ಸಾಕ್ಷ್ಯಚಿತ್ರಗಳು ಮತ್ತು ಸಂಸ್ಕೃತಿ ಪ್ರಚಾರಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ’ಚಲನಚಿತ್ರ ಮತ್ತು ಕಿರುತೆರೆ’ ಎಂಬ ಗೋಷ್ಠಿಯಲ್ಲಿ ನಿರ್ದೇಶಕ, ರಂಗಕರ್ಮಿ ಕೇಸರಿ ಹರವೂರವರು ಪ್ರಸ್ತುತಪಡಿಸಿದ ಪ್ರಬಂಧ, ವಿಷಯ:ಸಾಕ್ಷ್ಯಚಿತ್ರಗಳು ಮತ್ತು ಸಂಸ್ಕೃತಿ ಪ್ರಚಾರ `ಸಾಕ್ಷ್ಯಚಿತ್ರ’ ಎನ್ನುವ ಪದ ಇಂಗ್ಲಿಷ್ ಭಾಷೆಯ ಡಾಕ್ಯುಮೆಂಟರಿ ಫಿಲ್ಮ್ ಎನ್ನುವುದರಿಂದ ಬಂದಿರುವಂಥದ್ದು. Documenting ಎಂಬ ಪದಕ್ಕೆ ‘ದಾಖಲಿಸುವುದು’ ಎನ್ನುವ ಸೀಮಿತ ಅರ್ಥವಿದೆ. ಈ ಅರ್ಥದಲ್ಲಿ ಸಾಕ್ಷ್ಯಚಿತ್ರ ಎಂದರೆ ಒಂದು ನಿರ್ಧಿಷ್ಠ ವಿಷಯ, ಘಟನೆ, ಸನ್ನಿವೇಶ ಅಥವಾ ಒಂದು ಕಾಲ-ಅವಕಾಶದ ಸಂದರ್ಭವನ್ನು ಯಥಾವತ್ತಾಗಿ ಮತ್ತು ನಿರಪೇಕ್ಷಿತವಾಗಿ ಚಿತ್ರವೊಂದರಲ್ಲಿ ದಾಖಲಿಸುವುದು ಎಂದಾಗಿಬಿಡುತ್ತದೆ. ಹೀಗೆ ನಿರ್ಮಿಸುವುದೂ ಸಹ ಒಂದು ಪ್ರಕಾರದ ಸಾಕ್ಷ್ಯಚಿತ್ರವೇ ಆದರೂ, ಸಾಕ್ಷ್ಯಚಿತ್ರ ಮಾಧ್ಯಮ ಬೆಳೆದಂತೆಲ್ಲಾ ಸಾಕ್ಷ್ಯಚಿತ್ರಗಳ ವಸ್ತು-ವಿನ್ಯಾಸ, ವಿಚಾರವ್ಯಾಪ್ತಿ ಮತ್ತು ಜವಾಬ್ದಾರಿ ಇನ್ನೂ ಆಳ, ವಿಸ್ತಾರವಾಗಿವೆ. ಏಕೆಂದರೆ ದೃಶ್ಯಿಕೆಯೊಂದನ್ನು ಚಿತ್ರೀಕರಿಸಲು ಕ್ಯಾಮೆರಾ ಆರಿಸಿಕೊಳ್ಳುವ ಸ್ಥಳವೇ ಚಿತ್ರಕ್ಕೊಂದು ದೃಷ್ಠಿಕೋನವನ್ನು ಒದಗಿಸಿಬಿಡುತ್ತದೆ. ಚಿತ್ರಕ್ಕೊಂದು ದೃಷ್ಠಿಕೋನ ಸಿಗುತ್ತಿದ್ದ ಹಾಗೆಯೇ ಅದೊಂದು ಅಭಿವ್ಯಕ್ತಿಯೂ ಆಗಿಬಿಡುತ್ತದೆ. ಆದ್ದರಿಂದ ಸಾಕ್ಷ್ಯಚಿತ್ರವೆನ್ನುವುದು ಒಂದು ಅಭಿವ್ಯಕ್ತಿ ಮಾಧ್ಯಮವೂ ಆಗಿರುತ್ತದೆ ಎನ್ನುವುದು ಒಂದು ಅಂಶ.ಮತ್ತೊಂದು ಅಂಶವೆಂದರೆ, ನಾವು ಕನ್ನಡದಲ್ಲಿ ಸಾಕ್ಷ್ಯಚಿತ್ರಗಳು ಎಂದ ತಕ್ಷಣ ಅವು ಡಾಕ್ಯುಮೆಂಟರಿ ಫಿಲ್ಮ್ಸ್ ಎಂದಷ್ಟೇ ಅರ್ಥೈಸುವುದಕ್ಕೆ ಆಗುವುದಿಲ್ಲ. ಸಾಮಾನ್ಯವಾಗಿ ಕಥೆಯೊಂದರ ನಿರೂಪಣೆಯಿರುವ ಚಿತ್ರಗಳನ್ನು Feature Films ಎಂದು ಕರೆಯಬಹುದಾದರೆ ಕಥಾ ನಿರೂಪಣೆಯಿಲ್ಲದ ಆದರೆ ನಿರ್ಧಿಷ್ಠ ವಿಷಯವೊಂದರ ಕುರಿತಂತೆ ಇರುವ ಚಿತ್ರ ಪ್ರಕಾರಗಳು ಹಲವಾರು ರೀತಿಯಲ್ಲಿವೆ. ಉದಾಹರಣೆಗೆ Documentary Films, Educational Films, Promotional films, Motivational Films, Propaganda Films, ಮೊದಲಾದವು… ಈ ಎಲ್ಲ ಪ್ರಕಾರಗಳನ್ನೂ ಇಂಗ್ಲಿಷ್ ನಲ್ಲಿ ಒಟ್ಟಾರೆಯಾಗಿ Non-Feature films ಅಂತ ಕರೀತಾರೆ. ಹಾಗೆ ಕರೆಯುವುದು ಸೂಕ್ತವೂ ಆಗಿದೆ. ಆದರೆ ಕನ್ನಡದಲ್ಲಿ ಈ ಎಲ್ಲ ಪ್ರಕಾರಗಳನ್ನೂ ಒಟ್ಟಾರೆಯಾಗಿ ಸಾಕ್ಷ್ಯಚಿತ್ರಗಳು ಅಂತಾನೇ ಕರೆಯುವುದು ರೂಢಿಯಲ್ಲಿದೆ. Non-Feature films ಗೆ ಸಮರ್ಪವಾದ ಅರ್ಥ ಬರುವಂತೆ ಕನ್ನಡದಲ್ಲಿ ಯಾವ ಪದ ಅಥವಾ ಪದಪುಂಜವನ್ನು ಬಳಸಬಹುದೋ ನನಗೆ ಗೊತ್ತಿಲ್ಲ. ಆದ್ದರಿಂದ ಈ ಎಲ್ಲ ಕಥಾಚಿತ್ರೇತರ ಚಿತ್ರ ಪ್ರಕಾರಗಳನ್ನು ನಾನೂ ಸಹ ಈ ಸಂದರ್ಭದಲ್ಲಿ ಸಾಕ್ಷ್ಯಚಿತ್ರಗಳು ಎಂತಲೇ ಕರೆಯುತ್ತೇನೆ. ಸಾಕ್ಷ್ಯಚಿತ್ರಗಳು ಅಂತ ಇಲ್ಲಿ ನಾನು ಬಳಸಿದಾಗಲೆಲ್ಲಾ ಅವನ್ನು ಕಥಾಚಿತ್ರೇತರ ಚಿತ್ರಗಳು (ಅಂದರೆ ಒಟ್ಟಾರೆಯಾಗಿ Non-feature films) ಎಂದೇ ಗ್ರಹಿಸಬೇಕು ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. * * * `ಸಂಸ್ಕೃತಿ’ ಎನ್ನುವುದು, ನಾನು ಅರ್ಥಮಾಡಿಕೊಂಡ ರೀತಿಯಲ್ಲಿ, ಒಂದು ಪ್ರದೇಶದ ಅಥವಾ ಒಂದು ಜನಸಮೂಹದ ಭಾಷೆ, ಸಾಹಿತ್ಯ, ಕಲೆ, ಜನಪದ, ನಂಬಿಕೆಗಳು, ಕ್ರೀಡೆ, ಕೃಷಿ, ಆಹಾರ ಪದ್ಧತಿ, ಉಡುಗೆ-ತೊಡುಗೆ - ಇವುಗಳ ಜೊತೆಗೆ ಅಲ್ಲಿಯ ಚಾರಿತ್ರಿಕತೆ, ನಾಗರೀಕತೆ, ಪರಂಪರೆ, ಪರಿಸರ ಪ್ರಜ್ಞೆ, ದೇಸೀಜ್ಞಾನ, ಇನ್ನೂ ಮುಂತಾದವನ್ನು ಒಳಗೊಂಡ ಒಟ್ಟೂ ಜೀವನ ವಿಧಾನ. ಹಾಗೆಯೇ ಸಂಸ್ಕೃತಿ ಅಧ್ಯಯನ ಎನ್ನುವುದು ನಿರ್ಧಿಷ್ಠ ಕಾಲ-ದೇಶದ ಸಂದರ್ಭದಲ್ಲಿ ಸಂಸ್ಕೃತಿಯೊಂದು ಒಳಗಾಗುತ್ತಿರುವ ಒಟ್ಟೂ ಅನುಭವಗಳು. ಅಂಥಾ ಅನುಭವಗಳು ಆಂತರಿಕ ಮಾರ್ಪುಗಳಿಂದಲೇ ಆಗುತ್ತಿರಬಹುದು, ಪ್ರಭುತ್ವದಿಂದಲೇ ಆಗುತ್ತಿರಬಹುದು ಅಥವಾ ಬಾಹ್ಯ ಪ್ರಭಾವಗಳಿಂದಲೇ ಆಗುತ್ತಿರಬಹುದು. ಈ ವಿಶಾಲ ಅರ್ಥದಲ್ಲಿ ನಾನು ಇಲ್ಲಿ ಸಂಸ್ಕೃತಿ ಎನ್ನುವ ಪದವನ್ನು ನೋಡಬಯಸುತ್ತೇನೆ. ಹಾಗೆಯೇ ಸಾಕ್ಷ್ಯಚಿತ್ರಗಳು ಮತ್ತು ಸಂಸ್ಕೃತಿ ‘ಪ್ರಚಾರ’ ಅಂತ ಬಂದಾಗ ಈ ಪ್ರಚಾರ, ಪ್ರಸಾರ ಎನ್ನುವ ಪದಗಳ ಬಗ್ಗೆ ನನಗೊಂದಿಷ್ಟು ಜಿಜ್ಞಾಸೆ ಇದೆ. ಏಕೆಂದರೆ ಮೊದಲೇ ಹೇಳಿದಂತೆ ಸಾಕ್ಷ್ಯಚಿತ್ರ ಪ್ರಕಾರ ಒಂದು ಅಭಿವ್ಯಕ್ತಿ ಮಾಧ್ಯಮವೂ ಹೌದು ಎಂದಾಗ ಸಾಕ್ಷ್ಯಚಿತ್ರವೊಂದರ ಮೂಲಕ ಸಂಸ್ಕೃತಿಯೊಂದರ ಪ್ರಚಾರ ನಡೆಯುತ್ತದೆಯೋ, ಪ್ರಸಾರ ನಡೆಯುತ್ತದೆಯೋ, ಅಧ್ಯಯನ ನಡೆಯುತ್ತದೆಯೋ, ವಸ್ತುವೊಂದರ ಗಂಭೀರ ಸಂವಹನ ನಡೆಯುತ್ತದೆಯೋ ಅಥವಾ ಆ ಚಿತ್ರದ ನಿರ್ಮಾತೃವಿನ ಅಭಿವ್ಯಕ್ಯಿ ಆಗುತ್ತದೆಯೋ ಎನ್ನುವುದು ಆಯಾ ಚಿತ್ರಕ್ಕೆ ಸಂಬಂಧಿಸಿದ ವಿಷಯವಾಗುತ್ತದೆ. ಆದ್ದರಿಂದ ಸಾಕ್ಷ್ಯಚಿತ್ರವೊಂದರ ಮೂಲಕ ನಿಜಕ್ಕೂ ಸಂಸ್ಕೃತಿ ಪ್ರಚಾರ ಆಗುತ್ತದೆಯೋ ಇಲ್ಲವೋ, ಆಗಬೇಕೋ ಬೇಡವೋ ಅನ್ನೋದು ಬೇರೆಯೇ ಪ್ರಶ್ನೆ. ಹಾಗಾಗಿ ಇಲ್ಲಿ ಸಾಕ್ಷ್ಯಚಿತ್ರ ಒಂದು ಸಂವಹನ ಮಾಧ್ಯಮ, ಅಧ್ಯಯನಶೀಲ ಮಾಧ್ಯಮ, ಅಭಿವ್ಯಕ್ತಿ ಮಾಧ್ಯಮ ಎನ್ನುವ ಅರ್ಥವನ್ನು ಮುಂದಿಟ್ಟುಕೊಂಡು ನಾನು ನನ್ನ ಮಾತನ್ನು ಮುಂದುವರಿಸುತ್ತೇನೆ. * * * ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಸರ್ಕಾರೀ ಸಂಸ್ಥೆಗಳು ಮತ್ತು ಇಲಾಖೆಗಳು ವರ್ಷಂಪ್ರತಿ ನೂರಾರು ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿರುತ್ತವೆ. ಈ ಚಿತ್ರಗಳೆಲ್ಲವೂ ಅನೇಕ ಸಾರಿ ಸರ್ಕಾರದ, ಆಳುವ ವರ್ಗದ ಮುಖವಾಣಿಗಳಾಗಿ ಅಥವಾ ಸರ್ಕಾರ ಹಮ್ಮಿಕೊಳ್ಳುವ ಕಾರ್ಯಕ್ರಗಳ ಬಗ್ಗೆ, ಮತ್ತು ಸಾಧನೆಗಳನ್ನು ಪ್ರಚುರಪಡಿಸುವಂಥಾ ಒಂದು ರೀತಿಯ promotional ಅಥವಾ propagandist ಚಿತ್ರಗಳಾಗಿಯೇ ತಯಾರಾಗುತ್ತವೆ. ಕೆಲವು ಸಾರಿ ಇಂಥಾ ವಿಷಯಗಳಿಗೆ ಹೊರತಾದ ವಸ್ತುಗಳ ಬಗ್ಗೆ ಸರ್ಕಾರೀ ಸಂಸ್ಥೆಗಳು ಸಂಸ್ಕೃತಿ ಪ್ರಚಾರದ ಹೆಸರಿನಲ್ಲಿ ಸಾಕ್ಷ್ಯಚಿತ್ರಗಳ ನಿರ್ಮಾಣ ಮಾಡುತ್ತವೆ. ಆದರೆ ಅವು ಯಾವ ಕಾರಣಕ್ಕೂ ಪ್ರಭುತ್ವವನ್ನಾಗಲೀ/ಆಳುವ ವರ್ಗವನ್ನಾಗಲೀ ಅಥವಾ ಅವುಗಳ ಕಾರ್ಯನೀತಿ/ಕಾರ್ಯವಿಧಾನವನ್ನಾಗಲೀ ವಿಶ್ಲೇಷಿಸುವ/ವಿಮರ್ಷಿಸುವ/ಠೀಕಿಸುವ ಸಾಹಸಕ್ಕೆ ಕೈಹಾಕುವುದಿಲ್ಲ. ಅಷ್ಟೇ ಯಾಕೆ, ಸಹಿಸುವುದೂ ಇಲ್ಲ. ಬದಲಿಗೆ ಪರೋಕ್ಷವಾಗಿಯಾದರೂ ಪ್ರಭುತ್ವದ ಪರವಾಗಿಯೇ ನಿಂತು ಸಹಮತ ವ್ಯಕ್ತಪಡಿಸುತ್ತಿರುತ್ತವೆ. ಹೀಗಾಗಿ ಈ ಚಿತ್ರಗಳೆಲ್ಲವೂ ಬಹುತೇಕ ಪ್ರಭುತ್ವದ/ಆಳುವ ವರ್ಗದ ದೃಷ್ಥಿಕೋನದಲ್ಲೇ ರೂಪಿತವಾಗಿರುತ್ತವೆ. ಹೀಗಾಗಿ ಇವುಗಳೂ ಸಹ ಒಂದು ರೀತಿಯಲ್ಲಿ promotional ಅಥವಾ propagandist ಚಿತ್ರಗಳೇ ಆಗಿರುತ್ತವೆ. ಇಷ್ಟಲ್ಲದೇ, ಸರ್ಕಾರೀ ಸ್ವಾಮ್ಯದ ಡಿ.ಎಸ್.ಇ.ಆರ್.ಟಿ., ಸಿ,ಐ,ಐ,ಎಲ್., ಇನ್ನಿತರ ಸಂಸ್ಥೆಗಳೂ ಮತ್ತು ಅನೇಕ ಸರ್ಕಾರೇತರ ಸಂಸ್ಥೆಗಳೂ ಶೈಕ್ಷಣಿಕ, ಸಾಹಿತ್ಯಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿವೆ. ನಾನು ಈ ಸಾಕ್ಷ್ಯಚಿತ್ರಗಳ ಬಗ್ಗೆ ಹೆಚ್ಚು ಮಾತಾಡದೇ, ಕರ್ನಾಟಕದಲ್ಲಿ ಸ್ವತಂತ್ರ ಚಿತ್ರನಿರ್ಮಾತೃಗಳು ನಿರ್ಮಿಸುತ್ತಿರುವಂಥಾ ಸ್ವತಂತ್ರ ಸಾಕ್ಷ್ಯಚಿತ್ರಗಳ ಬಗ್ಗೆ ನನ್ನ ಮಾತುಗಳನ್ನು ಸೀಮಿತಗೊಳಿಸಿಕೊಂಡು ಮಾತಾಡುತ್ತಿದ್ದೇನೆ. * * * ಚಲನಚಿತ್ರ ಮಾಧ್ಯಮವೇ ಒಂದು ಭಾಷೆಯಾಗಿರುವುದರಿಂದ ಅದಕ್ಕೆ ಭಾಷೆಯ ಹಂಗು ತೀರ ಅನಿವಾರ್ಯವೇನಲ್ಲ. ಈ ಮಾತು ಸಾಕ್ಷ್ಯಚಿತ್ರಗಳಿಗೂ ಅನ್ವಯಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಹೇಳುವುದಾದರೆ, ಕರ್ನಾಟಕದಲ್ಲಿ ಸಾಕಷ್ಟು ಸ್ವತಂತ್ರ ಸಾಕ್ಷ್ಯಚಿತ್ರಗಳು ನಿರ್ಮಾಣವಾಗುತ್ತಿರುತ್ತವೆ. ಆದರೆ ಅವೆಲ್ಲವೂ ಕನ್ನಡಿಗರಿಗಾಗಿ, ಕನ್ನಡ ಭಾಷೆಯಲ್ಲೇ ನಿರ್ಮಾಣ ಆಗುತ್ತಿವೆ ಎಂದು ಹೇಳಲಾಗುವುದಿಲ್ಲ. ಹಾಗೆ ನೋಡಿದರೆ ಕನ್ನಡ ಭಾಷೆಯಲ್ಲಿ ಸಾಕ್ಷ್ಯಚಿತ್ರ ನಿರ್ಮಾಣ ಸಂಖ್ಯೆ, ಪ್ರದರ್ಶನ ಮತ್ತು ಪ್ರೇಕ್ಷಣೆ ಇನ್ನೂ ಶೈಶವಾವಸ್ಥೆಯಲ್ಲಿಯ ಇದೆ ಅಂತಲೇ ಹೇಳಬೇಕು. ಹಾಗೆಂದ ಮಾತ್ರಕ್ಕೆ ಅದು ಈ ಅವಸ್ಥೆಯಲ್ಲಿಯೇ ಮುಂದುವರೆಯುತ್ತದೆ ಎನ್ನಲಾಗುವುದಿಲ್ಲ. ಕರ್ನಾಟಕದಲ್ಲಿ ಈ ಮಾಧ್ಯಮ ಖಂಡಿತವಾಗಿ, ಸಾಕಷ್ಟು ವೇಗವಾಗಿ ಬೆಳೆಯಲಿದೆ. ಈ ವಿಷಯದಲ್ಲಿ ಭವಿಷ್ಯದ ಬಗ್ಗೆ ನಾನು ಏಕೆ ಇಷ್ಟು ಆಶಾದಾಯಕವಾಗಿ ಹೇಳುತ್ತಿದ್ದೇನೆ ಎನ್ನುವುದಕ್ಕೆ ಹಲವು ಕಾರಣಗಳಿವೆ. · ದೃಶ್ಯ-ಶ್ರಾವ್ಯ ಮಾಧ್ಯಮದೊಂದಿಗೆ ಜಗತ್ತನ್ನು ಕಾಣುತ್ತಿರುವ ಯುವಪೀಳಿಗೆ 1990ರ ದಶಕವನ್ನು ಮಾಹಿತಿ ಕ್ರಾಂತಿಯ ದಶಕವೆಂದು ಇಡೀ ಜಗತ್ತು ಗುರುತಿಸಿಕೊಂಡಿದ್ದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ದಶಕದಲ್ಲಿ ನಾವು ಕಂಡಂಥ ಸಂವಹನ ಮತ್ತು ಮಾಹಿತಿ ಆವಿಷ್ಕಾರಗಳನ್ನು, ಅವು ಆವಿಷ್ಕಾರಗೊಂಡ ವೇಗವನ್ನು ನಾವೆಲ್ಲರೂ ಕಂಡಿದ್ದೇವೆ, ಮತ್ತು ಅದರ ಫಲವನ್ನು ಅನುಭವಿಸುತ್ತಲೂ ಇದ್ದೇವೆ. ಸರ್ಕಾರೀ ಸ್ವಾಮ್ಯದ ದೂರದರ್ಶನ ಒಂದೇ ಇದ್ದ ಸ್ಥಿತಿಯಿಂದ ಮನೆಯೊಳಗೆ ನೂರೈವತ್ತು ಇನ್ನೂರು ಟಿ.ವಿ. ಚಾನೆಲ್ ಗಳನ್ನು ವೀಕ್ಷಿಸಬಹುದಾದ ಸ್ಥಿತಿಗೆ ತೆಗೆದುಕೊಂಡ ಸಮಯ ಕೇವಲ ಐದಾರು ವರ್ಷಗಳು. ಪೇಜರ್ ಬಂದು ತನ್ನನ್ನು ತಾನು ಸ್ಥಾಪಿಸಿಕೊಳ್ಳುವುದರೊಳಗೇ ಮೊಬೈಲ್ ಫೋನ್ ಬಂತು. ಮೊಬೈಲ್ ನ ಹಿಂಚುಮುಂಚಿನಲ್ಲೇ ಇಂಟರ್ ನೆಟ್ ನಮ್ಮೆಲ್ಲರ ಕೈಗೆಟುಕುವಂತಾಯಿತು. ಮೊಬೈಲ್ ಫೋನ್ ಜನಸಾಮಾನ್ಯರಲ್ಲಿ ಸಾಮಾನ್ಯರನ್ನೂ ತಲುಪಲು ತುಂಬ ವರ್ಷಗಳೇನೂ ಹಿಡಿಯಲಿಲ್ಲ. ಆದರೆ ಅದಕ್ಕಿಂತಲೂ ವೇಗವಾಗಿ ಮೊಬೈಲ್ ಕ್ರಾಂತಿ ನಮ್ಮ ಬದುಕನ್ನು ಆವರಿಸಿಕೊಳ್ಳುತ್ತಿದೆ. ಕಪ್ಪು-ಬಿಳುಪು ಡಿಸ್ಪ್ಲೇ ಹ್ಯಾಂಡ್ ಸೆಟ್ ನಿಂದ ಕಲರ್ ಡಿಸ್ಪ್ಲೇ ಹ್ಯಾಂಡ್ ಸೆಟ್ ಗೆ ಬದಲಾಯಿಸೋಣ ಎನ್ನುವಷ್ಟರಲ್ಲೇ 2G, 3G ತರಂಗಾಂತರಗಳು ಮೊಬೈಲ್ ಕೇವಲ ಜಂಗಮ ದೂರವಾಣಿಯಷ್ಟೇ ಅಲ್ಲ, ಅದೊಂದು ಸಂಪೂರ್ಣ ಸಂಪರ್ಕ, ಮಾಹಿತಿ, ಮನರಂಜನೆಯ ಸಾಧನ ಎನಿಸಿಬಿಟ್ಟಿವೆ. ಇವತ್ತು ಹಾಡೊಂದನ್ನು ಕೇಳಲು ಸಿ.ಡಿ. ಕೊಳ್ಳುವ ಅವಶ್ಯಕತೆಯಿಲ್ಲ, ಚಿತ್ರವೊಂದನ್ನು ನೋಡಲು ಸಿನೆಮಾ ಥಿಯೇಟರ್ ಗಳಿಗೆ ಹೋಗುವ ಅವಶ್ಯಕತೆಯಿಲ್ಲ, ಇಂಟರ್ ನೆಟ್ ನಲ್ಲಿ ಬ್ರೌಸ್ ಮಾಡಲು ಕಂಪ್ಯೂಟರ್ ಮುಂದೆ ಕೂರಲೂ ಬೇಕಾಗಿಲ್ಲ. ನಿನ್ನೆ ಹುಟ್ಟಿದ ಮಕ್ಕಳೂ ಮೊಬೈಲ್ ಗಳನ್ನು ಹಿಡಿದುಕೊಂಡೇ ಬೆಳೆಯುತ್ತವೆ. ಈ ಎಲ್ಲ ಆವಿಷ್ಕಾರ ಕ್ರಾಂತಿಗಳೂ ಆಗುತ್ತಿರುವುದು ದೃಶ್ಯ-ಶ್ರಾವ್ಯ ಮಾಧ್ಯಮದಲ್ಲಿ ಎನ್ನುವುದನ್ನು ನಾವು ಬಹಳ ಮುಖ್ಯವಾಗಿ ಗಮನಿಸಬೇಕು. ಹೀಗಾಗಿ ಈ ದಿನಗಳಲ್ಲಿ ಇಂದಿನ ಮತ್ತು ಮುಂದಿನ ಪೀಳಿಗೆಗಳು ದೃಶ್ಯ-ಶ್ರಾವ್ಯ ಮಾಧ್ಯಮದ ಇಡೀ ಜಗತ್ತಿಗೆ ತೆರೆದುಕೊಳ್ಳುತ್ತವೆ ಎನ್ನುವುದು ಸ್ಪಷ್ಠವಾಗಿ ಕಾಣುತ್ತಿದೆ. · ಪಠ್ಯಾಧಾರಿತ ಬೋಧನ ಕ್ರಮದಿಂದ ಪಠ್ಯೇತರ ಬೋಧನ ಕ್ರಮದ ಈ ಕಾಲದ ಅನಿವಾರ್ಯತೆ ಈ ಎಲ್ಲ ಆವಿಷ್ಕಾರಗಳನ್ನು ಇಂದು ಶೈಕ್ಷಣಿಕ ಕ್ಷೇತ್ರ ಬಹಳ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಹೀಗಾಗಿ ಶಿಕ್ಷಣ ರಂಗದಲ್ಲಿಯೂ ಕೂಡ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. ಶಿಕ್ಷಣಾರ್ಥಿಗಳು ಯಾವ ವಯೋಮಾನದವರೇ ಆಗಿರಲೀ, ಯಾವ ವಿಷಯವನ್ನೇ ಅಭ್ಯಾಸ ಮಾಡುತ್ತಿರಲಿ, ಅವರುಗಳಿಗೆ ವಿಷಯವನ್ನು ಹೆಚ್ಚು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಬೋಧಿಸುವ ಉದ್ದೇಶ ಹಾಗೂ ಕಾಲದ ಅನಿವಾರ್ಯತೆಯಿಂದ ಶೈಕ್ಷಣಿಕ ಕ್ಷೇತ್ರ ಇಂದು ಪಠ್ಯಾಧಾರಿತ ಬೋಧನ ಕ್ರಮಕ್ಕೆ ಪೂರಕವಾಗಿ ಮಾಹಿತಿ ಸಾಧನಗಳನ್ನು, ದೃಶ್ಯ-ಶ್ರಾವ್ಯ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಾಕ್ಷ್ಯಚಿತ್ರಗಳಿಗೆ ಈಗಾಗಲೇ ಸಾಕಷ್ಟು ಬೇಡಿಕೆಯಿದೆ, ಮುಂದಿನ ಕೆಲವೇ ದಿನಗಳಲ್ಲಿ ಬಹುಬೇಡಿಕೆ ಬರಲಿದೆ. · ಎಲ್ಲ ಕ್ಷೇತ್ರಗಳಲ್ಲಿಯೂ ಇಂದು Multi-disciplined Approach ಕಾಣುತ್ತಿದ್ದೇವೆ ಇತ್ತೀಚಿನ ವರ್ಷಗಳಲ್ಲಿ ಯಾವ ಅಭಿವೃದ್ಧಿಯ ಕ್ಷೇತ್ರವೇ ಆಗಲೀ, ಯಾವ ಜನಾಧಾರಿತ, ಜನಪರ ಕಾರ್ಯಕ್ರಮಗಳೇ ಆಗಲಿ, ಪರಿಸರ ಸಂರಕ್ಷಣಾ ಕಾರ್ಯಕ್ರಮವೇ ಆಗಲೀ, ನೀತಿ ನಿರೂಪಣೆಯ ಪ್ರಕ್ರಿಯೆಯಲ್ಲಾಗಲೀ - ಅವುಗಳನ್ನು ಅನುಷ್ಠಾನಕ್ಕೆ ತರುವಾಗ ಪೂರ್ವಭಾವೀ ಸಂಶೋಧನೆ, ಸಿದ್ಧತೆ, ಅನುಷ್ಠಾನ ಹಾಗೂ ಫಲಾನುಭವಿಗಳ ಸಹಭಾಗಿತ್ವವನ್ನು ಸಾಧಿಸುವ ಸಲುವಾಗಿ ಸರ್ಕಾರೀ ಹಾಗೂ ಸರ್ಕಾರೇತರ ಸಂಸ್ಥೆಗಳು Multi-disciplined Approach ಅನ್ನು ಅನುಸರಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಯೋಜನೆಯ ಫಲಾನುವಿಗಳಾಗುವ ಜನಸಮೂಹದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಜೀವನದ ಬಗೆಗಿನ ಪೂರ್ವ ಮಾಹಿತಿಗಾಗಿ ಅಂಕಿ-ಅಂಶಗಳ ಜೊತೆಗೆ ಆ ಜನಸಮೂಹದ ಬಗೆಗಿನ ಸಾಕ್ಷ್ಯಚಿತ್ರಗಳು ಕೂಡ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಲಿವೆ. ಇಂಥ ಸಾಕ್ಷ್ಯಚಿತ್ರಗಳು ಆಡಳಿತ ವರ್ಗದ ದೃಷ್ಠಿಕೋನದಿಂದ ನಿರ್ಮಿತವಾದರೆ, ಜನತೆಯ ದೃಷ್ಠಿಕೋನದಿಂದಲೂ ಸಾಕ್ಷ್ಯಚಿತ್ರಗಳ ಅವಶ್ಯಕತೆ ಬಹಳಷ್ಟಿದೆ. ಸರ್ಕಾರ, ಆಡಳಿತ ವರ್ಗ ಮತ್ತು ಅವುಗಳೊಂದಿಗೆ ಸಂಬಂಧ ಹೊಂದಿದಂಥಾ ಸಂಸ್ಥೆಗಳು, ಅವುಗಳಿಂದ ಪ್ರಯೋಜನ ಪಡೆಯುತ್ತಿರುವ ವಾಣಿಜ್ಯ ಮತ್ತು ವಾಣಿಜ್ಯೇತರ ಸಂಸ್ಥೆಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಮೂಲಕ ಏನನ್ನು ಮಾಡಲು ಬಯಸುತ್ತಿವೆ, ಏಕೆ ಹಾಗೆ ಮಾಡಲು ಬಯಸುತ್ತಿವೆ ಹಾಗೂ ಅಂಥಾ ಕಾರ್ಯಕ್ರಮಗಳು ಪ್ರಜೆಗಳ ಬದುಕಿಗೆ ಹೇಗೆ ಪೂರಕವಾಗುತ್ತವೆ ಎನ್ನುವುದನ್ನು ಸಂಪೂರ್ಣವಾಗಿ, ನ್ಯಾಯಯುತವಾಗಿ ಮತ್ತು ನಿಷ್ಪಕ್ಷೀಯವಾಗಿ ವೀಕ್ಷಿಸುವುದು, ವಿಶ್ಲೇಷಿಸುವುದು ಮತ್ತು ದಾಖಲಿಸುವುದು ಸಾಕ್ಷ್ಯಚಿತ್ರಗಳ ಹಾಗೂ ಒಟ್ಟಾರೆ ಸಂವಹನ ಮಾಧ್ಯಮಗಳ ಮೂಲಭೂತ ಕರ್ತವ್ಯವಾಗುತ್ತದೆ. · ಇಂದು ಮುಖ್ಯವಾಹಿನಿ ಸಂವಹನ ಮಾಧ್ಯಮಗಳ ಪಾತ್ರವೇನಾಗಿದೆ? ಅವುಗಳ ಲಕ್ಷಣಗಳು ಏನು? ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಪ್ರಕ್ರಿಯೆಗಳಿಂದಾಗಿ ಈ ಎರಡು ದಶಕಗಳಿಂದ ನಾವು ಮುಖ್ಯವಾಹಿನಿ ಸಂವಹನ ಮಾಧ್ಯಮಗಳ ಆಡಳಿತಾತ್ಮಕ ಲಕ್ಷಣಗಳು ಬಹಳಷ್ಟು ಬದಲಾವಣೆ ಆಗಿರುವುದನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ. ಈ ಬದಲಾವಣೆಗಳಿಂದಾಗಿ ಮಾಧ್ಯಮಗಳ ಕಾರ್ಯನೀತಿ ಹಾಗೂ ಕಾರ್ಯವೈಖರಿ ಎರಡರಲ್ಲೂ ಆಗುತ್ತಿರುವ ಮಾರ್ಪಾಡುಗಳು ದಿನಬೆಳಗಾದರೆ ಕಣ್ಣಿಗೆ ರಾಚುತ್ತಿವೆ. ಆಡಳಿತ ಯಂತ್ರದ ಅಧಿಕಾರ ದುರ್ಬಳಕೆ, ಭ್ರಷ್ಠಾಚಾರ ಮತ್ತು ವಿತ್ತೀಯ ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳ ಪರೋಕ್ಷ ಆಡಳಿತದ ವಿರುದ್ಧ ಸೆಣಸುತ್ತಿರುವ ಪ್ರತಿಯೊಂದು ಅಭಿವೃದ್ಧಿಶೀಲ ದೇಶಕ್ಕೂ ಇರುವ ಅತ್ಯಂತ ಪ್ರಬಲವಾದ ಅಸ್ತ್ರವೆಂದರೆ ಅದು ಮಾಧ್ಯಮಗಳು. ಆದರೆ ರಾಜಕಾರಣಿಗಳ ಹಾಗೂ ಬೃಹತ್ ವ್ಯವಹಾರ ಸಂಸ್ಥೆಗಳ ಒಡೆತನದಲ್ಲಿರುವ ಇಂದಿನ ಮುಖ್ಯವಾಹಿನಿ ಮಾಧ್ಯಮಗಳು ಏನಾಗಿವೆ? ಯಾವ ಸುದ್ದಿಯನ್ನು, ಯಾವ ರೀತಿಯಲ್ಲಿ, ಯಾರ ಲಾಭಕ್ಕಾಗಿ, ಯಾರಿಗೆ ಉಣಬಡಿಸುತ್ತಿವೆ ಈ ಮಾಧ್ಯಮಗಳು? ಇಂದು ಪತ್ರಿಕೆಗಳಲ್ಲಿ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾರಾಜಿಸುತ್ತಿರುವುದು ‘ಪ್ರಾಯೋಜಿತ ಸುದ್ದಿಗಳು’ (ಅಂದರೆ sponsored news ಅಥವಾ paid news ಅಂತ ಕರೀತೀವಲ್ಲಾ ಅವು). ಬಹುತೇಕ ಸುದ್ದಿಸಂಸ್ಥೆಗಳು ಇಂದು ಸುದ್ದಿ ಬಿತ್ತರಿಸುವ ವಿಷಯದಲ್ಲಿ ಬೃಹತ್ ವಾಣಿಜ್ಯ ಸಂಸ್ಥೆಗಳೊಂದಿಗೆ ‘ಒಪ್ಪಂದ’ಗಳನ್ನು ಮಾಡಿಕೊಂಡಿರುವ ವಿಚಾರವನ್ನು ನಾವು ಗಮನಿಸುತ್ತಿದ್ದೇವೆ. ಇಂಥಾ ‘ಒಪ್ಪಂದ’ಗಳು ಎಂಥಾ ಸುದ್ದಿಗಳನ್ನು ಬಿತ್ತರಿಸಬೇಕು, ಎಂಥಾ ಸುದ್ದಿಗಳು ಗ್ರಾಹಕನನ್ನು ಮುಟ್ಟಬೇಕು ಎನ್ನುವುದನ್ನು ನಿರ್ಧರಿಸುತ್ತಲಿವೆ. ಸುದ್ದಿಸಂಸ್ಥೆಗಳು ‘ಮಾರಾಟ ಮಾಡಬಹುದಾದ ಸುದ್ದಿ’, ‘ಲಾಭದಾಯಕ ಸುದ್ದಿ’, ‘ಮಾರಾಟ ಮಾಡಲೇಬೇಕಾದ ಸುದ್ದಿ’ ಎಂದು ವರ್ಗೀಕರಿಸಿ ಪ್ರಾಮುಖ್ಯತೆಯ ಆಧಾರದ ಮೇಲೆ ಸುದ್ದಿ ಪ್ರಸಾರದಲ್ಲಿ ತೊಡಗಿವೆ. ಒಂದು ಅನುಮಾನವಂತೂ ದಟ್ಟವಾಗಿ ಕಾಡುತ್ತದೆ. ಮಾಧ್ಯಮಗಳು ತಮ್ಮ ಸರಕುಗಳನ್ನು ಅವುಗಳ ಗ್ರಾಹಕರಿಗೆ ಮಾರುತ್ತಿವೆಯೋ, ಅಥವಾ ತಮ್ಮ ಗ್ರಾಹಕರನ್ನೇ ಆ ಸರಕುಗಳಿಗೆ ಮಾರುತ್ತಿವೆಯೋ ಅನ್ನೋದು. ಹೀಗೆ ಬದಲಾಗುತ್ತಿರುವ ಸುದ್ದಿಸಂಸ್ಥೆಗಳು ಪತ್ರಿಕೋದ್ಯಮದ ನೈತಿಕತೆಯನ್ನು ಗಾಳಿಗೆ ತೂರಿದಂತಾಗಿದೆ ಎನ್ನುವುದು ಬಹಳ ಗಂಭೀರ ವಿಚಾರ. ಈ ರೀತಿಯಲ್ಲಿ ಆಯ್ಕೆಯಾದ ಸುದ್ದಿಗಳನ್ನಷ್ಟೇ ಗ್ರಾಹಕ ಸ್ವೀಕರಿಸಬೇಕಾಗಿರುವುದರಿಂದ ಜನಸಾಮಾನ್ಯ ನೈಜ ಹಾಗೂ ವರ್ತಮಾನ-ಪ್ರಸ್ತುತ ಸುದ್ದಿ, ವಿಶ್ಲೇಷಣೆಗಳಿಂದ ವಂಚಿತನಾಗುತ್ತಿದ್ದಾನೆಯೇ? ಇಂಥಾ ಸನ್ನಿವೇಶದಲ್ಲಿ ಮಾಧ್ಯಮನಿರತನೊಬ್ಬ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೆರೆಯಲು ಹೇಗೆ ಸಾಧ್ಯ? ಸಾಮಾಜಿಕ ನ್ಯಾಯವನ್ನು ಪ್ರತಿಹಂತದಲ್ಲೂ ಪ್ರತಿನಿಧಿಸಬೇಕಾದ ಮಾಧ್ಯಮಗಳು ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯಸಮ್ಮತವಾದ ಸುದ್ದಿ, ವಿಶ್ಲೇಷಣೆಗಳನ್ನು ಬಿತ್ತರಿಸಲು ಹೇಗೆ ಸಾಧ್ಯ? ಮಾಧ್ಯಮಗಳ ಗ್ರಾಹಕ ವೃಂದ ದಿನೇದಿನೇ ಬೆಳೆಯುತ್ತಿರುವ ಈ ದಿನಗಳಲ್ಲಿ ಮಾಧ್ಯಮಸಂಸ್ಥೆಗಳ ನಡುವಿನ ಪೈಪೋಟಿಯೂ ಅಷ್ಟೇ ಗಾಢವಾಗಿ ಹೆಚ್ಚುತ್ತಿದೆ. ಈ ಪೈಪೋಟಿ ತಮ್ಮ ಗ್ರಾಹಕ ವೃಂದವನ್ನು ಜಾತಿ, ಮತ, ಲಿಂಗ, ಸಂಪನ್ಮೂಲ, ಶ್ರೇಣಿ, ಗಡಿಗಳ ಆಧಾರದ ಮೇಲೆ ವಿಭಜಿಸುವ ಅನೈತಿಕ ಮಾರ್ಗಗಳಿಗೂ ಕೆಲವು ಸಾರಿ ಎಡೆಮಾಡಿಕೊಟ್ಟಿರುವ ದುಷ್ಟಾಂತಗಳನ್ನು ನಾವು ನೋಡಿದ್ದೇವೆ. ಯಾವ ಪ್ರಮುಖ ಮಾಧ್ಯಮಸಂಸ್ಥೆಯಿಂದ ಹೊರಹೊಮ್ಮುವ ಸುದ್ದಿಯನ್ನೂ ಇಂದು ನಾವು ನಂಬುವಂತಿಲ್ಲ. ಪ್ರಾಮಾಣಿಕವಾಗಿ ಜನಪರವಾಗಿದೆ ಎಂದು ಹೇಳುವಂತಿಲ್ಲ. ಯಾವುದೇ ಸುದ್ದಿ, ಸಮೀಕ್ಷೆ, ವಿಶ್ಲೇಷಣೆಯ ಹಿಂದೆಯೂ ಒಂದು ಸಮ್ಮೋಹನಕಾರೀ ಉದ್ದೇಶ, ಒಂದು ವಾಣಿಜ್ಯ ಹುನ್ನಾರ ಇದ್ದೇ ಇರುತ್ತದೆ. ಮಾಧ್ಯಮ ನೈತಿಕತೆಗೆ ಸ್ವಲ್ಪವಾದರೂ ಬದ್ಧವಾಗಿ ಕೆಲಸ ಮಾಡುತ್ತಿರುವ ಸುದ್ದಿಸಂಸ್ಥೆಗಳು ಅತಿವಿರಳವಾಗುತ್ತಿರುವ ಇಂಥಾ ಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ನೆಲಗಟ್ಟು ಎನಿಸಿಕೊಂಡಿರುವ ಮಾಧ್ಯಮ ಜಗತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವುದಾದರೂ ಹೇಗೆ ಸಾಧ್ಯ? ಇಂಥಾ ಸಂದರ್ಭದಲ್ಲಿ ಸಾಕ್ಷ್ಯಚಿತ್ರಗಳು ಸುದ್ದಿಮಾಧ್ಯಮಗಳಿಗೆ ಪರ್ಯಾಯ ಎಂದು ನಾನು ಹೇಳುತ್ತಿಲ್ಲ. ಆದರೆ ಅವುಗಳಿಗಿಂತ ವಿಭಿನ್ನವಾದ - ಕೆಲವು ಸಾರಿ ಇನ್ನೂ ಹೆಚ್ಚಿನ - ಕ್ರಿಯಾತ್ಮಕತೆ, ಮಹತ್ವ, ಜವಾಬ್ದಾರಿ ಹಾಗೂ ಆಯಾಮಗಳೊಂದಿಗೆ ಸ್ವತಂತ್ರ ಸಾಕ್ಷ್ಯಚಿತ್ರಗಳು ಕೆಲಸಮಾಡಬಲ್ಲವು ಎಂದು ಹೇಳುತ್ತಿದ್ದೇನೆ. ಸಾಮಾಜಿಕ ನ್ಯಾಯಸಮ್ಮತವಾಗಿ, ಜನಹಿತ ಮತ್ತು ಜೀವಪರ ನಿಲುವಿನೊಂದಿಗೆ ನಿರ್ಮಿತವಾದ ಸ್ವತಂತ್ರ ಸಾಕ್ಷ್ಯಚಿತ್ರಗಳನ್ನು ಪ್ರಜ್ಞಾವಂತ ಜನ ಸ್ವೀಕರಿಸುತ್ತಾರೆ ಎನ್ನುವ ಆಶಾದಾಯಕತೆ ನನಗಿದೆ. ಅಂಥಾ ಸಾಕ್ಷ್ಯಚಿತ್ರಗಳ ನಿರ್ಮಾಣದ ಅವಶ್ಯಕತೆ ಹಿಂದೆಂದಿಗಿಂತಲೂ ಈ ಕಾಲಘಟ್ಟದಲ್ಲಿ ಹಾಗೂ ಭವಿಷ್ಯದಲ್ಲಿ ಹೆಚ್ಚಾಗಿದೆ ಎಂದೇ ನಾನು ನಂಬುತ್ತೇನೆ. ಡಿಜಿಟಲ್ ತಂತ್ರಜ್ಞಾನದಿಂದಾಗಿ ಇಂದು ಸಾಕ್ಷ್ಯಚಿತ್ರ ನಿರ್ಮಾಣ ಸಾಕಷ್ಟು ಕೈಗೆಟುಕುವ ಸಾಹಸವಾಗಿದೆ. ಆದ್ದರಿಂದ ಸ್ವತಂತ್ರ ಅಭಿವ್ಯಕ್ತಿಗಾಗಿ ಹೊಸಹೊಸ ಮಾಧ್ಯಮಗಳನ್ನು ಹುಡುಕುತ್ತಿರುವ ಸಂವಹನ ವಿದ್ಯಾರ್ಥಿ ಸಮೂಹ ಹಾಗೂ ಕ್ರಿಯಾಶೀಲ ಯುವ ಸಮುದಾಯ ಈ ಕ್ಷೇತ್ರಕ್ಕೆ ಧುಮುಕುವುದರ ಮೂಲಕ ಆರೋಗ್ಯಕರ ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ, ಕರ್ನಾಟಕದಲ್ಲಿ ಕುಂಟುತ್ತ ತೆವಳುತ್ತ ಕಾರ್ಯನಿರತರಾಗಿರುವ ನಮ್ಮಂಥ ಬೆರಳೆಣಿಕೆಯಷ್ಟು ಮಂದಿ ಸ್ವತಂತ್ರ ಸಾಕ್ಷ್ಯಚಿತ್ರ ನಿರ್ಮಾತೃಗಳೊಂದಿಗೆ ಕೈಜೋಡಿಸುತ್ತಾರೆ, ಕರ್ನಾಟಕದಲ್ಲಿ ಸಿನಿಮಾ, ರಂಗಭೂಮಿ, ಮತ್ತು ಇತರೆ ಕಲಾಪ್ರಕಾರಗಳಿಗೆ ಇರುವ ಪ್ರೇಕ್ಷಕ ವೃಂದದ ಹಾಗೆಯೇ ಸ್ವತಂತ್ರ ಸಾಕ್ಷ್ಯಚಿತ್ರಗಳಿಗೂ ಒಂದು ಪ್ರೇಕ್ಷಕ ಸಮೂಹವನ್ನು ಬೆಳೆಸಲು ನೆರವಾಗುತ್ತಾರೆ ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ನಾಳೆಗಳನ್ನು ಎದುರು ನೋಡುತ್ತೇನೆ. * * * ಸ್ವತಂತ್ರ ಸಾಕ್ಷ್ಯಚಿತ್ರಗಳ ಅವಶ್ಯಕತೆ ಇದೆ ಎಂದಾದ ಮೇಲೆ ಅವುಗಳ ಪ್ರಭಾವ, ಇಂದಿನ ಸ್ಥಿತಿ ಗತಿ, ಆ ಕ್ಷೇತ್ರದ ಬೆಳವಣಿಗೆಗಾಗಿ ಕರ್ನಾಟಕದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು – ಇವುಗಳ ಬಗ್ಗೆಯೂ ಒಂದಿಷ್ಟು ಮಾತಾಡಬೇಕಾದುದು ಉಚಿತವೆನಿಸುತ್ತದೆ. ನಾನೂ ಸಹ ಹಲವು ಸ್ವತಂತ್ರ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದೇನೆ ಮತ್ತು ನಿರ್ಮಿಸುತ್ತಲೂ ಇದ್ದೇನೆ. ತದಡಿ ಉಷ್ಣವಿದ್ಯುತ್ ಸ್ಥಾವರದ ಪ್ರಸ್ತಾಪದ ಹಿನ್ನೆಲೆಯಲ್ಲಿ 2006 ರಲ್ಲಿ ನಿರ್ಮಿಸಿದ ‘ಅಘನಾಶಿನಿ ಮತ್ತು ಮಕ್ಕಳು’ ಇಡೀ ಕರ್ನಾಟಕದ ಉದ್ದಗಲದಲ್ಲಿ ಸುಮಾರು ಇನ್ನೂರ ಐವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಗುಂಡ್ಯ ಜಲವಿದ್ಯುತ್ ಯೋಜನೆಯನ್ನು ಅನುಷ್ಠಾನಗೊಳಿಸಿದ್ದೇ ಆದರೆ ಸಕಲೇಶಪುರ ಮತ್ತು ಪುತ್ತೂರು ತಾಲ್ಲೂಕಿನ ಪಶ್ಚಿಮಘಟ್ಟದ ಭಾಗದಲ್ಲಿ ಉಂಟಾಗುವ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಪರಿಣಾಮಗಳು ಹಾಗೂ ಪರಿಸರದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳ ಕುರಿತಂತೆ ಈ ಸಾಕ್ಷ್ಯಚಿತ್ರ ತಯಾರಾಗುತ್ತಿದೆ. ಅದೇ ರೀತಿ, ರೋಣ ತಾಲ್ಲೂಕಿನ ರಾಜೂರು ಗ್ರಾಮದಲ್ಲಿ ಸುಮಾರು ನೂರು ವರ್ಷಗಳಿಂದಲೂ ಗೃಹಕೈಗಾರಿಕೆಯ ರೂಪದಲ್ಲಿ ನಡೆಯುತ್ತಿರುವ ಸುಣ್ಣದ ಭಟ್ಟಿಯ ಉದ್ದಿಮೆ, ಅದು ಸೃಷ್ಠಿಸಿರುವ ಒಂದು ಸ್ಥಳೀಯ ಹಾಗೂ ಸುಸ್ಥಿರ ಆರ್ಥಿಕತೆ, ಸಾಮಾಜಿಕತೆ ಹಾಗೂ ಸಂಸ್ಕೃತಿಯ ಬಗ್ಗೆಯೂ ಒಂದು ಸಾಕ್ಷ್ಯಚಿತ್ರವನ್ನು ತಯಾರಿಸುತ್ತಿದ್ದೇನೆ. ಈ ಎರಡೂ ಚಿತ್ರಗಳೂ ಹಣದ ಅಡಚಣೆಯಿಂದಾಗಿ ಇನ್ನೂ ಪೂರ್ತಿಯಾಗಿಲ್ಲ ಎಂತಲೂ ಹೇಳಬೇಕಾಗಿದೆ. ಕೆಲವು ಸಾಕ್ಷ್ಯಚಿತ್ರಗಳು ಆ ಚಿತ್ರಗಳಲ್ಲಿ ಪಾಲ್ಗೊಂಡ ಜನಸಮೂಹದ ಮೇಲೂ, ಕೆಲವು ಸಾರಿ ಆಳುವ ವರ್ಗದ ಮೇಲೂ, ನೀತಿನಿರೂಪಕರ ಮೇಲೂ ಹೇಗೆ ಪ್ರಭಾವ ಬೀರಬಲ್ಲದು ಎನ್ನುವುದಕ್ಕೆ ‘ಅಘನಾಶಿನಿ ಮತ್ತು ಮಕ್ಕಳು’ ಚಿತ್ರವೇ ಸಾಕ್ಷಿ. ಇದೇ ಉದಾಹರಣೆ ಯಾಕೆ ತೊಗೊಂಡೆ ಅಂದ್ರೆ ಅದು ನನ್ನ ಸ್ವಂತ ಅನುಭವಕ್ಕೆ ಸಿಕ್ಕಿದ್ದು ಅನ್ನುವ ಕಾರಣದಿಂದಷ್ಟೇ ಹೊರತು ಮತ್ತೇನೂ ಅಲ್ಲ. ಗೋಕರ್ಣದ ಬಳಿ ತದಡಿ ಎನ್ನುವ ಗ್ರಾಮದಲ್ಲಿ ಅಘನಾಷಿನಿ ನದಿ ಅರಬ್ಬೀ ಸಮುದ್ರವನ್ನು ಸೇರುತ್ತೆ. ಈ ಅಳಿವೆ ಪ್ರದೇಶದಲ್ಲಿ ಭಾರತ ಸರ್ಕಾರ 4000 ಮೆಗಾವ್ಯಾಟ್ ನ ಒಂದು ಬೃಹತ್ ಉಷ್ಣವಿದ್ಯುತ್ ಸ್ಥಾವರವನ್ನು ಸ್ಥಾಪಿಸುವ ಯೋಜನೆ ಹಾಕಿಕೊಂಡಿತ್ತು. ಆದರೆ ಈ ಅಳಿವೆ ಪ್ರದೇಶ ಶತಶತಮಾನಗಳಿಂದಲೂ ಸಾಕಷ್ಟು ಸುಸ್ಥಿರವಾದ ಆರ್ಥಿಕತೆ ಮತ್ತು ಸಾಮಾಜಿಕತೆಯನ್ನೇ ಅಲ್ಲಿಯ ಸ್ಥಳೀಯರಿಗೆ ಕಟ್ಟಿಕೊಟ್ಟಿದೆ. ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಸ್ಥಳೀಯ ಕುಟುಂಬಗಳು ಅಘನಾಷಿನಿ ಅಳಿವೆಯಿಂದ ಕಡೇಪಕ್ಷ ಕನಿಷ್ಠ ತೃಪ್ತಿಕರ ಬದುಕನ್ನೇ ಕಟ್ಟಿಕೊಂಡಿದ್ದಾರೆ. ಯಾವುದೇ ಸರ್ಕಾರವೂ ಪುನರ್ ನಿರ್ಮಿಸಲಾಗದಂಥಾ ಇಂಥಾ ಪರಿಸರ ಮೌಲ್ಯ ಮತ್ತು ಸ್ಥಳೀಯ ಆರ್ಥಿಕತೆ ಈ ಯೋಜನೆಯಿಂದ ಸಂಪೂರ್ಣ ನಾಶವಾಗಿ ಅಷ್ಟೂ ಕುಟುಂಬಗಳ ಬದುಕು ಬವಣೆಯಾಗುವುದರಲ್ಲಿತ್ತು. ಹಾಗಾಗಿ ಆ ಯೋಜನೆಯ ವಿರುದ್ಧ ಸ್ಥಳೀಯರಿಂದ ಒಂದು ದೊಡ್ಡ ಹೋರಾಟವೇ ನಡೀತು. ಆ ಹೋರಾಟದ ಅಂಗವಾಗಿಯೇ ಈ ಚಿತ್ರವನ್ನು ನಿರ್ಮಿಸಿದ್ದು. ಈ ಚಿತ್ರಕ್ಕೆ ಹಣ ಖರ್ಚುಮಾಡಿದವರೂ ಅಲ್ಲಿಯ ಸ್ಥಳೀಯರೇ. ಈ ಅಳಿವೆಯ ಸಮೃದ್ಧಿಯನ್ನು ಕಾಲದಿಂದಲೂ ಅನುಭವಿಸುತ್ತ ಬಂದಿದ್ದ ಅಲ್ಲಿಯವರು ಈ ಚಿತ್ರ ನೋಡಿದ ಮೇಲೆ “ಹೌದು, ಈ ನದಿ ನಮ್ಮ ತಾಯಿ” ಎಂದು ಹೇಳುವುದಕ್ಕೆ ಆರಂಭಿಸಿದ್ದಾರೆ. ಇದರಿಂದಾಗಿ ಸ್ಥಳೀಯರ ಹೋರಾಟ ಇನ್ನಷ್ಟು ಗಟ್ಟಿಯಾಯಿತು ಎಂದರೂ ತಪ್ಪಾಗಲಾರದು. ಅದೇ ಸಂದರ್ಭದಲ್ಲಿ ಹದಿನಾರು ಜನ ಸಂಸದರನ್ನು ಒಳಗೊಂಡ Parliamentary Affairs Committee on Energy ಸ್ಥಳ ಸಮೀಕ್ಷೆಗೆ ಅಂತ ಭೇಟಿಕೊಟ್ಟಾಗ ಈ ಚಿತ್ರವನ್ನು ನಾವು ಅವರಿಗೆ Protest Submission ಎಂದು ತೋರಿಸಿದೆವು. ಅದರಿಂದಾಗಿ ಆ ಸಂಸದರೆಲ್ಲರೂ ಅಘನಾಶಿನಿ ಅಳಿವೆಯ ಆರ್ಥಿಕ, ಸಾಮಾಜಿಕ ಹಾಗೂ ಪರಿಸರ ಮೌಲಿಕ ಮಹತ್ವವನ್ನು ಅರಿಯುವಂತಾಯ್ತು. ಅವರಲ್ಲೇ ಕೆಲವರಲ್ಲಿ ಇಂಥಾ ಮಹತ್ವಪೂರ್ಣ ಸ್ಥಳದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕೇ ಎನ್ನುವ ಅನುಮಾನವೂ ಹುಟ್ಟಿತು ಎನ್ನುವುದು ಗಮನಾರ್ಹ. ಆನಂತರ ಸ್ಥಳೀಯರ ಹೋರಾಟದ ಫಲವಾಗಿ ತದಡಿ ಉಷ್ಣವಿದ್ಯುತ್ ಸ್ಥಾವರದ ಪ್ರಸ್ತಾವವನ್ನು ಕೈಬಿಡಲಾಯಿತು ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಈ ಕ್ಷೇತ್ರದ ಸಾಧ್ಯತೆಗಳು ಇಷ್ಟು ವಿಸ್ತಾರವಾಗಿದ್ದರೂ ಇದರಲ್ಲಿ ತೊಡಗಿಕೊಂಡವರ ಸಂಖ್ಯೆ ತೀರ ಕಡಿಮೆಯೇ. ಇದಕ್ಕೆ ಬಹಳ ಮುಖ್ಯ ಕಾರಣವೆಂದರೆ ಹೂಡಿಕೆ ಮತ್ತು ಹಿಂಪಡೆಯುವಿಕೆಯ ಸಮಸ್ಯೆ. ಅಂದರೆ ಲಾಭದ ವಿಷಯವನ್ನು ಮಾತಾಡಿ ಸ್ವತಂತ್ರ ಸಾಕ್ಷ್ಯಚಿತ್ರಗಳನ್ನೂ ಸರಕಿನ ಸಾಲಿಗೆ ಸೇರಿಸುತ್ತಿದ್ದೇನೆ ಎಂದು ದಯವಿಟ್ಟು ಭಾವಿಸಬಾರದು. ಆದರೆ ವ್ಯಯಿಸಿದ ಸಮಯ, ನಡೆಸಿದ ಸಂಶೋಧನೆ, ಪಟ್ಟ ಪರಿಶ್ರಮ ಮತ್ತು ಖರ್ಚುಮಾಡಿದ ಹಣ - ಇಷ್ಟನ್ನಾದರೂ ಹಿಂದಕ್ಕೆ ಪಡೆಯದಿದ್ದರೆ ಯಾವುದೇ ಕ್ಷೇತ್ರದಲ್ಲಿ ಮುಂದುವರೆಯುವುದಾದರೂ ಹೇಗೆ ಸಾಧ್ಯ? ಕೊನೆಯದಾಗಿ, ಸ್ವತಂತ್ರ ಸಾಕ್ಷ್ಯಚಿತ್ರಗಳ ನಿರ್ಮಾಣ, ಪ್ರದರ್ಶನ ವ್ಯವಸ್ಥೆ ಹಾಗೂ ಪ್ರೇಕ್ಷಕ ವೃಂದದ ಹೆಚ್ಚಳ – ಇವುಗಳಿಗಾಗಿ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂದು ಸಂಕ್ಷಿಪ್ತವಾಗಿ ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
* * * ಇಷ್ಟಂತೂ ನಿಜ, ನಮ್ಮ ದೇಶದಲ್ಲಿ ‘ಪ್ರಜಾಪ್ರಭುತ್ವ’ ಎನ್ನುವುದು ’ರಾಜಕಾರಣಿ-ಅಧಿಕಾರಿಶಾಹಿ-ಬಂಡವಾಳಶಾಹಿ’ – ಈ ತ್ರಿಕೋನದ ಆಟಿಕೆಯಾಗುತ್ತಿರುವ ಈ ಸಂದರ್ಭದಲ್ಲಿ; ಸಂಪನ್ಮೂಲಗಳು ಪ್ರಭಾವೀ ವಲಯಗಳಿಗಷ್ಟೇ ಸಂದಾಯವಾಗುತ್ತಿರುವ ಈ ಸಂದರ್ಭದಲ್ಲಿ; ನಾಗರೀಕತೆ ಸಂಸ್ಕೃತಿಗಳನ್ನು ಶರವೇಗದಲ್ಲಿ ನುಂಗುತ್ತಿರುವ ಈ ಸಂದರ್ಭದಲ್ಲಿ; ಯಾವಯಾವ ರೀತಿಯಲ್ಲಿ ಸಾಧ್ಯವೋ ಅವೆಲ್ಲ ರೀತಿಗಳಲ್ಲೂ ಮಾನವ ಸಮಾಜ ಒಡೆಯುತ್ತಿರುವ ಈ ಸಂದರ್ಭದಲ್ಲಿ; ದೇಶ ಮತ್ತು ದೇಶದ ಜನ ಇತಿಹಾಸ ಪ್ರಜ್ಞೆಯನ್ನೇ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ; ಸಾಂಸ್ಕೃತಿಕ, ಸಾಮಾಜಿಕ ಹಾಗೂ ಮಾನವೀಯ ನೆಲೆಗಳಲ್ಲಿ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗದೇ, ಕೇವಲ ಆರ್ಥಿಕ ನೆಲೆಯಿಂಡಲಷ್ಟೇ ಬದುಕು ಕಟ್ಟಿಕೊಳ್ಳಬೇಕಾಗಿ ಬಂದಿರುವ ಇಂಥಾ ಅನಿವಾರ್ಯ ಸಂದರ್ಭದಲ್ಲಿ; ಸರಕುಗಳು ಸರಕಾಗುವ ಬದಲಿಗೆ, ಗ್ರಾಹಕನೇ ಸರಕಾಗುತ್ತಿರುವ ಈ ಸಂದರ್ಭದಲ್ಲಿ, ಮನುಷ್ಯನಿಗೆ ಅಭಿವ್ಯಕ್ತಿಸಬೇಕು ತೀವ್ರತೆ ದಿನೇ ದಿನೇ ಹೆಚ್ಚುತ್ತಲೇ ಇರುತ್ತದೆ. ಕಲಾನಿರ್ಮಾಣ ಒಂದು ಅಭಿವ್ಯಕ್ತಿಯಾದರೆ, ಕಲೋಪಾಸನೆಯೂ ಒಂದು ಅಭಿವ್ಯಕ್ತಿಯೇ. ಹೀಗಾಗಿ ಸಾಕ್ಷ್ಯಚಿತ್ರದಲ್ಲಿನ ಅಭಿವ್ಯಕ್ತಿ ನೋಡುಗನ ಅಭಿವ್ಯಕ್ತಿಯೂ ಆಗಿರುತ್ತದೆ. ಆದ್ದರಿಂದ ಹಣವಿದೆಯೋ ಇಲ್ಲವೋ, ಸ್ವತಂತ್ರ ಸಾಕ್ಷ್ಯಚಿತ್ರ ಕ್ಶೇತ್ರವೂ ಯಾವ ಹಂಗೂ ಇಲ್ಲದೇ, ಯಾರ ಹಂಗೂ ಇಲ್ಲದೇ ಸ್ವತಂತ್ರವಾಗಿ ಬೆಳೆಯುತ್ತಲೇ ಹೋಗುತ್ತದೆ... ಕಾವ್ಯಸೃಷ್ಠಿಯ ಹಾಗೆ ಫೆಬ್ರುವರಿ 16, 2011
|
|