ಕಾಲ ಹಾಗು ತಂತ್ರಜ್ಞಾನವನ್ನ ಅದರ ಹುರುಪಿನ ಸಮೇತ ಅರಿಯುತ್ತ ಸಧ್ಯತನಕ್ಕೆ ಕಣ್ಣು ಕೀಲಿಸಿ ಅದರ ಬಗ್ಗೆ ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸುವುದು ಉಪ್ಪಿಯ ಸ್ಪೆಷಾಲಿಟಿ. ‘ಸೂಪರ್’ ಸಿನಿಮಾದ ಹೊತ್ತಿಗೆ ಅವರು ಮಾಗಿರುವುದು ಸ್ಪಷ್ಟ ಗೊತ್ತಾಗುತ್ತದೆ. ‘ಎ’ಸಿನಿಮಾದಲ್ಲಿ ಅವರು ಪ್ರೇಮ-ಕಾಮದ ಜಿಜ್ಞಾಸೆ ಕಾಣಿಸಿದರು. ‘ಉಪೇಂದ್ರ’ಸಿನಿಮಾದಲ್ಲಿ ಅರಿಷಡ್‌ವರ್ಗಗಳ ಉಪಟಳ ಕಾಣಿಸಿದರು. ಅನಂತರ ಅವರು ನಿರ್ದೇಶನ ಬಿಟ್ಟು ಮಗುಮ್ಮಾದರು. ಈಗ ಅವರ ‘ಸೂಪರ್’ ಸಿನಿಮಾ ಪ್ರಜಾಪ್ರಭುತ್ವ ಮತ್ತದರ ಕಾರ್ಯಸೂಚಿಗಳ ಬಗೆಗೆ ಹೊಸ ಭಾಷ್ಯ ಬರೆಯುವ ಸನ್ನಾಹ ಮಾಡಿದೆ. ನಮ್ಮ ವ್ಯವಸ್ಥೆಯನ್ನ ಸರಿಮಾಡಿಕೊಂಡಿದ್ದೇಯಾದರೆ ಮೂಡುವ ಚಿತ್ರ ಹೇಗಿರುತ್ತದೆ ಎಂಬುದನ್ನು ಮೂವತ್ತು ವರ್ಷ ಮುಂದಕ್ಕೆ ಸಾಗಿ ವಿಶ್ಲೇಶಿಸಿದ್ದಾರೆ. ೨೦೩೦ರಲ್ಲಿ ಭಾರತ ತುಂಬ ಸಂಪದ್ಭರಿತವಾಗಿರುತ್ತದೆ; ಹೊರದೇಶದವರು ಬಂದು ಭಾರತದಲ್ಲಿ ಭಿಕ್ಷೆ ಬೇಡುತ್ತಿರುತ್ತಾರೆ. ಡಾಲರ್ಸ್ ಹಾಗು ಪೌಂಡ್‌ಗೆ ಬೆಲೆ ಬಿದ್ದುಹೋಗಿ ರೂಪಾಯಿಗೆ ಬೆಲೆ ಇರುತ್ತದೆ. ಈ ಎಲ್ಲವನ್ನ ಒಬ್ಬ ವಿದೇಶಿಗನ ಅಚ್ಚರಿಯಲ್ಲೇ ಸೆರೆಹಿಡಿಯುತ್ತ ಅವನ ಕೌತುಕವನ್ನ ತಣಿಸುವ ತಂತ್ರದಲ್ಲಿ ಕಥೆ ಬೆಳೆಯುತ್ತದೆ.
ಉಪೇಂದ್ರ ಸಿನಿಮಾಗಳಲ್ಲಿ ಟ್ವಿಸ್ಟ್‌ಗಳಿಗೇನೂ ಕೊರತೆಯಿರುವುದಿಲ್ಲ. ನಾಯಕಿ ಕಂಡ ಕಂಡ ರೌಡಿಗಳ ಬೆನ್ನುಬಿದ್ದು ತನ್ನನ್ನು ಪ್ರೀತಿಸಲು ಗೋಗರೆಯುತ್ತಿರುತ್ತಾಳೆ. ಇದರಲ್ಲೇನೊ ಯಡವಟ್ಟಿದೆ ಎಂದುಕೊಂಡು ಸಿನಿಮಾ ನೋಡುತ್ತಿದ್ದಂತೆಯೆ ಅದರ ಆಸಲಿ ಚಿತ್ರ ಬಯಲಾಗುತ್ತದೆ. ನಾಯಕಿಯೇ ನಾಯಕನನ್ನ ಮುಗಿಸುವ ಹುನ್ನಾರ ಮಾಡುತ್ತಾಳೆ. ಇದೂ ಕೂಡ ಟಿಪಿಕಲ್ ಉಪ್ಪಿ ಸ್ಟೈಲ್. ಈ ಕಗ್ಗಂಟು ಮತ್ತು ಬಿಕ್ಕಟ್ಟುಗಳನ್ನು ಎಳೆಎಳೆಯಾಗಿ ಬಿಚ್ಚಿಡುವುದೇ ಕಥಾಹಂದರ.
ನಾಯಕ ಇಂಗ್ಲೆಂಡ್‌ನಲ್ಲಿ ನೆಲೆಸಿ ಬಿಲಿಯನೇರ್ ಆಗಿದ್ದರೂ ಭಾರತದ ಬಗ್ಗೆ ಸದಾ ತುಡಿಯುವ ಮನಸ್ಸು. ಮಣ್ಣಿನ ಘಮವನ್ನ ಮೂಸಿ ಇದು ತನ್ನ ದೇಶದ್ದೇ ಮಣ್ಣು ಎಂದು ಹೇಳುವಾತ ಮತ್ತು ಸಾಬೀತುಮಾಡುವಾತ. ಭಾರತದ ಪರಂಪರೆಯ ಬಗ್ಗೆ ಅಪಾರ ಗೌರವ ಹೊಂದಿರುವಾತ. ಹೆಸರು ಸುಭಾಷ್‌ಚಂದ್ರಗಾಂಧಿ. ಸ್ವಾತಂತ್ರ್ಯ ಪೂರ್ವದಲ್ಲಿ ಆಂಗ್ಲರು ಭಾರತದ ಸತ್ಯಾಗ್ರಹಿಗಳನ್ನ ಹೇಗೆ ಒಣರೊಟ್ಟಿ ಕೊಟ್ಟು ಒಣಗಿಸಿದರು..ಹೇಗೆ ಭಾರತೀಯರ ರಕ್ತ ಹೀರಿದರು..ಹೇಗೆ ಒಬ್ಬ ಮಹಾನ್ ಕ್ರಾಂತಿಕಾರಿಯನ್ನ ನೇಣಿಗೆ ಏರಿಸಿದರು ಇವೆಲ್ಲ ನಾಯಕನ ಮನಸ್ಸಿನಲ್ಲಿ ಜೀವಂತವಾಗಿವೆ. ಈತ ದೊಡ್ಡ ಮೊತ್ತದ ಬಹುಮಾನದ ಆಮಿಷ ಒಡ್ಡಿ ಈಗಿನ ಆಂಗ್ಲರನ್ನು ಅವರಿಗೆ ಗೊತ್ತಿಲ್ಲದಂತೆ ಪೇಚಿಗೆ ಸಿಲುಕಿಸಿ ತನ್ನ ಸುಪ್ತ ಆಸೆಯನ್ನ ಈಡೇರಿಸಿಕೊಳ್ಳುತ್ತಾನೆ. ಈ ಹುಚ್ಚಾಟಕ್ಕೆ ಕಡಿವಾಣ ಹಾಕಬೇಕೆಂದು ಆತನ ಅಪ್ಪ ಯೋಚಿಸುವುದಕ್ಕೂ ಭಾರತೀಯ ಕಲ್ಪನೆಯೆ ಅನುರೂಪವಾಗಿರುವ ಹುಡುಗಿ ಅಚಾನಕ್ಕಾಗಿ ಸಿಗುವುದಕ್ಕೂ ಒಂದೇಯಾಗಿ ಅದು ಪ್ರೇಮಕ್ಕೆ ತಿರುಗಿ ಕಡೆಗೆ ವಿವಾಹದಲ್ಲಿ ಅಂತ್ಯವಾಗುತ್ತದೆ.
ಇಷ್ಟೇಯಾದರೆ ಅದರಲ್ಲೇನು ಸ್ಪೆಷಲ್? ಅಲ್ಲಿ ಮತ್ತೊಂದು ಟ್ವಿಸ್ಟ್. ಭಾರತೀಯ ನಾರಿ ಗ್ಲಾಮರ್ ನಾರಿಯಾಗಿ ರೂಪಾಂತರ. ಸುಭಾಷ್ ಚಂದ್ರಗಾಂಧಿ ತತ್ತರ. ಇದೇನು ಹೀಗಾಯಿತು ಎಂದು ಗಾಂಧಿ ಭಾರತೀಯತೆಯ ಬಗ್ಗೆ ಲೆಕ್ಚರ್ ಕೊಡಲು ಶುರುಮಾಡಿದರೆ ನಾಯಕಿ ಅದನ್ನೆಲ್ಲ ಅಲ್ಲಗಳೆಯುತ್ತಾಳೆ ಮತ್ತು ಸವಾಲೊಡ್ಡುತ್ತಾಳೆ. ತನಗೆ ಪಾಠ ಹೇಳಿದ ರಿಟೈರ್ ಮಿಡ್ಲ್‌ಸ್ಕೂಲ್ ಮಾಸ್ಟರ್ ವಿಳಾಸ ಕೊಟ್ಟು ಅವರಿಗೆ ಪೆನ್‌ಷನ್ ಬರುವಂತೆ ಮಾಡು ನೋಡೋಣ ಎನ್ನುತ್ತಾಳೆ. ಇದನ್ನು ಸವಾಲಾಗಿ ಸ್ವೀಕರಿಸಿ ಭಾರತಕ್ಕೆ ಬರುವ ಗಾಂಧಿ ದಿಗ್ಭ್ರಮೆಗೊಳ್ಳುತ್ತಾನೆ. ಲಂಚ, ರಾಜಕಾರಣದ ಮೇಲಾಟದ ಕುತಂತ್ರ..ಎಲ್ಲ ಅರಿಯುವಷ್ಟರಲ್ಲಿ ಹೈರಾಣಾಗುತ್ತಾನೆ. ಸಾಲದ್ದಕ್ಕೆ ಆ ಮೇಷ್ಟ್ರ ಬದುಕೂ ಕೂಡ ಮೂರಾಬಟ್ಟೆಯಾಗುತ್ತದೆ. ಈ ಅರಾಜಕತೆಯಿಂದ ಬೇಸತ್ತು ಗಾಂಧಿ ಮತ್ತೆ ಇಂಗ್ಲೆಂಡ್‌ಗೆ ಹಿಂತಿರುಗುವ ಬದಲು ಇಲ್ಲಿನ ಜನರನ್ನ ಬದುಕನ್ನ ವ್ಯಂಗ್ಯವಾಗಿ ಶ್ಲಾಘಿಸುತ್ತಾನೆ. ಆಗ ಥಿಯೇಟರ್‌ನಲ್ಲಿ ಚಪ್ಪಾಳೆಯೋ ಚಪ್ಪಾಳೆ....
ನಂತರ ಭಾರತದಲ್ಲಿಯೇ ತಳವೂರಿ ನಿಲ್ಲುತ್ತಾನೆ. ಹೈಟೆಕ್ ರೌಡಿಪಡೆ ಕಟ್ಟಿಕೊಂಡು ತನ್ನ ದಾಂಗುಡಿ ಮುಂದುವರೆಸುತ್ತಾನೆ. ಇಷ್ಟಕ್ಕೂ ನಾಯಕಿಯೇ ನಾಯಕನನ್ನ ಕೊಲ್ಲಿಸಲು ಪ್ರಯತ್ನಿಸುವುದ್ಯಾಕೆ? ಅದು ತಿಳಿಯಬೇಕಿದ್ದರೆ ಸಿನಿಮಾ ನೋಡಲೇಬೇಕು. ಆ ಹಂತದಿಂದ ಸಿನಿಮಾ ಕಥೆ ಪಲ್ಲಟವಾಗುತ್ತಲೇ ಹೋಗುತ್ತದೆ. ಹೊಸ ವೇಗ ದಕ್ಕಿಸಿಕೊಳ್ಳುತ್ತದೆ. ಹಾಡು, ಸ್ಲೋಮೋಷನ್ ಕ್ಯಾಟ್‌ವಾಕ್‌ಗಳಲ್ಲಿ ಪೋಲಾದ ಸಮಯವನ್ನ ಸರಿದೂಗಿಸುವ ನಿಟ್ಟಿನಲ್ಲಿ ಕಥೆ ಓಡುತ್ತದೆ. ಗೊಂದಲಗೊಂಡರೆ ಪ್ರೇಕ್ಷನಲ್ಲಿ ಕಿಂಚಿತ್ತೂ ಪಶ್ಚಾತ್ತಾಪವಿರುವುದಿಲ್ಲ. ಏಕೆಂದರೆ ಉಪ್ಪಿ ಸಿನಿಮಾ ಮೊದಲ ಸಲಕ್ಕೆ ಅರ್ಥವಾಗುವುದಿಲ್ಲ ಎಂಬ ರಿಯಾಯಿತಿಯೂ ಇರುತ್ತದೆ. ಹಾಗೆಯೇ ಮತ್ತೊಂದು ಸಲ ನೋಡಲಡ್ಡಿಯಿಲ್ಲ ಎಂಬ ಪೂರ್ವಸಿದ್ಧತೆಯೂ ಇದಕ್ಕೆ ಕಾರಣವಾಗಿರಬಹುದು.
ನಾಯಕ ಉಪ್ಪಿ ಅರ್ಥಾತ್ ಸುಭಾಷ್‌ಚಂದ್ರಗಾಂಧಿ ರಾಜಕಾರಣದ ಬಣ್ಣವನ್ನ ಬಯಲುಮಾಡುತ್ತಾರೆ. ಎಮ್ಮೆಲ್ಯೆಗಳ ಒಡಲಾಳದಲ್ಲಿ ಹುದುಗಿರುವ ಕುದುರೆಗಳ ಕೆನೆತ..ಅವರುಗಳ ಕಚ್ಚೆಹರಕುತನ..ಎಲ್ಲವನ್ನ ಫಟಾಫಟ್ ಎನ್ನುವ ರೀತಿಯಲ್ಲಿ ಚಿತ್ರಿಸುತ್ತಾರೆ. ಇವೆಲ್ಲವನ್ನ ಒಂದು ಹಂತದವರೆಗೆ ಒಪ್ಪಿಕೊಳ್ಳಬಹುದು. ಆದರೆ ಇಡೀ ರಾಜಕೀಯದಾಟವನ್ನ ಪಲ್ಲಟಗೊಳಿಸಿ ತಾನೇ ಮುಖ್ಯಮಂತ್ರಿಯಾಗುವುದು ಅಷ್ಟು ಸುಲಭವಲ್ಲ ಎಂದುಕೊಳ್ಳುತ್ತಿರುವಾಗಲೆ ಉಪ್ಪಿ ಸಿ.ಎಂ ಡಿಫನೇಷನನ್ನೇ ಬದಲಾಯಿಸಿಬಿಡುತ್ತಾರೆ. ಅವರ ಪ್ರಕಾರ ಸಿ.ಎಂ.ಎಂದರೆ ಕಾಮನ್ ಮ್ಯಾನ್! ಅಲ್ಲಿಂದ ಅವರ ಜನಸಾಮಾನ್ಯನ ರಾಜಕೀಯ ಸಿದ್ಧಾಂತದ ಸಾಕ್ಷಾತ್ಕಾರದ ಪಾಠ ಆರಂಭ. ಇಡೀ ರಾಜ್ಯವನ್ನೇ ಹರಾಜಿಗೆ ಹಾಕಿಬಿಟ್ಟರೆ ಜನರಲ್ಲಿ ಜಾಗೃತಿ ಮೂಡುತ್ತದೆ ಎಂಬ ತಿಳುವಳಿಕೆ ಅವರದು. ಇದು ಒಂದು ಬಗೆಯ ಹೊಸ ಒಳನೋಟ ಎಂದುಕೊಳ್ಳುವವರಿಗೆ ಈ ಐಡಿಯಾ ಬಹಳವೇ ಹಿಡಿಸಬಹುದು. ಮೆಚ್ಚಿಕೊಳ್ಳಲೇನೂ ಅಡ್ಡಿಯಿಲ್ಲ. ಆದರೆ ಉಪ್ಪಿ ಜನಸಾಮಾನ್ಯರನ್ನ ಗುರಿಯಾಗಿಟ್ಟಿಕೊಂಡು ವ್ಯಂಗದ ಶ್ಲಾಘನೆಗೆ ನಿಂತಾಗಲೂ ಚಪ್ಪಾಳೆ ಜೋರಾಗಿಯೇ ಕೇಳಿಸುತ್ತದೆ ಎಂದರೆ ಅದನ್ನು ಹೇಗೆ ಅರ್ಥೈಸಿಕೊಳ್ಳಬೇಕೆನ್ನುವುದೇ ದೊಡ್ಡ ಸವಾಲಿನ ಪ್ರಶ್ನೆಯಾಗಿದೆ. ಚಪ್ಪಾಳೆ ಹೊಡೆಯುವವರೆಲ್ಲ ಉಪ್ಪಿ ಹೇಳುವಂತೆ ‘ಸತ್ ಪ್ರಜೆ’ಗಳಾಗಿರದೆ ನಿಜಕ್ಕೂ ಸತ್ಪ್ರಜೆಗಳಾಗಿದ್ದಾರೆಯೆ?
ಏನೇಯಾಗಲಿ ಉಪ್ಪಿಯ ರಾಜಕೀಯ ಹೊಸ ಐಡಿಯಾಲಜಿಗಳನ್ನ ಪಕ್ಕಕ್ಕಿರಿಸಿ ನೋಡಿದರೆ ಅವರ ನಿಜವಾದ ಕ್ರಿಯೇಟಿವಿಟಿ ವ್ಯಕ್ತವಾಗಿರುವುದು ಚಿತ್ರಕ್ಕೆ ದುಡಿದವರನ್ನ ಅವರು ಪರಿಚಯಿಸಿರುವ ಧಾಟಿಯಲ್ಲಿ. ತಮ್ಮನ್ನು ‘ರಿ ಐಲ್ ಸ್ಟಾರ್’ ಎಂದು ಯಾವ ಬಿಂಕು ಬಿನ್ನಾಣಗಳಿಲ್ಲದೆ ಕರೆದುಕೊಂಡು ಸಮಾನಸ್ಕಂದರಾಗಿ ಮೆರೆದಿದ್ದಾರೆ.
ಆದರೆ ಚಿತ್ರದ ಪ್ರಾರಂಭ ಮಾತ್ರ ಉಪ್ಪಿಯ ಇನ್ನಿತರ ಸಿನಿಮಾಗಳಂತೆ ಇಲ್ಲ. ಇಲ್ಲಿ ಉಪ್ಪಿ ಭಾರತದ ಭೂಗೋಳ, ಚರಿತ್ರೆ, ಅಧ್ಯಾತ್ಮದ ಪ್ರಸರಣ ಎಲ್ಲವನ್ನೂ ಪಾಠ ಹೇಳಿಸುತ್ತಾರೆ. ಈ ಪ್ರಾರಂಭದ ಬೋರು ನಂತರದಲ್ಲಿ ಕಳೆದುಹೋಗುವಂತೆ ಚಿತ್ರವನ್ನ ಸರಿದೂಗಿಸಿಕೊಂಡು ಹೋಗಿದ್ದಾರೆ. ಗ್ರಾಫಿಕ್ಸ್ ತಂತ್ರಜ್ಞಾನವನ್ನ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ವಿಧಾನಸೌಧದ ಹಿಂಭಾಗದಲ್ಲಿ ಬಹುಮಹಡಿ ಕಟ್ಟಡಗಳಿರುವಂತೆ ಕಾಣಿಸಿ ಥೇಟ್ ವಿದೇಶದ ಛಾಯೆ ಕಣ್ಮುಂದೆ ಬರುವಂತೆ ಮಾಡಿದ್ದಾರೆ. ವಾಸ್ತವದಲ್ಲಿ ನಿಜವಾಗುತ್ತದೆಯೋ ಇಲ್ಲವೋ..ಕಡೇಪಕ್ಷ ಚಿತ್ರದಲ್ಲಿ ನೋಡಿದಾಗಲಂತೂ ಸಂತೋಷವಾಗುವುದಂತೂ ಗ್ಯಾರಂಟಿ. ಇಂಥ ಒಂದಿಲ್ಲೊಂದು ಬೆರಗಿನಲ್ಲಿ ಜಾಳು ಜಾಳು ಕಥೆಯ ಹಂದರಗಳನ್ನ ಮುಚ್ಚಿರುವ ಉಪ್ಪಿ ಆಗಾಗ ಮಾತ್ರ ತಮ್ಮ ಸ್ಟೈಲ್‌ನಲ್ಲಿ ಮಿಂಚುತ್ತಾರೆ ಮತ್ತು ಅದಕ್ಕಾಗಿ ಪ್ರೇಕ್ಷಕರನ್ನು ಕಾಯುವಂತೆ ಮಾಡುತ್ತಾರೆ. ಒಂದು ಬಗೆಯ ಪ್ರೀಕನ್ಸೀವ್ಡ್ ಇಮೇಜ್ ಇನ್ನೂ ಉಪ್ಪಿಯ ವಿಚಾರದಲ್ಲಿ ಉಳಿದುಕೊಂಡಿರುವುದೇ ಚಿತ್ರ ನೋಡುವುದಕ್ಕೆ ಪ್ಲಸ್ ಪಾಯಿಂಟ್ ಆಗುತ್ತದೆ.
04-12-2010
Upendra directorial Super movie review, Super film review