ದೃಶ್ಯಕ್ಕೊಂದು ನುಡಿಗಟ್ಟು

ಕನ್ನಡ ಚಲನಚಿತ್ರಗಳಲ್ಲಿ ಕನ್ನಡತನ

 ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಯು ಆರ್ ಅನಂತಮೂರ್ತಿಯವರು ಕನ್ನಡ ಚಲನಚಿತ್ರಗಳಲ್ಲಿ ಹರಡಿರುವ ರಿಮೇಕ್ ಹಾವಳಿಯನ್ನು ಚುಟುಕಾಗಿ ಪ್ರಸ್ತಾಪಿಸಿದ್ದಾರೆ; ಕನ್ನಡ ಚಲನಚಿತ್ರಗಳಲ್ಲಿ ಕನ್ನಡತನ ಬೆಳೆಯುವ ದೃಷ್ಟಿಯಿಂದ ಇದು ಖಂಡನೀಯವೆಂದು ಸೂಚಿಸಿದ್ದಾರೆ. ಇದಕ್ಕೂ ಮೊದಲೇ ಕೂಡಾ ಈ ವಿಷಯ ಕನ್ನಡ ಪತ್ರಿಕೆಗಳಲ್ಲಿ ಹಲವು ಬಾರಿ ಚರ್ಚಿತವಾಗಿದೆ; ಇಂಥ ಚಿತ್ರಗಳಿಗೆ ಸಬ್ಸಿಡಿ ಸಿಗಬಾರದೆಂಬ ಪ್ರಸ್ತಾಪವೂ ಚರ್ವಿತಚರ್ವಣವಾಗಿದೆ. ಆದರೆ ಈ ಎಲ್ಲ ಸೂಚನೆಗಳು ಪೂರ್ಣ ಜಾರಿಗೆ ಬಂದರೂ ಅದರಿಂದ ಕನ್ನಡ ಚಲನಚಿತ್ರಗಳಲ್ಲಿ ಕನ್ನಡತನ ವಿಶೇಷವಾಗಿ ವೃದ್ಧಿಸೀತೆ ಎಂಬ ಬಗ್ಗೆ ನನಗೆ ಗಾಢವಾದ ಅನುಮಾನಗಳಿದ್ದಾವೆ. ಅಂಥ ಅನುಮಾನಕ್ಕೆ ಕಾರಣವೇನೆಂಬುದನ್ನೇ ನಾನಿಲ್ಲಿ ಸ್ಪಷ್ಟಪಡಿಸಿಕೊಳ್ಳಲು ಹೊರಟಿದ್ದೇನೆ; ಮತ್ತು ಅದಕ್ಕಾಗಿಯೇ ಚಲನಚಿತ್ರ ಮಾಧ್ಯಮದ ಜಾಗತಿಕ ಮತ್ತು ಸ್ಥಳೀಯ ಸ್ವರೂಪಗಳ ಕಡೆಗೆ ಕಿರುನೋಟವೊಂದನ್ನು ಹರಿಸುತ್ತಿದ್ದೇನೆ.

ಮೊದಲನೆಯದಾಗಿ, ಈ ಸಿನೆಮಾ ಎಂಬ ಮಾಧ್ಯಮಕ್ಕೇ ಇರುವ ಕೆಲವು ವೈಶಿಷ್ಟ್ಯಗಳು ಇದರ ’ಸಾಂಸ್ಕೃತಿಕ ಬದ್ಧತೆ’ಗೆ ವಿರೋಧಾತ್ಮಕವಾಗಿವೆ ಎಂಬುದನ್ನು ನಾವು ಗುರುತಿಸಿಕೊಳ್ಳಬೇಕು. ಚಲನಚಿತ್ರವು ರಂಗಭೂಮಿ ಅಥವಾ ನೃತ್ಯದ ಹಾಗೆ ಕಾಲಸ್ಥವೂ ದೇಶಸ್ಥವೂ ಅಲ್ಲದ ಮಾಧ್ಯಮವಾದ್ದರಿಂದ ಇದು ಕಾಲ-ದೇಶ ಬದ್ಧತೆಯನ್ನು ಬಿಟ್ಟುಕೊಡುವುದು ಕೂಡಾ ಉಳಿದ ಮಾಧ್ಯಮಗಳಿಗಿಂತ ಸುಲಭಸಾಧ್ಯ. ಎರಡನೆಯದಾಗಿ , ಸಾಹಿತ್ಯ ಅಥವಾ ಸಂಗೀತಕ್ಕಿಂತ ಭಿನ್ನವಾಗಿ ಈ ಸಿನೆಮಾ ಮಾಧ್ಯಮವು ಆಧುನಿಕ ತಂತ್ರಜ್ಞಾನದ ಕೂಸಾಗಿ ಜನ್ಮ ತಾಳಿತು. ಮಾತ್ರವಲ್ಲ, ಹಾಗೆ ಸಿನೆಮಾವು ಹುಟ್ಟಿದ ಆ ಹತ್ತೊಂಬತ್ತನೆ ಶತಮಾನದ ಕಡೆಯ ಕಾಲದಲ್ಲಿ , ವಿಜ್ಞಾನ-ತಂತ್ರಜ್ಞಾನಗಳೆರಡೂ ಕಾಲ-ದೇಶ ನಿರಪೇಕ್ಷವಾಗಿ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಉತ್ಸಾಹದಲ್ಲಿ ತೊಡಗಿಕೊಂಡಿದ್ದವು. ಅರ್ಥಾತ್, ಅಷ್ಟರಲ್ಲಾಗಲೇ ಈ ಜಗತ್ತು ತನ್ನ ಜಾಗತೀಕರಣದ ಹಂಬಲವನ್ನು ಭ್ರೂಣರೂಪದಲ್ಲಿ ಹೊತ್ತುಕೊಂಡಾಗಿ ಬಿಟ್ಟಿತ್ತು. ಮತ್ತು ಅದರ ಕೂಸಾಗಿಯೇ ಹುಟ್ಟಿದ ಸಿನೆಮಾ ಸಹಜವಾಗಿಯೇ ಒಂದು ರೀತಿಯ ಸಂಸ್ಕೃತಿ ನಿರಪೇಕ್ಷತೆಯನ್ನು  ತನ್ನ ಒಡಲಲ್ಲಿ ಹೊತ್ತು ಹುಟ್ಟಿತು. ಜತೆಗೆ, ಹುಟ್ಟಿ ಒಂದೇ ವರ್ಷಕ್ಕೆ ಈ ಮಾಧ್ಯಮವು ಭಾರತದಂತಹ ದೂರದ ದೇಶಕ್ಕೆ ಆಮದಾಗಲು ಸಾಧ್ಯವಾಗಿದ್ದು ಮತ್ತು ಕೆಲವೇ ವರ್ಷಗಳಲ್ಲಿ ಅದು ಜಗತ್ತಿನ ಎಲ್ಲ ಮೂಲೆಗಳಲ್ಲೂ ವ್ಯಾಪಿಸಿ ಹರಡಿದ್ದು ಕೂಡ ಇದೇ ಕಾರಣದಿಂದಲೇ.

ಆದರೆ, ಇಂತಹ ಪ್ರತಿಕೂಲ ಸನ್ನಿವೇಶದಲ್ಲೂ ಬೇರೆ ಬೇರೆ ದೇಶ ಪ್ರಾಂತ್ಯಗಳ ಸಿನೆಮಾಗಳು ತಮ್ಮ ತಮ್ಮದೇ ಸ್ವಂತಿಕೆಯನ್ನು ಈ ಮಾಧ್ಯಮದ ಮೇಲೆ ಹೇಗೆ ಛಾಪಿಸಿಕೊಂಡವು ಎಂಬುದು ತುಂಬಾ ರೋಚಕವಾದ ಕಥಾನಕ. ರಶಿಯಾದಲ್ಲಿ ಐಸೆನ್ ಸ್ಟೈನ್ , ಅಮೆರಿಕಾದಲ್ಲಿ ಡಿ.ಡಬ್ಲೂ ಗ್ರಿಫಿತ್, ಜರ್ಮನಿಯಲ್ಲಿ ಆರಂಭವಾದ ಎಕ್ಸ್ಪ್ರೆಷನಿಸ್ಟರು- ಮೊದಲಾದವರೆಲ್ಲ ನಿಜವಾಗಿ ತಮ್ಮ ಸಿನೆಮಾಗಳಲ್ಲಿ ಮಾಡಿದ್ದು ಅಂತರಾಷ್ಟ್ರೀಯ ಮಾಧ್ಯಮವೊಂದನ್ನು ಸ್ಥಳೀಯಗೊಳಿಸಿಕೊಳ್ಳುವ ಇಂತಹ ಕ್ರಿಯಾಶೀಲವಾದ ಆವಿಶ್ಕಾರಗಳನ್ನೇ. ಅದೇ ರೀತಿಯಲ್ಲಿ ಭಾರತೀಯ ಭಾಷೆಗಳ ಆರಂಭಕಾಲದ ಸಿನೆಮಾಗಳು ತಮ್ಮ ತಮ್ಮ ನೆಲದ ದೃಶ್ಯ ಮತ್ತು ಪ್ರದರ್ಶಕ ಕಲೆಗಳಿಂದ ಆಯ್ದ ಕೆಲವು ಲಕ್ಷಣಗಳನ್ನ ಸಿನೆಮಾ ಮಾಧ್ಯಮಕ್ಕೆ ಕಸಿ ಮಾಡುವ ಮೂಲಕ ಈ ಪ್ರಯೋಗಕ್ಕೆ ತೊಡಗಿದವು. ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ, ಸಿನೆಮಾದ ಕಥನದಲ್ಲಿ ಹಾಡುಗಳನ್ನೂ, ನೃತ್ಯಖಂಡಗಳನ್ನೂ ಇಡಿ ಇಡಿಯಾಗಿ ಕೂಡಿಸಿಕೊಂಡದ್ದು ಮೊದಲಾದ ಲಕ್ಷಣಗಳಲ್ಲೇ ಆ ಕಾಲದ ಸಿನೆಮಾಕ್ಕೆ ಒಂದು ವಿಶಾಲವಾದ ಭಾರತೀಯತೆಯ ತಳಹದಿಯನ್ನು ನಿರ್ಮಿಸಿಕೊಟ್ಟವು; ಮತ್ತು ಇಂಥ ಒಂದು ಭಾರತೀಯತೆ ಇವತ್ತಿಗೂ ಭಾರತದ ಎಲ್ಲ ಭಾಷಾಚಲನಚಿತ್ರಗಳಲ್ಲಿ, ಅದರಲ್ಲೂ ಮುಖ್ಯವಾಗಿ ಜನಪ್ರಿಯ ಸಿನೆಮಾದಲ್ಲಿ, ಸುಲಭವಾಗಿ ಕಾಣಲಿಕ್ಕೆ ಸಿಗುವಂತೆ ಉಳಿದುಕೊಂಡಿದೆ.

ಸಮಸ್ಯೆ ಉದ್ಭವಿಸಿದ್ದು, ಪ್ರಾಯಶಃ ಇಲ್ಲಿಂದ ಮುಂದಿನ ಹಂತದ ಬೆಳವಣಿಗೆಯಲ್ಲಿ. ಈ ಸ್ಥಳೀಯಕರಣದ ಪ್ರಕ್ರಿಯೆಯ ಒಂದು ತಾರ್ಕಿಕ ಬೆಳವಣಿಗೆ ಏನಾಗಬೇಕಿತ್ತೆಂದರೆ ಈ ಭಾರತೀಯ ಭಿತ್ತಿಯನ್ನುಳ್ಳ ಜನಪ್ರಿಯ ಸಿನೆಮಾದ ಬೇರೆ ಬೇರೆ ಪ್ರಾಂತೀಯ ಆವೃತ್ತಿಗಳು ತಮ್ಮ ಪ್ರಾಂತ್ಯದ ದೃಶ್ಯ ಮತ್ತು ಪ್ರದರ್ಶಕ ಕಲೆಗಳಿಂದ ನಿರ್ದಿಷ್ಟ ಅಂಗಾಂಶಗಳನ್ನು ಎತ್ತಿ ಕಸಿಮಾಡಿಕೊಂಡು ತಮ್ಮದೇ ಸ್ವಂತಿಕೆಯನ್ನು ನಿರ್ಮಾಣ ಮಾಡಿಕೊಳ್ಳಬೇಕಾಗಿತ್ತು. ಆದರೆ, ಭಾರತದ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ಈ ಬೆಳವಣಿಗೆ ಸಾಕಷ್ಟು ಆಗದೇ ಹೋಯಿತು. ಇದಕ್ಕೂ ಮತ್ತೆ ಐತಿಹಾಸಿಕ ಕಾರಣಗಳನ್ನು ನಾವು ಹುಡುಕಿ ತೆಗೆಯಬಹುದು. ಉದಾಹರಣೆಗೆ ದಕ್ಷಿಣಭಾರತದ ಚಲನಚಿತ್ರ ಇತಿಹಾಸದಲ್ಲಿ ಬಹುಕಾಲ ಮದರಾಸು ಎಲ್ಲ ಭಾಷೆಗಳ ಚಿತ್ರೋದ್ಯಮಗಳಿಗೂ ಕೇಂದ್ರ ಸ್ಥಳವಾಗಿತ್ತು. ಚಿತ್ರ ನಿರ್ಮಾಣದ ಸೌಲಭ್ಯಗಳೆಲ್ಲ ಅಲ್ಲಿದ್ದದ್ದು ಮಾತ್ರವಲ್ಲ, ನಟ , ನಿರ್ಮಾಪಕ, ಹಾಡುಗಾರರಾದಿಯಾಗಿ ಬಹುತೇಕ ಮಾನವ ಸಂಪನ್ಮೂಲಗಳು ಮದರಾಸಿನಲ್ಲಿ ಕೇಂದ್ರಿಕೃತವಾಗಿತ್ತು. ಇಂತಹ ಐತಿಹಾಸಿಕ ಸನ್ನಿವೇಶದ ಫಲವಾಗಿಯೇ ಇವತ್ತು ಈ ಸ್ವಂತಿಕೆಯ ಪ್ರಶ್ನೆ-ಅಂದರೆ ಕನ್ನಡ ಚಲನಚಿತ್ರಗಳಲ್ಲಿ ನಿಜವಾಗಿಯೂ ಕನ್ನಡತನ ಅನ್ನುವುದೊಂದಿಯೇ ಎಂಬ ಪ್ರಶ್ನೆ- ಜಟಿಲವಾಗಿ ಬೆಳೆದುಕೊಂಡಿದೆಯೇ ಹೊರತು ಅದು ಸರಳವಾಗಿ ವಿವರಿಸಬಹುದಾದ ಭಾಷಾಭಿಮಾನದ ಕೊರತೆಯಿಂದಲೂ ಅಥವಾ ಸರಕಾರಿ ಉತ್ತೇಜನ ಸಾಕಷ್ಟು ಇಲ್ಲದ ಕಾರಣದಿಂದಲೋ ಸಂಭವಿಸಿದ್ದಲ್ಲ- ಎಂಬುದು ನನ್ನ ಸೂಚನೆ.

ಇದಕ್ಕೊಂದು ಸರಳವಾದ ದೃಷ್ಟಾಂತ ಕೊಡುತ್ತೇನೆ. ನಿವೆಲ್ಲರೂ ನನ್ನ ಹಾಗೆಯೇ ಪದೆ ಪದೇ ಟಿ.ವಿ ಯ ಚಾನೆಲ್ಲುಗಳನ್ನು ಬದಲಾಯಿಸುತ್ತ ನೋಡುವವರಾಗಿದ್ದಲ್ಲಿ ನಾನೀಗ ಹೇಳಿದ ತಾತ್ವಿಕ-ಐತಿಹಾಸಿಕ ಸಂಗತಿಗಳನ್ನು ನೀವು ನಿಮ್ಮ ಸ್ವಂತ ಅನುಭವದಲ್ಲೇ ಕಂಡಿರುತ್ತೀರಿ. ಉದಾಹರಣೆಗೆ ಎಲ್ಲ ಚಾನೆಲ್ಲುಗಳಲ್ಲೂ ಚಲನಚಿತ್ರಗಳೇ ಪ್ರದರ್ಶನವಾಗುವ ಒಂದು ಸಮಯದಲ್ಲಿ , ಟಿ.ವಿ ಯ ಶಬ್ದವನ್ನು ಮೌನಗೊಳಿಸಿಕೊಂಡು ಕನ್ನಡ, ತಮಿಳು ಮತ್ತು ತೆಲುಗು ಭಾಷೆಯ ಚಾನೆಲ್ಲುಗಳನ್ನು ಬದಲಾಯಿಸುತ್ತ ಹೋಗಿ- ಸ್ವಲ್ಪ ಹೊತ್ತಿನ ಅನಂತರ ನಿಮಗೆ ಯಾವುದು ಯಾವ ಭಾಷೆಯ ಚಾನೆಲ್ಲು ಎಂಬುದು ಮಸುಕಾಗುತ್ತ ಹೋಗುತ್ತದೆ. ನೀವು ಒಂದೇ ಚಿತ್ರವನ್ನು ನೋಡುತ್ತಿದ್ದಿರೆಂದು ಅನ್ನಿಸತೊಡಗುತ್ತದೆ. ಆದರೆ ಈ ನಿಯಮಕ್ಕೆ ಒಂದು ಸ್ವಾರಸ್ಯಕರವಾದ ಅಪವಾದವೂ ಇದೆ- ಇವುಗಳ ನಡುವೆ ಮಲಯಾಳಿಯ ಒಂದು ಚಿತ್ರ ಬಂತು ಅನ್ನಿ, ತಟ್ಟನೆ ನಿಮಗೆ ಬೇರೆ ಊರಿಗೆ ಹೋದ ಅನುಭವವಾಗುತ್ತದೆ. ಯಾಕೆ ಹೀಗೆ? ಕನ್ನಡ, ತಮಿಳು ಮತ್ತು ತೆಲುಗುಗಳಿಗಿಲ್ಲದ ಒಂದು ಸ್ವಂತಿಕೆ ಮಲಯಾಳದ ಸಿನೆಮಾಕ್ಕೆ ಬಂದದ್ದು ಹೇಗೆ? - ಹುಡುಕಿದರೆ ಇದಕ್ಕೂ ಮತ್ತೆ ಐತಿಹಾಸಿಕ ಕಾರಣಗಳು ಸಿಗುತ್ತದೆ, ಇರಲಿ. ಆದರೆ ಈ ಮೂರು ಭಾಷೆಯ ಚಿತ್ರಗಳ ನಡುವೆಯಂತೂ ಈ ಸ್ವಂತಿಕೆಯ ಸಮಸ್ಯೆ ಇರುವುದು ನಮಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. ನಾನು ಆರಂಭದಲ್ಲಿ ಪ್ರಸ್ತಾಪಿಸಿದ ರೀಮೇಕ್ ಎಂಬ ಪ್ರಕ್ರಿಯೆಯು ಮುಖ್ಯವಾಗಿ ಈ ಮೂರು ಭಾಷೆಗಳ ನಡುವೆಯೇ ನಡೆಯುತ್ತಿದೆ ಎಂಬುದನ್ನೂ ಗಮನಿಸಿದರೆ ನಮಗೆ ಈ ಸಂಗತಿಗಳ ನಡುವೆ ಇರುವ ಸಂಬಂಧ ಅರಿವಾಗತೊಡಗುತ್ತದೆ.

ಹಾಗಿದ್ದರೇ ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ? - ಇದಕ್ಕೆ ಉತ್ತರ ಹೇಳಲು ನಾನು ಸದ್ಯಕ್ಕೆ ಶಕ್ತನಲ್ಲ. ಆದರೆ ಇಷ್ಟನ್ನಂತೂ ನಾನು ಖಂಡಿತವಾಗಿ ಹೇಳಬಲ್ಲೆ.- ರಿಮೇಕ್ ಎಂಬ ಈ ಪಿಡುಗು ಕೇವಲ ಒಂದು ರೋಗಲಕ್ಷಣವೇ ಹೊರತು ಅದೇ ರೋಗವಲ್ಲ. ಆದ್ದರಿಂದ ಕೇವಲ ಈ ರೋಗಲಕ್ಷಣವನ್ನು ಮಾತ್ರ ನಿವಾರಿಸಲು ಪ್ರಯತ್ನಿಸಿದರೆ ಫಲವಿಲ್ಲ.

(ಈ ಲೇಖನ ’ಸಮ್ಮುಖದಲ್ಲಿ ಸ್ವಗತ’ ಎಂಬ ಸಂಕಲನದಿಂದ ಆಯ್ದುಕೊಳ್ಳಲಾಗಿದೆ)


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು