ಒಂದು ಚಿತ್ರದ ನಿರ್ದೇಶಕನಾಗಿ (ನವಿಲಾದವರು), ನನಗೆ ತುಂಬ ಕಾಡಿದ ಸಮಸ್ಯೆಗಳಲ್ಲಿ ಒಂದು, ಹೊಸತನವನ್ನು ಒಪ್ಪದ ಮಡಿವಂತಿಕೆ. ನಾನು ಮೂವತ್ತೈದು ಸಾವಿರದಲ್ಲಿ ಸಿನಿಮಾ ಮಾಡಲು ನಿರ್ಧರಿಸಿದಾಗ, ನನಗೆ ಅತ್ಯಂತ ಸೂಕ್ತ ಮಾರ್ಗ ಅನಿಸಿದ್ದು, ಡಿಜಿಟಲ್ ಮೂಲಕ ನನ್ನ ಕನಸನ್ನು ಸಾಕಾರಗೊಳಿಸುವುದು. ಇವತ್ತು ಇಡೀ ವಿಶ್ವ ಡಿಜಿಟಲ್ ಆಗುತ್ತಿರುವಾಗ, ನಾವು ಇನ್ನೂ ರೀಲ್ ಬಳಸುತ್ತಿದ್ದೇವೆ. ರೀಲ್ ಮತ್ತು ಡಿಜಿಟಲ್ ಮಧ್ಯದ ಡಿಸ್ಕಷನ್ ಈ ಲೇಖನ ಅಲ್ಲದಿರುವುದರಿಂದ, ನಾನು ಆ ವಿಷಯದ ಕುರಿತು ಮಾತಾಡಲ್ಲ. ನನಗೆ ಸಿನಿಮ ಮಾಡಬೇಕಾದರೆ ಡಿಜಿಟಲ್‌ನ ಸಹಾಯ ಅನಿವಾರ್ಯವಾಗಿ ಪಡೆಯಬೇಕಾಯಿತು. ಆಗ ನೆಟ್ಟಿನಲ್ಲಿ, ಮತ್ತು ಎಷ್ಟೋ ಕ್ಯಾಮೆರಾಮ್ಯಾನಗಳ ಹತ್ತಿರ ವಿಷಯ ಸಂಗ್ರಹಿಸಿದಾಗ, ನನಗೆ ಅಚ್ಚರಿ ಕಾದಿತ್ತು. ನಾವು ARRI 3 ಮತ್ತು Super 16 ಕ್ಯಾಮೆರಾ ಬಳಸಬೇಕಾದರೆ ನಮಗೆ 2ಕೆ ರೆಸಲ್ಯೂಷನ್ ಸಿಗುತ್ತದೆ. ಅಷ್ಟೇ ರೆಸಲ್ಯೂಷನ್ ನಮಗೆ Sony D-೨೦ಎಂಬ ಡಿಜಿಟಲ್ ಕ್ಯಾಮೆರಾದಲ್ಲೂ ಸಿಗುತ್ತದೆ.
ನಾನೀ ವಿಷಯವನ್ನು ನಮ್ಮ ಇಂಡಸ್ಟ್ರೀಯ ತಂತ್ರಜ್ಞರಿಗೆ ಹೇಳಿದಾಗ, ಅವರು ಬರಬಹುದು ಆದರೆ ಬೆಳಕಿನ ಸಮಸ್ಯೆ ಇದೆ, ಬರ್ನ ಆಗುತ್ತೆ ಅಂತೆಲ್ಲ ಹೇಳಿದರು. ಅವರು ದಿನಾ ಕೆಲಸ ಮಾಡೋರು ನನಗೇನು ತಂತ್ರಗಾರಿಕೆಯ ಬಗ್ಗೆ ಗೊತ್ತಾಗುತ್ತೆ ಅಂತ ನಾನು ಸುಮ್ಮನಾದೆ. ಕೊನೆಗೆ ವಿಧಿಯಿಲ್ಲದೆ ನಾನು DSLR ಎಂಬ ಸ್ಟಿಲ್ ಕ್ಯಾಮೆರಾಗೇ ಜೋತುಬಿದ್ದು ಸಿನಿಮ ತಯಾರಿಸಿದೆ. ಸಿನಿಮ ಔಟಪುಟ್ ನನಗೇ ಮಂತ್ರಮುಗ್ಧನನ್ನಾಗಿಸಿತು. ಅಷ್ಟು ಕ್ಲಾರಿಟಿ ಇತ್ತು. ಆಗ ನಾನು ಎಲ್ಲ ತಂತ್ರಜ್ಷರ ಹತ್ತಿರ ಹೋಗಿ, ಇದನ್ನು ರೀಲಿಗೆ ಕನ್ವರ್ಟ ಮಾಡಬೆಕು ಅಂತಂದಾಗ ಎಲ್ಲರೂ ನಕ್ಕಿದರು. ಒಟ್ಟು ಖರ್ಚು ೭.೫೦ ಲಕ್ಷ ಆಗುತ್ತಿತ್ತು. ಕಾಸಿನ ವಿಷಯ ಮಾತ್ರ ಆಗಿದ್ದರೆ ಅದೇನೋ ಹೊಂದಿಸಬಹುದಿತ್ತು. ಆದರೆ ಎಲ್ಲರೂ ಪ್ರಿಂಟ್ ಹಾಕಿಸಿದರೆ ಅದು ಕಾಣುವುದೇ ಇಲ್ಲ ಎಂದರು. ನಾನು ಸುಮ್ಮನಾದೆ. ಎಲ್ಲ ಎಡಿಟ್ ಮಾಡಿದ ನಂತರ, ನಮ್ಮ ಎಡಿಟರ್ ರಾ ಫೈಲ್ಸ್ ಇಡಲು ಜಾಗ ಇಲ್ಲ, ನೀವು ಇದನ್ನು ಹಾರ್ಡ ಡಿಸ್ಕ್‌ನಲ್ಲಿ ಹಾಕಿಕೊಂಡು ತೆಗೆದುಕೊಂಡು ಹೋಗಿ ಅಂತಂದಾಗ, ಮಹಾ ಮುಠ್ಠಾಳನ ತರಹ ಫೈನಲ್ ಔಟ್‌ಪುಟ್ ಇದೆಯಲ್ಲ. ರಾ ಫೈಲ್ಸೆಲ್ಲ ಡಿಲೀಟ್ ಮಾಡಿ ಅಂದೆ. ಅವರು ಅದನ್ನೆಲ್ಲ ಡಿಲೀಟ್ ಮಾಡಿದರು.
ಸಿನಿಮಾ ಅರ್ಹತೆಗೂ ಮೀರಿದ ಪ್ರಶಂಸೆ ಪಡೆಯಿತು. ಸಂವಾದ ಡಾಟ್ ಕಾಂನ ತಂಡದ ಹಿರಿಯರಾದ ಶೇಖರಪೂರ್ಣ ಮತ್ತು ಅರೇಹಳ್ಳಿ ರವಿ ಅವರಂತಹ ಸ್ನೇಹಿತರಿಂದ ಇದು ಎಲ್ಲ ಕಡೆ ಪಸರಿಸಲು ಸಾಧ್ಯವಾಗುತ್ತಿದೆ. ಈ ಮಧ್ಯದಲ್ಲಿ ನನಗೆ ಒಬ್ಬ ಸಿಕ್ಕು, Sony ಎ-೨೦ಎಂಬ ಕ್ಯಾಮೆರಾದಲ್ಲಿ Guy Ritchie, Rock&Rolla ಸಿನಿಮ ನಿರ್ದೇಶಿಸಿದ್ದ, ಅದರೆ ರೆಸಲ್ಯೂಷನ್ 1920x1080 ಅಂತಂದ. ನನಗೆ ತಲೆ ಗಿರ್ರಂತಂದಂಗಾಯಿತು. ಏಕೆಂದರೆ ನನ್ನ ಸಿನಿಮಾದ ಮೂಲ ರೆಸಲ್ಯೂಷನ್ 1920x1080! ನಾನು ನಂಬದೇ ನೆಟ್‌ಲ್ಲಿ ಹುಡುಕಿ ನೋಡಿದಾಗ ಅದು ನಿಜ ಎಂದು ಗೊತ್ತಾಯಿತು. ನಮ್ಮ ಎಡಿಟರ್‌ಗೆ ಹೇಳಿದಾಗ ಅವರು ನಂಬದೇ, ಫೈಲ್ಸ್ ತೆಗೆದರು. ಆದರೆ ನನ್ನ ಹೆಡ್ಡತನದಿಂದಾಗಿ ರಾ ಫೈಲ್ಸ್ ಡಿಲೀಟ್ ಮಾಡಲಾಗಿತ್ತು! ನಾನು ಕೂಡಲೆ ಅನುಪ್‌ಗೆ (ನನ್ನ ಸಿನಿಮಾದ ಕ್ಯಾಮೆರಾ ಮಾಲೀಕ) ಕಾಲ್ ಮಾಡಿ ರಾ ಫೈಲ್ಸ್ ಇದೆಯ ಅಂತ ಕೇಳಿದೆ. ಅವನೂ ಡಿಲೀಟ್ ಮಾಡಿದ್ದ. ಆದರೆ ದೈವವಶಾತ್ ಕೊನೆಯದಿನದ ಫೂಟೇಜ್ ಇತ್ತು. ಅದನ್ನು ತೆಗೆದುಕೊಂಡು ಬಂದೆ. ಆದರೆ ಎಡಿಟಿಂಗ್‌ಗೆ ಕಾಸಿರಲಿಲ್ಲ. ನಮ್ಮ
ಸಿನಿಮಾದ ಕೋ ಎಡಿಟರ್, ಸ್ಟೀವನ್ ಗಣೇಶ್, ಅದನ್ನು ತನ್ನ ಮನೆಯಲ್ಲಿ ಹಾಕಿಕೊಂಡು, FCPAನಲ್ಲಿ ಎಡಿಟ್ ಮಾಡಿದರು. ಒರಿಜಿನಲ್ ಕ್ವಾಲಿಟಿ ಇಟ್ಟಾಗ, ಒಂದೇ ಒಂದು ಸೀನ್ ಎಡಿಟ್ ಮಾಡಲು ನಮಗೆ ಎರಡು ತಿಂಗಳು ಬೇಕಾಯಿತು. ಆದರೆ ಫೈನಲ್ಲಿ ಕ್ವಾಲಿಟಿ ನೋಡಿದಾಗ, ನನ್ನ ಕಣ್ಣಲ್ಲಿ ನೀರು ಬಂದಿತ್ತು. ಪ್ರಸ್ತುತವಾಗಿ ನನ್ನ ಇಡೀ ಸಿನಿಮಾ ನಿವಿಲಾದವರು, ೪ಜಿಬಿಯ ಡಿ.ವಿ.ಡಿ.ಯಲ್ಲಿ ಸಂಗ್ರಹವಾಗುತ್ತೆ. ಆದರೆ ಈ ಹೊಸದಾಗಿ, ಮೂಲ ಕ್ವಾಲಿಟಿಯಲ್ಲಿ ಎಡಿಟ್ ಮಾಡಿದ ಏಕೈಕ ಸೀನ್ ೨೨ಜಿಬಿ ಇದೆ. ನಾನು ಇಡೀ ಸಿನಿಮಾವನ್ನು, ಅನ್ಯರ ಮಾತು ಕೇಳದೇ ಒರಿಜಿನಲ್ ಕ್ವಾಲಿಟಿಯಲ್ಲಿ ಎಡಿಟ್ ಮಾಡಿದ್ದಿದ್ದರೆ, ಥೇಟರ್‌ಲ್ಲಿ ರಿಲೀಸ್ ಮಾಡಬಹುದಿತ್ತು. 35mm ತನಕ ಬ್ಲೋ ಮಾಡಬಹುದಿತ್ತು! ಯಾರ ಮೇಲೆ ಸಿಟ್ಟು ಮಾಡಿಕೊಳ್ಳಲಿ? ಇದು ಆಗಲ್ಲ ಅಂತ ದಾರಿ ತಪ್ಪಿಸಿದವರ ಮೇಲಾ? ಆಥವ ಅವರನ್ನು ನಂಬಿ ನನ್ನದೇ ಸಿನಿಮಾದ ಮೂಲ ಫೈಲ್ಸನ್ನೂ ಸ್ಟೋರ್ ಮಾಡಲು ಯೋಚಿಸದ ನನ್ನ ದಡ್ಡತನದ ಬಗ್ಗೆಯಾ?
ಸರಿ ಬಿಡಿ, ಇದೆಲ್ಲ ಹೊಸತು ಅವರಿಗೆ ಗೊತ್ತಿರಲಿಲ್ಲ ಅಂತ ನಾನಂದುಕೊಂಡು, ನನಗೆ ಭೇಟಿ ಆದವರ ಜೊತೆಯಲ್ಲ ನಾನು ಈ ವಿಷಯ ಹೇಳಿದೆ. ಆದರೆ ಆಗ ನನಗೆ ಆಘಾತ ಕಾದಿತ್ತು! ಇಂಡಸ್ಟ್ರಿಯ ತಂತ್ರಜ್ಞರ‍್ಯಾರೂ ಈ ಮಾತನ್ನು ಒಪ್ಪಲು ತಯಾರಿಲ್ಲ. ಮಾತಾಡುತ್ತ ಹೋದಹಾಗೆ ನನಗೆ ಗೊತ್ತಾದ ಸತ್ಯವೇನೇಂದರೆ, ಡಿಜಿಟಲ್ ಬಗ್ಗೆ ಮತ್ತು ಒಟ್ಟಾರೆ ಹೊಸತನದ ಬಗ್ಗೆನೇ ನಮ್ಮ ಉದ್ಯಮದಲ್ಲಿ ಅಸಡ್ಡೆ ಇದೆ. ನಾನು ಹೊಸದಾಗಿ ಕ್ಯಾಮೆರಾಮನ್ ಆಗಬೇಕಂತಿದ್ದವರ ಜೊತೆಯಲ್ಲ ಚರ್ಚಿಸಬೇಕಾದರೆ, ಅವರು ಹೇಳುವುದು ನಿಮ್ಮ ಸಿನಿಮ ಚೆನ್ನಾಗಿದೆ ಸರ್. ಸೂಪರ್ ಅಂತ. ಆದರೆ ನಾನ್ಯಾವಾಗ ಡಿಜಿಟಲ್‌ನ ಲಾಭದ ಬಗ್ಗೆ ಮಾತಾಡುತ್ತೇನೊ ಅವರು ಅದನ್ನು ಒಪ್ಪದೇ, ನನ್ನ ಸಿನಿಮಾ ಸಿನಿಮ್ಯಾಟಿಕಲ್ಲಿ ತುಂಬ ದರಿದ್ರ ಸಿನಿಮ ಅಂದರು. ಮೊದಲು ಅದೇ ಸಿನಿಮಾವನ್ನು ಹೊಗಳಿದೆಯಲ್ಲ? ಅಂತ ಹೇಳಿದಾಗ, ಇಲ್ಲ ನಿಮಗೆ ಬೇಸರ ಆಗುವುದು ಬೇಡ ಅಂತ ಹಾಗಂದೆ ಎಂದರು. ಸರಿ ಅದು ಹೇಗೆ ಸಿನಿಮ್ಯಾಟಿಕಲಿ ತಪ್ಪು ಅಂತ ಹೇಳು ಅಂದಾಗ, ಸರ್ ನಟರ ಹಿಂದಿರುವುದು ಏನೂ ಕಾಣಲ್ಲ ಅಂದರು. ಅಲ್ಲಯ್ಯ ಸಬ್ಜೆಕ್ಟ್ ನಟ ಆಗಿರಬೇಕಾದರೆ, ಹಿಂದಿದೆಲ್ಲ ಏನಕ್ಕೆ ತೋರಿಸಬೇಕು ಅಂತ ಕೇಳಿದೆ. ಅದಕ್ಕೆ ಅವರ ಹತ್ತಿರ ಉತ್ತರ ಇಲ್ಲ. ಅದು ರೂಲ್ಸ್ ಅಂತೆ! ಯಾರು ಮಾಡಿದ್ದು ಆ ರೂಲ್ಸ್ ಅಂತ ಕೇಳಿದಾಗ, ನೀವು ಹೀಗೆ ಬೇಸರ ಮಾಡ್ಕೋತೀರ ಅಂತನೇ ನಾನಾಗ ಚೆನ್ನಾಗಿದೆ ಅಂತ ಹೇಳಿದ್ದು ಅಂತನ್ನುತ್ತಾರೆ. ಇವರ ಈ ಎಡಬಿಡಂಗಿತನದಿಂದ ನನಗೆ ಬೇಸರ ಆಗುತ್ತದೆ.
ಅಸಲಿಗೆ ಏನಾಗಿದೆ ಅಂದರೆ, ನಮ್ಮ ಹೆಚ್ಚಿನ ತಂತ್ರಜ್ಞರಿಗೆ, ಕ್ಲಾಸ್‌ರೂಮಿನಲ್ಲಿ ಮತ್ತು ಸೆಟ್ಟಿನಲ್ಲಿ ಗಿಣಿಪಾಟ ಹೇಳಿಕೊಟ್ಟಿರುತ್ತಾರೆ. ಅದರ ಪ್ರಕಾರನೆ ಅವರು ಲೈಟಿಂಗ್ ಮತ್ತು ಶಾಟ್ಸ್ ಇಡುವುದು. ನೀವೇ ಗಮನಿಸಿ, ನಮ್ಮ ಎಷ್ಟೋ ಸಿನಿಮಾಗಳಲ್ಲಿ ಫ್ರೇಂನ್ನ ಚೆಂದಗೊಳಿಸಿಲು ಅಲ್ಲಿ ಲೈಟ್ ಇಲ್ಲಿ ಲೈಟ್ ಎಲ್ಲ ಹಾಕಿರುತ್ತಾರೆ. ಒಟ್ಟಾರೆಯಾಗಿ ಅದು ಚೆಂದದ ಫ್ರೇಂ ಆಗಿ ಕಾಣುತ್ತೆ. ಆದರೆ ಅದರಲ್ಲಿ ಯಾವ ಭಾವಸತ್ವವೂ ಇರುವುದಿಲ್ಲ. ಕ್ಯಾಮೆರಾಮ್ಯಾನ್ ಫ್ರೇಂ ಯೋಚಿಸುತ್ತಾನೆ, ತಲೆ ಇಲ್ಲದೆ ನಿರ್ದೇಶಕರು ಚೆಂದ ಕಾಣುತ್ತ ಇದೆಯಲ್ಲ ಅಂತನ್ನಿಸಿ, ಓ ಸೂಪರ್ ಅನ್ನುತ್ತಾನೆ. ಆದರೆ ಪ್ರೇಕ್ಷಕನಿಗೆ ಈ ಎಲ್ಲ ಚೆಂದವನ್ನು ತೆರೆಯ ಮೇಲೆ ನೋಡಿದಾಗ, ಅತಿಯಾದ ಸಿಹಿಯಿಂದಾಗುವ ವಾಕರಿಕೆ ಆಗುತ್ತದೆ. ಫ್ರೇಂನವೊಳಗೆ ಯಾವುದೇ ಭಾವಸತ್ವ ಇಲ್ಲದೇ ಇರುವುದರಿಂದ ಪ್ರೇಕ್ಷಕನಿಗೆ ಅದು ತಟ್ಟಲ್ಲ. ಆಗ ನಮ್ಮವರು ನಮ್ಮ ಜನ ಸರಿಯಿಲ್ಲ ಅಂತನ್ನುತ್ತಾರೆ. ನೀವೇ ಗಮನಿಸಿ ಕೆಲ ನಿದೇಶಕರನ್ನು ಬಿಟ್ಟ್ರೆ, ಇವತ್ತಿಗೂ ಎಡಿಟಿಂಗ್ ಆಗುತ್ತಿರುವುದು, ಮೊದಲಿಗೆ ಒಂದು ಲಾಂಗ್ ಶಾಟ್, ಕ್ಲೋಸ್ ಕಟ್, ಕ್ಲೋಸ್ ಕಟ್, ಮಿಡ ಶಾಟ್, ಕ್ಲೋಸ್ ಇಲ್ಲ ಸಜೇಶನ್. ಪಂತಲು ಅವರು ಕಲಿತ ಪಾಟವನ್ನು ಅವರ ಶಿಷ್ಯರಿಗೆ ಕಲಿಸಿದರು. ಇನ್ನೂ ಅದೇ ಅಂಕಿ ಲೆಕ್ಕವನ್ನೇ ನಾವು ಮಾಡುತ್ತಿದ್ದೀವೆಯೇ ಹೊರತು, ಯಾವ ಭಾವಕ್ಕೆ ಯಾವ ಶಾಟ್. ಅದು ಎಷ್ಟು ಹತ್ತಿರ ಇರಬೇಕು. ಎಷ್ಟು ದೂರ ಇರಬೇಕು. ಅದನ್ನು ಯಾವತ್ತೂ ಯೋಚಿಸಲ್ಲ. ಯಕಂದರೆ ಕ್ಲಾಸಲ್ಲಿ ಅದನ್ನು ಹೇಳಿಕೊಟ್ಟಿರಲ್ಲ! ಹಾಗೆ ನೋಡಿದರೆ, ನನಗೆ ಸಿಕ್ಕ ಎಡಿಟರ್‌ಗಳು ದೇವರು, ನನ್ನ ಅಭಿರುಚಿ ಅರ್ಥ ಮಾಡಿಕೊಳ್ಳುತ್ತಿದ್ದ ಹಾಗೆ ಅವರು ಸಮವಾಗಿ ಸ್ಪಂದಿಸಲು ಶುರು ಮಾಡಿದರು. ನಿಯಮಗಳನ್ನು ಮೂಲೆಗೆಸೆದರು. ಭಾವವೇ ಮುಖ್ಯವಾಯಿತು.
ಇತ್ತೀಚಿಗೆ ತುಂಬಾನೇ ಹೆಸರು ಮಾಡಿದ್ದ, ರೆಡ್ ಕ್ಯಾಮೆರ ಎಂಬ ಡಿಜಿಟಲ್ ಕ್ಯಾಮೆರ ಬಗ್ಗೆ ನಾನು ತುಂಬ ತಿಳ್ಕೊಂಡು, ಅದನ್ನು ಬಳಸುವ ಆಸೆ ವ್ಯಕ್ತ ಪಡಿಸಿದೆ. ಎಲ್ಲರೂ ಒಕ್ಕೊರಳಿನಿಂದ ಅದು ಡಬ್ಬ ಕ್ಯಾಮೆರಾ ಅಂದು ಬಿಟ್ಟರು. ಅಲ್ಲಯ್ಯ ಹಾಲಿವುಡ್‌ಲ್ಲಿ ಅದನ್ನ ಒಳ್ಳೆಯ ಕ್ಯಾಮೆರಾ ಅಂತನ್ನುತ್ತಿದ್ದಾರೆ ಅಂತಂದೆ. ಇತ್ತೀಚಿಗೆ ತುಂಬ ಹೆಸರು ಮಾಡಿದ Social Networking ಎಂಬ ಸಿನಿಮಾವನ್ನು ರೆಡ್‌ಲ್ಲಿ, ಅದೂ ೪ಕೆ ರೆಸ್ಲ್ಯೂಷನ್ನಲ್ಲಿ ಚಿತ್ರಿಸಿದ್ದಾರೆ. ನಾವು ಇನ್ನು ರೀಲಲ್ಲೂ ಆ ಕ್ವಾಲಿಟಿ ಮುಟ್ಟಿಲ್ಲ. ಮತ್ತು ಹಾಲಿವುಡಲ್ಲಿ ಗ್ಯಾರಂಟೀಡ್ ಕಮರ್ಷಿಯಲ್ ಡೈರೆಕ್ಟರ್ ಆದ David Fincher ಈ ಸಿನಿಮಾವನ್ನು ನಿರ್ದೇಶಿಸಿದ್ದಾನೆ. ನಾನೇನೊ ದಡ್ಡ ಅವರೆಲ್ಲ ದಡ್ಡರಾ? ಅಂತ ಕೇಳಿದೆ. ಅದು ಇಂಗ್ಲಿಷ್ ಸಿನಿಮಾ. ಇಂಡಿಯನ್ ಸಿನಿಮಾ ತೋರಿಸು ಅಂತಂದರು. ಆಗ ರಕ್ತಚರಿತ್ರ ಅದೇ ಕ್ಯಾಮೆರಾದಲ್ಲಿ ಶೂಟ್ ಮಾಡಿರುವುದಾಗಿ ಗೊತ್ತಾಯಿತು. ಕರ‍್ಕೊಂಡು ಹೋಗಿ ತೋರಿಸಿದೆ. ಆಗ ನೋಡಿ ಎಷ್ಟು ಕ್ಯಾಮೆರಾ ಫ್ಲಾಸ್ ಇದೆ ಅಂದರು. ನಾನು ಅವಕ್ಕಾಗಿ, ಇವರು ಯಾವ ಸಿನಿಮಾದ ಬಗ್ಗೆ ಮಾತಾಡುತ್ತಿದ್ದಾರೆ ಅಂತ ಅನುಮನಿಸಲು ಶುರು ಮಾಡಿದೆ. ಮಾರನೇ ದಿನ, ನಾನು ಬೇರೆ ಹುಡುಗರನ್ನು ಆ ಸಿನಿಮಾಗೆ ನನ್ನದೇ ಖರ್ಚಲ್ಲಿ ಕರ‍್ಕೊಂಡು ಹೋದೆ. ಹೊರಗೆ ಬಂದವರು, ಏನು ಸಿನಿಮಾ ಸರ್ ಇದು ಅಂತಷ್ಟೆ ಅಂದರು. ನಿಮಗೆಲ್ಲಾದರು ಟೆಕ್ನಿಕಲ್ ದೋಷಗಳು ಕಾಣಿಸಿದ್ವಾ? ಅಂತ ಕೇಳಿದಾಗ, ಎಲ್ಲರೂ ಸರ್ ಈ ಕ್ವಾಲಿಟಿ ನಮ್ಮ ಕನ್ನಡದಲ್ಲಿ ಯಾವಾಗ ಬರುತ್ತದೆ? ಅಂತ ನೊಂದು ಕೇಳಿದರು. ನಾನೀಗಲೂ ಹೇಳೋದು ಕ್ಯಾಮೆರಾ ಮುಖ್ಯ ಅಲ್ಲ. ಡೈರೆಕ್ಟರ್ ಮತ್ತು ಕ್ಯಾಮೆರಾಮ್ಯಾನೇ ಮುಖ್ಯ. ಆದರೆ ಅಪಡೇಟ್ ಆಗಲು ಒಲ್ಲದವರಿಗೆ ೪೩೫ ಅಂತಹ ಅತ್ಯಾಧುನಿಕ ಕ್ಯಮೆರಾ ಕೊಟ್ಟರೂ ಏನು ಪ್ರಯೋಜನ?
ಭಯ ಹುಟ್ಟಿಸುವುದೇನಂದರೆ, ಇವರೆಲ್ಲ ಹೊಸ ಹುಡುಗರೇ! ಇನ್ನೂ ಯೌವನದ ಹೊಸ್ತಿಲಲ್ಲಿರೋರು. ಹೊಸತರ ಬಗ್ಗೆ ಈ ರೀತಿಯ ಅನಾದರ ಇದ್ದರೆ, ಹೊಸ ನರೇಷನ್ ಹೇಗೆ ಹುಟ್ಟತ್ತೆ! ನಾನು ರೀಲಿನ ವಿರೋಧಿ ಅಲ್ಲ. ಡಿಜಿಟಲ್ ಸರಿಯಿಲ್ಲ ಅನ್ನುವುದನ್ನ ಅದರ ಕಾರ್ಯವೈಖರಿಯಲ್ಲೇ ನಿರೂಪಿಸಿ ತೋರಿಸಿದರೆ, ನಾನೂ ಒಪ್ಪುತ್ತೇನೆ. ಆದರೆ ಡಿಜಿಟಲ್ ಕೆಟ್ಟದ್ದು ಅಂತ ಶಾಲೆಯಲ್ಲಿ ಹೇಳಿದ್ದಾರೆ. (ಇದು ನಿಜ. ಸಿನಿಮ್ಯಾಟೋಗ್ರಫಿ ಕ್ಲಾಸಲ್ಲಿ ಡಿಜಿಟಲ್ ಸರಿಯಿಲ್ಲ ಅಂತ ಉರು ಹೊಡೆಸುತ್ತಾರೆ!) ಅನ್ನುವ ಕಾರಣಗಳಿಗೆ, ಲೈಟಿಂಗ್ ನಾವು ಹಿಂದೆ ಮಾಡಿದ್ದಕ್ಕಿಂತ ಬೇರೆ ಆಗಿದೆ, ಅದಕ್ಕೆ ಒಪ್ಪಲು ಶಖ್ಯವಿಲ್ಲ ಅನ್ನುವ ಜಡ ಮನೋಭಾವದಿಂದಾಗಿ ವಿರೋಧಿಸಿದರೆ, ನಾವು ಅದನ್ನು ವಿರೋಧಿಸಬೇಕಾಗುತ್ತೆ.
ಇವತ್ತಿಗೂ ನನ್ನ ಸಿನಮಾ ನೋಡುವ ತಂತ್ರಜ್ಞರು, ಬಳಿ ಬಂದು, ಚೆನ್ನಾಗಿದೆ. ನಾವು ಮುಂದೆ ಒಟ್ಟಿಗೆ ಕೆಲಸ ಮಾಡೋಣ ಅಂತಾರೆ. ನಾನು ಡಿಜಿಟಲ್‌ಲ್ಲೇ ನನ್ನ ಮುಂದಿನ ಸಿನಿಮ ಮಾಡಬೇಕು ಅಂತಿದ್ದೀನಿ ಅಂದಾಗ, ಬೇಡ ಸರ್! ಈಗಾಗಲೇ ಡಿಜಿಟಲ್‌ಯಿಂದಾಗಿ ಸಿನಿಮ್ಯಾಟಿಕಲ್ಲಿ ಕೆಟ್ಟದಾಗಿರೊ ಪ್ರಾಡಕ್ಟ್ ಮಾಡಿದ್ದೀರ. ಮತ್ತೆ ಏನಕ್ಕೆ ಅದನ್ನೇ ಮಾಡ್ತೀರಾ? ಅಂತ ಕೇಳುತ್ತಾರೆ. ಒಂದು ಸಿನಿಮ್ಯಾಟಿಕಲಿ ಕೆಟ್ಟ ಪ್ರಾಡಕ್ಟ್ ಕೊಟ್ಟಿರುವ ಡೈರೆಕ್ಟರ್ ಜೊತೆ ಏನಕ್ಕೆ ನೀವು ಒಟ್ಟಿಗೆ ಕೆಲಸ ಮಾಡುವ ಆಸೆ ಇಟ್ಕೋತೀರಾ? ಅಂತ ಕೇಳಿದಾಗ ಅವರು ನಕ್ಕು ಹೊರಟು ಹೋಗುತ್ತಾರೆ. ನಾನೂ ನಕ್ಕು ಸುಮ್ಮನಾಗುತ್ತೇನೆ.
