ಪ್ರಬಂಧ/ಲೇಖನ • ಪವನ್ ಕುಮಾರ್ (ನಟ, ಚಿತ್ರಕಥೆಗಾರ ಪವನ್ ಕುಮಾರ್ ಇಲ್ಲಿ ತಮ್ಮ ಪಂಚರಂಗಿ ಅನುಭವವನ್ನ ಹಂಚಿಕೊಂಡಿದ್ದಾರೆ. ಸುಲೋಚನ ಜಿ ಎಸ್, ಇಂಗ್ಲೀಷಿನಿಂದ ಇದನ್ನ ಕನ್ನಡೀಕರಿಸಿದ್ದಾರೆ. ಇದು ಪವನ್‌ಕುಮಾರ್ ಬರಹದ ಎರಡನೇ ಅನುವಾದ. ಮೊದಲ ಅನುವಾದ ಮಾಡಿದ್ದು ಶ್ರೀಮತಿ ರೂಪಾ ರಾಜೀವ್.) ನಾನು ಹಾಗೂ ನನ್ನ ತಂಡ ನಿರೀಕ್ಷಿಸಿದ್ದಂತೆಯೇ ನನ್ನ ಹೊಸ ಸಿನಿಮಾ ‘ಪಂಚರಂಗಿ’ ಅದ್ಧೂರಿ ಆರಂಭ ಪಡೆದು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ನಾನು ಪವನ್‌ಕುಮಾರ್, ಈ ಸಿನಿಮಾದ ಕಥೆ ಹಾಗೂ ಚಿತ್ರಕಥೆ ಬರೆದವ. ಜೊತೆಗೆ ಈ ಸಿನಿಮಾದ ಪಾತ್ರವರ್ಗದಲ್ಲಿ ನಾನೂ ಒಬ್ಬ. ಚಿತ್ರದಲ್ಲಿ ನನ್ನದು ‘ಲಕ್ಕಿ’ ಎಂಬ ಪಾತ್ರ. ಈ ಸಂವಾದವು ಪಂಚರಂಗಿ ಸಿನಿಮಾ ನಿರ್ಮಾಣದ ಬಗೆಗಿನ ಕೆಲವು ಸಂಕ್ಷಿಪ್ತ ವಿಚಾರಗಳನ್ನು ವಿನಿಮಯಮಾಡಿಕೊಳ್ಳುವ ಪ್ರಯತ್ನ. ಜೊತೆಗೆ ‘ನಾವು ಬಯಸಿದ್ದು ಏನು? ಸಿಗದದ್ದು ಏನು?’ ಎಂಬುದನ್ನು ತಿಳಿಸಿಕೊಡುವ ದಾಖಲೆಯೆಂದೇ ಕರೆಯಬಹುದು.
೨೦೦೯ ಸೆಪ್ಟಂಬರ್‌ನಲ್ಲಿ ‘ಮನಸಾರೆ’ ಸಿನಿಮಾ ಬಿಡುಗಡೆಯಾಗಿ ಪೂರ್ವ ನಿರೀಕ್ಷೆಯಂತೆ ಅದ್ಬುತ ಯಶಸ್ಸು ಗಳಿಸಿತು. ಈ ಗೆಲುವಿನ ಅಲೆ, ಪ್ರಶಂಸೆ ನಮ್ಮ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು. ವೈಯಕ್ತಿಕವಾಗಿ ಹೇಳುವುದಾದರೆ ಮನಸಾರೆ ಸುಂದರ ಘಟನೆಗಳನ್ನು ಕಲೆಹಾಕಿದಂತಹ ಅದ್ಭುತ ಚಿತ್ರಕಥೆ ಒಳಗೊಂಡಿದ್ದಾಗಿತ್ತು. ನಿರ್ಮಾಣ ಪ್ರಕ್ರಿಯೆಯ ಅವಧಿಯಲ್ಲಿ ಚಿತ್ರಕಥೆಯಲ್ಲಿ ಆಗುತ್ತಿದ್ದ ಆ ಕ್ಷಣದ ಬದಲಾವಣೆಗಳು, ಕಥೆ ಮುಂದುವರಿಕೆಯ ರೀತಿ ಹೀಗೆ ಈ ಸಿನಿಮಾ ನಿರ್ಮಾಣ ಹಂತದ ಪ್ರತಿಯೊಂದು ಅಂಶವೂ ನನಗೆ ರೋಚಕ ಅನುಭವವವೇ. ಕಥಾಹಂದರವು ಸೂಕ್ಷ್ಮ ಬದಲಾವಣೆಗಳಿಂದ ಕೂಡಿದ್ದು, ತಾತ್ವಿಕತೆಯ ನೆಲೆಗಟ್ಟಿನಲ್ಲಿ ಮಿಳಿತಗೊಂಡಿದ್ದಾಗಿತ್ತು. ಈ ಚಿತ್ರದ ಅಭಿನಯಕ್ಕೆ ಮುಂಚೆ ಇದರ ಸೂಕ್ಷ್ಮ ಬದಲಾವಣೆಗಳು ಸರಳವಾಗಿ ಪಾತ್ರವನ್ನು ನಿರ್ವಹಿಸಬಹುದೇ ಎಂಬ ಆಲೋಚನೆಗಳು ನನ್ನ ಮನಸ್ಸಿನಲ್ಲಿ ಮೂಡಿದ್ದವು. ಇದೇ ಆಲೋಚನೆಗಳು ಮತ್ತೆ ಆ ಪಾತ್ರವನ್ನು ಅನುಭವಿಸುವಾಗ ನನ್ನಲ್ಲಿನ ಭಾವನೆಗಳಿಗೆ ಜೀವಂತಿಕೆಯನ್ನು ತಂದಿದ್ದವು.
ಕರ್ನಾಟಕದಾದ್ಯಂತ ಮನಸಾರೆ ಚಿತ್ರದ ಪ್ರಮೋಷನ್‌ಗಾಗಿ ಅಭಿಯಾನಗಳನ್ನು ಹಮ್ಮಿಕೊಂಡೆವು. ಒಂದು ಸಾಮಾನ್ಯವಾದ ಊರಿನ ಥಿಯೇಟರ್‌ನಲ್ಲಿ ಈ ಚಿತ್ರದ ಪ್ರದರ್ಶನ ನಡೆದಿತ್ತು. ಅಲ್ಲಿನ ಪ್ರೇಕ್ಷಕರು ಬಹಳ ಮುಗ್ಧಸ್ವಭಾವದರಾಗಿದ್ದರು. ಪ್ರದರ್ಶನದ ನಂತರ ನನಗೆ ಅನಿಸಿದ ವಿಚಾರವೆಂದರೆ ಆ ಜನರು ಈ ಸಿನಿಮಾವನ್ನು ಸ್ವೀಕರಿಸುತ್ತಾರೆಯೇ ಎನ್ನುವುದರ ಜೊತೆಗೆ ಅವರಿಗೆ ಮೋಸಮಾಡಿದೆವೇನೋ ಎಂದನ್ನಿಸಿದ್ದು. ಆದರೆ ಜನರು ನಮ್ಮ ಸಿನಿಮಾವನ್ನು ಅರ್ಥಮಾಡಿಕೊಂಡಿದ್ದರು. ಚಿತ್ರದ ಬಾಹ್ಯರೂಪವು ಆ ಜನರಲ್ಲಿ ಭಾವನಾತ್ಮಕತೆಯನ್ನು ಪ್ರತಿಬಿಂಬಿಸಿತು. ಆ ಜನರೊಂದಿಗಿನ ಮುಖಾಮುಖಿ ಸಂವಾದದ ನಂತರ ನನಗೆ ತಿಳಿದ ವಿಷಯವೆಂದರೆ ಪ್ರೇಕ್ಷಕರು ‘ಮನಸಾರೆ’ ಚಿತ್ರವನ್ನು ತಮ್ಮ ಬುದ್ದಿಸಾಮರ್ಥ್ಯದಿಂದ ಒಪ್ಪಿಕೊಂಡಿಲ್ಲ; ತಮ್ಮ ಭಾವನೆಗಳಿಂದ ಸ್ವೀಕರಿಸಿದ್ದಾರೆ ಎಂಬುದು. ಬೆಂಗಳೂರು ಥಿಯೇಟರ್‌ಗಳಲ್ಲೂ ಸಹ ಈ ಚಿತ್ರವು ಯಶಸ್ವಿ ಪ್ರದರ್ಶನಗೊಂಡು ಪ್ರೇಕ್ಷಕರು ಅತಿರಂಜನೆ ಹಾಗೂ ಪ್ರಚೋದನಕಾರಿ ಸಿನಿಮಾಗಳಿಂದ ಹೊರಬಂದು ಈ ಚಿತ್ರವನ್ನು ನೋಡಿದ್ದರು ಎಂಬುದು ವಾಸ್ತವಿಕತೆಯನ್ನು ಪ್ರತಿನಿಧಿಸುವ ಸಂಗತಿಯಾಗಿತ್ತು. ಈ ಸಿನಿಮಾ ಗುಂಗಿನಿಂದ ಹೊರಬಂದ ಯೋಗರಾಜ್‌ಭಟ್ ಹಾಗೂ ನಾನು ಹೊಸ ಸಿನಿಮಾದ ನಿರ್ದೇಶನದ ಕಡೆ ಗಮನಹರಿಸಿದೆವು.
ಇನ್ನೂ ವಾಸ್ತವಿಕತೆ ಬಗ್ಗೆ ಹೇಳೋದಾದ್ರೆ ಪಂಚರಂಗಿ ಸಿನಿಮಾದ ಚಿತ್ರಕಥೆ ಹೆಣೆಯುವುದರಲ್ಲಿ ತಪ್ಪುಹೆಜ್ಜೆ ಇಟ್ಟೆವೇನೋ ಎನಿಸಿತ್ತು. ಚಿತ್ರಕಥೆಯ ಹಂದರವು ನನಗೆ ಕೆಲವೊಮ್ಮೆ ಧೃತಿಗೆಡುವಂತೆ ಮಾಡುತ್ತಿದ್ದುದೂ ನಿಜ! ಏಕೆಂದರೆ ತಯಾರಿಗೂ ಮುಂಚೆ ೨೦ ಸಿನಿಮಾಗಳಿಗಾಗುವಷ್ಟು ಚಿತ್ರಕಥೆಯನ್ನು ಬರೆದಿಟ್ಟಿದ್ದೆವು! ೨೦ ರೀತಿಯ ವೈವಿಧ್ಯಮಯ ಚಿಂತನೆಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು, ತಿರಸ್ಕರಿಸಬೇಕು? ಎಂಬುದು ಖಂಡಿತಾ ಸಾಮಾನ್ಯವಾದ ವಿಚಾರವಾಗಿರಲಿಲ್ಲ. ಪ್ರತಿದಿನವೂ ಚಿತ್ರಕಥೆಯಲ್ಲಿನ ಲೋಪದೋಷಗಳ ಬಗೆಗೆ ಅಥವ ತಪ್ಪುಗಳನ್ನು ಕಂಡುಹಿಡಿಯುವ ಚರ್ಚೆಯಲ್ಲಿ ಪಾಲ್ಗೊಂಡೆವು. ಈ ಪ್ರಕ್ರಿಯೆಯು ನಾವು ನಮ್ಮದೇ ಆದ ಒಂದು ಚೌಕಟ್ಟಿನೊಳಗೆ ತೊಡಗಿಕೊಳ್ಳಲು ಮಾರ್ಗದರ್ಶಿಯಾಯಿತು.
‘ಲಿಂಬೋ’ ರಾಜ್ಯದಲ್ಲಿ ೩ ತಿಂಗಳ ಕಾಲ ಈ ಚಿತ್ರಕಥೆಯ ವಿಚಾರವಾಗಿ ತಲೆಕೆಡಿಸಿಕೊಳ್ಳುತ್ತಾ ಚಿಕ್ಕದೊಂದು ‘ಕಾಫಿಕೂಟ’ ದಲ್ಲಿ ಹರಟುತ್ತಾ ತೊಡಗಿದ್ದ ಸಂಧರ್ಭ ಎಲ್ಲವನ್ನೂ ಬದಲಾವಣೆಗೊಳಿಸಿತು. ಜಯಂತ್ ಕಾಯ್ಕಿಣಿಯವರು ನಮ್ಮ ಕಛೇರಿಗೆ ಬಂದರು! ಬರಹಗಾರಿಕೆಯಲ್ಲಿ ಅನುಭವಿಸುತ್ತಿದ್ದ ವೇದನೆಯ ಪರಿಯನ್ನು ನಾವು ಅವರಿಗೆ ತಿಳಿಸಿದೆವು, ಅದನ್ನೆಲ್ಲಾ ನೋಡಿದ ಜಯಂತ್‌ಗೆ ನಮ್ಮ ಬರವಣಿಗೆಯಲ್ಲಿನ ಅವಸ್ಥೆ ಚೆನ್ನಾಗೆ ಅರ್ಥವಾಗಿತ್ತು. ಬಹಳ ಹೊತ್ತು ಅಲ್ಲಿ ಮೌನ ಮನೆಮಾಡಿತ್ತು, ನಂತರ ಅವರು ಹೇಳಿದ್ದೇನೆಂದರೆ ಮನಸಾರೆ ಚಿತ್ರದಲ್ಲಿ ‘ಸಾಮುದಾಯಿಕ ಅಂಶವನ್ನು ಬಿಂಬಿಸುವ ಕಥಾ ಹಂದರವಿತ್ತು, ಪ್ರೇಕ್ಷಕನಿಗೆ ಆ ಕಥೆ ಮನಸೂರೆಗೊಳ್ಳಲು ಕಾರಣ ಜನರ ವಾಸ್ತವಿಕ ಅನುಭವಗಳನ್ನು ಆ ಸಿನಿಮಾವು ಕಟ್ಟಿಕೊಟ್ಟಿದ್ದು, ಜನರು ವಿವಿಧ ಆಯಾಮಗಳಲ್ಲಿ ಹಾಗೂ ವಿವಿಧ ಬಗೆಯ ಪಾತ್ರಗಳಲ್ಲಿ ತಮ್ಮ ಅನುಭವವನ್ನು ಕಂಡುಕೊಂಡರು. ಈ ರೀತಿ ಆ ಸಿನಿಮಾವು ‘ತೆರೆಯ ಮೇಲೆ ಸಾಮುದಾಯಿಕ ಪ್ರಜ್ಞೆಯ ಭಾವನೆಯನ್ನು ಬಿಂಬಿಸುವ ಕಥೆ’ ಇದ್ದುದರಿಂದಲೇ ಆ ಮಟ್ಟದ ಯಶಸ್ಸು ಗಳಿಸಲು ಸಾಧ್ಯವಾದದ್ದು. ಆ ನಿಟ್ಟಿನಲ್ಲಿ ಚಿಂತನೆ ನಡೆಸಿದರೆ ಚಿತ್ರಕಥೆಯ ಸಾಗುವಿಕೆ ಸುಲಭವಾಗುತ್ತದೆ ಎಂದರು.
ಯೋಗರಾಜ್ ಹಾಗೂ ನಾನು ಕಥೆಯ ಬಗೆಗೆ ಮಾನಸಿಕ ತೊಳಲಾಟಕ್ಕೆ ಸಿಲುಕಿದೆವು. ಮಾರನೆಯ ದಿನ ಕುಳಿತು ಈ ಬಗೆಗೆ ಯೋಚಿಸೋಣ ಎಂದುಕೊಂಡೆವು. ಆದರೆ ನನಗೆ, ತಿಳಿದಿತ್ತು ಜಯಂತ್‌ರವರ ಮಾತುಗಳಿಂದ ಯೋಗರಾಜ್‌ಭಟ್‌ರ ಮನಸ್ಸಿನಲ್ಲಿ ಯಾವುದೋ ಯೋಜನೆ ಹೊಳೆದಿದೆ ಎಂದು. ಜಯಂತ್ ಆಲೋಚನೆ ಶೇ.೧೦೦ ರಷ್ಟು ನ್ಯಾಯಯುತವಾಗಿದೆ. ನಮ್ಮ ಹೊಸ ಸಿನಿಮಾದಲ್ಲಿ ಪಾತ್ರಗಳನ್ನು ಉತ್ತಮವಾಗಿ ಪ್ರತಿಬಿಂಬಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ಅಂದುಕೊಂಡೆ. ನಂತರ ಈ ಹಾದಿಯಲ್ಲೇ ಯೋಚಿಸುತ್ತಾ ಸಮುದಾಯ ಭಾವನೆಗಳನ್ನು ಮೂಡಿಸುವ ಪಾತ್ರಗಳನ್ನು ಸೃಷ್ಟಿಸಬೇಕು. ಅದೇರೀತಿ ಆ ಪಾತ್ರಗಳ ಮೂಲಕ ಕಥೆಯನ್ನು ಹೆಣೆಯಬೇಕು ಎಂದುಕೊಂಡು ಮರುದಿನ ಬೆಳಗ್ಗೆ ಯೋಗರಾಜ್‌ಭಟ್‌ರಿಗೆ ಹೇಳಿದೆ. ಅವರೂ ಸಹ ಇದನ್ನು ಒಪ್ಪಿಕೊಂಡರು. ಆದರೂ ಸಹ ನನ್ನ ಮುಂದೆ ಕಾಡುತ್ತಿದ್ದ ಪ್ರಶ್ನೆ ಕಥೆ ಎಲ್ಲಿಗೆ ಹೋಗಿ ಮಟ್ಟುತ್ತದೋ, ಸಮುದಾಯದ ಆಚರಣೆಯೊಳಗೆ ನಮ್ಮ ಕಥೆಯನ್ನು ಹೇಗೆ ಮುಂದುವರೆಸಿಕೊಂಡು ಹೋಗುವುದು ಹೇಗೆ ಎಂಬುದು.
ಸ್ವಲ್ಪದಿನಗಳ ನಂತರ ‘ಪಂಚರಂಗಿ’ಯ ಕಥೆ ಸಿದ್ದವಾಯಿತು. ಬಳಿಕ ನನಗೆ ಮೂಡಿದ ಆಲೋಚನೆ ಎಂದರೆ ಒಂದು ವಿಭಿನ್ನ ಆಯಾಮದಲ್ಲಿ ಈ ಸಿನಿಮಾದ ನಿರ್ಮಾಣ ಕೆಲಸ ನಡೆಸಬೇಕು ಎಂದು. ಬಳಿಕ ಯಾವ ಪಾತ್ರಕ್ಕೆ ಯಾವ ನಟನಟಿಯರನ್ನು ತೊಡಗಿಸಿಕೊಳ್ಳಬೇಕು ಎಂದು ಅದಕ್ಕೆ ತಕ್ಕ ಪಾತ್ರವರ್ಗದ ಪಟ್ಟಿಯನ್ನು ಸಿದ್ದಪಡಿಸಿಕೊಂಡೆ. ನಂತರ ನಾವು ಯೋಚಿಸಿದ್ದು ಕಥೆಯಲ್ಲಿನ ಮದುವೆ ಸನ್ನಿವೇಶಕ್ಕೆ ತಕ್ಕಂತೆ ಅದಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನು ಒಟ್ಟಾಗಿ ಸೇರಿಸುವುದು. ಆದರೆ ಇದೇ ಪರಿಕಲ್ಪನೆಯ ಅನೇಕ ಸಿನಿಮಾಗಳು ಈಗಾಗಲೇ ಬಂದಿದ್ದವು. ನಮ್ಮ ಸಿನಿಮಾವು ಈ ನಿಟ್ಟಿನಲ್ಲಿ ಯಾವ ರೀತಿಯ ವಿಭಿನ್ನತೆ ಹೊಂದಬೇಕೆಂಬುದು ಸವಾಲಾಗಿತ್ತು. ಯೋಗ್ ಹೊಂದಿದ್ದ ಈ ಒಂದೇ ಒಂದು ಎಳೆಯು ಸಿನಿಮಾ ನಿರ್ಮಾಣಕ್ಕೆ ಬಲವಾದ ವಿಷಯವಾಗಿರಲಿಲ್ಲ. ಆದರೆ ಸಮಾಧಾನ ಮೂಡಿಸುತ್ತಿದ್ದ ವಿಚಾರವೆಂದರೆ ಒಂದು ಪ್ರಯೋಗಾತ್ಮಕತೆಯ ಹಾದಿಯಲ್ಲಿ ಈ ಚಿತ್ರಕಥೆಯ ಚಿತ್ರೀಕರಣದಲ್ಲಿ ತೊಡಗಬೇಕೆನ್ನುವುದು. ಈ ಹಿನ್ನೆಲೆಯಲ್ಲಿ ನಾವು ಚರ್ಚೆ ನಡೆಸುತ್ತಾ ಒಂದು ಸಂಕ್ಷಿಪ್ತ ಕಥೆಯ ಸಾಗುವಿಕೆಯಲ್ಲಿ ಪಾತ್ರಗಳನ್ನು ಆಳವಾದ ವ್ಯಕ್ತಿತ್ವದೊಂದಿಗೆ ಕಟ್ಟಿಕೊಡಬೇಕೆಂದು ತೀರ್ಮಾನಿಸಿಕೊಂಡು ಅತಿ ಕಡಿಮೆ ದಿನಗಳಲ್ಲಿ ನಿರ್ಮಾಣ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಅಂತಿಮವಾಗಿ ೧೬ ಪಾತ್ರಗಳೊಂದಿಗೆ ಕಥಾಹಂದರವನ್ನು ಬೆಳೆಸಿಕೊಂಡು ಹೋಗಲು ನಿರ್ಧಾರ ಮಾಡಿಕೊಂಡೆವು. ಚಿತ್ರಕಥೆ ಒಂದು ತಾತ್ವಿಕ ನೆಲೆಗಟ್ಟಿನಲ್ಲಿ ವಾಸ್ತವಿಕ ಬದುಕಿನ ಸಂಗತಿಗಳನ್ನು ಪ್ರಸ್ತುತಪಡಿಸುವ ಕಸರತ್ತಾಗಿತ್ತು. ಈ ಪ್ರಕ್ರಿಯೆಯಲ್ಲೂ ಪಾತ್ರಗಳಲ್ಲಿ ಆಕಾಂಕ್ಷೆಗಳನ್ನು ಹೊರಹೊಮ್ಮಿಸುವ ನಿಟ್ಟಿನಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ತೋರಿಸುವುದಾಗಿತ್ತು.
ಒಂದು ಮನರಂಜನಾತ್ಮಕ ಚಿತ್ರದಲ್ಲಿ ತಾತ್ವಿಕ ಸಂಗತಿಗಳನ್ನು ಅಳವಡಿಸಿ ಪ್ರೇಕ್ಷಕನ ಮುಂದಿಡುವುದು ಹಗುರವಾದ ವಿಚಾರವಾಗಿರಲಿಲ್ಲ. ಚಿತ್ರನಿರ್ಮಾಣ ಹಂತದಲ್ಲೂ ಸಹ ತಾತ್ವಿಕ ಚಿಂತನೆಗಳನ್ನು ಹಿಂದಿಕ್ಕುತ್ತಾ ಬದುಕಿನ ನೈಜ ಚಿತ್ರಣವನ್ನು ಬಿಂಬಿಸುವ ನಿಟ್ಟಿನಲ್ಲಿ ಸಾಗಿದೆವು. ಅಂತಿಮವಾಗಿ ೧೫೦ ನಿಮಿಷಗಳಷ್ಟು ಸಿನಿಮಾವನ್ನು ತೆರೆಗೆ ಸಿದ್ದಗೊಳಿಸಲು ಸಜ್ಜಾದೆವು. ಆದರೆ ಆಗ ನಮಗೆ ಎದುರಾದ ಪ್ರಶ್ನೆ ಎಂದರೆ ನಮ್ಮ ಸಿನಿಮಾದ ಕಥೆ ಏನಾಗಿರುತ್ತದೆ? ಎಂಬುದು. ಈ ಬಗೆಗೆ ನಮ್ಮ ಮನದಲ್ಲಿ ದ್ವಂದ್ವ ಮೂಡತೊಡಗಿತು. ಪರಸ್ಪರ ಇಬ್ಬರಲ್ಲೂ ಸಿನಿಮಾ ಮೇಕಿಂಗ್ ಕುರಿತಾದ ವಿರೋಧಾಭಾಸಗಳು ಮೂಡತೊಡಗಿದವು. ಕೆಲವೊಮ್ಮೆ ನಾವು ಸಿನಿಮಾ ವಿಚಾರವಾಗಿ ಏನೇನೋ ತಪ್ಪು ಎಣಿಕೆ ಮಾಡಿದ್ದೀವೇನೊ ಎಂದು ಒಮ್ಮೊಮ್ಮೆ ಅನ್ನಿಸುತ್ತಿತ್ತು. ಯೋಗ್‌ರಾಜ್‌ಗೂ ಸಹ ಇದೇ ಆಲೋಚನೆ ಮೂಡುತ್ತಿದ್ದು, ನಾವಿಬ್ಬರೂ ಆ ಬಗ್ಗೆ ತುಲನೆ ಮಾಡಿ ಒಂದು ಒಮ್ಮತದ ಅಭಿಪ್ರಾಯಕ್ಕೆ ಬಂದೆವು.
ಸಿನಿಮಾ ನಿರ್ಮಾಣದ ಲೊಕೇಷನ್ ಬಗ್ಗೆ ಸಹ ಸಾಕಷ್ಟು ಯೋಚಿಸಿದೆವು. ಈ ರಾಜ್ಯದಲ್ಲೇ ಚಿತ್ರೀಕರಣ ಮಾಡಬೇಕೆಂದು ನಿರ್ಧರಿಸಿದೆವು. ನಮ್ಮ ಗ್ರಹಚಾರ ಕೆಟ್ಟು ಸಿನಿಮಾ ಮೇಕಿಂಗ್‌ನಲ್ಲಿ ಏನಾದರು ತೊಂದರೆಯಾಗುವುದೇ ಎಂಬ ಕೆಟ್ಟ ಆಲೋಚನೆಗಳೂ ಸಹ ಮನದಲ್ಲಿ ಮೂಡಿದ್ದುಂಟು! ಆದರೆ ತೆರೆಯ ಹಿಂದಿನ ನಟನಟಿಯರ ಉತ್ಸಾಹದ ನಡವಳಿಕೆಗಳು ನಮಗೆ ಚಿತ್ರೀಕರಣವನ್ನು ಸರಾಗವಾಗಿ ಸಾಗಿಸಬಹುದೆಂಬ ಭರವಸೆ ಮೂಡಿಸಿದವು. ಚಿತ್ರೀಕರಣವನ್ನು ಯಾವುದೇ ಅಡ್ಡಿಯಿಲ್ಲದಂತೆಯೇ ಅತಿಶೀಘ್ರವಾಗಿ ಮುಗಿಸಿದೆವು. ಮಂಗಳೂರಿನಲ್ಲೇ ೧೦೦ ನಿಮಿಷಗಳಷ್ಟು ಸಿನಿಮಾವನ್ನು ಚಿತ್ರೀಕರಿಸಿಕೊಂಡೆವು. ಇನ್ನೂ ಕೇವಲ ೩೦ ನಿಮಿಷಗಳಷ್ಟು ಚಿತ್ರದ ಉಳಿದಭಾಗವನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಬೇಕೆಂದು, ಆ ನಿಟ್ಟಿನಲ್ಲಿ ಅನುಸರಿಸಬೇಕಾದ ಕಾರ್ಯಯೋಜನೆಗಳ ಬಗೆಗೆ ರೂಪುರೇಷೆ ಹಾಕಿಕೊಂಡೆವು. ಆದರೆ ಆ ೧೦೦ ನಿಮಿಷಗಳ ಮೇಕಿಂಗ್ ಹೇಗೆ ಮೂಡಿಬಂದಿದೆ ಎಂದು ತಿಳಿಯುವ ಕುತೂಹಲದಿಂದ ಮಂಗಳೂರಿನಲ್ಲಿನ ದೃಶ್ಯೀಕರಣವನ್ನು ಸಂಕಲನಕ್ಕೆ ಒಳಪಡಿಸಿದೆವು. ಈ ಹಂತವು ‘ಪಂಚರಂಗಿ’ ಯ ಮುಂದಿನ ಬದಲಾವಣೆಯ ಬಗೆಗೆ ಚುರುಕಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಕ್ಷಿಯಾಯಿತು. ಜಯಂತ್ ಹಾಗೂ ಅವರ ಪುತ್ರ ಸಂಕಲನಗೊಂಡ ಸಿನಿಮಾದ ಭಾಗವನ್ನು ವೀಕ್ಷಿಸಿದರು. ಬಹಳಷ್ಟು ಖುಷಿಯಾಗಿಯೇ ಅವರಿಬ್ಬರು ಸಿನಿಮಾ ವೀಕ್ಷಿಸುತ್ತಾ ನಂತರ ಪರಸ್ಪರ ನಗತೊಡಗಿದರು. ಇದು ನಮಗೆ ಆಶ್ಚರ್ಯವನ್ನು ತಂದಿತ್ತು! ನಮ್ಮ ಭಾವನೆಯನ್ನು ಗ್ರಹಿಸಿದ ಜಯಂತ್ ನಾನೇನು ನಿಮ್ಮ ಕೆಲಸ ನೋಡಿ ಅಪಹಾಸ್ಯ ಮಾಡುತ್ತಿಲ್ಲ. ನೀವ್ ಏತಕ್ಕೆ ಇನ್ನೂ ೩೦ ನಿಮಿಷಗಳಷ್ಟು ಸಿನಿಮಾ ದೃಶ್ಯಗಳನ್ನು ಬಾಕಿ ಉಳಿಸಿಕೊಂಡಿದ್ದೀರಾ? ಅದರ ಅವಶ್ಯಕತೆ ಇದೆಯೇ" ಎಂದರು. ಅವರ ಮಗ ಹಾಗೂ ಸಂಕಲನಕಾರ ಸಹ ಇದೇ ಅಭಿಪ್ರಾಯವನ್ನು ನಮ್ಮ ಮುಂದಿಟ್ಟರು. ಅದಕ್ಕೆ ನಾನು ಮತ್ತು ಯೋಗ್ ಹೌದು ಆ ಉಳಿದ ೩೦ ನಿಮಿಷದ ದೃಶ್ಯಗಳು ಈ ಭಾಗಕ್ಕೆ ಒಂದು ಪೂರಕ ಆಯಾಮವನ್ನು ಒದಗಿಸುತ್ತದೆ ಎಂದು ಪ್ರತಿಕ್ರಯಿಸಿದೆವು. ಅದಕ್ಕೆ ಅವರು ಈ ೧೦೦ ನಿಮಿಷಗಳ ಕಥೆಯೇ ನಿಜಕ್ಕೂ ನಮಗೆ ಖುಷಿ ತಂದಿದೆ ಎಂದು ಹೇಳಿ ಅಲ್ಲಿಂದ ತೆರಳಿದರು.
ನಂತರ ನಾವು ಕಛೇರಿಯಲ್ಲಿ ಚಿತ್ರಕಥೆಯ ಬಗ್ಗೆ ಮತ್ತೆ ತಲೆಕೆಡಿಸಿಕೊಳ್ಳುತ್ತಾ ಕುಳಿತೆವು. ಆ ಮೊದಲ ಭಾಗದ ೧೦೦ ನಿಮಿಷಗಳಲ್ಲಿ ಸಿನಿಮಾವನ್ನು ನಿಜಕ್ಕೂ ಪರಿಣಾಮಕಾರಿಯಾಗಿ ನಿರೂಪಿಸಿದ್ದೇವೆಯೇ ಎಂಬ ಗೊಂದಲಗಳು ಎದುರಾದವು. ಇದೇ ಯೋಚನೆಯಲ್ಲಿ ಚಿತ್ರಕಥೆಯ ಉಳಿದ ಭಾಗದ ಕೆಲಸಗಳನ್ನು ಮುಗಿಸಿದೆವು. ಈ ಪ್ರಕ್ರಿಯೆ ಎಲ್ಲಾ ಮುಗಿದ ನಂತರ ನಮಗೆ ಅನಿಸಿದ ವಿಷಯವೆಂದರೆ ಒಂದು ಸಣ್ಣಕಥೆಯ ಎಳೆಯನ್ನು ಇಟ್ಟುಕೊಂಡು ಪಾತ್ರಗಳ ಪ್ರಸ್ತುತತೆಯ ಮುಖೇನ ಹಲವಾರು ಘಟನೆಗಳನ್ನು ಹೆಣೆದಿದ್ದೇವೆ. ಪ್ರೇಕ್ಷಕನಿಗೆ ಇದು ಖಂಡಿತವಾಗಿ ರಂಜನೆ ನೀಡಬಲ್ಲದು ಎಂದು. ಇಷ್ಟಕ್ಕೆ ಕೈ ಬಿಡಬಹುದೇ? ಸಿನಿಮಾ ನೋಡಿದ ಪ್ರೇಕ್ಷಕನಿಗೆ ಚಿತ್ರಕಥೆ ಅಪೂರ್ಣವಾಗಿದೆ ಎಂಬ ಭಾವನೆ ಮೂಡಬಹುದೇ? ಇಂಥಹ ಹಲವಾರು ಪ್ರಶ್ನೆಗಳು ಒಮ್ಮಿಂದೊಮ್ಮೆಲೆ ಹುಟ್ಟಿಕೊಂಡವು, ಹಾಗೆಯೇ ಮತ್ತೆ ಇನ್ನಷ್ಟು ದೃಶ್ಯಗಳನ್ನು ಚಿತ್ರೀಕರಿಸೋಣ ಎಂದುಕೊಂಡೆವು. ಅಂತಿಮವಾಗಿ ಈ ಎಲ್ಲಾ ವಿಚಾರಗಳು ಬಹಳಷ್ಟು ದಿನಗಳವರೆಗೆ ನನ್ನ ಮನವನ್ನು ಕಾಡುತ್ತಲೇ ಇದ್ದಿತು. ಆದರೂ ಸಹ ನಮ್ಮ ಪ್ರಯೋಗಾತ್ಮಕ ಸಿನಿಮಾವನ್ನು ಜನರ ಮುಂದಿಡೋಣ ಎಂದುಕೊಂಡು ಆ ಕಷ್ಟವನ್ನು ಎದುರಿಸಲು ಸಿದ್ದವಾದೆವು. ೪ ಹಾಡುಗಳನ್ನು ಹಾಗೂ ಕೆಲವು ದೃಶ್ಯಗಳನ್ನು ಸನ್ನಿವೇಷಕ್ಕೆ ತಕ್ಕಂತೆ ಜೋಡಿಸಿದೆವು. ಎಲ್ಲವೂ ಒಟ್ಟಾಗಿ ಕಲೆತು ಸುಮಾರು ೧೨೮ ನಿಮಿಷಗಳ ಸಿನಿಮಾ ಸಿದ್ದವಾಯಿತು. ಇದಾದ ನಂತರ ಯೋಗ್‌ರಾಜ್ ಹಾಗೂ ಸುಬ್ರಹ್ಮಣ್ಯ ಕಣ್ತುಂಬ ನಿದ್ದೆ ಮಾಡುವುದನ್ನೇ ಬಿಟ್ಟುಬಿಟ್ಟರು. ನಾನಂತೂ ಚಿತ್ರರಂಗವನ್ನೇ ಬಿಟ್ಟು ಪಲಾಯನಗೈಯ್ಯುವ ಯೋಚನೆಯನ್ನು ಮಾಡಿದೆ. ನನ್ನ ವಿದ್ಯಾರ್ಹತೆಗೆ ತಕ್ಕ ಯಾವುದಾದರೊಂದು ಉದ್ಯೋಗ ಸಿಕ್ಕರೆ ಸಾಕು ಸೇರಿಕೊಳ್ಳೋಣ ಎನಿಸಿಬಿಟ್ಟಿತು. ಏಕೆಂದರೆ ನಮ್ಮ ಈ ಪ್ರಯೋಗಾತ್ಮಕ ಸಿನಿಮವನ್ನು ಪ್ರೇಕ್ಷಕ ಪ್ರಭು ಒಪ್ಪಿಕೊಳ್ಳದಿದ್ದರೆ ಸಿನಿಮಾರಂಗದಲ್ಲಿ ನಮ್ಮ ವ್ಯಕ್ತಿತ್ವಕ್ಕೆ ಹಾಗೂ ಕೆಲಸಕ್ಕೆ ಸಂಚಕಾರ ಬರುವುದು ಎಂಬ ತೊಳಲಾಟಗಳು ಹೆಚ್ಚಾಗತೊಡಗಿದವು. ಹೀಗೆ ನಾವು ಯೋಚಿಸುತ್ತಿರುವಾಗಲೇ ಸಿನಿಮಾದ ಪ್ರಥಮಕಾಪಿ ಸಿದ್ದವಾಯಿತು. ಚಿತ್ರದ ಪ್ರೀಮಿಯರ್ ಶೋ ಸಹ ಶುರುವಾಗೇಬಿಟ್ಟಿತು. ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರೂ ಸಹ ಖುಷಿಪಟ್ಟರು. ಇಷ್ಟಾದರೂ ಸಹ ನನಗೆ ಏನೋ ಕಳವಳ ಮುಗ್ಧಮನದ ಪ್ರೇಕ್ಷಕ ನಿಜಕ್ಕೂ ಇದನ್ನು ಸ್ವೀಕರಿಸಿದ್ದಾನಾ? ಎಂದು. ಅದರ ಫಲಿತಾಂಶ ಏನೆಂಬುದು ನಿಮ್ಮ ಮುಂದಿರುವ ಅಂಶ. ಒಟ್ಟಾರೆ ಸಿನಿಮಾ ನನಗೆ ತೃಪ್ತಿ ತಂದಿದೆ.
ಈ ವಿಚಾರಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲು ಕಾರಣವೆಂದರೆ ಚಿತ್ರ ನೋಡಿದ ಮಂದಿ ಸಿನಿಮಾ ಚೆನ್ನಾಗಿದೆ ಎಂದರೂ ಸಹ ಬಹುತೇಕ ಮಂದಿ ಇದರಲ್ಲಿ ಕಥೆಯೇ ಇಲ್ಲ ಎಂದರು. ವಾಸ್ತವಿಕ ಸಂಗತಿ ಎಂದರೆ ಸಿನಿಮಾದಲ್ಲಿ ಕಥೆ ಇದೆ, ಜೀವನದ ಜಂಜಾಟದ ಒಳಗೆ ಸಿಲುಕಿ ನಿರಾಶವಾದಿತನ ಹೊಂದಿದಂತಹ ತಾತ್ವಿಕ ಮನೋಭಾವದ ನಾಯಕ, ಇದಕ್ಕೆ ವ್ಯತಿರಿಕ್ತ ಭಾವನೆಗಳ, ಸರಳ ನಡೆಯ ಆಶಾವಾದಿ ನಾಯಕಿ, ಇವರ ನಡುವಿನ ಪರಸ್ಪರ ಭೇಟಿಯ ಘಟನೆ, ಕಾಲೆಳೆಯುವ ಸನ್ನಿವೇಶ, ಇವರ ನಡುವಿನ ಆಕರ್ಷಣೆ, ನಾಯಕನ ವೇದಾಂತಿ ಭಾವನೆಗಳಿಗೆ ಸಲಹೆ ನೀಡುವ ನಾಯಕಿ-ಹೀಗೆ ಅನೇಕ ಗೊಂದಲಗಳಿಗೆ ಪರಿಹಾರವನ್ನು ಹುಡುಕುವ ರೀತಿಯ ಈ ಪಾತ್ರಗಳು ಸಹ ಕಥೆ ಹೊಂದಿಲ್ಲವೇ? ಏಕೆ ಕಥೆ ಎಂದರೆ ದೊಡ್ಡ ದೊಡ್ಡ ವಿಚಾರಗಳನ್ನೇ ಒಳಗೊಂಡಿರಬೇಕೆ? ಆದಷ್ಟು ಪಾತ್ರಗಳ ಪೋಷಣೆಯ ಮೂಲಕ ಕಥಾ ಹಂದರವನ್ನು ಬೆಳೆಸಿಕೊಂಡು ಹೋಗಿಲ್ಲವೇ? ನಾನೇನು ನನ್ನ ಕೆಲಸವನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಇದರಲ್ಲಿನ ಲೋಪದೋಷಗಳನ್ನು ಖಂಡಿತ ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಆದರೆ ನಾನು ಪ್ರೇಕ್ಷಕರ ಮುಂದಿಡುವ ಪ್ರಶ್ನೆ ಎಂದರೆ ಎಲ್ಲಾ ಚಲನಚಿತ್ರಗಳಲ್ಲೂ ಏಕೆ ಕಥೆಯೇ ಮುಖ್ಯವಾಗಿರಬೇಕೆಂಬ ಭಾವನೆ ಎಂಬುದು. ನನ್ನ ವೈಯಕ್ತಿಕ ಅಭಿಪ್ರಾಯ.
ನಾವು ಬಾಕಿ ಉಳಿದ ೩೦ ನಿಮಿಷಗಳೋಷ್ಟು ಕಥೆಯನ್ನು ಸೇರಿಸಿದ್ದರೆ ಪ್ರೇಕ್ಷಕರು ಚಿತ್ರದ ಮೊದಲ ಅರ್ಧ ಬೋರ್, ಉಳಿದ ಅರ್ಧ ಪರವಾಗಿಲ್ಲ ಎಂದೋ, ಮಾಮೂಲಿಯಾಗೇ ನಾಯಕ ನಾಯಕಿ ತಮ್ಮ ಪ್ರೀತಿಯನ್ನು ಕಳೆದುಕೊಳ್ಳುತ್ತಾರೆ ಮತ್ತೆ ಒಂದಾಗುತ್ತಾರೆ ಎಂಬಂಥಹ ಸಾಮಾನ್ಯ ಸಂಗತಿಗಳನ್ನೇ ಬಿಚ್ಚಿಡುತ್ತಿದ್ದರು. ಆದರೆ ಈಗ ನಮ್ಮ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಮ್ಮ ವಿನಂತಿ ಎಂದರೆ ಎಲ್ಲಾ ಮಂದಿಯು ನಮ್ಮ ಸಿನಿಮಾ ನೋಡಿ ಆನಂದಿಸಿ ಅದರಲ್ಲಿ ಅಡಕವಾಗಿರುವ ತಾತ್ವಿಕ ವಿಚಾರಗಳನ್ನು ಅವಲೋಕಿಸಿ, ನಗುವ ಸನ್ನಿವೇಷದಲ್ಲಿ ಮನತುಂಬಿ ನಗಿ. ‘ಪಂಚರಂಗಿ’ಯಲ್ಲಿನ ಪ್ರಯೋಗಾತ್ಮಕತೆಯಲ್ಲಿ ಕಥೆಯನ್ನು ಹುಡುಕುವ ಪ್ರಯತ್ನ ಮಾಡಬೇಡಿ. ಈ ಸಿನಿಮಾದ ಮೂಲಕ ನಾವು ವಾಸ್ತವಿಕವಾಗಿ ನಮ್ಮ ಬದುಕು ಹೇಗಿದೆ ಎಂಬುದನ್ನು ವಿಶ್ಲೇಷಿಸುವುದಷ್ಟೇ ನಮ್ಮ ಉದ್ದೇಶ. ಸಿನಿಮಾಗೆ ಕಥೆಯೇ ಪ್ರಮುಖ ಎಂಬ ವಿಚಾರಕ್ಕೆ ಜೋತು ಬೀಳಬೇಡಿ ಎಂದು ಹೇಳುತ್ತಿದ್ದೇನೆ. ಆದರೆ ಮಾನವನ ಬದುಕು ಹೀಗೇನೇ... ನಮಗೆ ಯಾವುದು ಸಿಗಲಾರದೋ ಅದನ್ನು ಪಡೆಯಲು ಹುಡಕಾಟ: ಲೈಫು ಇಷ್ಟೇನೆ!
ಸುಲೋಚನ ಜಿ ಎಸ್ ಹೆಗ್ಗೆರೆ ೨೨-೧೦-೨೦೧೦
|
|