
ಸಿನಿಮಾ ಓದುವುದು ಹೇಗೆ? ದೃಶ್ಯ ಮಾಧ್ಯಮವಾದ ಸಿನಿಮಾವನ್ನು ನೋಡುವುದರ ಬದಲು ಓದುವುದು ಎಂಬ ಶೀರ್ಷಿಕೆ ವಿಚಿತ್ರ/ವಿಶಿಷ್ಟ ಎನಿಸಿದ್ದು ಸಹಜ. ಬಹುಶಃ ಕಾವ್ಯಮಯವಾಗಿ ಹೇಳುವಾಗ ಕಣ್ಣಿನಲ್ಲೇ ಅಳೆದ, ಓದಿದ ಎನ್ನುವಂತೆ ಕಣ್ಣಿಗೆ ಕಂಡದ್ದನ್ನು ತಿಳಿಸುವುದಕ್ಕೆ ಹೀಗೆ ಕರೆದಿರಬಹುದು ಎಂದೆನಿಸಿದ್ದು ಸಂವಾದ ಡಾಟ್ ಕಾಂನ ಇತ್ತೀಚಿನ ಕಾರ್ಯಕ್ರಮಕ್ಕೆ ಹೋಗುವ ಮುಂಚೆ.
ಕಾರ್ಯಕ್ರಮಕ್ಕೆ ಅಪರ ವೇಳೆಯಲ್ಲೇ ಎಂಟ್ರಿ ಕೊಟ್ರೂ ಊಟೋಪಚಾರಕ್ಕೆನೂ ತೊಂದರೆಯಿರಲಿಲ್ಲ. ಹಾಗೆ ನೋಡಿದರೆ ಎರಡೂವರೆ ದಿನದಲ್ಲಿ ಏನನ್ನೋ ಕಲಿಯುವ ಹಸಿವು ಇಟ್ಟುಕೊಂಡು ಬಂದಿದ್ದ ಶಿಬಿರಾರ್ಥಿಗಳ ಹಸಿವು ಇಂಗಿಸುವಲ್ಲಿ ಸಂವಾದ ಡಾಟ್ ಕಾಂನ ಪ್ರಯತ್ನ ಒಂದಷ್ಟು ಫಲ ಕೊಟ್ಟಿದೆ ಎಂದೇ ಹೇಳಬಹುದು.
ಕಂಡದ್ದು, ಕೇಳಿದ್ದು, ಅನುಭವಿಸಿದ್ದು ಇನ್ನೊಬ್ಬರಿಗೆ ಹಂಚುವಂತಿದ್ದರೆ, ಅದರ ದಾಖಲಿಕರಣವಾದರೆ ಒಳಿತು ಎಂಬ ನನ್ನ ಸ್ನೇಹಿತರ ಮಾತಿಗೆ ಮನ್ನಣೆಕೊಟ್ಟು ನಾಲ್ಕಾರು ಸಾಲುಗಳನ್ನು ಬರೆಯುತ್ತಿದ್ದೇನೆ.
ಆಗಲೇ ಮೊಗ್ಗಿನ ಮನಸ್ಸು ಚಿತ್ರ ನೋಡಿ ಹುಮ್ಮಸ್ಸಿನಿಂದ ಶಿಬಿರಾರ್ಥಿಗಳು ತಮ್ಮ ವಾದ, ಪ್ರತಿವಾದ ಅನಿಸಿಕೆಗಳನ್ನು ಮಂಡಿಸತೊಡಗಿದ್ದರು, ರಾತ್ರಿ ಹನ್ನೆರಡು ದಾಟಿದ್ದರೂ ಚೆಂದಿರನ ಬೆಳಗಿನಲ್ಲಿ ಮನಸ್ಸಿನ ಮೊಗ್ಗುಗಳನ್ನು ಅರಳಿಸುವ ಪ್ರಯತ್ನ
ಸಾಗಿತ್ತು. ಆದರೆ, ಹೆಚ್ಚಿನ ಪ್ರತಿಕ್ರಿಯೆಗಳು ಚಿತ್ರದ ಕಥೆ, ಪಾತ್ರಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು, ಚಲನ+ಚಿತ್ರದ ಫ್ರೇಮ್ ಬೈ ಫ್ರೇಮ್ ಡಿಸೆಕ್ಷನ್ ಯಾರೂ ಮಾಡಿದ ಹಾಗೇ ಕಾಣಿಸಲಿಲ್ಲ. ಸ್ಸಾರಿ ಕೇಳಿಸಲಿಲ್ಲ. ಆದರೆ, ಮಾತಾಡಿದವರಲ್ಲಿ ಅಭಿಪ್ರಾಯ ಮಂಡನೆಯ ಸ್ಪಷ್ಟತೆ ಇತ್ತು.
ಒಂದು ದೃಶ್ಯದಲ್ಲಿ ನಾಯಕ, ನಾಯಕಿ ಯಾಕೆ ಅದೇ ಬಣ್ಣದ ದಿರಿಸು ತೊಡಬೇಕು. ಕಲರ್ ಕಾನ್ ಟೆಸ್ಟ್ ಹೇಗಿರಬೇಕು. ಕ್ಯಾಮೆರಾ ಕೋನ ಯಾಕೆ ಒಂದು ಕಡೆ ಆರಂಭವಾಗಿ ಇನ್ನೊಂದೆಡೆ ನಿಲ್ಲಬೇಕು. ಶಾಟ್ ಇಂದ ಶಾಟ್ ಗೆ ಟ್ರಾನ್ಸಿಷನ್ ಹೇಗೆ ಆಗಿದೆ. ಇತ್ಯಾದಿ ಸೂಕ್ಷ್ಮ ವಿಷಯಗಳ ಮೇಲೆ ಕೂಡಾ ಬೆಳಕು ಚೆಲ್ಲಿದರೆ ಇನ್ನಷ್ಟು ಪರಿಪೂರ್ಣವಾಗಿ ಸಿನಿಮಾವನ್ನು ಓದಬಹುದು ಎಂದರು ಶೇಷಾದ್ರಿ.
ಮರುದಿನ ಸಂಪನ್ಮೂಲ ವ್ಯಕ್ತಿಯಾಗಿದ್ದ ನಿರ್ದೇಶಕ ಶಶಾಂಕ್ ತಮ್ಮ ಸಿನಿ ಜೀವನದ ಪಯಣ, ಕಷ್ಟ ನಷ್ಟ, ಹಸಿವು, ನಿದ್ರೆ, ಬಾಯಾರಿಕೆ, ಪ್ರೀತಿ, ಇಸ್ತ್ರೀ ಬಟ್ಟೆ ವ್ಯಾಮೋಹ, ಪ್ಯಾಷನ್, ಓದು, ಆಯ್ಕೆಯಿಂದ ಹಿಡಿದು ಈಗಿನ ತಕ್ಕಮಟ್ಟಿಗೆ ಯಶಸ್ವಿ ನಿರ್ದೇಶಕನ ಹೊಣೆಗಾರಿಕೆ ಹೊತ್ತಿರುವ ಬಗ್ಗೆ ಸ್ಥೂಲವಾಗಿ ಸೂಕ್ಷ್ಮವಾಗಿ ವಿಷದಪಡಿಸಿದರು. ಶಿಬಿರಾಥಿಗಳಲ್ಲಿ ಒಬೊಬ್ಬರಾಗಿ ತಮ್ಮ ಮನದಲ್ಲಿ ಮೂಡಿದ್ದ ಅಸ್ಪಷ್ಟ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರದ ನಿರೀಕ್ಷೆ ಇಟ್ಟುಕೊಂಡು ಉತ್ಸಾಹದಿಂದ ಪ್ರಶ್ನೆಗಳ ಸುರಿಮಳೆಗೈದರು. ಹೊರಗೆ ಬಿಸಿಲೇರತೊಡಗಿದರೂ ನಾವಿದ್ದ ಕುಟೀರ ಶಶಾಂಕ್ ಅವರ ನಗು ಮೊಗದಿಂದ ತಂಪಾಗಿತ್ತು. ಆದರೆ, ಅವರು ಕೊಟ್ಟ ಉತ್ತರಗಳು ಉತ್ತರ ಬಯಸಿದವರಿಗೆ ಪೂರ್ಣಚಂದ್ರ ದರ್ಶನವನ್ನೇನೂ ಮಾಡಿಸಲಿಲ್ಲ. ಮತ್ತದೇ ಅಸ್ಪಷ್ಟತೆ, ಗೊಣಗಾಟ ಮುಂದುವರೆಯಿತು.
ಅಷ್ಟರಲ್ಲಿ ಮಂಗಳೂರಿನ ಮಾಣಿಯೊಬ್ಬ ಎಂದು ನಿಂತು ಎಲ್ಲರ ಮನದೊಳಗಿನ ಇಂಗಿತ ಅರಿತಂತೆ ಪರೋಕ್ಷವಾಗಿ ’ಸಾರ್ ನಿಮ್ಮ ಸಹಾಯಕನಾಗಬಹುದೇ..’ ಎಂಬರ್ಥದಲ್ಲಿ ಪ್ರಶ್ನಿಸಿಯೇ ಬಿಟ್ಟ. ಇದಕ್ಕಾದರೂ ಸರಿಯುತ್ತರ ನೀಡುತ್ತಾರೆ ಎಂಬ ನಿರೀಕ್ಷೆಯಿತ್ತಾದರೂ ದಾರಿ ತೋರಬಲ್ಲೆ ಆದರೆ ನನ್ನ ಹೆಸರು ಬೇಡ ಎಂಬ ರಕ್ಷಣಾತ್ಮಕ ಉತ್ತರ ಹೊರಬಂತು. ಅಪಮಾನ, ಅನುಮಾನ, ನಾಚಿಕೆ, ಅಂಜಿಕೆ ಎಲ್ಲವನ್ನು ಮರೆತು ಸಿನಿಮಾ ಜಗತ್ತಿಗೆ ಕಾಲಿಡಿ, ಮೊದಲಿಗೆ ಏನಾದರೂ ಕಲಿತು ನಂತರ ಮುಂದುವರೆಯಿರಿ ಎಂಬ ಉತ್ತರ ಸಿಕ್ಕಿತು.
ಚಿತ್ರಕಥೆಗೂ ಕಾದಂಬರಿಗೂ ವ್ಯತ್ಯಾಸ, ಸ್ಕ್ರೀನ್ ಪ್ಲೇಗೂ ಸ್ಕ್ರೀಪ್ಟ್ ಗೂ ವ್ಯತ್ಯಾಸದ ಬಗ್ಗೆ ಗಿರಿಧರ್(ಪ್ರಬುದ್ಧಮಾನಕ್ಕೆ ಬರುತ್ತಿರುವ ಯುವ ನಿರ್ದೇಶಕ), ಪುಟ್ಟಸ್ವಾಮಿ(ಸಿನಿಮಾಯಾನ ಪುಸ್ತಕದ ಲೇಖಕ) ಅವರ ಬಾಹ್ಯ ಬೆಂಬಲದಿಂದ ಶಶಾಂಕ್ ಸಮರ್ಥವಾಗಿ ಮಂಡಿಸಿದರು. ತಮ್ಮ ಮೇಲೆ ಯಾವುದೇ ಹಳೆ ನಿರ್ದೇಶಕರ ಪ್ರಭಾವವಿಲ್ಲ ಎಂದ ಉಸಿರಿನಲ್ಲೇ ನಾನು ತುಂಬಾ ಭಾವುಕ ಜೀವಿ ಹಾಗಾಗಿ ನನ್ನ ಮೂವಿಗಳಲಿ ಎಮೋಷನಲ್ ಗೆ ಅದ್ಯತೆ ಹೆಚ್ಚು ಎಂಬ ಓಪನ್ ಸಿಕ್ರೇಟ್ ತೆರೆದಿಟ್ಟರು ಶಶಾಂಕ್.
ಚಲನಚಿತ್ರ ಎಂಬುದು ನಿರ್ದೇಶಕರ ಮಾಧ್ಯಮ ಎಂದು ಸಾರಿದರು. ಚಿತ್ರಕ್ಕೆ ಒಳ್ಳೆ ಸ್ಕ್ರಿಪ್ಟ್ ಇದ್ದು, ಅದನ್ನು ಅಳವಡಿಸಬಲ್ಲ ಕ್ಯಾಮೆರಾಮೆನ್ ಜೊತೆಗಿದ್ದು ಒಬ್ಬ ಉತ್ತಮ ಕಲಾವಿದ ಇದ್ದರೆ ಸಾಕಲ್ಲವೇ ನಿರ್ದೇಶಕನಿಗೇನು ಕೆಲ್ಸ. ಹೆಚ್ಚುವರಿ ಅಥವಾ ಚಿತ್ರೀಕರಣದ ನ್ಯೂನತೆಗಳನ್ನು ಒಳ್ಳೆ ಎಡಿಟರ್ ಸರಿಪಡಿಸಬಹುದಲ್ಲಾ ಎಂಬ ಪ್ರಶ್ನೆಗೆ ಉತ್ತರ ನಕಾರಾತ್ಮಕವೇ ಇತ್ತು. ನಿರ್ದೇಶಕನೇ ಬೇಕು ಎಲ್ಲದ್ದಕ್ಕೂ ಎಂಬತ್ತಿತ್ತು. ಇರಲಿ, ಸ್ಕ್ರಿಪ್ಟ್ ರೈಟರ್ ಗೆ ಬಡ್ತಿ ನೀಡಿ ನಿರ್ದೇಶಕನನ್ನಾಗಿಸಿದರೆ ಒಳಿತು ಎಂದು ಸುಮ್ಮನಾದೆ.
ಸಂಜೆ ಮುಂಗಾರುಮಳೆ ಚಿತ್ರ ಪ್ರದರ್ಶನವಿತ್ತು, ಮುಂಗಾರು ಮಳೆಯ ಮಧ್ಯೆ ಮುಂಗಾರಿನ ಮಿಂಚಿನಂತೆ ಬಂದು ಸಂಚಲನ ಮೂಡಿಸಿದರು ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್. ಡೈರೆಕ್ಟರ್ ಸ್ಪೆಷಲ್
ಪುಸ್ತಕದೊಡನೆ ಬಂದು ಎಲ್ಲರ ಮಸ್ತಕಕ್ಕೆ ಒಂದಿಷ್ಟು ಮನರಂಜನೆ ಒದಗಿಸಿದ್ದು, ಪುಸ್ತಕ ವಿತರಿಸಿದ್ದು, ಫೋಟೊ ಸೆಷನ್ ಮಾಡಿದ್ದು ಬಿಟ್ಟರೆ ಹೆಚ್ಚಿನದ್ದೇನು ಆಗಲಿಲ್ಲ. ಅಲ್ಲದೆ, ಗುರುಗೆ ಇದ್ದ ಕಾಲಾವಕಾಶದಲ್ಲಿ ಹೆಚ್ಚಿನದ್ದನ್ನು ನೀರೀಕ್ಷಿಸಲೂ ಸಾಧ್ಯವಿರಲಿಲ್ಲ. ಮತ್ತೊಮ್ಮೆ ಎಲ್ಲರಲ್ಲೂ ಭೇಟಿ ಮಾಡುವ ಭರವಸೆ ನೀಡು ಮಾಯವಾದರು.
ಮರುದಿನ ಮುಂಗಾರುಮಳೆ ಮಂಥನ ಚಿಂತನಾ ಕ್ರಿಯೆ ಶುರುವಾಯ್ತು. ಸ್ವಲ್ಪಮಟ್ಟಿನ ಪಕ್ವವಾದ ಚಿಂತನೆಗಳು ಶಿಬಿರಾರ್ಥಿಗಳೆಡೆಯಿಂದ ಮೂಡಿಬಂದವು. ‘ಮುಂಗಾರುಮಳೆ’ಯನ್ನು ವಿವಿಧ ಕೋನದಲ್ಲಿ ನೋಡಿ ಅಳೆದು ಸುರಿದು ಮಾತಿಗಿಳಿದ ಶಿಬಿರಾರ್ಥಿಗಳನ್ನು ನೋಡಿದ್ದರೆ ಬಹುಶಃ ಭಟ್ಟರು ಬೆಚ್ಚಿಬೀಳುತ್ತಿದ್ದರು. ಸಮಗ್ರ ದೃಷ್ಟಿಕೋನವನ್ನು ಒಟ್ಟಾರೆಯಾಗಿ ಉಣಬಡಿಸಲಾಯಿತು. ಪ್ರಾಯಶಃ ಮುಂಗಾರುಮಳೆ ಬಗ್ಗೆ ಪಿಎಚ್‌ಡಿ ಮಾಡುತ್ತಿರುವವರಿಗೆ ಆಕರವಾಗಬಲ್ಲ ಎಲ್ಲಾ ವಿಷಯಗಳು ಇದ್ದವು.
ಫ್ರೆಂಚ್ ವಿಮರ್ಶಕ ಡೇವಿಡ್ ಬಾಂಡ್ ಅವರನ್ನು ಮೊದಲೆರಡು ದಿನ ಮೌನವ್ರತಕ್ಕೆ ದೂಡಿದ್ದೇಕೆ ತಿಳಿಯಲಿಲ್ಲ. ಮುಂಗಾರುಮಳೆ ಬಗ್ಗೆ ಅವರ ವ್ಯಾಖ್ಯೆ ದಾಖಲೆಗೆ ಅರ್ಹ. ಆದರೆ, ಕೆಲವರ ಸ್ಮೃತಿಪಟಲದಲ್ಲಿ ಮಾತ್ರ ಉಳಿದು ಹಲವರನ್ನು ಮುಟ್ಟದ್ದಂತಾಗಿದ್ದು ಲೋಪಗಳಲ್ಲೊಂದು. ಮತ್ತೆ ಕೆಲವರಿಗೆ ಬಾಂಡ್ ಹೇಳಿದ ರೆವಲ್ಯೂಷನ್, ದೇವದಾಸ್ ಪರಂಪರೆ ಆಚೆಗೆ ಏನು ಆರ್ಥವಾಗಲಿಲ್ಲ. ಬಟ್ ಬಾಂಡ್ ಇಸ್ ಬಾಂಡ್.
ಉಪಸಂಹಾರ: ಬೆಂಗಳೂರಿನಿಂದ ದೂರದ ಊರಿನಲ್ಲಿ ಆಯೋಜಿಸಿದ್ದು ಪ್ಲಸ್ ಪಾಯಿಂಟ್. ವೇದಿಕೆ ನಿರ್ಮಾಣ ವಿನ್ಯಾಸ ಸಾಧಾರಣ. ಅನ್ನಿಸಿತು. ಊಟೋಪಚಾರ , ಮಲಗುವ ವ್ಯವಸ್ಥೆ ಬಗ್ಗೆ ಎರಡು ಮಾತಿಲ್ಲ. ಕೈಕೊಟ್ಟ ಕರೆಂಟ್ ಬಗ್ಗೆ ಸರ್ಕಾರವೇ ತಲೆ ಮೇಲೆ ಕೈಹೊತ್ತು ಕೂತಿರುವಾಗ ಆಯೋಜಕರನ್ನು ದೂರುವಂತಿಲ್ಲ. ದುಬಾರಿಯಾದರೂ ಜನರೇಟರ್ ವ್ಯವಸ್ಥೆಯನ್ನು ಹೊಂದಿಸಿದ್ದು ಸಾರ್ಥಕ. ಹಸಿರು ಪರಿಸರ, ಆಗಾಗ ಸುರಿವ ಮಳೆ, ತೋಟದ ಮಾಲೀಕರ ನಗೆ ಮೊಗದ ಸ್ವಾಗತ, ಹೆಚ್ಚು ನಿರ್ಬಂಧಗಳಿರದ, ಬಹುಶಃ ಆದಷ್ಟು ಕನ್ನಡದಲ್ಲೇ ಮಾತಾಡುವ ತಿಳಿಯುವ ಅವಕಾಶ. ಎಲ್ಲಾ ಸ್ತರದ ಹಿರಿಯ ಕಿರಿಯರೆನ್ನದೆ ಏನಾದರೂ ಕಲಿಯಬೇಕೆಂಬ ಹಂಬಲ ಎಲ್ಲರಲ್ಲೂ ವ್ಯಕ್ತವಾಗಿದ್ದು ಸಂತಸದ ವಿಷಯ.
ಆದರೆ, ಪ್ರಮಾಣಪತ್ರ ಪಡೆದು ಊರಿನತ್ತ ಪಯಣ ಬೆಳೆಸುವ ಸಮಯ ಬಂದಾಗಲೂ ಶಿಬಿರಕ್ಕೆ ಬಂದು ಕಲಿತ್ತಿದ್ದೇನು? ಗ್ರಹಿಸಿದ್ದೇನು? ಎಂದು ತಿಳಿಯದೇ ಗೊಂದಲದಲ್ಲಿದ್ದವರಿಗೆ ಮೇ ಗಾಡ್ ಬ್ಲೆಸ್ ದೆಮ್. ಇದು ಸಂವಾದ ಡಾಟ್ ಕಾಂನವರು ಒದಗಿಸಿದ ವೇದಿಕೆ. ಇಲ್ಲಿ ಗ್ರಹಿಕೆ, ಕಲಿಕೆ, ವಾದ, ಚರ್ಚೆ, ಅಭಿಪ್ರಾಯ ಮಂಡನೆ ಜೊತೆಗೆ ನಿರ್ದೇಶಕರ ಜೊತೆ ಕಲೆತು ಬೆರೆಯಲು ಅವಕಾಶವಿತ್ತು. ಕಲಿಕೆಯ ವಿಧಾನ, ಕಲಿಕೆಯ ದಾರಿ ಜೊತೆಗೊಬ್ಬ ಮಾರ್ಗದರ್ಶಕ ಇದ್ದರೂ ಗ್ರಹಿಸಲು ಕಷ್ಟವಾದವರೂ ಇದ್ದರು. ಶಿಬಿರದಲ್ಲಿ ಪ್ರದರ್ಶಿತವಾದ ಸಿನಿಮಾಗಳ ಬಗ್ಗೆ, ಎರಡೂವರೆ ದಿನಗಳ ಕಾಲದ ಶಿಬಿರ ಔಚಿತ್ಯದ ಬಗ್ಗೆ ಮರದ ಮರೆಯಲ್ಲಿ, ಕೆರೆ ಏರಿಯಲ್ಲಿ, ಪೆರ್ಲೆಯೋ, ನೆಲ್ಲಿಯೊ ತಿನ್ನುತ್ತಾ ಅಥವಾ ರಾತ್ರಿ ಡಾರ್ಮೆಂಟರಿಯಲ್ಲಿ ಮಲಗಿದ್ದಾಗ ಗೊಣಗಿದ್ದವರಿಗೇನು ಕಮ್ಮಿಯಿಲ್ಲ. ಅವರವರ ಭಕುತಿಗೆ ಅವರವರ ಭಾವಕ್ಕೆ.
ಸಿನಿಮಾದ ಆಯ್ಕೆ ಬಗ್ಗೆ ಮೊದಲೇ ಶಿಬಿರಾರ್ಥಿಗಳಿಗೆ ತಿಳಿಸಬಹುದು. ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮೊದಲೇ ಇದ್ದರೆ ಇನ್ನಷ್ಟು ಸಮಯ ಉಳಿಸಬಹುದು. ಆದಷ್ಟು ದಾಖಲೀಕರಣಕ್ಕೆ ಮಹತ್ವ ನೀಡಿದರೆ ಒಳಿತು. ಅಂದರೆ, ಆಡಿಯೋ, ವಿಡಿಯೋ ಕ್ಯಾಪ್ಚರ್ ಅತ್ಯವಶ್ಯ. ಅಭಿಪ್ರಾಯ ಮಂಡನೆ, ಸಂವಾದದ ಇನ್ನಷ್ಟು ಹೊಸತನದ ಚುಟುಕು ಕಾರ್ಯಕ್ರಮಗಳನ್ನು ಅಳವಡಿಸಿಕೊಂಡರೆ ಪೂರಕವಾಗಿರುತ್ತದೆ. ಸದ್ಯಕ್ಕೆ ಇಷ್ಟು ಸಾಕು ಮತ್ತೊಮ್ಮೆ ಬರೆಯುವೆ