೨-೧೦-೨೦೧೦ ರಂದು ಪ್ರದರ್ಶನಗೊಂಡ ನವಿಲಾದವರು ಚಿತ್ರ ವೀಕ್ಷಿಸಲು ನಾನು ನನ್ನ ಗೆಳತಿಯರಾದ ಶಕುಂತಲ ಮತ್ತು ತಪಸೀದೇವಿಯರೊಡನೆ ಬಂದಿದ್ದೆ. ನಾವು ಅದರ ಕುರಿತಂತೆ ಚರ್ಚೆ ನಡೆಸಿದೆವು. ನಮಗೆ ಅನಿಸಿದ ಮುಖ್ಯಾಂಶಗಳನ್ನು ತಮಗೆ ರವಾನಿಸಬೇಕೆಂಬ ಇರಾದೆಯಿಂದ ಈ ಪತ್ರ.
ಚಿತ್ರ ಕಡಿಮೆ ಬಜೆಟ್ಟಿನಲ್ಲಿ ತಯಾರಾದುದು ಎಂದು ಮೊದಲೇ ತಿಳಿಸಿದ್ದರಿಂದ ಅದರಲ್ಲಿ ಹೆಚ್ಚು ತಾಂತ್ರಿಕ ದೋಷಗಳನ್ನು ಪಟ್ಟಿಮಾಡಲು ನನಗೆ ಇಚ್ಛೆ ಇಲ್ಲ. ಧನಾತ್ಮಕ ಅಂಶಗಳನ್ನು ತಿಳಿಸಲು ಆಶಿಸುತ್ತೇನೆ.
ಮೊದಲಿನಿಂದ ಕೊನೆಯವರೆಗೆ ಕತೆ ಕುತೂಹಲವನ್ನು ಉಳಿಸಿಕೊಳ್ಳುವಲ್ಲಿ ಯಶ ಕಂಡಿದೆ. ಪ್ರಧಾನ ಅಂಶವಾಗಿ ನಾಶದ ಶಕ್ತಿಯ ವಿಜೃಂಭಣೆ, ಅಮಾಯಕ ಶ್ರೀಸಾಮಾನ್ಯರ ಬಲಿ, ಇದು ಕತೆಯ ತಿರುಳಾಗಿದೆ. ನಾಯಕ, ನಾಯಕಿ ಇಬ್ಬರೂ ಅಮಾಯಕ ಪ್ರಜೆಗಳೆ. ಅವರನ್ನು ಉಗ್ರಗಾಮಿಯೊಬ್ಬ ತನ್ನ ನಾಶ ಕ್ರಿಯೆಗೆ ಸುಲಭವಾಗಿ ಬಳಸಿಕೊಳ್ಳುತ್ತಾನೆ. ಅವರ ಮನಸ್ಸಿನಲ್ಲಿ ದ್ವೇಷದ ಭಾವನೆ ತುಂಬುತ್ತಾ ಹೋಗುತ್ತಾನೆ. ಅವರಿಗೆ ಒಳ್ಳೆಯದು ಮಾಡುತ್ತೇನೆ ಎಂಬ ನಂಬಿಕೆ ಹುಟ್ಟಿಸಿ, ತನ್ನ ದುಷ್ಟ ಆಶಯಕ್ಕೆ ಕಾಯಿಗಳಾಗಿ ಬಳಸುತ್ತಾನೆ. ಸಕಾಲದಲ್ಲಿ ನಾಯಕಿಯ ತಾಯಿ ದ್ವೇಷ ಒಳ್ಳೆಯದಲ್ಲ, ಪ್ರೀತಿ ಬದುಕಿನ ಬಲ, ದೇವರ ಮೆಚ್ಚುಗೆಗೆ ಪಾತ್ರ ಎಂಬ ಭಾವನೆಯನ್ನು ಅಭಿವ್ಯಕ್ತಿಸಿದಾಗ ಪ್ರೌಢಮನಸ್ಕನಾದ ನಾಯಕ ತನ್ನ ನಾಶದ ಕ್ರಿಯೆಗೆ ತಡೆಯೊಡ್ಡುತ್ತಾನೆ.
ತನ್ನ ಗೆಳತಿಯೇ ನಾಶದ ರುವಾರಿಯಾಗಿಬಿಡುತ್ತಾಳೆ ಎಂದು ತಿಳಿದು ತಡೆಯಲು ಧಾವಿಸಿ ತಪ್ಪು ತಿಳುವಳಿಕೆಯಿಂದ ಸಾಯಿಸಿಬಿಡುತ್ತಾನೆ. ಪೋಲಿಸ್ ಇನ್ಸ್‌ಪೆಕ್ಟರ್ ತಾನು ತಪ್ಪು ತಿಳುವಳಿಕೆಯಿಂದ ಓರ್ವ ನಿರಪರಾಧಿಯ ಸಾವಿಗೆ ಕಾರಣನಾದೆ ಎಂಬ ಪಶ್ಚಾತ್ತಾಪದಲ್ಲಿ ಬೇಯುತ್ತ ತನ್ನ ತಪ್ಪನ್ನು ಒಪ್ಪಿಕೊಂಡು ಮನಸ್ಸಿನ ಭಾರ ತುಸು ಕಡಿಮೆ ಮಾಡಿಕೊಳ್ಳುವಲ್ಲಿ ಮತ್ತೆ ನಿರಪರಾಧಿಯ ಸಾವಿಗೆ ಕಾರಣನಾಗುತ್ತಾನೆ.
ಇದು ದುರಂತದ ಮೆರವಣಿಗೆಯಾಗುತ್ತದೆ. ಇಲ್ಲಿ ಹಿಂದು ಮುಸಲ್ಮಾನರ ಸುತ್ತ ಕತೆ ಹೆಣೆಯಲ್ಪಟ್ಟಿದ್ದರೂ ಯಾರ ಪರ ಅಥವಾ ವಿರುದ್ಧ ಎಂಬ ಭಾವನೆ ಬರುವುದಿಲ್ಲ. ದ್ವೇಷ ಪ್ರೀತಿಯ ಬಗೆಗೆ ವ್ಯಾಖ್ಯಾನ (ಮುಸಲ್ಮಾನ ತಾಯಿಯ ಹೃದಯದ ಮಾತು)key note of the play. ಎಲ್ಲ ಪಾತ್ರಧಾರಿಗಳೂ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯ ಸಲ್ಲಿಸಿದ್ದಾರೆ, ಭಾವನೆಗಳ ಅಭಿವ್ಯಕ್ತಿ, ಬಾಡಿ ಲಾಂಗ್ವೇಜ್ ವಿಷಯದಲ್ಲಿ ಎರಡು ಮಾತಿಲ್ಲ. ಆದರೆ ಡೈಲಾಗ್ ಡೆಲಿವರಿಯಲ್ಲಿ ಅನಾವಶ್ಯಕವಾದ ಅತಿ ಆವೇಷ ನಾಯಕ, ನಾಯಕಿ ಇಬ್ಬರಲ್ಲೂ ಇತ್ತು ಎನಿಸುತ್ತದೆ. ಆದರೆ ಪೋಲಿಸ್ ಇನ್‌ಸ್ಪೆಕ್ಟರ್ ಆರಂಭದಿಂದ ಅಂತ್ಯದವರೆಗೂ ಅತ್ಯಂತ ಸಂಯಮದಿಂದ ನಟಿಸಿ ಅದ್ಭುತ ನಟ ಎಂಬ ಭಾವನೆ ಮೂಡಿಸಿದರು. ಹಾಗೆಯೇ ವಿಲನ್ ಪಾತ್ರಧಾರಿ ಗಿರಿರಾಜ್ ಮತ್ತು ಅವನ ಸಹಾಯಕ ಪಾತ್ರಧಾರಿ ತಮ್ಮ ಪಾತ್ರದ ಬೇಡಿಕೆಗೆ ತಕ್ಕಂತೆ ವಿಲನ್ ಗಿರಿ ಮೆರೆದಿದ್ದಾರೆ.
ಅಂತ್ಯದಲ್ಲಿ ಪೋಲಿಸ್ ಇನ್ಸ್‌ಪೆಕ್ಟರ್ ನಾಯಕಿಯ ಮನೆಗೆ ಹೋಗಿ ಅವಳ ಪತ್ರ ಓದಿ ನಿರಪರಾಧಿಯನ್ನು ಕೊಂದೆ ಎಂಬ ಭಾವದಲ್ಲಿ ದಿಗ್ಭ್ರಾಂತನಾಗಿ ನಿಲ್ಲುವವರೆಗೆ ಕತೆ ಬೆಳೆಸಿದ್ದರೆ ಅಂತ್ಯದ ಅಸ್ಪಷ್ಟತೆ ನಿವಾರಣೆಯಾಗುತ್ತಿತ್ತು. ಕತೆ, ರೋಚಕ ಅಂತ್ಯ ಪಡೆಯುತ್ತಿತ್ತು.
ಸಂವಾದ ಆರಂಭಿಸಿ, ಸುಚೇಂದ್ರ ಪ್ರಸಾದ್‌ರವರು ಋಣಾತ್ಮಕ ಅಂಶಗಳನ್ನೇ ಬೃಹತ್ತಾಗಿ ಹೇಳುತ್ತಾ ಬಂದದ್ದು ನನಗೆ ಸರಿ ಕಾಣಲಿಲ್ಲ. ಕೊನೆಯಲ್ಲಿ ನಿರ್ದೇಶಕರೇ ಅಷ್ಟು ಹೊತ್ತೂ ಮೈಕು ಹಿಡಿದಿದ್ದು ಸಂವಾದದ ರೀತಿಯಲ್ಲ. ಪ್ರೇಕ್ಷಕರಿಗೆ ಪ್ರಶ್ನೆ ಕೇಳಲು ಹೆಚ್ಚು ಅವಕಾಶ. ಅದಕ್ಕೆ ಉತ್ತರ ಕೊಡುವುದಕ್ಕೆ ನಿರ್ದೇಶಕರು ಸಮಯ ಮಿತಿಗೊಳಿಸಬೇಕಿತ್ತು. ಅವರ ವೈಯಕ್ತಿಕ ಆಸೆ, ಆಶಯ ಬೆಳೆದು ಬಂದ ರೀತಿ ಇವುಗಳ ಸ್ವಪ್ರಶಂಸೆಗೆ ಹೆಚ್ಚು ಒತ್ತು ಕೊಟ್ಟಿದ್ದು ಸಮಯ ಸದುಪಯೋಗವಾಗದೆ ಒನ್ ಮ್ಯಾನ್ ಶೋ ತರಹ ಭಾಸವಾಯ್ತು.
ಲಲಿತ ಶ್ರೀಹರಿ
೨೦-೧೦-೧೦