
ಒಂದು ಸಿನಿಮಾ ನೋಡಿ ಥೇಟರ್ ನಿಂದ ಹೊರಬಂದಾಗ ಚಿತ್ರವು ಹಿಡಿಸುವ ಗುಂಗು, ಒಂದು
ಅಭಿಪ್ರಾಯವನ್ನು ಮೂಡಿಸಿ ಮನಸ್ಸನ್ನು ತುಂಬಿರುತ್ತದೆ. ಸಿನಿಮಾವನ್ನು ನೋಡುತ್ತಿರುವಾಗ
ಹೊಳೆಯವ ಅರ್ಥಕ್ಕೂ, ಸಿನಿಮಾ ನೋಡಿದ ನಂತರ ಅದರ ಬಗೆಗಿನ ಯೋಚನೆಯಿಂದ ಹೊಳೆಯುವ
ಅರ್ಥಕ್ಕೂ ವ್ಯತ್ಯಾಸವಿರುತ್ತದೆ.
ಸಿನಿಮಾದ ಬಗೆಗಿನ ಮಾತುಕತೆಗಳೆಲ್ಲವೂ ಆ ಗುಂಗಿನ
ಸುತ್ತ ಸುತ್ತುತ್ತಾ ನಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸುತ್ತ ಹೋಗುತ್ತದೆ. ಒಂದು
ಚಿತ್ರವನ್ನು ಕುರಿತ ಸಂವಾದ ಚರ್ಚೆಗಳು ಸಿನಿಮಾವನ್ನು ಹೆಚ್ಚು ಆಳವಾಗಿ, ಸ್ಪಷ್ಟವಾಗಿ
ನೋಡಲು ಸಹಕರಿಸುತ್ತದೆ. ಚಿತ್ರ ನಿರ್ಮಾಪಣ ತಂಡದೊಂದಿಗೇ ಚರ್ಚಿಸಲು ಅವಕಾಶ
ಒದಗಿಸುವಂತಹ ಸಂವಾದ ತಂಡದ ಇಂತಹ ಹಲವು ಪ್ರಯತ್ನಗಳು ಒಂದು ಚಿತ್ರವು ಹೆಚ್ಚು
ಸ್ಪಷ್ಟವಾಗಿ, ಅದರ ಹಲವು ಇತರ ಆಯಾಮಗಳತ್ತಲೂ ಕಣ್ಣು ಹರಿಸುವಂತಾಗುತ್ತಿರುವುದು
ಸುಳ್ಳಲ್ಲ.
ಸಂವಾದ ತಂಡದ ಇತ್ತೀಚಿನ ಕಾರ್ಯಕ್ರಮ ಪೊಲ್ಲಾದವನ್ ಚಿತ್ರ ಸಂವಾದ. 2007ರಲ್ಲಿ
ಬಿಡುಗಡೆಯಾದ ’ಪೊಲ್ಲಾದವನ್’ ಚಿತ್ರದ ನಿರ್ದೇಶಕ ವೆಟ್ರಿ ಮಾರನ್, ಸಿನಿಮಾಟೋಗ್ರಾಫರ್
ಆರ್.ವೇಲ್ ರಾಜ್ ಹಾಗೂ ಸಿನಿಮಾದಲ್ಲಿ ವಿಲ್ಲನ್ ಪಾತ್ರ ನಿರ್ವಹಿಸಿರುವ ಕಿಶೋರ್
ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು. ಪೊಲ್ಲಾದವನ್, ಕಮರ್ಷಿಯಲ್
ಚಿತ್ರವೊಂದಕ್ಕೆ ಬೇಕಿರುವ ಎಲ್ಲ ಮಸಾಲೆಗಳನ್ನೂ ಒಳಗೊಂಡಿರುವ ಚಿತ್ರ. ಮಿಡ್ಲ್ ಕ್ಲಾಸ್
ಯುವಕನೊಬ್ಬ ಹೆಚ್ಚು ಇಷ್ಟಪಟ್ಟು ಖರೀದಿಸಿದ ಪಲ್ಸರ್ ಬೈಕ್ ಕಳುವಾದಾಗ ಆತನಿಗೆ
ಉಂಟಾಗುವ ತಳಮಳ, ಬೈಕ್ ಬಗೆಗೆ ಆತನಿಗಿರುವ ಭಾವಾನಾತ್ಮಕ ಅಟ್ಯಾಚ್ಮೆಂಟ್, ಕಾಣೆಯಾದ
ಬೈಕನ್ನು ಹಿಂಪಡೆಯಬೇಕೆಂಬ ಆತನ ತವಕ, ಇದರಿಂದಾಗಿ ಆತನ ಮನೆಯಲ್ಲಿ ಆಗುವ
ಪರಿಣಾಮಗಳು, ಇದರ ಜೊತೆ ಕತೆ ನಾಲ್ಕಾರು ಡ್ಯುಯೆಟ್ ಸಾಂಗುಗಳು, ಒಂದು ಐಟಮ್ ಸಾಂಗು,
ಐದಾರು ಫೈಟುಗಳು, ಮತ್ತು ಒಬ್ಬಳು ಹೀರೋಯಿನ್ನನ್ನು ಒಳಗೊಂಡು ಎಲ್ಲೂ ಬೋರ್ (ಹೆಚ್ಚು)
ಎನಿಸದೆ ಸಾಗುತ್ತದೆ. ನಿರೂಪಣಾ ಶೈಲಿ ಚೆನ್ನಾಗಿದೆ ಆದರೂ ಕತೆಯು ಸ್ವಲ್ಪ
ಸಡಿಲವೆನಿಸುತ್ತದೆ.
ಚಿತ್ರ ನೋಡಿದ ನಂತರ ಸಂವಾದ ಶುರುಮಾಡಿದ ವೆಟ್ರಿಮಾರನ್ ಚಿತ್ರದ ಬಗ್ಗೆ ತಿಳಿಸುತ್ತ, ಈ
ಚಿತ್ರವು ಒಬ್ಬ ಸಹನಿರ್ದೇಶಕನು, ನಿರ್ದೇಶಕನಾಗಲು ಮಾಡಿದ ಪ್ರಾಮಾಣಿಕ ಪ್ರಯತ್ನವಷ್ಟೇ,
ಈ ಸಿನಿಮಾದ ಬಗೆಗೆ ಹೆಚ್ಚುಗಾರಿಕೆಯಿಂದ ಹೇಳಿಕೊಳ್ಳುವಷ್ಟು ಚೆನ್ನಾಗಿ ಮೂಡಿಬಂದಿಲ್ಲ.
ಇದು ನಾನು ಮಾಡಿರುವ ಕೆಟ್ಟ ಸಿನಿಮಾಗಳಲ್ಲೊಂದು ಹೇಳಿದರು. ಸಿನಿಮಾದ ಬಗ್ಗೆ
ಅಗತ್ಯಕ್ಕಿಂತ ಹೆಚ್ಚುಗಾರಿಕೆಯಿಂದ ಹೇಳಿಕೊಳ್ಳುವ ಸಂಪ್ರದಾಯದ ಮಧ್ಯೆ ಅವರ ಮಾತುಗಳು
ವಿಚಿತ್ರವೆನಿಸಿದ್ದು ಸುಳ್ಳಲ್ಲ. ಬಹುಶ: ಸಿನಿಮಾ ೨೦೦೭ರಲ್ಲೇ ಬಿಡುಗಡೆಯಾಗಿ
ಯಶಸ್ವಿಯೂ ಆಗಿದ್ದಿದ್ದೂ ಅವರ ಈ ದಿಟ್ಟ ಹೇಳಿಕೆಗೆ ಕಾರಣವಿರಬಹುದು.
ಆದರೆ ಇದಿಷ್ಟೇ ಅಲ್ಲದೆ ಸಿನಿಮಾಗಳ ಬಗ್ಗೆ ಅವರಿಗಿದ್ದ ಯೋಚನೆಗಳು, ಒಂದು ಸಿನಿಮಾ
ನಿರ್ಮಾಣವಾಗುವ ಹಂತದಲ್ಲಿ ಹೇಗೆ ತನ್ನ ಸ್ವರೂಪ ಬದಲಾಯಿಸಿಕೊಳ್ಳುತ್ತ, ಪರದೆಯ ಮೇಲೆ
ಮೂಡುವಷ್ಟರಲ್ಲಿ ತನ್ನದೇ ಆದ ಅಸ್ತಿತ್ವವನ್ನು ಪಡೆದುಕೊಳ್ಳುತ್ತದೆ ಎಂಬುದನ್ನೂ ಹಾಗು
ಅವರ ಮೇಲೆ ಪರಿಣಾಮ ಬೀರಿದ ಲ್ಯಾಟಿನ್ ಅಮೇರಿಕನ್, ಸ್ಪಾನಿಷ್ ಮತ್ತು ಕೊರಿಯನ್
ಸಿನಿಮಾಗಳ ಬಗ್ಗೆ ಆಸಕ್ತಿ ಹುಟ್ಟಿಸುವಂತಹ ಚರ್ಚೆ ನಡೆಯಿತು. ಕನ್ನಡದಲ್ಲಿ ಸಿನಿಮಾ
ಮಾಡುವ ಯೋಚೆನೆಯಿದೆಯೇ ಎಂಬ ಪ್ರಶ್ನೆಗೆ ಅವರು ಒಬ್ಬ ಬರಹಗಾರನು ತನಗೆ ತಿಳಿಯದ
ಭಾಷೆಯಲ್ಲಿ ಹೇಗೆ ಬರೆಯಲಾರನೋ ಹಾಗೆ ನಿರ್ದೇಶಕನೂ ಭಾಷೆಯ ಸೂಕ್ಷ್ಮಗಳು ತಿಳಿಯದೆ
ಒಳ್ಳೆಯ ಚಿತ್ರ ಮಾಡಲಾರ, ಸುಮಾರು ಐದಾರು ವರ್ಷ ಕನ್ನಡ ಕಲಿತು ಆಮೇಲೆ ಬಹುಶಃ ಚಿತ್ರ
ಮಾಡುವ ಧೈರ್ಯ ಬರಬಹುದೇನೋ ಎಂಬ ಉತ್ತರ ಸಮಂಜಸವೆನಿಸಿತು. ಸಂವಾದದ ಕೊನೆಗೆ ಕಿಶೋರ್
ಬಂದು, ತಾನು ತುಂಬಾ ಇನ್ವಾಲ್ವ್ ಆಗಿ ಮಾಡಿದ ಚಿತ್ರವಿದು, ತಮಿಳಿನಲ್ಲಿ ತಾನು ಮಾಡಿದ
ಮೊದಲ ಚಿತ್ರ ಎಂದು ತಿಳಿಸಿ ಖುಷಿಪಟ್ಟರು.
ಒಟ್ಟಿನಲ್ಲಿ ಮನರಂಜನೆಗಾಗಿ ನೋಡಿ ಸುಮ್ಮನಾಗಿ ಬಿಡಬಹುದಾಗಿದ್ದ ಚಿತ್ರವೊಂದು
ಇಷ್ಟೆಲ್ಲ ಚರ್ಚೆಗೆ, ವಿಷಯ ಸಂಗ್ರಹಣೆಗೆ ಅನುಕೂಲ ಮಾಡಿಕೊಟ್ಟಿದ್ದು ಸಂವಾದ.ಡಾಟ್
ಕಾಮ್ ನ ಕಾರ್ಯಕ್ರಮದಿಂದಾಗಿ. ಒಂದು ಆರೋಗ್ಯಕರವಾದ ಮಾತುಕತೆ ಹಾಗು ತಮಿಳು
ಸಿನಿಮಾವನ್ನು ಕನ್ನಡ ಜನರ ಮಧ್ಯೆ ಚರ್ಚಿಸುವಂತಹ ಒಂದು ಹೊಸ ಸಂಪ್ರದಾಯವನ್ನು
ಪರಿಚಯಿಸಿದ ಸಂವಾದ.ಕಾಮ್ ನ ಪ್ರಯತ್ನ ನಿಜಕ್ಕೂ ಶ್ಲಾಘನೀಯ.