ದೃಶ್ಯಕ್ಕೊಂದು ನುಡಿಗಟ್ಟು

ರೈ ಕೈಯಲ್ಲಿ ಚಿಗುರಿದ ’ಕನಸು’

ಕನ್ನಡ ಚಿತ್ರಗಳ ಸೋಲಿಗೆ ಅನ್ಯ ಭಾಷೆಯ ಚಿತ್ರಗಳ ಮೇಲೆ ಗೂಬೆ ಕೂರಿಸುವ ಕನ್ನಡದ ಅಪ್ರತಿಮ ನಿರ್ದೇಶಕರೆಲ್ಲ , "ನಾನೂ ಮತ್ತು ನನ್ನ ಕನಸು" ಚಿತ್ರದ ಮುಕ್ಕಾಲು ಭಾಗ ವೃತ್ತಿ ಪರತೆಯನ್ನ ತಮ್ಮದಾಗಿಸಿಕೊಂಡರೆ ಕನಿಷ್ಟ ಓಡೆಬಲ್ ಅಲ್ಲದಿದ್ದರೂ ನೋಡೆಬಲ್ ಸಿನೆಮಾ ಮಾಡಬಹುದು; ಕಥೆ ಹಾಳಾಗಲೀ, ಕನಿಷ್ಠ ಗುಣಮಟ್ಟವಾದರೂ ಕಾಪಾಡಿಕೊಳ್ಳಬಹುದು.

ರೀಮೇಕ್ ಅಂದಾಕ್ಷಣ ಮಕ್ಕಿ ಕಾ ಮಕ್ಕಿ ಭಟ್ಟಿ ಇಳಿಸುವ, ಉಟ್ಟ ಬಟ್ಟೆಯ ಬಣ್ಣವನ್ನೂ ಬದಲಾಯಿಸದ ನಮ್ಮ ನಿರ್ದೇಶಕರುಗಳು, ಹೊರಗಿನ ಕಥೆಯನ್ನ ಹೇಗೆ ನಮ್ಮದಾಗಿಸಿಕೊಳ್ಳಬಹುದು ಎಂಬುದನ್ನ ಈ ಚಿತ್ರದಲ್ಲಿ ಕಲಿಯಬಹುದು.

ಹೀಗೊಂದು ದೃಶ್ಯ..

ಆಂತರ್ಯದಲ್ಲಿ ಕಳೆದು ಹೋಗಲಿರುವ ತನ್ನ ಕನಸಿನ ಕುರಿತು ನೋವು, ತನ್ನ ತೆಕ್ಕೆಯಿಂದ ಜಾರಿ ಪ್ರಿಯಕರನ ತೆಕ್ಕೆಗೆ ಜಾರಿರುವ ಮುದ್ದು ಮಗಳು, ಅವನು ಹೇಗೋ.. ಏನೋ? ಎಂಬ ಆತಂಕ.. ಕಸಿವಿಸಿ.

ಕಾವೇರಿಯ ದಡದಲ್ಲಿ ಕುಳಿತ ಅಪ್ಪನಿಗೆ ಮಗಳು , ತನ್ನ ಪ್ರಿಯಕರನ ಉದಾತ್ತ ಗುಣಗಳನ್ನು ಎಳೆ ಎಳೆಯಾಗಿ ಬಿಚ್ಚಿದಂತೆ ಅಪ್ಪನ ಆತಂಕಗಳು ದೂರಾಗುತ್ತ ಸಾಗುತ್ತವೆ. ಕ್ಲೋಸ್ ಅಪ್ ನಿಂದ ಟಾಪ್ ವ್ಯೂ ಗೆ ತಿರಿಗಿಕೊಳ್ಳುವ ಕ್ಯಾಮೆರಾದಲ್ಲಿ ಮಗಳ ಪ್ರಿಯಕರ ತನಗಿಂತ ಎತ್ತರದಲ್ಲಿದ್ದಂತೆ ಅಪ್ಪನಿಗೆ ಭಾಸವಾಗುತ್ತದೆ. ಅವನ ಆತಂಕಗಳು ದೂರಾಗಿ ಮಗಳು ಸರಿಯಾದವನ ಕೈ ಹಿಡಿದಿದ್ದಾಳೆಂದು ನಿರಾಳನಾಗುತ್ತಾನೆ. ಅಲ್ಲಿಗೆ ಅಪ್ಪನ ಜೊತೆಗೆ ಪ್ರೇಕ್ಷಕನೂ ಕೃತಾರ್ಥನಾಗುತ್ತಾನೆ.

ಈ ಒಂದು ಪುಟ್ಟ ದೃಶ್ಯ ಪ್ರಕಾಶ್ ರೈ ಸಾಮರ್ಥ್ಯವನ್ನ ಸಾಬೀತು ಪಡಿಸಿಬಿಡುತ್ತದೆ. ಮೂಲ ಚಿತ್ರದಲ್ಲಿ ಈ ದೃಶ್ಯ ಇಷ್ಟೊಂದು ಪರಿಣಾಮಕಾರಿಯಾಗದೇ, ಬಾಲಿಶವಾಗಿದೆ. ಆದರೆ ಅದೇ ದೃಶ್ಯ ಇಲ್ಲಿ ಇಡೀ ಚಿತ್ರವನ್ನ ಎತ್ತಿ ಹಿಡಿಯುತ್ತದೆ.

ನಾನೂ ಮತ್ತು ನನ್ನ ಕನಸು ಪಕ್ಕಾ ಪ್ರೋಫೆಶನಲ್ ಸಿನೆಮಾ. ಭಾವನಾತ್ಮಕ ಸಂಬಂಧದ ಎಳೆಯೊಂದನ್ನ ಚಿತ್ರದುದ್ದಕ್ಕೂ ಕ್ಲೀಷೆಯಾಗದೇ ತೆರೆದಿಡುತ್ತ ಹೋಗುವುದು ಸುಲಭದ ಮಾತಲ್ಲ. ಪ್ರಕಾಶ್ ರೈ ಗೆ ಸಿನೆಮಾ ಭಾಷೆ ಸಿದ್ಧಿಸಿದೆ.  ಸಂಕಲನ, ಛಾಯಾಗ್ರಹಣ, ಸಂಗೀತ ಎಲ್ಲದರಲ್ಲೂ ವೃತ್ತಿಪರತೆಯ ಛಾಪಿದೆ.

ಚಿತ್ರದ ತುಂಬಾ ಆವರಿಸಿಕೊಂಡಿರುವುದು ಪ್ರಕಾಶ್ ರೈ ಎಂಬ ರಾಕ್ಷಸ ನಟ. ನಿರ್ದೇಶಕ ಪ್ರಕಾಶ್ ರೈ ನನ್ನು ಮೀರಿ ನಟ ರೈ ನಮಗಿಷ್ಟವಾಗುತ್ತಾರೆ. ಮಗಳ ಮುಖದಲ್ಲಿ ತಾಯಿಯನ್ನು ನೆನೆಸಿಕೊಳ್ಳುವ ಮತ್ತು ತನ್ನನ್ನ ಒಂಟಿಯಾಗಿ ಬಿಟ್ಟು ಅಳಿಯನನ್ನ ರೈಲು ಹತ್ತಿಸಲು ಹೊರಡುವ ದೃಶ್ಯಗಳಲ್ಲಿ.. ಮಗಳ ಮೇಲಿನ ವ್ಯಾಮೋಹ, ಆಕೆಯ ಮೇಲಿನ ಪ್ರೀತಿ ಮತ್ತು ಭವಿಷ್ಯಗಳ ನಡುವೆ ಅಪ್ಪನ ಹೊಯ್ದಾಟಗಳು ಪ್ರಕಾಶ್ ರೈ ಅಲ್ಲದೇ ಇನ್ಯಾರೂ ನಟಿಸಲು ಸಾಧ್ಯವೇ ಇಲ್ಲವೆನೋ ಅನ್ನಿಸುವಷ್ಟು ತನ್ಮಯತೆ ಅವರ ನಟನೆಯಲ್ಲಿದೆ. ಕಣ್ಣಿನಲ್ಲೇ ಅವರು ಸಂವಹಿಸುವ ಪರಿಗೆ ಹ್ಯಾಟ್ಸ್ ಆಫ಼್.

ಮಗಳೊಂದಿಗೆ ತಾನೂ ಬೆಳೆಯುತ್ತ ಪ್ರಬುದ್ಧನಾಗುವ, ಕೆಲವೊಮ್ಮೆ ಸಣ್ಣವನಾಗುವ, ಬದುಕಿನ ಅರ್ಥಗಳ ಸ್ಪಷ್ಟ ಪಡಿಸಿಕೊಳ್ಳುತ್ತ ಹೋಗುವ ಅಪ್ಪನ ಪಾತ್ರವೇ ಚಿತ್ರದ ಹೈಲೈಟ್. ಮೂಲ ಚಿತ್ರಕ್ಕಿಂತ ಹೆಚ್ಚು ಕ್ಲೋಸ್ ಅಪ್ ಶಾಟ್ ಗಳು ಈ ಚಿತ್ರದಲ್ಲಿದೆ.

ಕಥೆ ಎಲ್ಲಿಯೂ ಹಬ್ಬಿಕೊಳ್ಳದೆ ಬೆಟ್ಟದಂತೆ ಸಾಗುತ್ತ ಚೂಪಾದ ತುದಿಯಲ್ಲಿ ಅದೃಶ್ಯವಾಗಿಬಿಡುತ್ತದೆ. ಹಾಗಾಗಿ ಬಯಲು ಸಿಕ್ಕದಿಲ್ಲಿ. ಅಪ್ಪ-ಮಗಳ ಮೇಲೆ ಕಥೆ ಕೇಂದ್ರೀಕೃತವಾದ್ದರಿಂದ ಅಮ್ಮನ ಪಾತ್ರವೂ ಹೆಚ್ಚು ಆಳಕ್ಕಿಳಿಯುವುದಿಲ್ಲ. ಅಪ್ಪನ ಕೇಂದ್ರ ಪ್ರಜ್ಞೆಯಲ್ಲೇ ನಿರೂಪಣೆ ಸಾಗುವುದರಿಂದ ಇದು ಅವನ ಆತ್ಮ ಚರಿತ್ರೆಯ ಪುಟಗಳಲ್ಲಿ ಹಾಸು ಹೊಕ್ಕಿರುವ ಮಗಳ ನೆನಪಿನ ಗುಚ್ಚಗಳಷ್ಟೇ! ಆಗಿ ಉಳಿಯುತ್ತದೆ.

ಸದಭಿರುಚಿಯ ಕನಸು ಹಂಚಿರುವ ಪ್ರಕಾಶ್ ರೈ ರ ಮುಂದಿನ ಚಿತ್ರದ ಬಗ್ಗೆ ಸಹೃದಯ ಪ್ರೇಕ್ಷಕ ಕುತೂಹಲಿಯಾಗಿದ್ದಾನೆ.

ದಿನಾಂಕ: ೧೬ನೇ ಮೇ ೨೦೧೦


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು