶಿಯಲ್ಲಿರುವ‘ಮುಕ್ತಿಧಾಮದ ಬಗೆಗಿನ ಪ್ರಕಟಣೆಯನ್ನ ಮಂದಿರ ಗಮನಿಸುತ್ತಾಳೆ. ಅವಳ ದೃಷ್ಟಿ ಆ ಪ್ರಕಟಣೆಯ ಕಡೆಗೆ ಹರಿಯಲು ತನ್ನ ಅಪ್ಪ ಬಿಡಿಸುತ್ತಿದ್ದ ಚಿತ್ರದ ಶೈಲಿಯಯದೇ ಆದ ಶಿವನ ಒಂದು ಚಿತ್ರ ಮುಕ್ತಿಧಾಮದ ಒಂದು ಕೋಣೆಯ ಗೋಡೆಯ ಮೇಲೆ ಕಾಣುತ್ತದೆ. ಅಪ್ಪ ಅಲ್ಲಿರಬಹುದೆಂದು ಮಂದಿರ ತನ್ನ ಮಗಳೊಂದಿಗೆ ಕಾಶಿಗೆ ಹೊರಡುತ್ತಾಳೆ. ಅಲ್ಲಿ ದೇಹ ತ್ಯಜಿಸಲು ಅಣಿಯಾಗಿರುವ ವೃದ್ಧ ಜೀವಗಳಿಂದ ಪ್ರೀತಿ-ವ್ಯಾಮೋಹಗಳ ಅಂತರ ಮತ್ತು ಅಂತರಾರ್ಥ ತಿಳಿಯುತ್ತದೆ. ಮಾಧವಿಯ ಹುಡುಕಾಟಕ್ಕೆ ದಕ್ಕದ ಅಪ್ಪ ಆಕೆಯ ಮಗಳಿಗೆ ತಾತನಾಗಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾನೆ.ಆದರೆ ನಿಜಕ್ಕೂ ತಮ್ಮ ಸಂಬಂಧ ತಾತ-ಮೊಮ್ಮಗಳದು ಎಂದು ಕಡೆಗೂ ಅರಿವಿಗೆ ಬರುವುದಿಲ್ಲ. ಕಡೆಗೆ ಆತ ಜೀವನ್ಮುಕ್ತನಾಗಬೇಕೆಂದು ಹೊರಟ ಸಂದರ್ಭದಲ್ಲಿ ಮಾಧವಿಗೆ ತನ್ನ ಮಗಳ ಮೂಲಕ ಎಲ್ಲ ಸ್ಪಷ್ಟವಾಗುತ್ತದೆ. ಮಂದಿರ ತನ್ನ ವಿಚ್ಛೇದಿತ ಗಂಡನಿಗೆ ಫೋನ್ ಮಾಡುತ್ತಾಳೆ; ಆದರೆ ಮಾತಾಡದೆ ಹೋಗುತ್ತಾಳೆ. ಮಗಳಿಗೆ ಅಪ್ಪನ ಉಸಿರೆತ್ತಬೇಡ ಎನ್ನುತ್ತಿದ್ದ ಮಾಧವಿ ಕಡೆಗೆ ಮಾತಾಡಲು ಮಗಳಿಗೆ ಫೋನ್ ಕೊಡುತ್ತಾಳೆ.ಇದು ಕಥೆಯ ಒಟ್ಟಂದದ ಹೊರ ರೂಪುರೇಷೆ. ಈ ಹೊರ ಆವರಣಕ್ಕಿರುವ ಬಿಗಿಬಂಧ ಒಳಗಿನ ಸೂಷ್ಮಾತಿಸೂಷ್ಮ ಇನ್‌ಪುಟ್‌ಗಳಿಗಿಲ್ಲ. ಇದೇ ಈ ಚಿತ್ರದ ನ್ಯೂನ್ಯತೆ. ನಿರ್ದೇಶಕರು ಚಿತ್ರದ ಪ್ರಾರಂಭದಲ್ಲಿ ಸಂಬಂಧಗಳ ನೆಲೆಗಳನ್ನು ಅರ್ಥೈಸಲು ಮತ್ತು ಮಗಳಲ್ಲಿರುವ ಕಾಂಪ್ಲೆಕ್ಸಿಟಿಯನ್ನ ಬಿಂಬಿಸಲು ರಾಧ-ಕೃಷ್ಣರ ಪೇಂಟಿಂಗ್ ಬಳಸಿಕೊಂಡಿದ್ದಾರೆ. ಕೃಷ್ಣನನ್ನಾಗಿ ತನ್ನ ಅಳಿಯನನ್ನು ಮತ್ತು ಮಗಳನ್ನು ರಾಧಾ ಆಗಿ ಕಾಣುವ ಅಪ್ಪ ಒಂದು ಕಡೆಯಾದರೆ ಮಗಳಿಗೆ ಈ ಚಿತ್ರ ಬೇರೆಬಗೆಯಲ್ಲೇ ಕಾಣುತ್ತದೆ. ಕೃಷ್ಣನಾಗಿ ತನ್ನ ಅಪ್ಪ ಹಾಗು ರಾಧೆಯಾಗಿ ತನ್ನನ್ನು ಕಂಡುಕೊಳ್ಳುವುದು ಒಂದು ಸಶಕ್ತ ಇಮೇಜ್ ಅನಿಸುವುದೇ ಇಲ್ಲ. ಬೇರೊಂದು ಆಕೃತಿಯಲ್ಲಿ ತನ್ನನ್ನು ಸುಪ್ತವಾಗಿ ಪರಿಭಾವಿಸುವುದು ಸಹಜ ಅನಿಸಿದರೂ ಅದನ್ನು ಮತ್ತಷ್ಟು ಧ್ವನಿಪೂರ್ಣವಾಗಿ ಎಲ್ಲೂ ವಾಚ್ಯವಾಗದಂತೆ ಹೇಳುವ ಸಾಧನಗಳನ್ನು ನಿರ್ದೇಶಕರು ಹುಡುಕಿಕೊಳ್ಳಬಹುದಿತ್ತು. ಇದನ್ನು ಸರಿಯಾಗಿ ನಿಭಾಯಿಸಲು ಬಾರದಿರುವುದರಿಂದ ಪೇಂಟಿಂಗ್ ಇಮೇಜ್ ಒಂದು ಹಸಿಹಸಿಯಾದ ಪ್ಲೇಸ್‌ಮೆಂಟ್‌ನಂತೆ ಮತ್ತು ಅದನ್ನು ಪ್ರಯತ್ನಪೂರ್ವಕವಾಗಿ ಕಟ್ಟಿಕೊಟ್ಟಿರುವಂತೆ ಭಾಸವಾಗುತ್ತದೆ. ವಿದೇಶಿ ಮಹಿಳೆ ತನ್ನ ಅಪ್ಪನ ಬಳಿ ಚಿತ್ರಕಲೆ ಅಭ್ಯಾಸ ಮಾಡಲು ಬಂದ ನಂತರದಲ್ಲಿನ ಮಂದರಾಳಲ್ಲಿನ ತೀವ್ರ ಅಸಹನೆಗೆ ಹಿನ್ನೆಲೆಯಾಗಿ ಮತ್ತು ಪೂರಕವಾಗಿ ಪೇಂಟಿಂಗ್ ಇಮೇಜ್‌ನಲ್ಲಿಯ ತುಡಿತ ಮಿಡಿತ ಸಾಲದ ಸರಕು ಅನಿಸುತ್ತದೆ. ‘ಈ ಜಗತ್ತಿನಲ್ಲಿ ಹೆಣ್ಣು ತನ್ನ ಅಪ್ಪನನ್ನೇ ಮದುವೆ ಮದುವೆಮಾಡಿಕೊಳ್ಳೋದಕ್ಕೆ ಅವಕಾಶವಿದ್ದಿದ್ರೆ ನಾನೇ ೩ಮೊದಳಿಗಳಾಗ್ತಿದ್ದೆ ಎನ್ನುವ ಮಾಧವಿಯ ಒಂದು ಮಾತಿನಿಂದ ನಾವು ನಿರ್ಧಾರಿತರಾಗಬೇಕೇ ವಿನಃ ಬೇರೆ ದಾರಿಗಳಿಲ್ಲ.ಅಪ್ಪನನ್ನು ಮದುವೆಯಾಗುವ ಮಾತಾಡದೆಯೇ ಆ ಇಂಗಿತ ವ್ಯಕ್ತಪಡಿಸುವ ಮಾರ್ಗಗಳು ಈ ಚಿತ್ರದಲ್ಲಿ ಇಲ್ಲ. ಟೀ ಕೊಡಲು ಹೋದಾಗ ತನ್ನನ್ನು ಪರಿಗಣಿಸದಿರುವುದು, ಸರಿಯಾದ ಸಮಯಕ್ಕೆ ಅಪ್ಪ ಊಟಕ್ಕೆ ಬಾರದಿರುವುದು, ಅಪ್ಪ ಮತ್ತು ನುವ ಮೈಸೂರಿಗೆ ಹೋದಾಗ ಅವರಿಬ್ಬರ ಚಕ್ಕಂದದ ಭಾವಭಂಗಿಗಳನ್ನ ಕಲ್ಪಿಸಿಕೊಳ್ಳುವುದು ಇವೆಲ್ಲ ತೀರಾತೀರಾ ಬೇಸಿಕ್ ಎಲಿಮೆಂಟ್ಸ್. ಈ ಎಲ್ಲವುಗಳಿಂದ ಮಾಧವಿ ಖಿನ್ನಳಾಗುವುದು, ಒಮ್ಮೆಗೇ ಸ್ಪೋಟಿಸುವುದು ಸರಿಯೆನಿಸಿದರೂ ನಿರ್ದೇಶಕರು ಭಾವನಾಲೋಕದಲ್ಲಿ ಕುಸುರಿಕೆಲಸಕ್ಕೆ ಕೈಹಾಕದಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅವರಿಗೆ ಕಥೆಯನ್ನು ಕಾಂಗರೂವಿನಂತೆ ಜಿಗಿಸಿ ಬೇರೆ ಬೇರೆ ನೆಲೆಗಳಲ್ಲಿ ಚರ್ಚೆಗೊಡ್ಡಿ ಮುಂದಕ್ಕೋಡುವ ಹಪಹಪಿ. ನೀರು ಸಿಗುವವರೆಗೂ ಬಾವಿ ತೋಡದೆ ಸುಮಾರು ಗುಂಡಿಗಳನ್ನು ತೋಡಿ ಮುನ್ನಡೆಯುವ ಆಸೆಯಂಥದ್ದು. ಮನುಷ್ಯನ ಮನಸ್ಸಿಗಿರುವ ಹಲವು ಮುಖಗಳ ಶೋಧಕಾರ್ಯ ಮಾಡುವುದು ತಪ್ಪಲ್ಲ.ಆದರೆ ಆದೆಲ್ಲವನ್ನು ಎಷ್ಟು ಅಥೆಂಟಿಕ್ ಆಗಿ ಹೇಳಬಹುದು ಎಂಬುದೇ ಪ್ರಶ್ನೆ. ಹಾಗಾಗಿ ತಾನು ಚರ್ಚಿಸಬೇಕಾಗಿರುವ ನೆಲೆಗಳು ಒಂದೊಂದಾಗಿ ಮುಗಿದಾಗ ಮುಂದಿನ ತಮ್ಮ ತಾತ್ವಿಕ ಘಟ್ಟದ ನಿರೂಪಣೆಗೆ ದಾಟಿಕೊಳ್ಳಬೇಕಾದ ಕೆಲವು ಕಂದಕಗಳು ಎದುರಾಗಿವೆ. ಅಪ್ಪನ ನಿರ್ಗಮನದ ನಂತರ ಮಾಧವಿಯಲ್ಲಿನ ಮನಸ್ಥಿತಿ ಬದಲಾದದ್ದು ಹೇಗೆ? ಮಗುವಿಗೆ ಜನ್ಮ ಕೊಟ್ಟ ನಂತರ ಡೈವೋರ್ಸ್ ಆದದ್ದು ಯಾಕೆ? ಇವೆಲ್ಲ ನಿರ್ದೇಶಕರಿಗೆ ಮುಖ್ಯವಾದ ಸಂಗತಿಗಳಾಗಿ ಕಂಡೇ ಇಲ್ಲ. ಸಾವಿನ ಸಾಂಗತ್ಯದಲ್ಲಿ ಬದುಕಿನ ಅರ್ಥಪೂರ್ಣತೆಯನ್ನಅರ್ಥೈಸಿಕೊಳ್ಳುವ ಘಟನಾವಳಿಗಳ ಕಡೆಗೆ ಡ್ರಿಪ್ಟ್ ಆಗಬೇಕಾದ ತುರ್ತು ಇರುವುದರಿಂದ ನಡುಮಧ್ಯೆ ಉದ್ಭವಿಸುವ ಪ್ರಶ್ನೆಗಳಿಗೆ (ಅವು ಪ್ರಸ್ತುತವೊ ಅಪ್ರಸ್ತುತವೊ ಅದು ಸೆಕೆಂಡರಿ) ತರ್ಕದ ಒಂದು ಎಳೆ ಉತ್ತರವನ್ನಾದರೂ ಹೇಳಬೇಕೆನಿಸಿಲ್ಲ. ಕಾಶಿಯಲ್ಲಿ ಮಾಧವಿ ತನ್ನ ಅಪ್ಪನನ್ನು ಇನ್ನಿಲ್ಲದಂತೆ ಹುಡುಕಲು ಪ್ರಯತ್ನಿಸುತ್ತಾಳೆ. ಮತ್ತೆ ಇಂಥ ಹುಡುಕಾಟದ ಹಿನ್ನೆಲೆಗಿರುವ ತೀವ್ರತೆ ಏನು? ಅಪ್ಪನ ನಿರ್ಗಮನ, ತನ್ನ ಕಾಂಪ್ಲೆಕ್ಸಿಟಿಯ ಅರಿವು, ನಂತರ ಅರ್ಥವಾಗದ ಎಂಟು ವರ್ಷಗಳ ಅಂತರ, ಪೇಪರ್‌ನಲ್ಲಿ ಒಂದು ಪ್ರಕಟಣೆ, ಮತ್ತು ಹುಡುಕಾಟ ಶುರು. ಈ ಎಲ್ಲ ಸಂಗತಿಗಳು ಹೀಗೆ ರೂಪುತಳೆಯಬೇಕಾದರೆ ಅವುಗಳ ಹಿಂದಿರುವ ತಂತುಗಳು ಯಾವುವು? ಇವೆಲ್ಲ ಕಾಣುವುದಿಲ್ಲ. ಅದೂ ಅಲ್ಲದೆ ಕಾಶಿಯಲ್ಲಿ ತನ್ನ ಅಪ್ಪನ ಹುಡುಕಾಟದ ತೀವ್ರತೆಗಿಂತ ಸಾವಿಗಾಗಿ ಕಾದು ಕೂತ ಜೀವಿಗಳ ಸ್ಥಿಗತಿಯೇ ತಣ್ಣಗೆ ಕೊರೆಯುವಂತೆ ಮಾಡುತ್ತದೆ. ಕಾಶಿ ಪಟ್ಟಣದ ನದಿ ದಡದಲ್ಲಿ ಮಗಳೊಬ್ಬಳನ್ನು ಬಿಟ್ಟು ಅಪ್ಪನ ಹುಡುಕಾಟಕ್ಕೆ ತೊಡಗುವುದು ಎಷ್ಟರಮಟ್ಟಿಗೆ ನಂಬಲರ್ಹ ಎಂದು ಪ್ರಶ್ನಿಸಿಕೊಳ್ಳುವುದಕ್ಕಿಂತ ತಾತ ಮತ್ತು ಮೊಮ್ಮಗಳ( ಪ್ರರಸ್ಪರ ಅರಿಯದ ಭಾವದಲ್ಲಿ) ಭೇಟಿಯ ನಡುವೆ ಮಂದಿರ ಪ್ರವೇಶವಾಗಿಬಿಟ್ಟರೆ ತಾವು ರೂಪಿಸಬೇಕೆಂದಿರುವ ಕಾನ್ಸೆಪ್ಟ್‌ಗೆ ಅಡ್ಡಿಯಾಗುತ್ತದೆ ಎಂಬ ಅರಿವು ಇದು ಎಂಬುದನ್ನು ನಾವೇ ಅರ್ಥೈಸಿಕೊಳ್ಳದೆ ವಿಧಿಯಿಲ್ಲ.ಎಲ್ಲವುಗಳಾಚೆಗೆ ಕಲಾತ್ಮಕ ಚಿತ್ರಗಳು ತಮ್ಮ ಒಡಲಲ್ಲಿ ಪ್ರಾಣದಂತೆ ಹುದುಗಿಸಿಟ್ಟುಕೊಂಡಿರುವ ಮೆಟಫರ್ ಗಳೇನಾದರು ಈ ಚಿತ್ರದಲ್ಲಿವೆಯೆ ಎಂದು ನೋಡಬೇಕು. ಕೆಟ್ಟುಹೋದ ಪುಟ್ಟ ಗಡಿಯಾರ, ಮಾಧವಿಯ ಮಗಳು ನದಿಯಲ್ಲಿ ತೇಲಿ ಬರುವ ಹೂವಿಗೆ ಹಂಬಲಿಸುವುದು, ದೋಣಿಯಲ್ಲಿ ಪ್ರಯಾಣಿಸಲು ಹೆದರುವುದು ಮತ್ತು ೪ನಂತರದಲ್ಲಿ ಆ ಭಯವನ್ನು ದೂರಮಾಡಿಕೊಳ್ಳುವುದು-ಇವೆಲ್ಲ ಮೆಟಫರ್‌ಗಳೇನೊ ಅನಿಸುತ್ತದೆ. ಆದರೆ ಇವುಗಳನ್ನು ಹೇಗೆ ವಿಶ್ಲೇಷಿಸಿಕೊಳ್ಳಬೇಕೊ ಗೊತ್ತಾಗುವುದಿಲ್ಲ.ಆದರೆ ಚಿತ್ರದ ಕಡೆಗೆ ಎರಡು ವ್ಶೆರುಧ್ಯಗಳು ಪರಸ್ಪರ ಮುಖಾಮುಖಿಯಾಗುವುದನ್ನು ಗಮನಿಸಬಹುದು. ಮಾಧವಿ ಪ್ರೀತಿಗೂ ವ್ಯಾಮೋಹಕ್ಕೂ ಇರುವ ತಾತ್ವಿಕ ಅಂತರಗಳನ್ನ ಗುರುತಿಸಿಕೊಳ್ಳುವುದರ ಮೂಲಕ ಸಂಬಂಧಗಳನ್ನ ಪರಿಭಾವಿಸಿಕೊಳ್ಳಬೇಕಾದ ನೆಲೆ ಕಂಡುಕೊಳ್ಳುತ್ತಾಳೆ(ಅಥವಾ ಕಂಡುಕೊಂಡಂತೆ ಅನಿಸುತ್ತದೆ). ಆದರೆ ಸಂಬಂಧಗಳ ಸ್ವರೂಪದ ಬಗ್ಗೆ ತಾತ ತನ್ನ ಮೊಮ್ಮಗಳ ಬಳಿ ಹೇಳುವ ಮಾತು ಹೀಗಿದೆ- ‘ಸಂಬಂಧವೆಂದರೆ ಆಕಾಶವಿದ್ದಂತೆ. ಇಲ್ಲ ಅಂತ ಹೇಳಲಿಕ್ಕೂ ಸಾಧ್ಯವಿಲ್ಲ; ಏಕೆಂದರೆ ಅದು ಕಾಣಿಸ್ತಿದೆ. ಆದರೆ ಅದನ್ನ ಮುಟ್ಟಲಿಕ್ಕೂ ಸಾಧ್ಯವಿಲ್ಲ. ಹಾಗಂದ ಮಾತ್ರಕ್ಕೆ ಆಕಾಶವೆ ಎಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲದಿರುವ ಸಂಬಂಧಗಳನ್ನ ಇದೆ ಎಂದುಕೊಂಡು, ಇರುವುದನ್ನ ಇಲ್ಲ ಎಂದುಕೊಂಡು...ಈ ಇಬ್ಬರ ಕಂಡುಕೊಳ್ಳುವಿಕೆಯಲ್ಲಿ ಉತ್ತಮಿಕೆ ಯಾರದ್ದು? ನಿಜಕ್ಕೂ ವಿಮುಕ್ತರು ಯಾರು? ಶೇಷಾದ್ರಿಯವರೇ ಉತ್ತರಿಸಬೇಕು. ಅಭಿನಯದಲ್ಲಿ ಭಾವನ ತಮ್ಮ ಪಾತ್ರದ ಕಾಂಪ್ಲೆಕ್ಸಿಟಿಯ ಕಿಚ್ಚನ್ನಾಗಲಿ, ದುಗುಡವನ್ನಾಗಲಿ ಬಿಂಬಿಸುವ ಕೆಲಸದಲ್ಲಿ ಸರಿಯಾಗಿ ತೊಡಗಿಸಿಕೊಳ್ಳದಿರುವುದು ಚಿತ್ರದುದ್ದಕ್ಕೂ ಕಾಣುತ್ತದೆ. ಪ್ರಾರಂಭಿಕ ಹಂತದಲ್ಲಿ ತನ್ಮಯದ ಹೆಚ್ಚಿನ ನಟನೆಗೆ ರಾಮಕೃಷ್ೞರಿಗೆ ಅವಕಾಶವಿಲ್ಲದಿದ್ದರೂ ಕಟ್ಟಕಡೆಗೆ ತುಂಬು ಗಡ್ಡದಲ್ಲಿನ ಅವರ ಅಭಿನಯ ಭಾವಪೂರ್ಣ. ಮಿಕ್ಕವರು ಫಿಪ್ಟಿ-ಫಿಪ್ಟಿ. ಸಂಕ್ಷಿಪ್ತವಾದರೂ ನಿಜವಾದ ಅನುಭವ ಲೋಕ ತೆರೆದುಕೊಳ್ಳುವುದು ಕಾಶಿಯಲ್ಲಿ ಮತ್ತು ಮೂಳೆಚಕ್ಕಳ ವೃದ್ಧದೇಹಗಳು ಮತ್ತು ಗಂಗಾ ತಟದ ದೃಶ್ಯಗಳಲ್ಲಿ. ಪ್ರವೀಣ್ ಗೋಡ್ಕಿಂಡಿ ತಮ್ಮ ಸಂಗೀತ ಚಮತ್ಕಾರವನ್ನು ಈ ಚಿತ್ರದಲ್ಲಿ ಕೇಳಿಸಲು ಸಾಧ್ಯವಾಗಿಲ್ಲ. ಭಾವತೀವ್ರತೆ, ಮ್ಲಾನತೆ ಪ್ರಕಟಗೊಳ್ಳುವ ಕಡೆಯೂ ಸಂಗೀತ ತುಂಬ ಡಲ್. ಸಂಕಲನದ ಕತ್ತರಿಯೇ ಮೊಂಡಾದಂತಿದೆ.ಈ ಚಿತ್ರ ಹಲವು ಆಯಾಮಗಳನ್ನ ಹಿಡಿದುಟ್ಟುಕೊಂಡಿದೆ. ಪ್ರೀತಿ, ವ್ಯಾಮೋಹ, ಸಂಬಂಧಗಳು, ಆಧ್ಯಾತ್ಮ ಹೀಗೆ. ಆದರೆ ಯಾವುದೂ ಇಲ್ಲಿ ಇಂಟೆನ್ಸ್ ಆಗಿ ಬಿಂಬಿತವಾಗಿಲ್ಲ. ಕುಂಟೋಬಿಲ್ಲೆ ಆಟದಂತೆ ಒಂದೊಂದು ಮನೆಗೆ ಎಚ್ಚರಿಕೆಯಿಂದ ಬಿಲ್ಲೆ ಚೆಲ್ಲಿ ಕುಂಟುತ್ತ ಜಿಗಿದಂತಿದೆ ಈ ‘ವಿಮುಕ್ತಿ.
|
|