ಮಾರ್ಸೆಲ್ಲೊ: ಲ್ಯಾಟಿನ್ ಲವರ್
ನೀಳಕಾಯದ ಸ್ಫೂರದ್ರೂಪಿ ಯುವಕ ಮಾರ್ಸೆಲ್ಲೊ ೬೦ರ ದಶಕದ ಯುರೋಪಿಯನ್ನ ಲಲನೆಯರ ಮನಗೆದ್ದ ನಟ. ಲ್ಯಾಟಿನ್ ಲವರ್ ಎಂದೇ ಜನಪ್ರಿಯವಾಗಿ ಕರೆಯಲ್ಪಡುತ್ತಿದ್ದ ಮಾರ್ಸೆಲ್ಲೋ ನನ್ನ ಒಬ್ಬ ನಟನಾಗಿ ರೂಪಿಸಿದ್ದು ಫೆಲಿನಿ ಮತ್ತು ಡಿಸಿಕಾ ದಂತ ದಿಗ್ದರ್ಶಕರು. ೧೯೪೭ರಲ್ಲಿ ತನ್ನ ಸಿನೆಮಾ ಆರಂಭಿಸುವ ಮೊದಲು ದ್ವಿತೀಯ ಮಹಾಯುದ್ದದಲ್ಲಿ ಜರ್ಮನ್ ಕ್ಯಾಂಪಿನಲ್ಲಿ ಸೆರೆ ವಾಸ ಅನುಭವಿಸಿದ್ದ ಮಾರ್ಸೆಲ್ಲೊ ಸಿನೆಮಾದಲ್ಲೂ ಅಭಿನಯಿಸಿದ್ದು ತೀವ್ರ ತೊಳಲಾಟದ, ಬದುಕಿನುದ್ದಕ್ಕೂ ಅರ್ಥಗಳನ್ನ ಹುಡುಕಿ ಹೊರಟ, ಖಾಲಿ-ಖಾಲಿ, ಗೊಂದಲದ ಪಾತ್ರಗಳನ್ನ. ಯುದ್ದಾನಂತರದ ಯುರೋಪಿಯನ್ ಯುವಕನ ಮನಸ್ಥಿತಿಯನ್ನ ಮಾರ್ಸೆಲ್ಲೋನಷ್ಟು ಅಥೆಂಟಿಕ್ ಆಗಿ ಇನ್ಯಾರೂ ನಿರ್ವಹಿಸಿದಂತಿಲ್ಲ. ಪ್ರಖ್ಯಾತ ನಟಿ ಸೋಫಿಯಾ ಲಾರೆನ್ ನೊಟ್ಟಿಗೆ ಸುಮಾರು ೧೪ ಚಿತ್ರಗಳಲ್ಲಿ ಅಭಿನಯಿಸಿದ ಮಾರ್ಸೆಲ್ಲೊ ಬದುಕನ್ನ ತೀವ್ರವಾಗಿ ಪ್ರೀತಿಸಿದ ನಟ. ೮ ೧/೨ ಚಿತ್ರದಲ್ಲಿ ಬತ್ತಿಹೋದ ತನ್ನ ಸೃಜನಶೀಲತೆಯ ನಡುವೆ ಹೊಸ ಸಿನೆಮಾ ಮಾಡಲು ಹೆಣಗುವ ನಿರ್ದೇಶಕ ಗೈಡೋ ನ ಪಾತ್ರದಲ್ಲಿ ಮಾರ್ಸೆಲ್ಲೊವಿನ ಅಭಿನಯ ಕ್ಲಾಸಿಕ್ ಸಿನೆಮಾ ಜಗತ್ತಿನಲ್ಲಿ ಅವಿಸ್ಮರಣೀಯವಾದುದು. ತನ್ನ ಸುಳ್ಳು, ವಂಚನೆ, ವಿಷಯಲೋಲುಪತೆಗಳಿಂದ ನಿಷ್ಕಾಸನಾಗಿರುವ ಗೈಡೊ ಏನನ್ನೂ ಸೃಷ್ಟಿಸಲಾಗದ ನಿರ್ವಾತದಲ್ಲಿ ಬಿದ್ದು ಒದ್ದಾಡುತ್ತಾನೆ. ತಾನು ಅದಮ್ಯವಾಗಿ ಪ್ರೀತಿಸುವ ಹೆಂಡತಿಗೆ ತನ್ನ ಪ್ರೀತಿಯ ಆಳವನ್ನ ವಿವರಿಸಲಾಗದ ಅಸಾಹಯಕತೆ ಒಂದೆಡೆ; ತನ್ನ ಅಭಿರುಚಿಗಳ ಬಗ್ಗೆ ಸ್ವಲ್ಪವೂ ಗೌರವವಿಲ್ಲದಿದ್ದರೂ ತನ್ನ ಕಾಮದ ಹಸಿವನ್ನ ಸಂಪೂರ್ಣ ತಣಿಸಬಲ್ಲ ಹೆಣ್ಣು ಇನ್ನೊಂದೆಡೆ. ಈ ಎಲ್ಲ ತಾಕಲಾಟಗಳ ನಡುವೆ ಸಿನೆಮಾ ಸೆಟ್ ಗೆ ಹೂಡಿದ ಹಣ ಹೋಮವಾಗಿ, ಗೈಡೋ ನ ಹಿಂದೆ ಬಿದ್ದಿರುವ ನಿರ್ಮಾಪಕ ಮಹಾಶಯ ಮತ್ತೊಂದೆಡೆ. ಇಡೀ ಸಿನೆಮಾ ವಾಸ್ತವ-ಕಲ್ಪನೆ-ಕನಸು-ನೆನಪುಗಳ ಕೊಲಾಜ್ ಆಗಿ ಬಿಡಿಸಲೇ ಆಗದ ಸಂಕೀರ್ಣ ದೃಶ್ಯಗಳು ಚಿತ್ರದ ಬಂಧವನ್ನು ಎಷ್ಟು ಬಿಗಿಯಾಗಿಸಿದೆಯೆಂದರೆ ಚಿತ್ರವನ್ನ ಗ್ರಹಿಸಲೇ ಆಗದ ವಿಮರ್ಶಕರನೇಕರು ಚಿತ್ರವನ್ನ ಸೆನ್ಸ್ ಲೆಸ್ ಎಂದು ಟೀಕಿಸಿದ್ದರು. ಫೆಲಿನಿಯ ಬದುಕಿನಿಂದ ಪ್ರಭಾವಿತವಾದ ಈ ಚಿತ್ರಕ್ಕೆ ಸ್ಕ್ರಿಪ್ಟ್ ಕೂಡ ಇರಲಿಲ್ಲ ಎಂಬುದು ಸೋಜಿಗದ ವಿಚಾರ. ಮಾರ್ಸೆಲ್ಲೊ ಕೂಡ ನಿರ್ದೇಶಕ ಸೂಕ್ಷ್ಮಮತಿಯಾಗಿದ್ದರೆ ಸ್ಕ್ರಿಪ್ಟ್ ನೋಡುವ ಅಗತ್ಯವೇ ಇಲ್ಲ ಎಂದು ನಂಬಿದ್ದ. ಮುಂದೆ ಡೈವರ್ಸ್ ಇನ್ ಇಟಾಲಿಯನ್ ಸ್ಟೈಲ್, ಕ್ಯಾಸನೋವಾ ೭೦ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ ಮಾರ್ಸೆಲ್ಲೊ ಗೆ ಆಸ್ಕರ್ ದಕ್ಕದಿದ್ದರೂ ಎರಡು ಬಾರಿ ಕೇನ್ಸ್ ಚಿತ್ರೋತ್ಸವದಲ್ಲಿ ಎರಡು ಬಾರಿ ಶ್ರೇಷ್ಠ ನಟನಾಗಿ ಆಯ್ಕೆಯಾಗಿದ್ದ. ಮುಂದೆ ಪ್ರೆಂಚ್ ನಟ ಗೆರಾರ್ಡ್ ಆಗಮನದವರೆಗೆ , ಮಾರ್ಸೆಲ್ಲೋ ಅಮೆರಿಕಾದಾದ್ಯಂತ ಜನಪ್ರಿಯ ಯುರೋಪ್ ನಟನಾಗಿದ್ದ. ದ್ವಂದ್ವದೊಳಗೆ ಸಿಕ್ಕಿಬಿದ್ದ ಲೇಖಕನಾಗಿ, ಸಲಿಂಗಕಾಮಿಯಾಗಿ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ ಮಾರ್ಸೆಲ್ಲೊ ಪ್ರತಿಬಿಂಬಿಸಿದ್ದು ಮನುಷ್ಯನ ದೌರ್ಬಲ್ಯಗಳನ್ನ, ಅಸಹಾಯಕತೆಯನ್ನ. ಹಾಗಿದ್ದೂ ಈತ ಜಗತ್ತಿನ ಜನಪ್ರಿಯ ನಟರೊಲ್ಲಬ್ಬ ಎನಿಸಿಕೊಂಡ. ೯೭ ರಲ್ಲಿ ಕೊನೆಯುಸಿರೆಳೆಯುವ ಮೊದಲು ೧೨೦ ಚಿತ್ರದಲ್ಲಿ ನಟಿಸಿದ್ದ ಮಾರ್ಸೆಲ್ಲೊ ತೀವ್ರವಾಗಿ ಪ್ರೀತಿಸಿದ್ದು ಕ್ಯಾಥ್ರೀನ್ ಡಿನೋ ಎಂಬ ನಟಿಯನ್ನ. ಆತ ಸತ್ತಾಗ ಅವನ ಜೊತೆ ಇದ್ದವಳೂ ಕ್ಯಾಥರೀನ್ ಮತ್ತವರ ಮಗಳು ಚಿಯಾರಾ ಮಾತ್ರ. 01-03-2011
|
|