ದೃಶ್ಯಕ್ಕೊಂದು ನುಡಿಗಟ್ಟು

ಇರೋಮ್ ಶರ್ಮಿಳಾರ ಹೋರಾಟ ಮತ್ತು ‘ಲೇ ಮಷಾಲೇನ್’ ಏಕವ್ಯಕ್ತಿ ನಾಟಕ ಪ್ರದರ್ಶನ

 ಇರೋಮ್ ಶರ್ಮಿಳಾ ‘ಲೇ ಮಷಾಲೇನ್’ ಏಕವ್ಯಕ್ತಿ ನಾಟಕ, irom sharmila, manipur movement,samvaada.com  ‘ಇರೋಮ್ ಶರ್ಮಿಳಾ’ ಇಂದು ತಮ್ಮ ೧೦ ವರ್ಷದ ಉಪವಾಸದಿಂದಾಗಿ ಪ್ರಪಂಚದಾದ್ಯಂತ ಸುದ್ದಿಯಾಗಿರುವ ಮಹಿಳೆ. ಇಂಫಾಲದಲ್ಲಿ ಪ್ರಭುತ್ವದ ಪ್ರತಿನಿಧಿಗಳು ಒತ್ತಾಯಪೂರ್ವಕವಾಗಿ ಮೂಗಿನಿಂದ ಆಕೆಗೆ ಬದುಕುಳಿಯಲು ದ್ರವ ಪದಾರ್ಥ ನೀಡುತ್ತಿದ್ದಾರೆ. ೨೧ನೆಯ ಆಧುನೀಕರಣದಲ್ಲಿ, ಜಾಗತೀಕರಣದಲ್ಲಿ, ಇಡೀ ವಿಶ್ವವೇ ಒಂದು ಹಳ್ಳಿಯಾಗುತ್ತದೆ ಎನ್ನುವಂತಹ ವಾತಾವರಣದಲ್ಲಿ ಬದುಕುತ್ತಿರುವ ನಾವು-ಇರೋಮ್ ಶರ್ಮಿಳಾ ಹನ್ನೊಂದನೆಯ ವರ್ಷದ ಉಪವಾಸವನ್ನು ಮುಂದುವರಿಸುವುದನ್ನು ತಣ್ಣನೆ ಕಣ್ಣುಗಳಲ್ಲಿ ನೋಡುತ್ತಾ ಕೂರಬೇಕೆ? ಎಂಬುದು ಈಗ ಪ್ರಶ್ನೆಯಾಗುತ್ತಿದೆ. ಉಪವಾಸ ಮಾಡುತ್ತಾ ಸಾವಿನೆಡೆಗೆ ತನ್ನನ್ನು ನೂಕಿಕೊಳ್ಳುತ್ತಿರುವ ಇರೋಮ್ ಶರ್ಮಿಳಾ ನಮ್ಮೆಲ್ಲರ ಹೃದಯವನ್ನು ಕಲಕಿದ ಹಾಗೆ ಪ್ರಭುತ್ವದ ಹೃದಯವನ್ನು ಕಲಕಬಲ್ಲಳೇ? ಅಥವಾ ತನ್ನ ಶಾಂತಿ ಮಂತ್ರದಿಂದ ತನ್ನನ್ನೇ ನೋಯಿಸಿಕೊಳ್ಳುವ ಈಕೆಯ ಪ್ರಯತ್ನ ಪ್ರಭುತ್ವದ ಹೃದಯವನ್ನು ಗೆಲ್ಲಬಲ್ಲದೇ? ಬಂದೂಕಿನ ನಳಿಕೆಯಿಂದ ಸಾವಿರಾರು ನಾಗರಿಕರನ್ನು ಹೇಳ ಹೆಸರಿಲ್ಲದಂತೆ ಮಾಡುತ್ತಿರುವ ಪ್ರಭುತ್ವಕ್ಕೆ ಈಕೆಯ ಉಪವಾಸವನ್ನು ಸವಾಲೆಂದು ಸ್ವೀಕರಿಸುವ ಅಗತ್ಯ ಕಾಣಿಸುತ್ತಿದೆಯೋ ಇಲ್ಲವೋ ಎನ್ನುವುದೂ ಕೂಡಾ ಈಗ ಚರ್ಚಿಸಬೇಕಾದ ವಿಚಾರವಾಗಿದೆ.
ಕಳೆದ ಹತ್ತು ವರುಷದಿಂದ ಇರೋಮ್ ಶರ್ಮಿಳಾರ ಬೇಡಿಕೆ ಒಂದೇ, ೧೯೫೮ರಲ್ಲಿ ಅಸ್ತಿತ್ವಕ್ಕೆ ಬಂದ ‘ಸೈನಿಕರಇರೋಮ್ ಶರ್ಮಿಳಾ ‘ಲೇ ಮಷಾಲೇನ್’ ಏಕವ್ಯಕ್ತಿ ನಾಟಕ, irom sharmila, manipur movement,samvaada.com ವಿಶೇಷಾಧಿಕಾರದ ಕಾಯಿದೆ’ಯನ್ನು ತೆಗೆದುಹಾಕುವುದು. ಈ ವಿಶೇಷಾಧಿಕಾರವನ್ನು ಪ್ರಶ್ನಿಸುವ ಹಾಗಿಲ್ಲ. ಪೊಲೀಸರಿಗೆ ಫಿರ್ಯಾದು ಕೊಡುವ ಹಾಗಿಲ್ಲ, ನ್ಯಾಯಾಲಯದ ಕಟ್ಟೆ ಹತ್ತುವ ಹಾಗಿಲ್ಲ. ಹಾಗಿದ್ದರೆ ಭಾರತದ ಪ್ರಜಾಪ್ರಭುತ್ವದ ಕನಸು ಮಣಿಪುರದ ಜನರಿಗೆ ಅನ್ವಯಿಸುವುದೇ ಇಲ್ಲವೇ?
   ಅನೇಕ ಮಾನವ ಹಕ್ಕು ಸಮಿತಿಗಳು ಪ್ರಧಾನ ಮಂತ್ರಿಯವರ ವರ್ಕಿಂಗ್ ಗ್ರೂಪ್, ಜೀವನ್ ರೆಡ್ಡಿ ಕಮಿಟಿ ಹೀಗೆ-ಸರ್ಕಾರ ನೇಮಿಸಿದ ಸಮಿತಿಗಳು ಹಾಗೂ ಪ್ರಪಂಚದಾದ್ಯಂತ ವಿವಿಧ ಸಮಿತಿಗಳು - “ಈ ಸೈನಿಕರ ವಿಶೇಷಾಧಿಕಾರದ ಕಾನೂನು ಜನರ ಮೇಲೆ ದೌರ್ಜನ್ಯ ನಡೆಸಲು ಬಳಕೆಯಾಗುತ್ತಿವೆ. ಹಾಗಾಗಿ ವಾಪಸ್ಸು ತೆಗೆದುಕೊಳ್ಳಿ” ಎಂದು ಭಾರತ ಸರ್ಕಾರಕ್ಕೆ ಒತ್ತಾಯಪಡಿಸಿದಾಗ್ಯೂ ಕೂಡಾ ಪ್ರಭುತ್ವ ಈವರೆಗೆ ಇದಕ್ಕೆ ಮಣಿಯದೇ ಮೌನವಾಗಿದೆ. ಹಾಗಾಗಿ ಇರೋಮ್ ಶರ್ಮಿಳಾ ನಿರಂತರವಾಗಿ ತಮ್ಮ ಉಪವಾಸವನ್ನು ಮುಂದುವರಿಸುತ್ತಲೇ ಇದ್ದಾರೆ. ಪ್ರತಿಭಟನೆಯ ಧ್ವನಿ ಎತ್ತಿದರೆ, ಹೋರಾಟ ಮಾಡಿದರೆ ಏನಾಗುತ್ತದೆ ನೋಡಿ ಎಂದು ತಿಳಿಸಿಕೊಡಲೆಂಬಂತೆ ಮನೋರಮಾದೇವಿಯಂಥ ಕಾರ್ಯಕರ್ತೆಯನ್ನು ಸೈನಿಕರು ಅತ್ಯಾಚಾರವೆಸಗಿ ಕೊಂದು ಬೀದಿಗೆ ಎಸೆದಿದ್ದಾರೆ. ಹೀಗೆ ಬೀದಿ ಹೆಣವಾಗುತ್ತಿರುವ ಅಮಾಯಕರು ಸಾವಿರಾರು ಜನ. ಸಾವು ಮಣಿಪುರದ ಬೀದಿ ಬೀದಿಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿದುದರ ವಿರುದ್ಧ ಮಹಿಳೆಯರು ಹಲವಾರು ರೀತಿ ಪ್ರತಿಭಟನೆ ನಡೆಸಿದ್ದಾರೆ. ಟಾರ್ಚ್ ಹಿಡಿದು ಸಾಗಿದ್ದಾರೆ, ಮೆರೆವಣಿಗೆ ಮಾಡಿದ್ದಾರೆ, ಪ್ರತಿಭಟನೆಯಲ್ಲಿ ದಿನಗಟ್ಟಲೆ ಧರಣಿ ಕೂತಿದ್ದಾರೆ. ಸಾಲದೆಂಬಂತೆ ಹಲವಾರು ಜನ ತಾಯಂದಿರು ಬೆತ್ತಲೆಯಾಗಿ ಸೈನಿಕರ ಆಫೀಸರ‍್ಸ್ ಕ್ವಾರ್ಟಸ್ ಮುಂದೆ ನಿಂತು ‘ನಮ್ಮ ಮೇಲೆ ಅತ್ಯಾಚಾರ ಮಾಡಿ’ ಎಂದು ಮನೋರಮಾದೇವಿಯ ಮೇಲಿನ ಹಿಂಸೆಯನ್ನು ಪ್ರತಿಭಟಿಸಿದ್ದಾರೆ. ಇದಕ್ಕಿಂತ ಹೆಚ್ಚಿನ ನಾಚಿಕೆಗೇಡಿನ ಸಂಗತಿ ಪ್ರಜಾಪ್ರಭುತ್ವದಲ್ಲಿ ಇದೆಯೇ?
   ಓಜೋಸ್ ತಮ್ಮ ಏಕವ್ಯಕ್ತಿ ಪ್ರದರ್ಶನದಲ್ಲಿ ಇರೋಮ್ ಶರ್ಮಿಳಾರ ಹೋರಾಟದ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಮಣಿಪುರದ ಇಂದಿನ ಸ್ಥಿತಿಯನ್ನೂ ಬಿಂಬಿಸುತ್ತಾರೆ. ಈ ನಾಟಕಕ್ಕೆ ಮಲೆಯಾಳಂನ ಕಾರ್ಯಕರ್ತರಾದ ಸಿವಿಕ್ ಚಂದ್ರನ್ ಬರೆದ ಮೇರಾ ಫೈಬಿ ನಾಟಕ ಆಧಾರ ಎನ್ನುವ ಓಜೋಸ್, ‘ಲೇ ಮಶಾಲೈನ್ ಜಲ್ ಪಡೆ ಹಾಯ್’ ಎಂಬ ಹಾಡಿನಿಂದ ಸ್ಫೂರ್ತಿಗೊಂಡು ತಮ್ಮ ನಾಟಕವನ್ನು ‘ಲೇ ಮಷಾಲೇನ್’ ಎಂದು ಹೆಸರಿಟ್ಟುದಾಗಿ ಹೇಳುತ್ತಾರೆ.
  ಇರೋಮ್ ಶರ್ಮಿಳಾ ‘ಲೇ ಮಷಾಲೇನ್’ ಏಕವ್ಯಕ್ತಿ ನಾಟಕ, irom sharmila, manipur movement,samvaada.com ಮಣಿಪುರದ ಸೈನಿಕರ ಮಾರಣ ಹೋಮಕ್ಕೆ ಒಳಗಾದ ಗಂಡಂದಿರ ಹೆಂಡತಿಯರು ನ್ಯಾಯ ಸಿಗದೇ ಅಲೆಯುತ್ತಿದ್ದಾರೆ. ಭಯೋತ್ಪಾದಕನೆಂಬ ಹಣೆಪಟ್ಟಿ ಕಟ್ಟಿ ಬಿಡುವುದರಿಂದ ಪರಿಹಾರ ಕೂಡಾ ಇವರಿಗೆ ದಕ್ಕುವುದಿಲ್ಲ. ವಿಧವಾ ಪರಿಹಾರ ಕೇಳಲು ಹೆಂಗಸರಿಗೆ ೪೦ ವರ್ಷದ ಮೇಲಿರಬೇಕು. ಆದರೆ ಈ ಸಂಘಟನೆಯಲ್ಲಿ ವಿಧವೆಯಾಗಿರುವ ಬಹುತೇಕ ಮಹಿಳೆಯರ ವಯಸ್ಸು ೨೦ ವರ್ಷದಿಂದ ೩೦ ವರ್ಷಗಳ ಒಳಗಿನದು. ಎಂತಹ ವಿಪರ್ಯಾಸ! ಪ್ರಜಾಪ್ರಭುತ್ವ ಉಳಿಸಲು, ಇರೋಮ್ ಶರ್ಮಿಳಾ ಉಪವಾಸ ವ್ರತ ನಿಲ್ಲಿಸಲು, ಅಮಾಯಕರ ಬದುಕು ಸುಗಮವಾಗಲು, ಮಣಿಪುರದ ಬೀದಿಗಳಲ್ಲಿ ನಾರುತ್ತಿರುವ ಸಾವಿನ ಗಬ್ಬುವಾಸನೆಯನ್ನು ತೆಗೆಯಲು ನಾವೆಲ್ಲರೂ ಧ್ವನಿ ಎತ್ತಲೇಬೇಕಿದೆ. ಎಲ್ಲಿ, ಹೇಗೆ ಸಾಧ್ಯವೋ ಅಷ್ಟರ ಮಟ್ಟಿಗಾದರೂ ನಮ್ಮ ಪ್ರತಿಭಟನೆ ತೋರಿಸಿ ಈ ಸಮಾಜದ ಸ್ವಾಸ್ಥ್ಯವನ್ನು, ಪ್ರಜಾಪ್ರಭುತ್ವದ ಧ್ವನಿಯನ್ನು ಗಟ್ಟಿಗೊಳಿಸುವ ನೈತಿಕ ಹೊಣೆಯನ್ನು ಭಾರತೀಯ ಸಮಾಜದ ನಾಗರೀಕರು ಹೊರುವುದು ಅನಿವಾರ್ಯ. ನಮ್ಮೆದುರಿಗಿರುವ ಈ ದುರಂತಗಳನ್ನು ಗಮನಿಸಿ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ.
       ಮೈಸೂರಿನಲ್ಲಿ ಪ್ರದರ್ಶನ ೧೬/೦೩/೨೦೧೧ರಂದು.                   
15-03-2011(tags:ಇರೋಮ್ ಶರ್ಮಿಳಾ ‘ಲೇ ಮಷಾಲೇನ್’ ಏಕವ್ಯಕ್ತಿ ನಾಟಕ, irom sharmila, manipur movement,samvaada.com)

samvaada.com on facebook

ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು