ಮತ್ತೊಂದು ‘ನವಿಲ ನರ್ತನ’ ವನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು! ಹೌದು!! ಈ ತಿಂಗಳ ದಿನಾಂಕ ೨೪ ಹಾಗು ೨೫ ರಂದು ಹಾಸನ ಹಾಗು ಸಕಲೇಶಪುರದಲ್ಲಿ ಕ್ರಮವಾಗಿ ಪ್ರದರ್ಶನಗೊಂಡ ‘’ ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡ ಪ್ರೇಕ್ಷಕರು, ತುಂಬು ಹೃದಯದಿಂದ ಪ್ರಶಂಶಿಸಿದರು. ಅಂದು ನನಗಾದ ಅನುಭವ ಬರೆಯುವ ಮುನ್ನ. ಈ ಚಿತ್ರವನ್ನು ಅಲ್ಲಿಗೆ ತಲುಪಿಸಲು ಕಾರಣರಾದ ಸಂವಾದ ಡಾಟ್ ಕಾಂನ ರವಿ ಅರೇಹಳ್ಳಿ, ಕನ್ನಡಸಾಹಿತ್ಯ ಡಾಟ್ ಕಾಂನ ಮುಖ್ಯಸ್ಥರಾದ ಶೇಖರ್ ಪೂರ್ಣ, ಚಿತ್ರ ಪ್ರದರ್ಶನವನ್ನು ಅಚ್ಚುಕಟ್ಟಾಗಿ ನಡೆಸಿದ ಹಾಸನದ ರೋಟರಿ ಕ್ವಾಂಟದ ರವಿಕುಮಾರ್ ಮತ್ತು ರೋಟರಿಯ ಇತರ ಗೆಳೆಯರು, ನಾವು ಬೆಂಗಳೂರಿಗೆ ಹಿಂತಿರುಗುವವರೆಗೂ ನಮ್ಮ ಯೋಗ ಕ್ಷೇಮವನ್ನು ವಿಚಾರಿಸಿಕೊಂಡ ಹಾಸನದ ವಕೀಲ ಮಿತ್ರರಾದ ಜಿತೇಂದ್ರ ಹಾಗು ಸಕಲೇಶಪುರದ ಮಕ್ಕಿ ತಿಟ್ಟದ ಮಾಲಿಕ ತೇಜ್‌ಪಾಲ್ ರವರನ್ನು ನೆನೆಸಿಕೊಳ್ಳಲೇಬೇಕು.
ಹಾಸನದಲ್ಲಿ ಸಂಜೆ ಆರು ಗಂಟೆಗೆ ಚಿತ್ರದ ಪ್ರದರ್ಶನ ಎಂದು ಗೊತ್ತು ಮಾಡಲಾಗಿತ್ತು. ಅದರಂತೆಯೆ ರೋಟರಿ ಕ್ವಾಂಟದ ಡಾ||ರವಿಕುಮಾರ್‌ರವರು ಉದ್ಘಾಟಣಾ ಭಾಷಣ ಮಾಡಿ ಪ್ರದರ್ಶನಕ್ಕೆ ಚಾಲನೆ ನೀಡಿದರು. ಸಭಾಂಗಣ ಭರ್ತಿಯಾಗಿ ಅನೇಕರು ಬೇರೆ ಕುರ್ಚಿಗಳನ್ನು ತಂದದ್ದಲ್ಲದೆ ಮತ್ತೆ ಕೆಲವರು ನಿಂತುಕೊಂಡೆ ವೀಕ್ಷಿಸಿದರು. ಚಿತ್ರಮುಗಿಯುವ ವರೆಗೆಯಾರೂ ಕದಡಲಿಲ್ಲ! ಚಿತ್ರ ಮುಗಿದ ನಂತರ ಜೋರು ಚಪ್ಪಾಳೆಯನ್ನು ಸಿಡಿಸಿದರು!
ಪ್ರದರ್ಶನದ ನಂತರ ನಡೆದ ಸಂವಾದವು ಹಿಂದೆ ನಡೆದಂತಹ ಎಲ್ಲಾ ಸಂವಾದಗಳಿಗಿಂತ ವಿಭಿನ್ನವಾಗಿ ಮೂಡಿಬರಲು ಕಾರಣ ಅಲ್ಲಿ ಸಾಮಾನ್ಯ ಪ್ರೇಕ್ಷಕರ ಜೊತೆ ಅನೇಕ ಸ್ಥಳೀಯ ಲೇಖಕರು ಕೂಡ ಹಾಜರಿದ್ದರು. ಆರಂಭದಲ್ಲಿ ಶೇಖರಪೂರ್ಣ ರವರು ಒಳ್ಳೆಯ ಸಂವಾದ ನಡೆಯಲು ವಿಧಿಸಿಕೊಳ್ಳಬೇಕಾದ ಕೆಲವು ಶರತ್ತು ವಿಧಿಸಿಕೊಳ್ಳಬೇಕಾಗಿದೆ ಎಂದು ಹೇಳಿದಾಗ ಕೆಲವರು ಅದನ್ನು ಒಪ್ಪದಿದ್ದರೂ ನಂತರ ಅವರೂ ಕೂಡ ಎಲ್ಲರಲ್ಲಿ ಬೆರೆತು ಹೋದರು!
ಸಿನಿಮಾದಲ್ಲಿ ತೊಡಗಿಸಿಕೊಂಡವರು ಅಲ್ಲಿ ವಿರಳರಾಗಿದ್ದರಿಂದ ತಾಂತ್ರಿಕ ಪ್ರಶ್ನೆಗಳಿಗಿಂತ ಚಿತ್ರದಲ್ಲಿನ ಪಾತ್ರಗಳ ಮೇಲೆ ಹೆಚ್ಚು ಪ್ರಶ್ನೆಗಳು ಮೂಡಿದವು. ಪೋಲೀಸ್ ಅಧಿಕಾರಿಯ ಪಾತ್ರದ ಮೇಲೆ ಮೂಡಿದ, ಪ್ರಶ್ನೆಗೆ ಆತ ಈ ಸಮಾಜದ ವ್ಯವಸ್ಥೆಯಲ್ಲಿ ಬಂಧಿತರಾದ ಅನೇಕ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಪ್ರತಿಬಿಂಬ ಎಂದು ತಿಳಿದಾಗ ಅನೇಕರು ಮರುಗಿದರು. ಈ ನಡುವೆ ನಮ್ಮ ದೇಶದಲ್ಲಿ ಧರ್ಮಾಂಧತೆಯಿಂದ ಉಂಟಾಗುತ್ತಿರುವ ವಿದ್ಯಮಾನಗಳ ಮೇಲೆ ಮಾತು ಸರಿಯಿತು.
ಇದರ ನಡುವೆ ಲೇಖಕಿ ಭಾನು ಮುಷ್ತಾಕ್‌ರವರು ಚಿತ್ರದಲ್ಲಿನ ತಾಯಿ ಪಾತ್ರದ ನೋವು-ತೊಳಲಾಟ ಜಾತಿ ಧರ್ಮವನ್ನು ಮೀರಿದ್ದು ಎಂದು ಹೇಳುತ್ತ ಭಾರತದ ಅಲ್ಪಸಂಖ್ಯಾತರಿಗೆ ಉಂಟಾಗುತ್ತಿರುವ ನೋವನ್ನು ತಮ್ಮ ಜೀವನದ ಘಟನೆಯ ಉದಾಹರಣೆಯಿಂದ ಹೇಳಿದಾಗ ಅಲ್ಲಿ ನೆರೆದಿದ್ದ ಎಲ್ಲರ ಎದೆ ಭಾರವಾಯಿತು. ಮತ್ತೊಬ್ಬರು ಮೈಮ್ ಕಲೆ ಉಪಯೋಗಿಸಿ ಮಾಡಿದ ಹಾಡಿನಲ್ಲಿ ನಾಯಕಿ ಅತ್ತಾಗ ಅವಳ ಮುಖದ ಮೇಲಿನ ಕೆಂಪು ಬಣ್ಣವು ಕಣ್ಣೀರಿನಲ್ಲಿ ಬೆರೆತು ರಕ್ತ ಕಣ್ಣೀರಾಗಿ ಕಾಣಿಸುತ್ತದೆ ಎಂದಾಗ ನಿರ್ದೇಶಕರ ಮುಖದಲ್ಲಿ ತಾವು ಮಾಡಿದ ಕೆಲಸವು ಸಾರ್ಥಕವಾದ ಭಾವನೆ ಮೂಡಿತು.
ಎಲ್ಲವೂ ಸುಗಮವಾಗಿ ನಡೆದ ಕಾರಣ ಗಂಟೆ ಹನ್ನೊಂದು ಆಗಿದ್ದು ತಿಳಿಯಲೇ ಇಲ್ಲ! ಊಟ ಮುಗಿಸಿ ೧೨ ಗಂಟೆಗೆ ಸಕಲೇಶಪುರದತ್ತ ಹೊರಟೆವು. ಅಲ್ಲಿಂದ ಮತ್ತೊಂದು ಸಂವಾದ ನಿರೀಕ್ಷಿಸಿದ್ದ ನಾವು ಸಾಹಸಕಾರ‍್ಯವೊಂದನ್ನು ಕೂಡ ಮಾಡಬೇಕಾಯಿತು! ನಾವು ಚಲಿಸುತ್ತಿದ್ದ ಕಾರು ಇನ್ನು ಅರ್ಧ ಕಿಲೊಮೀಟರ್ ಇರುವಾಗ ದಾರಿ ತಪ್ಪಿ ಕೆಸರಿನಲ್ಲಿ ಹೂತುಕೊಂಡಿತು. ಅದರಿಂದ ಹೊರ ತಗೆಯಲಾಗದೆ, ತೆಗೆದರೂ ಹಿಂದೆ ತಿರುಗಿಸಲಾಗದಂತಹ ಪರಿಸ್ಥಿತಿಯಲ್ಲಿ ಇದ್ದಾಗ ನಾವು ತಂಗಬೇಕಾಗಿದ್ದಂತಹ ಮಕ್ಕಿ ತಿಟ್ಟ ಮನೆಯಿಂದ ಬಂದ rescue teamನ ತೇಜ್‌ಪಾಲ್‌ರವರು ನಮ್ಮನ್ನು ಹಾಗು ಕಾರನ್ನು ಅಲ್ಲಿಂದ ಬಿಡಿಸಿ ಕರೆದುಕೊಂಡು ಹೋದಾಗ ಮಧ್ಯರಾತ್ರಿ ೨.೩೦ ಮುಗಿದಿತ್ತು!
ರಾತ್ರಿಯ ಘಟನೆಯಿಂದ ದಣಿದು ಎಷ್ಟೇ ಪ್ರಯತ್ನಿಸಿದರೂ ಸೂರ್ಯೋದಯವನ್ನು ನೋಡಲು ಆಗಲಿಲ್ಲ. ಆದರೂ ಎಷ್ಟು ಸಾಧ್ಯವೋ ಅಷ್ಟು ಜಾಗವನ್ನು ನೋಡಬೇಕೆಂದು ಹೊರಟೆವು. ಅಲ್ಲಿ ಕಣ್ಣಿಗೆ ರಾಚುತ್ತಿದ್ದ ಹಸಿರು ಬೆಟ್ಟಗಾಡುಗಳು, ಹೊಳೆ-ಜಲಪಾತಗಳು ನಮ್ಮ ಕಾಂಕ್ರೀಟ್ ಕಾಡನ್ನು ಏಕತಾನತೆಯನ್ನು ಮರೆಸುವಷ್ಟು ಮೈಮರೆಸಿದವು.
ಬೆಳಿಗ್ಗೆ ೧೧.೩೦ಕ್ಕೆ ಪ್ರದರ್ಶನ ಏರ್ಪಟ್ಟಿತು. ಅಲ್ಲಿ ಪ್ರೊಜೆಕ್ಟರನ್ನು ಬಾಡಿಗೆಗೆಗೆ ಹೊರಗಡೆಯಿಂದ ತಂದಿದ್ದರಿಂಡ ಕೆಲವು ತಾಂತ್ರಿಕ ತೊಂದರೆಗಳಾಗಿ ಎರಡು ಭಾರಿ ಪ್ರದರ್ಶನದ ವೇಳೆ ತೊಡಕಾಯಿತು. ಆದರೂ ಆ ಜನಗಳು ಯಾವುದೇ ಕಿರಿಕಿರಿ ಮಾಡಿಕೊಳ್ಳದೆ ತಾಳ್ಮೆಯಿಂದ ನೋಡಿದರು. ಅಲ್ಲೆ ವ್ಯವಸ್ಥೆಯಾಗಿದ್ದ ಊಟ ಸವಿದು ಮತ್ತೆ ಸಂವಾದಕ್ಕೆ ಕೂತರು.
ಆ ಜನರಿಗೂ ಹಾಗು ಅವರ ಜೊತೆ ಇದ್ದ ನಮಗೂ ಅಲ್ಲಿ ಹೊಸ ಅನುಭವವೇ ಮೂಡಿಸಿತು. ಅವರಿಗೆ ಏನು ಅನ್ನಿಸಿತೋ ಅದನ್ನು ಪ್ರಾಮಾಣಿಕವಾಗಿ ತೋರ್ಪಡಿಸಿದರು. ಅಲ್ಲಿನ ಕಾರ‍್ಯವೈಖರಿಯು ನಮ್ಮ ನಿರ್ದೇಶಕರಿಗೆ ಹಲವಾರು ಹೊಸ ಆಲೋಚನೆ ಮೂಡಿಸಿದವು. ನಾವು ಅಂದುಕೊಂಡದ್ದಕ್ಕಿಂತ ಆ ಜಾಗದ ವೀಕ್ಷಣೆ ತುಂಬ ಕಡಿಮೆಯಾಗಿತ್ತು . ಆದರೆ ರಾತ್ರಿಯೊಳಗೆ ಬೆಂಗಳೂರು ತಲುಪಬೇಕಿದ್ದ ಕಾರಣ ೪ ಗಂಟೆಗೆ ಬಾರದ ಮನಸ್ಸಿನಿಂದ ಹಿಂತಿರುಗಿದೆವು.
ಎಷ್ಟೇ ದೊಡ್ಡ ಸಿನಿಮಾ ಮಾಡಿದರೂ ಸಿಗದಂತಹ ನವಿರಾದ ಅನುಭವ ಈ ಮೂಲಕ ಒದಗಿತು! ಈ ಅನುಭವಕ್ಕೆ ಕಾರಣರಾದ ಎಲ್ಲರೂ ತಂಡದವರ ಮನಸ್ಸಿನಲ್ಲಿ ಸದಾಕಾಲ ಉಳಿಯುವರು.