ದೃಶ್ಯಕ್ಕೊಂದು ನುಡಿಗಟ್ಟು

ಕುರೊಸೋವಾನ ಕಾಗೆಮುಷಾ

 "ಗಾಳಿಯ ವೇಗ, ಕಾಡಿನ ಮೌನ, ಅಗ್ನಿಯ ಉಗ್ರತೆ ಹಾಗೂ ಅಗಲಿಸಲಾರದ ಬೆಟ್ಟದಂತ ಸಾಮ್ರಾಜ್ಯ" ಇದು ತಾಕೆಡಾ ಸಾಮ್ರಾಜ್ಯದ ಬಗ್ಗೆ ಚಿತ್ರದಲ್ಲಿ ಸಮುರಾಯ್ ಒಬ್ಬ ಹೇಳುವ ಮಾತು.  

೧೯೭೦ರಲ್ಲಿ ತಾನು ನಿರ್ದೇಶಿಸಿದ ಡೊಡ್ ಸುಕಾ ಡೇನ್ ಚಿತ್ರ ಆರ್ಥಿಕವಾಗಿ ನಷ್ಟವನುಭವಿಸಿದ್ದು ಕುರೊಸೊವಾನ ಸಿನೆಮಾ ಬದುಕಿನ ಬಹುದೊಡ್ಡ ಹಿನ್ನೆಡೆಯಾಯಿತು.  ಈ ಚಿತ್ರದ ಹಿನ್ನೆಡೆಯಿಂದ ಮಾನಸಿಕ ಖಿನ್ನತೆಗೆ ಒಳಗಾದ ಕುರಸೋವಾ ಆತ್ಮಹತ್ಯೆಗೆ ಯತ್ನಿಸಿದ. ೩೦ ಬಾರಿ ರೇಜರ್ ನಿಂದ ಕೊಯ್ದುಕೊಂಡರೂ ಬದುಕುಳಿದ ಕುರೋಸೊವಾ ಮುಂದೆ ಕಾಗೆಮುಷಾ, ರಾನ್ ನಂತಹ ಅತ್ಯದ್ಭುತ ಕಲಾಕೃತಿಗಳನ್ನ ಧರೆಗಿಳಿಸಿದ.

ಕಾಗೆ ಮುಷಾ ಎಂದರೆ ನಕಲಿ ಎಂದರ್ಥ.  

ತಕೆಡಾ ಎಂಬ ೧೫ನೇ ಶತಮಾನದ ಜಪಾನ್ ಸಾಮ್ರಾಜ್ಯ. ಅಲ್ಲೊಬ್ಬ ಬೆಟ್ಟದಂಥ ಅರಸ. ಶಿಂಗೆನ್ ಅವನ ಹೆಸರು. ಅವನ ಹೆಸರು ಕೇಳಿದರೇನೇ ಶತ್ರು ಪಾಳಯ ಸೊಲೊಪ್ಪಿಬಿಡುತ್ತಿತ್ತು. ಅಂತಹ ರಾಜನೊಬ್ಬ ತನ್ನಂಥೇ ಹೋಲುವ ಸಾಮಾನ್ಯ ಚೋರನೊಬ್ಬನನ್ನ ತನ್ನ ನಕಲಿಯಾಗಿ ನೇಮಿಸಿಕೊಳ್ಳುತ್ತಾನೆ. ಮುಂದೆ ಶಿಂಗೇನ್ ಸತ್ತ ನಂತರ ಆತನನ್ನೇ ಹೋಲುವ ಈ ಚೋರನನ್ನು ಶಿಂಗೇನ್ ಎಂದು ಬಿಂಬಿಸಲಾಗುತ್ತದೆ. ಮೂರು ವರುಷಗಳ ಕಾಲ ತಕೆಡಾ ಸಂಸ್ಥಾನವನ್ನ ಶಿಂಗೇನ್ ರಾಜನ ಹೆಸರಲ್ಲಿ ಈ ಚೋರ ಕಾಪಾಡುತ್ತಾನೆ.

ಕುರೋಸೋವಾನ ಉಳಿದ ಚಿತ್ರಗಳಿಗೆ ಹೋಲಿಸಿದರೆ ಈ ಚಿತ್ರಕಥೆಯಲ್ಲಿ ಅಂತಹ ಅದ್ಭುತ ಹೆಣಿಗೆ ಇಲ್ಲದೇ ಹೋದರೂ, ಈ ಚಿತ್ರವನ್ನ ಇಂದಿಗೂ ನೆನಪಿಸಿಕೊಳ್ಳುವುದು ಇದರೊಳಗಿನ ವರ್ಣ ಸಂಯೋಜನೆಗಾಗಿ. ಸ್ವತಃ ಚಿತ್ರ ಕಲಾವಿದನಾಗಿದ್ದ ಕುರೊಸೋವಾ ತನ್ನ ಕಲೆಯ ಸರ್ವಸ್ವವನ್ನೂ ಅರ್ಪಿಸಿದಂತಿರುವ ಈ ಕಲಾಕೃತಿಯಲ್ಲಿ ಪ್ರತಿಯೊಂದು ದೃಶ್ಯವೂ  ಬಣ್ಣದೊಂದಿಗೆ ಅತ್ಯದ್ಭುತವಾಗಿ ಮೇಳೈಸಿದೆ. 

ಸಿನೆಮಾಗಳ ಮೂಲ ಸಾಹಿತ್ಯ ಕೃತಿಗಳಲ್ಲಿಲ್ಲದೇ, ಅದೊಂದು ಭಿನ್ನವೇ ಆದ ದೃಶ್ಯ ಮಾಧ್ಯಮ ಎಂದು ಪ್ರತಿಪಾದಿಸಿದ್ದು ಕುರೋಸೊವಾನ ಚಿತ್ರಗಳು. ಅಕ್ಷರಗಳಲ್ಲಿ ಹಿಡಿದಿಡಲಾಗದ ಕಾಗೆಮುಷಾದಲ್ಲಿನ ದೃಶ್ಯಗಳು ಸಿನೆಮಾ ಕಲಾಕೃತಿಯ ಘನತೆಯನ್ನ ಹೆಚ್ಚಿಸುವಂತದ್ದು.

ತಾನು ರಾಜನನ್ನು ಹೋಲುತ್ತೇನೆಯೆ ಎಂಬ ಒಂದೇ ಕಾರಣಕ್ಕೆ ಬಲವಂತವಾಗಿ ರಾಜನ ಸ್ಥಾನವನ್ನ ಅಲಂಕರಿಸಿರುವ ಕಳ್ಳನಿಗೆ ಪಾಪಪ್ರಜ್ಞೆಯೂ ಭಯವೂ ಕಾಡತೊಡಗಿ ಆತ ಕಾಣುವ ಸ್ಲೋ ಮೋಷನ್ ನಲ್ಲಿ ಚಿತ್ರಿತವಾಗಿರುವ ಕನಸಿನ ದೃಶ್ಯ , ಕ್ಲೈಮ್ಯಾಕ್ಸಿನಲ್ಲಿ , ಕಾಲದ ಹರಿವಿನಲ್ಲಿ ಕಳ್ಳನ ಹೆಣವೂ, ರಾಜ್ಯದ ಘನತೆಯ ಪ್ರತೀಕವಾದ ಧ್ವಜವೂ ಒಂದೇ ಅಲೆಯಲ್ಲಿ  ತೇಲಿ ಹೋಗಿ ಚರಿತ್ರೆಯಾಗುವ ಹೈ ಆಂಗಲ್ ಏರಿಯಲ್ ಶಾಟ್ ಕುರೋಸೋವಾನಂತ ಕಲಾವಿದನಿಂದ ಮಾತ್ರ ಸಾಧ್ಯ.  ಮುಂದೆ ಆತ ನಿರ್ದೇಶಿಸಿದ ಡ್ರೀಮ್ಸ್ ಎಂಬ ಸಿನೆಮಾ ಕೂಡ ಅದರಲ್ಲಿನ ವರ್ಣ ಸಂಯೋಜನೆಯಿಂದ ಹೆಸರುವಾಸಿಯಾಯಿತು.

ಒಂದೂ ಕ್ಲೋಸ್ ಅಪ್ ದೃಶ್ಯಗಳಿಲ್ಲದ ಕುರೋಸೊವಾನ ‘ಕಾಗೆಮುಷಾ’ ದ ಇನ್ನೊಂದು ವೈಶಿಷ್ಠ್ಯವೆಂದರೆ ಯುದ್ಧದ ದೃಶ್ಯಗಳು. ರಣರಂಗದ ದೃಶ್ಯಗಳನ್ನು ಭೀಬತ್ಸವಾಗಿ ತೋರಿಸುವಲ್ಲಿ ಆಸಕ್ತಿ ತೋರದ ಕುರೊಸವಾ ಯುದ್ಧಾನಂತರದ ಪರಿಣಾಮಗಳನ್ನೂ, ಸಾವನ್ನು ಸಹನೆಯಿಂದ ತೆರೆದಿಡುತ್ತಾನೆ.  ರಣರಂಗದಲ್ಲಿ ಯುದ್ಧ ನಡೆಯುವಾಗ ರಾಜನ ವೇಷಧಾರಿ ಕಳ್ಳನ ತೊಳಲಾಟಗಳು, ಮೊದಲ ಬಾರಿ ಯುದ್ಧಬೂಮಿಗೆ ಬಂದಿರುವ ಅವನ ಅಂಜಿಕೆಗಳನ್ನೆಲ್ಲಾ ನಿರ್ದೇಶಕ ಹಿಡಿದಿಟ್ಟಿರುವ ರೀತಿ ಕೂಡ ಅನನ್ಯವಾದದ್ದು. 

ಖಾಸಗಿ ಬದುಕಿನ ನೋವನ್ನ ಮೀರಿ ಕಲಾವಿದನೊಬ್ಬ ಹೇಗೆ ತನ್ನ ಕಲಾಕೃತಿಯನ್ನ ಬೆಳಗಬಲ್ಲ ಎಂಬುದಕ್ಕೆ ಕಾಗೆಮುಷಾ ಮತ್ತು ಅದರ ನಂತರ ಬಂದ ರಾನ್ ಚಿತ್ರಗಳು ಸಾಕ್ಷಿ.

20-04-11

samvaada.com fan page on facebook


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು