ಐವತ್ತು ದಿನಗಳನ್ನು ಪೂರೈಸಿ ನೂರನೆಯ ದಿನದೆಡೆಗೆ ದಾಪುಗಾಲು ಹಾಕುತ್ತಿರುವ ಯಶಸ್ವೀ ಚಿತ್ರ `ಪಂಚರಂಗಿ’ ಕುರಿತಾದ ಸಂವಾದ ಜನಪ್ರಿಯ ಚಿತ್ರಗಳ ಕುರಿತ ಅಕಾಡೆಮಿಕ್ ಶಿಸ್ತಿನ ಸಂವಾದಗಳ ಕುರಿತು ಚರ್ಚೆಯನ್ನು ದೊಡ್ಡ ಪ್ರಮಾಣದಲ್ಲಿ ಹಾಕಿಕೊಡುವುದರ ಜೊತೆಗೆ ಅರ್ಥಪೂರ್ಣವಾಗಿ ಮೂಡಿ ಬಂದಿತು.
ಹೋಟೆಲ್ ಅಡಿಗ ರೆಸಿಡೆನ್ಸಿ ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಚಿತ್ರ ನಿರ್ಮಾಪಕರಾದ ಸುಬ್ರಹ್ಮಣ್ಯ.ಎಂ, ನಿರ್ದೇಶಕ ಯೋಗರಾಜ್ ಭಟ್, ನಾಯಕ ದಿಗಂತ್ ಸೇರಿದಂತೆ ಚಿತ್ರದ ಬಹುತೇಕ ತಾರಾಗಣ ಉಪಸ್ಥಿತವಿತ್ತು.
ಸಂವಾದದ ಮೊದಲ ಭಾಗದಲ್ಲಿ ಚಿತ್ರತಂಡದೊಂದಿಗೆ ಪ್ರೇಕ್ಷಕರು ಮುಕ್ತವಾದ ಮಾತುಕತೆಯನ್ನು ನಡೆಸಿದರು. ಸಿನೆಮಾದಲ್ಲಿ ನಾಯಕಿ ನಿಧಿ ಸುಬ್ಬಯ್ಯ ಹೆಣ್ಣು ನೋಡಲು ಬಂದ ಮನೆಯವರ ಎದುರು ತುಂಡು ಚಡ್ಡಿಯನ್ನು ತೊಟ್ಟುಕೊಂಡು ಓಡಾಡುವುದು ಸಮಂಜಸವೇ ಎನ್ನುವ ಪ್ರಶ್ನೆಯಿಂದ ಹಿಡಿದು ಯೋಗರಾಜ್ ಭಟ್ಟರು ಆಫ್ ಬೀಟ್ ಸಿನೆಮಾಗಳತ್ತ ಹೊರಳುವ ಮನಸ್ಸು ಮಾಡುವರೇ ಎನ್ನುವವರೆಗೆ ವೈವಿಧ್ಯಮಯವಾದ ಪ್ರಶ್ನೆಗಳನ್ನು ಪ್ರೇಕ್ಷಕರು ಉತ್ಸಾಹದಿಂದ ಕೇಳುತ್ತಿದ್ದರು. ತಮ್ಮ ಸಿನೆಮಾ ಬಗ್ಗೆ ಎಂದಿನಂತೆ ಉಡಾಫೆಯಲ್ಲಿ ಮಾತನಾಡಿದ ಭಟ್ಟರು ಪ್ರೇಕ್ಷಕರ ಪ್ರಶ್ನೆಗಳಿಗೆ ಒಂದು ಅಥವಾ ಎರಡು ಪದಗಳ ಉತ್ತರವನ್ನು ನೀಡುತ್ತಿದ್ದಾಗ ಭಟ್ಟರು ವಿಸ್ತೃತವಾಗಿ ಮಾತನಾಡಬೇಕು, ಕನಿಷ್ಠ ಪಕ್ಷ ಒಂದೆರಡು ವಾಕ್ಯಗಳ ಉತ್ತರವನ್ನಾದರೂ ಪ್ರೇಕ್ಷಕರಿಗೆ ನೀಡಬೇಕು ಎನ್ನುವ ಆಗ್ರಹ ಪ್ರೇಕ್ಷಕರಿಂದಲೇ ವ್ಯಕ್ತವಾಯಿತು. 
ಸಿನೆಮಾ ನೋಡಿ ಬಂದ ಗುಂಗಿನಲ್ಲಿರುವ, ತಮ್ಮ ಮೆಚ್ಚಿನ ತಾರಾಗಣದೊಂದಿಗೆ, ಚಿತ್ರತಂಡದೊಂದಿಗೆ ಮುಖಾಮುಖಿಯಾದ ಉದ್ವೇಗದಲ್ಲಿದ್ದ ಪ್ರೇಕ್ಷರು ಸಹಜವಾಗಿ ಸಿನೆಮಾ ಕುರಿತಾದ ತಮ್ಮ ಪ್ರೀತಿ, ಮುನಿಸುಗಳನ್ನು ವ್ಯಕ್ತಪಡಿಸಿದರು. ಹಿಂದಿನ ಸಂವಾದಗಳಲ್ಲಿ ಆದಂತೆ ಚಿತ್ರ ಕತೆಯ ಕುರಿತ, ಪಾತ್ರಗಳ ವರ್ತನೆಯ ಕುರಿತ ಚರ್ಚೆಯು ಹೆಚ್ಚಾಗಿ ನಡೆಯಲಿಲ್ಲ. ವೇದಿಕೆಯ ಮೇಲೆ ಏಳೆಂಟು ಮಂದಿ ಕಲಾವಿದರು ಕುಳಿತಿದ್ದರೂ ಪಾತ್ರಗಳ ಕುರಿತು ಮಾತುಕತೆ ಬೆಳೆಯಲಿಲ್ಲ. ಪತಂಗಗಳನ್ನು ಆಕರ್ಷಿಸುವ ದೀಪದ ಹಾಗೆ ಯೋಗರಾಜ ಭಟ್ಟರು ಅಲ್ಲಿ ಗಮನದ ಕೇಂದ್ರ ಬಿಂದುವಾದದ್ದು ಬಹುಶಃ ಇದಕ್ಕೆ ಕಾರಣವಿರಬೇಕು. ತಮ್ಮದೇ ಸಿನೆಮಾ ಕುರಿತು ತಾವು ಮಾತನಾಡುವುದಕ್ಕೆ ಸ್ವಭಾವತಃ ಭಟ್ಟರಿಗೆ ಆಸಕ್ತಿ ಇಲ್ಲದಿರಬಹುದು. ಆದರೆ ಈ ಮಟ್ಟಿಗಿನ ಯಶಸ್ಸನ್ನು ಕಂಡ ಸಿನೆಮಾ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾಗಿಯಾದ ಉಳಿದ ಕಲಾವಿದ, ತಂತ್ರಜ್ಞರಿಗೆ ಮಾತನಾಡುವ ಹುಮ್ಮಸ್ಸು ಇದ್ದಿರಬಹುದು ಎನ್ನುವ ಸಾಧ್ಯತೆಗೂ ಭಟ್ಟರು ಗಮನ ಕೊಡದೆ ಇದ್ದುದರಿಂದ ಸಂವಾದಕ್ಕೆ ಇಡೀ ತಂಡ ತೆರೆದುಕೊಳ್ಳಲು ಸಾಧ್ಯವಾಗಲಿಲ್ಲ.
ಯೋಜನೆಯಂತೆ ಸಂವಾದದ ಎರಡನೆಯ ಭಾಗವನ್ನು ಚಿತ್ರವನ್ನು ಕುರಿತ ಅಕಾಡೆಮಿಕ್ ಚರ್ಚೆಗಾಗಿ ಮೀಸಲಿಡಲಾಗಿತ್ತು. ಜನಪ್ರಿಯವಾದ, ಗಾಂಧಿನಗರದ ಪರಿಭಾಷೆಯಲ್ಲಿ ವ್ಯಾಪಾರಿ ಚಿತ್ರಗಳು ಎಂದು ಕರೆಸಿಕೊಳ್ಳುವ ಚಿತ್ರಗಳನ್ನು ಕುರಿತು ಅಕಾಡೆಮಿಕ್ ಆದ ಶಿಸ್ತಿನಲ್ಲಿ ಚರ್ಚೆಯನ್ನು ನಡೆಸಬೇಕು. ಚಿತ್ರಗಳ, ಕಲಾವಿದರ ಕುರಿತು ಪಠ್ಯವನ್ನು ಅಂತರ್ಜಾಲದಲ್ಲಿ ಪ್ರಕಟಿಸಿ ಚಿತ್ರರಂಗಕ್ಕೊಂದು ಛಾಪು ಮೂಡಿಸುವ ಅವಕಾಶವನ್ನು ಒದಗಿಸಿಕೊಡಬೇಕು ಎನ್ನುವ ಸಂವಾದದ ಉದ್ದೇಶಕ್ಕೆ ಪೂರಕವಾಗಿ ಈ ಭಾಗದಲ್ಲಿ ಚಿತ್ರತಂಡವನ್ನು ಇರುಸು ಮುರುಸು ಮಾಡಬಲ್ಲ ಪ್ರಶ್ನೆಗಳಿಗೆ ಈಡು ಮಾಡಿ ಅವರೊಳಗಿನ ಸತ್ವವನ್ನು ಹೊರತೆಗೆಯುವುದು ನಮ್ಮ ಪ್ರಯತ್ನವಾಗಿತ್ತು. ಪ್ರೇಕ್ಷಕರು ಹಾಗೂ ಚಿತ್ರತಂಡ ಪರಸ್ಪರ ಬೆನ್ನು ಕೆರೆಯುವ ಕೆಲಸವನ್ನು ತುಸು ಕೈಬಿಟ್ಟು ಸಿನೆಮಾವನ್ನು ಗ್ರಹಿಸುವ ವಿಧಾನವನ್ನು ಚರ್ಚಿಸುವ ಕೆಲಸ ಮಾಡಬೇಕು, ಇದಕ್ಕೆ ತುಸು ಬೋರೆನಿಸಿದರೂ ಗಂಭೀರವಾದ ಡಿಬೇಟ್ ಅಗತ್ಯವಾಗುವುದು.
ಚಿತ್ರ ತಂಡ ಹಾಗೂ ಸಂವಾದ ಡಾಟ್ ಕಾಮ್ ನ ಆಯೋಜಕರ ನಡುವಿನ ಭಿನ್ನಾಭಿಪ್ರಾಯ ಹಾಗೂ ಅಸಹಕಾರದಿಂದಾಗಿ ಚಿತ್ರದ ಕುರಿತಾಗಿ ಗಂಭೀರವಾದ ಚರ್ಚೆ ಶುರುವಾಗಲೇ ಇಲ್ಲ. ಸಿನೆಮಾವನ್ನು ಥಿಯೇಟರುಗಳಲ್ಲಿ ನೋಡಿ ಬಂದ ಪ್ರೇಕ್ಷಕನಿಂದ ಕೇವಲ ಅಭಿನಂದನೆಗಳನ್ನು ನಿರೀಕ್ಷಿಸುವ ಮೂಡಿನಲ್ಲಿದ್ದ ಚಿತ್ರ ತಂಡ ಚಿತ್ರದ ಕುರಿತಾದ ಗಂಭೀರ ಚರ್ಚೆ ನಡೆಸಬಹುದಾದ ಸಾಧ್ಯತೆಯನ್ನು ಗಂಭೀರವಾಗಿ ಕಾಣಲಿಲ್ಲ. ಚಿತ್ರದ ಬಗ್ಗೆ ಗಂಭೀರವಾಗಿ ಮಾತನಾಡಲು ಮುಂದಾದ ಪ್ರೇಕ್ಷಕರನ್ನೂ
ಉಡಾಫೆಯಿಂದ ಕಾಣಲಾಯ್ತು. ಇದರಿಂದಾಗಿ ಮೇಲ್ನೋಟಕ್ಕೆ ಚರ್ಚೆ ಹಾದಿಯನ್ನು ತಪ್ಪಿದಂತೆ ಭಾಸವಾದರೂ ಚಿತ್ರ ತಂಡಕ್ಕೆ ಹಾಗೂ ಸಂವಾದದಲ್ಲಿ ಭಾಗವಹಿಸಿದ ಪ್ರೇಕ್ಷಕರಿಗೆ ಸಂವಾದವೊಂದರ ಸಾಧ್ಯತೆಗಳು, ಸಂವಾದ ನಡೆಯಬೇಕಾದ ರೀತಿ, ಸಿನೆಮಾ ಗ್ರಹಿಸುವ ಬೌದ್ಧಿಕತೆಯಲ್ಲಿ ಪ್ರೇಕ್ಷಕನಿಗೂ ನಿರ್ದೇಶಕನಿಗೂ ಇರುವ ಅಂತರ, ಸಿನೆಮಾವನ್ನು ಒಂದು ಕೃತಿಯಾಗಿ ಪರಿಗಣಿಸಿ ಚರ್ಚೆಗೆ ಇಟ್ಟುಕೊಂಡಾಗ ಅನಿವಾರ್ಯವಾಗಿ ಪಕ್ಕಕ್ಕೆ ಸರಿಸಬೇಕಾದ ನಿರ್ದೇಶಕ, ನಾಯಕ ನಟರ ಪ್ರಸಿದ್ಧಿ, ಜನಪ್ರಿಯತೆ ಮೊದಲಾದ ಅಂಶಗಳನ್ನು ಕುರಿತು ಅರಿವನ್ನಂತೂ ಹುಟ್ಟು ಹಾಕಿತು.
`ಪಂಚರಂಗಿ’ ಚಿತ್ರದ ಕುರಿತ ಯಶಸ್ವಿ ಸಂವಾದದಿಂದಾಗಿ ಕನ್ನಡದ ಸಿನೆಮಾ ಪ್ರೇಕ್ಷಕ ಹೆಚ್ಚು ಪ್ರಜ್ಞಾವಂತನಾಗಿ ಪ್ರತಿಕ್ರಿಯಿಸಬಲ್ಲ ಹಾಗೂ ಪ್ರತಿಕ್ರಿಯಿಸಲು ಬಯಸುತ್ತಾನೆ ಎನ್ನುವುದು ಚಿತ್ರ ನಿರ್ಮಾಪಕ, ನಿರ್ದೇಶಕರುಗಳ ಗಮನಕ್ಕೆ ಬಂದಿತು ಎಂದು ಹೇಳಬಹುದು. ಇದರಿಂದ ಒಟ್ಟಾರೆಯಾಗಿ ಹೆಚ್ಚು ಪ್ರಜ್ಞಾಪೂರ್ವಕವಾದ ಕೆಲಸಗಳು ಕನ್ನಡ ಸಿನೆಮಾ ರಂಗದಲ್ಲಿ ಆಗುವವು ಎಂದು ಆಶಿಸಬಹುದು.
01-11-2010