ದೃಶ್ಯಕ್ಕೊಂದು ನುಡಿಗಟ್ಟು

ಈ ‘ಸಿನೆಮಾ’ ಗಳನ್ನು ಯಾಕಾಗಿ ಓದಬೇಕು? ಇದರಿಂದೇನು ಪ್ರಯೋಜನ?

ಸಂವಾದ ಡಾಟ್ ಕಾಂ ಆಯೋಜಿಸಿರುವ "ಟೂರಿಂಗ್ ಟಾಕೀಸ್ : ಸಿನಿಮಾ ಓದುವುದು ಹೇಗೆ" ಶೀರ್ಷಿಕೆಯ ಶಿಬಿರದ ಉದ್ದೇಶವನ್ನು ಸಂಪದ ಸಮುದಾಯ ತಾಣದಲ್ಲಿ ಪ್ರಶ್ನಿಸಿದ, ನಮ್ಮ ಪ್ರಯತ್ನಗಳನ್ನು ಗೌರವಪೂರ್ವಕವಾಗಿ ಟೀಕಿಸಿದ ಒಂದಷ್ಟು ಪ್ರಶ್ನೆ, ಸಂದೇಹ, ನೋಟಗಳಿಗೆ ಸಂಕ್ಷಿಪ್ತ ಉತ್ತರ ನೀಡುವ ಪ್ರಯತ್ನ ಮಾಡಿದ್ದೇವೆ  -ಸಂವಾದ ತಂಡ

ನಿಮ್ಮ ಈ ಕಾರ್ಯಕ್ರಮದ ಬಗ್ಗೆ ಓದಿದೆ. ಬಹಳ ಕುತೂಹಲವೆನಿಸಿತು. ಅದಕ್ಕಾಗಿ ಈ ಪ್ರಶ್ನೆ. ತಪ್ಪು ತಿಳಿಯಬೇಡಿ ಸರ್. ಈ ‘ಸಿನೆಮಾ’ ಗಳನ್ನು ಯಾಕಾಗಿ ಓದಬೇಕು? ಇದರಿಂದೇನು ಪ್ರಯೋಜನ? ಉತ್ತರಿಸುವಿರಿ ಎಂದು ನಂಬಿದ್ದೇನೆ :-)   -ಇಂಚರ

ನಿಮ್ಮ "ಈ ‘ಸಿನೆಮಾ’ ಗಳನ್ನು ಯಾಕಾಗಿ ಓದಬೇಕು? ಇದರಿಂದೇನು ಪ್ರಯೋಜನ?" ಎಂಬ ಮೂಲ ಪ್ರಶ್ನೆಗೆ ನಮ್ಮ ಶಿಬಿರದ ಇವೆಂಟ್ ಪುಟದಲ್ಲೇ ಸ್ಥೂಲವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಇರಲಿ ಒಂದಿಷ್ಟು ಉತ್ತರಿಸುವ ಪ್ರಯತ್ನ ಮಾಡ್ತೇನೆ-
ಯಾವುದೇ ಒಂದು ಚಿತ್ರಕ್ಕೆ ಗಂಭೀರವಾದ ಪ್ರತಿಕ್ರಿಯೆ ನೀಡಲಿಕ್ಕಾಗದಂತಹ ಬಾಯಿ ಚಪಲವನ್ನೇ ಮುಂದು ಮಾಡುವ ದುರಂತ ನಮ್ಮ ಸಾಂಸ್ಕೃತಿಕ ಪರಿಧಿಯೊಳಗೆ ಒಂದು ದೊಡ್ಡ ಸಾಮೂಹಿಕ ಸನ್ನಿಯೇ ಆಗಿದೆ. ಆ ಸನ್ನಿಯೊಳಗೆ ನಾನೂ ಇದ್ದೇನೆ ಎನ್ನುವ ಅರಿವು ಇಂಥಹ ಶಿಬಿರವೊಂದರ ಆಯೋಜನೆಗೆ ಪ್ರೇರಣೆ ನೀಡಿದೆ. ಕಲಿಸಲು ಕೆಲವರಾದರೂ ಇದ್ದಾರೆ, ಕಲಿಯುವ ಹಂಬಲವೂ ಇದೆ. ಈ ಅರಿವಿನ ವಿಸ್ತಾರವೇ ಸಂವಾದ ಡಾಟ್ ಕಾಂನ ಪ್ರಯತ್ನಗಳು. ನೀವು ಕಲಿತವರೇ ಆಗಿದ್ದರೂ, ಕಲಿಯುವವರೇ ಆಗಿದ್ದರೂ ನಿಮಗೆ ಸ್ವಾಗತ. ದಯಮಾಡಿ ಶಿಬಿರಕ್ಕೆ ಬನ್ನಿ. ಎಲ್ಲ ಪ್ರಶ್ನೆಗಳಿಗೂ ಉತ್ತರ ಹುಡುಕುವ/ಕೊಡುವ ಪ್ರಯತ್ನ ಮಾಡೋಣ. ಕಳೆದ ಒಂದು ತಿಂಗಳು, ಶಿಬಿರದ ಪ್ರಚಾರಕ್ಕೆ ತೊಡಗಿದಂದಿನಿಂದಲೇ ಈ ಪ್ರಶ್ನೆ ಎದುರಾಗುತ್ತಿತ್ತು. ಸಾಧ್ಯವಾದಷ್ಟು ಉತ್ತರಿಸಿ, ಉಳಿದದ್ದನ್ನು ನಮ್ಮ ಸಂವಾದ ತಾಣದ ಟೂರಿಂಗ್ ಟಾಕೀಸ್ ಪುಟದಲ್ಲಿ ಹಾಕಿದ್ದೇವೆ.

ಶಿಬಿರದಲ್ಲಿ ಯಾವುದೇ ಆಧುನಿಕ ಸವಲತ್ತುಗಳು ಇಲ್ಲ. ಶಿಬಿರದ ಊಟ ವಸತಿಗಾಗಿನ ಶುಲ್ಕವೆಂದು ೫೦೦/-ನ್ನು ಸ್ವೀಕರಿಸಲಾಗುತ್ತಿದೆ. ಉಳಿದ ವೆಚ್ಚವನ್ನು ಪ್ರಾಯೋಜಕರಿಂದ ತುಂಬಿಕೊಳ್ಳುವ ಲಾಭರಹಿತವಾದ ನಮ್ಮ ಈ ಪ್ರಯತ್ನದ ಬಗ್ಗೆ ನಮಗೆ ಹೆಮ್ಮೆಯೂ ಇದೆ.

ಏನೋಪ್ಪಾ!

ಯಾವತ್ತೋ ಒಮ್ಮೆ ಸಿನಿಮಾ ನೋಡ್ತೇವೆ. ಮನಸ್ಸಿಗೆ ಮುದವೆನಿಸಿದರೆ ಚಂದಾಗಿದೆ ಅನ್ನುತ್ತೇವೆ. ಇಲ್ಲವಾದರೆ ಇಲ್ಲ ಅಂತೇವೆ.
ಇದನ್ನು ದುರಹಂಕಾರ ಅನ್ನೋದೆ?

ನೋಡಲಾಗದ ಸಿನಿಮಾ ಮಾಡಿ ನಿಮಗೇ ನೆಟ್ಟಗೆ ನೋಡೋಕೆ(ಓದೋಕೆ) ಬರಲ್ಲ ಅನ್ನೋದು ದುರಹಂಕಾರನೋ? ಸರಿ ಇಲ್ಲ ಅಂತ ನೇರವಾಗಿ ಹೇಳೋದು ದುರಹಂಕಾರನೋ?

ಹಾಗೆಯೇ ಸಂವಾದ ಡಾಟ್ ಕಾಮ್ ನ ಒಂದೆರಡು ಸಂವಾದಗಳಿಗೆ ಬಂದಿದ್ದೇನೆ. ಅದು ನಮಗೆ ಸಂವಾದಕ್ಕಿಂತ ಸಂಪಾದಕರ ಪಾಂಡಿತ್ಯ ಪ್ರದರ್ಶನಕ್ಕೆ ವೇದಿಕೆ ಎಂಬಂತೆ ಕಾಣುತ್ತದೆ.
ನಿಮ್ಮ ಸಂವಾದ ನಮ್ಮಂತಹ ದಡ್ಡರನ್ನು ಮುಟ್ಟುವುದೇ ಇಲ್ಲ! ಸಮಾಜದಲ್ಲಿ ಮುಕ್ಕಾಲು ಪಾಲು ನನ್ನಂತ ದಡ್ಡರೇ ಇರುವುದು. (ಇದಕ್ಕಾಗಿಯೇ ಓದುವುದನ್ನು ಕಲಿಸುತ್ತೇವೆ ಎನ್ನಬೇಡಿ ಮತ್ತೆ!

ದುರಹಂಕಾರಕ್ಕೆ ಕ್ಷಮಿಸಿ!   -ಸಾಲಿಮಠ


ಸಿನೆಮಾ ಚೆನ್ನಾಗಿದ್ರೆ ಅದಾಗೇ ನೋಡಿಸಿಕೊಂಡು ಹೋಗುತ್ತದೆ.ಚೆನ್ನಾಗಿಲ್ಲದಿದ್ದರೂ ’ಅಹಂಕಾರ’ದ ವಿಮರ್ಶೆ ಮಾಡಲು ಮಾತ್ರ ಕಷ್ಟ ಪಟ್ಟು ಏಕಾಗ್ರತೆ ಸಾಧಿಸಬೇಕಾಗುತ್ತದೆ :)

ತಮ್ಮ ಬರಹ ಮೇಷ್ಟ್ರು ಕೋಲು ಹಿಡಿದು full serious ಆಗಿ ಪಾಠ ಮಾಡಿದಂತಿದೆ ಅನ್ನಿಸಿತು ಅದಕ್ಕೆ ಹೀಗೆ ಬರೆದೆ, ಮನ್ನಿಸಿ.
ತಮ್ಮ ಕಾರ್ಯಕ್ರಮಕ್ಕೆ ಶುಭವಾಗಲಿ :)             -ರಾಕೇಶ್ ಶೆಟ್ಟಿ

ದುರಹಂಕಾರ ಎನ್ನುವ ಪದವನ್ನು ನಾವು ಬಳಸಿಲ್ಲ. ಬದಲಿಗೆ ಬಾಯಿ ಚಪಲವನ್ನೇ ಅಹಂಕಾರ ಎನ್ನುವ ನಿಜವನ್ನು ಎತ್ತಿ ಹಿಡಿಯಲಾಗಿದೆ. ಪ್ರದರ್ಶನವೇ ಆಗದ ಪಾಂಡಿತ್ಯ ಇದ್ದರೆಷ್ಟು ಬಿಟ್ಟರೆಷ್ಟು? ಪಾಂಡಿತ್ಯ ಪ್ರದರ್ಶನದ ಒಳ ಉದ್ದೇಶವೇ ಕಾರ್ಯಕ್ರಮದ ಹಿನ್ನೆಲೆಯೇ ಆಗಿದ್ದರೂ ಆಗಬಾರದೇಕೆ...? ಅದರಿಂದ ಆದ ನಷ್ಟವಾದರೂ ಏನು? ನಮ್ಮ ಅರಿವಿಗೆ ಎಟುಕುವಂಥಹ ಹೊಸತೇ ಆದ ದೃಷ್ಟಿಕೋನ ಮೂಡಿಸುವ ಪ್ರಯತ್ನಗಳು ಸಂವಾದ ಡಾಟ್ ಕಾಂನಲ್ಲಿ ನಡೆದಿವೆ. ಲೋಪದೋಷಗಳು ಇದ್ದರೆ ಕ್ಷಮೆಯಿರಲಿ. ಅಧಿಕ ದಡ್ಡರೇ ಇದ್ದಾರೆ ಎಂದೆನ್ನುವುದು ಸರ್ವರೂ ಅಂಗೀಕರಿಸಿ ಅನುಮೋದಿಸಬಹುದಾದ ಸತ್ಯ. ನೀವು ದಡ್ಡರಲ್ಲ ಎಂದೆಂದುಕೊಂಡಿದ್ದೇನೆ. ನಿಮಗೂ ಶಿಬಿರಕ್ಕೆ ಸ್ವಾಗತ. ಕಲಿಸಿ ಅಥವ ಕಲಿಯಿರಿ.



೫ ವರ್ಷಗಳ ಹಿಂದಿನ ಮಾತು. ಬ್ರಹ್ಮಾವರದಲ್ಲಿ ಏನೋ ಸಮ್ಮೇಳನವೊಂದಕ್ಕೆ ನನ್ನ ಗೆಳೆಯನೊಂದಿಗೆ ಹೋಗಿದ್ದೆ. ದ್ವೀಪ ಚಲನಚಿತ್ರ ಪ್ರದರ್ಶನ ಹಾಗೂ ಅದರ ಮೇಲೆ ಚರ್ಚೆ ಇತ್ತು. ದ್ವೀಪ ಇನ್ನೂ ಮನದಾಳದಲ್ಲಿ ಹಸಿರಾಗಿದ್ದರೂ ಚರ್ಚೆಯ ಒಂದು ಮಾತೂ ನನಗೆ ನೆನಪಿಲ್ಲ. ಹಾಗೆಯೆ ಕಾಲೇಜಿನಲ್ಲಿ ಪ್ರದರ್ಶಿಸುತ್ತಿದ್ದ ರೋವಾನ್ ಅಟ್ಕಿನ್ಸನ್ (ಮಿ|| ಬೀನ್) ಚಿತ್ರಗಳಲ್ಲಿ ಅವರ ಅದ್ಭುತ ಫೇಸ್ ಎಕ್ಸ್~ಪ್ರೆಶನ್ಸ್ ಮನದಾಳದಲ್ಲಿ ಉಳಿಯುತ್ತದೆಯೇ ಹೊರತು ಅವನ ಬಗ್ಗೆ ನಂತರ ನಡೆದ ಗೋಷ್ಟಿಯಲ್ಲ. ಸಿನೆಮಾ ತನ್ನಂತಾನೆ ಮನಸ್ಸನ್ನು ಕಾಡುತ್ತದೆ, ಖುಷಿ ಕೊಡುತ್ತದೆ. ನೀವು ಹೇಳುವ ನಮ್ರತೆ, ವಿನಯ ಮತ್ತು ಶಿಸ್ತು ಸಿನೆಮಾ ತನ್ನಂತಾನೆ ಕಲಿಸುತ್ತದೆ - ಅದರ ಮೇಲೆ ನಡೆಯುವ ಚರ್ಚೆಗಳಲ್ಲ ಎಂದು ನನ್ನ ಅನಿಸಿಕೆ.
ಆದರೂ ಶಿಬಿರ ಸಫಲವಾಗಲಿ ಎಂದು ಆಶಿಸುತ್ತೇನೆ.        -ಸಂತೋಷ


ದೃಶ್ಯಮಾಧ್ಯಮಕ್ಕಿರುವ ಅಪಾರವಾದ ಶಕ್ತಿ ಮನಸ್ಸಿನಲ್ಲಿ ಅಚ್ಛಳಿಯದೇ ಉಳಿದುಬಿಡುವುದು. ಮಾತುಗಳು ಮರೆತು ಹೋಗುತ್ತವೆ. ಹಾಗೆಂದೊಡನೆಯೆ ಮಾತುಗಳು ಅಪ್ರಸ್ತುತವಾಗುವುದಿಲ್ಲ, ಅಚ್ಛಳಿಯದೆ ಉಳಿಯಬಹುದಾದದ್ದನ್ನು ಪ್ರಶ್ನಿಸುತ್ತಲೇ ಹೆಚ್ಚು ಪ್ರಸ್ತುತಗೊಳಿಸಿಬಿಡುತ್ತದೆ. ಮಾತುಗಳು ನಿಮಗೆ ನೆನಪಿಲ್ಲದಿರುವುದು ನಿಮ್ಮ ಧ್ವನಿಗ್ರಹಿಕೆ ಮತ್ತು ಅರ್ಥಗ್ರಹಿಕೆಯ ಶಕ್ತಿಯನ್ನು ಸೂಚಿಸುತ್ತದೆ.

ಅಟ್ಕಿನ್ಸನ್‌ನಂತಹ ಶೈಶವ ಮಟ್ಟದ(ಬಾಲಿಶ ಎಂದೆನ್ನಬಹುದೆ?) ಹಾವಭಾವ ನಮಗೆ ಕಲಿಸಿರುವುದಾದರೂ ಏನನ್ನು? ನರಸಿಂಹರಾಜು, ಬಾಲಕೃಷ್ಣ, ಅಶ್ವತ್, ಲೋಕನಾಥ್, ಉಮಾಶ್ರೀ ತಮಿಳಿನ ಟಿ ಎಸ್ ಬಾಲಯ್ಯ, ವಿ ಕೆ ರಾಮಸ್ವಾಮಿ ಮತ್ತು ಇತ್ತೀಚಿನ ವಡಿವೇಲುರವರ ಯಾವ ಹಾವಭಾವವೂ ರೋವಾನ್ ಅಟ್ಕಿನ್ಸನ್‌ಗಿಂತ ಒಂದು ಮಟ್ಟ ಮೇಲೆಯೇ ಇದೆ. ಇದನ್ನು ನನ್ನ ಸಂಸ್ಕೃತಿಯೊಳಗಿನಿಂದಲೇ ಹುಟ್ಟಿದ ಒಂದು ಪ್ರತಿಕ್ರಿಯೆ ಎಂದೇ ಭಾವಿಸಿದ್ದೇನೆ. ಒಂದು ಉತ್ತಮ ಚಿತ್ರ ವಿನಯವನ್ನು ಕಲಿಸುತ್ತದೆ. ಜೊತೆಗೆ ಅರಿವನ್ನು ವಿಸ್ತರಿಸುತ್ತದೆ. ಆದರೆ ಈ ಅರಿವಾದರೂ ಎಂಥಹುದು ಎಂದೆನ್ನುವುದರ ಆಳವಾದ ಅಧ್ಯಯನ ಅತ್ಯಗತ್ಯ. ಇನ್ನಾದರೂ ಬಾಯಿ ಚಪಲವನ್ನು ಮೀರೋಣವೆ? ಂ ಃ ಅ ಆ ಅಥವ ಅ ಆ ಇ ಈ ಅಕ್ಷರಮಾಲೆಯನ್ನು ನೀವು ತೀರ ಎಳೆ ವಯಸ್ಸಿನಲ್ಲಿಯೇ ಕಲಿತಿರುತ್ತೀರ. ಅಕ್ಷರಗಳಷ್ಟೆ ಉಳಿದರೆ ಸಾಕು, ಇಂಜಿನೀಯರಿಂಗ್ ಪದವಿಯಾದರೂ ಯಾಕೆ ಬೇಕು?


ಸಿನೆಮಾ ಓದುವುದು ಹೇಗೆ..?
(ಎರಡು ದಿನಗಳ ಸಿನಿಮಾ ರಸಗ್ರಹಣ ಶಿಬಿರ)
ಸಂವಾದ ಡಾಟ್ ಕಾಂ ಆಗಸ್ಟ್ 27, 28 ಮತ್ತು 29ಕ್ಕೆ ನಡೆಸುತ್ತಿರುವ ಶಿಬಿರಕ್ಕೆ ಪಾಲ್ಗೊಳ್ಳುವವರು ಸಂಪರ್ಕಿಸಿ:

ಮೊಬೈಲ್:  9900439930/9731755966                

ಸ್ಥಳ: ಓದೇಕರ್ ಎಸ್ಟೇಟ್, ತುಮಕೂರಿನ ಬಳಿ

ಶಿಬಿರದ ಸಂಪನ್ಮೂಲ ವ್ಯಕ್ತಿಗಳು ಮತ್ತು ಅತಿಥಿಗಳು:
ಪಿ. ಶೇಷಾದ್ರಿ , ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರು
ಗುರುಪ್ರಸಾದ್, ಮಠ ಖ್ಯಾತಿಯ ನಿರ್ದೇಶಕರು.
ಶಶಾಂಕ್, ಮೊಗ್ಗಿನ ಮನಸು ಖ್ಯಾತಿಯ ನಿರ್ದೇಶಕರು.
ಪುಟ್ಟಸ್ವಾಮಿ ಕೆ ಎಸ್, ‘ಸಿನಿಮಾ ಯಾನ’ ಕೃತಿ ಕರ್ತೃ, ವಿಮರ್ಶಕರು
ಡೇವಿಡ್ ಬಾಂಡ್, ಫ್ರೆಂಚ್ ಸಿನೆಮಾ ವಿಮರ್ಶಕರು.
ಡಾ| ಸಿ ಸೋಮಶೇಖರ್, ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ.
ಶೇಖರ್ ಪೂರ್ಣ, ಕನ್ನಡ ಸಾಹಿತ್ಯ ಡಾಟ್ ಕಾಂನ ಸಂಪಾದಕರು


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು