ದೃಶ್ಯಕ್ಕೊಂದು ನುಡಿಗಟ್ಟು

ಒಲವೇ ‘ಮಂದ’ವಾದ ಮ್ಯಾರಥಾನ್.. ದಣಿವು ಮಾತ್ರ ನನ್ನದು...

  ಅವೇ ಹಳೇ ಫಾರ್ಮು'ಒಲವೇ ಮಂದಾರ' ಚಿತ್ರ ವಿಮರ್ಶೆ olave mandara kannada film reviewಲಾಗಳ ಪ್ರೀತಿ-ಪ್ರೇಮ ಕತೆಗಳ ನಡುವೆ ಮತ್ತದೇ ಪ್ರೇಮದ ಔನ್ನತ್ಯವನ್ನ ಹೇಳಬೇಕಾಗಿಬಂದರೆ ಹೇಗಿರುತ್ತದೆ? ನಿರ್ದೇಶಕ ಜಯತೀರ್ಥರವರು ಹಲವು ಲೆಕ್ಕಾಚಾರಗಳಿಗೆ ಮೊರೆಹೋಗಿದ್ದಾರೆ. ಮೊದಲಿಗೆ ಪ್ರೀತಿಯೆಂದಾಕ್ಷಣ ಅವರು ಇನ್ನಿಲ್ಲದಂತೆ ಭಾವುಕರಾಗಿದ್ದಾರೆ. ಇದಕ್ಕೆ ಅವರ ಕಥನಕ್ರಮ ಸಾಕ್ಷಿ. ರಾಜ ರಾಣಿ, ಬೆಟ್ಟಗುಡ್ಡ, ಏಳು ಸಮುದ್ರ ಅಂತ ಏನೇನೊ ಫ್ಯಾಂಟಸಿಯ ಕಥೆ ಹೇಳುವುದರ ಜೊತೆಗೆ ತನ್ನ ಕುಂಟು ಹೆಂಡತಿಯ ಕಾಶಿ ನೋಡುವ ಆಕಾಂಕ್ಷೆಯನ್ನ ಈಡೇರಿಸುವ ವಾಸ್ತವದ ಸಾಧ್ಯತೆಯ ಕಥೆಯನ್ನೂ ಹೆಣೆಯುತ್ತ ಸಾಗಿದ್ದಾರೆ. ಜೊತೆಗೆ ದಶರತ್ ಮಾಂಜಿ ಎಂಬ ಪ್ರೇಮಿಯ ಹಿಸ್ಟಾರಿಕಲ್ ರೆಫರೆನ್ಸ್ ಕೂಡ ಕೊಟ್ಟಿದ್ದಾರೆ. ಇವೆಲ್ಲ ಕಥೆಗೆ ತಾಜಾತನ, ಭಾವುಕತೆ ತರುವುದರ ಜೊತೆಗೆ ಹಿಸ್ಟರಿಯ ಆಧಾರಗಳು ಒಂದರೊಳಗೊಂದು ಬೆರೆತು ಹದವಾದ ಪಾಕವಾಗುತ್ತದೆ ಎಂದುಕೊಂಡಿದ್ದು ತಪ್ಪಾಗಿದೆ. ಪ್ರೇಮದ ಉತ್ಕಟತೆ ಅಂದರೆ ಹೀಗೂ ಇರುತ್ತದೆಯೆ ಎಂದು ಹುಬ್ಬೇರಿಸುತ್ತ ನೋಡುತ್ತಿದ್ದವರಿಗೆ ಜಯತೀರ್ಥರವರ ರೆಫರೆನ್ಸ್‌ಗಳು ಕಿರಿಕಿರಿಯನ್ನುಂಟು ಮಾಡುತ್ತವೆಯೆ ಹೊರತು ಯಾವುದೇ ರೀತಿಯಲ್ಲೂ ಸನ್ನಿವೇಶದ ಇಮ್ಮಡಿಗೊಳಿಸುವುದಿಲ್ಲ. ಮಾನ್ಯ ಜಯತೀರ್ಥರವರು ಕಥೆಗಾರರಾಗುವುದಕ್ಕಿಂತ ಪ್ರೀತಿ ಪ್ರೇಮದ ಅತೀ ವಾಚ್ಯ ಫಿಲಾಸಫರ್ ಆಗಿಯೋ ಅಥವಾ ಸಂಶೋಧಕರಾಗಿದ್ದರೆ ಚೆಂದ ಎನ್ನುವುದು ಚಿತ್ರದ ಪ್ರತಿ ಫ್ರೇಮಿನಲ್ಲೂ ಸಾಬೀತಾಗುತ್ತದೆ.
  ಪ್ರೀತಿ ಪ್ರೇಮಕ್ಕಿಂತ ತನ್ನ ಡ್ಯಾನ್ಸ್ ಕೆರಿಯರ್ ಮುಖ್ಯ ಎನ್ನುತ್ತಿದ್ದ ನಾಯಕ ಅದು ಹೇಗೊ ನಾಯಕಿಯ ಮಾಂತ್ರಿಕ ಸೆಳೆತಕ್ಕೆ ಸಿಲುಕಿ ಕಡೆಗೆ ಆಕೆಯ ಮುಗ್ಧತೆಗೆ ಶರಣಾಗಿ ಭೂತಕಾಲದ ಕಟ್ಟುಕತೆಗಳ ಒಚಿದು ಪಾತ್ರದಂತೆ ನದಿ ಬೆಟ್ಟಗುಡ್ಡ ಅಂದುಕೊಂಡು ತನ್ನ ಪ್ರೇಮದ ಮ್ಯಾರಥಾನ್ ಆರಂಭಿಸುತ್ತಾನೆ. ನಡುನಡುವೆ ಅವಘಡಗಳು, ಏನೇನೊ ಆಪತ್ತುಗಳು-ಒಂದರಿಂದೊಂದು ಅಗ್ನಿಪರೀಕ್ಷೆಗಳು. ನಾಯಕನಲ್ಲವೆ-ಅವನು ಎಲ್ಲದರಿಂದ ಪಾರಾಗಲೇ ಬೇಕು. ಇನ್ನೇನು ಅಧ್ಯಾಯ ಮುಗಿಯಿತೆಂದು ಭಾವಿಸುವಾಗಲೇ ಹೊಸದೊಂದು ಅಧ್ಯಾಯ ಪ್ರಾರಂಭವಾಗಲೇ ಬೇಕು. ಇವೆಲ್ಲವನ್ನು ಮೊದಲೇ ಗ್ರಹಿಸಿ ನೋಡಲು ನಾವು ಉದ್ಯುಕ್ತರಾದರೆ ವ್ಯಂಗ್ಯದ ತೆಳು ನಗು ಅದೇ ಹಳೇ ಜಾಡನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ.
   ನಾಯಕ ನೆಲೆನಿಂತ ಕಡೆಯಲ್ಲೆಲ್ಲ ಒಂದೊಂದು ಕತೆ ಅನಾವರಣವಾಗುತ್ತದೆ. ಅಪರಿಚಿತ ನೆಲದಲ್ಲಿನ ಒಂಟಿತನ, ಧಾವಚಿತ ಎಲ್ಲ ಪ್ರಕಟಗೊಳ್ಳುವ ಬದಲು ಅಲ್ಲೆಲ್ಲ ನಿರ್ಭೀತಿಯ ಪೂರಕ ಕತೆಗಳನ್ನೇ ಕಟ್ಟಿಬೆಳೆಸಿರುವುದು ಶುದ್ಧ ಗಿಮಿಕ್ ಆಗಿಯೇ ಕಾಣುತ್ತದೆ. ಇದನ್ನೆಲ್ಲ ನೋಡುವಿಕೆಯ ಪ್ರಯಾಣದ ಯಾತನೆಗೆ ಆಗಾಗ ಹಾಡುಗಳ ಸಣ್ಣ ಬೇಕ್. ಅದು ಮುಗಿಯುತ್ತಿದ್ದಂತೆ ಮತ್ತೆ ಪ್ರೇಮದ ಮ್ಯಾರಥಾನ್.'ಒಲವೇ ಮಂದಾರ' ಚಿತ್ರ ವಿಮರ್ಶೆ olave mandara kannada film review
   ಇವಿಷ್ಟು ಜಯತೀರ್ಥರವರು ಕತೆಯ ಬರೆ ಎಳೆಯುವುದಕ್ಕೆ ತಮ್ಮ ಮನಸ್ಸಿನಲ್ಲಿ ಕಾಯಿಸಿ ಕುದಿಸಿಕೊಂಡಿರುವ ಪಾಕ. ಆದರೆ ಕ್ಲೈಮ್ಯಾಕ್ಸ್ ಅಂತ ಒಂದಿರುತ್ತದಲ್ಲ! ಕತೆ ಹೇಗಾದರೂ ಬೆಳೆದು ಹಬ್ಬಿಕೊಂಡಿರಲಿ, ವರ್ತಮಾನದ ಟ್ರೆಂಡ್ ಏನು ಎಂಬುದರ ಆಧಾರದ ಮೇಲೆ ಅದಕ್ಕೊಂದು ತಿರುವು ನೀಡುವುದಕ್ಕೆ ಅಂತಲೇ ಕೆಲ ಸಿನಿಮಾ ಜ್ಯೋತಿಷಿಗಳು ಕಾದಿರುತ್ತಾರೆ. ಏನೇನು ಮಾಡಿದರೆ ಏನು ಫಲ ಅಂತ ಅವರೆಲ್ಲ ಬಡಬಡಿಸುತ್ತಾರೆ. ಕ್ಲೈಮ್ಯಾಕ್ಸ್ ಸುಖಾಂತ್ಯವಾದರೆ ಚೆಂದವೊ ಅಥವಾ ದುಃಖಾಂತ್ಯವೊ? ಜಯತೀರ್ಥರವರು ಸಂದಿಗ್ಧಕ್ಕೆ ಒಳಗಾಗೇ ಇಲ್ಲ. ಎರಡೂ ಮಾದರಿಯನ್ನ ಟ್ರೈಮಾಡಿದ್ದಾರೆ. ಪ್ರೇಮದ ಔನ್ನತ್ಯದ ಬಗ್ಗೆ ಪಾಠ ಹೇಳಿದ ಕುಟುಂಬ ಕಾಶಿಯಲ್ಲಿ ಸಾವಿನೊಡನೆ ಅಗಲಬೇಕಾಗಿ ಬಂದರೆ ಆ ಪಾಠದಿಂದ ಜ್ಞಾನೋದಯವಾದ ನಾಯಕ ಕಡೆಗೂ ತನ್ನ ಮ್ಯಾರಥಾನ್ ದಣಿವನ್ನ ಸಾರ್ಥಕತೆಯಲ್ಲಿ ಮರೆಯುತ್ತಾನೆ. ದುಃಖಾಂತಕ್ಕಾದರೂ ಮಿಡಿಯಿರಿ, ಸುಖಾಂತಕ್ಕಾದರೂ ಮಿಡಿಯಿರಿ-ಚಾಯ್ಸ್ ಈಸ್ ಯುವರ್ಸ್ ಎಂದಿದ್ದಾರೆ ನಿರ್ದೇಶಕರು. ಬಾಳೆಕಂಬದಂತೆ ತಲೆಕೆದರಿಕೊಂಡಿರುವ ನಾಯಕ, ತುಟಿಯಲುಗಿಸಲೂ ಶಕ್ತಿಯಿಲ್ಲದಂತಿರುವ ನಾಯಕಿಗಿಂತ ಲೊಕೇಷನ್‌ಗಳು ಚೆನ್ನಾಗಿವೆ. ಶರಣ್‌ರದು ಮಾಮೂಲಿ ಅದೇ ಹಳೇ ಜಾಡಿನ ಪಾತ್ರ. ಹಾಡುಗಳು ಮರೆಯುವಷ್ಟು ಸಶಕ್ತವಾಗಿವೆ. ಓಡಿಬರಬೇಕು ಎನ್ನುವ ನಾಯಕಿ, ಓಡಿ ಬರುವ ನಾಯಕ.
   ಒಟ್ಟಿನಲ್ಲಿ ಇದು ಒಲವಿನ ಮಂದವಾದ ಮ್ಯಾರಥಾನ್.
   ದಣಿವಿನ ನಿಟ್ಟುಸಿರು ಮಾತ್ರ ನನ್ನದು.

('ಒಲವೇ ಮಂದಾರ' ಚಿತ್ರ ವಿಮರ್ಶೆ olave mandara kannada film review)
18-01-2011

 

 

ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು