ಅಪ್ಪಲರಾಜು..ಇದು ರಕ್ತ ಚರಿತ್ರೆಯ ನಂತರ ಬಂದಂತಹ ಸಿನಿಮಾ. ಈ ಸಿನಿಮಾ ನೋಡುವಾಗ ಅನಿಸುವುದು.. ಸಿನಿಮಾ ನಿರ್ಮಾಣದಲ್ಲಿ ಯಾವುದೇ ಅನುಭವದ ಹಿನ್ನಲೆಯಿಲ್ಲದೆ ಸಿನಿಮಾ ಮಾಡಲು ಬರುವ ಯುವಕನ ಅನುಭವಗಳು ಎಂದು.
ಆದರೆ ಈ ಸಿನಿಮಾದ ಒಳಗಿನ ಪದರಗಳು ವೀಕ್ಷಕ ಮತ್ತು ಸಿನಿಮಾ ರಂಗದ ಮಧ್ಯದ ಸೂಕ್ಷ್ಮ ಹಿನ್ನಲೆಯಲ್ಲಿ ನಿರೂಪಿತವಾಗಿರುವುದನ್ನು ಕಾಣಬಹುದು. ಅದು ನಿರ್ದಿಷ್ಟ ಪ್ರೇಕ್ಷಕರು ಸಿನಿಮಾ ನೋಡಿ ವಿಮರ್ಶಿಸುವುದನ್ನು.. ಅದೇ ಸಿನಿಮಾವನ್ನು ಸಿನಿಮಾರಂಗದ ಒಳಗಿನಿಂದ ಸಮರ್ಥಿಸಿಕೊಳ್ಳುವುದು. ಈ ಎರಡೂ ವರ್ಗಗಳ ಮಧ್ಯೆ ಇರುವ ವ್ಯತ್ಯಾಸವನ್ನು ವಿಮರ್ಶಿಸುತ್ತಲೇ.. ಸಿನಿಮಾದ ಕುರಿತಂತೆ ಎರಡೂ ವರ್ಗಗಳು ಕಟ್ಟಿಕೊಂಡಿರುವ ನಂಬಿಕೆಯ ಗೋಡೆಯನ್ನು ತನ್ನದೇ ರೀತಿಯ ’ವ್ಯಾಖ್ಯಾನ’ಗಳ ಮೂಲಕ ಒಡೆದು ಕಟ್ಟುವುದನ್ನು ಈ ಸಿನಿಮಾದ ಚಿತ್ರಕಥೆ ಒಳಗೊಂಡಿರುವುದನ್ನು ಕಾಣಬಹುದು.
ಈ ಸಿನಿಮಾ ಕುರಿತು ಚರ್ಚಿಸುವುದರ ಮೊದಲು ಗಮನಿಸುವಿಕೆಯೊಂದಿಗೆ ಹುಟ್ಟುವ ಪ್ರಶ್ನೆಯೆಂದರೆ ಇಂತಹ ಸಿನಿಮಾವನ್ನು ರಾಮ್ ಗೋಪಾಲ್ ವರ್ಮಾ ಎಂಬ ’ಈಗಿನ’ ಖ್ಯಾತ ನಿರ್ದೇಶಕ ’ಆಗ’ ಖ್ಯಾತನಾಗುವ ಮೊದಲು ಮಾಡಲು ಸಾಧ್ಯವಿತ್ತೆ ಎಂದು.
ತನ್ನ ಬಾಲಿವುಡ್ ಎಂಟ್ರಿಯ ಸಮಯದಲ್ಲಿ ಮಾಡಿದ ’ರಂಗೀಲ’ ಸಿನಿಮಾದಲ್ಲಿ ಸಿನಿಮಾರಂಗವನ್ನು ತನ್ನ ಕಥೆಗೆ ಪೂರಕವಾಗಿ ಮಾತ್ರ ಬಳಸಿಕೊಂಡ ವರ್ಮಾ ಇಷ್ಟು ವರ್ಷಗಳ ನಂತರ ಅದು ಬಾಲಿವುಡ್ಡಿನಿಂದ ತೆಲುಗಿಗೆ ಹಿಂದಿರುಗಿ ’ರಕ್ತಚರಿತ್ರ’ ಎಂಬ ನೈಜ ಕಥೆಯನ್ನಾದರಿಸಿದ ಸಿನಿಮಾ ಮಾಡಿದ ನಂತರ, ನೇರವಾಗಿ ತೆಲುಗು ಸಿನಿಮಾ ನಿರ್ಮಾಣದ ಒಳಗಿನ ರಾಜಕೀಯಗಳ ಬಗ್ಗೆ ಹಾಸ್ಯದ ವಿಡಂಬನೆ ಮೂಲಕ ಈ ಸಿನಿಮಾ ಮಾಡಿರುವುದು ಗಮನಿಸಬೇಕಾದ ಅಂಶ.
ಮತ್ತೊಬ್ಬರನ್ನು ವಿಮರ್ಶಿಸುವ ಮೊದಲು ತನ್ನನ್ನೇ ಮೊದಲಿಗೆ ವಿಮರ್ಶಿಸುವುದರೊಂದಿಗೆ ಈ ಎಲ್ಲಾ ಹಂತದ ಪ್ರಕ್ರಿಯೆ, ನಿರ್ಮಾಣದಲ್ಲಿ ತಾನು ಹೊರತಲ್ಲ ಅನ್ನುವುದನ್ನು ನೇರವಾಗಿ ತನ್ನ ಪಾತ್ರಗಳ ಮೂಲಕ ಹೇಳಿಸುತ್ತಾ, ಅದರ ಮೂಲಕ ಮುಂದಿರುವವರನ್ನು ಟೀಕಿಸಲು ತನ್ನ ಪಾತ್ರವನ್ನು ಅಣಿ ಮಾಡುತ್ತಾನೆ.
ಇಡೀ ಸಿನಿಮಾದಲ್ಲಿ ನಿರ್ದೇಶಕ, ವೀಕ್ಷಕ ಎಂಬ ಎರಡು ಪಾತ್ರಗಳನ್ನು, ಒಂದೇ ಪಾತ್ರದ ಮೂಲಕ ಸಿನಿಮಾ ನಿರ್ಮಾಣ ಎಂಬ ಕ (ವ್ಯ)ಥೆಯನ್ನು ಈ ಸಿನಿಮಾದಲ್ಲಿ ಗಮನಿಸಬಹುದು.
ಸಿನಿಮಾ ನಿರ್ಮಾಣದ ಹಿಂದಿರುವ ಅನಿವಾರ್ಯತೆಗಳನ್ನು-ರಾಜಕೀಯಗಳನ್ನು, ಮುಂತಾದ ಅಂಶಗಳನ್ನು ಗಮನಿಸಲೇಬೇಕಾದ ಅವಶ್ಯಕತೆ ಒಬ್ಬ ಸಾಮಾನ್ಯ ಪ್ರೇಕ್ಷಕನಿಗೆ ಇಲ್ಲ ಎಂದು ನಿರೂಪಿಸುವ ಮುಖಾಂತರ ಇತರ ನಿರ್ದೇಶಕರನ್ನು-ಅವರ ಸಿನಿಮಾ ಕೃತಿಯ ಅಂಶಗಳನ್ನು ಪ್ರೇಕ್ಷಕನ ಮೂಲಕ ನಿರಾಕರಿಸುತ್ತಾ, ಅದೇ ಪ್ರೇಕ್ಷಕ ನಿರ್ದೇಶಕನ ಸ್ಥಾನದಲ್ಲಿ ಬಂದು ಕೂತಾಗ ತನ್ನ ಹಿಂದಿನ ವಿಚಾರ-ಚಿಂತನೆಗಳಿಗೆ ಅಂಟಿಕೊಂಡೇ ಸಿನಿಮಾ ನಿರ್ಮಾಣ ರಂಗದೊಳಗಿನ ಅನಿವಾರ್ಯತೆಗಳನ್ನು ಸಮರ್ಥಿಸಿಕೊಳ್ಳುವ ಸನ್ನಿವೇಶಗಳನ್ನು ವರ್ಮಾ ಸೃಷ್ಟಿಸುವಲ್ಲಿಗೆ ಪ್ರೇಕ್ಷಕ ಎಂಬ ವಿಶ್ಲೇಷಕನನ್ನು ಗೌಣವಾಗಿಸುತ್ತಾನೆ.
ಇಲ್ಲಿಯವರೆಗೂ ಈ ಸಿನಿಮಾದಲ್ಲಿ ಮುಖ್ಯ ಪಾತ್ರವಹಿಸುವ ಪ್ರೇಕ್ಷಕ-ನಿರ್ದೇಶಕನ ಕುರಿತಾಗಿ ಚರ್ಚಿಸುತ್ತಿದ್ದು, ಸಿನಿಮಾ ರಂಗದಲ್ಲಿ ಇವರೊಂದಿಗೆ ತಳುಕು ಹಾಕಿಕೊಳ್ಳುವ ಇಡೀ ಸಿನಿಮಾರಂಗದಲ್ಲಿ-ನಿರ್ಮಾಣದಲ್ಲಿ ಜೊತೆಗೆ ಕೆಲಸ ಮಾಡುವ ಎಲ್ಲಾ ಹಂತದ ಜನರನ್ನು ಒಟ್ಟುಗೂಡಿಸಿ ವರ್ಮಾ ಸಿನಿಮಾ ಆಸಕ್ತಿಯುಳ್ಳ-ಅದರಲ್ಲಿ ಕೆಲಸ ಮಾಡುವವರನ್ನು ನಾಲ್ಕು ಜನ ಸಹನಿರ್ದೇಶಕರ ಮೂಲಕ ಗುರುತಿಸುತ್ತಾನೆ. ಅವರಲ್ಲಿ ಮೊದಲಿಗೆ ಒಬ್ಬ ಹಿರಿಯ ಸಹ ನಿರ್ದೇಶಕ, ಇವನ ಪಾತ್ರ ಸಿನಿಮಾರಂಗದಲ್ಲಿ ಏನೂ ಮಾಡಲು ಸಾಧ್ಯವಾಗದೆ, ಅಥವ ಸಾಧ್ಯ ಮಾಡಲು ಪ್ರಯತ್ನಿಸದೇ ಸಹ-ನಿರ್ದೇಶನವನ್ನು ತನ್ನ ಜೀವನೋಪಾಯಕ್ಕೆ ಆದಾಯದ ಮೂಲವಾಗಿ ಮಾತ್ರ ಪರಿಗಣಿಸುವವ. ಈ ಪಾತ್ರಕ್ಕೆ ತಾನು ಕೆಲಸ ಮಾಡುತ್ತಿರುವ ಸಿನಿಮಾದ ಬಗ್ಗೆ ಯಾವುದೇ ಪ್ರೀತಿ ವ್ಯಾಮೋಹ ನಿರೀಕ್ಷೆ ಇರುವುದಿಲ್ಲ. ರೀಲು ಸುತ್ತುತ್ತಿದಷ್ಟು ದಿನ ತನ್ನ ಸಂಪಾದನೆ. ಅದು ನಿಂತರೆ ಇನ್ನೊಂದು ಕಡೆ ವಲಸೆ.
ಎರಡನೆಯವನು ಅದಾಗಲೇ ಸಿನಿಮಾದಲ್ಲೆ ತಕ್ಕಮಟ್ಟಿಗೆ ಪಳಗಿರುವವನು, ತನ್ನ ಸ್ಥಾನದ ಭದ್ರತೆಗಾಗಿ ಮಾಡುತ್ತಿರುವ ಕೆಲಸಕ್ಕಿಂತ ಹೆಚ್ಚಾಗಿ ನಿರ್ದೇಶಕನನ್ನು-ತನಗಿಂತ ಮೇಲಿನ ಸ್ಥಾನದಲ್ಲಿರುವವರನ್ನು ಹೊಗಳುವುದು, ಅತಿಯಾಗಿ ಆಸ್ತಿಕತೆಯನ್ನು ನಂಬುವುದು.
ಈ ಮೇಲಿನ ಎರಡು ಪಾತ್ರಗಳ ಮೂಲಕ ವರ್ಮಾ ಹೇಳಿಸುವುದೇನೆಂದರೆ ನಿರ್ದೇಶನ ಮಾಡಲು ಬಂದು ಇಲ್ಲಸಲ್ಲದ ಆದರ್ಶಗಳ ಮೂಲಕ ಸಿನಿಮಾ ನಿರ್ಮಾಣವಾಗುವುದು ತಡವಾಗುತ್ತಿದ್ದಲ್ಲಿ ಸಿನಿಮಾ ನಿರ್ಮಾಣದಲ್ಲಿ ಕೆಲಸ ಮಾಡುವವರು ತಮ್ಮ ಸಮಯ ಹಾಳು ಮಾಡಿಕೊಂಡು
ಯಾರನ್ನೂ ಕಾಯುವುದಿಲ್ಲ ಎಂದು.
ಮೂರನೆಯವನು ಆಗತಾನೇ ಸಿನಿಮಾರಂಗದಲ್ಲಿ ಕಣ್ಣು ಬಿಡುತ್ತಿರುವವನು.. ಆದರೆ ಮಹಾನ್ self centered. ಮೊದಲಿನವನಂತೆ ಇವನೂ ಜೀವನೋಪಾಯಕ್ಕಷ್ಟೇ ಕೆಲಸ ಮಾಡುತ್ತಾನಾದರು, ಮೊದಲಿನವಂತೆ ಇಲ್ಲಿ ಕೆಲಸ ಮಾಡುತ್ತಿರುವುದಕ್ಕಾದರು ಇಲ್ಲಿನ ಕೆಲಸದಲ್ಲಿ ತೊಡಗಿಸಿಕೊಂಡು ತನ್ನ ವಿಚಾರಗಳನ್ನು ಹಂಚಿಕೊಳ್ಳುವುದಿಲ್ಲ. ಅವನ ಉದ್ದೇಶದಲ್ಲಿ ತಾನು ಮಾಡಿದರೆ ಮಾತ್ರ ಶ್ರೇಷ್ಟ ಉಳಿದವರು ಮಾಡುವುದೆಲ್ಲ ಸುಮ್ಮನೆ ಬೊಗಳೆ ಎಂಬ ಧೋರಣೆ ಉಳ್ಳವನು.
ನಾಲ್ಕನೇ ಹಂತವನ್ನು ಹುಡುಗಿಯ ರೂಪ(ಕ)ದಲ್ಲಿ ಗುರುತಿಸುತ್ತಾನೆ. ಇಂತಹವರು ಸಿನಿಮಾ ಕುರಿತಂತೆ ತಕ್ಕಮಟ್ಟಿಗೆ ಜ್ಞಾನವುಳ್ಳವರಾಗಿರುತ್ತಾರೆ. ಇವರಿಗೆ ಸಾಧ್ಯವಾದಷ್ಟೂ ತಾವು ತಿಳಿದಿರುವುದನ್ನು ಹೇಳಿಕೊಳ್ಳುವ ಆಸೆ-ಆತುರವುಳ್ಳವರು, ಸಿನಿಮಾ ನಿರ್ಮಾಣದಲ್ಲಿ ಪ್ರಾರಂಭದಿಂದ ಕೊನೆಯವರೆಗೆ ಸಾಧ್ಯವಾದಷ್ಟೂ ತಮ್ಮ ಇರುವಿಕೆ- ಸಾಮರ್ಥ್ಯವನ್ನು ವಿನಿಯೋಗಿಸಬೇಕೆಂದು ಆಸೆವುಳ್ಳವರಾಗಿರುತ್ತಾರೆ.
ಇಂತಹ ಒಳಾರ್ಥಗಳ ಕೊಲಾಜ್ ಮೂಲಕ ವರ್ಮಾ, ಸಿನಿಮಾ ಎಂಬುದು ಮನರಂಜನೆಗೆ ಮಾತ್ರ ಸೀಮಿತ ಅಥವ ಸಿನಿಮಾ ಮಾಡುವುದೇ ಮನರಂಜನೆಗಾಗಿ ಎಂದು ಪ್ರಬಲವಾಗಿ ನಂಬಿರುವ ತೆಲುಗು ಸಿನಿಮಾರಂಗ ಮತ್ತು ಪ್ರೇಕ್ಷಕರಿಗೆ ಸಿನಿಮಾ ನಿರ್ಮಾಣದ ಬಗೆಗಿನ ’ಪಠ್ಯ’ವನ್ನು ಹಾಸ್ಯದ ಮೂಲಕ ಭೋದಿಸುತ್ತಾ ಹೋಗುತ್ತಾರೆ.
ಈ ಸಿನಿಮಾದಲ್ಲಿ ತಾವು ಈ ಹಿಂದೆ ತೆಲುಗಿನಲ್ಲಿ ಆರಂಭಿಸಿದ್ದ ಪೋಷಕ ಪಾತ್ರಗಳಿಗೆ ಮಾತ್ರ ಸೀಮಿತವಾಗಿದ್ದ ಪಾತ್ರದಾರಿಗಳನ್ನು ಮುಖ್ಯಪಾತ್ರಗಳಾಗಿ hype ಮಾಡುವ ತಮ್ಮ ಹಳೇ ಪ್ರಯೋಗವನ್ನು ಇಲ್ಲೂ ಮುಂದುವರಿಸಿದ್ದಾರೆ. ಉದಾ: ಶ್ರೀಶೈಲಂ(ಬ್ರಹ್ಮಾನಂದಂ) ಪಾತ್ರ. ವರ್ಮಾರ ಹಳೇ ಸಿನಿಮಾ ’ಮನಿ ಮನಿ’ ಸಿನಿಮಾದಲ್ಲು ಇಂತಹುದೇ ಪಾತ್ರವನ್ನು ಅಲ್ಲಿಯವರೆಗೆ ಪೋಷಕ ಹಾಸ್ಯ ನಟನೆಗೆ ಮಾತ್ರ ಸೀಮಿತವಾಗಿದ್ದ ನಟನಿಗೆ ಈ hype ಕೊಡುವುದರ ಮೂಲಕ, ಅಲ್ಲಿಯವರೆಗೂ ಕಾಣದ ಈ hype ನಲ್ಲಿ ಕಂಡು ಪ್ರೇಕ್ಷಕ ರೋಮಾಂಚಿತ ರೂಪದ ಸೀರಿಯಸ್ ಹಾಸ್ಯದ ರೂಪಕಗಳನ್ನು ಕಟ್ಟಿಕೊಟ್ಟಿದ್ದರು.
ಇಷ್ಟು ವರ್ಷಗಳನಂತರವೂ ಅದೇ ನಟನ ಮೂಲಕ ಅದೇ ರೀತಿಯ ಪಾತ್ರವನ್ನು ಮಾಡಿಸುವುದರ ಮೂಲಕ ಎರೆಡು ಅಂಶಗಳನ್ನು ಗುರುತಿಸಬಹುದಾದ ಸಾಧ್ಯತೆಗಳನ್ನು ವರ್ಮಾ ನಮಗೆ ಕೊಡುತ್ತಾನೆ.
೧) ಸಿನಿಮಾರಂಗದ ಒಳಗೆ ಪೋಷಕ ನಟರನ್ನು ಸಿನಿಮಾಗೆ ಮಾರುಕಟ್ಟೆಯಲ್ಲಿ ಬೆಲೆ ಬರಿಸಲು ಮಾತ್ರವಲ್ಲದೆ ಕಥೆಯಲ್ಲಿ ಪೂರಕವಾಗಿ ಮುಖ್ಯ ಪಾತ್ರಗಳಾಗಿ ಬಳಸಿಕೊಳ್ಳಬಹುದು.
೨) ಇಂತಹ hype ಮೂಲಕ ನಾಯಕ-ನಾಯಕಿ ಪ್ರಧಾನ ಕೇಂದ್ರೀಕೃತ ಕಥೆ ಮತ್ತು ನಿರೂಪಣೆಗೆ ಸೆಡ್ಡು ಹೊಡೆಯುವುದನ್ನು ಗಮನಿಸಬಹುದು.
ಇಂತಹ ಸಣ್ಣ ಸಣ್ಣ ಕೊಲಾಜ್ ಗಳ ಮೂಲಕ ನೇರವಾಗಿ ಸಿನಿಮಾರಂಗದವರಿಗೆ ಮತ್ತು ಪ್ರೇಕ್ಷಕರಿಗೆ ’ಪಠ್ಯ’ ರೂಪಕದ ಸಿನಿಮಾ ಎಂದೇ ಇದನ್ನು ಗುರುತಿಸಬಹುದಾಗಿದೆ.
30-03-2011
tags:telugu film appalaraju, ram gopal varma,ಅಪ್ಪಲರಾಜು,ರಕ್ತ ಚರಿತ್ರೆrakta charitra, samvaada.com
2011-04-12 21:40:53
ಮೇಲಿನ ಬರವಣಿಗೆ ಯಾರದ್ದೋ ಗೊತ್ತಿಲ್ಲ.. ಬರಹವನ್ನು ಅದ್ಯಾಕೆ ಇಷ್ಟೊಂದು ಸಂಕೀರ್ಣ ಮಾಡುತ್ತೀರೋ ನನಗರ್ಥವಾಗ್ತಿಲ್ಲ. ಅಥವಾ ನಿಮ್ಮ ಬರಹಗಳು, ಈ ಸೈಟು ನನ್ನಂಥ ಮಾಮೂಲಿ ಓದುಗನಿಗಲ್ಲವೋ? ಉದಾಹರಣೆಗೆ ಮೊದಲ ಪ್ಯಾರಾವನ್ನು ನಾಲ್ಕೈದು ಬಾರಿ ಓದಿದರೂ ಅದೇನು ಹೇಳಬೇಕೆಂದಿದ್ದೀರೆಂಬುದು ಪೂರ್ತಿಯಾಗಿ ತಲೆಗೆ ಹೋಗಲಿಲ್ಲ. ಸ್ವಲ್ಪ ಸಿಂಪಲ್ ಆಗಿ ಬರೀರಿ ಸ್ವಾಮಿ.. ಸಿನಿಮಾ/ ಪುಸ್ತಕ ಅಥವಾ ಇನ್ಯಾವುದೋ ಒಂದು ಕ್ರಿಯೆಯ ವಿಮರ್ಶೆ ಪ್ರಯಾಸದಾಯಕವಾಗಿರಬಾರದು ಅನ್ನೋದು ನನ್ನ ಅನಿಸಿಕೆ. ಕೀಪ್ ಇಟ್ ಸಿಂಪಲ್ ಸರ್... :) ಎಷ್ಟೊಂದೆಲ್ಲಾ ಹೇಳಿದ್ದೀರ...ಎಷ್ಟೊಂದು ವಿಷಯಗಳಿಗೆ ಬರಹದಲ್ಲಿ.. ಆದರೆ ಅದ್ಯಾಕೋ ತಲುಪೋದಿಲ್ಲ.. ಸಾರ್ರಿ...