ದೃಶ್ಯಕ್ಕೊಂದು ನುಡಿಗಟ್ಟು

ಹುಡುಗರು ಚಿತ್ರ ವಿಮರ್ಶೆ

hudugaru cinema review, hudugaru, ಹುಡುಗರು ಚಿತ್ರ ವಿಮರ್ಶೆ, ಪುನೀತ್ ರಾಜ್ ಕುಮಾರ್, ಯೋಗೀಶ್,ಶ್ರೀನಗರ ಕಿಟ್ಟಿ, ಕೆ.ಮಾದೇಶ್, ಪಾರ್ವತಮ್ಮ ರಾಜ್ ಕುಮಾರ್ಸಿನೆಮ ಎನ್ನುವುದು ಪಕ್ಕಾ ಮನರಂಜನೆಯ ಸರಕು. ಅದು ಎಲ್ಲಿಂದಾದರೂ ಬರಲಿ, ಯಾವ ಮಾರ್ಗದಲ್ಲಾದರೂ ಸೃಷ್ಟಿಯಾಗಿರಲಿ ನನಗದರ ಗೊಡವೆ ಬೇಡ. ನನಗೆ ಮಜಾ ಬೇಕು. ಇದು ಹೇಗೆಂದರೆ, ನನಗೆ ರುಚಿಕಟ್ಟಾದ ತಿನ್ನುವ ಪದಾರ್ಥ ಸಿಕ್ಕರೆ ಸಾಕು. ಅದು ಬೀದಿ ತುದಿಯಲ್ಲಿನ ರಾಜಸ್ಥಾನಿ ಚಾಟ್ ಅಂಗಡಿಯದಾಗಲಿ, ಅಯ್ಯಂಗಾರ್ ಬೇಕರಿಯದಾಗಲಿ, ಹಿಂದಿನ ಬೀದಿಯ ಮುದುಕಿಯ ಹಪ್ಪಳದ ಅಂಗಡಿಯದಾಗಲಿ ನನಗೆ ಖಬರ್ ಇಲ್ಲ ಎನ್ನುವಂತೆ. ಹೀಗೆ ಮಜಾ ಬಯಸುವ ಮಂದಿಗೆಂದೇ ತಯಾರಾಗುವ ಚಿತ್ರಗಳಲ್ಲಿ ಕೆಲವು ಬಹು ನಿಖರವಾಗಿ ಒಂದಷ್ಟು ಸ್ವಾದಗಳನ್ನು ಹದವಾಗಿ ಹೊಂದಿರುತ್ತವೆ. ಇಂತಹ ಚಿತ್ರಗಳ ಸಾಲಿಗೆ ಸೇರುವ ಸಿನೆಮ ಕೆ.ಮಾದೇಶ್ ಕನ್ನಡಕ್ಕಿಳಿಸಿರುವ “ಹುಡುಗರು”.

“ಹುಡುಗರು” ಒಂದು ರಿಮೇಕ್ ಸಿನೆಮ. ತಮಿಳಿನಲ್ಲಿ ಸಮುದ್ರ ಖನಿ ನಿರ್ದೇಶಿಸಿರುವ “ನಾಡೋಡಿಗಳ್” ಇದರ ಮೂಲ. ತಮಿಳು ಸಿನೆಮಗಳಲ್ಲಿ ವಿಲಕ್ಷಣವಾದ ಗುಣವೊಂದಿದೆ. ತಮ್ಮ ಸಂಸ್ಕೃತಿಯ ಬಗ್ಗೆ ವಿಪರೀತ ಹೆಮ್ಮೆಯಿರುವ ತಮಿಳರು, ತಮಿಳು ಮಣ್ಣಿನ ವಾಸನೆಯಿರುವ ಚಿತ್ರಗಳನ್ನೇ ಮಾಡುತ್ತಾರೆ. ಯೂನಿವರ್ಸಲ್ ಎನ್ನಿಸುವಂತಹ, ಬಹುದೊಡ್ಡ ವೀಕ್ಷಕವರ್ಗವನ್ನು ಕೇಂದ್ರೀಕರಿಸಿದ ಸಿನೆಮಗಳನ್ನು ಪಕ್ಕಕ್ಕೆ ಸರಿಸಿ ನೋಡಿದರೆ ಅಲ್ಲಿ ನಿರ್ಮಾಣವಾಗುವ ಸಿನೆಮಗಳು ತಮಿಳು ನೆಲದಲ್ಲಿ ಬೇರೂರಿದಂತವಾಗಿರುತ್ತವೆ. ಅವರು ಆಯ್ದುಕೊಳ್ಳುವ ಕಥೆ ತಮಿಳು ನೆಲದಲ್ಲಿ ಮಾತ್ರ ನಡೆಯಲು ಸಾಧ್ಯ,  ಪಾತ್ರಗಳು, ಅವುಗಳ ಭಾಷೆ, ವರ್ತನೆಗಳ ಬೇರು ತಮಿಳು ನೆಲದಲ್ಲಿ ಆಳವಾಗಿ ಇಳಿದಿರುತ್ತವೆ. ಹೀಗಾಗಿ ಅವರ ಸಿನೆಮಗಳು ವಿಶಿಷ್ಟವಾದ ಸಾಂಸ್ಕೃತಿಕ ಅನನ್ಯತೆಯ ಕೋಶವೊಂದನ್ನು ಹೊದೆದಿರುತ್ತವೆ. ಬೇರೆ ಭಾಷೆಗೆ ಆ ಸಿನೆಮಗಳನ್ನು ರೂಪಾಂತರಿಸುವಾಗ (ಬಹುಶಃ ಭಟ್ಟಿ ಇಳಿಸುವುದು ಸೂಕ್ತವೇನೋ) ಈ ಸಾಂಸ್ಕೃತಿಕ ಆಯಾಮ ಕಳಚಿಕೊಂಡು ಕೆಲವೊಮ್ಮೆ ಪೇಲವ ಕೃತಿ ಮೂಡಿಬರುತ್ತದೆ.

ಹುಡುಗರು ಚಿತ್ರಕ್ಕೆ ಹಿಂದಿರುಗೋಣ. ಇದನ್ನೊಂದು ಸ್ವತಂತ್ರ ಕೃತಿಯಾಗಿ ಪರಿಗಣಿಸಿದರೆ ಶ್ರೇಷ್ಠ ಗುಣಮಟ್ಟದ, ತಾಂತ್ರಿಕವಾಗಿ ಪರಿಪೂರ್ಣವಾದ, ಅಚ್ಚುಕಟ್ಟಾದ, ಮನರಂಜನೆಗೆ ಮೋಸ ಮಾಡದ, ಹದವಾದ ಚಿತ್ರ. ಪುನೀತ್ ಅಭಿನಯ ಚಿತ್ರದಿಂದ ಚಿತ್ರಕ್ಕೆ ಮಾಗುತ್ತಿರುವುದಕ್ಕೆ ಈ ಚಿತ್ರ ಸಾಕ್ಷಿ. ಯೋಗಿ ಅಬ್ಬರವಿಲ್ಲದ, ಹಿರೋಯಿಸಂ ಇಲ್ಲದೆ ಪಾತ್ರವಾಗಿ ಅಭಿನಯಿಸಿರುವುದು ಸಿನೆಮಾದ ಪ್ಲಸ್ ಪಾಯಿಂಟ್. ಆತನ ಕಾಮಿಡಿ ಟೈಮಿಂಗ್ ಅಮೋಘವಾಗಿದ್ದು ಮುಂದಿನ ಚಿತ್ರಗಳಲ್ಲಿ ಈ ಸಾಮರ್ಥ್ಯವನ್ನು ಚೆನ್ನಾಗಿ ದುಡಿಸಿಕೊಳ್ಳಬಹುದು. ಕಿಟ್ಟಿ ಅಭಿನಯಕ್ಕೆ ಸವಾಲೆಸುವ ಪಾತ್ರವದಲ್ಲ. ಗುರುಪ್ರಸಾದ್ ಸಂಭಾಷಣೆ ಹಲವೆಡೆ ಚುರುಕಾಗಿದೆ. ಗುರುಪ್ರಸಾದ್ ಬ್ರ್ಯಾಂಡಿನ ಡೈಲಾಗುಗಳು ಹೆಚ್ಚು ಇಲ್ಲದಿರುವುದು ನೆಮ್ಮದಿ. ಸತ್ಯ ಹೆಗಡೆ ಸಿನೆಮಟಾಗ್ರಫಿ ಅದ್ಭುತವಾಗಿದೆ. ಫೈಟ್ ಸೀನುಗಳಲ್ಲಿನ ಚುರುಕಾದ ಕೆಮರಾ ಚಲನೆ ಹಾಗೂ ಎಡಿಟಿಂಗ್ ಗಮನಾರ್ಹವಾಗಿದೆ. ತಾಂತ್ರಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ವೃತ್ತಿಪರವಾದ ಕೆಲಸ ತೆಗೆಯುವಲ್ಲಿ ಮಾದೇಶ್ ಯಶಸ್ವಿಯಾಗಿದ್ದಾರೆ.

ಇಡೀ ತಮಿಳು ನಾಡಿಗೆ ವಿಶಿಷ್ಟ, ಅನನ್ಯ ಎನ್ನುವಂತಹ ಕೆಲವು ಗುಣಗಳಿವೆ. ಕೆಲವು ಅತಿಗಳಿವೆ. ಹೊರಗಿನವರಿಗೆ ಕಾಮಿಕಲ್ ಆಗಿ ಕಾಣಬಹುದಾದ ವರ್ತನೆಗಳು ಅಲ್ಲಿ ಸಹಜ ಎನ್ನುವಂತೆ ಇವೆ. ಸ್ನೇಹ, ಪ್ರೀತಿ, ಅಸೂಯೆ, ಸ್ಪರ್ಧೆ, ದ್ವೇಷ, ಅಭಿಮಾನ, ಸಮೂಹ ಸನ್ನಿ ಎಲ್ಲದರಲ್ಲೂ ತಮ್ಮತನದ ಛಾಪು ಮೂಡಿಸುವಂತೆ ತಮಿಳರು ಇದ್ದಾರೆ. ಅವರನ್ನು ಹಾಗೆಯೇ ಚಿತ್ರಿಸುವ ಸಿನೆಮಗಳು ಮೂಡಿ ಬರುತ್ತವೆ. ಹುಡುಗರು ಚಿತ್ರದ ಕತೆಯಲ್ಲೂ ಅದೇ ಪ್ರಯತ್ನವಿದೆ. ಸರಕಾರಿ ನೌಕರಿ, ಸ್ವಂತ ಉದ್ದಿಮೆ, ವಿದೇಶಕ್ಕೆ ಹಾರುವ ಕನಸುಗಳನ್ನು ಹೊತ್ತು ಇದೀಗ ತಾನೆ ಜೀವನದಲ್ಲಿ ನೆಲೆಯೂರುವ ತಯಾರಿಯಲ್ಲಿರುವ ಮೂವರು ತರುಣರು . ಅವರು ನೆಲೆಯೂರುವುದನ್ನೇ ನಿರೀಕ್ಷಿಸುವ ಅವರ ಬಾಳ ಸಂಗಾತಿಗಳು. ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿ ಎಲ್ಲಿಂದಲೋ ಬರುವ ಗೆಳೆಯ, ಆತನ ಪ್ರೀತಿ, ಅದಕ್ಕೆ ಅಡ್ಡಿಯಾಗಿರುವ ಹಿರಿಯರು. ಗೆಳೆಯನಿಗೆ ತನ್ನ ಪ್ರೀತಿಯನ್ನು ದಕ್ಕಿಸಿ ಕೊಡುವುದಕ್ಕೆಂದು ಹೊರಡುವ ಈ  ಹುಡುಗರು. ಪ್ರೀತಿಸಿದವರನ್ನು ಒಂದು ಮಾಡುವುದರಲ್ಲಿ ವಯಕ್ತಿಕ ಜೀವನವನ್ನು ಅಪಾಯಕ್ಕೊಡ್ಡಿಕೊಳ್ಳುತ್ತಾರೆ. ಸಹಜ ಸ್ಥಿತಿಗೆ ಹಿಂದಿರುಗಲಾರದಷ್ಟು ಘಾಸಿಗೊಳ್ಳುತ್ತಾರೆ. ಇಷ್ಟೆಲ್ಲ ಮಾಡಿ ಒಂದು ಮಾಡಿದ ಜೋಡಿಗೆ ಒಬ್ಬರಿಗೊಬ್ಬರು ಬೇಸರವಾಗುತ್ತಾರೆ. ತಮ್ಮ ಅಪ್ಪ ಅಮ್ಮಂದಿರು ಕೊಡಬಹುದಾದ ಐಶಾರಮದೆದುರು ಪ್ರೀತಿ ಮಂಕಾಗಿ ಕಾಣುತ್ತದೆ. ಅವರು ವಿಚ್ಛೇದನದ ಮೊರೆ ಹೋಗುತ್ತಾರೆ. ಇದನ್ನು ತಿಳಿದು ಕೃದ್ಧರಾದ ಹುಡುಗರು ಸೇಡು ತೀರಿಸಿಕೊಳ್ಳಲು ಹೊರಡುತ್ತಾರೆ.

ಉತ್ತಮವಾದ ಮೆಲೋಡ್ರಾಮ ಅಂಶಗಳಿರುವ ಈ ಸಿನೆಮ ಒಂದು ಲೆಕ್ಕದಲ್ಲಿ ಚಿತ್ರಕತೆಯ ಅಸ್ಥಿಭಾರದ ಮೇಲೆಯೇ ನಿಲ್ಲುವಂಥದ್ದು. ತಮಿಳಿನಲ್ಲಂತೂ ನಮಗೆ ಹಿರೋಯಿಸಂ ಅಂಶಗಳೂ ನಗಣ್ಯವಾಗಿ ಎಲ್ಲಾ ನಟರು ಕೇವಲ ಪಾತ್ರಧಾರಿಗಳಾಗಿ ಕಾಣುತ್ತಾರೆ. ಸಿದ್ಧಮಾದರಿಯ ಚಿತ್ರಕತೆಯಲ್ಲಿನ ರೊಮ್ಯಾನ್ಸ್, ವಿಲನ್ನುಗಳು ಇರದಂತಹ ಹೊಸತನವಿರುವ ಕತೆ ಇದು.

ಇನ್ನು ಸಿನೆಮಾದ ಕತೆಯನ್ನು ನಾನು ಗ್ರಹಿಸಿದ ರೀತಿಯನ್ನು ನಿರೂಪಿಸಲಿದ್ದೇನೆ: ಮನುಷ್ಯ ತನ್ನ ಆಕಾಂಕ್ಷೆಗಳು, ತನ್ನ ಭಾವನೆಗಳು, ತನ್ನ ಸ್ವಾತಂತ್ರ್ಯದ ಬಯಕೆ, ತನ್ನ ಅಭಿವ್ಯಕ್ತಿ ಹೀಗೆ ವೈಯಕ್ತಿಕ ವ್ಯಕ್ತಿತ್ವವೊಂದನ್ನು ಹೊಂದಿರುತ್ತಾನೆ. ಇಡೀ ಜಗತ್ತೇ ಎದುರಾಗಿ ನಿಂತರೂ ತನ್ನ ಆತ್ಮಸಾಕ್ಷಿಗೆ ಮೋಸ ಮಾಡಿಕೊಳ್ಳದ ಮಟ್ಟಿಗೆ ವಯಕ್ತಿಕ ಸತ್ಯಗಳಿಗೆ ಬದ್ಧವಾಗಿ ಉಳಿಯುತ್ತಾನೆ. ಆದರೆ ಮನುಷ್ಯನ ವ್ಯಕ್ತಿತ್ವಕ್ಕೆ ವೈಯಕ್ತಿಕ ಆಯಾಮವೊಂದೇ ಇರುವುದಿಲ್ಲ. ಅವನು ಇಂಥವೇ ಹಲವಾರು ವ್ಯಕ್ತಿಗಳು ಸೇರಿ  ರೂಪುಗೊಂಡ ಸಮಾಜದ ಭಾಗವಾಗಿರುತ್ತಾನೆ. ಹೀಗಾಗಿ ಅವನ ವ್ಯಕ್ತಿತ್ವಕ್ಕೆ ಸಾಮಾಜಿಕ ಆಯಾಮವೂ ಇರುತ್ತದೆ. ಹಲವು ಸಂದರ್ಭಗಳಲ್ಲಿ ಒಬ್ಬನೇ ವ್ಯಕ್ತಿಯ ವೈಯಕ್ತಿಕ ಹಾಗೂ ಸಾಮಾಜಿಕ ವ್ಯಕ್ತಿತ್ವಗಳಲ್ಲಿ ಉಂಟಾಗುವ ತಿಕ್ಕಾಟ ಸಾಹಿತ್ಯಿಕವಾಗಿ ಹಾಗೂ ಕಲಾತ್ಮಕವಾಗಿ ಗಮನಾರ್ಹ ಸಂಗತಿಯಾಗಿರುತ್ತದೆ.

ಹುಡುಗರು ಚಿತ್ರದಲ್ಲಿಯೂ ಅಷ್ಟೇ. ಈಜು ಬಾರದ ಹುಡುಗ ಪ್ರೀತಿಸಿದ ಹುಡುಗಿಗಾಗಿ ನೀರಿಗೆ ಹಾರಿ ಪ್ರಾಣ ಕಳೆದುಕೊಳ್ಳಲೂ ಸಿದ್ಧನಿರುತ್ತಾನೆ. ಪ್ರೀತಿ ದಕ್ಕಲಿಲ್ಲ ಎನ್ನುವಾಗಲೂ ನಿರಾಶೆಯಿಂದ ಪ್ರಾಣ ಕಳೆದುಕೊಳ್ಳಲು ಹೋಗುತ್ತಾನೆ. ಹೀಗಾಗಿ ಅವನ ಪ್ರೀತಿಯ ಸಾಚಾತನವನ್ನು ಚಿತ್ರದಲ್ಲಿ ಅನಂತರ ಪ್ರಶ್ನಿಸಲಾಗುತ್ತದೆಯಾದರೂ ಒಂದಾಗುವ ಮುನ್ನ ಇರುವ ಪ್ರೀತಿಯ ಉತ್ಕಟತೆಯನ್ನು, ಪ್ರಾಮಾಣಿಕತೆಯನ್ನು ಪ್ರಶ್ನಿಸಲಾಗದು. ವೈಯಕ್ತಿಕ ನೆಲೆಯಲ್ಲಿ ತಮಗೆ ಮುಖ್ಯವಾದ ಪ್ರೀತಿಯನ್ನು ಗಳಿಸಿಕೊಳ್ಳಲು ಈ ಜೋಡಿ ಅಪ್ಪ, ಅಮ್ಮ, ಬಳಗ ಸೇರಿದ ಸಾಮಾಜಿಕವನ್ನು ಬಲಿಕೊಡುತ್ತಾರೆ. ಮುಂದೆ ಗೆಳೆಯರ ರಕ್ಷಣೆಯಲ್ಲಿ ಒಂದಾಗುವ ಜೋಡಿ ಸಣ್ಣ ಪುಟ್ಟ ಕಾರಣಗಳಿಗೆ ಜಗಳವಾಡಿಕೊಂಡು ವಿಚ್ಛೇದನ ಪಡೆಯುವ ಹಂತವನ್ನು ತಲುಪಿಬಿಡುತ್ತಾರೆ. ಗೆಳೆಯರ ತ್ಯಾಗ, ತಮಗೇ ಒಂದಾಗಲು ಇದ್ದ ಹಪಹಪಿ, ಪ್ರೀತಿಯ ಉತ್ಕಟತೆ ಎಲ್ಲವನ್ನೂ ತಮ್ಮ ತಂದೆ ತಾಯಿಗಳು ಒದಗಿಸಬಹುದಾದ ಐಶಾರಾಮ ಮರೆಯಿಸಿಬಿಡುತ್ತದೆ. ಹುಡುಗಿಗೆ ಫೇಶಿಯಲ್ ಮಾಡಿಸಿಕೊಳ್ಳಲು ಗಂಡ ಹಣ ಕೊಡುತ್ತಿಲ್ಲ ಎನ್ನುವುದು ಸಮಸ್ಯೆಯಾದರೆ ಹುಡುಗನಿಗೆ ಹದಿನೈದು ದಿನಕ್ಕಿಂತ ಹೆಚ್ಚು ಕಾಲ ದುಡಿದು ಸಂಪಾದಿಸಲಾಗದ ಆಲಸ್ಯ. ಇವರಿಬ್ಬರು ಒಂದಾಗುವುದಕ್ಕೆ ಕಾರಣವಾಗಿದ್ದು ವೈಯಕ್ತಿಕ ನೆಲೆಯಲ್ಲಿನ ಪ್ರೀತಿ. ದೂರಾಗುವುದಕ್ಕೂ ಕಾರಣವಾಗುವುದು ವೈಯಕ್ತಿಕ ನೆಲೆಯಲ್ಲಿನ ಐಶಾರಾಮದ ಬಯಕೆ. ಶ್ರೀಮಂತ ಹಾಗೂ ಪ್ರಭಾವಿ ಮನೆತನಗಳಿಗೆ ಸೇರಿದ ಈ ಜೋಡಿಗೆ ಸಾಮಾಜಿಕ ವ್ಯಕ್ತಿತ್ವವೇ ಇಲ್ಲವೇ ಎನ್ನುವ ಪ್ರಶ್ನೆ ಹುಟ್ಟದೆ ಇರದು. ಗೆಳೆಯರು ನಂಬಿಕೆ, ವಿಶ್ವಾಸದಿಂದ ಪ್ರೀತಿಗೆ ನೆರವಾದೊಡನೆ ತಾವು ಸಮುದಾಯದ ಬದುಕಿಗೆ ಸೇರಿದ್ದೇವೆ, ಅದು ಹೊರಿಸುವ ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ ಎನ್ನುವ ಕಲ್ಪನೆಯೇ ಇಲ್ಲದ ಹಾಗೆ ಮಾಡುವ ಶ್ರೀಮಂತಿಕೆಯ ಲೋಲುಪತೆ ಚಿತ್ರಕತೆಯಲ್ಲಿ ಸೂಕ್ಷ್ಮವಾಗಿಯಾದರೂ ಕಾಣುತ್ತದೆ.

ಇನ್ನು ಈ ಜೋಡಿಗೆ ಒಂದಾಗಲು ನೆರವಾಗುವ ಹುಡುಗರು ಶ್ರೀಮಂತರಲ್ಲ. ಯಾರೂ ಐಶಾರಾಮದ ಹಪಹಪಿಗೆ ಬಿದ್ದವರಲ್ಲ. ಅಪ್ಪ, ಅಮ್ಮ, ತಂಗಿ, ಗೆಳೆಯರು, ಬಳಗ ಹೀಗೆ ಸಮುದಾಯದ ನಡುವೆ ಬದುಕು ಕಟ್ಟಿಕೊಳ್ಳುವ ಹವಣಿಕೆಯಲ್ಲಿದ್ದವರು. ತಂದೆ ತಾಯಿ ಒಪ್ಪದಿದ್ದರೂ ಜೀವವನ್ನೇ ಪಣವಾಗಿಟ್ಟು ಮದುವೆ ಮಾಡಲು ಹೊರಡುವ ಹುಡುಗರು ತಮ್ಮ ಪ್ರೀತಿಗಳ ಬಗ್ಗೆ ಆಲೋಚಿಸುವ ವಿಧಾನವೇ ಬೇರೆ ತೆರನಾದದ್ದು. ಪ್ರಭು(ಪುನೀತ್) ತಾನು ಇಷ್ಟ ಪಟ್ಟ ಹುಡುಗಿಯ ಅಪ್ಪನ ಸರಕಾರಿ ನೌಕರಿಯ ಹುಚ್ಚಿಗೆ ಮರ್ಯಾದೆ ಕೊಡುತ್ತಾನೆ. ಅವನ ಇಚ್ಛೆಯಂತೆಯೇ ಸರಕಾರಿ ನೌಕರಿ ಪಡೆದ ನಂತರವೇ ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾನೆ. ಕಡೆಗೆ ತನ್ನ ತಂದೆಯ ಇಚ್ಛೆಯಂತೆ ಆ ಹುಡುಗಿಯನ್ನು ಮದುವೆಯಾಗುವ ಆಸೆಯನ್ನು ಕೈ ಬಿಡುತ್ತಾನೆ. ಗೆಳೆಯರ ಸಹಾಯ ಪಡೆದು ಮನೆಯವರನ್ನು ಎದುರು ಹಾಕಿಕೊಂಡು ಹುಡುಗಿಯನ್ನು ಪಡೆಯಬಹುದಾಗಿದ್ದರೂ ಆತ ಸಮಾಜಿಕ ವ್ಯಕ್ತಿತ್ವದ ಬದ್ಧತೆಗಳಿಗಾಗಿ ವೈಯಕ್ತಿಕ ಆಕಾಂಕ್ಷೆಗಳನ್ನು ಬಲಿಕೊಡುತ್ತಾನೆ. ಇನ್ನೊಂದು ಪಾತ್ರ (ಶ್ರೀ ನಗರ ಕಿಟ್ಟಿ) ಪ್ರೀತಿಯನ್ನು ಒಲಿಸಿಕೊಳ್ಳುವುದಕ್ಕೆ ತನ್ನ ತಂದೆಯ ಸಹಾಯ ಪಡೆಯುತ್ತಾನೆ. ಗೆಳೆಯರದಲ್ಲ.

ಗೆಳೆತನ ಎಂದು ಸಾಮಾಜಿಕ ನೆಲೆಯ ವ್ಯಕ್ತಿತ್ವದ ಬದ್ಧತೆಯನ್ನು ನಿರ್ವಹಿಸುವುದಕ್ಕೆ ಹುಡುಗರು ವೈಯಕ್ತಿಕ ಬದುಕನ್ನು ಸಂಪೂರ್ಣವಾಗಿ ಹಾಳು ಮಾಡಿಕೊಳ್ಳುತ್ತಾರೆ. ಹುಡುಗ ಹುಡುಗಿಯ ಜೋಡಿ ವೈಯಕ್ತಿಕ ಆಸೆಗಳಿಗೆ ಬದ್ಧರಾಗಿ ಸಾಮುದಾಯಿಕ ಜವಾಬ್ದಾರಿಯನ್ನು ನಿರ್ಲಕ್ಷಿಸಿದರೆ, ಈ ಹುಡುಗರು ಗೆಳೆತನ, ನಂಬಿಕೆ, ವಿಶ್ವಾಸ, ಮಾನವೀಯತೆ ಮೊದಲಾದವುಗಳು ಹೇರುವ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕಾಗಿ ವೈಯಕ್ತಿಕ ಬದುಕಿನ ನೆಮ್ಮದಿ, ಆಸೆಗಳನ್ನು ಕೊಂದುಕೊಳ್ಳುತ್ತಾರೆ. ಸಿನೆಮ ತನ್ನ ನಿರೂಪಣೆಯಲ್ಲಿ ಈ ಎರಡು ವರ್ಗಗಳ ಪಾತ್ರಗಳ ವೈಯಕ್ತಿಕ ಹಾಗೂ ಸಾಮಾಜಿಕ ವ್ಯಕ್ತಿತ್ವಗಳ ತಿಕ್ಕಾಟವನ್ನು ಸೂಕ್ಷ್ಮವಾಗಿ ಚಿತ್ರಿಸಬಹುದಾಗಿತ್ತು. ಆದರೆ ಚಿತ್ರದ ನಿರ್ದೇಶಕ  ಗೆಳೆತನಕ್ಕಾಗಿ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿದವರ ಬಗೆಗೆ ಪ್ರೇಕ್ಷಕನಲ್ಲಿ ಅನುಕಂಪ ಮೂಡುವಂತೆಯೂ, ವೈಯಕ್ತಿಕ ನೆಮ್ಮದಿಯನ್ನು ಆರಿಸಿಕೊಂಡ ಜೋಡಿಯ ಕುರಿತು ಆಕ್ರೋಶವನ್ನು ಹುಟ್ಟಿಸುವಂತೆಯೂ ನಿರೂಪಣೆ ಆರಿಸಿಕೊಂಡಿದ್ದಾರೆ. ಇದರಿಂದ ನಿರ್ದೇಶಕ ಪಾತ್ರಗಳ ಜಗತ್ತಿನಲ್ಲಿ ಮಧ್ಯ ಪ್ರವೇಶ ಮಾಡಿಬಿಟ್ಟಂತಾಗುತ್ತದೆ. ತನ್ನದೇ ಪಾತ್ರಗಳ ಮೇಲೆ ನಿರ್ದೇಶಕ ಈ ರೀತಿ ಬಯಾಸ್ಡ್ ಆಗುವುದು ಉತ್ತಮ ಕಲಾಕೃತಿಯ ಸೃಷ್ಟಿಗೆ ಅಡಚಣೆಯಾಗುತ್ತದೆ.

ಮುಗಿಸುವ ಮುನ್ನ ಹೇಳಿಬಿಡಬಹುದಾದ ಮಾತು: ಹುಡುಗರು ಒಳ್ಳೆಯ ಮನರಂಜನೆಯ ಚಿತ್ರ. ತಾಂತ್ರಿಕವಾಗಿ ಇಷ್ಟೋಳ್ಳೆಯ ಚಿತ್ರ ನಿರ್ಮಿಸುವ, ನಿರ್ದೇಶಿಸುವ ತಾಂತ್ರಿಕ ವರ್ಗ, ಇವುಗಳಲ್ಲಿ ನಟಿಸುವ ನಟವರ್ಗ ಇದ್ದಾಗ್ಯೂ ನಮಗೆ ಸ್ವತಂತ್ರವಾಗಿ ಕತೆ ಕಟ್ಟುವ ಆತ್ಮವಿಶ್ವಾಸ ಇಲ್ಲದಿರುವುದು ವಿಷಾದನೀಯ.     

 

samvaada.com fan page on facebook




ಇಲ್ಲಿವರೆಗಿನ ಅಭಿಪ್ರಾಯಗಳು

Kanakaraju
2011-05-12 10:30:59

We can not say Techinacal aspects of any remake movies are well. BCZ it is already pictured on reel.. Our Kannada cinema is at half the way , comparing to other Southern cinemas....

GUNDA
2011-07-08 10:47:47

baati eluvsuveke andre hudugaru chitra eg, kandri kannda dalli kathe ellva


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು