ದೃಶ್ಯಕ್ಕೊಂದು ನುಡಿಗಟ್ಟು

ಪಂಚ್-ರಂಗಿ

ಮುಂಗಾರು ಮಳೆಯಲ್ಲಿ ಬೇಜವಾಬ್ದಾರಿಯ ಪುಂಡ ಹುಡುಗನಿಗೆ ಪ್ರೀತಿಯ ಗುಂಡಿಯಲ್ಲಿ ಧುಮುಕಿ ಮನೆತನದ ಗೌರವ ಉಳಿಸುವಷ್ಟು ಜವಾಬ್ದಾರಿ ಹೊರಿಸಿ, ಗಾಳಿಪಟದಲ್ಲಿ ಪ್ರೀತಿಯಲ್ಲಿ ಬಿದ್ದ ನಾಯಕನನ್ನು ಕವಿಯಾಗಿಸಿ, ಮನಸಾರೆಯಲ್ಲಿ ಹುಚ್ಚು - ಎಚ್ಚರದ ಹಗ್ಗ ಜಗ್ಗಾಟಕ್ಕೆ ಪಾತ್ರಗಳನ್ನು ನಿಲ್ಲಿಸಿದ್ದ ಯೋಗರಾಜ್ ಭಟ್ಟರು ‘ಪಂಚರಂಗಿ’ಯಲ್ಲಿ ನಾಲ್ಕು ಹೆಜ್ಜೆ ಮುಂದಕ್ಕೆ ಹೋಗಿ ನಾಯಕ ನಾಯಕಿಯರ ಮೂಲಕ ಸಮಕಾಲೀನ ಬದುಕಿಗೆ ಭಾಷ್ಯ ಬರೆಸಿಬಿಟ್ಟಿದ್ದಾರೆ.

ಸಿನೆಮಾ ಎನ್ನುವುದು ನಿರ್ದೇಶಕನ ಮಾಧ್ಯಮ ಎನ್ನುವುದನ್ನು ಈ ದಿನಗಳಲ್ಲಿ ಪರಿಣಾಮಕಾರಿಯಾಗಿ ನಿರೂಪಿಸುತ್ತಿರುವ ಕೆಲವೇ ಕೆಲವು ನಿರ್ದೇಶಕರಲ್ಲಿ ಒಬ್ಬರಾದ ಯೋಗರಾಜ್ ಭಟ್ಟರ ಸಿನೆಮಾಗಳು, ಟಿವಿ ಕಾರ್ಯಕ್ರಮಗಳಲ್ಲಿ,  ಸಂದರ್ಶನಗಳಲ್ಲಿ ದಿಕ್ಕು ತಪ್ಪಿಸುವ, ಮೋಸಮಾಡುವ ಅವರ ನಯವಾದ ಮಾತುಗಳಿದ್ದಂತೆಯೇ. ಡೈಲಾಗಿನ ಪ್ರತಿ ಸಾಲುಗಳಲ್ಲಿ ಎದ್ದೆದ್ದು ಹೊಡೆಯುವ ಪಂಚುಗಳ ಹೊಡೆತದಿಂದ ಪ್ರೇಕ್ಷಕ ಬಚಾವಾಗಲಿಕ್ಕೆ ಸಾಧ್ಯವೇ ಇಲ್ಲ. ಇಷ್ಟನ್ನು ನೋಡು ಎಂದು ಭಟ್ಟರು ಮಾಡುವ ಕಣ್ಕಟ್ಟನ್ನು ಮೈಮರೆತು ನೋಡುವುದರಲ್ಲೇ ನೋಡುಗನಿಗೆ ಸದ್ಗತಿ ದೊರಕಿಬಿಟ್ಟಿರುತ್ತದೆ. ಪಂಚಿಂಗ್ ಡೈಲಾಗುಗಳು, ಪಿಂಚಿಂಗ್ ಎಮೋಷನ್ನುಗಳ ನಡುವೆ ಹೊಂಚಿಕೊಂಡು ಎಚ್ಚರವನ್ನು ಕಾಯ್ದಿಟ್ಟುಕೊಂಡ ಬುದ್ಧಿವಂತನಿಗೂ ದಿಕ್ಕೆಡಿಸುವ ನಿರೂಪಣಾ ಶೈಲಿ... ಇವು ಭಟ್ಟರ ಸಿನೆಮಾ ಗುಣಲಕ್ಷಣಗಳು.

 

ಉಳಿದ ಸಿನೆಮಾಗಳಂತೆ ಪಂಚರಂಗಿಯದು ಸಾಂಪ್ರದಾಯಿಕ ಶೈಲಿಯ ಕಥೆಯಲ್ಲ. ರಾಮಾಯಣ, ಹರಿಕತೆ, ಬೇತಾಳ, ಕಾಗಕ್ಕ ಗುಬ್ಬಕ್ಕ ಕಥೆಗಳನ್ನು ಕೇಳಿ ಬೆಳೆದವರಿಗೆ, ಸಾಹಿತ್ಯ ತುಂಬಿಕೊಂಡು ತಲೆ ಕೆಡಿಸಿಕೊಂಡವರಿಗೆ ಭಟ್ಟರ ಯಾವುದೇ ಸಿನೆಮಾಗಳಲ್ಲಿ ಕೈಯಲ್ಲಿ ಹಿಡಿದು ತಿರುವು ಮುರುವು ಮಾಡಿ ನೋಡಬಹುದಾದ ಕತೆ ಸಿಕ್ಕುವುದಿಲ್ಲ. ಅವರ ಸಿನೆಮಾಗಳಲ್ಲಿರುವುದು ಘಟನೆಗಳು ಮಾತ್ರ. ಪಾತ್ರಗಳು ತಾವಿದ್ದ ಊರು, ಮನೆ, ಕೆಲಸ ಕಾರ್ಯಗಳನ್ನು ಬಿಟ್ಟು ನಿರ್ದೇಶಕನೆಂಬ ದೈವವು ಸೂಚಿಸಿದ ಜಾಗಕ್ಕೆ ಬಂದು ಸಿಕ್ಕಿ ಹಾಕಿಕೊಳ್ಳುತ್ತವೆ. ಅಲ್ಲಿ ನಡೆಯುವ ಚಕಮಕಿಯೇ ಸಿನೆಮಾ ಆಗಿರುತ್ತದೆ.

 

ನೆನಪಿಸಿಕೊಳ್ಳಿ, ಮುಂಗಾರು ಮಳೆಯಲ್ಲಿ ಮದುವೆಗೆ ಏಳು ದಿನಗಳಿವೆ ಎಂದಾಗ ಮದುಮಗಳ ಮನೆಗೆ ನಾಯಕನ ಆಗಮನವಾಗುತ್ತದೆ. ಬೆಂಗಳೂರಿನ ಬದುಕಿಗೆ ಬೇಸತ್ತು ಗಾಳಿಪಟದ ನಾಯಕರು ರಾತ್ರೋ ರಾತ್ರಿ ಊರು ಬಿಡುತ್ತಾರೆ. ಹುಚ್ಚು ಕನಸುಗಳನ್ನು, ವಿಚಾರಗಳನ್ನು ಹೊತ್ತ ಮನಸಾರೆಯ ನಾಯಕ ಹುಚ್ಚಾಸ್ಪತ್ರೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಪಂಚರಂಗಿಯಲ್ಲೂ ಅಷ್ಟೇ.ಈ ಸಿನೆಮಾದ ನಾಯಕ ಗೊಂಬೆಗಳಿಗೆ, ಗೊಂಬೆಗಳಂತಹ ಹೆಣ್ಣು ಮಕ್ಕಳಿಗೆ ಸೀರೆ ಉಡಿಸಿ ಅದರಿಂದ ಬಂದ ದುಡ್ಡಿನಲ್ಲಿ ಕನ್ನಡದಲ್ಲಿ ಎಂ.ಎ ಓದುತ್ತಿರುತ್ತಾನೆ.ಓದಿಸುವುದಕ್ಕೆ ಅಪ್ಪ ಇಲ್ಲವೇ ಎಂದು ಕೇಳಬೇಡಿ... ದೊಡ್ಡ ಮಗ ಸಾಫ್ಟ್ ವೇರ್ ಬಾಲ ಹಿಡಿದು ಅಮೇರಿಕಾಗೆ ಹೋದ ಮೇಲೆ ರಿಟೈರ್ ಆದ ಅಪ್ಪ ಕನ್ನಡpancharangi kannada movie review, pancharangi film review ಮೀಡಿಯಂನಲ್ಲಿ ಓದುತ್ತೇನೆನ್ನುವ ಮಗನನ್ನು ಓದಿಸುವ ಜವಾಬ್ದಾರಿಯಿಂದಲೇ ರಿಟೈರ್ ಆಗಿರುತ್ತಾನೆ. ‘ಪಂಚರಂಗಿ ಹೂವುಗಳು, ಒಂಚೂರ್ ನೀವು ನಾವುಗಳು’ ಎಂದು ನೋಡಿದ್ದಕ್ಕೆ, ಕೇಳಿದ್ದಕ್ಕೆ, ತೋಚಿದ್ದಕ್ಕೆಲ್ಲ ‘ಗಳು’ ಸೇರಿಸಿಕೊಂಡು ಡೈಲಾಗ್ ಹೊಡೆಯುತ್ತ ಓಡಾಡುವ ನಾಯಕನಿಗೆ ನಾರ್ಕೋಲೆಪ್ಸಿ. ಅಂದರೆ ಇದ್ದಕ್ಕಿದ್ದ ಹಾಗೆ ಕಂಡ ಕಂಡಲ್ಲಿ ಮರದ ಕೊರಡಿನಂತೆ ಮಲಗಿ ಬಿಡುವ ರೋಗ. ಜೊತೆಗೆ ತನ್ನದೇ ಡೈಲಾಗುಗಳಿಗೆ ಹಿನ್ನೆಲೆಯಲ್ಲಿ ಭಟ್ಟರ ‘ಹೌದು ಬಿಡಪ್ಪ’ ಎನ್ನುವ ಪ್ರತಿಧ್ವನಿ ಕೇಳುವ ಅರುಳು ಮರುಳು.

 

ಈ ನಮ್ಮ ನಾಯಕನ ಕಣ್ಣಿನಲ್ಲಿ ಕಿಡಿ ಗುರುತಿಸಿದ ಕಲ್ಚರಲ್ ಕೊಆರ್ಡಿನೇಟರ್ ಜಯಂತ್ ಕಾಯ್ಕಿಣಿಯವರು ತಮ್ಮ ಮಾತು ಹೊಸ ಜನರೇಷನ್ನಿನ ನಾಯಕನಿಗೆ ರೇಜಿಗೆ ತರಬಹುದೆಂದು ತಾವೇ ಭಾವಿಸುತ್ತಾರೆ. ನಿದ್ದೆಯಲ್ಲಿ ಹಾಡಿಕೊಂಡು ಹಾಡಿನಲ್ಲಿ ನಿದ್ದೆ ಮಾಡಿಕೊಂಡಿದ್ದ ನಾಯಕ ತನ್ನ ಅಣ್ಣನಿಗೆ ಹೆಣ್ಣು ನೋಡುವುದಕ್ಕೆಂದು ಅಪ್ಪ, ಅಮ್ಮ, ಅಮ್ಮ ಮುದ್ದಿನಿಂದ ತಲೆ ಬಾಚಿ ಕುಂಕುಮ ಇಡುವ ನಾಯಿಯೊಂದಿಗೆ ಸಮುದ್ರದ ದಡದಲ್ಲಿರುವ ಊರಿಗೆ ಹೋಗುತ್ತಾನೆ.

 

ಅತ್ತ ಆ ಮನೆಯಲ್ಲಿ ಸದಾ ಎಲೆ ಅಡಿಕೆ ಬಾಯಲ್ಲಿ ತುಂಬಿಕೊಂಡ, ಕಾಫಿಗಾಗಿ ಹಪಹಪಿಸುವ ಮನೆ ಯಜಮಾನ ಆತನ ಹೆಂಡತಿ, ಇಬ್ಬರು ಹೆಣ್ಣು ಮಕ್ಕಳು. ಅದರಲ್ಲಿ ನಮ್ಮ ನಾಯಕನ ಅಣ್ಣ ನೋಡಲು ಬಂದ ಹುಡುಗಿ ಒಬ್ಬಳು ಮತ್ತೊಬ್ಬಳು ತಂದೆ ತಾಯಿ ತೀರಿ ಹೋದ, ಚಿಕ್ಕಮ್ಮನ ಮಗಳಾಗಿ ಬೆಳೆದ ಹುಡುಗಿ.

 

ಮಧ್ಯಂತರ ದಾಟಿ ಅರ್ಧ ತಾಸು ಕಳೆಯುವವರೆಗೂ ಸಿನೆಮಾದಲ್ಲಿ ನಾವು ಗುರುತಿಸಬಹುದಾದದ್ದೇನೂ ನಡೆಯುವುದಿಲ್ಲ. ನಮ್ಮ ಉಳಿದ ಸಿನೆಮಾಗಳಲ್ಲಿ ಇಷ್ಟು ಹೊತ್ತಿಗಾಗಲೆ ನಾಲ್ಕಾರು ಫ್ಲ್ಯಾಶ್ ಬ್ಯಾಕುಗಳು, ಐದಾರು ಫೈಟುಗಳು ನಡೆದು, ಮೂರ್ನಾಲ್ಕು ಹೆಣಗಳು ಉರುಳಿ, ಎರಡು ಮೂರು ತಲೆಮಾರುಗಳಲ್ಲಿ ಜೀವಿಸಿದ್ದ ಒಬ್ಬನೇ ನಾಯಕನ ಡಬಲ್, ತ್ರಿಬಲ್ ರೋಲುಗಳು ಬಂದು ಹೋಗಿರುತ್ತವೆ. ಚಂದಮಾಮ ಕತೆ ಕೇಳಿ ಬೆಳೆದ ಮಂದಿಗೆ ಮುಕ್ಕಾಲು ಭಾಗ ಸಿನೆಮಾದುದ್ದಕ್ಕೂ ಕಥೆ ಕೊಂಚವೂ ಕದಲದೆ ನಿಂತಿರುವುದು, ಈಗ ಅಥವಾ ಇನ್ನೆರೆಡು ಘಳಿಗೆಯಲ್ಲಿ ಕದಲಬಹುದು ಎನ್ನುವ ಕುತೂಹಲವನ್ನು ಕಾಪಿಟ್ಟುಕೊಂಡೇ ಮುನ್ನಡೆಯುವುದು ಅಚ್ಚರಿ ಮೂಡಿಸುತ್ತದೆ. ಕಥೆಯ ಎಳೆಯೇ ಕೈಗೆ ಸಿಕ್ಕಿರುವುದಿಲ್ಲವಾದ್ದರಿಂದ ತೂರಿಕೊಂಡು ಬರುವ ಹಾಡುಗಳು ಲಹರಿಯನ್ನು ಕತ್ತರಿಸಿದ ಅಪವಾದಕ್ಕೆ ತುತ್ತಾಗುವುದಿಲ್ಲ.

 

ಸಿನೆಮಾದಲ್ಲಿ ಘಟನೆಯೊಂದು ಪಕ್ಕದಲ್ಲಿ ನಡೆದಂತೆ ತೆರೆದುಕೊಳ್ಳುತ್ತಾ ಹೋದರೂ ನಾವು ನೀವು ಕೇಳಿ ಬೆಳೆದ ಕತೆಗಳ ಧಾಟಿಯಲ್ಲಿಯೇ ಸಿನೆಮಾ ಬಗ್ಗೆ ಹೇಳುತ್ತೇನೆ ಕೇಳಿ. ಹೆಣ್ಣು ನೋಡಲಿಕ್ಕೆಂದು ಈ ಮೊದಲು ಹೇಳಿದ ಮನೆಯವರು ಈ ಮೊದಲು ಹೇಳಿದ ಮನೆಗೆ ಬಂದಿರುತ್ತಾರೆ. ಹೆಣ್ಣಿನ ಮನೆಯಲ್ಲಿ ಕೆಲಸದ ಹೆಣ್ಣಿನ ಹಿಂದೆ ಬೀಳುವ ಗಂಡಿನ ಮನೆಯವರನ್ನು ಕರೆತಂದ ಬಸ್ಸಿನ ಡ್ರೈವರು. ತನಗಿಂತ ಹೆಚ್ಚು ಓದಿದ, ನೋಡಲು ಸುಂದರವಾಗಿಯೇ ಇರುವ ತಂಗಿ ಎಲ್ಲಿ ತನ್ನ ನೋಡ ಬಂದವನಿಗೆ ಮಂಕು ಬೂದಿ ಎರಚುವಳೋ ಎಂದು ನೋಡುವ ಶಾಸ್ತ್ರಕ್ಕೆ ತಯಾರಾಗುವ ಹುಡುಗಿ. ಎಂಬತ್ತು ಹುಡುಗರ ಅಪ್ಲಿಕೇಶನ್ನುಗಳನ್ನು ರಿಜೆಕ್ಟ್ ಮಾಡಿ ಅಕ್ಕನೊಂದಿಗೆ ಜಗಳವಾಡಿ ತೆಂಗಿನ ಮರ ಏರಿ ಕೂರುವ ನಾಯಕಿ. ಮನೆಯ ವಾಸ್ತುವನ್ನೆಲ್ಲಾ ನೋಡಿ ಮನೆಯವರ ಮುಖ ನೋಡುವ ನಾಯಕನ ಸೋದರ ಮಾವ. ತಲೆ ನೋವು ನಿವಾರಣೆಗಾಗಿ ಕುತ್ತಿಗೆ ಮಟ್ಟಕ್ಕೆ ಮರಳಿನಲ್ಲಿ ಹೂತು ಕೂತ ಅನಂತ್ ನಾಗ್. ಇವಿಷ್ಟೂ ಸಿನೆಮಾದ ಪಾತ್ರಗಳು. 

 

ರಿವೀವ್ ಮುಕ್ಕಾಲು ಪಾಲು ಮುಗಿಯುತ್ತ ಬಂದರೂ ಕಥೆ ತಿಳಿಸಲೇ ಇಲ್ಲ ಅಲ್ಲವೇ? ‘ಪಂಚರಂಗಿ’ ಸ್ಟ್ರಕ್ಚರ್ ಇರುವುದೂ ಹೀಗೆಯೇ... ಹೆಣ್ಣು ನೋಡಲು ಬಂದ ಸಾಫ್ಟ್ ವೇರ್ ಗಂಡಿಗೆ ಬೇರೊಬ್ಬ ಹುಡುಗಿಯ ಮೇಲೆ ಮನಸ್ಸಿರುತ್ತದೆ. ಹೆಣ್ಣಿನ ಮನೆಯಲ್ಲಿ ಕೂತು ತಿರುಪತಿಯಲ್ಲಿದ್ದೇನೆ ಎಂದು ಆತ ಮೆಸೇಜು ಹಾಕುತ್ತಿದ್ದರೆ ಆ ಹುಡುಗಿ ಅವನ ಬೆನ್ನಟ್ಟಿ ಆತ ಇದ್ದಲ್ಲಿಗೇ ಬಂದು ಬಿಟ್ಟಿರುತ್ತಾಳೆ. ಇತ್ತ ಹುಡುಗನ ಒಪ್ಪಿಗೆಯನ್ನೂ ಕೇಳದೆ ಹುಡುಗನ ತಾಯ್ತಂದೆ, ಹುಡುಗಿಯ ತಾಯ್ತಂದೆ ಮರುದಿನವೇ ನಿಶ್ಚಿತಾರ್ಥವನ್ನೂ ಇಟ್ಟುಕೊಂಡು ಬಿಡುತ್ತಾರೆ. ಹೀಗಿರುವಾಗ ನಮ್ಮ ನಾಯಕನಿಗೆ ಅಣ್ಣ ಬೇರೊಂದು ಹುಡುಗಿಯನ್ನು ಮೆಚ್ಚಿರುವುದು ತಿಳಿಯುತ್ತದೆ. ರಾತ್ರೋರಾತ್ರಿ ಸೆಕ್ಸ್ ಸ್ಕ್ಯಾಂಡಲಿನಲ್ಲಿ ವಾಸ್ತು ಜ್ಯೋತಿಷಿ ಅರೆಸ್ಟ್ ಆಗಿರುತ್ತಾನೆ.

 

ಮೇಲ್ನೋಟಕ್ಕೆ ಪಡ್ಡೆಗಳನ್ನು ರಂಜಿಸುವ ಡೈಲಾಗುಗಳು, ಎಲ್ಲರ ಕುತೂಹಲ ಕೆರಳಿಸಿದ ಹಾಡುಗಳಿಂದ ಪಂಚರಂಗಿ ಅದ್ಭುತ ಮನರಂಜನೆಯ ಸಿನೆಮಾ ಆಗಿ ಕಂಡರೂ ಒಳಪದರಗಳಲ್ಲಿ ಇಂದಿನ ಸಮಾಜದ ಬಗೆಗೆ, ‘ಕವಲು’ ಮಾದರಿಯ ಕುಟುಂಬ ವ್ಯವಸ್ಥೆಯ ಜಿಜ್ಞಾಸೆಯ ಕುರಿತು ತೀರ ಶಾರ್ಪ್ ಆದ ಒಳ ನೋಟಗಳನ್ನು ಹೊಂದಿದೆ. ಇಲ್ಲಿ ಮೂರು ಜೋಡಿಗಳು ತಮ್ಮ ಸಂಗಾತಿಯನ್ನು ಆಯ್ದುಕೊಳ್ಳುವ, ಒಲಿಸಿಕೊಳ್ಳುವ ಕಥೆಯಿದೆ.ಅಷ್ಟು ದೂರದ ಬೆಂಗಳೂರಿನಿಂದ  ಹುಡುಗಿಯ ನೋಡಲೆಂದೇ ಬಂದ ಸಾಫ್ಟ್ ವೇರ್ ಹುಡುಗ ಆತನ ತಂದೆ ತಾಯಿ. ಬಸ್ಸಿನ ಡ್ರೈವರ್ ಹಾಗೂ ಆತನ ಕುರುಡು ತಂದೆ. ನಮ್ಮ ನಾಯಕ ನಾಯಕಿ.

 

ಒಳಗೊಂದು ಹೊರಗೊಂದು ಎಂದು ಒಬ್ಬರನ್ನೊಬ್ಬರು ಬೈದುಕೊಳ್ಳುವ ಬೀಗರಿಬ್ಬರ ಮನೆಯವರ ಸಂಸ್ಕೃತಿ, ಸಂಪ್ರದಾಯ, ಮರ್ಯಾದೆ, ವಾಸ್ತು, ಶಾಸ್ತ್ರ ಮೊದಲಾದವುಗಳನ್ನು ಗೇಲಿ ಮಾಡುವ ನಾಯಕ ದಿಗಂತ್, ಅನಂತ್ ನಾಗ್ ಒಂದೆಡೆ. ಇವರಿಬ್ಬರು ಸಮುದ್ರದಡದಲ್ಲಿ ಮನೆಯಲ್ಲಿ ನೊಣ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಕಾಫಿ ಕಪ್ ನೋಡುವ ಗಂಡಿನ, ಗ್ಯಾಸ್ ತಡೆದುಕೊಂಡು ನಿಂತ ಹುಡುಗಿಯ ತಂದೆಯ ಬಗೆಗೆ ಹಾಸ್ಯ ಮಾಡುತ್ತ ಕೂತಿರುತ್ತಾರೆ. ಲೈಫು ಇಷ್ಟೇನೇ ಇಷ್ಟೇನೇ ಎಂದು ಇಬ್ಬರೂ ಆರ್ಷೇಯ, ಪುರಾತನ, ಸ್ಟೇಟಸ್ಸು ಎಂದು ಇರುವುದನ್ನೆಲ್ಲಾ ಗೇಲಿ ಮಾಡುತ್ತಿರುತ್ತಾರೆ. ಇನ್ನೊಂದೆಡೆ ಮನೆಯ ಹೊರಗೆ ತಂತಿಯ ಮೇಲೆ ಅಂಡರ್ ವೇರ್ ಒಣಗಲು ಹಾಕುವ ಬಸ್ ಡ್ರೈವರ್ ಯಜಮಾನಿ ಓದುವ ರ್ಯಾಪಿಡೆಕ್ಸ್ ನಿಂದ ತಾನೇ ಇಂಗ್ಲೀಷ್ ಕಲಿತ ಮನೆ ಕೆಲಸದವಳಿಗೆ ಒಂದೇ ಸಾಲಲ್ಲಿ ತಾನು ಹೊರಗೆ ಒಳಗಲು ಹಾಕಿದ ಒಣ ವಸ್ತ್ರದ ಹಾಗೆಯೇ ನೇರವಾಗಿ ಮದುವೆಯಾಗುವೆಯಾ ಅನ್ನುತ್ತಾನೆ. ಆಕೆ ಒಪ್ಪಿ ಮದುವೆಯೂ ಆಗ್ತಾಳೆ.

 

ಸ್ವಂತ ದುಡಿಮೆಯಿಲ್ಲದ, ಕುರುಡು ತಂದೆಯ ಬಸ್ ಓಡಿಸಿಕೊಂಡಿದ್ದ ಮಗ ತನಗೆ ಮದುವೆ ಮಾಡೆಂದು ಅಪ್ಪನಿಗೆ ಗದರುತ್ತಾನೆ. ಜಾಡಿಸಿ ಒದ್ದು ಹೃದಯ ಒಡೆದು ಹಾಕ್ತೀನಿ ಅಂತ ಅಪ್ಪ ಅಬ್ಬರಿಸುತ್ತಾನೆ. ಆದರೆ ಮರುದಿನ ಅವರಿಬ್ಬರೂ ಯಾರಿಗೂ ತಿಳಿಯದೆ ಮದುವೆಯಾಗಿ ಬಂದಾಗ ಅಪ್ಪ ತಣ್ಣಗೆ ಹರಸುತ್ತಾನೆ. ಈ ತಂದೆ ಮಕ್ಕಳ ವರ್ತನೆಯು ಹಿನ್ನೆಲೆಯಲ್ಲಿದ್ದರೆ ಸ್ಕ್ಯಾಂಡಲಿನಲ್ಲಿ ಸಿಕ್ಕಿಬಿದ್ದ ತಮ್ಮನನ್ನು ನೆನೆದು ಅಧಿಕ ಪ್ರಸಂಗಿ ನಾಯಕನ ಕೆನ್ನೆಗೆ ಬಾರಿಸುವ ತಾಯಿ, ಮಗನು ಬೇರಾರನ್ನೋ ಇಷ್ಟ ಪಟ್ಟ ಸಂಗತಿ ತಿಳಿದು ಆತನ ಕೆನ್ನೆಗೆ ಬಾರಿಸುವ ತಂದೆ ಇವೆಲ್ಲ ಮುನ್ನೆಲೆಯಲ್ಲಿ ಜರುಗುತ್ತವೆ.

 

‘ಯಾರೂ ಅಷ್ಟು ಸುಲಭಕ್ಕೆ ನನಗೆ ಇಷ್ಟವಾಗಲ್ಲ. ನೀನು ಹೇಗೋ ಇಷ್ಟವಾಗಿದ್ದೀಯ... ಒಪ್ಪಿಕೊಂಡು ಬಿಡು. ಬೇರೊಬ್ಬನನ್ನು ಶುರುವಿನಿಂದ ಪ್ರೀತಿಸೋದು ಮಹಾ ಬೋರು... ಒಂದ್ಸಲ ಈಗ ನೀನು ಒಪ್ಪಲಿಲ್ಲ ಅಂದರೆ ಮತ್ತೆ ನೀನು ಬಂದರೂ ಚಪ್ಪಲಿಯಲ್ಲಿ ಒದ್ದು ಓಡಿಸುತ್ತೇನೆ’ ಎನ್ನುವ ನಾಯಕಿ ಸಿನೆಮಾಗಳಲ್ಲಿ ಪ್ರೀತಿ ಎಂಬ ಬಳಸಿ ಸವೆದ ವಸ್ತುವಿಗೆ ಹೊಸತೇ ಹೊಳಪು ನೀಡಿ ಬಿಡುತ್ತಾಳೆ. ಪ್ರೀತ್ಸೆ ಪ್ರೀತ್ಸೆ ಎಂದು ಅರಚುತ್ತ ಓಡುವ ರೋಮಿಯೋಗಳಿಗೆ ಟೇಬಲ್ ತಿರುಗಿದೆ ಎಂದು ಈ ಸಿನೆಮಾ ಅರಿವು ಮಾಡಿಕೊಡುತ್ತದೆ.

 

ಎಂದಿನಂತೆ ಯೋಗರಾಜ್ ಭಟ್ಟರು ಉತ್ತಮ ಸಂಗೀತ, ಅತ್ಯುತ್ತಮ ಛಾಯಾಗ್ರಹಣ, ಮನಮೋಹಕ ಲೊಕೇಶನ್ನು, ಗುಂಗು ಹಿಡಿಸುವ ಗೀತ ಸಾಹಿತ್ಯ, ಮನರಂಜಿಸುವ ಸಂಭಾಷಣೆಗಳ, ಲವಲವಿಕೆಯ ಪೋಷಕ ಪಾತ್ರಗಳ ಪ್ಯಾಕೇಜನ್ನು ಪಂಚರಂಗಿಯಲ್ಲೂ ನೀಡಿದ್ದಾರೆ. ಕಾಯ್ಕಿಣಿ ದಿಗಂತ್ ಸಂಭಾಷಣೆಯ ಸನ್ನಿವೇಶ, ನಾಯಕಿ ಆಕೆಯ ಅಕ್ಕ ಜಗಳ ಮಾಡುವ ಸನ್ನಿವೇಶ ಹೊರತು ಪಡಿಸಿದರೆ ಉಳಿದಂತೆ ಎಲ್ಲೆಡೆ ಭಟ್ಟರ ಪಂಚಿಂಗ್ ಡೈಲಾಗುಗಳನ್ನು ಅದೇ ಫೋರ್ಸಿನಲ್ಲಿ ಎಲ್ಲಾ ನಟರು ಡೆಲಿವರ್ ಮಾಡಿದ್ದಾರೆ. ಎಂ.ಎ ಫಿಲಾಸಫಿ ಹುಡುಗನ, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಹುಡುಗಿಯ ಬಾಯಲ್ಲಿ ಭಟ್ಟರು ಸಮಕಾಲೀನ ಬದುಕಿಗೆ ಭಾಷ್ಯವನ್ನೇ ಬರೆಸಿದಿದ್ದಾರೆ...

 

ಪಾಂ ಪಾಂ ... ಹಾರ್ನ್ ಒಕೆ,.. ಸೈಡ್ ಪ್ಲೀಸ್...   

 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು