"ಕೆನ್ನೆ ಕೆಂಪು ಕಣ್ಣಿಗೇರಿ ಕೆಂಪಾಗಿ ಹೋಯ್ತು ಕಾಡಿಗೆ"
ಕರಿಯ ಚಿತ್ರದ್ದೋ ಮೆಜೆಸ್ಟಿಕ್ ಚಿತ್ರದ್ದೋ ಹಾಡೊಂದರ ಸಾಲು ಇದು. ಎರಡೂ ಒಂದೇ ಕೆಟಗರಿಯ ರೌಡಿಜಂ ಚಿತ್ರಗಳೆ. ಆದರೆ ಈ ಸಾಲು ಅವೆರಡೂ ಚಿತ್ರಗಳ ಒಳ ಹೂರಣಕ್ಕಿಂತ ತುಂಬ ಬೇರೆಯದ್ದಾಗಿ ಕಂಡಾಗ ನಾನು ಚಕಿತಗೊಂಡೆ. ನನ್ನ ಸಂಧರ್ಭದಲ್ಲಿ ಪರ್ಯಾಯ ಸಿನೆಮಾ ಅಂತೆಲ್ಲ ಅಲೋಚಿಸುವಾಗ ಹೀಗೆ- ನಾವು ಕಲ್ಪಿಸಿಕೊಳ್ಳುವ ಏಕಮುಖಿ ಪರ್ಯಾಯಗಳಿಗಿಂತ ಬೇರೆಯದ್ದಾದ ಅಂತರ್ ಭಿನ್ನತೆಗಳು ಕಂಡು ಗೊಂದಲವಾಗುತ್ತದೆ. ಎಳೆದ ಒಂದು ಗೆರೆಯನ್ನು ಬಿಟ್ಟು ಹೊಸದಾಗಿ ಇನ್ನೊಂದು ಗೆರೆಯನ್ನು ಬೇರೆ ಬೇರೆ ದಿಕ್ಕು, ಆಕಾರ, ಕ್ರಮಗಳಲ್ಲಿ ರೂಪಿಸಲು ಹೋದಾಗ, ಮೊದಲು ಎಳೆದ ಗೆರೆಯಲ್ಲಿಯೇ ಅಸಂಖ್ಯ ದಿಕ್ಕುಗಳೂ ಅಕಾರಗಳೂ ಕಂಡು ಮೋಜೆನಿಸುತ್ತದೆ. ಆದರೆ ಇದು ಗಂಭೀರವಾದದ್ದೂ ಹೌದು.ಹೇಗೆಯೇ ಆಲೋಚಿಸಿದರೂ- ಪರ್ಯಾಯ ಸಿನೆಮ ಕುರಿತ ಸೆಮಿನಾರ್, ಚಿಂತನೆ ಎಂದಾಗ ಅನ್ನಿಸುವುದು ಒಂದು: ನಮ್ಮ ಸಮಯದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿಲ್ಲ. ಹಾಗಾಗಿ ಪರ್ಯಾಯ ಮಾರ್ಗವೋ, ಸಿನೆಮಾಗಳೋ ಬೇಕು ಎಂದು. ಆದರೆ ತನ್ನ ಹೊಟ್ಟೆಯೊಳಗೆ ಇಂಥದ್ದೊಂದು ವಾದವನ್ನು ಅಡಗಿಸಿ ಇಟ್ಟುಕೊಂಡ ಪ್ರಶ್ನೆ ಅಪಾಯಕಾರಿ ಮಾತ್ರವೇ ಅಲ್ಲ; ಅದು ಅಹಂಕಾರದ್ದು ಕೂಡ. ಒಂದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ಬಯಸುವ ಹುಡುಕಾಟ ಯಾವತ್ತಿಗೂ ತನ್ನ ಹಿಂದಿನ ಪರಿಕರ, ಅಭಿವ್ಯಕ್ತಿ ಕ್ರಮ, ಮಾಧುರ್ಯ ಮತ್ತು ರೌದ್ರ - ಈ ಎಲ್ಲವೂ ಸಾಗಿ ಬಂದ ಹಾದಿಗಳನ್ನು ಗುರುತಿಸುವುದರಲ್ಲಿಯೂ, ಗೌರವಿಸುವುದರಲ್ಲಿಯೂ ಸೋಲುತ್ತವೆ. ಅವಕ್ಕೆ ಒಟ್ಟಾರೆಯಾದ ಪರ್ಯಾಯ ಬೇಕು; ಅನುಸಂಧಾನವಾಗಲೀ, ಪರಂಪರೆಯನ್ನು ಉಳಿಸಿಕೊಂಡೇ ಅದರ ಜಡ್ಡನ್ನು ನಾಶಗೊಳಿಸುವ ಚಲನಶೀಲ ಕ್ರಮ ಬೇಡ. ಹಾಗಾದಾಗ ಈ ರೀರಿಯ ಹುಡುಕಾಟಗಳು ಎಂದಿಗೂ ಈ ಮೇಲಿನ ರೌಡಿ ಚಿತ್ರಗಳಲ್ಲಿರುವ ಮೃದುಲ ಹಾಡುಗಳನ್ನು ಗುರುತಿಸಲಾರದೇ ಹೋಗುತ್ತವೆ.
ಪರ್ಯಾಯ ಎಂದರೆ ಅಹಂಕಾರ ಎಂದೆ. ಏಕೆಂದರೆ ಸಿನೆಮಾ ಯಾವತ್ತಿಗೂ ಸಾಹಿತ್ಯದ ಹಾಗೋ, ನೃತ್ಯದ ಹಾಗೋ, ಸಂಗೀತದ ಹಾಗೋ ಏಕವ್ಯಕ್ತಿಯ ಮಾಧ್ಯಮ ಅಲ್ಲ. ಅದು ಸಂಗಮ. ಕಥೆ, ಚಿತ್ರಕತೆ, ಮೇಕಪ್, ಎಡಿಟಿಂಗ್, ನಿರ್ದೇಶಕ, ಪ್ರೇಕ್ಷಕ ಇನ್ನೂ ಹಲವು. ಒಂದು ಕೆಟ್ಟ ಸಿನೆಮಾದ ಒಳ್ಳೆಯ ಎಡಿಟಿಂಗ್ ಅನ್ನು ನಾವು ಯಾವತ್ತು ಗಮನಿಸಲಾರದಷ್ಟು ಅಸೂಕ್ಷ್ಮರಾಗುತ್ತೇವೋ ಅವತ್ತು ನಮಗೆ ಪರ್ಯಾಯ ಬೇಕು. ನಾವಿನ್ನೂ ಅಷ್ಟು ಕೆಟ್ಟಿಲ್ಲ ಎಂದು ಭಾವಿಸುತ್ತೇನೆ.
ಮೇಲಿನ ಮಾತುಗಳಿಗೆ ವಿರುದ್ಧವಾದುದನ್ನೂ ಹೇಳಬೇಕು. ಒಂದೊಮ್ಮೆ ಈ ಪರ್ಯಾಯದ ಚಿಂತನೆಯು ತನ್ನೊಳಗೆ ನಾನು ಗುರುತಿಸಿದ ಅಹಂಕಾರವನ್ನು ಹೊಂದಿಲ್ಲ ಎನ್ನುವುದಾದರೆ ’ಪರ್ಯಾಯ’ದ ಅವಶ್ಯಕತೆಯೇ ಅರ್ಥಹೀನ. ಅರ್ಥಾತ್ ಈಗ ಬರುತ್ತಿರುವ ನಿನೆಮಾಗಳು ಒಳ್ಳೆಯವಿವೆ; ಕನಿಷ್ಠ ಅವು ತಮ್ಮ ಕೆಲವು ಭಾಗಗಳಲ್ಲಾದರೂ ಗುಣಮಟ್ಟದಲ್ಲಿ ಉತ್ತಮವಿವೆ ಎಂದಾದರೆ ’ಪರ್ಯಾಯ’ ಬೇಕಾದರೂ ಯಾಕೆ? ಮತ್ತು ಪರ್ಯಾಯ ಬೇಕು ಯಾವುದಕ್ಕೆ? ಅಥವಾ ಪರ್ಯಾಯವೇ ಅಂತಿಮ ಎನ್ನುವುದಾದರೆ ಅದು ಅಹಂಕಾರ ಮತ್ತು ಅದನ್ನು ನಿರ್ಧರಿಸಲು ಸಿನೆಮದ ವಿಷಯದಲ್ಲಿ ಖಂಡಿತಕ್ಕೂ ಒಬ್ಬ ವ್ಯಕ್ತಿ ಅಸಮರ್ಥ. ಅದು ಅಸಂಪೂರ್ಣ ಸಹ.
ಹೀಗೆ ತೀರ ಎರಡು ಅಪದ್ಧ ಹೋಳುಗಳಾಗಿ ಒಡೆದು ನೋಡುವುದು ಬೇಡ. ಇಲ್ಲಿ ಈಗಾಗಲೇ ಅಸಂಖ್ಯ ಅಹಂಕಾರದ, ಅವಿನಯದ ಎಂದೂ ಒಂದಾಗದ ಹೋಳುಗಳಿವೆ: ಗಾಂಧಿ ಕ್ಲಾಸ್- ಬಾಲ್ಕನಿಯ ಮಧ್ಯೆ ಫಸ್ಟ್ ಕ್ಲಾಸ್ ಎಂಬುದರಿಂದ ಹಿಡಿದು ಕಮರ್ಷಿಯಲ್- ಕ್ಲಾಸಿಕ್ ಗಳ ನಡುವೆ ಬ್ರಿಜ್ ಸಿನೆಮಾ ಎಂಬಲ್ಲಿಯ ತನಕ. ಈ ಎಲ್ಲ ಬಗೆಯ ಒಡಕು ಚಿತ್ರಗಳಲ್ಲಿನ ಕಳಪೆ ಗುಣಮಟ್ಟವವನ್ನೂ, ಏಕತಾನತೆಯನ್ನೂ ತೊಡೆದು ಹೊಸ ಪರ್ಯಾಯ ವನ್ನು ಹುಡುಕುವ ಘಳಿಗೆಯಲ್ಲಿ ನಾವು ಆ ಕುರಿತ ಚಿಂತನೆಯಲ್ಲಿಯೂ ಹೋಳುಗಳನ್ನು ಸೃಷ್ಟಿಸುವುದು ಬೇಡ ಎಂಬ ಕಾರಣಕ್ಕೆ ಸ್ವಲ್ಪ ಹದಕ್ಕೆ ಬರೋಣ. ಆದರೆ ಯಾವುದನ್ನಾದರೂ ನಾವು ಇಷ್ಟು ಸಾರಾಸಗಟಾಗಿ ನಿರಾಕರಿಸಲು ಹೊರಟಾಗ ಮಾತ್ರ ಏಳುವ ’ಪರ್ಯಾಯ’ದ ಕಲ್ಪನೆಯು ದುರಹಂಕಾರದ್ದು. ಏನನ್ನಾದರೂ ಇಷ್ಟು ಸುಲಭವಾಗಿ ನಾವು ನಿರಾಕರಿಸಲು ಸಾಧ್ಯವಾಗುತ್ತದೆ ಎನ್ನುವುದಾದರೆ ನಾವು ಯಾವತ್ತೂ ಏನನ್ನೂ ಒಪ್ಪಿಕೊಳ್ಳಕಾರೆವು, ಖಂಡಿತ.
ಪ್ರತಿಯೊಂದು ರಂಗದಲ್ಲಿಯ್ಯೂ ಆ ರಂಗದ ಕುರಿತು ಆಳವಾಗಿ ಆಲೋಚಿಸುವ ಮನುಷ್ಯನಿಗೆ ತನ್ನ ಕಾಲದ ಸಮಸ್ಯೆ ತುಂಬ ಗಂಭೀರವಾದುದಾಗಿ ಕಾಣಿಸುತ್ತದೆ. ಹಿಂದಿನ ಎಲ್ಲ ಸಂದರ್ಭ ಗಳಿಗಿಂತಲೂ ಈಗಿರುವ ಕ್ರೈಸಿಸ್ ಅಪರಿಹಾರ್ಯವಾಗಿ ಕಾಣುತ್ತದೆ. ಇದು ಎಲ್ಲ ಕಾಲದ ಎಲ್ಲ ಮನುಷ್ಯರ ಸಮಸ್ಯೆ. ಆಗಲೇ ಹೀಗೆ ಹೊಸತರತ್ತ ಮುಖ ಮಾಡುವ, ಇರುವುದಕ್ಕಿಂತ ಪೂರ್ತಿ ಭಿನ್ನವಾದ ಏನನ್ನೋ ಕಾಣುವ ಹಠ ಮೂಡುವುದು. ತಪ್ಪಲ್ಲ. ಆದರೆ ನಾವು ನಮ್ಮ ನೆನಪುಗಳಲ್ಲಿನ, ವರ್ತಮಾನದ ಒಳ್ಳೆಯ ಅಂಶಗಳನ್ನು ಒಳಗೊಳ್ಳದೇ ಪರ್ಯಾಯಕ್ಕೆ ಈಡಗಲು ಹೊರಟಾಗ ನಾವು ಗಟ್ಟಿಯಾಗುವುದಿಲ್ಲ ಎಂಬ ಕಾರಣಕ್ಕೆ ಪೂರ್ಣ ಪರ್ಯಾಯವನ್ನು ಬೇರೆ ತರದಲ್ಲಿ ತಿರುಗಿಸಿ ನೋಡಬೇಕಾಗಿ ಬಂತು.
ಮುಖ್ಯ ಇದು. ಸ್ವಲ್ಪ ನಿರಾಳರಾಗೋಣ. ಪರ್ಯಾಯದ ಚಪ್ಪರದಡಿಯಲ್ಲಿ ಜಗಳ ಬೇಡ. ವಿಷಯಾಂತರದಂತೆಯೇ ಕಂಡರೂ ಈ ಪ್ರಾಯದ ಚಾಯೆಯಡಿಯಲ್ಲಿಯೇ ಬರುವ ಕೆಲವು ವಿಷಯಗಳಿವೆ. ಅದನ್ನು ನೋಡಿ ಈ ಸಿಕ್ಕನ್ನು ಯಾವ ಥರ ಬಿಡಿಸುತ್ತಲೇ ಪರ್ಯಾಯದ ಆತುರವನ್ನು ಬದಿಗೆ ಸರಿಸಿ ವರ್ತಮಾನದ ಕುರಿತು ಗುಣಗ್ರಾಹಿಗಳಾಗಬೇಕಿದೆ.
೧
ಎರಡು ಉದಾಹಾರಣೆಗಳಿವೆ ನಮ್ಮ ಮುಂದೆ, ತುಂಬ ಈಚಿನದ್ದಾಗಿ. ಒಂದು ಪಟ್ರೆ ಲವ್ಸ್ ಪದ್ಮ ಜೊತೆಗೆ ಸೈಕೋ. ಇದರ ವಿರುದ್ಧ ಗುಲಾಬಿ ಟಾಕೀಸ್. ಈ ಎರಡೂ ಚಿತಗಳೂ ಬಹಲವೇ ಸಂಚಲನ ಉಂಟುಮಾಡಿದ್ದವು. ಬರುತ್ತಿದ್ದ ಎಲ್ಲ ಚಿತ್ರಗಳಿಗಿಂತ ಭಿನ್ನವೆಂದು ಹತ್ತಿರ ಹತ್ತಿರ ಒಂದು ವರುಷ ಜನರನ್ನು ತುಂಬ ಕುತೂಹಲಿಗಳನ್ನಾಗಿ ಮಾಡಿದ್ದವು ಸಹ. ಈ ಚಿತ್ರಗಳನ್ನು ಕನ್ನದ ಚಿತ್ರ ರಂಗದ ಅಲೋಚನಾ ಕ್ರಮದ, ಪ್ರಚಾರಕಲೆ ಮತ್ತು ವ್ಯಾಪಿಯ ಪರ್ಯಾಯವೆಂದು ಕರೆದುಕೊಳ್ಳೊಣ. ಆದರೆ ಕಡೆಗೆ ಇವೆರಡೂ ಅತ್ಯಂತ ಕಳಪೆ ಚಿರ್ತಗಳೆಂದು ತೀರ್ಮಾನವಾಯ್ತು; ಬಿಡುಗಡೆಯ ನಂತರ. ಇನ್ನೊಂದು ಕಡೆ ಗುಲಾಬಿ ಟಾಕೀಸ್. ಎಂದಿನ ಕಾಸರವಳ್ಳಿ ಸಿನೆಮಾಗಳಂತೆ ಒಂದು ಸಾಹಿತ್ಯ ಕೃತಿಯನ್ನು ಆಧರಿಸಿದ ಸಿನೆಮಾ. ಆದರೆ ಖಂಡಿತ ಒಳ್ಳೆಯ ಸಿನೆಮಾ.
ಹೇಳಿ ಈಗ. ಇವೆರಡನ್ನೂ ಜೊತೆಗೆ ಇಟ್ಟು ನೋಡಿದರೆ ಯಾವುದು ಹೆಚ್ಚು ’ಪರ್ಯಾಯ’?
ಮುಂಚಿನಿಂದಲೂ ನಾವು ಕ್ಲಾಸಿಕಲ್, ಕಮರ್ಷಿಯಲ್ ಒಡಕುಗಳಲ್ಲಿಯೇ ಸಿನೆಮಾ ನೋಡಿಕೊಂಡು ಬಂದವರು. ಕಾಸರವಳ್ಳಿಯವರ ಗುಲಾಬಿ ಟಾಕಿಸ್ ಒಂದು ಸಮಕಾಲೀನ ಪ್ರಶ್ನೆಗೆ ಉತ್ತರವೇ- ಉತ್ತರವೇ ಎಂದರೆ ಮತ್ತೆ ಪರ್ಯಾಯವೆ ಆಗುತ್ತದೆ. ಹಾಗಾಗಿ ಉತ್ತರ ಕಂಡು ಹಿಡಿಯುವ ಪ್ರಯತ್ನ ಎಂಬುದು ಹೆಚ್ಚು ಸರಿ- ಹೊರತು ಅದು ಸಿನೆಮಾವಾಗಿ ಖಂಡಿತ ಪರ್ಯಾಯ ಸಿನೆಮಾ ಅಲ್ಲ. ಪಟ್ಯ್ರೆ ಲವ್ಸ್ ಪದ್ಮ ಸಿನೆಮಾವಾಗಿ ಗುಲಾಬಿ ಟಾಕೀಸ್ ಗಿಂತ ಹೆಚ್ಚು ಪರ್ಯಾಯ.
ಮುಂಚಿನಿಂದ ನಾನು ಬಿಡಿಸಲು ಪ್ರಯತ್ನಿಸುತ್ತಿದುದು ಇದು. ಸಿನೆಮಾ ಏಕವ್ಯಕ್ತಿ ಮಾಧ್ಯಮ ಅಲ್ಲ. ಅಲ್ಲಿ ಒಂದಕ್ಕಿಂತ ಹೆಚ್ಚು ಪರ್ಯಾಯಗಳಿವೆ. ಗುಣಮಟ್ಟದಲ್ಲಿ ಪರ್ಯಾಯವಿದೆ. ಮೇಕಿಂಗ್ ನಲ್ಲಿ ಪರ್ಯಾಯವಿದೆ. ವಿಷನ್ ಗಳಲ್ಲಿ ಪರ್ಯಾಯವಿದೆ. ಒಂದು ಪರ್ಯಾಯ ಇನ್ನೊಂದು ಪರ್ಯಾಯ ಕಲ್ಪನೆಯ ವಿರುದ್ಧವೂ ಇರುವ ಸಾಧ್ಯತೆಯಿದೆ. ಸಾಹಿತ್ಯದಲ್ಲಿ ಘಟಿಸುವ ಹಾಗೇ ಇಲ್ಲಿಯೂ ಕಾಲಕಾಲಕ್ಕೆ ತಾತ್ವಿಕ ಪಂಥಗಳು ಬಂದರೂ, ಇಲ್ಲಿ ಟೆಕ್ನಾಲಜಿಯ ಆಗಮನ ಮತ್ತು ನಿರಂತ ಬದಲಾವಣೆಗಳು ಸಾಹಿತ್ಯದಲ್ಲಿ ಸಾಧ್ಯವೇ ಇರದ ಭಿನ್ನ ಪರ್ಯಾಯಗಳನ್ನು ಸೃಷ್ಟಿಸುತ್ತವೆ. ಉದಾಹಾರಣೆ ಜುರಾಸಿಕ್ ಪಾರ್ಕ್. ಅದು ಯಾವುದಕ್ಕೆ ಪರ್ಯಾಯವಾಗಿತ್ತು. ನಾನು ಹಿಡಿಯಲು ಪ್ರಯತ್ನಿಸುತ್ತಿರುವುದು ಈ ಅಸಾಧ್ಯ ಸಾಧ್ಯತೆಗಳ ರಾಶಿಯನ್ನು ಮತ್ತು ನಿರಂತರ ಚಲನಶೀಲ ಬದಲಾವಣೆಗಳೇ ಶಾಶ್ವತ ಪರ್ಯಯವನ್ನು ಉಂಟುಮಾಡುವುದನ್ನು. ಇಲ್ಲಿ ಭಾರತದಲ್ಲಿ ನಾವು ಯಾವುದನ್ನ ಕಲಾತ್ಮಕ ಚಿತ್ರಗಳೆಂದು ಕರೆಯುತ್ತೇವೋ ಅವೆಲ್ಲ ಯಾವತ್ತೂ ಪರ್ಯಾಯ ಸಿನೆಮಾಗಳೇ ಆಗಿದ್ದವು. ಅವುಗಳ ವಿರುದ್ಧ ನಾವು ಗೆರೆ ಹೊಡೆದುಕೊಂಡು ಕಮರ್ಷಿಯಲ್ ಅಂತ ಕರೆದುಕೊಂಡ ಸಿನೆಮಾಗಳು ಯಾವತ್ತಿಗೂ ಯಾವುದಕ್ಕೂ ಪರ್ಯಾಯವಾಗದ ನಿತ್ಯ ನಾರಕಿಗಳು.
ಸಮಸ್ಯೆ ಇದು. ಮೇಲೆ ಸೈಕೋ ಮತ್ತು ಗುಲಾಬಿ ಟಾಕೀಸ್ ಗಳ ನಡುವಿನ ವೃತ್ತಾಂತ ತೆಗೆಕೊಂಡಿದ್ದು ಯಾಕೆಂದರೆ ಯಾವುದು ಹೆಚ್ಚು ಪರ್ಯಾಯ ಎಂದು ನಿರ್ಧರಿಸಲು ಪಟ್ಟಾಂಗ ಹೊಡೆದು ಕೂತಾಗ ನಾವು ಗಮನ ಹರಿಸಲೇ ಬೇಕಾದ ಅನೇಕ ಸಂಗತಿಗಳಲ್ಲಿ ಶ್ರೇಷ್ಟತೆಯ(ವಿಷನ್ ಮತ್ತು ಮೇಕಿಂಗ್ ಎರಡರಲ್ಲಿಯೂ), ಗುಣ ಸಹ ಒಂದು.
ಇಲ್ಲದೇ ಹೋದರೆ ಪರ್ಯಾಯ ಸಿನೆಮಾವನ್ನು ಶೋದಿಸುವ ಆತುರದಲ್ಲೋ ಹುರುಪಿನಲ್ಲೋ ನಾವು ಸೈಕೋವನ್ನು ಗುಲಾಬಿ ಟಾಕೀಸ್ ಗಿಂತ ಹೆಚ್ಚು ಪರ್ಯಾಯ ಎಂದು ನಿರ್ಧರಿಸುವ ಮೂರ್ಖತನವನ್ನು ಖಂಡಿತ ಮಾಡುತ್ತೇವೆ.
೨
ದಯವಿಟ್ಟು ಕ್ಷಮಿಸಿ. ಅನೇಕ ಗಂಟುಗಳೂ ಒಡಕುಗಳೂ ಇವೆ ಇಲ್ಲಿ. ಅವೆಲ್ಲವನ್ನೂ ಬಿಡಿಸಿ ನೋಡಿಕೊಳ್ಳದ ಹೊರತು ನಾವು ಪರ್ಯಾಯ ದ ಗಂಟುಗಳನ್ನು ಬಿಡಿಸಲಾರೆವು. ಈಗಲೂ ನನಗೆ ಸ್ಪಷ್ಟ್ಯಾತ್ಮಕ ವಾಗಿ ಕಾಣಿಸದ ಪ್ರಷ್ನೆ ಎಂದರೆ- ಪರ್ಯಾಯ ಸಿನೆಮಾ ಎಂದರೆ ಏನು.. ಮತ್ತು ಯಾವುದಕ್ಕೆ ಪರ್ಯಾಯ... ನನ್ನ ಸಂಧರ್ಭದಲ್ಲಿ ಪರ್ಯಾಯ ಸಿನೆಮಾ ಎಂದರೆ...
(ಸಾವಕಾಶ ಅರ್ಥ ಮಾಡಿಕೊಳ್ಳಿ) - ಭಾರತದಲ್ಲಿ, ಈ ನನ್ನ ಸಂದರ್ಭದಲ್ಲಿ ಒಡೆದು ಕಾಣಿಸುವ ಹಾಗೆ ಮಾಡಿಟ್ಟಿರುವ ಮೂರು ಛಿದ್ರಗಳಿವೆ. ಆ ಮೂರೂ ಛಿದ್ರಗಳನ್ನು ಅವುಗಳ ಜನರಲೈಸ್ಡ್ ಅರ್ಥಗಳಲ್ಲಿ ಹೀಗೆ ಹೇಳೋಣ. ಮೊದಲನೇಯದು ಕಮರ್ಷಿಯಲ್. ಅದಕ್ಕೆ ವಿಷನ್ ಇಲ್ಲ. ಇದ್ದರೂ ಅದು ಮನರಂಜನೆಯ ಭಾಗವೇ. ಅಂದರೆ, ಸಿನೆಮಾ ಮೊದಲೇ ಪ್ರೇಕ್ಷಕನ ಸುಪ್ತ ಬೇಡಿಕೆಯ ವಿಷನ್ ಅನ್ನು ಗ್ರಹಿಸಿಯೋ ಅಥವಾ ಆ ರೀತಿಯದ್ದೊಂದು ತತ್ ಕ್ಷಣದ, ಇನ್‌ಸ್ಟ್ಯಾಂಟಿಯೇನಸ್ ಆದ ವಿಷನ್ ನ ಬಯಕೆಯನ್ನು ಅವನಲ್ಲಿ ತಾನೇ ಹುಟ್ಟುಹಾಕಿಯೋ ಅವನ ವಿಷನ್ ಅನ್ನು ಪ್ರತಿಫಲಿಸಿಬಿಡುತ್ತದೆ. ಈ ಕಮರ್ಷಿಯಲ್ ಚಿತ್ರಗಳಿಗೆ ಮೇಕಿಂಗ್ ಮುಖ್ಯ.
ಎರಡನೇಯದು ಕ್ಲಾಸಿಕ್. ಇಲ್ಲಿ ಮೇಕಿಂಗ್ ನಲ್ಲಿ ಕೆಲವು ಭಾಗಗಳು - ಉದಾಹಾರಣೆಗೆ ಸಂಗೀತ, ಛಾಯಾಗ್ರಹಣ ಅದ್ವಿತೀಯವಾಗಿದ್ದರೂ( ತಥಾಕಥಿತ ಸಾಮಾನ್ಯ ಜನಕ್ಕೆ) ಈ ಸಿನೆಮಾದ ಮೇಕಿಂಗ್ ಮತ್ತು ಆಡಂಬರ ಯಾವುದಕ್ಕೂ ಸಾಧ್ಯವಾಗುವುದಿಲ್ಲ. ಜನಪ್ರಿಯವಾಗುವುದು ಅಪಾಯಕಾರಿಯೋ ಎಂಬಂತೆ ರುಚಿರಹಿತ ಸಿನೆಮಾಗಳು ಇಲ್ಲಿಯವು. ಈ ಸಿನೆಮಾಗಳಿಗೆ ವಿಷನ್ ಮುಖ್ಯ. ಸಾಧಾರಣವಾಗಿ ಈ ವಿಷನ್ ಗಳು ಆಯಾ ಕಾಲಕ್ಕೆ ಸಂವಾದಿಯಾಗುತ್ತಲೂ ಸಾರ್ವಕಾಲಿಕವೂ ಆಗುವ ಅನನ್ಯ ರೂಪಕಗಳು. ಅವು ಹೀಗೆ ಯಾವತ್ತಿನವೂ ಆಗಿ ಸಲ್ಲುವುದಕ್ಕೆ ಮುಖ್ಯ ಕಾರಣ ಅವು ಸಾಹಿತ್ಯಾಧಾರಿತ ಎನ್ನುವುದೂ ಒಂದಿರಬಹುದು. ಈ ಸಿನೆಮಾಗಳಿಗೆ ಪ್ರೇಕ್ಷಕರು ವರ್ಜ್ಯವೋ ಅಥವಾ ಪ್ರೇಕ್ಷಕರಿಗೆ ಈ ಸಿಸೆಮಾಗಳೋ ಎಂಬುದು ಗುಟ್ಟು.
ಇನ್ನು ಮೂರನೇಯ ಹೋಳು: ಬ್ರಿಜ್. ನನ್ನ ಸಂಧರ್ಭದಲ್ಲಿ ಬ್ರಿಜ್ ಅಂತ ಹೇಳಬಹುದಾದರೆ ಮಠ, ಆ ದಿನಗಳು, ದುನಿಯ.. ಇನ್ನು ಕೆಲವು. ಮರಾಠಿಯ ಸಂತ ತುಕಾರಾಂ ಅನ್ನು ಕ್ಲಾಸಿಕ್ ಅಂತ ಗಣಿಸಲು ನನ್ನ ಮನಸ್ಸು ಹಿಂಜರಿಯುತ್ತದೆ. ಅದು ನನಗೆ ಬ್ರಿಜ್. ಕ್ಲಾಸಿಕ್ ಅಂದರೆ ಹಳತಾಗಲಾರದ್ದು. ಜಗಳ ಸಾಧ್ಯವಾಗಲಾರದ್ದು. ಆದರೆ ಬ್ರಿಜ್ ಸಿನೆಮಾ ಚೂರಾದರೂ ಹಳಸುತ್ತದೆ. ಜೀವನವಿಡೀ ನೆಲದ ಮೇಲೆ ಬದುಕಿದ ತುಕಾರಾಂ ಕಡೆಗೆ ಯಾಕೆ ಆಕಾಶಕ್ಕೆ ಏರುತ್ತಾನೆ ಎಂಬ ಜಗಳ ತುಕಾರಾಮನ ಜೊತೆ ಸಾಧ್ಯ. ಎಲ್ಲವೂ ಹಳಸಿದಷ್ಟೂ ಹೊಸದು ಬರಲು ಸಾಧ್ಯ.
ಈ ಮೂರರಲ್ಲಿ ಪರ್ಯಾಯ ಯಾವುದಕ್ಕೆ? ನನ್ನ ಜಗಳ ಇದು.
ನಾವು ನಮ್ಮ ನಡುವೆ ಬರುತ್ತಿರುವ ಒಳ್ಳೆಯ ಕೆಲವನ್ನು ಬೈದುಕೊಂಡು ಓಡಾಡುತ್ತೇವೆ; ಅವು ಜನಪ್ರಿಯ ಎಂಬ ಕಾರಣಕ್ಕೆ. ಅವುಗಳನ್ನು ಬಿಟ್ಟು ಉಳಿದೆಲ್ಲವನ್ನು ತೆಗೆದೆಸೆದು ಪರ್ಯಾಯ ಬೇಕು ಅಂತ ಹೊರಡುತ್ತೇವೆ. ಪರಂಪರೆಯ ಕೊಳೆಯನ್ನು ಚೆಲ್ಲುವುದು ನನಗೆ ಸಮ್ಮತವಿಲ್ಲ. ಅದನ್ನು ಸೋಸುವುದು ಹೆಚ್ಚು ಅರ್ಥಪೂರ್ಣ. ನಾನು ತುಂಬ ಗೊಂದಲವಾಗಿಸುತ್ತಿದ್ದೇನೆ ಇದನ್ನೆಲ್ಲ ಅನ್ನಿಸುತ್ತಿದೆ. ಆದರೆ ನಾನು ಹೇಳಹೊರಟಿದ್ದು ಪೂರ್ಣ ಪರ್ಯಾಯಕ್ಕೆ ಪರ್ಯಾಯವಾದ ಕೆಲವು ಅಂಶಗಳನ್ನು.
*
*
*
ಫ್ರೆಂಚಿನಲ್ಲಿ ಕ್ಲಾಸಿಕ್ ಅಂತ ಒಡೆದು ಹೆಸರಿಸುವ ಒಂದು ಸಿನೆಮಾ ಪರಂಪರೆ ಇಲ್ಲ. ಹಾಲಿವುಡ್ಡಿನಲ್ಲಿ ಎಂತೆಂಥದೋ ಸಿನೆಮಾಗಳ ಮಧ್ಯ ’ಅಪೋಲೊಕಲಿಪ್ಟೋ’, ’ಅಕ್ಸೆಪ್ಟೆಡ್’ ಅಂಥ ಸಿನೆಮಾಗಳು ಬರುತ್ತವೆ. ಮಕ್‌ಬೂಲ್ ಬಫ್ ನ ಸಿನೆಮಾಗಳು ಇರಾನಿನಲ್ಲಿ ಹೌಸ್ ಫುಲ್ ಓಡುತ್ತವಂತೆ. ಇಲ್ಲಿ ಗಿರೀಶ್ ಕಾಸರವಳ್ಳಿ, ಕ್ಲಾಸಿಕ್ ಸಿನೆಮಾ ಎಂದರೆ ಜನ ಓಡುತ್ತಾರೆ. ದೂಡ್ಡ ಜನ ಕಮರ್ಷಿಯಲ್ ಸಿನೆಮಾಗಳನ್ನು ಅಪಾರ ಅಕೃಣೆಯಿಂದ ಹೇಸಿಕೊಂಡು ನೋಡುತ್ತಾರೆ. ನಮ್ಮಂಥವರು ಪರ್ಯಾಯ ಹುಡುಕುತ್ತೇವೆ.
ಆದರೆ ನಮಗೆ ಬೇಕಿರುವುದು ಪರ್ಯಾಯವಲ್ಲ. ಪರ್ಯಾಯ ಪರ್ಯಾಯ ಸಹ ಅಲ್ಲ. ಬಿಡಿಸುತ್ತೇನೆ; ಸರಳವಾಗಿ.
ನಮ್ಮ ಸಂಧರ್ಭದಲ್ಲಿ ಇಂದು ತಯಾರಾಗುತ್ತಿರುವ ಚಿತ್ರಗಳು ದರಿದ್ರದವು. ಸಿನೆಮಾದ ಗುಣಗಳೇ ಇರದ ಸುತ್ತಿದ ರೀಲಿನ ಪಿಂಡಿಗಳು. ಆದರೆ ನಾವು ಅರ್ಥ ನಾಡಿಕೊಳ್ಳಬೇಕಾದ ಒಂದು ಸಂಗತಿಯಿದೆ. ಇದು ಪರ್ಯಾಯದಿಂದ ಬದಲಾಗುವಂಥದ್ದಲ್ಲ.
ಒಂದು ಪಿರಾಮಿಡ್ಡಿನ ಉದಾಹಾರಣೆಯೊಡಿಗೆ ವಿವರಿಸುತ್ತೇನೆ. ಸಿನೆಮಾದ ಎಲ್ಲ ವಿಭಾಗಗಳೂ ತಮ್ಮಷ್ಟಕ್ಕೆ ತಾವು ಒಂದು ಯೂನಿಟ್. ಅವು ಎಲ್ಲವೂ ತಮ್ಮ ಆದ್ಯಂತಿಕ ಪರಿಪೂರ್ಣತೆಯತ್ತಲೋ, ಬದಲಾವಣೆಯತ್ತಲೋ ಸರಿಯಬೇಕು. ಲೈಟಿಂಗ್ ನಿಂದ ಹಿಡಿದು ಕಥೆಯ ತನಕ. ಕ್ಯಾರೆಕ್ಟರ್ ಗಳಿಂದ ಹಿಡಿದು ಮುಖ್ಯ ನಟನ ತನಕ. ಎಡಿಟಿಂಗ್, ಚಿತ್ರಕತೆ, ಮೇಕಪ್, ನಟನೆ, ಹಾಡು, ಸಂಗೀತ, ನಿರ್ದೇಶಕನ ಒಳನೋಟ ಈ ಎಲ್ಲವುಗಳ ಪ್ರಜ್ನಾಪೂರ್ವಕ ಬದಲಾವಣೆ ಮಾತ್ರವೇ ಸಿನೆಮಾದ ಅಂತಿಮ ಆಶಯವನ್ನು ರೂಪಿಸಬಲ್ಲವು. ಇದು ಹೀಗೆ: ಮೇಕಿಂಗ್ ಅನ್ನು ಬಳಸಿಕೊಂಡು ವಿಷನ್ ಅನ್ನು ರೂಪಿಸುವ ಕ್ರಮವಿದು. ಆದರೆ ನಾನು ಯಾವುದೇ ಕಾರಣಕ್ಕೂ ಇದನ್ನು ಪರ್ಯಾಯ ಅನ್ನುವುದಿಲ್ಲ. ಪಿರಾಮಿಡ್ಡಿನ ಬುಡ ತುದಿಯ ಚೂಪಿನ ಹೊಳಪನ್ನು ಹೆಚ್ಚಿಸುವ ಕ್ರಮ ಇದು. ಪೂರ್ತಿ ಪಿರಾಮಿಡ್ಡನ್ನೇ ಕಿತ್ತು ಹೊಸದನ್ನು ಸ್ಥಾಪಿಸುವುದಲ್ಲ.
ಪರ್ಯಾಯ ಎಂದರೆ ಆಮೂಲಾಗ್ರ ಬದಲಾವಣೆ. ನಾನಿಲ್ಲಿ ಪ್ರಯತ್ನಿಸುತ್ತಿರುವುದು ಆಂತರಿಕ ಪರ್ಯಾಯಗಳ , ಬದಲಾವಣೆಯ ನಾಜೂಕಿನ ಹಾದಿಗಳನ್ನು. ಇದು ಅತ್ಯಂತ ಕ್ರಿಯಾಶೀಲವಾದ್ದೂ ಹೌದು. ಕಂಬಳಿಹುಳ ಚಿಟ್ಟೆಯಾಗಿ ಬದಲಾಗುವ ಕ್ರಮವನ್ನು ನಾನು ಈ ಪರ್ಯಾಯದ ಅನಿವಾರ್ಯ ಘಟ್ಟದಲ್ಲಿ ಕನಸುತ್ತಿದ್ದೇನೆ. ಮೇಕಿಂಗ್ ನಷ್ಟೇ ನಮಗೆ ಮುಖ್ಯವಾದ್ದು ಒಂದು ಸಿನೆಮಾದ ನೋಟ. ಒಂದೊಂದು ವಿಭಾಗವೂ ಒಂದೊಂದು ಒಳನೋಟವನ್ನು ಕೂಡಿಸುತ್ತ ಹೋದಾಗ ಒಟ್ಟಾರೆಯಾದ ವಿಷನ್ ನ ಹೊಳಪು ಹೆಚ್ಚಾದೀತು. ಈ ರೀತಿಯ ಸಧ್ಯದ ಜಡಕಿನಿಂದ ಪಾರಾಗುವ ಉಪಾಯದ ಮೂಲಕ ಹುಟ್ಟುವ ಸಿನೆಮಾ ದ ಅಂತಿಮ ದೃಷ್ಠಿ ಖಂಡಿತಕ್ಕೂ ಸಾಹಿತ್ಯ ಕೃತಿಯೊಂದು ಸಿನೆಮಾವಾದಾಗ ಸೂಚಿಸುವ ಪರಿಹಾರ, ನೋಟಗಳಿಗಿಂತ ಭಿನ್ನವೂ ಪ್ರಾಯೋಗಿಕವೂ ಆಗಿರುವುದು ಸಾಧ್ಯ.
ನನ್ನ ಸಂದರ್ಭದಲ್ಲಿನ ಸಿನೆಮಾಗಳಿಗೆ ಪರ್ಯಾಯವಾಗಿ ಇರುವ ಒಂದು ವಿಧಾನಕ್ಕೆ ಪರ್ಯಾಯವಾಗಿ ಇನ್ನೊಂದನ್ನೇ ನಾನು ಸೂಚಿಸುತ್ತಿದ್ದೇದೆ ಅಂತ ನನಗೆ ಅನ್ನಿಸುತ್ತಿಲ್ಲ. ಮತ್ತು ಈ ವಿಧಾನವು ಇಂಪ್ಲಿಕೇಟೀವ್ ಆಗಿ ಕೂಡ ಸರಳ ಸಾಧ್ಯದ್ದೇ ಆಗಿ ಕಾಣಿಸುತ್ತಿದೆ. ಇದಕ್ಕೆ ಮಜಬೂತಾದ ಉದಾಹಾರಣೆ ಎಂದರೆ ’ಅಕ್ಸೆಪ್ಟೆಡ್’ ಸಿನೆಮ. ಅಲ್ಲಿ ಪ್ರತಿಯೊಂದು ಪಾತ್ರವೂ ಒಂದು ಕ್ಲಾಸ್ ಗೋಸ್ಕರ ಕ್ರಿಯಾತ್ಮಕವಾಗುತ್ತ ಸಧ್ಯದ ಜಡದ ವಿರುದ್ಧ ತಿರುಗುತ್ತವೆ. ಅವುಗಳ ಮನಸ್ಸಿನಲ್ಲಿ ಸ್ಪಷ್ಟ ಪರ್ಯಾಯ ಎಂಬುದಿಲ್ಲ. ಆದರೆ ಎಲ್ಲ ಏಕಾಂಗಿ ಪಾತ್ರಗಳೂ ತಮ್ಮ ಕನಸುಗಳನ್ನು ಕಲೆಕ್ಟ್ ಮತ್ತು ಕನೆಕ್ಟ್ ಮಾಡಿಕೊಳ್ಳುತ್ತಲೇ ಬೇರೆ ಏನನ್ನೋ ನಿರ್ಮಿಸಿ ಬಿಡುತ್ತವೆ. ಇದನ್ನು ಅಂತಿಮವಾಗಿ ಬೇಕಾದರೆ ಪರ್ಯಾಯವೆಂದು ಕರೆಯೋಣ.
೩
ಒಂದು ಮಾತಿದೆ. "ಸಂಗೀತದ ಬಗ್ಗೆ ಬರೆಯುವುದೆಂದರೆ ವಾಸ್ತುಶಿಲ್ಪದ ಕುರಿತು ನೃತ್ಯ ಮಾಡಿದಂತೆ" ಎಂದು. ಸಿನೆಮಾ ವನ್ನು ವಿಶ್ಲೇಷಿಸುವಾಗಲೂ ಹೀಗೇ ಆಗುತ್ತದೆ. ಒಂದು ಮಾಧ್ಯಮದ ಕುರಿತಾದ ಟೀಕೆಗಳನ್ನು ಮತ್ತೊಂದು ಪರಿಭಾಷೆಯಿಂದ ಮಾಡಲು ಉಪಕ್ರಮಿಸಿದಾಗ ಕೇವಲ ವಿಶ್ಲೇಷಣಾತ್ಮಕ ಸಮಸ್ಯೆಗಳಷ್ಟೇ ಅಲ್ಲದೇ ಅಪರಿಪೂರ್ಣತೆಯ ಮತ್ತು ಅನಿರ್ದಿಷ್ಟತೆಯ ಸಮಸ್ಯೆಗಳೂ ಏಳುತ್ತವೆ. ಸಾಹಿತ್ಯವನ್ನು ಸಿನೆಮಾ ಮಾಡಲು ಹೊರಟಾಗ ಏಳುವ ಸಮಸ್ಯೆಯ ಉಲ್ಟಾ ಅವೃತ್ತಿ ಇದು; ಸಿನೆಮಾದ ಕುರಿತು ಬರೆಯುವುದು. ಸಿನೆಮಾ ಜಗತ್ತಿನ ಪರ್ಯಾಯವನ್ನು ಬಿಡಿಸಲೂ ಸೂಚಿಸಲೂ ಒಬ್ಬ ನೋಡುಗ ಕೂಡ ಮೇಕರ್ ಆಗುವ ಅನಿವಾರ್ಯ ಉಂಟಾದಾಗ ನಿಜಕ್ಕೂ ಇನ್ನೊಂದು ಪರ್ಯಾಯ ಸೃಷ್ಟಿಯಾಗುತ್ತದೇನೋ. ಗುಣಮಟ್ಟದ ವಿಷಯದಲ್ಲಿ ರಾಜಿಯಾಗಿ ಬೇಸತ್ತ ಪ್ರೇಕ್ಷಕ ಕೇವಲ ವಿಶ್ಲೇಷಣೆಯಲ್ಲಿ ತೊಡಗದೇ ಆ ರಂಗದ ಪರಿಭಾಷೆಗಳನ್ನೂ ಜಡ್ಡನ್ನೂ ತಿದ್ದಲು ಅಲ್ಲಿಗೇ ಹೊಕ್ಕು ಹೊಸದನ್ನು ಸೃಷ್ಟಿಸುವ ಸೋಜಿಗ ನಡೆಯಬೇಕಿದೆ. ತೇಜಸ್ವಿ ಅಬಚೂರಿನ ಪೋಸ್ಟಾಫಿಸು ಸಂಕಲನದ ಮುನ್ನುಡಿಯಲ್ಲಿ ಹೇಳುತ್ತ ಸಾಹಿತ್ಯ ಬದಲಾಗಬೇಕಿದೆ, ಆದರೆ ಅದು ಕೇವಲ ಅಚ್ಚು ಮಾಡುವ ಕ್ರಮ, ಅಭಿವ್ಯಕ್ತಿ ಪರಿಕರಗಳ ಮಟ್ಟದಲ್ಲಿ ಅಲ್ಲ. ಆದರೆ ಅದು ಪೂರ್ಣ ಅರ್ಥದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ಒಳಗಾಗಬೇಕಿದೆ ಎಂದಿದ್ದರು. ಅವರ ಅರ್ಥ ಇಡೀ ಸಾಹಿತ್ಯ ಪರ್ಯಾಯದ ಅರ್ಥದಲ್ಲಿ ಬದಲಾವಣೆಯತ್ತ ನಡೆಯಬೇಕಿದೆ ಎಂದು. ಆದರೆ ಸಿನೆಮಾಕ್ಕೆ ಹೊಂದಿಸಿ ನೋಡಿದಾಗ ಅದು ಅಸಾಧ್ಯ. ಇಲ್ಲಿ ಅಚ್ಚು ಮಾಡುವ ಕ್ರಮ, ಹೊಸ ತಾಂತ್ರಿಕತೆಯ ಉಪಯೋಗ ಅದು ಒಟ್ಟಾರೆ ಸೂಚಿಸಲು ಉದ್ಯುಕ್ತವಾಗಿರುವ ಆಶಯದಷ್ಟೇ ಮುಖ್ಯವಾದದ್ದು. ಇಲ್ಲಿ ಪರ್ಯಾಯವೆಂದರೆ ಮುಂದುವರಿಕೆಯ ಹೊರತಾಗಿ-ಅಂದರೆ ಹೊಸ ಹೊಸ ತಂತ್ರಜ್ನಾನಗಳ ಅಳವಡಿಸಿಕೊಳ್ಳುವಿಕೆ ಇರದೇ- ಸಾಧ್ಯವೆ ಆಗಲಾರದ್ದು. ಹಾಗಾಗಿ ನಾವು ಪರ್ಯಾಯ ಸಿನೆಮಾಗಳ ಕುರಿತು ಮಾತನಾಡುವಾಗ ಆಶಯದ ಹೊರತಾಗಿಯೂ ಮಾತನಾಡಲೇ ಬೇಕು. ಸಾಹಿತ್ಯದಲ್ಲಿಯೋ ಮತ್ತೊಂದು ಏಕವ್ಯಕ್ತಿ ಮಾಧ್ಯಮದಲ್ಲಿಯೋ ಆದಂತೆ ಕೇವಲ ಆಶಯಗ ಬದಲಾವಣೆ, ವೈಚಾರಿಕ ಕ್ರಾಂತಿ ಪಲ್ಲಟಗಳು ಇಲ್ಲಿ ಎಂದಿಗೂ ಪೂರ್ಣ ಪರ್ಯಾಯವನ್ನು ಉಂಟು ಮಾಡಲಾರದು. ಚಿತ್ರಕಲೆ, ಸಾಹಿತ್ಯ ಇತ್ಯಾದಿಗಳು ಒಬ್ಬ ವ್ಯಕ್ತಿಯ ಅಭಿವ್ಯಕ್ತಿಯಾಗಿ ಮತ್ತೊಬ್ಬ ಓದುಗನಲ್ಲಿಯೋ ನೋಡುಗನಲ್ಲಿಯೋ ಅರಳಿಕೊಳ್ಳುತ್ತವೆ. ಆದರೆ ಸಿನೆಮಾ ಸಮಷ್ಠಿಯಲ್ಲಿ ಅರಳಿ ಸಮಷ್ಠಿಗೇ ಸಲ್ಲುವಂಥವು. ಹಾಗಾಗಿ ಇಲ್ಲಿ ಪರ್ಯಾಯದ ಅರ್ಥ ಮತ್ತು ಸಾಧ್ಯತೆಗಳು ವಿಸ್ತಾರವಾದಂಥದ್ದು.
ಮತ್ತೆ ಇಲ್ಲಿ ತೇಜಸ್ವಿಯೇ ಸರಿ. ಅವರು ತಮ್ಮ ಕೃತಿಗಳನ್ನು ಸಿನೆಮಾ ಆಗಿ ಅಳವಡಿಸಿಕೊಳ್ಳಲು ಕೊಡುವಾಗ ಜನ ನೋಡುವಂಥ ಸಿನೆಮಾ ತೆಗೆಯಿರಿ, ಮೂಲ ಕೃತಿಗೆ ಅತಿಯಾಗಿ ನಿಷ್ಠರಾಗಿರಬೇಕಿಲ್ಲ ಎಂದಿದ್ದರು. ಹೀಗೆ ವಕ್ರವಾಗುವುದೂ, ಒಂದು ಮಾಧ್ಯಮದಿಂದ ಕೃತಿ ಇನ್ನೊಂದಕ್ಕೆ ಜಿಗಿಯುವಾಗ ಬದಲಾವಣೆಗೆ ಒಳಗಾಗುವುದೂ ಇಂದಿನ ಭ್ರಷ್ಟ ಸಿನೆಮಾಗಳಿಗೆ ಪರ್ಯಾಯವಾಗಬಲ್ಲ ಅನನ್ಯ ಸಾಧ್ಯತೆಯಾಗಿ ಕಾಣುತ್ತಿದೆ ನನಗೆ. ಬಹುಷಃ ಈ ಕಾಣ್ಕೆ ಸತ್ಯಜಿತ್ ರೇ ಗೂ ಇತ್ತೆಂದು ಕಾಣುತ್ತದೆ. ಹಾಗಾಗಿಯೇ ಅವರು ತಮ್ಮ ಬರವಣಿಗೆಯಲ್ಲಿ ಹಾರರ್ ಥರದ, ಮನರಂಜನಾತ್ಮಕ ಕಥನಗಳನ್ನು ಬರೆದರೂ ಸಿಮೆಮಾಗಳಲ್ಲಿ ಬೇರೆಯಾಗಿ ಕಂಡರು. ಎರಡೂ ಮಾಧ್ಯಮ ಗೊತ್ತಿದ್ದ ಲಂಕೇಶರು ಸಾಹಿತ್ಯದಲ್ಲಿ ನವ್ಯರಾಗಿದ್ದರೂ ಸಿನೆಮಾದಲ್ಲಿ ಪರ್ಯಾಯವನ್ನು ಬೇರೆಯ ಅರ್ಥದಲ್ಲಿ ತಂದವರು. ಈ ಮಾತುಗಳನ್ನು ಹೇಳಬೇಕಾಯ್ತು ಯಾಕೆ ಅಂದರೆ, ಸಾಹಿತ್ಯ ಕೃತಿಯಾಧಾರಿತ ’ಕ್ಲಾಸಿಕ್’ ಚಿತ್ರಗಳು ಕನ್ನಡದಲ್ಲಿ ಬರುತ್ತವೆ. ಆದರೆ ಅವು ಸಾಹಿತ್ಯದ ಗಂಧ, ನಿಧಾನವನ್ನು ಬಿಟ್ಟು ಸಿನೆಮಾವಾಗಿ ವಕ್ರವಾಗುವುದಿಲ್ಲ. ಆದ್ದರಿಂದ ಅವು ಇಂದಿನ ಡಬ್ಬಾ ಚಿತ್ರಗಳಿಗೆ ಪರ್ಯಾಯವೂ ಆಗುವುದಿಲ್ಲ: ಏಕೆಂದರೆ ಜನ ನೋಡುವುದಿಲ್ಲ.
ಸ್ವಲ್ಪ ಆರೋಗೆಂಟ್ ಆಗಿಯೇ ಹೇಳುತ್ತೇನೆ. ದುನಿಯಾ, ವಂಶಿ, ಸ್ಲಂ ಬಾಲ, ದಶಾವತಾರಂ, ಮುಂಗಾರು ಮಳೆ ಎಲ್ಲವೂ ಸಂಕುಚಿತ ಅರ್ಥದಲ್ಲೇ ಆದರೂ ಪರ್ಯಾಯ ಸಿನೆಮಾಗಳೇ. ಮೃದು ಹಾಸಿನ ಕನ್ನಡ ನೆಲಕ್ಕೆ ರೌಡಿಯಿಸಂನ ಒಂಕಾರವಿಟ್ಟ ಓಂ, ಎಡವಟ್ಟುತನ ’ಎ’, ಭಯೋತ್ಪಾದನೆಯ ಸಬ್ಜೆಕ್ಟ್ ಆರಿಸಿಕೊಂಡ ಸ್ವಸ್ತಿಕ್ ಎಲ್ಲವೂ ಚೂರಾದರೂ ಹೊಸತನ್ನು ತರಲು ಪ್ರತ್ನಿಸಿದವೇ ಅಲ್ಲವೇ? ನಮ್ಮ ನಡುವಿನ ಅನೇಕ ಸಿಕ್ಕುಗಳನ್ನು ಬಿಡಿಸಿ ನೋಡುವ ಹಾಗೆಯೇ ನಾವು ಪರ್ಯಾಯವೆಂದು ಕಾಣಿಸುವ ಹೊಸ ಸಿನೆಮಾಗಳ ಹುಳುಕನ್ನು ಬಿಡಿಸಿ ನೋದಬೇಕು. ಅಂತೂ ಒಳ್ಳೆಯ ಸಿನೆಮಾಗಳು ಪರ್ಯಾಯವಾಗಲಾರದೇ ಹೋಗುವುದನ್ನು ಸಹ. ಅಂದಾಗಷ್ಟೇ ನಾವು ಒಂದು ರೌಡಿಜಂ ಸಿನೆಮಾದ ಒಳ್ಳೆಯ ಲಿರಿಕ್ಸ್ ಅನ್ನು ಆಲಿಸಲು ಸಾಧ್ಯ. ಅದನ್ನು ಬೆಂಬಲಿಸಿ ಆ ಬದಲಾವಣೆಯ ಮೊನಚನ್ನು ಹೆಚ್ಚಿಸಲು ಸಾಧ್ಯ. ಕಮಲ್ ನ ದಶಾವತಾರಂನ, ರಜನಿಯ ಶಿವಾಜಿಯ ವೆಚ್ಚವನ್ನೂ, ಸಿಂಗ್ ಈಸ್ ಕಿಂಗ್, ಮುಂಗಾರು ಮಳೆ ನಾಯಕ ಪಾತ್ರಗಳ ಮನಸ್ಸಿನೊಳಗಿನ ಈವಿಲ್ ಹುಡುಕುತ್ತ ಕುಳಿತರೆ ನಾವು ಸದಾ ಪರ್ಯಾಯದ ಕನಸಿನಲ್ಲಿರುತ್ತೇವೆಯೇ ಹೊರತು ಹೊಸತನ್ನು ಸೃಷ್ಟಿಸುವ, ಒಪ್ಪಿಕೊಳ್ಳುವ ಔದಾರ್ಯದಲ್ಲಿ ಖಂಡಿತ ಅಲ್ಲ. ಯೋಗರಾಜ್ ಭಟ್ ಒಮ್ಮೆ ಅಂದಿದ್ದರು " ನನಗೆ ಕಥೆಗಿಂತ ಆಸಕ್ತಿಯಿರುವುದು ಕ್ಯಾರೆಕ್ಟರ್ ಗಳ ಸೃಷ್ಟಿಯಲ್ಲಿ" ಅಂತ. ಕಥೆಗೂ ಕ್ಯಾರೆಕ್ಟರ್ ಗಳಿಗೂ ನಡುವೆ ಇರುವ ವ್ಯತ್ಯಾಸವನ್ನು ಅರಿತ ಸೂಕ್ಷ್ಮ ನಿರ್ದೇಶಕನೊಬ್ಬ ನಮ್ಮ ನಡುವೆ ಇರುವಾಗ ಅವನನ್ನು ತಾತ್ವಿಕ ಕದನಕ್ಕೆ ಈಡು ಮಾಡುತ್ತ ಕುಳಿತುಕೊಳ್ಳುವುದು ನ್ಯಾಯವಲ್ಲ. ಇಲ್ಲಿಯ ವರೆಗೆ ಬಂದ ಸಿನೆಮಾಗಳು ತೀರಾ ದರಿದ್ರವೆಂದು ಭಾವಿಸಿದ ಹೊತ್ತಿನಲ್ಲಿ ಮಾತ್ರವೇ ನಾವು ಪರ್ಯಾಯದ ಕುರಿತು ಚೂಪಾಗುತ್ತೇವೆ. ಆದರೆ ನಾವು ಇಲ್ಲಿಯವರೆಗಿನ ಬದಲಾವಣೆಗಳನ್ನು ಒಳಗೊಂಡೇ ಮುಂದಿನ ಪರ್ಯಾಯವನ್ನು ರೂಪಿಸುವುದು ಜಾಣತನ ಮತ್ತು ಗುಣಗ್ರಾಹಿತ್ವ.
೪
ಈ ಕೊಳಚೆಯಿಂದ ತಪ್ಪಿಸಿಕೊಂಡು ಬರುವ ಆಶೆ ಪ್ರತಿಯೊಬ್ಬ ಪ್ರೆಕ್ಷಕನಿಗೂ ಇರುತ್ತದೆ. ಆದರೆ ಹೇಳೋಣ ಯಾರಿಗೆ? ನಾವು ಇವತ್ತು ಎಷ್ಟು ದರಿದ್ರಗೊಂಡಿದ್ದೇವೆ ಎಂದರೆ ಒಂದು ಸಿನೆಮಾದಲ್ಲಿ ಆಗುವ ಯಾವುದೇ ಬದಲಾವಣೆ, ತಿರುವುಗಳನ್ನು ಯಾವುದೇ ತಾರ್ಕಿಕ ಕಾರಣಗಳ ಅನುಪಸ್ಥಿತಿಯಲ್ಲಿಯೂ ಆರಾಮಾಗಿ ಒಪ್ಪಿಕೊಂಡುಬಿಡುತ್ತೇವೆ. ಧೂಂ-೨ ನಲ್ಲಿ ಹೃತಿಕ್ ಜಲಪಾತದಿಂದ ಕೆಳಗೆ ಬಿದ್ದವನು ಮುಂದಿನ ದೃಶ್ಯದಲ್ಲಿ ಐಶ್ವರ್ಯ ಳೊಂದಿಗೆ ಆರಾಮಾಗಿ ಮಾತಾಡಿಕೊಂಡು ಇರುವುದನ್ನು ಆತ ಹೇಗೆ ಬದುಕಿ ಬಂದ ಎಂಬ ಪ್ರಶ್ನೆಯಿಲ್ಲದೇ, ವಂಶಿಯ ಕ್ಲೈಮ್ಯಾಕ್‌ನಲ್ಲಿ ಪುನೀತ್ ವಿಷ ಕುಡಿದೂ ಬದುಕುವುದನ್ನು ಅಚ್ಚರಿಯಿಲ್ಲದೇ ಆರಾಮಾಗಿ ಒಪ್ಪಿಕೊಳ್ಳುತ್ತೇವೆ. ಬಹುಷಃ ನಮಗೆ ಗೊತ್ತಿದೆ: ಇಲ್ಲಿ ಏನು ಬೇಕಾದರೂ ಆಗಬಹುದು. ನಾವು ಹುಡುಕುತ್ತಿರುವ ಪರ್ಯಾಯವನ್ನು ಇಲ್ಲಿ ಅನ್ವಯಿಸಿ ಹೇಳುವುದಾದರೆ, ಇದಕ್ಕೆ ಪರ್ಯಾಯ ಹೃತಿಕ್ ಜಲಪಾತದಿಂದ ಕೆಳಗೆ ಬಿದ್ದು-ಸಾಯುವುದಲ್ಲ. ಬದಲು ಜಲಪಾತದಿಂದ ಕೆಳಗೆ ಬೀಳುವ ಪುರಾತನ ಹೀರೋಯಿಕ್ ಕಾನ್ಸೆಪ್ಟ್ ಗಳ ಹೊರತಾದ ಲೋಕವೊಂದನ್ನು ಸಿನೆಮಾ ಜಗತ್ತು ಸೃಷ್ಟಿಸುವುದು.
ಸಿನೆಮಾ ಅಕಾಡೆಮಿಕ್ ವಲಯಗಳನ್ನು ಪ್ರವೇಶಿಸಿದರೆ ಕ್ಲಾಸಿಕ್ ಆಗುತ್ತದೆ ಇಂಡಿಯದಲ್ಲಿ. ಸಿನೆಮಾ ಹುಚ್ಚಿರುವ ನಮ್ಮಂಥವರು ಕಮರ್ಷಿಯಲ್ ಸಿನೆಮಾಗಳನ್ನೂ ಅಬ್‌ಸೆಸ್ಡ್ ಆಗಿ ನೋಡುವುದನ್ನು ಅಕಾಡೆಮಿಕ್ ವಲಯ ಫ್ಯಾಷನ್ ಎಂದೋ, ಶೋ ಆಫ್ ಎಂದೋ ಕರೆಯುತ್ತದೆ. ನಾವು ವಂಶಿ ಸಿನೆಮಾದಲ್ಲಿ ಪುನೀತ್ ಯಾಕೆ ಮೊದಲು ಉಲ್ಟಾ ಲಾಂಗ್ ಹಿಡಿಯುತ್ತಾನೆ ಎಂಬುದನ್ನು ತೋಷಿರೋ ಮ್ಯುಫಿನಿಯ ಕಣ್ಣಂಚಿನ ಮೊನೆಯಂಥ ನೋಟದ ಅಭಿನಯದ ಜೊತೆಗೇ ಚರ್ಚಿಸುತ್ತ ಬರುತ್ತೇವೆ. ಯಾವತ್ತಿನ ವರೆಗೆ ಈ ರೀತಿಯ ಛಿದ್ರಕ್ಕೊಳಗಾದ ಮನಸ್ಥಿತಿಗೆ ಪರ್ಯಾಯವಿಲ್ಲವೋ ಸಿನೆಮಾ ಕುರಿತಾದ ಚರ್ಚೆಯನ್ನು ಅಳಕ್ಕೆ ಇಳಿಸುವುದೂ ಕಷ್ಟ ಸಾಧ್ಯ.
ನಮ್ಮಲ್ಲಿರುವ ಸಿನಿ ಪತ್ರಕರ್ತರು( ಕನ್ನಡ ಪ್ರಭ ವನ್ನುಳಿದು) ಎಷ್ಟು ಅಸೂಕ್ಷ್ಮರು ಎಂದರೆ ಇಲ್ಲಿಯ ವರೆಗೆ ನಾನು ಒಂದು ಸರಿಯಿರುವ ವಿಮರ್ಶೆ ಓದಿಲ್ಲ. ಕೆಲವು ಪತ್ರಕರ್ತರು ’ದಾಸ’ ಚಿತ್ರವನ್ನು ಯಾವ್ಯಾವುದೋ ಜಗತ್ತಿನ ಕ್ಲಾಸಿಕ್ ಚಿತ್ರಗಳಿಗೆ ಕಂಪೇರ್ ಮಾಡಿ ಅದರಲ್ಲಿ ಏನೇನೂ ಕ್ಲಾಸಿಕಲ್ ಗುಣವಿಲ್ಲ ಎಂಬ ಥರದ ಕಾಮೆಂಟ್ ಗಳನ್ನೆಲ್ಲ ಬರೆಯುತ್ತಾರೆ. ಒಂದು ಸಿನೆಮಾ ಜಗತ್ತು ಬದಲಾಗುತ್ತಿರುವ ಮತ್ತು ಬದಲಾಗಬೇಕಾದ ಹಾದಿಯ ಕುರಿತು ಬರೆಯಬೇಕಾದ ಇವರ ಅಜ್ನಾನದಲ್ಲಿ ನಾವು ನಲುಗಬೇಕಿದೆ. ಕನ್ನಡದ ಯಾವುದೇ ಪತ್ರಿಕೆ ಪುನೀತ್ ವಂಶಿಯಲ್ಲಿ ಮೊದಲು ಮಚ್ಚನ್ನು ಉಲ್ಟಾ ಹಿಡಿಯುತ್ತಾನೆ- ಯಾಕೆ ಎಂದು ಗುರುತಿಸಲಿಲ್ಲ. ಅದರಲ್ಲಿನ ನಾಯಕನ ಅಸಹಾಯಕತೆಯನ್ನು ಗುರುತಿಸಲಿಲ್ಲ. ಸ್ಲಂ ಬಾಲ ಕನ್ನ ಚಿತ್ರ ರಂಗಕ್ಕೆ ತಂದ ತಿಳಿಯನ್ನು ಯಾರೂ ಬರೆಯಲಿಲ್ಲ. ಅದು ಡಾಕ್ಯುಮೆಂಟರಿ ಅಂದರು. ರೌಡಿಯೊಬ್ಬನ ಹಿಸ್ಟರಿ ಅಂದರು. ಕನ್ನಡದಲ್ಲಿ ಯಾವ ಚಿತ್ರವೂ ನಾಯಕನ ಮರಣಾನಂತರ ಒಂದು ಕ್ಷಣವೂ ಮುಂದುವರೆಯುವುದಿಲ್ಲ( ನಾಯಕ ಕ್ಲೈಮ್ಯಾಕ್ಸ್ ನಲ್ಲಿ ಸತ್ತರೆ). ಆದರೆ ಸ್ಲಂ ಬಾಲ ಅದನ್ನು ಮಾಡಿತು. ಇವುಗಳನ್ನು ಒಬ್ಬ ಪತ್ರಕರ್ತ ಗುರುತಿಸಿದ್ದರೆ ಹೀಗೆಲ್ಲ ಪರ್ಯಾಯ ಪರ್ಯಾಯ ವೆಂದು ಬಾಯಿ ಬಡಕೊಳ್ಳುವ ಅಗತ್ಯವಿರಲಿಲ್ಲ. ಈ ಸೂಕ್ಷ್ಮ ಚಿತ್ರಗಳ ಟ್ರೆಂಡ್ ಅನ್ನೇ ನಾವು ಬೆಳೆಸಬಹುದಿತ್ತು. ಪೋಷಿಸಬಹುದಿತ್ತು.
ಹೌದು, ಉಲ್ಟಾ ಲಾಂಗ್ ಹಿಡಿಯುವ ಒಂದು ಇಮೇಜ್ ಯಾಕೆ ರೌಡಿಸಂ ಸಿನೆಮಾಗಳ ಸೆನ್ಸ್ ಗೆ ಪರ್ಯಾಯ ಯಾಕಲ್ಲ?
೫
ಇನ್ನೊಂದು ಉದಾಹಾರಣೆ. ಕಾಸರವಳ್ಳಿಯವರ ಗುಲಾಬಿ ಟಾಕೀಸ್ ನಲ್ಲಿ ದೃಶ್ಯ ಮಾಧ್ಯಮ, ಧಾರಾವಾಹಿ ಇತ್ಯಾದಿಗಳನ್ನು ಮಾಕ್ ಮಾಡುತ್ತ ಒಂದು ಟಿ.ವಿ ಸೀರಿಯಲ್ಲಿನ ತುಣುಕನ್ನು ತೋರಿಸುತ್ತಾರೆ. ಪಾತ್ರಗಳ ಭಾವಾಭಿವ್ಯಕ್ತಿ, ಸಿಟ್ಟು, ಹಾತಾಶೆ ಗಳನ್ನು ಬಿಂಬಿಸಲು ಅವಕ್ಕೆ ಅಭಿನಯ ಬರ್ಲೇ ಬೇಕಿಲ್ಲ. ಅದನ್ನು ಹೇಗೆ ವಿಷುಯಲ್ ಮೀಡಿಯ ಗ್ರಾಫಿಕಲ್ ಆದ ಸರನ್ನಾಗಿ ಪರಿವರ್ತಿಸುತ್ತದೆ ಅಂತ ಹೇಳುವ ಸಂಯೋಜನೆ ಅದು. ಆ ಸಿನೆಮಾವನ್ನು ನಾನು ಇನ್ನೂರು ಜನರ ನಡುವೆ ನೋಡಿದ್ದು. ಸಾಹಿತ್ಯಾಸಕ್ತರೂ, ಸಿನೆಮಾದ ಗಂಭೀರ ನೋಡುಗರು ಅವರೆಲ್ಲ. ಕೆಲವರು ಹೊಸತಾಗಿ ಸಿನೆಮಾವನ್ನು ಗಂಭೀರವಾಗಿ ನೋಡಲು ಕಲಿಯುತ್ತಿರುವವರು. ಎಲ್ಲರೂ ಆ ಸಂಯೋಜನೆಯ ತೀವ್ರ ಸಾರ್ಕ್ಯಾಷ್ಟಿಕ್ ಆದ ವ್ಯಂಗ್ಯವನ್ನು ಅರಿತು ನಕ್ಕರು. ನಿರ್ದೇಶಕನ ವಿಷನ್ ಅನ್ನು ಗ್ರಹಿಸಿ ಅವನನ್ನು ಕೊಂಡಾಡಿದರು.
ಕೆಲವು ದಿನದ ಬಳಿಕ ನಾನು ವಂಶಿ ನೋಡಿದೆ. ಸ್ಲಂ ಬಾಲ ನೋಡಿದೆ. ಮತ್ತೊಮ್ಮೆ ಪೇಜ್ ೩ ನೋಡಿದೆ. ವೆಡ್‌ನೆಸ್‌ಡೆ ಕೂಡ. ಈ ಎಲ್ಲ ಚಿತ್ರಗಳಲ್ಲೂ ಮೀಡಿಯ ಇದೆ. ಕೇವಲ ಮಾಕ್ ಆಗಿ ಅಷ್ಟೇ ಅಲ್ಲದೇ ಮೀಡಿಯಾದ ಪೊಲಿಟಿಕ್ಸ್ ಅನ್ನೂ ಒಳಗೊಳ್ಳುವ ಚಿತ್ರಗಳು ವೆಡ್‌ನೆಸ್‌ಡೆ ಮತ್ತು ಪೇಜ್ ೩. ಜನರಿಗೆ ಸುದ್ಧಿಯ ಹಸಿವು ಹುಟ್ಟಿಸುವ ವರದಿಗಾರ್ತಿಗೇ ಸುದ್ದಿಯ ಹಸಿವು ಹುಟ್ಟಿಸುವ ಕೇಂದ್ರ ಪಾತ್ರ, ಅವನ ಗೇಮ್. ಸುದ್ದಿಯ ದಾಹದ ಪೇಜ್ ೩ ಇತ್ಯಾದಿ. ಈ ವೆಡ್‌ನೆಸ್‌ಡೆ ಯನ್ನು ಮೋದಿ ನೋಡಿದರು ಅನ್ನುವುದು ಕೂಡ ಸುದ್ಧಿ ಮತ್ತೊಮ್ಮೆ.
ವಂಶಿಯಲ್ಲಿಯೂ ಮೀಡಿಯಾ ಇದೆ. ವ್ಯಕ್ತಿಯೊಬ್ಬನ ವೈಯಕ್ತಿಕ ಬದುಕನ್ನು ಅವು ಕಲಕುವ ಚಿತ್ರವಿದೆ. ಒಪ್ಪಿಕೊಳ್ಳಲಾಗದ ಮೀಡಿಯಾದ ಇನ್‌ಫ್ರಿಂಜ್‌ಮೆಂಟ್ ಅನ್ನು ಆ ಚಿತ್ರ ತೋರಿಸುತ್ತದೆ. ಆದರೆ ಇದನ್ನು ಯಾಕೆ ಯಾರೂ ಒಂದು ಸಾದಾ ಕಮರ್ಷಿಯಲ್ ಚಿತ್ರಗಳೊಳಗಿನ ಕ್ಲಾಸಿಕ್ ಗುಣವಾಗಿ ಗ್ರಹಿಸುವುದಿಲ್ಲ.. ಅಥವಾ ’ಗ್ರಹಿಸ’ ಬೇಕಾದರೂ ಯಾಕೆ? ಒಂದು ಆಟಕ್ಕೆ ಎಂಟು ನೂರು ಜನ ತುಂಬುವ ಕಮರ್ಷಿಯಲ್ ಸಿನೆಮದಲ್ಲಿ ಈ ರೀತಿಯದ್ದೊಂದು ಎಲಿಮೆಂಟನ್ನು ಗುರುತಿಸಲು ಜನರಿರುವುದಿಲ್ಲ. ಇನ್ನೂರು ಜನ ಬುದ್ಧಿವಂತರು ಕೂತು ನೋಡುವ ಸಿನೆಮದಲ್ಲಿ ಈ ಒಂದು ಎಲಿಮೆಂಟನ್ನು ನೋಡಿ ನಾವು ’ಹೊಸತು’ ಎನ್ನುತ್ತೇವೆ.
ಏಕೆಂದರೆ ಆ ಜನ ಯಾವತ್ತೂ ವಂಶಿ ನೋಡುವುದೇ ಇಲ್ಲ.
ಕಾಸರವಳ್ಳಿಯವರ ವ್ಯಂಗ್ಯ ರೂಪಕಕ್ಕಿಂತ ವೆಡ್‌ನೆಸ್‌ಡೆ ಯಲ್ಲಿ ಮೀಡಿಯಗಳ ಹುಳುಕು ಬಯಲು ಮಾಡುವ ನೈಜ ಇಮೇಜ್ ಗಳು ಪರಿಣಾಮಕಾರಿಯಾಗಿವೆ. ಮತ್ತು ಹೆಚ್ಚು ಪರ್ಯಾಯದ ನೆಲೆಯಲ್ಲಿವೆ.
ಒಡಕು ಗಳ ಕುರಿತು ಮಾತಾಡಬಾರದು ಎಂದರೂ ’ನನ್ನ ಸಂಧರ್ಭದಲ್ಲಿ ಪರ್ಯಾಯ ಸಿನೆಮಾ’ ಎಂಬುದರ ಬಗ್ಗೆ ಬರೆಯುವಾಗ ಮೇಲಿನ ಒಡಕುಗಳೆ ಕಾಣಿಸುತ್ತವೆ. ಬಹುಸಂಖ್ಯಾತರು ಬೆಂಬಲಿಸಿದ್ದರ, ನೋಡಿದ್ದರ ಒಡ್ಡೊಲಗವನ್ನು ನಾನು ಸಮರ್ಥಿಸುತ್ತ ಕಲಾತ್ಮಕ ಹೋಳನ್ನು ಜರಿಯುತ್ತಿಲ್ಲ. ಬಹುಸಂಖ್ಯಾತರು ಬೆಂಬಲಿಸಿದ ಅಭಿಪ್ರಾಯವೇ ಯಾವತ್ತಿಗೂ ಸರಿ ಇರಬೇಕೆಂದೇನೂ ಇಲ್ಲ ಎಂದು ಸಾಕ್ರೆಟಿಸ್ ಹೇಳಿದ್ದೂ ಗೊತ್ತಿದೆ. ಕಡೆಗೆ ಅದೇ ಬಹುಜನರ ಅಭಿಪ್ರಾಯದ ಮೇರೆಗೆ ಅವನನ್ನು ಕೊಂದುಹಾಕಿದ್ದೂ ಗೊತ್ತಿದೆ.
೬
ನಮ್ಮಂಥ ಕೆಲವರ ಪರ್ಯಾಯದ ದೃಷ್ಟಿಕೋನ, ಆಶೆಗಳು ಎಲ್ಲರದ್ದೂ ಆಗಲಾರದು- ಸಿನೆಮಾ ಒಂದು ಬಹುಜನ ಮಾಧ್ಯಮವಾದ್ದರಿಂದ. ಒಬ್ಬನ ಪರ್ಯಾಯ ಖಂಡಿತ ಇನ್ನೊಬ್ಬನ ಪರ್ಯಾಯವಲ್ಲ. ಈ ಮಾತಿಗೆ ಜಸ್ಟಿಫಿಕೇಷನ್ ಬೇಕೆಂದರೆ ಸಿನೆಮಾ ಬಿಟ್ಟಾಗ ಹೊರ ಬರುವ ಜನ ವೈಯಕ್ತಿಕ ಅಭಿಪ್ರಾಯಗಳನ್ನು ಕೇಳಬಹುದು. ನನಗೆ ಎಲ್ಲ ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಈ ಎಲ್ಲ ಒಡಕು, ಅಹಂಕಾರಗಳ ಮಧ್ಯೆ ಪರ್ಯಾಯಕ್ಕೆ ಸಮಾನಾಂತರವಾಗಿ ಕಾಣುತ್ತಿರುವ ಒಂದೇ ಪದ ಎಂದರೆ: ಒಳ್ಳೆಯ ಸಿನೆಮಾ. ಜನ ನೋಡುವಂಥ, ಕೇವಲ ಮೋಜಿಗಲ್ಲದೇ, ಕೇವಲ ಸುಖಕ್ಕಲ್ಲದೇ, ಬುದ್ದಿಗೆ-ವೈಚಾರಿಕತೆಯ ಉದ್ದೀಪ್ತಿಗಾಗಿ ಮಾತ್ರವಲ್ಲದೇ, ’ಅದಕ್ಕೂ’,’ಇದಕ್ಕೂ’,’ಎದಕ್ಕೂ’ ಅಲ್ಲದೇ ನೋಡುವ ಒಳ್ಳೆಯ ಸಿನೆಮಾ.
ಇದೊಂದು ರೀತಿಯಲ್ಲಿ ’ಪೂರ್ ಥಿಯೇಟರ್’ ನ ಕ್ರಮ. ಕಳಕೊಳ್ಳುತ್ತ ಪೂರ್ಣವಾಗುವುದು. ಜನರನ್ನು ರಂಜಿಸುವ ಆಶೆಯನ್ನು ಸಿನೆಮಾ ಕಳಕೊಳ್ಳೂವುದು. ಕೇವಲ ಹಣ ಮಾಡುವ ಆಶೆಯನ್ನು ನಿರ್ಮಾಪಕ ಕಳಕೊಳ್ಳುವುದು. ದುಃಖ ದ ಸನ್ನಿವೇಶದಲ್ಲಿಯೂ ಫಾಸ್ಟ್ ಬೀಟ್ಸ್ ಹಾಕುವ ಚಪಲವನ್ನು ಸಂಗೀತ ನಿರ್ದೇಶಕ ಕಳಕೊಳ್ಳುವುದು. ಕಥೆ ಕದಿಯುವ ಚಟವನ್ನು ಕಥೆ ಹೊಸೆಯುವವ ಕಳಕೊಳ್ಳುವುದು. ಹೀರೋಯಿಸಂ ನನ್ನು ಹೀರೋ ಕಳಕೊಳ್ಳುವುದು. ಹುಸಿ ಮುನಿಸು ಮತ್ತು ಲಲ್ಲೆಯನ್ನು ನಾಯಕಿ ಕಳಕೊಳ್ಳುವುದು. ಜನರ ನೀಡ್ ನನ್ನು ಗಮನಿಸಿ ಅವರಿಗೆ ಬೇಕಾದ್ದನ್ನು ಮಾತ್ರವೇ ಇಟ್ಟು ಒಳ್ಳೆಯ ದೃಶ್ಯಗಳನ್ನು ಕತ್ತರಿಸುವ ದುಷ್ಟತನವನ್ನು ಸಂಕಲನಕಾರ ಕಳಕೊಳ್ಳುವುದು.
- ಮತ್ತು ಸಿನೆಮಾದ ವಿನ್ಯಾಸ, ಆಶಯ, ಬಿಗಿ, ವಿಷನ್ ಅನ್ನು ನಿರ್ದೇಷಕ ಕಳಕೊಳ್ಳದೇ ಇರುವುದು.
ಇಷ್ಟೂ ಪರ್ಯಾಯವಾಗಿ ಕಾಣಿತ್ತಿದೆ ನನಗೆ. ಇವೂ ಬಿಚ್ಚಿಟ್ಟ ಪಿರಮಿಡ್ಡಿನ ಇಟ್ಟಿಗೆಗಳಂತೆ ಕಾಣುತ್ತಿವೆಯೇ?
ಇರಲಿ.
೭
ಸ್ವಲ್ಪ ನೇರ ಹೇಳೋಣ: ವಂಶಿ ಒಳ್ಳೆಯ ಪರ್ಯಾಯ ಸಿನೆಮ; ಸೆನ್ಸ್ ನ ದೃಷ್ಟಿಯಿಂದ. ವೆಡ್‌ನೆಸ್‌ಡೆ ಪೂರ್ಣ ಪರ್ಯಾಯ; ಎಸೆನ್ಸ್ ಮತ್ತು ವಿಷನ್ ನ ದೃಷ್ಟಿಯಿಂದ. ಅದು ಇಲ್ಲಿಯವರೆಗೆ ಬಂದ ಏಕಮುಖವಾದ ಆರ್ಗ್ಯ್ಯುಮೆಂಟ್‌ಗಳನ್ನು ಎಷ್ಟು ಚಂದ ಕತ್ತರಿಸಿತು.. ಪರ್ಯಾಯಕ್ಕೆ ಮತ್ತೊಂದು ಮಜಬೂತಾದ ಉದಾಹಾರಣೆ ಎಂದರೆ ಸ್ಲಂ ಬಾಲ. ವಿಜಯ್ ಎಂಬ ಒಭ್ಭ ಕಪ್ಪು ಅನ್ಟ ಇಳ್ಳಿ ಎಮರ್ಜ್ ಆಗದೇ ಹೋಗಿದ್ದರೆ ಸ್ಲಂ ನ ಕುರಿತಾದ ಚಿತ್ರವೊಂದು ಇಷ್ಟು ಆಳದಲ್ಲಿ ಬರುತ್ತಲೇ ಇರಲಿಲ್ಲ. ವಿಜಯ್ ಇಲ್ಲಿ ಒಂದು ಕಾರಣ ಮಾತ್ರ. ಕೇವಲ ಅವನ ಅಪೀಯರೆನ್ಸ್ ಯಾರೂ ಮುಟ್ಟದ ಒಂದು ಲೋಕದ ಕಥೆಯನ್ನು ಇಲ್ಲಿ ಸಾಧ್ಯವಾಗಿಸಿತು. ಇದನ್ನೇ ನಾನು ಒಂದು ಇಟ್ಟಿಗೆ ಕಲ್ಲಿನ ಹೊಳಪು ಇಡಿ ಪಿರಾಮಿಡ್ಡಿಗೇ ಕಾಂತಿಯನ್ನು ಕೊಟ್ಟೀತು ಎಂದಿದ್ದು. ಅಲ್ಲದೇ ನಮ್ಮಲ್ಲಿ ಇನ್ನೂ ಅನೇಕ ನಟರಿದ್ದರೆ. ತಮ್ಮನ್ನು ನಟನೆಯಲ್ಲಿಯೂ, ಅಪೀಯರೆನ್ಸ್ ನಲ್ಲಿಯೂ ಯಾವತ್ತೂ ಸ್ಲಮ್ ಎಂದು ಒಪ್ಪಿಕೊಳ್ಳದವರು.
೮
ಸುಬ್ಬಣ್ಣ ಬರೆದಿದ್ದರು. ಒಬ್ಬ ದಲಿತ ತನ್ನ ಗರ್ವದಿಂದ ಒಬ್ಬ ಬ್ರಾಹ್ಮಣನಿಗೆ ಸರೀಕನಾಗಬೇಕು ಮತ್ತು ಒಬ್ಬ ಬ್ರಾಹ್ಮಣ ತನ್ನ ವಿನಯದಿಂದ ದಲಿತನನ್ನು ಬಾಗಿ ಸಮೀಪಿಸಬೇಕು. ಆಗ ಒಂದು ಬದಲಾವಣೆ ಸಾಧ್ಯ ಅಂತ. ಅದನ್ನು ಇಲ್ಲಿಗೆ ಸ್ವಲ್ಪ ತಂದುಕೊಂಡು ನೋಡುವುದಾದರೆ, ನಾವು ಕಮರ್ಷಿಯಲ್ ಚಿತ್ರಗಳ ದಲಿತರು ’ಒಳ್ಳೆಯ’ ಸಿನೆಮಾಗಳಿಂದ ಅವರಿಗೆ ಸರೀಕರಾಗಬೇಕಿದೆ. ಅವರು ನಮ್ಮ ಕಮರ್ಷಿಯಲ್ ಕೇರಿಗಳಲ್ಲೂ ಪರ್ಯಾಯ ಸಾಧ್ಯವಿದೆ ಎಂದು ಅರಿತುಕೊಂಡು ಅಥವ ಅದಕ್ಕೆ ಸಹಕರಿಸುತ್ತ ಇತ್ತ ಬಾಗಬೇಕಿದೆ. ಆಗ ಪರ್ಯಾಯ ಮಾತ್ರವಲ್ಲ. ಈ ಡಾಳಾದ ಒಡಕುಗಳ ಛಾಯೆಯೂ ಮಸುಕಾದೀತು.
ನಾನಿಲ್ಲಿ ಯಾವುದೇ ವೆನಮ್ ನಿಂದ ಕಲಾತ್ಮಕ ಚಿತ್ರಗಳನ್ನು ದೂರುತ್ತಿಲ್ಲ. ಇಲ್ಲಿ ಎಂಥ ಪರಿಸ್ಥಿತಿಯಿದೆ ಅಂದರೆ ನಾನು ಕ್ಲಾಸಿಕಲ್ ಚಿತ್ರಗಳನ್ನೂ ಇನ್ನಿತರ ಚಿತ್ರಗಳಷ್ಟೇ ನೋಡುತ್ತೇನೆ ಎಂದು ಘೋಷಿಸದ ಹೊರತು ಈ ಹೋಳುಗಳ ಕುರಿರು ನಾನು ಮಾತನಾಡಲೂ ಅಸಾಧ್ಯ.
ನಾವು ಪರ್ಯಾಯವನ್ನು ಬಯಸುತ್ತಿರುವುದು ಕಳಪೆ ಗುಣಮಟ್ಟದಿಂದ. ಏಕಾತಾನತೆಯಿಂದ. ಇನ್ನೂ ಅನೇಕ ಕಾರಣದಿಂದ. ಮೊನ್ನೆ ಅಚ್ಚರಿಯಾಯಿತು. ಕುರಾಸೋವಾನಲ್ಲಿಯೂ ಅಂಥದ್ದೊಂದು ರಿಪಿಟೇಷನ್ ಕಂಡು. ಎರಡು ಚಿತ್ರಗಳದ್ದೂ ಸುಮಾರಾಗಿ ಒಂದೇ ಕಾನ್ಸೆಪ್ಟ್. ಎರಡರ ನಾಯಾಕನೂ ಮ್ಯುಫಿನಿ ಯೇ. ಆ ಚಿತ್ರಗಳೆಂದರೆ ಯುಝಿಂಬೋ ಮತ್ತು ಝಾಂಬಿರೋ. ಹತ್ತಿರ ಹತ್ತಿರ ಒಂದೆ ಥರದ ಕಥೆಯಿರುವ ಸಿನೆಮಾಗಳವು. ನಮ್ಮಲ್ಲಿ ಮರ್ಡರ್ ಮತ್ತು ಹವಸ್ ಬಂದಂತೆ. ಆದರೆ ಅವಕ್ಕೆ ಮತ್ತೆ ಕುರಾಸೋವನೇ ಪರ್ಯಾಯ; ಸೆವೆನ್ ಸಾಮುರಾಯ್ ಮೂಲಕ. ಅದೂ ಅದೇ ಸಾಮುರಾಯ್ ಸಂಸ್ಕೃತಿಯಿಂದ ಹುಟ್ಟಿದ್ದಾದರೂ ಅದು ಬೇರೆಯದ್ದೇ ಸಿನೆಮಾ. ಇದು ಅಂತರ್ ಪರ್ಯಾಯಕ್ಕೆ ಒಂದು ಎಕ್ಸಾಂಪಲ್.
ಈ ಇಡೀ ಬರಹವನ್ನು ಬರೆಯುತ್ತ ಕಾಡಿದ ಒಂದೇ ಭಾವವೆಂದರೆ- ಸಿಟ್ಟು. ಕಲಾತ್ಮಕತೆಯನ್ನು ಅಹಂಕಾರ ಮುಚ್ಚಿದುದರ ಬಗೆಗಿನ ಸಿಟ್ಟು. ಕೆಟ್ಟ ಚಿತ್ರಗಳನ್ನೂ ನಾವು ನೋಡಲೇ ಬೇಕಾದ ಹಾಗೆ ಮಾಡಿದ ಒಳ್ಳೆಯ ಚಿತ್ರಗಳ ಅನುಪಸ್ಥಿತಿಯೆಡೆಗಿನ ಸಿಟ್ಟು.
ಮತ್ತು, ಸಿನೆಮಾ ಲೋಕದ ಛಿದ್ರಗಳು ಮತ್ತು ಈ ಪರ್ಯಾಯ ಮಾರ್ಗವೇ ಮತ್ತೊಂದು ಛಿದ್ರವಾಗಿ ನಿಲ್ಲಬಹುದಾದ ಸಾದ್ಯತೆಯೆಡೆಗಿನ ಸಿಟ್ಟು. ತುಂಬ ದುರಹಂಕಾರಿಗಳಾಗುವುದು ಬೇಡ. ಮಾಸ್ ಆದ ಸಿನೆಮಾವೊಂದನ್ನು ಪ್ರತಿಯೊಬ್ಬ ವ್ಯಕ್ತಿಯ ಅನುಭವವನ್ನಾಗಿಯೂ ಮಾಡಬೇಕಿರುವುದು- ಒಂದು ಒಳ್ಳೆಯ ಸಿನೆಮಾದ ಸೃಷ್ಟಿಯ ಸಾಧ್ಯತೆ. ಪರ್ಯಾಯವೆನ್ನಬಹುದಾದರೆ ಇದೇ. ನನ್ನ ಸಂಧರ್ಭದಲ್ಲಿ ಪರ್ಯಾಯ ಸಿನೆಮಾ ಬೇಕು ಎಂದು ನಾನು ಹೇಳಬಲ್ಲೆನೇ ಹೊರತು ಅದರ ಸ್ವರೂಪವನ್ನು ಕುರಿತು ನಾನು ಗಾಂಧಿ ಕ್ಲಾಸಿನ ಪ್ರೇಕ್ಶಕನೊಂದಿಗೆ ಚರ್ಚಿಸದೇ ನಿರ್ಧರಿಸಲಾರೆ. ಒಂದೊಮ್ಮೆ ನಾನು ಹಾಗೆ ಮಾಡದೇ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಮಾತ್ರವೇ ಸೂಚಿಸಿದೆನಾದರೆ ಸಿನೆಮಾದ ಮೂಲ ಮತ್ತು ಸ್ಥೂಲ ಕಲ್ಪನೆಯಾದ ಮಾಸ್ ಅನ್ನು ನಾನು ನಿರ್ಲಕ್ಷಿಸುತ್ತೇನೆ. ತನ್ಮೂಲಕ ಸಿನೆಮಾಕ್ಕೂ ಮತ್ತಿತರ ಏಕವ್ಯಕ್ತಿ ಮಾಧ್ಯಮಗಳಿಗೂ ಇರುವ ಮುಖ್ಯ ಸಾಧ್ಯತೆ, ವ್ಯತ್ಯಾಸವನ್ನೇ ನಾನು ಅಗಣಿಸಿದಂತೆ.
ಒಂದು ವೈಯಕ್ತಿಕ ಅನುಭವ ಹಾಗೂ ಕಾಂಟ್ರಡಿಕ್ಷನ್ ನೊಂದಿಗೆ ಇದನ್ನು ಮುಗಿಸೋಣ.
ಶಿವಮೊಗ್ಗದ ರಸ್ತೆಯಲ್ಲಿ ನಾನು ಎಂಬ್ರಾಯೆಡರಿ ದಾರ ಹುಡುಕಿಕೊಂಡು ಹೋಗುತ್ತಿದ್ದೆ. ಒಂದು ಅಂಗಡಿಯಲ್ಲಿ ಕೇಳಿದಾಗ ಆತ- ಎಂಬ್ರಾಯೆಡರಿ ದಾರವಿಲ್ಲ, ಸಾದಾ ಹೊಲಿಗೆ ದಾರ ಕೊಡಲೆ ಎಂದು ಕೇಳಿದ. ನಾನು ಬೇಡವೆಂದು ಬಂದೆ. ಕೊಂಚ ದೂರ ನಡೆದಾಗ ಹೆಂಗಸೊಬ್ಬಳು ದಾರಿ ಬದಿಯಲ್ಲಿ ದೇವರ ಫೋಟೊ ಮಾರುವವನ ಹತ್ತಿರ ಸಾಯಿಬಾಬಾನ ಫೋಟೋ ಇದೆಯೇ ಎಂದು ಕೇಳಿದಳು. ಅವನು, ಇಲ್ಲ ಆದರೆ ಹನುಮಂತನ ಫೋಟೋ ಇದೆ ಕೊಡಲೆ ಎಂದ.
ಒಂದಕ್ಕಿನ್ನೊಂದರ ಪರ್ಯಾಯವೆಂದರೆ ಇದು.
ಮತ್ತು,
ಇದು ಖಂಡಿತ ಪರ್ಯಾಯವಲ್ಲ.