ಖಾಸಗಿ ವಾಹಿನಿಗಳಲ್ಲಿ ಪ್ರಸಾರ ಗೊಳ್ಳುತ್ತಿರುವ ರಿಯಾಲಿಟಿ ಶೋ ಗಳು ಮಕ್ಕಳ ಪ್ರತಿಭಾನ್ವೇಷಣೆಯ ಹೆಸರಿನಲ್ಲಿ ಮಕ್ಕಳನ್ನು ಮಾನಸಿಕವಾಗಿ ನೋಯಿಸುತ್ತಿದೆ ಎಂಬ ಆರೋಪವಿರುವ ಬೆನ್ನಲ್ಲೇ ಸೋಮವಾರ ರಾತ್ರಿ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಂಡ ರಿಯಾಲಿಟಿ ಶೋ "ಪ್ಯಾಟೆ ಹುಡ್ಗೀರ ಹಳ್ಳಿ ಲೈಫು" ವಿನಲ್ಲಿ ಪುಟ್ಟ ಬಾಲಕನೊಬ್ಬನಿಗೆ ಯುವತಿಯರಿಬ್ಬರು ಚಿತ್ರ ಹಿಂಸೆ ನೀಡುವ ದೃಶ್ಯಗಳು ವ್ಯಾಪಕ ಟೀಕೆಗೆ ಕಾರಣವಾಗಿದೆ. ಸೋಮವಾರ ರಾತ್ರಿ ಪ್ರಸಾರಗೊಂಡ ಬಾಲಕನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುವ ದೃಶ್ಯಗಳ ಪೈಕಿ ಕೆಲವು ದೃಶ್ಯಗಳು,ಮಂಗಳವಾರ ಅಪರಾಹ್ನದ ಸಂಚಿಕೆಯಲ್ಲಿ ಮರುಪ್ರಸಾರಗೊಂಡಿದೆ.
ವಾಹಿನಿ ಈಗಾಗಲೇ ಹೇ ಳಿಕೊಂಡಂತೆ ವಾಹಿನಿಯ ಈ ಪ್ಯಾಟೆ ಹುಡ್ಗೀರ ಹಳ್ಳಿ ಲೈಫು ಕಾರ್ಯಕ್ರಮ ಒಂದು ರಿಯಾಲಿಟಿ ಶೋ. ಮನರಂಜನೆ ಯನ್ನು ಮಾತ್ರ ಕೇಂದ್ರವಾಗಿರಿಸಿಕೊಂಡು ಮುನ್ನಡೆಯುತ್ತಿರುವ ಈ ವಾಹಿನಿ ತನ್ನ ರಿಯಾಲಿಟಿ ಶೋ ಗೆ ಪುಟ್ಟ ಬಾಲಕನೊಬ್ಬನನ್ನು ಬಳಸಿಕೊಂಡಿದ್ದು ನಗ್ನವಾಗಿ ತೋರಿಸಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡಿದೆ.
"ಬಾಗಲಕೋಟೆಯ ಕೆರ್‌ಕಲ್ ಮಟ್ಟಿ ಎಂಬ ಹಳ್ಳಿಯ ಮನೆಯೊಂದರಲ್ಲಿ ಸುಮಾರು ೬ ವರ್ಷದ ಪುಟ್ಟ ಬಾಲಕನೊಬ್ಬನೊಂದಿಗೆ ವಾಗ್ವಾದಕ್ಕಿಳಿಯುವ ಪ್ಯಾಟಿ ಹುಡ್ಗಿಯರಿಬ್ಬರು, ಬಾಲಕನ ಅಂಗಿಯ ಬಟನ್ ಗಳನ್ನು ತೆಗೆಯುತ್ತಾರೆ, ಇದಕ್ಕೆ ಬಾಲಕ ವಿರೋಧ ವ್ಯಕ್ತಪಡಿಸುತ್ತಿರುವಂತೆಯೇ ಇಬ್ಬರೂ ಸೇರಿ ಬಾಲಕ ಧರಿಸಿದ್ದ ಪ್ಯಾಂಟ್ ಅನ್ನು ಎಳೆದು ತೆಗೆಯುತ್ತಾರೆ. ಬಾಲಕ ಸಿಟ್ಟಿನಿಂದ ಹುಡ್ಗೀರ ವರ್ತನೆಗೆ ಪ್ರತಿರೋಧ ತೋರುತ್ತನಾದರೂ, ಲೆಕ್ಕಿಸದ ಹುಡ್ಗೀರು ಬಾಲಕನ ಎರಡೂ ಕೈಗಳನ್ನು ಹಿಂದಕ್ಕೆ ಹಿಡಿದುಕೊಂಡು ಬಾಲಕ ಧರಿಸಿದ್ದ ಚಡ್ಡಿಯನ್ನೂ ಎಳೆಯುತ್ತಾರೆ, ತುದಿ ಕತ್ತರಿಸುತ್ತೇನೆ ಎಂದೆಲ್ಲಾ ಹೊಲಸು ಮಾತನಾಡುತ್ತಾರಲ್ಲದೆ, ಈ ದೃಶ್ಯದುದ್ದಕ್ಕೂ ಬಾಲಕನನ್ನು ಅವಾಚ್ಯವಾಗಿ ನಿಂದಿಸುವ ಮಾತುಗಳು ಕೇಳಿ ಬರುತ್ತದೆ.
ವಿವಸ್ತ್ರಗೊಂಡ ಬಾಲಕನನ್ನು ಇಬ್ಬರು ಯುವತಿಯರು ಜೋರಾಗಿ ನಕ್ಕು ಅವಮಾನಿಸುತ್ತಾರಲ್ಲದೆ, ಈ ಗೆಲ್ಲಿ ನಿನ್ನ ಪೊಗರು ಎಂಬೆಲ್ಲಾ ಅರ್ಥ ಬರುವಂತೆ ಮಾತನಾಡುವ ಸನ್ನಿವೇಶಗಳು ಮುಂದಿನ ದೃಶ್ಯಗಳಲ್ಲಿ ಅಡಕವಾಗಿದೆ. ಕೊನೆಯಲ್ಲಿ ಹುಡ್ಗೀರ ವರ್ತನೆಗೆ ಆಕ್ರೋಶಗೊಂಡ ಬಾಲಕ ಕತ್ತಿ ಹಿಡಿದು ಹುಡ್ಗಿಯರನ್ನು ಬೆದರಿಸಿ ಬೆನ್ನಟ್ಟುವ ದೃಶ್ಯಗಳನ್ನು ವಾಹಿನಿ” ಹೊಡಿ ಮಗ..ಹೊಡಿ ಮಗಾ ಹಿನ್ನೆಲೆ ಹಾಡಿನೊಂದಿಗೆ ಪ್ರಸಾರ ಮಾಡಿದೆ."
ಮಗುವಿನ ಮನಸ್ಸನ್ನು ನೋಯಿಸುವುದು, ಚಿತ್ರಹಿಂಸೆ ಕೊಡುವ ಈ ದೃಶ್ಯಗಳನ್ನು ರಿಯಾಲಿಟಿ ಶೋ ಗಾಗಿ ಸಿದ್ದಪಡಿಸಿದ ಸುವರ್ಣ ವಾಹಿನಿ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದೆ. ಕತ್ತಿಹಿಡಿದು ಮಗುವೇ ಹೊಡಿಮಗಾ.. ಹೊಡಿ ಮಗಾ..(ಹಿನ್ನೆಲೆಸಂಗೀತ) ಓಡುವ ದೃಶ್ಯದಿಂದಲೂ ವೀಕ್ಷಿಸಿದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯೇ ಹೆಚ್ಚಾಗಿದೆ.
ಮಕ್ಕಳನ್ನು ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸುವುದು ಕಾನೂನು ರೀತಿಯ ಅಪರಾಧ. ಇದೇ ದೃಶ್ಯದಲ್ಲಿ ಯುವತಿ ಉರಿಯುತ್ತಿರುವ ಕಟ್ಟಿಗೆ ತುಂಡನ್ನು ಹಿಡಿದು ಬಾಲಕನಿಗೆ ಬೆಂಕಿಕೆಂಡ ಮುಟ್ಟಿಸುತ್ತೇನೆಂದು ಹೆದರಿಸುವ ದೃಶ್ಯವೂ ಇದೆ. ಮಕ್ಕಳ ಹಕ್ಕುಗಳ ಕುರಿತಾಗಿ ನೋಡಿದರೆ, ಬೆಂಕಿ ತಗಲಿಸುವುದಿರಲಿ, ಬೆಂಕಿ ತೋರಿಸಿ ಹೆದರಿಸುವುದೂ ತಪ್ಪು. ಇಂತಹ ಸನ್ನಿವೇಶದಲ್ಲಿ ಮಗುವನ್ನು ವಿವಸ್ತ್ರವಾಗಿ
ನಿಲ್ಲಿಸುವುದು, ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು, ಬಾಲಕ ಕತ್ತಿ ಹಿಡಿದು, ಕಲ್ಲು ಎತ್ತಿ ಓಡುವಂತಾ ಸನ್ನಿವೇಶಗಳನ್ನು ಮನರಂಜನೆಯ ಹೆಸರಿನಲ್ಲಿ ಪ್ರಸಾರ ಮಾಡಿದ ವಾಹಿನಿಯ ಕಾರ್ಯ ವೈಖರಿ ಖಂಡನೀಯ.
ಇದು ರಿಯಾಲಿಟಿ ಶೋ..!
ನಾಟಕ, ಧಾರವಾಹಿ, ಸಿನಿಮಾಗಳಲ್ಲೋ ಈ
ರೀತಿಯ ಪೂರ್ವನಿಯೋಜಿತ ದೃಶ್ಯಗಳನ್ನು ಕಲ್ಪಿಸಿ, ಸೆರೆ ಹಿಡಿಯುವುದೂ ಕೂಡ ಸರಿಯಲ್ಲ. ಅದರಲ್ಲೂ ರಿಯಾಲಿಟೀ ಶೋಗಳಲ್ಲಿ ಇಂತಹ ದೃಶ್ಯಗಳನ್ನು ಸೃಷ್ಟಿಸುವುದು ಎಷ್ಟರ ಮಟ್ಟಿಗೆ ಸರಿ..? ಸುವರ್ಣ ವಾಹಿನಿಯೇ ಹೇಳಿಕೊಂಡಂತೆ ಇದು ರಿಯಾಲಿಟಿ ಶೋ. ನೈಜ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಕಂತುಕಂತುಗಳ ಹಂತದಲ್ಲಿ ಪ್ರಸಾರ ಮಾಡಲಾಗುತ್ತದೆ. ಈಗಾಗಲೇ ವಿವಿಧ ಶೀರ್ಷಿಕೆಯಲ್ಲಿ ಇದೇ ತರದ ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ ಈ ವಾಹಿನಿ ಹೆಚ್ಚಿನ ಹೆಸರು ಪಡೆದಿತ್ತು. ಆದರೆ ಸೋಮವಾರ ಪ್ರಸಾರಗೊಂಡ ಬಾಲಕನ ಚಿತ್ರ ಹಿಂಸೆಯ ದೃಶ್ಯಾವಳಿಗಳು ಮಕ್ಕಳ ಪರವಾದ ಸಂಘಟನೆಗಳ ಆಕ್ರೋಶಕ್ಕೆ ಕಾರವಾಗಿದ್ದು, ಬಾಗಲಕೋಟೆಯ ಹಳ್ಳಿಯೊಂದರ ಬಡ ಕುಟುಂಬದ ಮುಗ್ಧತೆಯನ್ನು ವಾಹಿನಿ ದುರುಪಯೋಗಪಡಿಸಿಕೊಂಡಿರುವುದು ಮಾತ್ರವಲ್ಲದೆ, ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದೆ. ಈ ಬಗ್ಗೆ ಸಂಬಂಧಪಟ್ಟವರು ತಕ್ಷಣ ಕ್ರಮ ಜರುಗಿಸಬೇಕಾಗಿದೆ.
March 16, 2011(kannada realty shows)
