ದೃಶ್ಯಕ್ಕೊಂದು ನುಡಿಗಟ್ಟು

ಪಂಚರಂಗಿ ಪಾಂ ಪಾಂ..

pancharangi kannada movie review, pancharangi film reviewಮನಸಾರೆ ಚಿತ್ರದಲ್ಲಿ ಹಿರೋಯಿನ್ ಕೈ ಹಿಡಿದುಕೊಂಡು, ’ಹುಚ್ಚರು ನಾವಲ್ಲ ಈ ಸಮಾಜ’ ಅಂತ ಸ್ಟೇಟ್ಮೆಂಟ್ ಕೊಟ್ಟು ಹೋದ ಮನೋಹರ ಏನಾದ? ಪಂಚರಂಗಿ ಫಿಲ್ಮ್ನಲ್ಲಿ ಮತ್ತೆ ಬಂದ! ಈತನ ಬಾಯ್ತುಂಬ ವೇದಾಂತ, ಹೆಂಡತಿ, ಮಕ್ಕಳು, ಸಿಂಬಳ, ಸಂಬಳ, ಲೈಫು, ಲವ್ವು ಉಹು ಅವನ ಬಾಯಲ್ಲಿ ಮಾತಾಗದ ವಿಷಯಗಳೇ ಇಲ್ಲ! ಎಲ್ಲರ ಲೈಫು ಇಷ್ಟೇನೆ, ಇದೆಲ್ಲ ಹೇಳ್ತಿರೋ ನಾನೇನು ಅದಕ್ಕೆ ಹೊರತಲ್ಲಪ್ಪ ನನ್ನ ಬದುಕು ಕೂಡ ಅಷ್ಟೇನೆ ಅಂತ ಹೇಳ್ತಾ ತನ್ನ ಬಾಲ ತಾನೇ ನುಂಗೋ ಹಾವಿನಂತವನು. ಅವನ ಜೊತೆ ಇನ್ನೂ ಹತ್ತು ಇತರೆ ಪಾತ್ರಗಳು ಅದರಲ್ಲಿ ಹೆಚ್ಚಿನವು ಹೀರೋನ ಸಣ್ಣ ಸಣ್ಣ ತುಂಡುಗಳಂತಿರುವವು.

ಒಂದು ಸಿನಿಮಾ, ನಿರ್ದೇಶಕನ ಕಲಾತ್ಮಕತೆಯ ಅಭಿವ್ಯಕ್ತಿ ಮಾಧ್ಯಮ, ಇಡೀ ಸಿನಿಮಾದಲ್ಲಿ ಇರುವವನು ನಿರ್ದೇಶಕನೇ. ಕತೆ, ನಿರೂಪಣೆ, ಸಂಭಾಷಣೆ ಇದರಲ್ಲೆಲ್ಲ ಅಭಿವ್ಯಕ್ತವಾಗುವವನು ನಿರ್ದೇಶಕನೇ ಆದರೂ, ಸಿನಿಮಾ ಎನ್ನುವುದು ನಿರ್ದೇಶಕನ ಡಿಕ್ಟೇಷನ್ ಆಗಿಬಿಡಬಾರದು. ಯೋಗರಾಜ್ ಭಟ್ಟರ ಸಿನಿಮಾಗಳಲ್ಲಿ ಕಂಡುಬರುವ ದೋಷ ಎನ್ನಬಹುದಾದ ದೋಷ ಇದು. ಇಲ್ಲಿ ಯೋಗರಾಜಭಟ್ಟರು ಮತ್ತು ಅವರಷ್ಟೇ ಡಿಕ್ಟೇಟರ್ ಆಗಿ ಬಿಡುತ್ತಾರೆ, ಪಾತ್ರಗಳು ಹಲವಾರು ಇದ್ದರೂ ಎಲ್ಲ ಪಾತ್ರಗಳ ಮೂಲಕ ಮಾತನಾಡುವುದು ಯೋಗರಾಜರೇ! ಪಾತ್ರಗಳು ಬೆಳೆಯಲು, ಆಳಕ್ಕಿಳಿಯಲು, ಅಭಿವ್ಯಕ್ತವಾಗಲು ಅವರು ಬಿಡುವುದೇ ಇಲ್ಲ. ’ಮಾತಾಡದೇ ಜನ ಸಿನಿಮಾ ಅರ್ಥ ಮಾಡಿಕೊಳ್ಳಲ್ಲ ಕಣ್ರೀ!’ ಅಂತ ಭಟ್ಟರು ಅಂದುಕೊಂಡಹಾಗಿದೆ. 

ಪಂಚರಂಗಿಯೂ ಇದಕ್ಕೆ ಹೊರತಲ್ಲ, ಹೀಗಾಗಿ ಇಡೀ ಚಿತ್ರದಲ್ಲಿ ಯಾವ ಪಾತ್ರದ ಮಾತಿಗೂ ಮೋಸ ಮಾಡಿಲ್ಲ, ತೆರೆಯ ಮೇಲೆ ತೋರಿಸುತ್ತಿರಲಿ ಬಿಡಲಿ ಪಾತ್ರಗಳು (ಭಟ್ಟರು) ಮಾತಾಡುತ್ತಲೇ ಇರುತ್ತವೆ. ಅದೆಲ್ಲ ಏನೇ ಇದ್ದರೂ ಸಿನಿಮಾ ಹೊಸ ತರದ ಕೆಲವು ಮಾಸ್ ಅಪೀಲಿಂಗ್ ಗಿಮಿಕ್ ಗಳನ್ನು ಒಳಗೊಂಡಿರುವುದೂ ಸುಳ್ಳಲ್ಲ. ಶುರುವಿನಲ್ಲಿ ಸ್ಪೀಡ್ ಕಡಿಮೆ ಆಯಿತೆನಿಸಿದರೂ, ಚುರುಕು ಸಂಭಾಷಣೆ, ನಿರೂಪಣೆಯಲ್ಲಿನ ಹೊಸತನ, ಹೀಗೆ ಕತೆ ಕಂಡುಕೊಳ್ಳುವಷ್ಟರಲ್ಲಿ ಮಧ್ಯಂತರ ಬಂದುಬಿಡುತ್ತದೆ. ಕತೆಯಲ್ಲದ ಕತೆ ಮುಂದುವರೆಯುತ್ತಿದ್ದಂತೆ ಒಂದೆರೆಡು ಸಣ್ಣ ಸಪ್ರೈಸಸ್ ಕೊಟ್ಟು ಡಿಫರೆಂಟ್ ಅನಿಸುವಂತಹ ಕ್ಲೈಮಾಕ್ಸ್ ನಲ್ಲಿ ಮುಕ್ತಾಯವಾಗುತ್ತದೆ. ಎರಡೂವರೆ ಗಂಟೆಗಳ ಕಾಲ ನಮ್ಮನ್ನು ಹಿಡಿದು ಕೂರಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗುತ್ತದೆ.

ನಮ್ಮ ಕನ್ನಡ ಫಿಲ್ಮ್ ಗಳ ಹಳೇ ಸಂಪ್ರದಾಯವಾದ ಮಚ್ಚು, ಲಾಂಗು, ಐಟಮ್ ಸಾಂಗು, ಹೀರೋವಿನ ಅಮ್ಮ, ಹೀರೋಯಿನ್ ಹಿಂದೆ ಬಿದ್ದಿರೋ ವಿಲನ್ ಇವೆಲ್ಲ ಇಂಗ್ರಿಡಿಯಂಟ್ಸ್ ನ ಬದಿಗಿಟ್ಟ ಸಿನಿಮಾ ಒಂದನ್ನ ಹೊಸ ತರಹ ಫ್ಲೇವರ್ ನಲ್ಲಿ ಅಚ್ಚುಕಟ್ಟಾಗಿ ಮಾಡಿರುವುದು ಕನ್ನಡಕ್ಕೆ ಹೊಸದು. ಗಡ್ಡ ಬಿಟ್ಕಂಡು ಪಕ್ಕದ ಬೀದಿಯವನೇನೋ ಅನ್ಸೋ ಅಂತಹ ಹೀರೋ ದಿಗಂತ್, ಸಿನಿಮಾ ಇಡೀ ಇದೊಂದು ಬಿಟ್ರೆ ನನಗೆ ಬೇರೆ ಎಕ್ಸ್ಪ್ರೆಷನ್ ಬರೋಲ್ಲ ಅನ್ನೋ ಹಾಗೆ ನಟಿಸಿರೋ ನಿಧಿ, ಹೊಸತನ ತುಂಬಿರೋ ಹೀರೋಯಿನ್ ಳ ಅಕ್ಕನ ಪಾತ್ರ. ಯೋಗರಾಜ್ ಭಟ್ಟರ ಸಿನಿಮಾದಲ್ಲಿ ಯಾವತ್ತೂ ಇರುವ ಇತರ ಪೋಷಕ ಪಾತ್ರಗಳು, ಹೀರೋಗೆ ಅಚಾನಕ್ಕಾಗಿ ಸಿಗುವ ಗುರುವಿನ ಪಾತ್ರದಲ್ಲಿ ಅನಂತ್ ನಾಗ್ ಎಲ್ಲರೂ ರಂಜಿಸುತ್ತಾರೆ ಆದರೆ ಯೋಗರಾಜ್ ಭಟ್ಟರದೇ ಶೈಲಿಯಲ್ಲಿ. ಸಿನಿಮಾ ಹೇಳಬಾರದ್ದೇನೋ ಹೇಳಬೇಕು, ಉದ್ದಾರ ಮಾಡಬೇಕು ಎಂದೆಲ್ಲ ನಾನು ಸಿನಿಮಾ ಮಾಡುವುದೇ ಇಲ್ಲ. ಸಿನಿಮಾ ಒಂದು ಮನರಂಜನೆಯ ಮಾಧ್ಯಮ ಮತ್ತು ಮನರಂಜನೆಯ ಮಾಧ್ಯಮವಷ್ಟೇ ಎಂದು ಯೋಗರಾಜ್ ಭಟ್ಟರು ಹೇಳುತ್ತಿರುತ್ತಾರೆ. ಹೀಗಾಗಿ ಅವರೇ ಹೇಳುವಂತೆ ಮನರಂಜನೆಯಷ್ಟೇ ಅವರ ಸಿನಿಮಾದಿಂದ ನಿರೀಕ್ಷಿಸಬಹುದಾದ ಸರಕು. ಅಷ್ಟರ ಮಟ್ಟಿಗೆ ಮನರಂಜನೆಯನ್ನು ಒದಗಿಸುವಲ್ಲಿ ಸಿನಿಮಾ ಸೋತಿಲ್ಲ ಎನ್ನಬಹುದು. ಬಿಸಿ ಬಿಸಿ ಮಸಾಲೆ ದೋಸೆ ಮಾಡಿ ಮಾರುತ್ತಿರುವಾಗ ಅಲ್ಲೇ ತಿಂದು ಅದರ ರುಚಿಯನ್ನು ಅನುಭವಿಸಬೇಕೇ ಹೊರತು, ಮನೆಗೆ ತೆಗೆದುಕೊಂಡು ಹೋಗಿ ದೋಸೆ ತಣ್ಣಗಾಯ್ತೆಂದು ದೂರಬಾರದು! ಪಂಚರಂಗಿ ಸಿನಿಮಾ ಕೂಡ ಹಾಗೆ, ನಿಮಗೆ ಮುದನೀಡುತ್ತದೆ ಮತ್ತು ಅದರ ಹಿತವನ್ನು ಅಲ್ಲೇ ಮರೆಸುತ್ತದೆ. ಇದಕ್ಕೆ ನೀವು ಯಾರನ್ನೂ ದೂರಲಾರಿರಿ ಏಕೆಂದರೆ ಸಿನಿಮಾ ಭಾಷೆಯಲ್ಲಿ ಹೇಳುವುದಾದರೆ ’ಈ ಸಿನಿಮಾ, ಕೊಟ್ಟ ಹಣಕ್ಕೆ ಮೋಸ ಮಾಡುವುದಿಲ್ಲ!’

Hema Pawar

3rd Sep 2010


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು