ವರ್ಷದಿಂದೀಚೆ ಖಾಸಗಿ ವಾಹಿನಿಯೊಂದರಲ್ಲಿ ಇಮೋಷನಲ್ ಅತ್ಯಾಚಾರ್ (ಭಾವನಾತ್ಮಕ ಅತ್ಯಾಚಾರ) ಎಂಬ ರಿಯಾಲಿಟಿ ಶೋ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ನಿಮಗೆ ನಿಮ್ಮ ಪ್ರಿಯಕರ/ಪ್ರಿಯತಮೆಯಲ್ಲಿ ನಂಬಿಕೆ ಹೊರಟು ಹೋಗಿದ್ದರೆ, ಅನುಮಾನ ಹುಟ್ಟಿಕೊಂಡಿದ್ದರೆ, ಈ ಚಾನೆಲ್ ನವರು ನಿಮ್ಮ ಸಹಾಯಕ್ಕೆ ದೌಡಾಯಿಸಿಬರುತ್ತಾರೆ. ಇದರಿಂದ ನಿಮಗೆರಡು ಲಾಭ; ಒಂದು , ನಿಮ್ಮ ಸಂಗಾತಿಯ ನಿಷ್ಠೆ ಯ ನೈಜತೆ ಇಡೀ ಜಗತ್ತಿನ ಮುಂದೆ ಬಯಲಾಗುತ್ತದೆ. ಎರಡು ಪುಕಸಟ್ಟೆಯಾಗಿ ಒಂದರ್ಧ ಗಂಟೆ ಟಿ.ವಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತೀರಿ. ಒಪ್ಪಿಕೊಂಡ ಸಂಗಾತಿಯನ್ನೇ ಸಾರ್ವಜನಿಕವಾಗಿ ಅಗ್ನಿ ಪರೀಕ್ಷೆಗೊಳಪಡಿಸುವ ನಿಮ್ಮ ನಿಷ್ಠೆಯನ್ನ ಚಾನೆಲ್ ನವರು ತಪ್ಪಿಯೂ ಪ್ರಶ್ನಿಸುವುದಿಲ್ಲ. ಅವರ ಮಟ್ಟಿಗೆ ನೀವು ಮರ್ಯಾದ ಪುರುಷೋತ್ತಮ ರಾಮನೋ, ಸತಿ ಸಾವಿತ್ರಿಯೋ ಆಗಿರುತ್ತೀರಿ.
ಈ ಕಾರ್ಯಕ್ರಮದ ಜನಪ್ರಿಯತೆ ಯಾವ ಅತಿರೇಕಕ್ಕೆ ಹೋಗಿದೆಯೆಂದರೆ, ಇನ್ನೊಂದು ಚಾನೆಲ್ ನವರು ಎಕ್ಸ್ ಯುವರ್ ಎಕ್ಸ್ (ಮಾಜಿಗೆ ಕೊಡಲಿ..?) ಎಂಬ ಷೋ ಪ್ರಾರಂಭಿಸಿದ್ದಾರೆ. ಇಲ್ಲಿ ನಿಮ್ಮನ್ನ ಮೊಸ ಮಾಡಿದ ನಿಮ್ಮ ಮಾಜಿ ಪ್ರೇಯಸಿ/ಪ್ರಿಯಕರನ ಮೇಲೆ ನೀವು ಸೇಡು ತೀರಿಸಿಕೊಳ್ಳುವ ಅವಕಾಶ ನೀಡಲಾಗುತ್ತೆ. ಒಂದು ಸಮಯದಲ್ಲಿ ನೀನೇ ನನ್ನ ಪ್ರಾಣ .. ಎಂದೆಲ್ಲಾ ಹಲುಬಿದ್ದ ಸಂಗಾತಿಗೆ ಚಿತ್ರ-ವಿಚಿತ್ರ ಬಗೆಯ ಕಿರುಕುಳ ಕೊಡುವುದರ ಮೂಲಕ ನಿಮ್ಮ ನೋವನ್ನ ಬದುಕಿನ ಪುಟಗಳಿಂದ ಅಳಿಸಿಕೊಳ್ಳಬಹುದು?!!
ಶತ ಶತಮಾನಗಳಿಂದ ಧರ್ಮ, ದೇಶ. ನಾಗರೀಕತೆಗಳು ಮನುಷ್ಯನ ಆಳವನ್ನ, ಮೂಲಗುಣವನ್ನ ಸಂಪೂರ್ಣ ಹತೋಟಿಗೆ ತರುವುದು ಸಾಯಲೀ, ಅರ್ಥಕೂಡ ಮಾಡಿಕೊಳ್ಳಲಾಗದೇ ಒದ್ದಾಡುತ್ತಿರುವಾಗ, ಈ ವಿಘ್ನ ಸಂತೋಷಿಗಳು ರಿಯಾಲಿಟಿ ಶೋ ಗಳ ಮೂಲಕ ಮನುಷ್ಯರಲ್ಲಿ ನಂಬಿಕೆಯ ಗೂಟ ಹೊಡೆಸುವ ಪಣ ತೊಟ್ಟಿದ್ದಾರೆ. ಮನುಷ್ಯನ ಘನತೆಯನ್ನ ಮೂರಾಬಟ್ಟೆ ಮಾಡುವ ಈ ಶೋಗಳ ಉದಾಹರಣೆ ಯಾಕೆ ಕೊಡಬೇಕಾಯಿತೆಂದರೆ, ಗಿರೀಶ್ ಕಾಸರವಳ್ಳಿ ಯ ಹೊಸ ಸಿನೆಮಾ ಕನಸೆಂಬೋ ಕುದುರೆಯನ್ನೇರಿ.. ಮಾತನಾಡುವುದು ಕೂಡ ನಂಬಿಕೆ ಮತ್ತು ಘನತೆಯ ಬಗ್ಗೆ. ಪ್ರಾಯಶಃ ಇಂತಹ ತಿಕ್ಕಲು ಹಿಡಿದಿರುವ ಕಾರ್ಯಕ್ರಮಗಳಿಗೆ ಸಾಂಸ್ಕೃತಿಕ ವಲಯದಿಂದ ಬಂದ ಅತ್ಯಂತ ಸಮಂಜಸ ಉತ್ತರ ಈ ಸಿನೆಮಾ.
ಈರ್ಯನಿಗೆ ತನ್ನ ಕನಸುಗಳ ಮೇಲೆ ಅಪಾರ ನಂಬಿಕೆ; ಆತನ ಪತ್ನಿ ರುದ್ರಿಗೂ ಸಹ. ಹೆಣ ಹೂಳಲು ಗುಂಡಿ ತೋಡುವ ಕಾಯಕ ಬಿಟ್ಟರೆ ಈರ್ಯ ಇನ್ನೇನೂ ಮಾಡಲಾರ. ಆ ರಾತ್ರಿಯೂ ಅವನ ಕನಸಿನಲ್ಲಿ ಸಿದ್ದ ಬಂದು ಕಾಯಕಕ್ಕೆ ಸಿದ್ಧನಾಗು ಎಂದೆನ್ನುತ್ತಾನೆ. ರಾತ್ರಿ ಊಟಕ್ಕೆ ಮಾಂಸ ತರುವ ಆಶ್ವಾಸನೆ ಕೊಟ್ಟ ಈರ್ಯ ಸಾವಿಗೆ ಕಾದಿರುವ ಗೌಡನ ಮನೆ ಬಾಗಿಲಿಗೆ ಬರುತ್ತಾನೆ. ಕನಸನ್ನ ನಂಬಿಕೊಂಡು ಹೆಣ ಹೂಳಲು ಬಂದ ಈರ್ಯನನ್ನ ನೋಡಿ ಗೌಡನ ಕೆಲಸದಾಳುಗಳು ರೇಗುತ್ತಾರೆ; ಪ್ರೇಕ್ಷಕ ನಗುತ್ತಾನೆ. ಗೌಡ ಸತ್ತಿಲ್ಲ ಎಂಬುದನ್ನ ಈರ್ಯನಿಗೆ ನಂಬಲಾಗುವುದಿಲ್ಲ. ಎಂದೂ ಹುಸಿಯಾಗದ ತನ್ನ ಕನಸು ಈ ಬಾರಿ ಸುಳ್ಳಾಗುತ್ತಿರುವುದು ಈರ್ಯನಿಗೆ ಸಹಿಸಲಾಗುವುದಿಲ್ಲ. ಅವನದು ಬೆಪ್ಪುತನವೋ, ಮೌಢ್ಯವೋ ಎಂದು ನಾವು ಉಡಾಫೆ ಮಾಡುವ ಹೊತ್ತಿನಲ್ಲಿ , ನಿರ್ದೇಶಕ ಮರೆ ಮಾಚಿದ್ದ ಅರ್ಧ ಸತ್ಯವನ್ನ ಹೊರಗೆಡವುತ್ತಾನೆ. ಅಲ್ಲಿ ಈರ್ಯನ ಕನಸು ನಿಜವಾಗಿರುತ್ತದೆ. ಆದರೇ ತನ್ನದೇ ಕಾರಣಗಳಿಗೆ ಗೌಡರ ಮನೆಯವರು ಅದನ್ನ ಮುಚ್ಚಿಡಬೇಕಾಗಿ ಬಂದಿರುತ್ತದೆ.
ನೇರ ನಿರೂಪಣೆಯಲ್ಲಿ ಸಾಗದೇ, ಕಥೆ ಬೇರೆ ಬೇರೆ ಮಗ್ಗಲುಗಳಲ್ಲಿ ಹರವಿಕೊಳ್ಳುವುದು, ಚಿತ್ರ-ಕಥೆಗೆ ಪೂರಕವಾಗಿ ಬಂದಿದೆ. ಮೇಲ್ ಮಧ್ಯಮ ವರ್ಗದ ವ್ಯವಹಾರಗಳು, ಬಡ ಈರ್ಯನಂತಹವರ ನಂಬಿಕೆಯನ್ನ ಹಿಸುಕುಹಾಕಿಬಿಡುತ್ತವೆ. ಕೇಂದ್ರ ಪ್ರಜ್ಞೆಯಿಂದ ತಪ್ಪಿಸಿಕೊಳ್ಳುವ ಈ ಚಿತ್ರ ಏಕ ಕಾಲಕ್ಕೆ ಹಲವು ಕಥೆಗಳನ್ನ ಹೇಳುತ್ತಿರುತ್ತದೆ. ಈರ್ಯ-ರುದ್ರಿಯರ ನಂಬಿಕೆಯ ಕಥೆಯ ಹೊರತಾಗಿ , ಇದು ಹೆಣದ ಕಥೆಯೂ ಹೌದು, ಸಂಪ್ರದಾಯ, ಮೌಲ್ಯಗಳು ಅವಸಾನದಂಚಿನಲ್ಲಿರುವುದರಿಂದ ಆತಂಕಿತನಾದ ಮಠದಯ್ಯನ ರೋದನೆಯೂ ಹೌದು. ಹೆಣ ಕಾಯುವ ಕರ್ಮಕ್ಕೆ ಬಿದ್ದ ಗೌಡನ ಸೊಸೆಯ ಗೋಳಾಟವೂ ಹೌದು. ಚಿತ್ರದ ತಾಂತ್ರಿಕ ಕಾರಣದಿಂದ ಇದಕ್ಕೆ ಇಷ್ಟೆಲ್ಲ ಆಯಾಮ ದಕ್ಕಿರುವುದು ಕುತೂಹಲಕಾರಿಯಾಗಿದೆ.
ಗ್ರಹೀತ ಸತ್ಯಕ್ಕೂ ವಾಸ್ತವಕ್ಕೂ ಸಾಕಷ್ಟು ಅಂತರವಿರುತ್ತದೆ. ಗ್ರಹೀತ ಸತ್ಯವನ್ನೇ ನಾವು ಅಂತಿಮ ವಾಸ್ತವ ಎಂದೊಪ್ಪಿಕೊಂಡು ಬಿಡುವ ತಪ್ಪು ಮಾಡುತ್ತೇವೆ. ಆದರೀಲ್ಲಿ ನಿರ್ದೇಶಕರು ಗ್ರಹೀತ ಸತ್ಯವನ್ನ ಬೇರೆ ಬೇರೆ ಆಯಾಮಗಳಲ್ಲಿ ತೆರೆದಿಡುತ್ತಲೇ, ವಾಸ್ತವ ಕಣ್ಣೆದುರಿಗೆ ಬಂದು ನಿಲ್ಲುತ್ತದೆ. ಕಥೆಯ ಹೊರಗೆ ನಿಂತು ಪ್ರೇಕ್ಷಕನಿಗೆ ಕಾಣುವ ವಾಸ್ತವ, ಪಾತ್ರಗಳಿಗೆ ದಕ್ಕದೇ ಹೋಗುತ್ತದೆ. ಆ ಮೂಲಕ ನಮ್ಮ ನಮ್ಮ ನಿತ್ಯದಲ್ಲಿ ವಾಸ್ತವದಿಂದ ನಾವೆಲ್ಲ ಅದೆಷ್ಟು ದೂರದಲ್ಲಿರುತ್ತೇವೆ ಎಂಬ ಮನವರಿಕೆಯೂ, ಸತ್ಯವನ್ನ ಸಂಪೂರ್ಣವಾಗಿ ದೊರಕಿಸಿಕೊಳ್ಳಲಾಗದ ನಮ್ಮ ಅಸಮರ್ಥತೆಯನ್ನೂ ಚಿತ್ರ ನಮಗೆ ಮನದಟ್ಟು ಮಾಡಿಸುತ್ತದೆ.
ಇತ್ತ ರುದ್ರಿ ಕೂಡ ಮಾರನೇ ದಿನ ರಾತ್ರಿ ಸಿದ್ಧ ಮನೆಗೆ ಬರುವ ಕನಸು ಕಾಣುತ್ತಾಳೆ (ಸಿದ್ಧರು ಊರಿಗೆ ಬಂದರೆ ಆ ಊರಿಗೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಉತ್ತರ ಕರ್ನಾಟಕದ ಭಾಗದಲ್ಲಿದೆ). ಸೇವಂತಿಗೆ ತೋಟದಲ್ಲಿ ಹೂವು ಆಯುವ ಈಕೆ ನಾಲ್ಕೈದು ಹೂವನ್ನೋ, ಒಂದೆರಡು ಈರುಳ್ಳಿಯನ್ನೋ ಕದ್ದು ಒಡಲಲ್ಲಿ ಹಾಕಿಕೊಳ್ಳುವಳೇ ವಿನಃ ಆಕೆ ಕೆಟ್ಟವೇಳನಲ್ಲ. ಸಿದ್ದನಿಗಾಗಿ ಮಾಂಸದಡುಗೆ ತಯಾರಿಸಿಟ್ಟ ಆಕೆಯ ನಂಬಿಕೆಯೂ ಬುಡಮೇಲಾಗುವಂತೆ ಆ ರಾತ್ರಿ ಸಿದ್ಧ ಬರುವುದಿಲ್ಲ.
ಇಬ್ಬರ ಕನಸೂ ಈಡೇರದ ಗಳಿಗೆಗಳಲ್ಲಿ ಈರ್ಯನಿಗೆ ನಿದ್ದೆಯೇ ಬೇಡವೆನಿಸುತ್ತೆ. ನಿದ್ದೆಯೇ ಇಲ್ಲದಿದ್ದ ಮೇಲೆ ಕನಸಿನ ಮಾತೆಲ್ಲಿ??
ಅತ್ತ ಗೌಡನ ಹೆಣ ಕೊಳೆತು ನಾರುತ್ತಿದ್ದರೆ, ಇತ್ತ ಈರ್ಯ-ರುದ್ರಿಯರ ನಂಬಿಕೆಗಳೂ ಹೆಣವಾಗಿ ನಾರುವ ಹಂತದಲ್ಲಿವೆ. ಅತ್ತ ಗೌಡನ ಮಗ-ಸೊಸೆ ತಮ್ಮದೇ ವ್ಯವಹಾರಿಕ ಕಾರಣಗಳಿಗಾಗಿ ಹೆಣವನ್ನ ಹೂಳದೇ ಬಿಟ್ಟಿದ್ದಾರೆ. ಇತ್ತ ಈರ್ಯನಿಗೆ ತನ್ನ ನಂಬಿಕೆಗಳನ್ನ ಹೂಳಲು ಇಷ್ಟವಿಲ್ಲ. ಅವನು ಬದುಕು ಕಟ್ಟಿಕೊಂಡಿರುವುದೇ ಇಂತಹ ನಂಬಿಕೆಗಳ ಮೇಲೆ.
ಈ ಸಿನೆಮಾದಲ್ಲಿ ಸ್ಥಾಯಿಯಾಗಿರುವುದು ಕಾಯುವಿಕೆ. ಗೌಡನ ಹೆಣದ ಮುಕ್ತಿಗೆ ಕಾಯುವ ಮಠದಯ್ಯ, ಹೆಣದಿಂದ ಬಿಡುಗಡೆ ಸಿಕ್ಕರೆ ಸಾಕೆಂದು ಗಂಡನಿಗಾಗಿ ಕಾಯುವ ಸೊಸೆ, ತನ್ನ ಕನಸು ನಿಜವಾಗುವ ಸುದ್ದಿಗಾಗಿ, ಗೌಡನ ಸಾವಿಗಾಗಿ ಕಾಯುವ ಈರ್ಯ, ಸಿದ್ದನಿಗಾಗಿ ಕಾಯುವ ರುದ್ರಿ, ಮನೆ ತುಂಬಿಕೊಂಡಿರುವ ಹೆಣದ ವಾಸನೆಯಿಂದ ಬಿಡುಗಡೆಗೆ ಕಾಯುವ ಮಗಳು. ಈ ಎಲ್ಲ ಕಾಯುವಿಕೆಯಲ್ಲಿ ಈರ್ಯ-ರುದ್ರಿಯರ ಕಾಯುವಿಕೆ ನಮಗೆ ಅರ್ಥಪೂರ್ಣವೆನಿಸುತ್ತದೆ.
ಬದಲಾದ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಈರ್ಯ ಮತ್ತು ರುದ್ರಿಗೆ ತಾವು ಕಂಡಿದ್ದ ಕನಸುಗಳು ನಿಜವಾಗಿದ್ದವು ಎಂಬ ನಂಬಿಕೆ ಬರುತ್ತದೆ. ಇದು ಚಿತ್ರದ ಬಹು ಮುಖ್ಯ ಘಟ್ಟ. ’ಇಲ್ಲದವರ’ ಕನಸನ್ನು ಸ್ಥಾಪಿತ ಹಿತಾಸಕ್ತಿಗಳು ಹೊಸಕಿ ಹಾಕುತ್ತಲೇ ಇರುತ್ತವೆ. ಹೀಗೆ ಹೊಸಕಿ ಹಾಕುತ್ತಲೇ ಮುಂದೊಂದು ದಿನ ಕನಸುಗಳೇ ಇಲ್ಲದ ಜಗತ್ತನ್ನು ಸೃಷ್ಟಿ ಮಾಡುವ ಹಿಡನ್ ಅಜೆಂಡಾ ಈ ಸ್ಥಾಪಿತ ಹಿತಾಸಕ್ತಿಗಳ ಹಿಂದಿರುತ್ತದೆ. ಹಾಗಾಗಿ ಕನಸು ಕಾಣುವುದರಲ್ಲೇ, ಈ ಜಗತ್ತಿನ ಬಡವರ, ಶೋಷಿತರ ಗೆಲುವಿದೆ. ಈರ್ಯು ಮತ್ತು ರುದ್ರಿಯ ಗೆಲುವಿರುವುದೂ ಅದರಲ್ಲೇ!! ಚಿತ್ರದ ಕೊನೆಯಲ್ಲಿ ಆತ ಕಾಣುವ ಕನಸಿನಲ್ಲಿ ವ್ಯವಸಾಯ ಮಾಡುವ ಈರ್ಯ ಮತ್ತು ರುದ್ರಿಯ ಬಳಿ, ಸಿದ್ದ ಬರುತ್ತಾನೆ. ಇದೀಗಿನ ಕನಸಿನಲ್ಲಿ ಸಿದ್ದ , ಅವರ ಪ್ರಯಾರಿಟಿಯಲ್ಲ.. ತನಗೆ ಘನತೆ ತಂದುಕೊಡಬಲ್ಲ ಕೃಷಿ ಈರ್ಯನಿಗೆ ಮುಖ್ಯವಾಗುತ್ತದೆ. ಇಂದು ಆಗಬೇಕಾಗಿರುವುದೂ ಅದೇ, ನಮ್ಮ ಸಂಪ್ರದಾಯ ನಂಬಿಕೆಗಳು ಜೊತೆಯಲ್ಲೇ ಇರಲಿ; ಆದರೆ ನಮಗೆ ಮುಖ್ಯವಾಗಬೇಕಾಗಿರುವುದು ನಮ್ಮೊಳಗಿನ ಘನತೆ. (ಹೆಣ ಅಗೆಯುವುದನ್ನ ಬಿಟ್ಟು ಆತ ಏನೂ ಮಾಡಲೂ ತಯಾರಿರಲಿಲ್ಲ ಎಂಬುದನ್ನ ನಾವು ನೆನಪಿಟ್ಟುಕೊಳ್ಳಬೇಕು.). ಅಂತಿಮ ದೃಶ್ಯದಲ್ಲಿ ಸಿದ್ಧ ಮೆಲ್ಲನೇ ಕ್ಯಾಮೆರಾದಿಂದ, ಈರ್ಯನಿಂದ ದೂರವಾಗುತ್ತ ಸಾಗುತ್ತಾನೆ; ಆದರೇ ಈರ್ಯನಿಗೂ ಸಿದ್ಧನಿಗೂ ಮಧ್ಯೆ ಅವರು ಹಿಡಿದುಕೊಂಡ ದಾರದ ನಂಟಿನ್ನೂ ಇದೆ. ನಮಗೆ ಸಿದ್ಧನ ನಂಬಿಕೆಯೂ ಬೇಕು; ಬದುಕಿನ ಘನತೆಯೂ ಬೇಕು.