ಹಾಗೂ ಹೀಗೂ ತುಮಕೂರಿನ ಕೆಲಸವನ್ನೆಲ್ಲ ಮುಗಿಸಿದ್ದಾಯಿತು. ಹನ್ನೆರಡೂವರೆ ಒಂದು ಗಂಟೆಯಾದರು ಪರವಾಯಿಲ್ಲ, ಬನ್ನಿ ಅಂದಿದ್ದರು ಶೇಖರ ಪೂರ್ಣ. ಹಿರಿಯರಾದ ಅವರಿಗೆ ಇಲ್ಲ ಅನ್ನುವುದೆ ಸಾಧ್ಯವಿಲ್ಲ ಅನ್ನಿಸಿ ಒಬ್ಬಳೆ ಬಸ್ಸು ಹತ್ತಿದೆ. ದಾರಿ ಗೊತ್ತಿಲ್ಲ ಏನಿಲ್ಲ. ಸಂವಾದದವರು ವೆಬ್ ಸೈಟಿನಲ್ಲಿ ಕೊಟ್ಟಿದ್ದ ಮಾಹಿತಿಯ ಪ್ರಕಾರ ತುಮಕೂರಿನಿಂದ ದೇವರಾಯನದುರ್ಗಕ್ಕೆ ಹೋಗಬೇಕೆಂದರೆ ಊರ್ಡಿಗೆರೆಯಲ್ಲಿಳಿದುಕೊಂಡು ರಿಕ್ಷಾ ಹಿಡಿಯಬೇಕು. ನಾನು ಯಾವಾಗಲೊ ವರುಷದ ಹಿಂದೆ ಕಾರಿನಲ್ಲಿ ಬಂದು ದುರ್ಗದ ಮೇಲೆ ಲೇಖನ ಬರೆಯಲಿಕ್ಕೆ ಮಾಹಿತಿ ಬಾಚಿಕೊಂಡು ಹೋಗಿದ್ದುಂಟು. ಊರ್ಡಿಗೆರೆಯಲ್ಲಿಳಿದುಕೊಂಡು ಪೂರ್ಣರಿಗೆ ಒಂದು ಫೋನು ಮಾಡುವಾ ಎಂದು ನೋಡುತ್ತೇನೆ, ಸಿಗ್ನಲ್ ಮಟಾಮಾಯ!! ರಿಕ್ಷಾದವ, ಹಯ್ಯೋ ತಾಯೀ, ಇಲ್ಲಿ ಬರೆ ರಿಲಯನ್ಸು ಸಿಗೋದು, ಬರ್ರಿ ಬರ್ರಿ, ದುರ್ಗಕ್ಕೆ ಬರೇ ಎಂಬತ್ರುಪಾಯಿ!! ಎಂದು ಮತ್ತಷ್ಟು ದಿಗಿಲು ಹುಟ್ಟಿಸಿದ. ಹಾಗೂ ಹೀಗೂ ಅವನ ಹತ್ತಿರ ಕೂಗಾಡಿ ಚೌಕಾಶಿ ಮಾಡಿ ರಿಕ್ಷಾ ಹೊರಟಿತು.ಸುತ್ತಲೂ ಮೋಡ ಮುಸುಕಿದ ನಿರ್ಜನ ಗುಡ್ಡಗಾಡು. ಆಗೀಗ ಬರುವ ವಾಹನಗಳನ್ನು ಬಿಟ್ಟರೆ ನರಪಿಳ್ಳೆಯೂ ಕಾಣದು. ದೇವರಾಯನದುರ್ಗವೂ ಎಲ್ಲೋ ದೂರ ಇರುವಹಾಗೆ ಕಾಣುತ್ತಿದೆ. ನನಗೇನು ಗ್ರಹಚಾರ ಬಡಿದಿತ್ತು ಹೀಗೆ ಗೊತ್ತಿಲ್ಲದ ರೂಟಿನಲ್ಲಿ ಒಬ್ಬಳೆ ಬರುವುದಕ್ಕೆ. ಇಲ್ಲಿ ಯಾರಾದರು ಚಾಕುತೋರಿಸಿ ಚಿನ್ನ, ದುಡ್ಡು ಪೀಕು! ಅಂದರೆ ಕೂಗಿಕೊಂಡರು ಯಾರಿಗು ಕೇಳದು. ನಾನು ಹೀಗೆಲ್ಲ ನಗರವಾಸಿಯ ಥರ ಯೋಚನೆಮಾಡುತ್ತ ಹೊರಗಿನ ಹಸಿರನ್ನು ತೀವ್ರವಾಗಿ ದಿಟ್ಟಿಸುತ್ತಿದ್ದರೆ, ರಿಕ್ಷಾದವ ತನ್ನ ಪಾಡಿಗೆ ಅಲ್ಲಿ ನಡೆದ ಶೂಟಿಂಗುಗಳು, ಆತ ಅಣ್ಣಾವ್ರನ್ನು ನೋಡಿದ್ದು, ತನ್ನ ಜೀವನ ಇತ್ಯಾದಿಗಳ ಬಗ್ಗೆ ರನ್ನಿಂಗ್ ಕಮೆಂಟರಿ ನೀಡುತ್ತ ಇದ್ದ. ಕೊನೆಗೂ ದೇವರಾಯನದುರ್ಗ ತಲುಪುತ್ತಲೆ ಶಿಬಿರದ ಬೋರ್ಡು ಕಂಡಿತು. ನನ್ನ ಫೋನಿನಲ್ಲಿ ಸಿಗ್ನಲ್ಲು ಕೂಡಾ. ಶಿಬಿರತಾಣವಾದ ಬದರಿಕಾಶ್ರಮಕ್ಕೆ ನುಗ್ಗುತ್ತಲೆ ಹನಿಯಲು ಶುರುವಾದ ಮಳೆ ಬರೋಬ್ಬರಿ ಅರ್ಧ ಗಂಟೆ ಭೋರಾಡಿ ಸುರಿಯಿತು. ನನ್ನ ಎದುರುಗೊಳ್ಳಲು ಬಂದ ಶೇಖರ್‌ಪೂರ್ಣರ ಶ್ರೀಮತಿಯವರು “ಅಮೃತವರ್ಷಿಣಿ ನೀವು!!” ಎಂದು ನಕ್ಕರು.
ಒಳಗೆ ಕಾಸರವಳ್ಳಿಯವರ ‘ಘಟಶ್ರಾದ್ಧ’ದ ಪ್ರದರ್ಶನ ನಡೆದಿತ್ತು. ಮಧ್ಯದಲ್ಲಿ ಕರೆಂಟು ಕೈಕೊಟ್ಟು ಎಲ್ಲ ಎದ್ದಾಗ ಅರೇಹಳ್ಳಿ ರವಿಯವರು ಎಲ್ಲರ ಪರಿಚಯ ಮಾಡಿಸತೊಡಗಿದರು. ಕನ್ನಡ ಸಾಹಿತ್ಯ.ಕಾಂನ ಸದಸ್ಯರೆಲ್ಲ ಒಂದೇ ರೀತಿಯ ಟಿ-ಶರ್ಟು ಧರಿಸಿ ಓಡಾಡಿಕೊಂಡಿದ್ದರು. ಹೆಚ್ಚಿದ್ದ ಶಿಬಿರಾರ್ಥಿಗಳ ಸಂಖ್ಯೆ ನೋಡಿ ಸಂತಸವೆನಿಸಿತು. ಅಷ್ಟರಲ್ಲಿ ಊಟಕ್ಕಾಯಿತು. ಸರಳವಾಗಿದ್ದರು ರುಚಿಕಟ್ಟಾದ ಅಡುಗೆ ಎಲ್ಲರಿಗೆ ಹಿಡಿಸಿದ್ದರಲ್ಲಿ ಸಂಶಯವೇ ಇಲ್ಲ. ಆನಂತರ ‘ಘಟಶ್ರಾದ್ಧ’ದ ಬಾಕಿ ಭಾಗ ನೋಡುತ್ತಿರುವಾಗಲೆ ವಿದ್ಯುಚ್ಛಕ್ತಿ ಕೈಕೊಡಬೇಕೆ? ಮಾತುಕತೆ ಆರಂಭವಾಯಿತು. ಮೊದಲು ಪ್ರೊ. ತಾರಕೇಶ್ವರ್ ಮಾತನಾಡಿದರು. ಅವರು ಮುಂದಿಟ್ಟ ಅನೇಕ ವಿಚಾರಗಳು ಮಾತಿಗೆ ಊಟದ ಕೆಲಸ ಮಾಡಿದವು. ಪರ್ಯಾಯ ಸಿನಿಮಾಗಳನ್ನು ಜನ ಹೆಚ್ಚು ನೋಡುವುದಿಲ್ಲವೇಕೆ? ಅದು ಅರ್ಥ ಆಗುವುದೆ, ಇಲ್ಲವೆ? ಪರ್ಯಾಯ ಸಿನೆಮಾ ಎನ್ನುವ ಹಣೆಪಟ್ಟಿ ಇರಲೇಬೇಕೆ? ಬೇರೆ ಭಾಷೆಯ ಸಿನಿಮಾಗಳನ್ನು ಕನ್ನಡಭಾಷೆಯಲ್ಲೇಕೆ ಡಬ್ ಮಾಡಲಾಗುತ್ತಿಲ್ಲ? ಇತರ ಭಾಷೆಗಳಲ್ಲಿ ಈ ಕೆಲಸ ಸಿನಿಮಾ ಕಲಾವಿದರಿಗೆ ಅನ್ಯಾಯವಾಗದಂತೆ ನಡೆಯುತ್ತಿದೆಯಲ್ಲ? ನಾವು ಈ ವಿಷಯದಲ್ಲಿ ರಿಜಿಡ್ ಆಗಿದ್ದೇವೆಯೆ? ಮುಂತಾದ ವಿಷಯಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು. ಇನ್ನೇನು ಇದು ಮುಗಿಯುವ ಹಾಗೆ ಕಾಣದು ಅನ್ನಿಸಿದಾಗ ಕಾರ್ಯಕ್ರಮ ನಿರ್ವಾಹಕ ರವಿ ಹೆಗಡೆಯವರು ಪತ್ರಕರ್ತೆ ಶ್ರೀಮತಿ ಸಾವಿತ್ರಿಯವರಿಗೆ ಬೇಟನ್ ದಾಟಿಸಿದರು.
ಅರೆಸಂಜೆಯಾಗಿದ್ದರೂ ಮಂದಬೆಳಕಿನಲ್ಲಿಯೇ ತಾವು ಮಾತನಾಡಬೇಕಿದ್ದನ್ನ ಅಚ್ಚುಕಟ್ಟಾಗಿ ಮಂಡಿಸಿದ ಸಾವಿತ್ರಿಯವರು ಕಾಸರವಳ್ಳಿಯವರ ಚಿತ್ರಗಳಲ್ಲಿ ಮಹಿಳಾ ಪಾತ್ರಗಳ ಕುರಿತು ಮಾತನಾಡಿದರು. ಸಾವಿತ್ರಿಯವರ ಪ್ರಕಾರ ಕಾಸರವಳ್ಳಿಯವರ ಚಿತ್ರಗಳಲ್ಲಿ ಬದಲಾಗುತ್ತಿರುವ ಮಹಿಳೆಯ ಮನಸ್ಥಿತಿಯನ್ನು ಆಧುನಿಕ ಹಿನ್ನೆಲೆಯಲ್ಲಿ ಬಿಂಬಿಸಲಾಗಿಲ್ಲ. ಈಗಿನ ಮಹಿಳೆ ಹಿಂದಿನಂತಿರದೆ ಅನೇಕ ವಿಷಯಗಳಲ್ಲಿ ಬದಲಾಗಿದ್ದಾಳೆ ಆದುದರಿಂದ ಮಹಿಳೆಯ ಈ ಮುಖವನ್ನೂ ಕೂಡ ಕಾಸರವಳ್ಳಿಯವರು ತೋರುವ ಪ್ರಯತ್ನ ಮಾಡಬೇಕು ಎನ್ನುವುದಾಗಿತ್ತು. ಅದಕ್ಕೆ ಸಮಜಾಯಿಷಿ ನೀಡಿದ ಕಾಸರವಳ್ಳಿಯವರು ತಮ್ಮ ಕೆಲವು ಚಲನಚಿತ್ರಗಳಲ್ಲಿ ಮಾತ್ರ ಕಥಾವಸ್ತುವಿನ ಕಾರಣದಿಂದ ಹಿಂದಿನ ಕಾಲಘಟ್ಟಗಳನ್ನು ಅವಲಂಬಿಸಲಾಗಿದೆ. ಸಾವಿತ್ರಿಯವರು ಆಧುನಿಕ ಎಂದು ಹೇಳುತ್ತಿರುವುದು ಕೇವಲ ನಗರಮುಖೀ ಜೀವನದ ಬಗ್ಗೆ. ಬೆಂಗಳೂರಿನ ಜನಸಂಖ್ಯೆ ಇಡೀ ಕರ್ನಾಟಕದ ಜನಸಂಖ್ಯೆಗೆ ಹೋಲಿಸಿದರೆ ಬಹಳ ಸಣ್ಣದು. ತಾನು ನಗರದಿಂದ ಆಚೆಗಿರುವ ಕರ್ನಾಟಕವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದೇನೆ. ಅದೂ ಕೂಡ ಆಧುನಿಕವೇ. ನನ್ನ ಮಹಿಳಾ ಪಾತ್ರಗಳು ಕೂಡ ಆಧುನಿಕವೇ ಎಂದರು. ಮುಂದೆ ಮಾತನಾಡುತ್ತ ಸಾವಿತ್ರಿಯವರು ನಾಯಿನೆರಳು, ತಾಯಿಸಾಹೇಬ, ಹಸೀನಾ ಮೊದಲಾದ ಚಲನಚಿತ್ರಗಳ ಮಹಿಳಾ ಪಾತ್ರಗಳನ್ನು ಉದಾಹರಿಸಿ ಇಲ್ಲೆಲ್ಲ ಪುರುಷಪಾತ್ರಗಳು ದುರ್ಬಲವಾದಾಗ ಮಾತ್ರ ಮಹಿಳಾಪಾತ್ರಗಳು ಸಬಲವಾಗಿ ಕಾಣಬರುತ್ತವೆ. ಹಾಗಿದ್ದರೆ ಹೆಣ್ಣು ಸಬಲಳಾಗಬೇಕೆಂದರೆ ಗಂಡು ದುರ್ಬಲನೇ ಅಗಿರಬೇಕೆ, ಹೆಣ್ಣಿಗೆ ತನ್ನದೇ ಆದ ಸ್ವಂತಿಕೆ ಇಲ್ಲವೆ? ಎನ್ನುವ ಪ್ರಶ್ನೆ ಮುಂದಿಟ್ಟರು. ನಾನು ಅದಕ್ಕೆ ಆಯಾ ಪಾತ್ರಗಳ ಸಾಮಾಜಿಕ ಹಿನ್ನೆಲೆ ಹಾಗೂ ಕಾಲಘಟ್ಟವನ್ನು ಉಲ್ಲೇಖಿಸಿ, ಆ ಮಹಿಳಾ ಪಾತ್ರಗಳು ವಿಶಿಷ್ಟ ಅನ್ನಿಸುವುದೇ ಪುರುಷ ತನ್ನ ಸಾಮಾಜಿಕ ಕರ್ತವ್ಯವನ್ನು ನಿಭಾಯಿಸುವುದರಲ್ಲಿ ವಿಫಲನಾಗುವಾಗ ಆತನ ಸ್ಥಾನದಲ್ಲಿ ನಿಂತು ಸಫಲವಾಗುವುದರಲ್ಲಿ. ಹಾಗೇನಾದರು ಅವರು ಸಫಲ ಪುರುಷನ ಸ್ಥಾನ ತೆಗೆದುಕೊಳ್ಳಲು ಹೋದರೆ ಅವರ ಮೇಲೆ ಹದ್ದುಮೀರಿ ಹೋದವರೆಂಬ ಆರೋಪ ಬರುವ ಸಾಧ್ಯತೆಗಳು ಪ್ರಬಲವಾಗಿದ್ದವು. ಹಾಗಾಗಿ ಈ ಪಾತ್ರಗಳ ಸಬಲತೆಯ ಹಿನ್ನೆಲೆಯಲ್ಲಿ ಪುರುಷನ ದುರ್ಬಲತೆ ಇರುವುದು ಸರಿಯೆನ್ನಿಸುತ್ತದೆ ಎಂದು ಹೇಳಿದೆ. ಒಟ್ಟಿನಲ್ಲಿ ಸಾವಿತ್ರಿಯವರೊಂದಿಗಿನ ಮಾತುಕತೆ ಚುಟುಕಾಗಿದ್ದರೂ ಹೊಸ ಆಯಾಮಗಳೆಡೆ ದೃಷ್ಟಿಬೀರಿಸಿತು.
ನಂತರ ಗಿರೀಶ್ ಕಾಸರವಳ್ಳಿಯವರೊಡನೆ ನೇರ ಸಂವಾದ ಆರಂಭವಾಯಿತು. ಅವರ ಚಲನಚಿತ್ರಗಳ ಬಗೆಗೆ ಹಲವಾರು ಕುತೂಹಲಕರ ಪ್ರಶ್ನೆಗಳು ಕೇಳಿಬಂದವು. ನನಗೆ ಅದರಲ್ಲಿ ಹಿಡಿಸಿದ್ದು ಎಸ್.ಎಲ್. ಭೈರಪ್ಪನವರ ನಾಯಿನೆರಳು ಕಥಾನಕದಲ್ಲಿ ಬದಲಾವಣೆ ಮಾಡಿದ್ದೇಕೆ ಎನ್ನುವ ಪ್ರಶ್ನೆಗೆ ಕಾಸರವಳ್ಳಿಯವರು ಕೊಟ್ಟ ಸಮಜಾಯಿಶಿ. ಈ ವಿಷಯವಾಗಿ ಮಾತನಾಡಿದ ಕಾಸರವಳ್ಳಿಯವರು ನೇರವಾಗಿ, ನನಗೆ ಪುನರ್ಜನ್ಮದ ಬಗ್ಗೆ ಯಾವುದೇ ಆಸಕ್ತಿಯಾಗಲೀ ಕನೆಕ್ಷನ್ ಆಗಲೀ ಇಲ್ಲ. ಅದರೆ ನನಗೆ ಈ ಕಥೆಯಲ್ಲಿ ಹಿಡಿಸಿದ್ದು ಕೇಶಮುಂಡನ ಮಾಡಿಕೊಂಡ ವಿಧವೆಯೊಬ್ಬಳು ತನ್ನ ಸಹಜ ದೈಹಿಕ ವಾಂಛೆಗಳನ್ನು ತೀರಿಸಿಕೊಳ್ಳಲು ಸಾಮಾಜಿಕ ಮೂಢನಂಬಿಕೆಯೊಂದನ್ನು ಬಳಸಿಕೊಳ್ಳುವ ರೀತಿ. ಆಕೆಯ ಗಂಡ ಪುನರ್ಜನ್ಮ ತಾಳಿರುವನೆಂದು ನಂಬುವ ಸಮಾಜ ಆತನ ವಿಧವೆ ಇದೇ ನಂಬಿಕೆಯನ್ನು ಆಧರಿಸಿ ಸಕೇಶಿಯಾದಾಗ ಅಮಾನ್ಯ ಮಾಡುತ್ತದೆ. ನಾನು ಕಥೆಯನ್ನು ನೋಡಿದ್ದು ಈ ದೃಷ್ಟಿಕೋನದಲ್ಲಿ. ಎಂದರು. ಆದರೆ ಚಲನಚಿತ್ರಗಳ ಕ್ಯಥಾರ್ಟಿಕ್ ಎಫೆಕ್ಟಿನ ಬಗ್ಗೆ ಅವರ ವಾದವನ್ನು ಒಪ್ಪುವದು ಕಷ್ಟವೆನಿಸಿತು.
ಅನಂತಮೂರ್ತಿಯವರ ಮಾತುಗಳನ್ನು ಉದ್ಧರಿಸಿದ ಕಾಸರವಳ್ಳಿಯವರ ಪ್ರಕಾರ ಒಂದು ಚಲನಚಿತ್ರವನ್ನು ನಾವು ನಿರುದ್ವೇಗದಿಂದ ನೋಡಲು ಸಾಧ್ಯವಾಗುವುದಾದರೆ ಮಾತ್ರ ಅದು ಬಹಳ ಒಳ್ಳೆಯ ಚಲನಚಿತ್ರ. ಚಕ್ ದೇ ಇಂಡಿಯಾದಂಥ ಚಲನಚಿತ್ರಗಳು ನೋಡುವಾಗ ನಮ್ಮಲ್ಲಿ ಉದ್ವೇಗ ಹುಟ್ಟಿಸಿದರೂ ಅದರಾಚೆ ಏನೂ ಆಗದು. ಆದರೆ ನಿಜವಾದ ಕ್ಯಥಾರ್ಸಿಸ್ ಎಂದರೆ ಚಿತ್ರ ನೋಡಿದ ಬಹಳ ಕಾಲದವರೆಗೂ ಒಂದು ವಿಷಾದ ಕಾಡಬೇಕು. ಹೀಗೆ ಎದ್ದ ವಿಷಾದದಿಂದ ಏನಾದರು ಮಾಡುವದು ಸಾಧ್ಯವಾಗಬೇಕು. ಕೇವಲ ಭಾವನಾ ವಿಜೃಂಭಣೆಯಿಂದ ಇದು ಸಾಧ್ಯವಿಲ್ಲ ಎಂದರು. ಕ್ಯಥಾರ್ಸಿಸ್ ಬಗ್ಗೆ ವಿವರವಾಗಿ ಬರೆದಿರುವ ಅರಿಸ್ಟಾಟಲನ ಪ್ರಕಾರ ನಾವು ಒಂದು ನಾಟಕವನ್ನು ನೋಡುವಾಗ (ಆಗ ನಾಟಕ, ಇಂದಿನ ಸಂದರ್ಭದಲ್ಲಿ ಚಲನಚಿತ್ರ ಅಂತಿಟ್ಟುಕೊಳ್ಳೋಣ!) ನಾವೂ ಹೊರಪ್ರಪಂಚವನ್ನ ಮರೆತು ನಾಟಕದ ಪಾತ್ರಗಳ ಜತೆ ಒಂದಾಗಿ ಅವರ ಏಳುಬೀಳುಗಳನ್ನು ಅನುಭವಿಸುತ್ತೇವೆ. ನಾಟಕದ ಮುಖ್ಯಪಾತ್ರ ತಪ್ಪುಮಾಡಿ ಅದರ ಫಲವನ್ನನುಭವಿಸುವಾಗ, ನೋವುಣ್ಣುವಾಗ ನಮಗೂ ಅದರ ಅನುಭವವಾಗುತ್ತದೆ. ಈ ರೀತಿ ನಮ್ಮಲ್ಲಿ ಸಂತಸ, ಶೋಕ, ರೌದ್ರ ಹೀಗೆ ಹಲವಾರು ಭಾವನೆಗಳ ಮಿಶ್ರಣ ಉಂಟಾಗಿ ನಾವು ನಮ್ಮೊಳಗಿನ ಕೋಪತಾಪ, ದುಷ್ಟಭಾವನೆಗಳನ್ನೆಲ್ಲ ನಾಟಕ ಮುಗಿಯುವಷ್ಟರಲ್ಲಿ ಹೊರಕಾರಿ ಪರಿಶುದ್ಧರಾಗುತ್ತೇವೆ. ಈ ವಿರೇಚನೆಯ ಮೂಲಕ ಉಂಟಾಗುವ ರಸಾನುಭವ ಹಾಗೂ ಪರಿಶುದ್ಧಿಯನ್ನು ಕ್ಯಥಾರ್ಸಿಸ್ ಎನ್ನಲಾಗುತ್ತದೆ.
ಕಾಸರವಳ್ಳಿಯವರ ವಾದವೇ ಸರಿ ಎನ್ನುವುದಾದರೆ, ‘ತಾರೇ ಜಮೀನ್ ಪರ್’ನಿಂದ ಲರ್ನಿಂಗ್ ಡಿಸೇಬಿಲಿಟಿಯ ಬಗ್ಗೆ ಉಂಟಾದ ಅರಿವು, ‘ರಂಗ್ ದೇ ಬಸಂತಿ’ಯಿಂದ ಜೆಸ್ಸಿಕಾ ಲಾಲ್ ಕೊಲೆ ಪ್ರಕರಣಕ್ಕೆ ಸಿಕ್ಕಿದ ತಿರುವು, ‘ಚಕ್ ದೇ ಇಂಡಿಯಾ’ದಿಂದ ಮಹಿಳಾ ಹಾಕಿಯ ಬಗ್ಗೆ ಬದಲಾದ ನಮ್ಮ ಮನೋಭಾವ, ‘ಲಗೇ ರಹೊ ಮುನ್ನಾಭಾಯಿ’ ಯಿಂದ ಗಾಂಧೀಜಿಯನ್ನು ಮರೆತೇಹೋಗಿದ್ದ ಪೀಳಿಗೆಗೆ ಅವರ ಬಗ್ಗೆ ಮೂಡಿದ ಹೊಳಹು - ಇವಕ್ಕೆಲ್ಲ ಏನೆನ್ನೋಣ? ಇವು ಬರೇ ಚಿತ್ರಮಂದಿರಗಳಿಗಷ್ಟೆ ಸೀಮಿತವಾದ ಚಲನಚಿತ್ರಗಳಾಗಿ ಉಳಿಯದೆ ಜನರನ್ನು ಭಾವುಕರನ್ನಾಗಿ ಮಾಡಿ ಅದರಿಂದಾಚೆಗಿನ ಜಿವನದ ಮೇಲೂ ಸಾಕಷ್ಟು ಪರಿಣಾಮ ಬೀರಿದವು. ಜನ ಇವನ್ನು ನಿರುದ್ವೇಗದಿಂದ ನೋಡಲಿಲ್ಲ. ಸಾಮಾಜಿಕ ಕಳಕಳಿಯುಳ್ಳ ಒಂದು ಚಲನಚಿತ್ರವನ್ನು ನಾವು ನಿರುದ್ವೇಗದಿಂದ ನೋಡುವುದು ಸಾಧ್ಯವೆ? ನನ್ನ ಪ್ರಕಾರ ಪರ್ಯಾಯ ಸಿನೆಮಾ ಅಂದರೆ ಇಂಥ ಸಿನೆಮಾಗಳು. ಸಾಂಕೇತಿಕವಾಗಿಯೆ ಎಲ್ಲವನ್ನೂ ಬಿಂಬಿಸಿ ಯಾರಿಗೂ ಅರ್ಥವಾಗದ ಸಿನೆಮಾಗಳಲ್ಲ.
ಸಮಯ ನೋಡಿಕೊಂಡರೆ ಅರೆರೆ..ಆಗಲೆ ಏಳು ಗಂಟೆ!! ಮನೆಯಲ್ಲಿ ಐದೂವರೆಗೆ ವಾಪಾಸು ಬರುತ್ತೇನೆ ಎಂದಿದ್ದೆ. ಗಾಬರಿಯಾಗಿರುತ್ತಾರೆ. ಶೇಖರಪೂರ್ಣರು ನನ್ನ ಚಡಪಡಿಕೆ ನೊಡಲಾಗದೆ ಬೇಗಬೇಗನೆ ಬಹುಮಾನ ವಿತರಣೆಯ ವ್ಯವಸ್ಥೆ ಮಾಡಿದರು. ಕಾಸರವಳ್ಳಿಯವರ ಕೈಯಿಂದ ಬಹುಮಾನ ಇಸಿದುಕೊಂಡು ಎಲ್ಲರಿಗೂ ವಿದಾಯ ಹೇಳಿ ಅರೆಮನಸ್ಸಿನಿಂದಲೇ ಹೊರಟೆ.