ಚಿತ್ರೀಕರಣ ಕೌಶಲ್ಯ ವೃದ್ಧಿ ಶಿಬಿರ ದೇವರಾಯನದುರ್ಗದಲ್ಲಿ(10-01-2011) ಸಿನಿಮಾ ವ್ಯಕ್ತಿಗತವಾಗಿ ಬಾಲ್ಯದಿಂದಲೂ ಮೈಗೂಡಿಕೊಂಡೇ ಬರುವ ಹಂಬಲ. ನಿರ್ದೇಶಕ ನಟ ನಟಿ ಹಾಡುಗಾರ, ಸಂಗೀತ ನಿರ್ದೇಶಕ ಹೀಗೆ ಹಲವು ಮಜಲುಗಳ ನಿರ್ವಹಣೆಯ ಕನಸುಗಳೂ ಸಹ ಹೆಣೆದುಕೊಂಡೆ ಬೆಳೆದುಬಂದಿರುತ್ತವೆ. ಕ್ರಮೇಣ ದಿನನಿತ್ಯದ ಜಂಜಾಟದಲ್ಲಿ ದೇಹ ಮನಸ್ಸುಗಳೆರಡೂ ಜಡ್ಡುಗಟ್ಟಿ ಹೋಗುತ್ತವೆ. ಆದರೂ ಆಗಾಗ್ಗೆ ಕೊರಡುಗಳು ಸಹ ಕೊನರಬಹುದೇನೋ. ಅಮಾವಾಸ್ಯೆ ಕಂದರಗಳಲ್ಲೂ ಬಿದ್ದು ಒದ್ದಾಡುತ್ತಿರಬಹುದಾದವರಿಗೆ ಕಲ್ಪನೆಯ ಕಿಡಿ ಬೆಳಕಾಗಿಯೂ ಕಾಣಿಸಬಹುದು. ಅಂತಹ ಕಿಡಿಯೊಂದನ್ನು ಚಕಮಕಿ ಕಲ್ಲನ್ನು ಉಜ್ಜಿ ಕಿಡಿ ಹೊತ್ತಿಸುವ ಪ್ರಯತ್ನವಾಗಿ ಸಂವಾದ ಡಾಟ್ ಕಾಂ ಲಾಭ ನಷ್ಟಗಳ ಗಣಕೀಕರಣಕ್ಕೆ ಹೋಗದೆ ಕೌಶಲ್ಯ ವೃದ್ಧಿಯ ಮೂರು ದಿನಗಳ ಶಿಬಿರವೊಂದನ್ನು ದೇವರಾಯನದುರ್ಗದಲ್ಲಿ ಆಯೋಜಿಸಿದೆ. ಆಶಯ ಮತ್ತು ಮಾಹಿತಿ ಎಲ್ಲವನ್ನೂ ಕೆಳಗೆ ಪ್ರಶ್ನೋತ್ತರ ರೂಪದಲ್ಲಿ ಕೊಡಲಾಗಿದೆ.
೧. ಶಿಬಿರದ ಮೂಲ ಆಶಯ ಮತ್ತು ಪರಿಕಲ್ಪನೆ: ವ್ಯಕ್ತಿಯ ಬಳಿ ರೂ ನಾಲ್ಕು ಸಾವಿರದಿಂದ ನಲವತ್ತು ಸಾವಿರ ವೆಚ್ಚ ಮಾಡಿ ಖರೀದಿಸಿರಬಹುದಾದ ಕ್ಯಾಮೆರಾಗಳಿರಬಹುದು. ಸಣ್ಣ ಪುಟ್ಟ ಪ್ರವಾಸಗಳಿಗೆ ಹೋಗಿ ಒಂದಷ್ಟು ದೃಶ್ಯಗಳನ್ನು ಕ್ಲಿಕ್ಕಿಸಿರಬಹುದು. ಆ ಚಿತ್ರಗಳನ್ನು ಫೇಸ್ ಬುಕ್, ಪಿಕಾಸ, ಫ್ಲಿಕರ್ ಮುಂತಾದ ಕಡೆ ಎಸೆದು ಚೆಲ್ಲಾಡಿದ್ದರೆ ಅಂಥಹ ಪುಟಗಳಲ್ಲಿ ಆಹಾ ಅದ್ಭುತ! ಎಂದು ಒಂದೇ ಸಾಲಿನ ಪ್ರಶಂಸೆ. ಇದರಾಚೆಗೆ ವಿವಾಹ, ಹಬ್ಬ ಹರಿದಿನ ಮತ್ತು ಬರ್ಥ್ ಡೇಗಳ ಚಿತ್ರೀಕರಣ. ಬಾಲ್ಯದೊಂದಿಗೆ ಬೆಸೆದುಬಂದ ಮೂಲ ಹಂಬಲ ಹೋದದ್ದಾದರೂ ಎಲ್ಲಿ? ಬಾಲ್ಯ, ಯೌವ್ವನ ಅಥ ಮಧ್ಯ ವಯಸ್ಸಿನಲ್ಲೂ ಇದ್ದ್ರಬಹುದಾದ ಉತ್ಸಾಹಕ್ಕೆ ತಕ್ಕಂತೆ ಕಲ್ಪನೆಗಳೂ ಬೆಳೆಯದೇ ಹೋಗಿರಬಹುದು. ಬೆಳೆಯದೇ ಹೋದದ್ದಕ್ಕೆ ಕಾರಣ ಸೂಕ್ತ ಪರಿಸರ ದೊರೆಯದ್ದೂ ಕಾರಣವಿರಬಹುದು. ಇವೆರಡರ ಕೊರತೆಯನ್ನು ಮನಗಂಡು ಸಂವಾದದ ಡಾಟ್ ಕಾಂ ಪರಿಸರದಲ್ಲಿ ಹೊಸತೇ ಆದ ದೃಶ್ಯ ಸಂಸ್ಕೃತಿ ಬೀಜಾಂಕುರಗೊಳಿಸುವ ಪ್ರಯತ್ನವೇ ಈ ಶಿಬಿರ. ಕ್ಯಾಮೆರಾ ಖರೀದಿಸುವಾಗ ಇದ್ದ ಉತ್ಸಾಹ ಮಾಯವಾದದ್ದಾದರೂ ಹೇಗೆ? ಈ ಮಧ್ಯೆ ನಿಕಾನ್, ಕ್ಯಾನನ್ ಸಂಸ್ಥೆಗಳು ಹೊಸ ಹೊಸ ನವೀನ ಅನುಕೂಲಗಳುಳ್ಳ ಕ್ಯಾಮೆರಾಗಳನ್ನು ಬಿಡುಗಡೆ ಮಾಡುತ್ತಲೇ ಬಂದಿವೆ. ಮಾರುಕಟ್ಟೆಯಲ್ಲಿ ಬಿಕರಿಯಾಗಿ ಮನೆಗಳ ಸಂದುಗೊಂದುಗಳಲ್ಲಿ ಧೂಳು ಹಿಡಿದು ಕುಳಿತಿರುತ್ತವೆ. ಅವನ್ನು ಹೊರಕ್ಕೆ ತೆಗೆದು ಧೂಳು ಕೊಡವುವ ಕಡೆಗೆ ನಾವು ಸಾಮೂಹಿಕವಾಗಿ ಕಾರ್ಯೋನ್ಮುಖರಾಗಲು ಸಾಧ್ಯವೆ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ತಾರ್ಕಿಕವಾದ ಒಂದು ಉತ್ತರವನ್ನು ಕಾಣುವ ಪ್ರಯತ್ನವೂ ಸಹ ಈ ಶಿಬಿರದ ಮೂಲ ಆಶಯ.
ನಮ್ಮ ಶಕ್ತಿ - ಸಣ್ಣ ಪುಟ್ಟ ಕ್ಯಾಮೆರಗಳಿಂದ ಹಿದು ಮಧ್ಯಮವರ್ಗಕ್ಕೂ ದುಬಾರಿ ಎಂದೆನ್ನಿಸಿಬಿಡಬಹುದಾತಂಥಹ ಕ್ಯಾಮೆರಾಗಳನ್ನು ಹೊಂದಿರುವವರು ಸಂವಾದ ಡಾಟ್ ಕಾಂ ಪರಿಸರದಲ್ಲಿ ಸಾಕಷ್ಟು ಜನರಿದ್ದಿರಬಹುದು. ಬಹುಷಃ ಇವರೆಲ್ಲರಿಗೂ ಆಗಾಗ್ಗೆ ಹಂಬಲದ ಕಿಡಿ ಹೊತ್ತಿ ಉರಿದು ನಂದಿ ಹೋಗುತ್ತಲೂ ಇದ್ದಿರಬಹುದು. ನನ್ನ ಕಲ್ಪನೆಗೆ ಒಂದು ನೆಲೆಗಟ್ಟು ಬೇಕಿದೆ ಎಂದೆನ್ನಿಸಿರಬಹುದಾದ ಸಂದರ್ಭ ಐವತ್ತು ಜನಕ್ಕಾದರೂ ಇರಲಾರದೆ ಎನ್ನುವುದು ನಮ್ಮ ಅಂದಾಜು. ಈ ಐವತ್ತು ಜನರನ್ನು ಒಂದೆಡೆ ಸೇರಿಸಿ ಒಂದು ದಿನ ಕಲ್ಪನೆಗೆ ವೈಚಾರಿಕತೆಯ ತೀವ್ರತೆಯನ್ನು ತಂದು ಕೊಡಬಹುದಾದ ಮಾತುಗಳ ಜಾಲವನ್ನು ಹೆಣೆಯಬಲ್ಲವರೂ ಇದ್ದಾರೆ.
ನಮ್ಮ ಕೊರತೆಗಳು- ಸಂವಾದ ಡಾಟ್ ಕಾಂನ ಪರಿಸರದಲ್ಲಿರುವ ಯಾರೊಬ್ಬರೂ ಸಿನೆಮ ರಂಗದಲ್ಲಿ ವೃತ್ತಿಪರತೆಯನ್ನು, ನೈಪುಣ್ಯತೆಯನ್ನು ಹೊಂದಿಲ್ಲ. ಇದು ಕೆಲವೊಮ್ಮೆ ದೌರ್ಬಲ್ಯ, ಕೆಲವೊಮ್ಮೆ ತೀವ್ರ ಹಂಬಲಕ್ಕೆ ಎಡೆ ಮಾಡಿಕೊಡುವ ಸಂಗತಿಯಾಗುವುದಿದೆ. ವೃತ್ತಿ ನೈಪುಣ್ಯತೆ ಉಳ್ಳವರನ್ನು ಕರೆಸಿದಲ್ಲಿ ಅವರು ಬಳಸುವ ಪಾರಿಭಾಷಿಕ ಪದಗಳು ನಮ್ಮ ಉತ್ಸಾಹಕ್ಕೆ ಭಂಗ ತರಬಲ್ಲ ಚಟುವಟಿಕೆಯಾಗಿ ಬಿಡಬಹುದು. ಆದ್ದರಿಂದ ನೈಪುಣ್ಯತೆ ಉಳ್ಳವರನ್ನು ಸದ್ಯದ ಪರಿಸ್ಥಿತಿಯಲ್ಲಿ ದೂರವಿಡಬೇಕಾದ ಸಂದರ್ಭ.
೨. ಈ ಶಿಬಿರದಲ್ಲಿ ಭಾಗವಹಿಸಲು ಬೇಕಾಗಿರುವ ಅರ್ಹತೆಗಳು ಏನು?
ನಿಮ್ಮ ಬಳಿ ಬಹಳ ಸರಳವಾದ ಡಿಜಿಟಲ್ ಕ್ಯಾಮೆರಾ ಹಾಗೂ ಟ್ರೈಪಾಡ್ ಜೊತೆಗೆ ಮೂರು ದಿನಗಳ ಕಾಲಾವಕಾಶ ಹಾಗು ಮೂರರಿಂದ ನಾಲ್ಕು ಸಾವಿರದವರೆಗೆ ವೆಚ್ಚ ಭರಿಸುವ ಶಕ್ತಿ.
೩. ಮೂಲ ಪರಿಕಲ್ಪನೆಯ ನಂತರದ ಮಾಹಿತಿಗಳು
ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಬಹುಷಃ ಮಾರ್ಚ್ ಮೊದಲ ವಾರ, ಶಿವರಾತ್ರಿಯ ಹಿಂದು ಮುಂದಿನ ದಿನಗಳಲ್ಲಿ ಇರಬಹುದು. ಶುಕ್ರವಾರದ ಬೆಳಿಗ್ಗೆ ಸಾಂಪ್ರದಾಯಿಕವಾಗಿ ಉದ್ಘಾಟನೆ ಮತ್ತು ಅಂದಿನ ದಿನದ ಚಟುವಟಿಕೆಗಳು ಬೆಳಗಿನಿಂದ ಸಂಜೆಯವರೆಗೂ ಹಂಬಲಕ್ಕೆ ಶಕ್ತಿಯನ್ನು ತಂದು ಕೊಡಬಹುದಾದ ಉತ್ತೇಜನಕಾರಿಯಾದ ಉಪನ್ಯಾಸಗಳು ಮತ್ತು ಘನತೆ ಮೀರದ ತರಲೆ, ಹರಟೆ, ಮುಕ್ತ ಸಂವಾದ. ಅಂದಾಜು ೫೦ ಜನ ಸೇರಿದಲ್ಲಿ ೧೦ ಗುಂಪುಗಳಾಗಿ ವಿಂಗಡಿಸಿ, ಗುಂಪುಗಳಲ್ಲಿರುವವರಿಗೆ ಕೆಲಸಗಳ(Asignments) ಹಂಚುವಿಕೆ. ಇದರಲ್ಲಿ ನಿರ್ದೇಶನ, ನಟನೆ, ಎಡಿಟಿಂಗ್, ಚಿತ್ರಕತೆ ಮುಂತಾದ ಅಸೈನ್‌ಮೆಂಟುಗಳಿರುತ್ತವೆ. ರಾತ್ರಿ ಊಟಕ್ಕೆ ಮುಂಚೆ ಹತ್ತು ಗುಂಪಿಗೂ ಹತ್ತು ವಿಷಯಗಳನ್ನು ಹಂಚಲಾಗುವುದು. ಗುಂಪಿಗೆ ಬಂದಂಥಹ ವಿಷಯಗಳನ್ನಾದರಿಸಿ ಹತ್ತು ನಿಮಿಷ ಕಾಲಾವಧಿಯ ಕಿರುಚಿತ್ರಕ್ಕೆ ಬೇಕಾಗುವಂಥಹ ಬೇಕಾಗುವಂಥಹ ಚಿತ್ರಕತೆ, ನಿರ್ದೇಶನ ಇತ್ಯಾದಿಗಳನ್ನು ನಿರ್ವಹಿಸಲು ಬೇಕಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು.
ಇಂಥದ್ದೇ ಎನ್ನುವಂತಹ ವಿಷಯದ ಕಟ್ಟಳೆಯೇನಿಲ್ಲ. ದೇವರಾಯನ ದುರ್ಗದ ಪರಿಸರದಲ್ಲಿ ಗರಿಷ್ಠ ಹತ್ತು ನಿಮಿಷಗಳ ಸಿನೆಮ ಚಿತ್ರೀಕರಣಕ್ಕೆ ಯೋಗ್ಯವಾದ ಚಿತ್ರಕತೆಯನ್ನು ನೀವು ಮೊದಲೇ ಸಿದ್ಧಪಡಿಸಿ ತರಬಹುದು. ಪಾತ್ರಗಳಿಗೆ ಬೇಕಾದ ವಸ್ತ್ರಾಲಂಕಾರಗಳನ್ನು ಹೊಂದಿಸಿಕೊಳ್ಳುವ ಜವಾಬ್ದಾರಿಯೂ ನಿಮ್ಮದೇ.
೪. ನಾವು ಏನು ಒದಗಿಸಿಕೊಡಬಲ್ಲೆವು?
ಈ ಶಿಬಿರದಲ್ಲಿ ತರಬೇತಿ ನೀಡಿ ನಿಮ್ಮನ್ನು ದೊಡ್ಡ ನಿರ್ದೇಶಕರೋ, ನಟ-ನಟಿಯರನ್ನಾಗಿಯೋ ತಯಾರು ಮಾಡುತ್ತೇವೆ ಎಂಬ ಕಲ್ಪನೆಗಳು ಬೇಡ. ಸಿನೆಮ ನಿರ್ಮಾಣದಲ್ಲಿ ಭಾಗಿಯಾಗಬೇಕೆಂಬ, ಏನಾದರೂ ಸಣ್ಣ ಪ್ರಾಜೆಕ್ಟಿನಲ್ಲಿ ತೊಡಗಿಸಿಕೊಂಡು ಅನುಭವ ಪಡೆಯಬೇಕೆಂಬ ಹಂಬಲವನ್ನು ಉತ್ತೇಜಿಸುವ ಪರಿಸರವನ್ನು ಕಟ್ಟಿಕೊಡುವ ಕೆಲಸವನ್ನು ನಾವು ಮಾಡುವೆವು.
ಎರಡನೆ ದಿನ ಶನಿವಾರ ಬೆಳಿಗ್ಗೆ ಚಿತ್ರರಂಗದಲ್ಲಿ ಕೊಂಚ ಪಳಗಿರಬಹುದಾದ ಅರೆಕಾಲಿಕ ವೃತ್ತಿಪರ ಛಾಯಾಗ್ರಾಹಕಾನ್ನು ಗುಂಪೊಂದಕ್ಕೆ ಎರಡು ಗಂಟೆಗಳ ಕಾಲದಂತೆ ನೀಡಲಾಗುವುದು. ತಯಾರಾದ ಚಿತ್ರಕತೆಗೆ ತಕ್ಕಂತೆ ಎರಡು ಘಂಟೆಗಳ ಕಾಲ ಚಿತ್ರೀಕರಣ ನಡೆಸುವುದು. ಮಧ್ಯಾಹ್ನ ಊಟದ ನಂತರ ಸ್ಥಳದಲ್ಲೇ ಲಭ್ಯವಿರಬಹುದಾದ ಅರೆಕಾಲಿಕ ಸಂಕಲನಕಾರರನ್ನು ಒದಗಿಸಲಾಗುವುದು. ಸಂಕಲನ, ಶಬ್ದಗಳ ಜೋಡಣೆ ಇತ್ಯಾದಿಗಳನ್ನು ಸಂಜೆಯವರೆಗೆ ಮುಗಿಸಿ ರಾತ್ರಿ ಗುಂಪುಗಳು ತಯಾರಿಸಿದ ಚಿತ್ರಗಳ ಪ್ರದರ್ಶನ ಸಣ್ಣ ಪುಟ್ಟ ಮಾತಿನ ರಗಳೆಗಳು, ಚರ್ಚೆ.
ಮೂರನೆ ದಿನ ಬೆಳಿಗ್ಗೆ ಪರಿಣತರು ಎಲ್ಲ ಚಿತ್ರಗಳ ಬಗೆಗೆ ಅವರ ಆಲೋಚನೆ, ಪ್ರತಿಕ್ರಿಯೆಗಳನ್ನು ಮಂಡಿಸುವರು. ಸಮಾರೋಪ, ಅತ್ಯುತ್ತಮವೆನಿಸಬಹುದಾದ ಚಿತ್ರಗಳಿಗೆ ಬಹುಮಾನ ವಿತರಣೆ.
೫. ೩೦೦೦ದಿಂದ ೪೦೦೦ ಖರ್ಚು ಏಕೆ?
೫ ಜನ ಕ್ಯಾಮೆರಾಮನ್‌ಗಳಿಗೆ ತಲಾ ಒಬ್ಬರಿಗೆ ೩೦೦೦ ದಂತೆ ೧೫೦೦೦/- ಐದು ಜನ ಸಂಕಲನಕಾರರಿಗೆ ತಲಾ ೩೦೦೦ದಂತೆ ೧೫೦೦೦/- ಸೌಂಡ್ ಮಿಕ್ಸಿಂಗ್ ಹಾಗು ಸಂಗೀತ ನಿರ್ವಹಣೆ ೧೫೦೦೦/- ಜನರೇಟರ್, ಮೈಕು, ೨೦೦೦೦/- ಪ್ರಜೆಕ್ಟರ್ ಸ್ಕ್ರೀನ್ ೪೦೦೦/- ಟ್ರೈಪಾಡ್ ೫೦೦೦/- ಪ್ರಚಾರ ಮತ್ತು ಪ್ರಯಾಣ ಇತ್ಯಾದಿ ೨೦೦೦೦/- ಊಟ/ತಿಂಡಿ/ಕಾಫಿ ೩೦೦೦೦/- ಸ್ಥಳದ ಬಾಡಿಗೆ ೧೨೦೦೦/- ಹಾಸಿಗೆಗಳು ೩೦೦೦/- ಅಂತರ್ರಾಷ್ಟ್ರೀಯ ಚಿತ್ರೋತ್ಸವಗಳಿಗೆ ಮೀಸಲಿಡಬೇಕಾದ ವೆಚ್ಚ ೧೦೦೦೦/- ಬಹುಮಾನ ವಿತರಣೆ ೧೦೦೦೦/- ಅತಿಥಿ/ಪರಿಣತರ ನಿರ್ವಹಣೆ ೧೦೦೦೦/- ---------------------------------------------------------------------------- ಒಟ್ಟು ೧,೫೪೦೦೦/೫೦ ಮಂದಿ ತಲಾ ೩೦೮೦/-
ಪ್ರಾಯೋಜಕರಿಂದ ಒದಗಿಬರಬಹುದಾದ ಸಂಪನ್ಮೂಲವನ್ನು ಸಂವಾದ ಡಾಟ್ ಕಾಮ್‌ನ ಭವಿಷ್ಯದ ಯೋಜನೆಗಳಿಗೆ ಮೀಸಲಿಡಲಾಗುವುದು. ಶಿಬಿರಕ್ಕೆ ತಗುಲುವ ವೆಚ್ಚವನ್ನು ಭರಿಸುವುದು ಶಿಬಿರಾರ್ಥಿಗಳ ಹೊಣೆ.
ಶೀಘ್ರದಲ್ಲಿಯೇ ಶಿಬಿರದ ದಿನಾಂಕ ಹಾಗೂ ಮತ್ತಿತರ ವಿವರಗಳನ್ನು ಸಂವಾದ ಡಾಟ್ ಕಾಮ್‌ನಲ್ಲಿ ಪ್ರಕಟಿಸಲಾಗುವುದು. ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರ, ಹೆಸರು, ಆಸಕ್ತಿಗಳನ್ನು ನಮೂದಿಸಿ webmasterATsamvaadaDOTcom ಗೆ ಮೇಲ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9731755966/ 9900439930/ 7795272199
ದೇವರಾಯನದುರ್ಗದ ಪರಿಸರದಲ್ಲಿ ಸಂವಾದ ಡಾಟ್ ಕಾಮ್ ನವೆಂಬರ್ ೨೦೦೮ರಲ್ಲಿ ಆಯೋಜಿಸಿದ್ದ ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ ಶಿಬಿರದ ಫೊಟೊಗಳು ಇಲ್ಲಿವೆ(೧ , ೨, ೩ ). ದೇವರಾಯನದುರ್ಗದ ಪರಿಸರದ ಕುರಿತ ಸ್ಥೂಲ ಚಿತ್ರಣ ಪಡೆಯಲು ಇವು ನೆರವಾಗಬಹುದು.
|
|