ದೃಶ್ಯಕ್ಕೊಂದು ನುಡಿಗಟ್ಟು

ಆಯ್ಕೆ: ಟಿಪ್ಪಣಿ

ಪರ್ಯಾಯ ಸಿನೆಮಾ ಕುರಿತ ಪ್ರಬಂಧ ಸ್ಪರ್ಧೆ ಏರ್ಪಡಿಸುವಾಗ "ಪರ್ಯಾಯ" ದ ವ್ಯಾಪ್ತಿ ಮತ್ತು ಅರ್ಥದ ಕುರಿತು ಸ್ಪಷ್ಟತೆ ಇರದಿದ್ದರೂ ಅದು ಪಡೆದುಕೊಳ್ಳಬೇಕಾದ ಸ್ವರೂಪದ ಬಗ್ಗೆ ನಮ್ಮ ಸ್ಪಷ್ಟ ಕಲ್ಪನೆಗಳಿದ್ದವು. ಪರ್ಯಾಯ ಎಂದರೆ ಯಾವುದಕ್ಕೆ ಪರ್ಯಾಯ? ಪರ್ಯಾಯ ದ ಪರಿಕಲ್ಪನೆಯೇ ತಪ್ಪು ಎಂಬಂಥಹ ಅಭಿಪ್ರಾಯಗಳು ತೂರಿ ಬಂದವು.

ಸಾವಿರಾರು ಕೋಟಿ ರೂಪಾಯಿ ಬಂಡವಾಳ ಕಸಿಯುವ ಸಿನೆಮಾ ಕ್ಷೇತ್ರ ಇಂದು ಕೇವಲ ಕಲೆಯಾಗಿ ಉಳಿದಿಲ್ಲ. ಅದೊಂದು ದೊಡ್ಡ ಮನರಂಜನಾ ಉದ್ಯಮವಾಗಿ ಬೆಳೆದು ನಿಂತಿದೆ. ಈ ಮನರಂಜನೆಯ ಅಮಲಿನಲ್ಲಿ ಸಿನೆಮಾ ಕೂಡ ಒಂದು ಕಲಾ ಪ್ರಕಾರ, ಸೃಜನಶೀಲ ಅಭಿವ್ಯಕ್ತಿ ಮಾಧ್ಯಮ ಎಂಬುದನ್ನು ನಾವೆಲ್ಲ ಮರೆತುಬಿಟ್ಟಿದ್ದೀವೆಯೇ? ಇಂದಿನ ಚಿತ್ರರಂಗದ ಪರಿಸ್ಥಿತಿ ಗಮನಿಸಿದಾಗ ಎಲ್ಲಾ ಚಿತ್ರಗಳೂ ಹಣ ಮಾಡುವ ಉದ್ದೇಶದಿಂದಲೋ, ಹೆಸರು ಮಾಡುವ ಉದ್ದೇಶದಿಂದಲೋ ಬರುತ್ತವೆ. ನಮ್ಮ ಬದುಕಿನ ಅನುಭವಗಳಿಗೆ ಸೃಜನಶೀಲ ರೂಪ ಕೊಟ್ಟು ಸಿನೆಮಾ ಮಾಡುವ ಪ್ರಯತ್ನಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಕೇವಲ ನಗರ ಕೇಂದ್ರಿತ ಕಥೆಗಳು, ಅದ್ದೂರಿ ತಂತ್ರಜ್ಞಾನ ಇವೇ ಭ್ರಮೆಯಲ್ಲಿ ಸಿನೆಮಾ ಕೂಡ ಒಂದು ಒಳ್ಳೆಯ ಸಾಹಿತ್ಯ ಕೃತಿಯಂತೆ ನಮ್ಮ ಇಂದಿನ ಸಮಾಜದ ಕನ್ನಡಿಯಾಗಿಯೋ? ನಮ್ಮ ಅನುಭವಗಳಿಗೆ ಹೊಸ ರೂಪ ಕೊಡಬಲ್ಲ ಕಲಾಕೃತಿಯೋ ಆಗಿ ಬರುತ್ತಿಲ್ಲ.ಇಂಥಹ ಸಂದರ್ಭದಲ್ಲಿ ನಮಗೆ ಎಂಥಹ ಸಿನೆಮಾ ಬೇಕು ಎಂಬ ಪ್ರಶ್ನೆಯನ್ನ ನಾವು ಸಾರ್ವಜನಿಕ ಮಿತ್ರರೆದುರಿಗೆ ಇಟ್ಟಿದ್ದೇವು. ಸಂಖ್ಯೆಯಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದೇ ಪ್ರತಿಕ್ರಿಯೇ ಬಂದಿದ್ದರೂ ಗುಣಮಟ್ಟ ಮಾತ್ರ ನಮ್ಮ ನಿರೀಕ್ಷೆಯನ್ನು ಮುಟ್ಟಲಿಲ್ಲ ಎಂಬುದು ಬೇಸರದ ಸಂಗತಿ.

ವಿದ್ಯಾರ್ಥಿ ವಿಭಾಗದಲ್ಲಿ ಯಾವುದೇ ಬರಹ ಕೂಡ ಸಮಾಧಾನ ತರದಿದ್ದರಿಂದ ಆ ವಿಭಾಗದಲ್ಲಿ ಯಾವ ಪ್ರಬಂಧವನ್ನೂ ಆಯ್ಕೆ ಮಾಡಲಿಲ್ಲ. ಬಂದ ಪ್ರಬಂಧಗಳೆಲ್ಲಾ ಸಿನೆಮಾಗಳ ಬಗ್ಗೆ ಮಾಹಿತಿ ಕೊಡುವಂತಹದ್ದೇ ಆಗಿದ್ದವೇ ಹೊರತು ಕ್ರೀಯಾಶೀಲವಾದ ಬರವಣಿಗೆಗಳ್ಯಾವುದೂ ನಮ್ಮ ಕಣ್ಣಿಗೆ ಬೀಳಲಿಲ್ಲ. ಇಲ್ಲಿ ವಿದ್ಯಾರ್ಥಿ ಮಿತ್ರರನ್ನು ದೋಷಿಸುವುದಕ್ಕಿಂತ ಹೆಚ್ಚಾಗಿ ನಮ್ಮಲ್ಲಿ ಕ್ರೀಯಾತ್ಮಕ ಆಲೋಚನೆಗಳು ಹುಟ್ಟಬಲ್ಲ ಪರಿಸರ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿದೆಯೇ ಎಂಬುದನ್ನ ಯೋಚಿಸಬೇಕು. ಆದರೆ ಭಾಗವಹಿಸಿದ ವಿದ್ಯಾರ್ಥಿ ಮಿತ್ರರ ಉತ್ಸಾಹ ಮಾತ್ರ ಮೆಚ್ಚುವಂತಹದ್ದೆ.

ಸಾರ್ವಜನಿಕ ವಿಭಾಗದಲ್ಲಿ ಮೊದಲ ಬಹುಮಾನ ಹಂಚಿಕೊಂಡ ಎರಡು ಬರಹಗಳಲ್ಲಿ ಒಂದು ವಿಪ್ರೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚರಣ ರಾಜ್ ಅವರದ್ದು.

ಚರಣ ರಾಜ್ ರ ಬರಹ ತರಾತುರಿಯಲ್ಲಿದ್ದು ಇನ್ನೂ ಅಪಕ್ವ ಸ್ಥಿತಿಯಲ್ಲೇ ಇದೆ. ಆದರೂ ವರ್ತಮಾನದ ಚಿತ್ರಗಳಿಗೆ ಸ್ಪಂದಿಸುವ, ತನ್ನದೇ ರೀತಿಯಲ್ಲಿ ಸಿನೆಮಾ ಭಾಷೆಯನ್ನ ವಿವೇಚಿಸಿರುವ ರೀತಿ ಅವನ ಬರಹ ಆಯ್ಕೆಯಾಗಲು ಕಾರಣ. ಚರಣ್ ಇನ್ನೂ ಹೆಚ್ಚಿನ ಸಂಯಮದಿಂದ ಬರೆದರೆ ಬರಹ ಚೆನ್ನಾಗಿ ಮೂಡಿ ಬರುವ ಸಾಧ್ಯತೆಗಳಿತ್ತು. ಈ ಲೇಖನದ ಕೆಲವು ಸಾಲುಗಳಿಗೆ ಕತ್ತರಿ ಪ್ರಯೋಗ ನಡೆಸಿ ಪ್ರಕಟಿಸಲಾಗಿದೆ.

ಇವರ ಜೊತೆಗೆ ಬಹುಮಾನ ಹಂಚಿಕೊಂಡಿರುವ ಮಹೇಶ್ ಅವರ ಬರವಣಿಗೆ ಮೇಲಿನ ಬರಹಕ್ಕೆ ಹೋಲಿಸಿದರೇ ಹೆಚ್ಚು ಪ್ರಬುದ್ಧವು, ಸ್ಪಷ್ಟವೂ ಆಗಿದೆ. ಆದರೇ ಬರವಣಿಗೆಯಲ್ಲಿ ವಿಮರ್ಶಾತ್ಮಕ ವಿಶ್ಲೇಷಣೆಯಾಗಲೀ, ಹೆಚ್ಚಿನ ಆಳವಾಗಲೀ ಇಲ್ಲ.

ಎರಡನೇ ಬಹುಮಾನ ಪಡೆದಿರುವ ರವೀಂದ್ರರ ಬರವಣಿಗೆ ಸಿನೆಮಾದ ಕಮರ್ಷಿಯಲ್ ಆಯಾಮ ಮತ್ತು ಮಾರುಕಟ್ಟೆಯ ಸಮಸ್ಯೆಯ ಕಡೆಗೆ ಹೆಚ್ಚಿನ ಗಮನ ಹರಿಸಿದೆ ಮತ್ತು ಸಿನೆಮಾದ ಒಳಗೇನಿರಬೇಕೆಂಬುದನ್ನ ಹೇಳಲು ಮರೆತಂತಿದೆ.

ಸಮಾಧಾನಕರ ಬಹುಮಾನಕ್ಕೆ ಪಾತ್ರವಾದ ರಾಮಸ್ವಾಮಿಯವರ ಬರಹವೂ ಈ ಮೇಲಿನ ಆಪಾದನೆಗಳಿಂದ ಹೊರತಾಗಿಲ್ಲ.

ಎಲ್ಲ ಬರವಣಿಗೆಗಳು ಸಿನೇಮಾದ ವ್ಯಾಪಾರೀಕರಣವನ್ನ ವಿರೋಧಿಸುತ್ತಲೇ, ಸಿನೆಮಾದ ಯಶಸ್ಸನ್ನು ಅದರ ಹಣಗಳಿಕೆಯಿಂದಲೇ ಅಳೆಯುತ್ತಿರುವುದು ಸೋಜಿಗವೇ ಸರಿ.

ಯಾವೊಂದು ಲೇಖನವೂ ನಮ್ಮ ಚಿಂತನೆಯನ್ನು ಹೊಸದಿಕ್ಕಿನೆಡೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗದಿದ್ದರೂ , ಆ ಪ್ರಯತ್ನವಾದರೂ ನಡೆದಿದೆಯಲ್ಲ ಎಂಬ ಸಂತೋಷದೊಂದಿಗೆ
ಸ್ಪರ್ಧೆಯಲ್ಲಿ ವಿಜೇತರಾದವರಿಗೂ ಮತ್ತು ಉತ್ಸಾಹದಿಂದ ಭಾಗವಹಿಸಿದ ಮಿತ್ರರಿಗೆಲ್ಲಾ ಸಂವಾದ ಡಾಟ್ ಕಾಂ ಪರವಾಗಿ ಧನ್ಯವಾದಗಳು.

ಈ ಎಲ್ಲಾ ಲೇಖನಗಳೊಡನೆ  ಜಿ.ಅವಿನಾಶ್  ಸ್ಪರ್ಧೆಗೆಂದೇ ಕಳಿಸಿದ್ದ ಬರಹವನ್ನು ಪ್ರಕಟಿಸಲಾಗಿದೆ. ಆದರೆ ಈ ಲೇಖನವನ್ನು ಸ್ಪರ್ಧೆಗೆ ಪರಿಗಣಿಸಿರಲಿಲ್ಲ. ಆತ ಸಂವಾದ ಡಾಟ್ ಕಾಂ ನ ಭಾಗವಾಗಿರುವುದರಿಂದ ಆಯೋಜಕರೇ ಸ್ಪರ್ಧೆಯಲ್ಲಿ ಭಾಗವಹಿಸುವುದು ಸರಿಯಲ್ಲ ಎಂಬ ನಿಲುವಿನೊಂದಿಗೆ ಈ ಲೇಖನ ಕೈ ಬಿಡಬೇಕಾಯಿತು. ಸ್ಪರ್ಧೆಯಲ್ಲಿ ಸಂವಾದ.ಕಾಂ ಅಥವ ಕನ್ನಡಸಾಹಿತ್ಯ.ಕಾಂ  ಕಾರ್ಯಕರ್ತರು ಭಾಗವಹಿಸಬಾರದು ಎಂದೆನ್ನುವ ನಿಯಮ ವಿಧಿಸಿರಲಿಲ್ಲ. ಆಗಿರಬಹುದಾದ ಗೊಂದಲಕ್ಕೆ ವಿಷಾದ ಸೂಚಿಸುತ್ತಿದ್ದೇವೆ.

ಎಂ ಕಿರಣ್
ಸಂವಾದ ಸಂಪಾದಕೀಯ ವಿಭಾಗದ ಪರವಾಗಿ


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು