ದೃಶ್ಯಕ್ಕೊಂದು ನುಡಿಗಟ್ಟು

ಮುರಳಿಯ ಸಾವು ಸಿನಿಮಾ ಸುದ್ಧಿ ಮಾತ್ರವೇ ಅನ್ನುವುದಾದರೆ..

ಇವತ್ತು ಮುಂಜಾನೆ ನಟ ಮುರಳಿ ನಿಧರಾದರು ಎಂಬ ಸುದ್ಧಿ ಟಿವಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಬರಲಾರಂಭಿಸಿದಾಗ ತಕ್ಷಣಕ್ಕೆ ನನಗೆ ನೆನಪಾದದ್ದು ಅವರ ಚಿತ್ರ ’ಅಜೇಯ’ ಹಾಗು ಅವರ ವಯೋವೃದ್ಧ ತಂದೆ ನಿರ್ದೇಶಕ ಸಿದ್ಧಲಿಂಗಯ್ಯ.
ಇಂದಿನ ಪೀಳಿಗೆಗೆ ಮುರಳಿಯನ್ನು ಪರಿಚಯಿಸುವುದೇ ಕಷ್ಟ. ರಜನೀಕಾಂತ್ ತರಹ ಆತ ಸುದ್ಧಿಯಲ್ಲಿರುವ ವ್ಯಕ್ತಿಯಾಗಿರಲಿಲ್ಲ. ೯೦ರ ದಶಕದಲ್ಲಿ ಆತ ನಟಿಸಿದ ಸುಮಾರು ೧೫-೨೦ ತಮಿಳು ಚಿತ್ರಗಳು ಸತತವಾಗಿ ಯಶಸ್ವಿಯಾಗಿದ್ದು ಸ್ಫುರದ್ರೂಪಿಯಲ್ಲದ ಆತನ ನಟನೆಯಿಂದಾಗಿಯೇ. ಆತನ ಅಷ್ಟೂ ಚಿತ್ರಗಳಿಗೆ ಸಂಗೀತ ಒದಗಿಸಿದ  ಇಳಯರಾಜ ತಮ್ಮ ಸಂಗೀತ ನಿರ್ದೇಶನದ ಉತ್ತುಂಗ ತಲುಪಿದ್ದು ಇದೇ ಕಾಲಘಟ್ಟದಲ್ಲಿಯೇ.

ಬಿಡಿ ಅದು ಮುರಳಿ ಯುಗ.  ಕಾಲ ಎಲ್ಲವನ್ನು ಗುಡಿಸಿ ಹಾಕಿತು. ಅಷ್ಟೊಂದು ಯಶಸ್ವೀ ಚಿತ್ರಗಳನ್ನು ಕೊಟ್ಟರೂ ಇತ್ತೀಚಿನ ದಿನಗಳಲ್ಲಿ ಅವರು ತಮಿಳು ಚಿತ್ರರಂಗಕ್ಕೆ ನಗಣ್ಯರಾಗಿದ್ದರು. ರಜನೀಕಾಂತರಂತಹ ನಟ ಕಾಲದ ಜೊತೆ ಪೈಪೋಟಿಗಿಳಿದು ಚಾಲ್ತಿಯಲ್ಲಿ ಉಳಿದರೂ ಅದೇ ವರಸೆಯನ್ನು ಅನುಸರಿಸಲು ಮುರಳಿಗೆ ಸಾಧ್ಯವಾಗಲಿಲ್ಲ.

ಕೊನೆಗೆ ರಾಜಕೀಯಕ್ಕಿಳಿದು ಎಐಡಿಎಂಕೆ ಸೇರಿದರೂ ಅಲ್ಲೂ ನೆಲೆಯಾಗಲಿಲ್ಲ.

ಇದೇ ಪರಿಸ್ಥಿತಿ ’ಬಂಗಾರದ ಮನುಷ್ಯ’ದಂಥಹ ಜನಮಾನಸದಲ್ಲಿ ಉಳಿಯುವ ಚಿತ್ರ ಕೊಟ್ಟ ಮುರಳಿಯವರ ತಂದೆ ಸಿದ್ಧಲಿಂಗಯ್ಯನವರಿಗೂ ಆದದ್ದು ವಿಪರ್ಯಾಸ ಮತ್ತು ಸ್ವತಃ ಅವರ ವೈಯಕ್ತಿಕ ಮಟ್ಟದ ದೌರ್ಬಲ್ಯವೂ ಹೌದು.

ಅಪರೂಪದ ನಟ ಮುರಳಿಯ ಸಾವಿಗೆ ಸಂವಾದ ಡಾಟ್ ಕಾಂ ಸಂತಾಪ ಸೂಚಿಸುತ್ತದೆ.

ಮುರಳಿಯ ಸಾವಿಗೆ ಇಷ್ಟೆಲ್ಲಾ ನೆನಪುಗಳನ್ನು ತರಲು ನೆರವಾಗಿದ್ದು ಕನ್ನಡದ ವೆಬ್ ಪೊರ್ಟಲ್ ಒಂದರ ಮುರಳಿಯ ಸಾವಿನ ಕುರಿತಾದ ಪ್ರಕಟಣೆ.

ಬಹುತೇಕ ಸುದ್ಧಿ ಮಾಧ್ಯಮಗಳಿಗೆ ಅದು ಪ್ರಮುಖ ಸುದ್ಧಿಯಾದರೂ ಈ ಪೋರ್ಟಲ್‍ನ ಗೆಳೆಯರಿಗೆ ಅದು ಸಿನಿಮಾ ಸುದ್ಧಿಯಾಗಿ ಸಿನಿಮಾ ವಿಭಾಗದಲ್ಲಿ ಪ್ರಕಟವಾಗಿತ್ತು. ಅದೇ ವಿಭಾಗದಲ್ಲಿ ಸಿನಿಮಾದೊಳಗೆ ಆಗುವ ಸಿನಿಮೀಯ ಸಾವುಗಳ ವಿವರಗಳನ್ನು ಪ್ರಕಟಿಸುತ್ತಾರೆ. ಅಲ್ಲಿಗೆ ಒಬ್ಬ ಪ್ರಸಿದ್ಧ ಕಲಾವಿದನ ಸಾವಿಗಿರಬಹುದಾದ ಸುದ್ಧಿ ಪ್ರಾಮುಖ್ಯತೆಯೇ ಹೊರಟು ಹೋಗುತ್ತೆ ಮತ್ತು ಅಲ್ಲಿ ಸಾವಿನ ಸೂತಕವೂ ಸುಳಿಯಲಾರದು.

ಎಲ್ಲರಿಗೂ ಗೊತ್ತಿರುವಂತೆ ಪತ್ರಿಕೆಗಳಲ್ಲಿ ಅಷ್ಟೇನೂ ಪ್ರಮುಖರಲ್ಲದವರ ಸಾವಿನ ಸುದ್ಧಿಗಳಿಗೆ ಪ್ರತ್ಯೇಕ "ನಿಧನ ವಾರ್ತೆ" ಎಂಬ ವಿಭಾಗವಿರುತ್ತೆ. ಇಲ್ಲಿ ಹಾಗೂ ಆಗಿರಲಿಲ್ಲ.

ಇದನ್ನೇ ಪೋರ್ಟಲ್‍ನ ನನ್ನ ಮಿತ್ರರಿಗೂ ಹೇಳಿದೆ. ಸುಮಾರು ಅರ್ಧ ಗಂಟೆ ಚರ್ಚೆಯಾಯಿತು. ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಸಾವಿನ ಸುದ್ಧಿಗಳನ್ನು ಆಯಾ ವಿಭಾಗದಲ್ಲೇ ಪ್ರಕಟಿಸುವುದು ನಮ್ಮ ರೂಢಿ ಎಂದರು. ಹಾಗಾದರೆ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಾವಿನ ಸುದ್ಧಿಗಳನ್ನು ಸಾಹಿತ್ಯ, ಕಥೆ ಇತ್ಯಾದಿ ವಿಭಾಗದಲ್ಲಿ ಪ್ರಕಟಿಸುತ್ತೀರಾ? ಅಂದೆ. ಇಲ್ಲ ಅದು ಪ್ರಮುಖ ಸುದ್ಧಿಯಾಗುತ್ತೆ ಅಂದ್ರು.

ಹಾಗಿದ್ದರೆ ಮುರಳಿಯ ಸಾವು ಯಾಕೆ ಗಂಭೀರ ಸುದ್ಧಿಯೆಂದು ಪ್ರಮುಖವಾಗಲಿಲ್ಲ?

ಸತ್ತಮೇಲೆ ಇಂಥಹ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆಂದು ಬರೆಯೋದು ಇದ್ದೇ ಇರುತ್ತೆ. ಆದ್ರೆ ಸಾವೂ ಸಹಾ ಇಂಥಹ ಕ್ಷೇತ್ರದ್ದಾದ್ದರಿಂದ ಆ ವಿಭಾಗದಲ್ಲೇ ಪ್ರಕಟಿಸಬೇಕೆಂದರೆ ಹೇಗೆ?

ಮುಂದೆ ರಾಜಕೀಯ, ನಾಟಕ, ಬುದ್ಧಿಜೀವಿ ಇತ್ಯಾದಿ ವಿಭಾಗಗಳಿಗೆ ಮರಣ ವಾರ್ತೆಗಳನ್ನು ವಿಭಾಗಿಸುತ್ತೀರ? ಕೇಳಿದೆ. ಇಲ್ಲ ಎಂದರು. ಅವರಿಗೆ ಅರಿವಾಯಿತೋ ಇಲ್ಲವೋ ಗೊತ್ತಿಲ್ಲ, ಮುಂದಿನ ಐದೇ ನಿಮಿಷದಲ್ಲಿ ಮುರಳಿಯ ’ನಿಧನ ವಾರ್ತೆ’ ಪ್ರಮುಖ ಸುದ್ಧಿಗಳ ವಿಭಾಗದಲ್ಲಿ ಕಾಣಿಸಿಕೊಂಡಿತು. ಆ ನನ್ನ ಸ್ನೇಹಿತರಿಗೆ ಧನ್ಯವಾದ.


ಮುರಳಿಯವರ ಬಗೆಗೆ ಒಂದಿಷ್ಟು ವಿವರ:
ಜನನ:ಮೇ ೧೯ ೧೯೬೪
ಕನ್ನಡದಲ್ಲಿ ನಟಿಸಿದ ಕೆಲವು ಚಿತ್ರಗಳು: ಪ್ರೇಮ ಪರ್ವ ,ಪ್ರೇಮ ಗಂಗೆ ,ಅಜೇಯ, ಪ್ರೇಮ ಪೇಮ ಪ್ರೇಮ.
ತಮಿಳಿನಲ್ಲಿ: ಅಮೀರ್ ಜಾನ್ ನಿರ್ದೇಶನದ ಪೂವಿಲಂಗು, ಇಧಯಮ್, ಪುದು ವಸಂತಮ್, ಪೋರ್ಕಳಂ, ಸುಂದರ ಟ್ರಾವಲ್ಸ್ ಇತ್ಯಾದಿ ಸುಮಾರು ೫೦ ಚಿತ್ರಗಳು.
 ಅವರ ಕೊನೆಯ ಮತ್ತು ಇನ್ನೂ ಬಿಡುಗಡೆಯಾಗದ ಚಿತ್ರ ’ಕವಸಂ’.

ಮುರಳಿ ಕನ್ನಡದ ಪ್ರೇಮ ಪರ್ವ ಚಿತ್ರದ ಮೂಲಕ ಚಿತ್ರೋಧ್ಯಮಕ್ಕೆ ಕಾಲಿಟ್ಟರು. ನಿರ್ದೇಶಕ ತಂದೆ ಸಿದ್ಧಲಿಂಗಯ್ಯ ಅವರ ಜೊತೆ ಕೆಲವು ಚಿತ್ರಗಳಿಗೆ ಸಹಾಯಕರಾಗಿಯೂ ದುಡಿದಿದ್ದರು.




ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು