ವರದಿ • ಸಂವಾದ ತಂಡ ವಿಶಿಷ್ಟ ಸಂಕ್ರಾಂತಿ-ಗಿರೀಶರ "ಕನಸೆಂಬ ಕುದುರೆಯನೇರಿ..." ಈ ಸಂಕ್ರಾಂತಿ ಹಬ್ಬದ ದಿನ ಬೆಂಗಳೂರಿನ ಬಾದಮಿ ಹೌಸ್‌ನಲ್ಲಿ ಗಿರೀಶ್ ಕಾಸರವಳ್ಳಿಯವರ ‘ಕನಸೆಂಬೊ ಕುದುರೆಯನೇರಿ’ ಚಿತ್ರದ ಪ್ರದರ್ಶನ ಹಾಗು ಅದರ ಸಂವಾದವನ್ನ ಸಂವಾದ ಡಾಟ್ ಕಾಂ ಏರ್ಪಡಿಸಿತ್ತು. ಬೆಳಿಗ್ಗೆ ಚಿತ್ರಪ್ರದರ್ಶನವಿದ್ದರೆ ಮಧ್ಯಾಹ್ನ ಸಂವಾದದ ಜಟಾಪಟಿ. ಗಿರೀಶ್ ಕಾಸರವಳ್ಳಿ, ಗೋಪಾಲಕೃಷ್ಣ ಪೈ, ಬಿರಾದರ ಅವರುಗಳ ಉಪಸ್ಥಿತಿ. ಚಿತ್ರಪ್ರದರ್ಶನಕ್ಕೆ ಮತ್ತು ಸಂವಾದಕ್ಕೆ ಬೆರಳೆಣಿಕೆಯಷ್ಟು ಮಂದಿ ಬಂದಿದ್ದರೂ ಕಲಾತ್ಮಕ ಚಿತ್ರಗಳನ್ನ ಗ್ರಹಿಸುವ ತುಡಿತ ಪ್ರತಿಯೊಬ್ಬರಲ್ಲೂ ಇದ್ದಂತಿತ್ತು. ಒಂದು ಗಂಭೀರ ಚಿತ್ರವನ್ನ ಅಷ್ಟೇ ಗಂಭೀರವಾಗಿ ನೋಡಿದ ಮೇಲೆ ಪೈವಿಹಾರ್‌ನಲ್ಲಿ ಭೋಜನದ ವ್ಯವಸ್ಥೆ. ನಂತರ ಊಟದೊಂದಿಗೆ ಚಿತ್ರವನ್ನ ಅರಗಿಸಿಕೊಳ್ಳುವ ಬಗೆಗೆ ಒಂದಿಷ್ಟು ಮಂಡನೆ, ಕಸರತ್ತು ಇತ್ಯಾದಿ. ವಿಮರ್ಶಕರಾದ ಎಂ.ಎಸ್ ಆಶಾದೇವಿ, ಸಾಫ್ಟ್‌ವೇರ್ ಕ್ಷೇತ್ರದಲ್ಲಿ ತೊಡಗಿಸಿಕೊಂದಿರುವ ವಿಕ್ರಂ ಹತ್ವಾರ್ ಹಾಗು ಕನ್ನಡ ಉಪನ್ಯಾಸಕರಾದ ಎನ್.ಸಿ.ಮಹೇಶ್ ತಾವು ಚಿತ್ರವನ್ನ ಗ್ರಹಿಸಿರುವ ಬಗೆಗೆ ಮಾತಾಡುತ್ತಲೆ ಕೆಲವು ಪ್ರಶ್ನೆಗಳನ್ನ ಗಿರೀಶ್ ಕಾಸರವಳ್ಳಿಯವರ ಮುಂದಿಟ್ಟರು. ಆಶಾದೇವಿಯವರು ಮಾತಾಡಿ ‘ ಗಿರೀಶ್ ಕಾಸರವಳ್ಳಿಯವರು ಈವರೆಗೆ ನಿರ್ದೇಶಿಸಿರುವ ಚಿತ್ರಗಳಿಗಿಂತ ಈ ಚಿತ್ರ ತುಂಬ ಭಿನ್ನವಾದದ್ದು. ಇದು ತುಂಬ ಮಹತ್ವದ ಪಲ್ಲಟ ಎನ್ನುವುದು ನನ್ನ ಭಾವನೆ. ಈ ಚಿತ್ರ ನೋಡುತ್ತಿದ್ದಾಗ ನನಗೆ ಮಾಸ್ತಿಯವರ ಒಂದು ಮಾತು ನೆನೆಪಾಯ್ತು.‘ ಸಮಸ್ಯೆಗಳಿಲ್ಲ ಆದರೆ ನೋವುಗಳಿವೆ’ ಎನ್ನುವ ಅವರ ಮಾತು ಚಿತ್ರವನ್ನ ಗ್ರಹಿಸುವುದಕ್ಕೆ ಸಹಕಾರಿಯಾಯಿತು. ಇದು ಟ್ಯಾಗೋರ್ ಮತ್ತು ಟಾಲ್‌ಸ್ಟಾಯ್‌ರವರ ಕಥಾ ಮಾರ್ಗದ ಮುಂದುವರಿಕೆಯಾಗಿ ಕಂಡಿದೆ. ದ್ವೀಪದ ನಂತರದ ಈ ಪಲ್ಲಟ ಬಹುಮುಖ್ಯವಾದದ್ದು. ಆದರೆ ಸಿದ್ಧನನ್ನ ಒಂದು ಮೆಟಫರ್ ಆಗಿ ನಾವು ಗ್ರಹಿಸಬೇಕೆ? ಈ ಸಿದ್ಧ ಏನನ್ನ ಸಂಕೇತಿಸ್ತಾ ಇದ್ದಾನೆ?’ ಎಂದು ಮಾತಿಗಿಳಿದರೆ ವಿಕ್ರಂ ‘ ನೀವು ಕನಸುಗಳ ಕುರಿತಂತೆ ಟೈಟಲ್‌ಗಳನ್ನ ಹಾಕುವ ಉದ್ದೇಶವಾದರೂ ಏನಿತ್ತು? ತುಂಬ ತನ್ಮಯನಾಗಿ ಸಿನಿಮಾ ನೋಡುತ್ತಿದ್ದಾಗ ಈ ಟೈಟಲಗಳು ನನ್ನನ್ನ ಡಿಸ್ಟರ್ಬ್ ಮಾಡಿದವು. ಅಲ್ಲದೆ ಈ ಚಿತ್ರದ ನೆರೇಷನ್ ತುಂಬ ಸರಳವಾಗಿದೆ. ಇದು ‘ಮೊಮೆಂಟೊ’ ಚಿತ್ರದ ಟೆಕ್ನಿಕ್ ಅಂತ ನನಗನಿಸಿತು. ಇನ್‌ಫ್ಯಾಕ್ಟ್ ಸಿನಿಮಾದ ಕಡೆಯ ದೃಶ್ಯದ ಅಗತ್ಯವೇ ಇರಲಿಲ್ಲ. ಯಾರಾದರು ಸತ್ತಾಗ ಕುಣಿ ತೋಡುವ ಈರ್ಯ ತನ್ನ ಕನಸು ಹುಸಿಹೋಯಿತೆಂದು ವಿಹ್ವಲನಾದಾಗ ಮತ್ತೂ ಒಂದು ಕನಸು ಕಾಣುತ್ತಾನೆ. ಅದು ತೋಟ ಮಡುವ ಕನಸು. ತನಗೆ ಅಪರಿಚಿತವಾದ ವೃತ್ತಿಯನ್ನ ಅವನು ಕನಸು ಕಾಣುವುದು ಹೇಗೆ?’ ಎಂದು ಪ್ರಶ್ನಿಸಿದರೆ ಎನ್.ಸಿ.ಮಹೇಶ್ ಮಾತಾಡಿ ‘ಈ ಚಿತ್ರದ ಹೊರ ರೂಪುರೇಷೆಯ ಬಗ್ಗೆಯೇ ಈ ಇಬ್ಬರು ಮಾತಾಡಿದ್ದಾರೆ. ಆದರೆ ಸಿನಿಮಾ ಏನನ್ನ ಧ್ವನಿಸಲಿಕ್ಕೆ ಹೊರಟಿದೆ ಅನ್ನುವ ಮಾತುಗಳು ಹೊರಡಲಿಲ್ಲ. ನಾನು ಸಿನಿಮಾದ ಆಂತರ್ಯವನ್ನೇ ಕೇಂದ್ರೀಕರಿಸಿ ನನ್ನ ಕೆಲವು ನಿಲುವುಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಕತೆಯ ಟೆಕ್ನಿಕ್ ಬಗ್ಗೆ ನಾವೇನು ಚಕಾರ ತೆಗೆಯಬೇಕಾಗಿಲ್ಲ. ಗಿರೀಶ್ ಸರ್ ಪ್ರಾರಂಭದಲ್ಲೇ ಗೊಡಾರ್ಡ್ ಮಾತುಗಳನ್ನ ಬಳಸಿಕೊಂಡಿದ್ದಾರೆ. ಕತೆಗೊಂದು ಪ್ರಾರಂಭ, ಮಧ್ಯಭಾಗ ಹಾಗು ಅಂತ್ಯ ಅನ್ನುವುದಿರುತ್ತದೆ; ಆದರೆ ಅದನ್ನ ಅದೇ ಕ್ರಮದಲ್ಲೇನೂ ಹೇಳಬೇಕೆಂದೇನಿಲ್ಲ..ಎನ್ನುವ ಮಾತಿನಂತೆಯೇ ಚಿತ್ರದ ನೆರೇಷನ್ ಜೋಕಾಲಿಯ ಹಾಗೆ ಜೀಕುತ್ತೆ. ನಾವು ಅದನ್ನ ಸ್ಪಷ್ಟಗೊಳಿಸಿಕೊಳ್ತಾ ಹೋಗಬೇಕಷ್ಟೆ. ಕನಸು ಮತ್ತು ವಾಸ್ತವ ಹೇಗೆ ಘರ್ಷಣೆಗೆ ಒಳಗಾಗುತ್ತೆ ಅನ್ನುವುದನ್ನ ಈ ಚಿತ್ರ ತುಂಬ ಅದ್ಭುತವಾಗಿ ಕಟ್ಟಿಕೊಟ್ಟಿದೆ. ಹಾಗೆ ನೋಡಿದರೆ ನಾವು ಕನಸಿಗೆ ಕೊಟ್ಟುಕೊಳ್ಳುವ ವ್ಯಾಖ್ಯಾನ ಯಾವುದು? ಯಾವುದು ವಾಸ್ತವ ಆಗುತ್ತೊ ಇಲ್ಲವೊ ನಂಬಿಕೆಯ ತಾಕಲಾಟದಲ್ಲಿರುತ್ತದೋ ಅದು ಕನಸಾಗಿರುತ್ತದೆ. ಈರ್ಯನ ಕನಸು ವಾಸ್ತವದಲ್ಲಿ ನಿಜವಾಗಿದ್ದರೂ ಅದನ್ನು ಸುಳ್ಳುಮಾಡುವ ಹುನ್ನಾರ ನಡೆಯುತ್ತದೆ. ಯಾವುದು ವಾಸ್ತವ ಯಾವುದು ಕನಸು? ಹಾಗೆ ನೋಡಿದರೆ ಈರ್ಯ ಮತ್ತು ರುದ್ರಿ ಮಾತ್ರ ಕನಸು ಕಾಣುವುದಿಲ್ಲ. ಇಡೀ ಒಂದು ಸಮುದಾಯವೇ ಕನಸು ಕಾಣುತ್ತದೆ. ಸಿದ್ಧ ಬರುತ್ತಾನೆಂದು ರುದ್ರಿ ಹೇಳಿದರೆ ಇಡೀ ಊರು ಒಳಿತಿನ ಕನಸು ಕಾಣುತ್ತದೆ. ಶಿವಣ್ಣ ಮತ್ತು ಹೇಮ ತಮ್ಮ ಬದುಕನ್ನ ಸುಧಾರಿಸಿಕೊಳ್ಳುವ ಕನಸು ಕಾಣುತ್ತಾರೆ.ಊರಿನ ಜನ ಹೊಲ ಮಾರಿಕೊಳ್ಳುವ ಮೂಲಕ ಫ್ಯಾಕ್ಟರಿಯ ಕನಸು ಕಾಣುತ್ತಾರೆ. ಇಂಥ ಕನಸುಗಾರಿಕೆಗಳ ನಡುವೆ ಬಸಣ್ಯನಂಥ ವಾಸ್ತವಾದಿಯೂ ಇದ್ದಾನೆ. ಆದರೆ ತುಂಬ ಇಂಟರೆಸ್ಟಿಂಗ್ ಅಂದರೆ ಈ ಕನಸುಗಳಲ್ಲೂ ಅನೇಕ ವೈರುಧ್ಯಗಳು ಇಣುಕುತ್ತವೆ. ಯಾರಾದರು ಸತ್ತರೆ ಮಾತ್ರ ಈರ್ಯನಿಗೆ ಸಿಗುತ್ತದೆ. ಅಪ್ಪ ತೀರಿಹೋದ ಸಂದರ್ಭದಲ್ಲೂ ಶಿವಣ್ಣನಿಗೆ ರಿಜಿಸ್ಟ್ರೇಷನ್ ಕೆಲಸ ಮುಖ್ಯವಾಗುತ್ತದೆ. ಅಡಿಗರ ಪದ್ಯದ ಸಾಲು ನನಗೆ ನೆನಪಾಗುತ್ತದೆ. ‘ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬ ಅಗ್ಗ..
ಬದುಕುವ ಕನಸಿನ ಎದಿರು ಸಾವು ನಗಣ್ಯವಾಗಿ ಬಿದ್ದಿರುತ್ತದೆ ಎನ್ನುವುದನ್ನ ಈ ದೃಶ್ಯ ಸಾಬೀತುಪಡಿಸುತ್ತದೆ. ಇಂಥ ಹಲವು ವೈರುಧ್ಯಗಳಿವೆ. ಆದರೂ ಸಿನಿಮಾದ ಕಡೆಯ ದೃಶ್ಯ ಗೊಂದಲಕ್ಕೆ ದೂಡುತ್ತದೆ. ಇದನ್ನ ಸ್ಪಷ್ಟಪಡಿಸಬೇಕು.. ಎಲ್ಲ ಮಾತುಗಳಿಗೆ ಕಿವಿಯಾದ ಗಿರೀಶ್ ಕಾಸರವಳ್ಳಿಯವರು ನಂತರ ಮೂವರ ಪ್ರಶ್ನೆಗಳಿಗೆ ಉತ್ತರಿಸಲು ಸನ್ನದ್ಧರಾದರು. ‘ಈ ಹಿಂದೆ ನಾರಾಯಣ ಗುರು ಕುರಿತ ಸಿನಿಮಾ ಮಾಡುವ ಅವಕಾಶ ಒದಗಿ ಬಂದುತ್ತು. ಕಾರಣಾಂತರಗಳಿಂದ ಆ ಸಿನಿಮಾ ಆಗಲಿಲ್ಲ. ಆದರೂ ಅರು ತಿಂಗಳು ಸ್ಕ್ರಿಪ್ಟ್ ಮಾಡಿದ್ದೆ. ಅದನ್ನ ಡಿ.ಆರ್ ನಾಗರಾಜ್‌ಗೆ ತೋರಿಸಿದೆ. ರಿಯಲಿಸ್ಟಿಕ್ ಸಿನಿಮಾ ಮಾಡುವ ನಾನು, ರ್‍ಯಾಷನಲಿಸ್ಟ್ ಅಂತ ನಮಗೆ ನಾವೇ ಅಂದ್ಕೊಂಡುಬಿಡ್ತೀವಲ್ಲ ನಾರಾಯಣಗುರು ಅವರ ಯಾವ ಪವಾಡಗಳನ್ನೂ ಚಿತ್ರಿಸಲು ಹೋಗಿರಲಿಲ್ಲ. ಡಿ.ಆರ್ ಇದನ್ನೇ ಪ್ರಶ್ನಿಸಿದರು. ನಮ್ಮ ನಂಬಿಕೆ ಅಪನಂಬಿಕೆ ಬೇರೆ; ಆದರೆ ಅವರ ಸುತ್ತ ಕಟ್ಟಿಕೊಂಡಿರುವ ಮಿಥ್‌ಗಳನ್ನ ನಾವ್ಯಾಕೆ ಕೊಲ್ಲಬೇಕು ಅಂತ ನನಗೂ ಅದು ಸರಿ ಅನಿಸ್ತು.
ಪವಾಡಗಳು ಸಿದ್ಧನನ್ನ ಕನಸಿನಲ್ಲಿ ಕಂಡ ಅಂದಾಗ ಒಪ್ಪದ ನಾವು ರಾಘವೇಂದ್ರ ಸ್ವಾಮಿಗಳ ಪವಾಡಗಳನ್ನ ಸುಲಭವಾಗಿ ನಂಬಿಬಿಡ್ತೀವಿ. ಅಥವಾ ಇನ್ಯವುದೋ ವ್ಮಠದ ಶ್ರೀಶ್ರೀಗಳನ್ನ ನಂಬ್ತೀವಿ. ಕನಸುಗಳು ಆಯಾ ಜನಾಂಗದ ಒಂದು ಭಾಗ ಆಗಿರ್ತಾವೆ. ಹಾಗಾಗಿ ನಾನು ಈ ಸಿನಿಮಾದಲ್ಲಿ ಕನಸನ್ನ ಒಂದು ಮಿಥ್ ಅಗಿ ಬಳಸಿಕೊಂಡೆ. ಎರಡನೆಯ ಪ್ರಶ್ನೆ ಅಂದರೆ ಟೈಟಲ್‌ಗಳನ್ನ ಯಾಕೆ ಬಳಸಿಕೊಂಡ್ರಿ ಅದರಿಂದ ಡಿಸ್ಟರ್ಬ್ ಆಗುತ್ತೆ ಅಂತ. ನಾನು ಮುಂಚಿಂದಲೂ ಟೈಟಲ್‌ಗಳನ್ನ ಬಳಸಿಕೊಂಡೇ ಬರ್ತಿದ್ದೀನಿ. ಪ್ರೇಕ್ಷಕ ತುಂಬ ತಲ್ಲೀನವಾಗಿ ಸಿನಿಮಾ ನೋಡಬಾರದು.ಅವನನ್ನ ಒಂದು ಕ್ಷಣ ವಾಸ್ತವಕ್ಕೆ ಕರೆದುಕೊಂಡು ಬರೋದಕ್ಕೆ ನಾನು ಬಳಸ್ತಾ ಬರ್ತೀರೋ ತಂತ್ರ ಇದು ಅಷ್ಟೆ. ತ್ರೂಫೋ ತರದವರು ಇದನ್ನ ಬೇರೆ ರೀತಿ ಮಾಡ್ತಿದ್ದರು. ಸಿನಿಮಾವನ್ನ ಇದ್ದಕ್ಕಿದ್ದಂತೆ ಒಂದೆರಡು ಕ್ಷಣ ಫ್ರೀಜ್ ಮಾಡಿ ಪ್ರೇಕ್ಷಕನನ್ನ ಗುಂಗಿನಿಂದ ಹೊರಕ್ಕೆ ಕರೆತರುತ್ತಿದ್ದರು. ನಾನೂ ಹಾಗೇ ಮಾಡಿದ್ದೇನೆ ಅಷ್ಟೆ. ಮೂರನೆ ಪ್ರಶ್ನೆ ಅಂದರೆ ಈರ್ಯ ಅದು ಹೇಗೆ ತೋಟಮಾಡುವ ಕನಸು ಕಾಣುತ್ತಾನೆ? ಅದು ಆವನಿಗೆ ಅಪರಿಚಿತ ವೃತ್ತಿ ಆಲ್ಲವೆ ಎಂಬುದು. ತೋಟ ಮಾಡಬೇಕಾದರೂ ಕುಣಿ ತೋಡಬೇಕು. ಅದು ಚಿಕ್ಕ ಪ್ರಮಾಣದ ಕುಣಿ. ಅದರಾಚೆಗಿನ ಕೆಲಸದ ಬಗೆಗೆ ರುದ್ರಿಗೆ ಗೊತ್ತಿದೆ. ಯಾಕೇಂದ್ರೆ ಅವಳು ಕೆಲಸ ಮಾಡ್ತಿರೋದೇ ತೋಟದಲ್ಲಿ. ನಾನು ಈ ಎರಡೂ ಅಂಶಗಳನ್ನ ವಿಸ್ತರಿಸಿಕೊಂಡು ಕನಸನ್ನ ಹೆಣೆದೆ...
ಚಿತ್ರಕತೆ ಚಿತ್ರಕತೆ ಬರೆಯಲು ನೆರವಾದ ಗೋಪಾಲಕೃಷ್ಣ ಪೈ ‘ ಕನಸುಗಳು ಅಂದ್ರೆ ಕೇವಲ ಮಲಗಿದ್ದಾಗ ಬೀಳುವಂಥವು ಅಂತ ಭಾವಿಸಿಕೊಳ್ಳಬಾರದು. ನಾನು ರಾಜ್‌ಕುಮಾರ್ ರೀತಿ ನಟಿಸಬೇಕು ಅಂದುಕೊಳ್ಳುವುದೂ ಒಂದು ಕನಸೇ ಆಗಿರುತ್ತದೆ. ನಾನು ಏನು ಸಲಹೆ ಕೊಟ್ಟರೂ ಅದನ್ನ ಗಿರೀಶ್ ಸರ್ ಒಮ್ಮೆಗೇ ತಿರಸ್ಕರಿಸ್ತಾ ಇರಲಿಲ್ಲ. ತುಂಬ ರಿಸರ್ವ್ ಆಗಿರುತ್ತಿದ್ದರು. ಮಾರನೆಯ ದಿನ ಅದರ ಬಗ್ಗೆ ಚಕಾರ ತೆಗೆಯುತ್ತಿದ್ದರು ಮತ್ತು ಚರ್ಚಿಸುತ್ತಿದ್ದರು. ಇವರ ಜೊತೆಗೆ ಕೆಲಸ ಮಾಡಿದ್ದು ಬೇರೆ ಅನುಭವನ್ನೇ ನೀಡಿದೆ ಎಂದರು.
ಬಿರಾದಾರ ಅವರೆ ನೀವು ಎಷ್ಟು ರೀಟೇಕ್‌ಗಳನ್ನ ತೆಗೆದುಕೊಂಡ್ರಿ ಅಂದದ್ದಕ್ಕೆ ಅವರು ತುಂಬ ಜಾಣತನದಿಂದ ಅವು ರೀಟೇಕ್‌ಗಳಲ್ಲ ನಮ್ಮ ತಪ್ಪುಗಳನ್ನ ನಾವು ತಿದ್ದಿಕೊಳ್ಳಲಿಕ್ಕೆ ಮಾಡಿದ ಪ್ರಯತ್ನಗಳು ಅಂದರು.
ಇದೆಲ್ಲದರ ಆಚೆಗೆ ಶೇಖರಪೂರ್ಣ ಅವರು ಸಿನಿಮಾ ಬಗ್ಗೆ ಪ್ರತಿಕ್ರಿಯಿಸುತ್ತ ಇದು ದೃಶ್ಯಗಳ ಸೋಲು..ಸಾಹಿತ್ಯವನ್ನ ಕೊಲ್ಲದೆ ಸಿನಿಮಾ ಮಾಡಲು ಕನ್ನಡದ ಸಂದರ್ಭದಲ್ಲಿನ್ನೂ ಸಾಧ್ಯವಾಗಿಲ್ಲ ಇದು ಸಾಧ್ಯವಾಗಬೇಕು ಎಂದಾಗ ಚರ್ಚೆ ಕಾವೇರಿತು. ಹಾಗಾದರೆ ಕೆಥಾರ್ಸಿಸ್ ಅಂದರೆ ಏನು? ಕಿಲ್ಲಿಂಗ್ ಲಿಟ್ರೇಚರ್ ಅನ್ನೋದು ತಪ್ಪು..ನಿಜವಾದ ಸಂವಾದ ಶುರುವಾಯಿತು.
ಅಷ್ಟರಲ್ಲಾಗಲೆ ಸಂಜೆ ನಾಲ್ಕೂವರೆಯ ಸಮಯ. ಗಿರೀಶ್ ಸರ್ ತಾವು ಬೇರೊಂದು ಕಾರ್ಯಕ್ರಮಕ್ಕೆ ತೆರಳಲು ಸಿದ್ಧರಾಗುವುದರೊಂದಿಗೆ ಕಾರ್ಯಕ್ರಮದ ಮುಕ್ತಾಯ. ಆದರೆ ಹಾಗೇ ಬಾಕಿ ಉಳಿದಿದ್ದದ್ದು ಒಂದೇ...ಪ್ರೀತಿಯಿಂದ ಆಡಬೇಕಿರುವ ಜಗಳ...
|
|