ದೃಶ್ಯಕ್ಕೊಂದು ನುಡಿಗಟ್ಟು

ಅಪರೂಪದ ಶೃಂಗಾರ

pattabhiram reddy, shrungara masa kannada movie review, amol palekar, deepa dhanraj,samvaada.com(ಸಂಸ್ಕಾರದಂತ ಚಿತ್ರ ನೀಡಿದ ಪಟ್ಟಾಭಿರಾಮರೆಡ್ಡಿ ನಿರ್ದೇಶಿತ ಇನ್ನೊಂದು ಪ್ರಾಯೋಗಿಕ ಚಿತ್ರ "ಶೃಂಗಾರ ಮಾಸ". ಇಬ್ಬರು ಕಲಾವಿದರು ಮತ್ತು ಕನಿಷ್ಠ ಸಂಭಾಷಣೆಯೊಂದಿಗೆ ಬಂದ ಈ ಸಿನೆಮಾ ನಿರೂಪಣೆ ಹೊಸಬಗೆಯದ್ದು. ಕನ್ನಡದಲ್ಲಿ ಬಂದ ಈ ಅಪರೂಪದ ಪ್ರಯತ್ನ ಇಂದಿನ ಎಷ್ಟೋ ಸಿನೆಮಾಸಕ್ತರಿಗೆ ತಿಳಿದಿಲ್ಲ.  ಶೃಂಗಾರ ಮಾಸ ಅಪರೂಪದ ಕ್ಲಾಸಿಕ್ ಸಾಲಿನಲ್ಲಿ ನಿಲ್ಲಬಹುದಾದ ಚಿತ್ರ. ಈ ಚಿತ್ರದ ಬಗೆಗೆ ಸಂವಾದ ತಂಡದೊಳಗೆ ಆಗಾಗ ಉಲ್ಲೇಖವಾಗುತ್ತಲೇ ಇರುತ್ತದೆ. ಚಿತ್ರದ ಶೇ ೯೯ ಭಾಗ ಒಂದೇ ಮನೆಯಲ್ಲಿ ಚಿತ್ರೀಕರಣವಾಗಿದೆ. ಅಂತಹ ಒಂದು ಪ್ರಯತ್ನ ಈ ಅಂಕಣದೊಂದಿಗೆ ಪ್ರಾರಂಭವಾಗುತ್ತಿದೆ.
ಶೃಂಗಾರ ಮಾಸ ಚಿತ್ರದ ಬಗ್ಗೆ ಎನ್.ಸಿ ಮಹೇಶ್ ಬರೆದಿರುವ ಪತ್ರ ರೂಪದ ಲೇಖನದ ಜೊತೆಗೆ ಇನ್ನಷ್ಟು ವಿಮರ್ಶೆಗಳು ಮೂಡಿಬರಲಿವೆ. -ಸಂ)
ಚಿತ್ರ :ಶೃಂಗಾರ ಮಾಸ
ನಿರ್ದೇಶನ: ಪಟ್ಟಾಭಿರಾಮ ರೆಡ್ಡಿ
ನಿರ್ಮಾಣ: ಪಟ್ಟಾಭಿರಾಮ ರೆಡ್ಡಿ
ತಾರಾಗಣ: ಅಮೋಲ್ ಪಾಲೆಕರ್, ದೀಪಾ ಧನರಾಜ್
ವರ್ಷ : ೧೯೮೪

ಪ್ರೀತಿಯ ಶೇಖರಪೂರ್ಣ ಸರ್,
ನಮ್ಮ ಈವರೆಗಿನ ಭೇಟಿಗಳಲ್ಲಿ ನಾವು ಸಿನಿಮಾ ಜಗತ್ತಿನ ಹೊರತು ಬೇರೇನೂ ಚರ್ಚಿಸಿಲ್ಲ. ಸದಾ ಹೊಸ ಸಂಗತಿಗಳ ಬಗ್ಗೆ ಮಾತಾಡುವ ನಿಮ್ಮ ಮಾತುಗಳಿಗೆ ನಾನು ಸದಾ ಕಿವಿಯಾಗಿದ್ದೇನೆ. ನಿಮ್ಮ ಪ್ರತಿ ಮಾತುಗಳಲ್ಲಿ ನಾನು ಸ್ಪಷ್ಟ ಗುರುತಿಸಿದ್ದು ಒಂದೇ ಸಂಗತಿ: ಸಿನಿಮಾ ಉದ್ಯಮದ ಬಗ್ಗೆ ನಿಮಗಿರುವ ಅಪಾರ ಕಾಳಜಿ. ಅನೇಕ ಛಾಲೆಂಜಿಂಗ್ ಸಿನಿಮಾಗಳ ಬಗ್ಗೆ ತುಂಬ ಅಧಿಕೃತವಾಗಿ ಮಾತಾಡುವ ನೀವು ಸಿನಿಮಾದ ಬಗ್ಗೆ ಅಷ್ಟೇ ಆಸಕ್ತರಾದ ಒಂದು ಯುವಪಡೆಯ ಜೊತೆಗಿದ್ದೀರಿ ಮತ್ತು ಮಾರ್ಗದರ್ಶನ ಮಾಡುತ್ತಿದ್ದೀರಿ. ನಾನು ನಿಮ್ಮ ಸಂಪರ್ಕಕ್ಕೆ ಬಂದ ಸಂದರ್ಭಗಳು ನೆನಪಿಗೆ ಬರುತ್ತಿವೆ. ‘ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ’ ಎಂಬ ವಿಚಾರದ ಕುರಿತು ಸಂವಾದ ಡಾಟ್ ಕಾಂ ಏರ್ಪಡಿಸಿದ  ಪ್ರಬಂಧ ಸ್ಪರ್ಧೆಯಲ್ಲಿ ನಾನು ಭಾಗಿಯಾದೆ. ಅಲ್ಲಿಂದ ನಿಮ್ಮ ಒಡನಾಟ ಶುರು. ಪೇಪರ್ ನೋಡದೆ ನಾನೆಲ್ಲೊ ಅಡ್ಡಾಡುತ್ತಿದ್ದಾಗ ಸ್ವತಃ pattabhiram reddy, shrungara masa kannada movie review, amol palekar, deepa dhanraj,samvaada.comನೀವೇ ನನಗೆ ಫೋನ್ ಮಾಡಿ ‘ಕೃಷ್ಣನ್ ಲವ್‌ಸ್ಟೋರಿ’ ಸಿನಿಮಾದ ಬಗ್ಗೆ ಏರ್ಪಡಿಸಲಾಗಿರುವ ವಿಮರ್ಶಾ ಸ್ಪರ್ಧೆಯ ಬಗ್ಗೆ ಹೇಳಿ ಬರೆಯಲು ಸೂಚಿಸಿದಿರಿ. ‘ವಿಮುಕ್ತಿ’ ಸಿನಿಮಾದ ಬಗ್ಗೆ ನಾನು ಬರೆದ ವಿಮರ್ಶೆಯ ಬಗ್ಗೆ ವಿವರಿಸಿ ಬೇರೆ ಮಗ್ಗಲುಗಳಿಂದಲೂ ನೋಡಲು ಸಾಧ್ಯವಿದೆ ಎಂಬುದನ್ನೂ ಸೂಚಿಸಿದಿರಿ. ‘ಚಾರುಲತ’ ಸಿನಿಮಾದ ನಂತರ ಅಂಥ ಪ್ರಯತ್ನಗಳಾಗಿರಲಿಲ್ಲ. ಈಗ ವಿಮುಕ್ತಿ ಸಿನಿಮಾ ಬಂದಿದೆ ಎಂದಾಗ ನನಗೆ ಆಶ್ಚರ್ಯವಾಗಿತ್ತು. ಆ ಎರಡೂ ಸಿನಿಮಾಗಳಲ್ಲಿರುವ ಸಮಾನ ಎಳೆಗಳು ಯಾವುವು ಎಂದು ನಾನು ಇಂದಿಗೂ ಮತ್ತೆಮತ್ತೆ ‘ಚಾರುಲತ’ ಸಿನಿಮಾ ನೋಡುತ್ತಾ ನನ್ನನ್ನು ನಾನೇ ವಿಶ್ಲೇಷಿಸಿಕೊಳ್ಳುತ್ತಿರುತ್ತೇನೆ. ನಿಮ್ಮ ಒಂದು ಮಾತು ನನ್ನನ್ನು ಇಂಥ ಅನೇಕ ಪ್ರಯತ್ನಗಳಿಗೆ ಹಚ್ಚುತ್ತಲೇ ಇರುತ್ತವೆ.
   ಕಳೆದ ಬಾರಿ ಭೇಟಿಯಾದಾಗ ನೀವು ಏಕಾ‌ಏಕಿ ‘ಶೃಂಗಾರ ಮಾಸ’ ಸಿನಿಮಾ ನೋಡಲು ಸೂಚಿಸಿದಿರಿ. ಅದು ಪಟ್ಟಾಭಿರಾಮರೆಡ್ಡಿ ಸಿನಿಮಾ ಅಂತಲೂ ಹೇಳಿ ಅದರ ವಿಶಿಷ್ಟತೆ ಮತ್ತು ಅನನ್ಯತೆಗಳ ಬಗ್ಗೆ ಹೇಳಿದ್ದಿರಿ. ಎಂಭತ್ತರ ದಶಕದ ಆ ಸಿನಿಮಾವನ್ನ ನಾನು ಹುಡುಕುವುದಕ್ಕೆ ಶುರುಮಾಡಿದೆ. ಕೆಲಕಾಲ ಸಿಗದೆ ನಿರಾಶನಾದೆ. ಅಂತೂ ಕಡೆಗೆ ಪತ್ತೆಮಾಡಿದೆ. ಅಂಥಾ ಚಾಲೆಂಜಿಂಗ್ ಏನಿದ್ದೀತು ಎಂಬ ಕುತೂಹಲದಲ್ಲೇ ನೋಡುತ್ತಾ ಹೋದೆ. ಇವತ್ತಿನ ಚಿತ್ರಕಥೆಗಾರರು ಒನ್ ಲೈನ್ ಸ್ಟೋರಿ ಅಂತ ಮಾಡಿಕೊಂಡು ನಂತರ ಅದನ್ನ ಡೆವಲಪ್ ಮಾಡುತ್ತಾರೆ. ಅಂದರೆ ಅನೇಕ ಮಸಾಲೆಗಳನ್ನ ತುಂಬುತ್ತಾರೆ. ಅವು ಇವತ್ತು ಫಾರ್ಮುಲಗಳಾಗಿ ಹಳಸಿವೆ ಎನ್ನುವುದು ಬೇರೆ ಮಾತು. ಆದರೆ ಈ ಸಿನಿಮಾದpattabhiram reddy, shrungara masa kannada movie review, amol palekar, deepa dhanraj,samvaada.com ಹೂರಣವೇ ಒನ್ ಲೈನ್. ಮದುವೆಯಾದ ಹೊಸತಿನ ಕಾಲಘಟ್ಟದ ಸವಿಯನ್ನ ಒಂದು ಜೋಡಿ ಸವಿಯುವ ಪರಿ. ಇಲ್ಲೂ ಅಂಥ ಒಂದು ಜೋಡಿ ಇದೆ. ಆದರೆ ಈ ಜೋಡಿ ಬಸ್‌ನಲ್ಲಿ ಅಂಟಿಕೊಂಡು ಕೂತಿಲ್ಲ. ಈ ಮೂಲೆಗೊಬ್ಬರು ಮತ್ತು ಆ ಮೂಲೆಗೊಬ್ಬರು. ಇಬ್ಬರ ಮುಖಗಳೂ ಮ್ಲಾನವಾಗಿವೆ. ಏನೋ ಅವರನ್ನು ಭಾಧಿಸುತ್ತಿದ್ದಂತಿದೆ. ಶೃಂಗಾರ ಮಾಸದ ಕಲ್ಪನೆಯಿಟ್ಟುಕೊಂಡು ಸಿನಿಮಾ ನೋಡಲು ಕೂತರೆ ಈ ಜೋಡಿಯ ನಡಾವಳಿ ತುಂಬ ವ್ಯತಿರಿಕ್ತ ಅನಿಸುತ್ತದೆ. ಬಸ್ಸಿಳಿವ ಜೋಡಿ ಹೆಜ್ಜೆಹಾಕುವಾಗ ಪೋಲೀಸ್ ವ್ಯಾನ್ ಕಂಡು ಬಚ್ಚಿಟ್ಟುಕೊಳ್ಳುತ್ತದೆ. ಹೆಣ್ಣಿನ ಮುಖದಲ್ಲಿ ನಿರ್ಭಾವ. ಅಂತೂ ಇಂತೂ ಕಾಡಿನಲ್ಲಿ ಒಂದು ಕಲಾತ್ಮಕ ಬಿದಿರಿನ ಮನೆ ಹೊಕ್ಕುವ ದಂಪತಿ (ಅಥವಾ ನಾವೇ ಹಾಗಂದುಕೊ ಬೇಕು) ನಿಧಾನ ಆ ಮನೆಗೆ ಹೊಂದಿಕೊಳ್ಳಲು ಶುರುಮಾಡುತ್ತಾರೆ. ಹೆಣ್ಣಿನ ಕಾಷ್ಠ ಮೌನವನ್ನ ಗಂಡು ತುಂಬ ಸಹನೆಯಿಂದ ನಿಭಾಯಿಸುವ ಕಾರ್ಯಕ್ಕೆ ತೊಡಗಿಕೊಳ್ಳುತ್ತಾನೆ. ಆಗಲೂ ಹೆಣ್ಣು ತುಂಬು ನಿರ್ಲಿಪ್ತಳೆ. ಶೃಂಗಾರ ಮಾಸ ಎನ್ನುವ ಟೈಟಲ್ ಇಲ್ಲದೆ ನೋಡಿದ್ದಿದ್ದರೆ ಈ ಸಿನಿಮಾವನ್ನ ಬೇರೆ ರೀತಿಯಲ್ಲೇ ನೋಡಬಹುದಿತ್ತೇನೋ ಎಂದೂ ಅನಿಸುತ್ತದೆ. ನನ್ನ ಆತುರದ ವಸ್ತುನಿಷ್ಠ ಪ್ರಜ್ಞೆಗೆ ಒಂದು ಸಾವಾಧಾನದ ಮನಸ್ಥಿತಿ ಅಗತ್ಯವಿದೆ ಎಂದು ಸಿನಿಮಾ ನಿಧಾನಕ್ಕೆ ಮನವರಿಕೆ ಮಾಡಿಸಲು ಶುರುಮಾಡುತ್ತದೆ. ಋತುಮಾನಗಳು ನಮ್ಮ ಮನಸ್ಥಿಯ ಮೇಲೆ ಬೀರುವ ಪರಿಣಾಮಗಳನ್ನು ಪಟ್ಟಾಭಿರಾಮರೆಡ್ಡಿ ಸೆರೆಹಿಡಿಯಲು ಹವಣಿಸಿರುವುದು ಗೊತ್ತಾಗುತ್ತದೆ. ಗ್ರೀಷ್ಮ,ಶಿಶಿರ,ವಸಂತ..ಹೀಗೆ ಋತುಮಾನಗಳು ಬದಲಾಗತೊಡಗಿದಂತೆ ಆ ಜೋಡಿಯ ಮನಸ್ಥಿತಿಗಳೂ ಪಲ್ಲಟಗೊಳ್ಳುತ್ತವೆ. ಅಂತೂ ವಸಂತ ಮಾಸದಲ್ಲಿ ಹೆಣ್ಣು ನಕ್ಕು ಮಾತಾಡಲಾರಂಭಿಸುತ್ತಾಳೆ. ಆದರೆ ಅಷ್ಟಕ್ಕೇ ದೇಹಗಳು ಒಂದಾಗಿಬಿಡುವುದಿಲ್ಲ. ಅಂಥ ಸಂದರ್ಭ ಬಂದಾಗ ಮತ್ತು ಅದನ್ನು ಗಂಡೇ ಸೃಷ್ಟಿಸಲು ಪ್ರಯತ್ನಿಸಿದಾಗ ಹೆಣ್ಣು ಅದಕ್ಕೆ ತಡೆಯೊಡ್ಡಿ ಫಿಲಾಸಫಿ ಹೇಳುತ್ತಾಳೆ. ಗಂಡೂ ಕೂಡ ಅವಸರಿಸುವುದಿಲ್ಲ. ಋತುಮಾನಗಳಲ್ಲಿ ಮಾಗುತ್ತಿರುವ ಇವರು ಅಪ್ಪಟ ದಂಪತಿಗಳಲ್ಲ ಎಂಬುದು ನಿಧಾನಕ್ಕೆ ಗೊತ್ತಾಗುತ್ತದೆ. ಇಬ್ಬರಿಗೂ ಒಂದು ವೈಯಕ್ತಿಕ ತುರ್ತು ಇದೆ. ಗಂಡು ಆಗಲೆ ವಿವಾಹಿತ. ಹೆಣ್ಣು ದೇಹ ಮಾರಿಕೊಳ್ಳುವವಳು. ತಂತಮ್ಮ ಪಥದ ದಿಕ್ಕು ಬದಲಾಯಿಸಲು ಮುಂದಾಗಿ ಹೀಗೆ ಒಂದಾಗಿದ್ದಾರೆ. ಇಬ್ಬರೂ ತುಂಬ ಪೊಯೆಟಿಕ್ ಆಗಿ ಮಾತಾಡುತ್ತಾರೆ. ಸ್ವಲ್ಪ ಅಸಹಜ ಅನಿಸಿದರೂ ಅವರಿಬ್ಬರ ಒತ್ತಡ ನಮ್ಮನ್ನು ತುಂಬುತ್ತದೆ. ಒಂದು ಬಿದಿರಿನ ಮನೆ ಮತ್ತು ಕಾಡಿನ ಹಸರಿನ ಹೊರವಲಯ-ಇಷ್ಟೆ ಲೊಕೇಷನ್‌ಗಳು. ಸಿನಿಮಾ, ಶೃಂಗಾರದ ಮಾದಕತೆಯನ್ನು ಮೀರಿ ತಣ್ಣಗೆ ಆವರಿಸಿಕೊಳ್ಳಲು ಶುರುವಾಗುತ್ತದೆ. ಗಂಡಿನ ಆಳದ ತುಡಿತ ಕ್ರಮೇಣ ಕ್ಷೀಣಿಸಿದಂತೆ ಹೆಣ್ಣು pattabhiram reddy, shrungara masa kannada movie review, amol palekar, deepa dhanraj,samvaada.comನಿಧಾನಕ್ಕೆ ಉತ್ಸುಕಳಾಗುತ್ತಾಳೆ. ಗಂಡು ಖಾಯಿಲೆ ಮಲಗಿದಾಗ ಹೆಣ್ಣು ಇನ್ನಿಲ್ಲದಂತೆ ಆರೈಕೆಮಾಡುತ್ತಾಳೆ. ಕಟ್ಟಕಡೆಗೆ ಅವರು ಕೂಡುತ್ತಾರೆ ನಿಜ; ಆದರೆ ಅಲ್ಲಿಯವರೆಗಿನ ಅವರ ಸಾಂಗತ್ಯವನ್ನ ಚಿತ್ರಿಸಿರುವ ಪರಿ ಅಚ್ಚರಿ ಮೂಡಿಸುತ್ತದೆ. ದೇಹಗಳ ಸಮ್ಮಿಲನದ ಉದ್ದೇಶಕ್ಕೆ ಒಗ್ಗೂಡಿದ್ದರೂ ಅತಿ ಆತುರ ಇಬ್ಬರಲ್ಲೂ ಇಲ್ಲ. ಒಂದು ಹದಕ್ಕೆ ಕಾಯುವ ಮನಸ್ಸು ಇದೆ. ಮತ್ತು ಅದು ಅನಿವಾರ್ಯವೂ ಆಗಿದೆ. ಇಂಥ ಸೂಕ್ಷ್ಮಗಳಲ್ಲೇ ಕಥೆ ಹೆಣೆದಿರುವ ಪಟ್ಟಾಭಿರಾಮರೆಡ್ಡಿ ಪ್ರತಿಹಂತದಲ್ಲೂ ಪ್ರೇಕ್ಷಕನಿಗೆ ಸವಾಲಿನ ರೀತಿಯಲ್ಲೇ ಕಥೆ ಹೆಣೆದಿದ್ದಾರೆ. ಇಷ್ಟೇ ಕಥೆ ಎಂದು ಮೇಲ್ನೋಟಕ್ಕೆ ತಕ್ಷಣ ಅನಿಸಿದರೂ ಅನೇಕ ಪಕಳೆಗಳು ಸೇರಿ ಒಂದು ಹೂವಾಗಿರುವ ಸಾರ್ಥಕ ಚಿತ್ರದಂತೆ ಚಿತ್ರ ಭಾಸವಾಗುತ್ತದೆ.
  ಸರ್, ನನಗೆ ಈ ಚಿತ್ರದ ಬಗ್ಗೆ ಇಷ್ಟು ಗ್ರಹಿಸಲು ಸಾಧ್ಯವಾಗಿದೆ. ನಿಮ್ಮಂಥ ಯೂಥ್ ಈ ಸಿನಿಮಾ ನೋಡಿ ಏನು ಪ್ರತಿಕ್ರಿಯಿಸ್ತೀರಿ ನೋಡ್ಬೇಕು..ಎಂದು ನೀವು ಹೇಳಿದಿರೇನೋ ನಿಜ; ಆದರೂ ಈ ಸಿನಿಮಾ ಬಗ್ಗೆ ನೀವು ತಳೆದಿರುವ ನಿಲುವನ್ನ ತಿಳಿಯುವ ಕುತೂಹಲ ನನ್ನಲ್ಲಿದೆ. ಮತ್ತೆ ನಿಮ್ಮ ಮಾತಿಗೆ ಕಿವಿಯಾಗುವ ಸಮಯಕ್ಕೆ ನಾನು ಎದಿರುನೋಡುತ್ತಿದ್ದೇನೆ. ಅಲ್ಲೀವರೆಗೆ ನನ್ನನ್ನು ಮತ್ತೆ ಬೇರೆ ಯಾವುದಾದರೂ ಚಾಲೆಂಜಿಂಗ್ ಸಿನಿಮಾ ನೋಡಲು ಹಚ್ಚಿ ಸರ್.

-ಪ್ರೀತಿಯಿಂದ
ಮಹೇಶ್.ಎನ್.ಸಿ         
06-03-2011


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು