ಕೆಂಪೇಗೌಡ
ಚಿತ್ರವೊಂದು ಪ್ರಾದೇಶಿಕವಾಗುವುದೆಂದರೆ ಕೇವಲ ದೃಶ್ಯಗಳನ್ನ ಸ್ಥಳೀಯವಾಗಿ ಚಿತ್ರಿಸುವುದೆಂದು ನಮ್ಮವರು ಅಂದುಕೊಂಡಂತಿದೆ. ಪ್ರಾದೇಶಿಕತೆ ಪ್ರೇಕ್ಷಕನ ಅನುಭವಕ್ಕೆ ಬರಬೇಕು ಎಂಬುದರ ಬಗ್ಗೆ ಇವರು ತಲೆ ಕೆಡಿಸಿಕೊಂಡಂತಿಲ್ಲ. ರೋಣ ಸುತ್ತಮುತ್ತಲಿನ ಪರಿಸರ ಚಿತ್ರಿಸುವಾಗ ಅಲ್ಲಿನ ಮಣ್ಣಿನ ವಾಸನೆ ಪ್ರೇಕ್ಷಕನಿಗೆ ದಕ್ಕದೇ ಹೋದರೆ ಅದು ರೋಣವಾಗಲೀ, ಹುಬ್ಬಳ್ಳಿಯಾಗಲೀ ಎಲ್ಲವೂ ಒಂದೇ ಎನಿಸುತ್ತದೆ. (ಈ ಹಿಂದೆ ಆಟೋಗ್ರಾಫ್ ಸಿನೆಮಾದಲ್ಲೂ ಸುದೀಪ್ ಮಲೆನಾಡಿನ ಪರಿಸರ ಕಟ್ಟಿಕೊಡುವಲ್ಲಿ ಎಡವಿದ್ದರು.).ಅರುಣ್ ಸಾಗರ್ ಅವರ ಕಲಾ ನಿರ್ದೇಶನ ಸ್ವಲ್ಪ ಹೆಚ್ಚೇ ಶ್ರೀಮಂತವಾಗಿದ್ದೂ ಚಿತ್ರದ ಪರಿಸರಕ್ಕೇ ಹೊಂದಿಕೊಳ್ಳದೇ ಚಿತ್ರದ ಹೊರಗೆ ನಿಲ್ಲುತ್ತದೆ. ರಂಜನೆಯೇ ಚಿತ್ರವೊಂದರ ಮಾನದಂಡವಾಗುವುದಾದರೆ ಕೆಂಪೆಗೌಡ ಸೂಪರ್ ಸಿನೆಮಾ. ಶಾರ್ಪ್ ಎಡಿಟಿಂಗ್, ಮೈ ನವಿರೇಳಿಸುವ ಆಕ್ಷನ್, ಸುದೀಪ್ ಮತ್ತು ವಿಲನ್ ಪಾತ್ರಧಾರಿ ರವಿಶಂಕರ್ ರ ಆರ್ಭಟ ಎಲ್ಲವೂ ನಮ್ಮನ್ನ ಅಲ್ಲಾಡದಂತೆ ಹಿಡಿದಿಟ್ಟು ನಮ್ಮೊಳಗೊಂದು ಸುನಾಮಿಯನ್ನೇಬ್ಬಿಸಿ ಬಿಡುತ್ತದೆ. ಕ್ಯಾಮೆರಾದಲ್ಲಿ ಅಲ್ಲಲ್ಲಿ ರಾಮ್ ಗೋಪಾಲ್ ಛಾಯೆ ಕಂಡರೂ ಒಟ್ಟಂದದಲ್ಲಿ ಚಿತ್ರ-ಕಥೆಗೆ ಪೂರಕವಾಗೇ ಬಂದಿದೆ. ರೋಣದಿಂದ ವರ್ಗವಾಗಿ ಬಂದ ಒಬ್ಬ ಎಸ್ ಐ ಮತ್ತು ಮಾಗಡಿ ರಸ್ತೆಯ ಕಿಡ್ನಾಪ್ ದಂಧೆಯಲ್ಲಿರುವ ಗೂಂಡಾ ಒಬ್ಬನ ನಡುವಿನ ಕದನದ ಕಥೆಯಾದ ’ಕೆಂಪೇಗೌಡ’, ನಿರೂಪಣೆ ಮತ್ತು ಸಂಕಲನದ ವೇಗದಿಂದಾಗಿ ವೀಡಿಯೋ ಗೇಮ್ ನೋಡಿದ ರೋಮಾಂಚನ ಕೊಡುತ್ತದೆ. ಸಾಯಿಕುಮಾರ್ ರನ್ನು ನೆನಪಿಸುವ ಖಳನಾಯಕ ರವಿಶಂಕರ್ ೯೦ ರ ದಶಕದ ವಿಲನ್ ನಂತೆ ಚಿತ್ರದ ಪೂರ್ತಿ ಘರ್ಜಿಸುತ್ತಲೇ ಇರುತ್ತಾರೆ. ಸುದೀಪ್ ಚಿತ್ರವನ್ನು ತನ್ಮಯತೆಯಿಂದ ನಿರ್ದೇಶಿಸಿರುವುದರಲ್ಲಿ ಎರಡು ಮಾತಿಲ್ಲ. ಜಸ್ಟ್ ಜಸ್ಟ್ ಮಾತ್ ಮಾತಲ್ಲಿ.. ಯ ಇಮೋಷನಲ್ ಡ್ರಾಮಾ ಇಲ್ಲಿ ಇಲ್ಲದೇ ಹೋದರು ’ಸಿಂಗಂ’ಗಿಂತ ಯಾವ ಥರದಲ್ಲೂ ಕಡಿಮೆಯಿಲ್ಲ. ವ್ಯವಹಾರಿಕವಾಗಿ ಚಿತ್ರದ ಫಲಿತಾಂಶ ಏನೇ ಆದರೂ ೨೮ ವರ್ಷಗಳಷ್ಟು ಹಿಂದೆ ಬಂದ ಅರ್ಧ ಸತ್ಯದ ಅರ್ಧದಷ್ಟೂ ಇಂದಿನ ಕಾಪ್ ಸಿನೆಮಾಗಳು ನಿಲ್ಲದಿರುವುದಕ್ಕೆ ಬಹುಶ್ಃ ನಮ್ಮ ಸಿನೆಮಾದವರ ಕ್ರಿಯಾಶೀಲತೆ ಕುಸಿದಿರುವುದು , ಇಲ್ಲವೇ ಪ್ರಜ್ಞಾವಂತ ಪ್ರೇಕ್ಷಕ ಅಧೋಗತಿಗಿಳಿದಿರುವುದು ಕಾರಣವೇನೋ? 14-03-11 (tags:ಅರುಣ್ ಸಾಗರ್, arun sagar art director,kempegowda film review, kempegouda film review, sudeep,ಕೆಂಪೇಗೌಡ ಚಿತ್ರ ವಿಮರ್ಶೆ, samvaada.com)
|
|