ದೃಶ್ಯಕ್ಕೊಂದು ನುಡಿಗಟ್ಟು

ಟಿ.ವಿ.ಯಲ್ಲಿ ಟಾಪ್ ಒನ್ ಆಗಲು ಓಡುತ್ತಿವೆ ಸಿನಿಮಾ ಕುದುರೆಗಳು


೨೦೦೦ ಬಂದದ್ದೇ ತಡ ಸಿನಿರಂಗದವರ ಬುಡಗಳು ಅಲ್ಲಾಡತೊಡಗಿವೆ.  ಸ್ಟುಡಿಯೋಗಳು ನೊಣ ಹೊಡೆಯುತ್ತಿವೆ.  ಉಪವಾಸವಿದ್ದ ಚಿತ್ರ ನಟ-ನಟಿಯರು ಮೆಗಾ ಧಾರಾವಾಹಿಗಳನ್ನು ಒಪ್ಪಿ-ಅಪ್ಪಿ-ತಬ್ಬಿ ಮುದ್ದಾಡುತ್ತಿದ್ದಾರೆ.  `ನಮ್ಮ ಆಜನ್ಮ ಶತ್ರು ದೂರದರ್ಶನ' ಎಂದು ಬಡಬಡಿಸಿದ ಮಂದಿಯೇ ಇಂದು ಮೆಗಾ ಧಾರಾವಾಹಿಗಳನ್ನು ಮಾಡಲು ಸಡಗರಿಸುತ್ತಿದ್ದಾರೆ.

ಕೋಟಿ-ಕೋಟಿ ವೆಚ್ಚಿಸುವ ಸಿನಿಮಾ ನಿರ್ಮಾಪಕರು ಒಂದು ಕಡೆ - ತುಂಬಾ ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡುವೆ ಎನ್ನುವ ಪೂರ್‍ ಪ್ರೊಡ್ಯೂಸರ್‍ಸ್ ಒಂದು ಕಡೆ.  ಈ ಪೈಪೋಟಿಯ ಟಗ್ ಆಫ್ ವಾರ್‌ನಲ್ಲಿ ಹಣದ ಝಣ ಝಣ ತಾಂಡವವಾಡಿ ಬ್ಲಾಕ್‌ಮನಿ ಇರುವವರು ಮಾತ್ರ ಬಚಾವಾಗುವ ದಿನ ಬಂದು-ಮಿಂಚು, ಗುಡುಗುಗಳಿಗಿಂತ ಬರಸಿಡಿಲೇ ಬ್ರಹ್ಮಾಂಡವಾಗಿ ಎಲ್ಲೆಲ್ಲೂ ಉಸಿರು ಕಟ್ಟುವ ವಾತಾವರಣ.

ನಟ-ನಟಿಯರು: ಖ್ಯಾತ ನಟರಿಗೆ ಲಕ್ಷೋಪಲಕ್ಷ ಸಂಭಾವನೆ.  ಪರಭಾಷೆಯ ಬಣ್ಣದ ಬೆಡಗಿಯರಿಗೆ ಕೇಳಿದಷ್ಟು ಹಣದೊಂದಿಗೆ ಬಗೆ ಬಗೆಯ ಪರಾಕು ಪೊಂಪು - ಬಿಳಿ ತೊಗಲು ಮಾಸೀತೆಂದು ನೆಲಕ್ಕೆ ರೆಡ್ ಕಾರ್ಪೆಟ್.  ನಮ್ಮಲ್ಲಿಯ ಹೊಸ ಪ್ರತಿಭೆಗಳಿಗೆ ಕ್ಯಾತೆ ಕಲಾವಿದರೆಂಬ ಹಣೆಪಟ್ಟಿ ಮತ್ತು ಚಿತ್ರಾನ್ನ.

`ಹುಚ್ಚು ಮುಂಡೆ ಮದುವೆಯಲ್ಲಿ ಉಂಡೋನೇ ಜಾಣ' `ಸಿಕ್ಕಿದೋರಿಗೆ ಸೀರುಂಡೆ' ಎಂಬಂತ ಗಾದೆಗಳು ಅದಕ್ಕೇ ಇಂದಿಗೂ ಚಿತ್ರರಂಗದಲ್ಲಿ `ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್‍' ಎಂಬಂತೆ ಮಿರಿಮಿರಿ ಮಿಂಚುತ್ತಿರುವುದು.  ಎಂಥ ಸೃಜನಶೀಲ ನಿರ್ದೇಶಕನೇ ಆಗಲಿ ತಾನೊಬ್ಬ ನಿರ್ದೇಶಕ ಎಂಬ ಹಣೆಪಟ್ಟಿ ಹಚ್ಚಿಕೊಳ್ಳಲು, ನಿರ್ಮಾಪಕರನ್ನು ಬೆಕ್ಕಿನಂತೆ ಹೊಂಚು ಹಾಕಿ ಹಿಡಿಯುವುದರಲ್ಲೇ ತನ್ನ `ಎನರ್ಜಿ' ಎಲ್ಲ ಕಳೆದುಕೊಂಡು ಸೋತು ಸಪ್ಪಗಾಗಿರುವ.

ಚಿತ್ರ ಹಾಗೂ ಹೀಗೂ ಮುಗಿಸಿದರೂ ಡಬ್ಬದಲ್ಲಿ ಅವಿತು ಕುಳಿತ ಸಿನಿಮಾ ರೀಲು ಈಚೆ ಬರುವುದೇ ಕಷ್ಟ ಎಷ್ಟೋ ಬಾರಿ.  ಆದ್ದರಿಂದಲೇ ಅಂಥ ಸಿನಿಮಾಗಳನ್ನು `ಕ್ಯಾನ್ ಫೆಸ್ಟಿವಲ್'ಗೆ ಮೀಸಲಾದ ಸಿನಿಮಾ ಎಂದು ತಮಾಷೆ ಮಾಡುವುದೂ ಉಂಟು.

ಸಿನಿಮಾ ನಿರ್ದೇಶಕರು ಮತ್ತು ರನ್ನಿಂಗ್ ರೇಸ್:  ಇಂಥ ಹಿಂಸೆಗಳಿಂದ ರೋಸಿ ಹೋದ ಸಿನಿಮಾ ನಿರ್ದೇಶಕರಿಗೂ ಹೆಂಡತಿ, ಮಕ್ಕಳಿರುವುದರಿಂದ, ಕಟ್ಟಿಕೊಂಡ ತಪ್ಪಿಗೆ ಅವರನ್ನು ಸಾಕಬೇಕಾದುದು ಇವರಿಗೆ ಅನಿವಾರ್ಯವಾಗುವುದರಿಂದ, ಟಿ.ವಿ.ಯಲ್ಲಿ ಮೆಗಾ ಧಾರಾವಾಹಿಗಳನ್ನು ಮಾಡುವುದೇ ವಿಹಿತವೆಂದು ಈ ರನ್ನಿಂಗ್ ರೇಸ್‌ನಲ್ಲಿ ಗೆಲ್ಲಲು ನಾ ಮುಂದು - ತಾ ಮುಂದು ಎಂದು ಪಿ.ಟಿ. ಉಷಾಗಿಂತ ಜೋರಾಗಿ ಓಡಲು ಸಿದ್ಧರಾಗಿದ್ದಾರೆ ೨೦೦೦ದಲ್ಲಿ.  ಹೆಣ ಹೊರುವುದೇ ಉದ್ಯೋಗವಾದಾಗ ಹಿಂದಾದರೇನು-ಮುಂದಾದರೇನು?  `ಬದುಕು ನಿಮಿತ್ತಂ ಬಹು ವಿಧ ಮೋಸಂ' ಎನ್ನುತ್ತಾರೆ.  ಆದರೆ ಮೆಗಾ ಧಾರಾವಾಹಿಗಳನ್ನು ಮಾಡುವುದು ಮೋಸವೇನಲ್ಲವಲ್ಲ.

`ದೊಡ್ಡ ಸ್ಕ್ರೀನ್ ಆದರೇನು - ಚಿಕ್ಕಸ್ಕ್ರೀನ್ ಆದರೇನು ನನಗೆಲ್ಲಾ ಒಂದೇ.  ಆದರೆ ನನ್ನ ಪಾಲಿಗೆ ದೊಡ್ಡ ಸ್ಕ್ರೀನೇ ಇರಲಿ' ಎಂದವರೆಲ್ಲ ಈಗ ಸಾಹಿತ್ಯ ಅದಲು-ಬದಲು ಮಾಡಿ ರಾಗರಾಗವಾಗಿ `ದೊಡ್ಡ ಸ್ಕ್ರೀನ್ ಆದರೇನು ಚಿಕ್ಕ ಸ್ಕ್ರೀನ್ ಆದರೇನು ನನಗೆಲ್ಲಾ ಒಂದೇ.  ಆದರೀಗ ನನ್ನ ಪಾಲಿಗೆ ಚಿಕ್ಕ ಸ್ಕ್ರೀನೇ' ಇರಲಿ ಎಂದು ಪಾರ್ಸಿ ಕಂಪನಿಯ ಟ್ರಾನ್ಸ್‌ಫರ್‍ ಸೀನರಿಯಂತೆ ಸೀನೇ ಬದಲಿಸಿ ಸಂಭ್ರಮಿಸುತ್ತಿದ್ದಾರೆ.  ಹೊಸ ಸಹಸ್ರಮಾನದ ಆರಂಭದಲ್ಲೇ ಈ ಅಪಸ್ವರದ ಅಡ್ಡಮಾತೇಕೆ ಎಂದು ಗೊಣಗುತ್ತಿರುವ ನಟ-ನಟಿಯರ ನಿರ್ದೇಶಕರ ಕಷ್ಟ ಅವರ ಬಾಯಿಂದಲೇ ಕೇಳಬೇಕು.

ಬೇಸತ್ತವರು: `ಬಣ್ಣ ಹಾಕಿ ವರ್ಷವಾಯಿತು' ಎನ್ನುವವರು, `ಕಲಾವಿದರ ಸಂಘವಿದ್ದೂ ನಮಗೇನೂ ಉಪಕಾರವಾಗಿಲ್ಲ ಎಂದು ಉಪ್ಪು-ಖಾರ ಹಚ್ಚಿ ಬೈಯ್ಯುವವರು, ನಾಲ್ಕು ಅಕ್ಷರ ಕಲಿತಿದ್ರೆ ಎಲ್ಲಾರೂ ತಿಂಗಳ ಸಂಭಳಕ್ಕೆ ಸೇರಿ ಉಂಬಳಕ್ಕೆ ಒಂದು ದಾರಿ ಮಾಡಿಕೊಂಡಿರ್‍ತಿದ್ದೆ ಎಂದು ಹಲುಬುವವರೂ ಲೆಕ್ಕವಿಲ್ಲ.

`ಪ್ರಭಾವ ಇದ್ದರೆ ಸಾಕು-ಪ್ರತಿಭೆ ಯಾರಿಗೆ ಬೇಕು' ಎಂದು ಶಪಿಸುತ್ತ ಕಣ್ಣೀರು ಹಾಕುವವರಿಗೂ ಇಂದು ಬರವೇನಿಲ್ಲ.

ಅದರಿಂದಲೇ ಎರಡು ಸಾವಿರದಲ್ಲಿ ಎಲ್ಲ ಟಿ.ವಿಯತ್ತ ದೌಡಾಯಿಸುತ್ತಿದ್ದಾರೆ.

`ಸುಳ್ಳು ಎಂದಿರಾ?'

ಹಾಗಾದರೆ ಈ ಪಟ್ಟಿ ಗಮನಿಸಿ.

ಘಟಾನುಘಟಿಗಳು ಈಗೆಲ್ಲಿ?

* ಡಾ. ರಾಜಕುಮಾರ್‍ ಅವರ ಸಾಕಷ್ಟು ಚಿತ್ರಗಳನ್ನು ತೆರೆಗೆ ತಂದು-ಕಾದಂಬರಿಗಳನ್ನು ಸೆಲ್ಯುಲಾಯಿಡ್‌ಗೆ ಭಟ್ಟಿ ಇಳಿಸುವಲ್ಲಿ `ಏ ಒನ್' ಎನಿಸಿದ್ದ ದೊರೆ-ಭಗವಾನ್ ಸಹ `ಆದರ್ಶ' ಫಿಲಂ ಇನಸ್ಟಿಟ್ಯೂಟಿನ ಜತೆಗೆ ಟಿ.ವಿ. ಧಾರಾವಾಹಿಗಳು ತಮ್ಮ ಆದರ್ಶ ಮಾಡಿಕೊಂಡಿದ್ದಾರೆ ಈಗ.

* `ಅರುಣೋದಯ' ಕ್ಲಿಕ್ ಆಗುತ್ತದೆ ಎಂದು ಕನಸಿದ ಪಿ.ಎಚ್. ವಿಶ್ವನಾಥ್ ಈ ಚಿತ್ರವೂ `ಅಂಡಮಾನ್-ನಿಕೋಬಾರ್‍'ಗೆ ಲಾಯಖ್ಖು ಎಂದಾದಾಗ ನಾರಾಯಣಸ್ವಾಮಿಯವರೊಂದಿಗೆ ಒಂದಾಗಿ `ಸಮಾಗಮ' ಮಾಡಹೊರಟಿದ್ದಾರೆ.  `ಜನುಮದಾತ' ಜನ್ಮ ಜನ್ಮಾಂತರದ ಶಾಪವೇನೋ ಎಂದುಕೊಂಡ ಪ್ರಶಸ್ತಿ ವಿಜೇತ ನಿರ್ದೇಶಕ ನಾಗಾಭರಣ ಕಿರುತೆರೆಯತ್ತ ದೌಡಾಯಿಸಿ `ಸಂಕ್ರಾಂತಿ' ಮೆಗಾ ಧಾರಾವಾಹಿ ಆರಂಭಿಸಿದರು.  ಈಗ ಕಣಗಾಲ್ ಪುಟ್ಟಣ್ಣ ಪ್ರಶಸ್ತಿ ಚಿತ್ರರಂಗಕ್ಕೆ ಮತ್ತೆ ಕಾಲಿಡಲು ನಾಗಾಭರಣರಿಗೆ ಹುಮ್ಮಸ್ಸಿತ್ತಿದೆ.  ಜೆತೆಗೆ ಡೆಲ್ಲಿ ಫಿಲಂ ಫೆಸ್ಟಿವಲ್ಲೂ ಬಂದಿರುವುದರಿಂದ ಕತೆ ಕದಿಯಬಲ್ಲ ಜಾಣರಿಗೆಲ್ಲ ಇದೊಂದು ಸದವಕಾಶ.

* ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿಯ ಗಿರೀಶ್ ಕಾರ್ನಾಡ್ ಸಹಾ ಕಾನೂರು ಹೆಗ್ಗಡತಿ ಟಿವಿ ಸೀರಿಯಲ್ ಮಾಡುವ ಸಂದರ್ಭವನ್ನು ಟು ಇನ್ ಒನ್ ಆಗಿ ಮಾರ್ಪಡಿಸಿ ಚಿತ್ರವನ್ನು ತೆರೆಗಿತ್ತು ಹೀಗೂ ಮಾಡಬಹುದಲ್ಲ ಎಲ್ಲರೂ ಎಂಬುದನ್ನು ಸ್ಪಷ್ಟವಾಗಿ ತೋರಿದ್ದಾರೆ.  ಆನೆ ನಡೆದದ್ದೆ ಹೆದ್ದಾರಿ.  ಬೇರೆಯವರೂ ಈ ನಿಟ್ಟಿನಲ್ಲಿ ಚಿಂತಿಸುತ್ತಿರಬೇಕು ಈಗಾಗಲೇ.

* ಭಾಮಾ-ಸತ್ಯಭಾಮ, ಸೂರ್ಯವಂಶ ತೆರೆಗಿತ್ತು ಹೆಸರಾದ ನಿರ್ದೇಶಕ ಎಸ್. ನಾರಾಯಣ್ ಇದೀಗ ಡಾ. ರಾಜ್ ಅವರ `ಶಬ್ದವೇಧಿ' ನಿರ್ದೇಶಿಸುತ್ತಿದ್ದರೂ-ನಾಳೆಗಳ ಬಗ್ಗೆಯೂ ತುಂಬ ಚಿಂತಿಸಿ `ಪಾರ್ವತಿ' ಧಾರಾವಾಹಿಯಲ್ಲಿ ಫೋಟೋ ಸಮೇತ ನಿರ್ದೇಶಕರಾಗಿ ಮಿಂಚುತ್ತಿದ್ದಾರೆ.  "ಚಿತ್ರ ಅಷ್ಟು ಚೆನ್ನಾಗಿ ಮಾಡ್ತಾರೆ-ಧಾರಾವಾಹಿ ಯಾಕೆ ಹೀಗಿದೆ?  ಅಕಾರ ಹಕಾರ ದೋಷಗಳು ಯದ್ವಾ-ತದ್ವಾ ಇರ್‍ತವೆ ಎಂದು ಶಪಿಸುವವರೂ ಈಗ ಜಾಸ್ತಿಯಾಗುತ್ತಿದ್ದಾರೆ" ಎಂಬುದನ್ನೂ ಒಬ್ಬ ಜವಾಬ್ದಾರಿಯುತ ನಿರ್ದೇಶಕ ಗಮನಿಸುವುದು ಅಗತ್ಯ.  ಮಾಸ್ ಮಿಡಿಯಾದಲ್ಲಿರುವ ಮಂದಿಗೆ ಜಾಣ ಕಿವುಡು-ಜಾಣ ಕುರುಡು ಬೆಳೆಯುವ ಲಕ್ಷಣವಾಗಲಾರದು.

* `ಗರಂ ಹವಾ' ದಿಂದ ಕಾಂಟ್ರವರ್ಷಿಯಲ್ ಡೈರೆಕ್ಟರ್‍ ಎಂದು ಹೆಸರಾದ ಎಂ.ಎಸ್. ಸತ್ಯು ಈಗ ರಾವ್ ಬಹದ್ದೂರರ `ಗ್ರಾಮಾಯಣ' ಮೆಗಾ ಧಾರಾವಾಹಿ ಮಾಡ ಹೊರಟಿದ್ದಾರೆ.

* `ಅಮೆರಿಕಾ ಅಮೆರಿಕಾ' ಚಿತ್ರ ನಿರ್ದೇಶಿಸಿ ಹೆಸರಾದ ನಾಗತಿಹಳ್ಳಿ ಚಂದ್ರಶೇಖರ್‍ ಸಿನಿಮಾಕ್ಕಾಗಿ ಪ್ರೊಡ್ಯೂಸರ್‍ `ಹಂಟಿಂಗ್' ಬೇಸರವೆನಿಸಿದಾಗ - ಸಿನಿಮಾಗೆ ಪರ್ಮನೆಂಟ್ ಬ್ರೇಕ್ ಹಾಕಿ `ಪ್ರತಿಬಿಂಬ' ಮೆಗಾ ಧಾರಾವಾಹಿ ಮಾಡಹೊರಟು ಸಾಕಷ್ಟು ಕಿರಿಕಿರಿ ಅನುಭವಿಸಿ ಇದೀಗ `ಕಾವೇರಿ' ಮೆಗಾ ಧಾರಾವಾಹಿಗೆ ಕೈ ಇಟ್ಟಿದ್ದಾರೆ.  ಚಿತ್ರರಂಗದಷ್ಟು ಕೈ ಸುಡುವುದಿಲ್ಲ ಟೆಲಿ ಧಾರಾವಾಹಿ ಎಂಬುದೇ ಛೋಟಾಸ್ಕ್ರೀನ್‌ನ ಹೆಚ್ಚಳ.

* ಕನ್ನಡ ಚಿತ್ರರಂಗದ ಜನಪ್ರಿಯು ನಿರ್ದೇಶಕರೆಂದು ಹೆಸರಾದ `ಭಾರ್ಗವ' ಕೂಡಾ ಈ ಕಾಲಕ್ಕಾಗುವಂತೆ ಚಿತ್ರರಂಗದಲ್ಲಿ ಹೊಂದಿಕೊಳ್ಳಲಾಗದೆ `ಚದುರಂಗ' ಮೆಗಾ ಧಾರಾವಾಹಿಗೆ ಮೀಸಲಾಗಿದ್ದಾರೆ ಈಗ.  ಈ ಮೆಗಾ ಧಾರಾವಾಹಿಗಳ ಹಣೇಬರಹವೇ ಅಷ್ಟು.   ಇಲ್ಲಿ ಬಂದವರು ಒಂದು ರೀತಿ ಸುಳಿಯಲ್ಲಿ ಸಿಕ್ಕವಂತೆ.  ಅಲ್ಲೇ ಗಿರ್‍ಕಿ ಹೊಡೆಯಬೇಕು.  `ಫಣಿಕಟ್ಟೆ' ಎಂದು ಕಂಠೀರವ ಸ್ಟುಡಿಯೋ ಜಗಲಿಗೆ ನಾಮಕರಣ ಮಾಡುವಷ್ಟು ಜನಪ್ರಿಯರಾಗಿದ್ದ `ಫಣಿ ರಾಮಚಂದ್ರ' ಈಗ `ದೇವ್ರು ದೇವ್ರು' ಮೆಗಾ ಧಾರಾವಾಹಿಯಲ್ಲಿ ಮಗ್ನರಾಗಿ ಚಿತ್ರರಂಗ ಸಂಪೂರ್ಣ ಮರೆತಿದ್ದಾರೆ ಎನ್ನಲೂಬಹುದು.  ಇಲ್ಲವೇ ಚಿತ್ರರಂಗವೇ ಅವರನ್ನು ಸಂಪೂರ್ಣವಾಗಿ ಮರೆತಿದೆ ಎನ್ನಬಹುದು.

* ಚಿತ್ರರಂಗದ ಹಳೆಯ ಹುಲಿ ಎನಿಸಿದ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ (ರವೀ) ಈ ನಾಡು ಟಿವಿಗಾಗಿ ಧಾರಾವಾಹಿ ಮಾಡುತ್ತ ಜಿ.ವಿ ಅಯ್ಯರ್‍ ಅವರ ಶಾಂತಲಾ ಧಾರಾವಾಹಿಗೂ ದುಡಿಯುತ್ತಿದ್ದಾರೆ.

* ಚಿತ್ರ ನಿರ್ಮಾಪಕ-ನಿರ್ದೇಶಕರೂ ಸ್ಟುಡಿಯೋ ಮಾಲೀಕರೂ ಆದ ಬಿ.ಎಸ್. ರಂಗಾ ಅಂಥ ಹಿರಿಯರೂ ಮೆಗಾ ಧಾರಾವಾಹಿಗೆ ಸೆಲ್ಯೂಟ್ ಹೊಡೆದು `ಕಾಲಚಕ್ರ' ಸರ ಸರ ಸುತ್ತುತ್ತಿದ್ದಾರೆ.
`ಕಾಲಾಯ ತಸ್ಮೈ ನಮಃ' ಎಂಬ ಸಾಲು ಈಗ ಸಿನಿಮಾ ಮಂದಿಗೆ ತುಂಬ ಪ್ರಿಯವಾಗಿದೆ.

* ಮಿನಿಮಮ್ ಗ್ಯಾರಂಟಿ ನಿರ್ದೇಶಕರೆಂದು ಹೆಸರಾಗಿದ್ದ ಜೊಸೈಮನ್, ವಸ್ತು ವೈವಿಧ್ಯಕ್ಕೆ ಹೆಸರಾಗಿದ್ದ ನಂಜುಂಡೇಗೌಡ, ಉಲ್ಟಾ-ಪಲ್ಟಾದಿಂದ `ಭೇಷ್' ಎನಿಸಿಕೊಂಡ ಎನ್.ಎಸ್. ಶಂಕರ್‍, `ಕುಹೂ-ಕುಹೂ' ಎಂದು ಕೋಗಿಲೆಯಂತೆ ಹಾಡಿ ಚಿತ್ರವಾರಂಭಿಸಿದ ಬಿ.ಸುರೇಶ್ ಮುಂತಾದವರೆಲ್ಲ ತಮ್ಮ `ಸಾಧನೆ' ಟ.ವಿ.ಮೆಗಾ ಧಾರಾವಾಹಿಗೆ ಮೀಸಲು ಮಾಡಿದ್ದಾರೆ ಈಗ.

* ಚಿತ್ರರಂಗದಲ್ಲಿ ಹೆಸರಾಗಿದ್ದ ಆರ್‍.ಎನ್. ಜಯಗೋಪಾಲ್ `ಜನನಿ'ಯಿಂದ ಹೊರ ದೂಡಲ್ಪಟ್ಟರೂ ಮೆಗಾ ಧಾರಾವಾಹಿಯ ಆಸೆಗೆ ಮತ್ತೆ ಅವರೊಂದಿಗೆ ಕೈ ಜೋಡಿಸಿದರು.  ಚಿತ್ರದಿಂದ ಕರೆಗಳು ಬರಲಿಲ್ಲ.  ಆಗ ಹಿಂದೀ ಚಿತ್ರನಟ `ಜಿತೇಂದ್ರ' ಇತಿಹಾಸ ಮೆಗಾ ಧಾರಾವಾಹಿ ನಿರ್ದೇಶಿಸುವಿರಾ ಎಂಬ ವಾಕ್ಯಪೂರ್ತಿ ಆಗುವುದರಲ್ಲಿ ದುಡು ದುಡು ಓಡಿ ಟಿ.ವಿ.ಗೆ `ಜಾಂ' ಆಗಿಬಿಟ್ಟರು.
ಅದರಿಂದಲೇ ಈಗ ಮೆಗಾ ಧಾರಾವಾಹಿಗಳು ಸಿನಿಮಾ ನಟ-ನಟಿ-ನಿರ್ದೇಶಕರ ಬ್ರೆಡ್-ಬಟರ್‍-ಜಾಂ ಸಹಾ ಆಗಿದೆ.

* `ಊರ್ವಶಿ' ಸಿನಿಮಾ ತೆಗೆದು ಪ್ರಶಸ್ತಿ ಗಳಿಸಿದ ಅಮರ್‍ ಸಿನಿಮಾರಂಗದಲ್ಲಿ ಅಡ್ರೆಸ್ ದಕ್ಕಲಿಲ್ಲವಾಗಿ ಧಾರಾವಾಹಿಗಳಿಗೆ ತಮ್ಮ ವಿಸಿಟಿಂಗ್ ಕಾರ್ಡ್ ಮಾರಿಕೊಂಡಿದ್ದಾರೆ.

* ಟಿ.ವಿ. ಸೀರಿಯಲ್‌ಗೆ ಮೀಸಲಾಗಿದ್ದ ವಾರ್ತಾ ಇಲಾಖೆಯ ಶಿವರುದ್ರಯ್ಯ ಈ ಬಾರಿ ಪ್ರಥಮ ಪ್ರಶಸ್ತಿ ಬಂದುದರಿಂದ ಸಿನಿಮಾಗೆ ಹಾರಬಹುದೆ ಎಂದು ಕನಸುತ್ತಿದ್ದರೂ - ನಿತ್ಯದೂಟವಾದ ಧಾರವಾಹಿಗಳನ್ನು ಕೈಬಿಟ್ಟಿಲ್ಲ.

* ಕಟ್ಟೆರಾಮಚಂದ್ರರನ್ನೂ ಸಿನಿಮಾ ರಂಗದಲ್ಲಿ `ಕ್ಯಾರೇ' ಎನ್ನುವವರಿಲ್ಲ.  ಅದರಿಂದ ಅವರೂ ಮೆಗಾ ಧಾರಾಗಾಹಿಗಳಿಗೆ ಕೈ ಚಾಚುತ್ತಿದ್ದಾರೆ.

* ಚಿತ್ರ ನಿರ್ದೇಶಕ ನಟ ಸಿ.ಆರ್‍. ಸಿಂಹ ಈ ನಾಟು ಟಿವಿಗಾಗಿ ಹೈದರಾಬಾದ್ ಷೂಟಿಂಗ್ ತೆರಳಿದ್ದಾರೆ.

-ಜನಪ್ರಿಯ ಧಾರಾವಾಹಿಗಳು ಈಗ ಚುಯಿಂಗಮ್ ಆಗುತ್ತಿವೆ.  ಕಮರ್ಷಿಯಲ್ ಫಿಲಂ ಡೈರಕ್ಟರುಗಳೂ ತಾವು ಗೇಲಿ ಮಾಡುತ್ತಿದ್ದ `ಆರ್‍ಟ್ ಫಿಲಂ'ನ ನಿಧಾನಗತಿ ಮೆಚ್ಚಿ ಹಣದತ್ತ ವಾರೆಗಣ್ಣು ಬೀರುತ್ತಿದ್ದಾರೆ.

ಕತೆ ಬೆಳೆಸುವಾಗ ತರ್ಕಕ್ಕೆ ಎಳ್ಳು ನೀರು ಬಿಡುವುದು, ಪಾತ್ರಧಾರಿ ತಕರಾರು ಮಾಡಿದರೆ ಮುಂದಿನ ದೃಶ್ಯದಲ್ಲೇ ಆತನನ್ನು ಸಾಯಿಸಿ ಚೌಕಟ್ಟಿನಲ್ಲಿರುವ ಫೋಟೋ ಮಾಡುವುದು, ತಾಯಿ ಪಾತ್ರದವಳು ನಖರಾ ಮಾಡಿದರೆ-ಅವಳ ಬದಲಿಗೆ ಇನ್ನೊಬ್ಬಳನ್ನು ತಾಯಿ ಮಾಡುವ ಅಭಾಸ ಪರಂಪರೆ ನೀವೂ ನೋಡುತ್ತಿದ್ದೀರಿ.

ಈ ೨೦೦೦ದಲ್ಲಿ ಟಿ.ವಿ.ಯತ್ತ ಓಡುವ ಕುದುರೆಗಳು ಇನ್ನೂ ಹೆಚ್ಚಬಹುದು.  ನೀವೇನಂತೀರಿ?

(೧೪-೧-೨೦೦೦)

                                   ***

ಬರಹಕ್ಕಿಳಿಸಿದವರು: ಕಿಶೋರ್‍ ಚಂದ್ರ
ಪರಿಶೀಲನೆ: ಕಿಶೋರ್‍ ಚಂದ್ರ


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು