ದೃಶ್ಯಕ್ಕೊಂದು ನುಡಿಗಟ್ಟು

ನಟಿಯೊಂದಿಗೆ ಸಿಕ್ಕಿ ಬಿದ್ದವ ಮುಖ್ಯವಾಗುವುದಿಲ್ಲವೆಂದರೆ...?

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಗುರುವಾರ ಐಟಿಸಿ ರಾಯಲ್ ಗಾರ್ಡೇನಿಯಾ ಪಂಚತಾರಾ ಹೋಟೆಲ್ ನಲ್ಲಿ ಬಂಧಿಸಲಾದ ನಟಿ ಯಮುನಾ, ಸಾಫ್ಟ್‌ವೇರ್ ಕಂಪೆನಿಯೊಂದರ ಸಿಇಒ ವೇಣುಗೋಪಾಲ್ ಅಲ್ಲದೆ ಇನ್ನಿತರರ ಕುರಿತು ಸುದ್ದಿಯನ್ನು ಬಿತ್ತರಿಸುವಲ್ಲಿ ನಮ್ಮ ಮಾಧ್ಯಮಗಳು ತೋರಿದ ವರ್ತನೆಯ ಕುರಿತು ಒಂದು ಟಿಪ್ಪಣಿ ಬರೆಯಬೇಕಿದೆ.

ಕನ್ನಡ, ತಮಿಳು, ಮಲೆಯಾಳಿ ಚಿತ್ರಗಳಲ್ಲಿ ನಟಿಸಿದ ಜನಪ್ರಿಯ ನಟಿಯೊಬ್ಬಳು ವೇಶ್ಯಾವಾಟಿಕೆಯಂತಹ ಕೃತ್ಯದ ಆರೋಪದ ಮೇಲೆ ಬಂಧಿಸಲ್ಪಡುವ ಸಂದರ್ಭ ಮಾಧ್ಯಮಗಳಿಗೆ ಸುಗ್ಗಿಯ ಸಮಯವೇ ಆಗುತ್ತದೆ. ಚಲನಚಿತ್ರ ತಾರೆಯರ ಕುರಿತು ಇಲ್ಲ ಸಲ್ಲದ ಗಾಸಿಪ್ಪುಗಳನ್ನೇ ಅಧಿಕೃತ ಸುದ್ದಿಯನ್ನಾಗಿ ಬಿತ್ತರಿಸುವ ಮಾಧ್ಯಮಗಳು ಈ ಸುದ್ದಿಯ ವಿಷಯದಲ್ಲಿ ಭಾರಿ ಹುಮ್ಮಸ್ಸಿನಿಂದ ವರ್ತಿಸುವುದು ಸಹಜವೇ ಆಗಿದೆ. ನಟಿಯು ಜನಪ್ರಿಯಳು, ಹೆಚ್ಚು ಜನರು ಗುರುತಿಸಬಲ್ಲಂಥವಳು ಎಂದ ಮೇಲಂತೂ ಸುದ್ದಿ ವಾಹಿನಿಗಳ ಉತ್ಸಾಹಕ್ಕೆ ಎಣೆಯಿಲ್ಲದಂತಾಗುವುದು. ಕನ್ನಡ, ತಮಿಳು, ಮಲಯಾಳಿ ಸುದ್ದಿ ವಾಹಿನಿಗಳು ಹುಚ್ಚು ಹುಮ್ಮಸ್ಸಿನಿಂದ ಈ ಘಟನೆಯ ವರದಿಗೆ ತೊಡಗಿದವು. ನಟಿಯ ಇತಿಹಾಸ, ಸಿನೆಮಾ, ಧಾರಾವಾಹಿಗಳಲ್ಲಿನ ನಟನೆಯಿಂದ ಹಿಡಿದು ಸಮಸ್ತ ವಯಕ್ತಿಕ ವಿವರಗಳನ್ನು ವರದಿ ಮಾಡುವಲ್ಲಿ ಮಾಧ್ಯಮಗಳು ವೃತ್ತಿಪರತೆಯನ್ನು ಮೆರೆದವು.

ಇವೆಲ್ಲವನ್ನೂ ಒಪ್ಪೋಣ. ಖ್ಯಾತ ನಟಿಯೊಬ್ಬಳು ಇಂಥ ಕೃತ್ಯದಲ್ಲಿ ತೊಡಗಿರುವಾಗ ಸಿಕ್ಕು ಬಿದ್ದದ್ದು ದೊಡ್ಡ ಸೆನ್ಸೇಶನ್ ಹುಟ್ಟಿಹಾಕುವ ಸುದ್ದಿಯೇ. ಆದರೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಸಾಫ್ಟ್‌ವೇರ್ ಕಂಪೆನಿಯೊಂದರ ಸಿಇಓ ಎನ್ನಲಾದ ವ್ಯಕ್ತಿಯ ಕುರಿತು ಮಾಧ್ಯಮಗಳು ಮಾಡಿರುವ ವರದಿಯನ್ನು ಗಮನಿಸಿ. ಆ ವ್ಯಕ್ತಿಯ ಹೆಸರು ವೇಣುಗೋಪಾಲ್ ಎನ್ನುವುದನ್ನು ಹೊರತುಪಡಿಸಿದರೆ ಬೇರಾವ ಮಾಹಿತಿಯೂ ತಮ್ಮ ವರದಿಗಳಲ್ಲಿ ಹೊರಬರದ ಹಾಗೆ ಎಚ್ಚರವಹಿಸಿರುವುದು ಗುಮಾನಿ ಮೂಡಿಸುತ್ತದೆ. ಒಂದು ಎರಡು ಎಂದೆಲ್ಲ, ಯಾವ ಸುದ್ದಿವಾಹಿನಿಗಳೂ ನಟಿಯೊಂದಿಗೆ ಸಿಕ್ಕಿ ಬಿದ್ದ ಉದ್ಯಮಿಯ ಚರಿತ್ರೆಯನ್ನು, ವಯಕ್ತಿಕ ವಿವರಗಳನ್ನು ಬಯಲು ಮಾಡುವ ಕೆಲಸಕ್ಕೆ ಕೈಹಾಕಲಿಲ್ಲ. ಇದು ನಮ್ಮ ಮಾಧ್ಯಮಗಳು ಕೆಲಸ ಮಾಡುವ ರೀತಿಯನ್ನು ಸೂಚಿಸುವುದರ ಜೊತೆಗೆ ಯಾರ ಹಿತಾಸಕ್ತಿಯನ್ನು ಕಾಯುವುದಕ್ಕೆ ನಿಂತಿವೆ ಎನ್ನುವುದನ್ನು ಸಾರಿ ಹೇಳುತ್ತದೆ.

ಇದಕ್ಕಿಂತಲೂ ಆತಂಕಕಾರಿಯಾದ ಸಂಗತಿಯೆಂದರೆ, ನಟಿ ಪ್ರಕರಣದಲ್ಲಿ ಆರೋಪಿತೆಯಾದ ನಟಿಯ ಹೆಸರು ಕೆಲವು ಮಾಧ್ಯಮಗಳಲ್ಲಿ ಬಿತ್ತರವಾದಂತೆ ಜಮುನಾ ಅಲ್ಲ ಯಮುನಾ ಅಲಿಯಾಸ್ ಸೌಮ್ಯ ಎಂದು ಸ್ಪಷ್ಟ ಪಡಿಸಿದ ನಗರ ಪೊಲೀಸ್ ಆಯುಕ್ತ ಶಂಕರ್ ಬಿದರಿಯವರು ಸಹ ಉದ್ಯಮಿಯ ಹೆಸರನ್ನು ಹೊರತು ಪಡಿಸಿ ಬೇರಾವ ವಿವರಗಳನ್ನೂ ಬಿಟ್ಟುಕೊಡಲಿಲ್ಲ.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು