ಭೂಗತ ಲೋಕದಲ್ಲಿ ಸಕ್ರಿಯರಾಗಿದ್ದು ಅನಂತರ ಸ್ವಪ್ರೇರಣೆಯಿಂದ ಅಲ್ಲಿಂದ ಕಳಚಿಕೊಂಡು ಪತ್ರಿಕೆಯೊಂದನ್ನು ಪ್ರಾರಂಭಿಸಿ ಹೊಸತೊಂದು ಸಾಮಾಜಿಕ ವ್ಯಕ್ತಿತ್ವವನ್ನು ರೂಪಿಸಿಕೊಂಡವರು ಶ್ರೀಧರ್. ಬೆಂಗಳೂರಿನ ಭೂಗತ ಲೋಕದ ಡಾನ್ ಎನ್ನುವ ಇಮೇಜನ್ನು ಪ್ರಜ್ಞಾಪೂರ್ವಕವಾಗಿ ಅಳಿಸಿ ‘ಅಗ್ನಿ’ ಶ್ರೀಧರ್ ಆದವರು ಇವರು. ತಮ್ಮ ಪತ್ರಿಕೆಯಲ್ಲಿ ಸಾಮಾಜಿಕ ಸ್ಥಿತ್ಯಂತರಗಳಿಗೆ ರಾಜಕೀಯ ವಿದ್ಯಮಾನಗಳಿಗೆ ದಿಟ್ಟವಾದ ನಿಲುವುಗಳ ಮೂಲಕ ಪ್ರತಿಕ್ರಿಯಿಸುತ್ತಾ ಬಂದವರು. ಇವರು ಸಿನೆಮಾ ಜಗತ್ತಿಗೆ ಪದಾರ್ಪಣೆ ಮಾಡಿದಾಗ ಸಹಜವಾಗಿ ಅನೇಕ ನಿರೀಕ್ಷೆಗಳಿಂದ ಕೂಡಿದ ಕುತೂಹಲದ ಕಣ್ಣುಗಳಿಂದ ಅನೇಕರು ಇವರನ್ನು ಗಮನಿಸಲಾರಂಭಿಸಿದರು.
ಭೂಗತ ಜಗತ್ತಿನ ಬಗ್ಗೆ ಟ್ಯಾಬ್ಲ್ಯಾಯ್ಡ್ ಸಾಹಿತ್ಯವನ್ನೇ ಆಧಾರವಾಗಿಟ್ಟುಕೊಂಡು, ಪಾತಕಿಗಳನ್ನು ವೈಭವೀಕರಿಸುವ, ಹಿಂಸೆಯನ್ನು ಹೀರೋಯಿಸಂ ಹೆಸರಿನಲ್ಲಿ ಬಿತ್ತರಿಸುವ ಕೊಳಕು ಸಂಪ್ರದಾಯ ಕನ್ನಡದಲ್ಲಿ ಆಗಲೇ ಬೇರು ಬಿಟ್ಟಾಗಿತ್ತು. ಮಚ್ಚು, ಲಾಂಗು ಸಂಸ್ಕೃತಿ ಎನ್ನುವ ಹಣೆ ಪಟ್ಟಿ ಹಚ್ಚುವಷ್ಟರ ಮಟ್ಟಿಗೆ ಕನ್ನಡ ಚಿತ್ರರಂಗ ಆ ಜಾಡಿನಲ್ಲಿ ಸಾಗಿತ್ತು. ಇಂತಹ ಸಮಯದಲ್ಲಿ ಭೂಗತ ಲೋಕದಲ್ಲಿ ತೊಡಗಿಕೊಂಡಿದ್ದ ಶ್ರೀಧರ್ ಪಾತಕಲೋಕದ ಕುರಿತು ಚಿತ್ರ ತಯಾರಿಸುತ್ತೇನೆ ಎಂದಾಗ ಅನೇಕರಲ್ಲಿ ರೇಜಿಗೆಯ ಭಾವನೆ ಹುಟ್ಟಿದ್ದು ಸುಳ್ಳಲ್ಲ. ಆದರೆ ಶ್ರೀಧರ್‌ರ ಬರವಣಿಗೆಯಲ್ಲಿ ಅರಳಿದ ಭೂಗತ ಜಗತ್ತಿನ ಪರಿಚಯವಿದ್ದವರು ಕುತೂಹಲದಿಂದ ಅವರ ಚಿತ್ರವನ್ನು ಎದುರು ನೋಡುತ್ತಿದ್ದರು.
’ದಾದಾಗಿರಿಯ ದಿನಗಳು’ ಕೃತಿಯಲ್ಲಿ ಭಾವಾವೇಶವಿಲ್ಲದೆ, ವೈಭವೀಕರಣವೆಂಬ ಇಳಿಜಾರಿನ ಎಚ್ಚರವನ್ನಿಟ್ಟುಕೊಂಡು ಭೂಗತ ಜಗತ್ತನ್ನು ಪರಿಚಯಿಸಿದ್ದ ಶ್ರೀಧರ್ ಅದೇ ಮಾಂತ್ರಿಕತೆಯನ್ನು ಬೆಳ್ಳಿ ತೆರೆಗೆ ವರ್ಗಾಯಿಸುವಲ್ಲಿ ಯಶಸ್ವಿಯಾದರು. ಬೆಂಗಳೂರಿನ ಒಂದು ಕಾಲದ ಪಾತಕ ಲೋಕದ ಭೀಭತ್ಸ ಇತಿಹಾಸವನ್ನು, ರಕ್ತ ಸಿಕ್ತ ಚರಿತ್ರೆಯನ್ನು ಕೈ ಕೊಳಕು ಮಾಡಿಕೊಳ್ಳದ ಹಾಗೆ ಚಿತ್ರಿಸಿ ತೋರಿಸಿದರು. ಮಚ್ಚು, ಲಾಂಗು, ಸ್ಟಂಟುಗಳನ್ನು ನೆಚ್ಚಿ ಗಿರಕಿ ಹೊಡೆಯುತ್ತಿದ್ದ ಸಿನೆಮಾ ರಂಗಕ್ಕೆ, ರೌಡಿಯಿಸಂ, ಕ್ರೌರ್ಯ ಹಾಗೂ ಮುಗ್ಧತೆಗಳನ್ನು ಕ್ಲೀಷೆಗಳಿಲ್ಲದೆ ನಿರೂಪಿಸುವ ಅಸಹಾಯಕತೆಯಲ್ಲಿದ್ದ ನಿರ್ದೇಶಕರಿಗೆ ಹೊಸ ದಾರಿಯನ್ನು ತೋರಿಸಿಕೊಟ್ಟರು.
ತಮ್ಮ ಸಂಸ್ಥೆಯಿಂದ ಮೂರು ಸಿನೆಮಾಗಳನ್ನು ನಿರ್ಮಿಸಿದ ನಂತರ ಶ್ರೀಧರ್ ಖುದ್ದು ನಿರ್ದೇಶನಕ್ಕೆ ಇಳಿದರು. ಹಿಂದಿನ ಯಶಸ್ಸು ಹಾಗೂ ಹೊಸ ನಿರೀಕ್ಷೆಗಳ ಭಾರ ಅವರ ಹೆಗಲ ಮೇಲಿತ್ತು. ‘ಆ ದಿನಗಳು’ ಚಿತ್ರದಲ್ಲಿ ಹುಬ್ಬೇರಿಸುವಂತೆ ರೌಡಿಯಿಸಂ ಚಿತ್ರಿಸಿ ತೋರಿಸಿದ ಶ್ರೀಧರ್ ಅಂಥದ್ದೇ ಕಥಾವಸ್ತುವನ್ನು ಆರಿಸಿಕೊಳ್ಳಬಹುದಿತ್ತು. ಆದರೆ ಅವರು ಕೈಯಿಟ್ಟಿದ್ದು ಬಹುದೊಡ್ಡ ಹುತ್ತಕ್ಕೆ. ಅವರು ಆರಿಸಿಕೊಂಡಿದ್ದು ದಿನ ನಿತ್ಯ ದೇಶ ಹೊತ್ತಿ ಉರಿಯುವುದಕ್ಕೆ ಕಾರಣವಾಗಿರುವ ಕೋಮು ದಳ್ಳುರಿಯನ್ನು.
ಹಾಗೆ ನೋಡಿದರೆ ಈ ವಸ್ತು ಸಿನೆಮಾಗೆ ಹೊಸತಾದುದೇನಲ್ಲ. ಹಿಂದೂ ಮುಸ್ಲೀಮರ ನಡುವಿನ ಘರ್ಷಣೆಯನ್ನು ಕಲೆಯಲ್ಲಿ ಅವಲೋಕಿಸುವ, ಹಿಂಸೆಯ ಜಾಡನ್ನು ಹಿಡಿಯುವ, ದ್ವೇಷಕ್ಕೆ ಪರಿಹಾರ ಸೂಚಿಸುವ, ಬುದ್ಧಿ ಹೇಳುವ ಅನೇಕ ಪ್ರಯತ್ನಗಳು ಸಿನೆಮಾರಂಗದಲ್ಲಿ ನಡೆದಿವೆ. ಕಾಶ್ಮೀರದಲ್ಲಿನ ಉಗ್ರವಾದದಿಂದ ಹಿಡಿದು ದೇಶದೊಳಗೆ ಭಯೋತ್ಪಾದಕ ಹುಟ್ಟುವ ಎಲ್ಲಾ ಸಾಧ್ಯತೆಗಳನ್ನು ಬಳಸಿ ಚಿತ್ರಗಳನ್ನು ನಿರ್ಮಿಸಲಾಗಿದೆ. ಇಂತಹ ವಸ್ತುವನ್ನು ಸಿನೆಮಾ ಮಾಡುವುದಕ್ಕೆ ಆಯ್ದುಕೊಂಡರೆ ಅನೇಕ ಸವಾಲುಗಳು ಎದುರಾಗುತ್ತವೆ. ನಿರ್ದೇಶಕ ಸದಾ ಕಾಲ ಪೊಲಿಟಿಕಲಿ ಕರೆಕ್ಟ್ ಆಗಿರಬೇಕು ಎನ್ನುವ ಒತ್ತಡವನ್ನು ಎದುರಿಸಬೇಕಾಗುತ್ತದೆ. ಸದಾ ತಕ್ಕಡಿಯನ್ನು ಬ್ಯಾಲೆನ್ಸ್ ಮಾಡುವ ಸರ್ಕಸ್ಸಿನಲ್ಲಿ ಆತ ಸಿಲುಕಿಕೊಳ್ಳಬೇಕಾಗುತ್ತದೆ. ಬಾಂಬಿಡುವ ಭಯೋತ್ಪಾದಕನ ಪಾತ್ರವನ್ನು ಬ್ಯಾಲೆನ್ಸ್ ಮಾಡುವುದಕ್ಕೆ ದೇಶಭಕ್ತ ಮುಸ್ಲಿಂ ಪೊಲೀಸ್ ಅಧಿಕಾರಿಯ ಪಾತ್ರ ಬೇಕಾಗುತ್ತದೆ. ಎರಡು ಕೋಮುಗಳ ವೈಷಮ್ಯವನ್ನು ಕಥೆಯಲ್ಲಿ ಸಂಭಾಳಿಸುವಾಗ ತಾನು ಯಾವೊಂದು ಕೋಮಿನ ಕಡೆಗೂ ವಾಲಬಾರದೆಂಬ ಪೂರ್ವ ನಿರ್ಧಾರಿತ ಎಚ್ಚರ ಕೈ ಹಿಡಿದೆಳೆಯುತ್ತಿರುತ್ತದೆ. ಚಿತ್ರಕಥೆಯಲ್ಲಿ ಸತ್ಯಾನ್ವೇಷಣೆ, ಸಮಸ್ಯೆಯ ಬೇರುಗಳನ್ನು ಹುಡುಕುವ ಪ್ರಯತ್ನದ ಬದಲು ಎಲ್ಲರೂ ಒಪ್ಪಬಹುದಾದಂತಹ ಪಾಪ್ಯುಲರ್ ಅಭಿಪ್ರಾಯಗಳಿಗೆ ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಅಲ್ಲದೆ ಸಿನೆಮಾದ ಸಿದ್ಧ ಮಾದರಿ ಬಯಸುವ ಕಾಂಪ್ರಮೈಸುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇವೆಲ್ಲವುಗಳಿಂದಾಗಿ ಕಡೆಗೆ ಈ ವಿಷಯವನ್ನು ಮುಟ್ಟಲು ಹೊರಟ ಸಿನೆಮಾ ತೀರಾ ಮೇಲ್ಪದರದ ಸಂಗತಿಗಳನಷ್ಟೇ ತಟ್ಟಿ, ಸ್ಟೀರಿಯೋಟೈಪುಗಳನ್ನು ಅಪ್ಪಿಕೊಂಡು, ಕಣ್ಣೆದುರು ಕವಿದ ಮಂಜಿನಿಂದ ಅಡಗಿದ ಸಂಗತಿಗಳನ್ನು ಕಾಣುವಲ್ಲಿ ಸೋಲುತ್ತದೆ.
ಈ ಎಲ್ಲಾ ಸವಾಲುಗಳನ್ನು ಇಟ್ಟುಕೊಂಡು ಕನ್ನಡದಲ್ಲಿ ಸ್ವಂತ ಸಿನೆಮಾ ಮಾಡುವುದು ನಿಜಕ್ಕೂ ಸಾಹಸವೇ ಸರಿ. ಅದರಲ್ಲೂ ಪ್ರಮುಖ ವಾಹಿನಿಯ ಪ್ರೊಟೊಕಾಲ್‌ಗಳಿಗೆ ಮನ್ನಣೆಕೊಟ್ಟು, ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನೆಮಾ ಮಾಡುವುದಕ್ಕೆ ದೊಡ್ಡ ಧೈರ್ಯ ಬೇಕು. ಇಂತಹ ಸ್ಕ್ರಿಪ್ಟಿಗಾಗಿ ಇಮೇಜು ಉಳ್ಳ ಶಿವರಾಜ್ ಕುಮಾರ್‌ರಂತಹ ನಟರನ್ನು ಒಪ್ಪಿಸಿರುವುದು ನಿರ್ದೇಶಕರಿಗೆ ಪ್ರೇಕ್ಷಕರ ಬಗೆಗೆ ಇರುವ ಕಾಳಜಿ ಹಾಗೂ ಸ್ಕ್ರಿಪ್ಟಿನ ಬಗೆಗೆ ಇರುವ ಧೈರ್ಯವನ್ನು ತೋರಿಸುತ್ತದೆ.
ತಮಸ್ಸು- ಕತ್ತಲು- ಎಲ್ಲೆಲ್ಲೂ ಇದೆ. ಕಣ್ಣು ಬಿಟ್ಟರೆ ನಮ್ಮ ಹೊರಗೆ ಕಾಣುತ್ತದೆ. ಕಣ್ಮುಚ್ಚಿದರೆ ನಮ್ಮೊಳಗೆ... ಹೀಗೆ ಹೊರಗೂ ಒಳಗೂ ಅಂಧಕಾರ ಕವಿದಿರುವಾಗ ಬೆಳಕಿನ ಹುಡುಕಾಟ ನಡೆಯುವುದು ಹೇಗೆ? ಬೆಳಕನ್ನು ಪಡೆಯುವ ಮಾರ್ಗವಾದರೂ ಯಾವುದು ಎನ್ನುವ ಪ್ರಶ್ನೆ ಚಿತ್ರದ ಜೀವಾಳ.
ಯಾವುದೋ ಕಾಲದ ಬೆಂಗಳೂರಿನಲ್ಲಿ, ಯಾವುದೋ ಕಾರಣಕ್ಕೆ ಕೋಮು ದಳ್ಳುರಿ ಹೊತ್ತಿಕೊಳ್ಳುತ್ತದೆ. ಕಾಲ ಹಾಗೂ ಕಾರಣವನ್ನು ಅಸ್ಪಷ್ಟವಾಗಿರಿಸಿರುವುದು ನಿರ್ದೇಶಕರ ಪ್ರಜ್ಞಾಪೂರ್ವಕ ನಿರ್ಧಾರವೆನಿಸುತ್ತದೆ. ಹಿಂದುಗಳು, ಮುಸ್ಲೀಮರು ಪರಸ್ಪರರನ್ನು ಹೊಡೆದಾಡಿಕೊಳ್ಳುವುದರ ಜೊತೆಗೆ ಕೈಗೆ ಸಿಕ್ಕ ಆಸ್ತಿ, ವಾಹನಗಳಿಗೆ ಬೆಂಕಿ ಇಡುತ್ತಾ ದಾಂಧಲೆಯಿಬ್ಬಿಸುತ್ತಿರುತ್ತಾರೆ. ಇಂತಹ ಗಲಭೆ ಪೀಡಿತ ಪ್ರದೇಶಕ್ಕೆ ಆಗಮಿಸುವ ಪೊಲೀಸರಲ್ಲಿ ಎಸಿಪಿ ಶಂಕರ್ (ಶಿವರಾಜ್ ಕುಮಾರ್) ಇರುತ್ತಾರೆ. ರಿಸ್ಕು ತೆಗೆದುಕೊಂಡು ಕೆಲಸ ಮಾಡುವುದರಲ್ಲಿ ಹೆಸರಾಗಿದ್ದ ಶಂಕರ್ ಉಳಿದ ಪೊಲೀಸರನ್ನು ಹಿಂದೆ ಬಿಟ್ಟು ಗುಂಪೊಂದನ್ನು ಅಟ್ಟಿಕೊಂಡು ಹೋಗುತ್ತಾರೆ. ಶಂಕರ್ ವಾಪಸ್ ಬರುವಷ್ಟರಲ್ಲಿ ಗುಂಪಿಗೆ ಹೆದರು ಉಳಿದ ಪೊಲೀಸರು ಜೀಪಿನ ಸಮೇತ ಪರಾರಿಯಾಗಿರುತ್ತಾರೆ. ದಾಂಧಲೆಯೆಬ್ಬಿಸುತ್ತಿದ್ದ ಒಂದು ಗುಂಪಿನಿಂದ ತಪ್ಪಿಸಿಕೊಂಡು ಅಡಗಿಕೊಂಡ ಶಂಕರ್ ಇನ್ನೊಂದು ಗುಂಪಿನೆ ಕೈಗೆ ಸಿಕ್ಕು ತಲೆಗೆ ಏಟು ತಿಂದು ಗಾಯಗೊಳ್ಳುವರು.
ಗಾಯಗೊಂಡ ಶಂಕರ್ ವಯಸ್ಸಾದ ಮುಸ್ಲಿಂ ತಂದೆ ಹಾಗೂ ಮಗಳಿರುವ ಒಂದು ಮನೆಯಲ್ಲಿ ಆಶ್ರಯ ಪಡೆಯುತ್ತಾರೆ. ಕಾಣೆಯಾದ ಎಸಿಪಿಯನ್ನು ಹುಡುಕಲು ಪೊಲೀಸರು ತೊಡಗಿರುತ್ತಾರೆ, ಕೋಮು ದಳ್ಳುರಿ ಹಬ್ಬಿಸುವಲ್ಲಿ ಎರಡೂ ಕೋಮಿನ ಗುಂಪುಗಳು ತೊಡಗಿರುತ್ತವೆ. ಈ ಮಧ್ಯೆ ತನ್ನ ತಲೆಗಾದ ಪೆಟ್ಟಿಗೆ ಚಿಕಿತ್ಸೆ ನೀಡಿ ಉಪಚರಿಸಿದ ಮನೆಯ ಒಬ್ಬನೇ ಗಂಡು ಮಗ ಇಮ್ರಾನ್ ನನ್ನು ಎನ್ ಕೌಂಟರ್ ಹೆಸರಿನಲ್ಲಿ ಕೊಂದದ್ದು ತಿಳಿದು ಬರುತ್ತದೆ. ಆದರೆ ಆ ಮುಸ್ಲಿಂ ತಂದೆ, ಮಗಳಿಗೆ ಇಮ್ರಾನ್ ಎನ್ಕೌಂಟರ್ ಮಾಡಿದ ಪೊಲೀಸ್ ಯಾರು ಎನ್ನುವುದು ತಿಳಿದಿರುವುದಿಲ್ಲ. ಹಿಂದೆ ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಪೋಟದ ಸಂದರ್ಭದಲ್ಲಿ ಮಾಧ್ಯಮದ ಮೂದಲಿಕೆಯ , ನಿಷ್ಕ್ರಿಯತೆಯ ಆರೋಪಕ್ಕೆ ಪ್ರತಿಕ್ರಿಯಿಸುವ ಒತ್ತಡದಿಂದಾಗಿ ಭಯೋತ್ಪಾದಕನ ಹೆಣವೊಂದನ್ನು ಕೆಡವಿ ಹಾಕಬೇಕೆಂದು ತೀರ್ಮಾನಿಸಿದ ಶಂಕರ್ ಇಮ್ರಾನ್ ನನ್ನು ಕೊಂದಿರುತ್ತಾನೆ.
ಭಯೋತ್ಪಾದಕನೆಂದು ಭಾವಿಸಿ ತಾನು ಗುಂಡಿಟ್ಟು ಕೊಂದವನ ಮನೆಯಲ್ಲೇ ಸಿಕ್ಕಿ ಹಾಕಿಕೊಳ್ಳುವ ಶಂಕರ್ ತಾನು ಕೊಂದದ್ದು ನಿಜಕ್ಕೂ ಒಬ್ಬ ಭಯೋತ್ಪಾದಕನನ್ನೋ ಅಥವಾ ಅಮಾಯಕನನ್ನೋ ಎನ್ನುವ ಗೊಂದಲದಲ್ಲೂ ಸಿಲುಕುತ್ತಾನೆ. ಮಗನ ಸಾವಿನ್ನು ಅರಗಿಸಿಕೊಳ್ಳಲಾಗದ ತಂದೆ, ಅಣ್ಣನನ್ನು ಕಳೆದುಕೊಂಡು, ಅಣ್ಣ ಭಯೋತ್ಪಾದಕನೆಂಬ ಕಾರಣದಿಂದ ಮದುವೆ ಮುರಿದ ದುಃಖ ಭರಿಸುವ ಮಗಳು - ಇವರಿಬ್ಬರೆದುರು ತನ್ನ ಪ್ರಾಮಾಣಿಕತೆ, ಸತ್ಯ, ನಿಷ್ಠೆಗಳನ್ನು ಪರೀಕ್ಷೆಗೊಡ್ಡಿಕೊಳ್ಳುವ ಪೊಲೀಸು.
ನಡುವೆ ಹಲವಾರು ಪ್ಲಾಶ್ ಬ್ಯಾಕುಗಳ ಓಟ. ಪೊಲೀಸ್ ವ್ಯವಸ್ಥೆಗೆ ಅಪರಾಧ ಹಾಗೂ ಅಪರಾಧಿಯನ್ನು ನಿರ್ವಹಿಸಲು ಗೊತ್ತಿರುವ ಎರಡು ಮಾರ್ಗಗಳನ್ನು ಒಪ್ಪದೆ ಅಪರಾಧಿಯ ತಪ್ಪನ್ನು ಕ್ಷಮಿಸಿ ಅವನನ್ನು ಒಪ್ಪಿಕೊಳ್ಳುವ ಹೊಸ ಮಾರ್ಗವನ್ನು ತೋರಿಸುವ ನಾಯಕಿ ಶಾಂತ (ಪದ್ಮ ಪ್ರಿಯಾ)ಳ ಮೇಲೆ ಶಂಕರ್ ಗೆ ಪ್ರೀತಿ ಮೂಡುತ್ತದೆ. ಅವರ ಪ್ರೀತಿ ಅರಳುವಾಗ ಅವರ ಸಂಬಂಧದಲ್ಲಿ ಮುಳ್ಳುಗಳೇಳುತ್ತವೆ. ಪ್ರಾಮಾಣಿಕತೆ, ಸತ್ಯ, ನಿಷ್ಠೆಯ ಹೆಸರಿನಲ್ಲಿ ಶಂಕರ್ trigger happyಯಾಗಿದ್ದಾನೆ, ಎನ್ ಕೌಂಟರ್ ಮಾಡುವುದು ವ್ಯಸನವಾಗಿದೆ ಎಂದು ಶಾಂತ ಆರೋಪಿಸುತ್ತಾಳೆ. ತನ್ನ ಸತ್ಯಾಸತ್ಯತೆಯ ಅರಿವು ಹಾಗೂ ನ್ಯಾಯ ದಾನವನ್ನು ಅವಲೋಕಿಸಿಕೊಳ್ಳಲು ಇಚ್ಚಿಸದ ಶಂಕರ್ ಆಕೆಯಿಂದ ದೂರವಾಗುತ್ತಾನೆ.
ವಿಧಿ ತಂದಿಟ್ಟ ಸಂದಿಗ್ಧದಲ್ಲಿ ಶಂಕರ್ ಶಾಂತ ಬೆರಳು ಮಾಡಿದ ತನ್ನಲ್ಲಿನ ಕ್ರೌ ರ್ಯ, ತಾನು ಎದುರಿಸಲು ಹಿಂದೇಟು ಹಾಕುತ್ತಿದ್ದ ತನ್ನೊಳಗಿನ ತಮಸ್ಸಿನೊಡನೆ ಮುಖಾಮುಖಿಯಾಗುತ್ತಾನೆ. ಹೊರಗಿನ ಕ್ರೌರ್ಯವನ್ನು ಸಮರ್ಥನೆಯಾಗಿಟ್ಟುಕೊಂಡು ತನ್ನೊಳಗೆ ಕ್ರೌರ್ಯಕ್ಕೆ ಆಸ್ಪದ ಕೊಟ್ಟಿದ್ದು ಅರಿವಾಗುತ್ತದೆ. ಅಷ್ಟರಲ್ಲಿ ಸನ್ನಿವೇಶದ ನಾಟಕೀಯತೆಯಿಂದ ಶಂಕರ್ ಗೆ ಆಶ್ರಯ ನೀಡಿದ್ದ ಮನೆಯ ಯಜಮಾನನಿಗೆ ತನ್ನ ಮಗ ಇಮ್ರಾನ್ ನನ್ನು ಕೊಂದದ್ದು ಶಂಕರ್ ಎಂದು ತಿಳಿಯುತ್ತದೆ.ಮುಂದೇನಾಗುತ್ತದೆ, ಇಮ್ರಾನ್‌ನ ತಂದೆ ಏನು ನಿರ್ಧಾರ ತೆಗೆದುಕೊಳ್ಳುತ್ತಾನೆ ಎನ್ನುವುದನ್ನೆಲ್ಲಾ ಥಿಯೇಟರಿನಲ್ಲಿ ಸಿನೆಮಾ ನೋಡಿಯೇ ತಿಳಿಯಬೇಕು...
ಇಂತಹ ಕಥಾವಸ್ತುವನ್ನು ಆಯ್ದುಕೊಂಡರೆ ಎದುರಾಗುವ ಸವಾಲುಗಳನ್ನು ಮೊದಲೇ ಹೇಳಿರುವೆ. ‘ತಮಸ್ಸು’ ಚಿತ್ರವೂ ಅಂತಹ ಅನೇಕ ಸವಾಲುಗಳನ್ನು ಎದುರಿಸಲು ಪ್ರಯತ್ನಿಸಿದೆ. ಹಲವು ಅಂಶಗಳಲ್ಲಿ ಯಶಸ್ವಿಯೂ ಆಗಿದೆ. ಸಾಮಾನ್ಯ ನಿರ್ದೇಶಕರು ದಾಟಲು ಹೆದರುವ ಅನೇಕ ಲಕ್ಷ್ಮಣ ರೇಖೆಗಳನ್ನು ಶ್ರೀಧರ್ ದಿಟ್ಟವಾಗಿ ದಾಟಿದ್ದಾರೆ. ಮುಸಲ್ಮಾನ ಎಂ.ಎಲ್.ಎ ಪೊಲೀಸ್ ಅಧಿಕಾರಿಯ ಕಾಲು ಹಿಡಿಯುತ್ತಾನೆ.ಭಯೋತ್ಪಾದನೆಗೆ ಬಡತನ, ಅಲ್ಪಸಂಖ್ಯಾತರೆನ್ನುವ ಅಭದ್ರತೆ, ರಾಜಕೀಯ ನಿರ್ಲಕ್ಷ್ಯ, ಬಹುಸಂಖ್ಯಾತರ ದೌರ್ಜನ್ಯ, ರಕ್ಷಣೆ ನೀಡುವಲ್ಲಿ ಸರಕಾರದ ವೈಫಲ್ಯ ಮೊದಲಾದ ಸಮರ್ಥನೆಗಳು ಇಲ್ಲಿಲ್ಲ. ಧರ್ಮಾಂಧತೆ ಹಾಗೂ ವ್ಯವಸ್ಥಿತವಾದ ಭಯೋತ್ಪಾದಕ ಜಾಲದ ಉಪಸ್ಥಿತಿಯನ್ನು ನೇರವಾಗಿ ಹೇಳಲಾಗಿದೆ. ಎನ್ ಕೌಂಟರ್ ಹೆಸರಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಇಳಿಯುವುದಕ್ಕೆ ಪೊಲೀಸರಿಗೆ ಇರುವ ಒತ್ತಡಗಳ ಕುರಿತು ಬೆಳಕು ಚೆಲ್ಲಲಾಗಿದೆ. ಪೊಲೀಸ್ ವ್ಯವಸ್ಥೆಯನ್ನು ದೂಷಿಸುವ ಮಾಧ್ಯಮ, ರಾಜಕಾರಣಿಗಳು, ಮೂದಲಿಸುವ ಸಾಮಾನ್ಯ ಜನತೆ - ಇವುಗಳಿಂದಾಗಿ ಕೊಂದವನು ಹೀರೋ ಆಗುವ ವೈಚಿತ್ರ್ಯ (ಈ ಕುರಿತ ಜೈ ಜಗದೀಶ್ ಡೈಲಾಗ್ ಮಾರ್ಮಿಕವಾಗಿದೆ “ಈ ಜನರ ಮೆಂಟಾಲಿಟೀನೇ ವಿಚಿತ್ರ. ಅವ್ನು ರೌಡಿಯಾಗಿರ್ಲಿ, ಟೆರರಿಸ್ಟ್ ಆಗಿರಲಿ, ಪೊಲೀಸೇ ಆಗಿರಲಿ, ಕಿಲ್ಲರ್ ಬಿಕಮ್ಸ್ ಎ ವಿನ್ನರ್”)ದ ಕಡೆಗೆ ಗಮನ ಸೆಳೆದಿದ್ದಾರೆ.
ಮೊದಲ ನೋಟಕ್ಕೆ ಸಿನೆಮಾದಲ್ಲಿ ಕಂಡ ಅಪಸವ್ಯಗಳು ಕೆಲವಿವೆ.ಮುಂಬೈ ಪ್ರಮಾಣದ ಭಯೋತ್ಪಾದಕ ದಾಳಿ, ಬಾಂಬ್ ಸ್ಪೋಟ ಮುಂತಾದವುಗಳ ಹಿನ್ನೆಲೆಯಿಲ್ಲದ ಬೆಂಗಳೂರಿನಲ್ಲಿ ಬಾಂಬ್ ಸ್ಪೋಟಗೊಳ್ಳುವುದು, ಕೋಮು ದಳ್ಳುರಿಯ ಜೊತೆಗೆ ಭಯೋತ್ಪಾದನೆಯ ಸಮಸ್ಯೆಯನ್ನೂ ಕೈಗೆತ್ತಿಕೊಂಡಿರುವುದು ಅಸಹಜವೆನ್ನಿಸುತ್ತದೆ. ಇಡೀ ಚಿತ್ರದಲ್ಲಿ ಹಿನ್ನೆಲೆಯಲ್ಲಿರಬೇಕಾದ ಅಂಶಗಳು ಯಾವುವು, ಪ್ರಧಾನ ಅಂಶಗಳು ಯಾವುವು ಎನ್ನುವ ಕುರಿತು ಗೊಂದಲ ಎದ್ದು ಕಾಣುತ್ತದೆ. ಹತ್ತೆಂಟು ಆಯಾಮಗಳಲ್ಲಿ ಸಮಸ್ಯೆಯೊಂದನ್ನು ಕಾಣುವ ಪ್ರಯತ್ನದಲ್ಲಿ ಬಹುಶಃ ಇಂತಹ ಗೊಂದಲ ಅನಿವಾರ್ಯವೇನೋ.
ವಿಶಿಷ್ಟವಾದ ಪಾತ್ರದಲ್ಲಿ ಶಿವರಾಜ್ ಕುಮಾರ್ ಮನತುಂಬಿ ನಟಿಸಿದ್ದಾರೆ. ಪಾತ್ರದ ಸೂಕ್ಷ್ಮ ಭಾವನೆಗಳನ್ನು ಬಿಂಬಿಸುವ ಪ್ರಬುದ್ಧ ನಟನೆ ನೀಡಿದ್ದಾರೆ. ಇದು ಚಿತ್ರದ ಹೈಲೈಟ್. ತಾಂತ್ರಿಕ ವಿಷಯಗಳನ್ನು ವಿಮರ್ಶಿಸುವ ತಿಳುವಳಿಕೆ ನನಗಿಲ್ಲವಾದ್ದರಿಂದ ಅವುಗಳ ಬಗ್ಗೆ ಏನನ್ನೂ ಹೇಳಲಾರೆ. ಆದರೆ ಒಟ್ಟಾರೆಯಾಗಿ ಕನ್ನಡದ ಚಿತ್ರ ರಂಗಕ್ಕೆ ಅಗತ್ಯವಾಗಿರುವ ಹೊಸ ಬಗೆಯ ಚಿಂತನೆಯನ್ನು ಒದಗಿಸುವಲ್ಲಿ ‘ತಮಸ್ಸು’ ಪೂರ್ಣ ಪ್ರಮಾಣದಲ್ಲಿ ಪರಿಶ್ರಮ ಪಟ್ಟಿದೆ. ಚಿತ್ರಕತೆಯಲ್ಲಿ ಪತ್ರಕರ್ತ ಅಗ್ನಿ ಶ್ರೀಧರ್ ಆಗಾಗಿ ಕಾಣಿಸಿಕೊಳ್ಳುತ್ತಾರೆಯಾದರೂ ಸಿನೆಮಾ ತಾನಾಗಿ ಸೃಷ್ಟಿಸಿದ ಕಥಾ ಹಂದರದ ಪರಿಧಿಯಲ್ಲಿಯೇ ಸ್ವಂತ ಪರಿಭಾಷೆ, ಪರಿಕರಗಳಿಂದ ಹಿಂದು ಮುಸ್ಲಿಂ ವೈಷಮ್ಯ, ಹಿಂಸಾಚಾರದ ವಿದ್ಯಮಾನವನ್ನು ಗ್ರಹಿಸುವ ಪ್ರಯತ್ನ ಮಾಡುತ್ತದೆ. ಇಂತಹ ಕನ್ನಡದ ಪ್ರಯತ್ನವನ್ನು ಕನ್ನಡಿಗರು ಕಈ ಚಾಚಿ ಸ್ವಾಗತಿಸಬೇಕು, ಇಂತಹ ಸಿನೆಮಾಗೆ ಪ್ರಜ್ಞಾಪೂರ್ವಕವಾಗಿ ಪ್ರತಿಸ್ಪಂದಿಸಬೇಕು.