ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಶಿಕ್ಷಣ, ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳು ಸಾಕಷ್ಟು ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ಈ ಎಲ್ಲಾ ಆಶಯಗಳಿಗೆ ತಣ್ಣೀರೆರೆಚುವಂತಾ ರೀತಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ ಮಕ್ಕಳ ಪುಸ್ತಕಗಳ "ಅಶ್ಲೀಲ ಲೇಬಲ್" ಗಳು.
ಇನ್ನೇನೋ ಶಾಲೆ ಶುರುವಾಗಲು ಕೆಲವೇ ದಿನಗಳ ಬಾಕಿ, ಎಲ್ಲಿ ನೋಡೊದರಲ್ಲೂ ಮಕ್ಕಳು ಶಾಲಾ ದಾಖಲಾತಿ, ಸಮವಸ್ತ್ರ,ಪುಸ್ತಕ ಖರೀದಿ, ಶಾಲಾರಂಭಕ್ಕೆ ಸಿದ್ದತೆ.. ಹೀಗೆ ಬಗೆಬಗೆಯ ರೀತಿಯಲ್ಲಿ ಹೊಸ ಶೈಕ್ಷಣಿಕ ವರ್ಷವನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ.
ಜೊತೆಗೆ ಪುಸ್ತಕವ್ಯಾಪಾರಸ್ಥರೂ ಕೂಡ ಮಕ್ಕಳಿಗೆ ಪ್ರಿಯವಾದ ರೀತಿಯಲ್ಲಿ ಪುಸ್ತಕ , ಲೇಬಲ್, ಬೈಂಡ್ ಪೇಪರ್, ಪೆನ್ನು ,ಪೆನ್ಸಿಲ್, ರಬ್ಬರ್ ಹೀಗೆ ಸ್ಟೇಷನರಿ ವಸ್ತುಗಳನ್ನು ನೀಡುವ ತುರಾತುರಿಯಲ್ಲಿದ್ದಾರೆ.
ಈ ಎಲ್ಲದರ ನಡುವೆ ಅಂಗಡಿಗಳಲ್ಲಿ ವಿದ್ಯಾರ್ಥಿಗಳಿಗೆ ಮಾರಲ್ಪಡುತ್ತಿರುವ ಲೇಬಲ್ ಗಳ ಅಶ್ಲೀಲತೆ ಇದೀಗ ಪ್ರಜ್ಞಾವಂತ ಮನಸ್ಸುಗಳನ್ನು ಕೆರಳಿಸಿದೆ. ಶಾಲಾ ಶಿಕ್ಷಣದ ಆಶಯಗಳ
ನ್ನೇ ಬುಡಮೇಲು ಮಾಡುವಂತಾ ರೀತಿಯಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ಕಲಕುವ, ಅಶ್ಲೀಲ ಹಾಗೂ ಮಾದಕತೆಯನ್ನು ಪ್ರತಿಬಿಂಬಿಸುವ ಚಿತ್ರಗಳು ಈ ಲೇಬಲ್‌ಗಳ ಹೆಸರಿನಲ್ಲಿ ಮುದ್ರಿತವಾಗಿದೆ.
ಕೆಲವೇ ವರ್ಷಗಳ ಹಿಂದೆ ಸಾಧಕರ, ಕ್ರೀಡಾಪಟುಗಳ ಚಿತ್ರಗಳೊಂದಿಗೆ ಮಾರುಕಟ್ಟೆಯಲ್ಲಿ ದೊರಕುತ್ತಿದ್ದ ಲೇಬಲ್ ಗಳ ಈ ಬದಲಾದ ಚಿತ್ರಣ ನಿಜಕ್ಕೂ ಮಕ್ಕಳ ಮನಸ್ಸನ್ನು ತಪ್ಪುದಾರಿಯತ್ತ ಸೆಳೆಯುವ ಸಾಧ್ಯತೆಯೇ ಹೆಚ್ಚು. ಈಗಾಗಲೇ ಮೊಬೈಲ್ ಹಾಗೂ ಅಂತರ್ಜಾಲದ ದುರ್ಬಳಕೆಯಿಂದ ವಿದ್ಯಾರ್ಥಿ ವಯಸ್ಸಿನಲ್ಲಿಯೇ ತಪ್ಪುದಾರಿಯತ್ತ ಅರಿವಿಲ್ಲದೇ ಸಾಗುವವರು ಬಹಳ ಮಂದಿಯಿದ್ದಾರೆ. ಇದರ ನಡುವೆ
ದಿನನಿತ್ಯ ನೋಡುವ ಪುಸ್ತಕಗಳ ಮುಖಪುಟವೇ ಇಂತಹಾ ಮನಸ್ಸು ಉದ್ರೇಕಿಸುವ ಚಿತ್ರಗಳಿಂದ ಅಲಂಕರಿಸಲ್ಪಟ್ಟರೆ ಆಗಬಹುದಾದ ಅಪಾಯಗಳನ್ನು ನೆನೆಯಲೂ ಕಷ್ಟವಾಗಬಹುದು.
ಗ್ರಾಹಕರನ್ನು ಸೆಳೆಯಲು ವಿವಿಧ ಜಾಹೀರಾತುಗಳಲ್ಲಿ ಪ್ರಕಟಗೊಳ್ಳುತ್ತಿದ್ದ, ಪ್ರಸಾರವಾಗುತ್ತಿದ್ದ ತುಂಡು ಬಟ್ಟೆ, ಅಶ್ಲೀಲ ಉಡುಗೆಯ ಮಾಡೆಲ್ ಗಳ ಫೋಟೋಗಳು ಮಕ್ಕಳ ಪುಸ್ತಕಗಳ ಮುಖಪುಟವನ್ನು ಅಲಂಕರಿಸಿದರೆ ಇದಕ್ಕಿಂತ ದೊಡ್ಡ ದುರಂತ ಬೇರೊಂದು ಇದೆಯೇ...?
ಶಾಲೆಯ ಪ್ರತೀ ಆಗುಹೋಗುಗಳು, ಚಟುವಟಿಕೆಗಳು ಮಕ್ಕಳನ್ನು ಮಾನಸಿಕವಾಗಿ ಪ್ರಬುದ್ದರನ್ನಾಗಿಸಬೇಕು, ನೈತಿಕ ಶಿಕ್ಷಣದ ಜೊತೆಗೆ ಸದ್ವಿಚಾರಗಳನ್ನು ಅವರ ಮನಸ್ಸಿನಲ್ಲಿ ತುಂಬಬೇಕೆನ್ನುವುದು ಶಿಕ್ಷಣ ಪ್ರೇಮಿಗಳ ಆಶಯ. ಈ ನಿಟ್ಟಿನಲ್ಲಿ ಚಿಕ್ಕವಯಸ್ಸಿನಲ್ಲಿಯೇ ಮಕ್ಕಳ ಮನಸ್ಸನ್ನು ಕೆಡಿಸಬಹುದಾದ ಇಂತಹ ಲೇಬಲ್ ಗಳು ಮಕ್ಕಳ ಪುಸ್ತಕಗಳನ್ನು ಅಲಂಕರಿಸಬಾರದು, ಕಲಿಯುವ, ನಲಿಯುವ ವಯಸ್ಸಿನಲ್ಲಿ ಮಕ್ಕಳ ಮನಸ್ಸು ತಪ್ಪುದಾರಿ ಹಿಡಿಯಬಾರದು.
ಮೊದಲೆಲ್ಲಾ ಲೇಬಲ್ ಕೊಳ್ಳಲೂ ಮನೆಗಳಲ್ಲಿ ಕಷ್ಟವಿತ್ತು, ಆಗೆಲ್ಲಾ ಮಕ್ಕಳೇ ಕಾಗದದಲ್ಲಿ ಲೇಬಲ್ ಗಳನ್ನು ಮಾಡಿ ಅಂಟಿಸಿ ಖುಷಿಪಡುತ್ತಿದ್ದರು. ಆದರೆ ಈಗಿನ ರೆಡಿಮೇಡ್ ಯುಗದಲ್ಲಿ ಪೋಷಕರು ಮಕ್ಕಳ ಎಲ್ಲಾ ಅಗತ್ಯಗಳನ್ನು ಪೂರೈಸಲು ತುದಿಗಾಲಲ್ಲಿ ನಿಂತಿರು
ತ್ತಾರೆ, ಹಾಗಾಗಿ ಮಕ್ಕಳು ಕೇಳಿದ್ದನ್ನೆಲ್ಲಾ ಅವರು ತಂದುಕೊಡುತ್ತಾರೆ, ಇದು ಒಂದೆಡೆ ಮಕ್ಕಳನ್ನು ಸಂತಸವಾಗಿಡುವ ಪ್ರಯತ್ನವಾದರೆ, ಇನ್ನೊಂದೆಡೆಪ್ರತಿಷ್ಠೆಯ ಪ್ರಶ್ನೆ.
ಮಕ್ಕಳ ಶಿಕ್ಷಣದ ಬಗ್ಗೆ ಹೆತ್ತವರು ಮಾಡುವ ಸಣ್ಣಪುಟ್ಟ ನಿರ್ಲಕ್ಷ್ಯಗಳು ಮಕ್ಕಳ ಭವಿಷ್ಯದ ಬಗ್ಗೆ ಭಾರೀ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಹೆಚ್ಚಿನ ನಿಗಾ ಇರಿಸಬೇಕು. ಸರ್ಕಾರ, ಶಿಕ್ಷಣ ಇಲಾಖೆ ಕೂಡ ಹೆಚ್ಚಿನ ಮುತುವರ್ಜಿ ವಹಿಸಬೇಕು. ಕೆಟ್ಟ ಕುತೂಹಲದೊಂದಿಗೆ ಮಕ್ಕಳ ಮನಸ್ಸನ್ನು ಆಕ್ರಮಿಸುವ ಇಂತಹ "ಅಶ್ಲೀಲ ಲೇಬಲ್" ಗಳಿಗೆ ತಕ್ಷಣ ಕಡಿವಾಣ ಹಾಕಬೇಕು. ಗುಣಮಟ್ಟದ ಶಿಕ್ಷಣದಲ್ಲಿ ಅಶ್ಲೀಲತೆ ನುಸುಳದಂತೆ ಎಲ್ಲರೂ ಜಾಗೃತರಾಗಬೇಕು ಎನ್ನುವುದು ಪ್ರಜ್ಞಾವಂತರ ಆಶಯ.
27-05-2011 
2011-06-03 10:51:36
ನಗ್ನತೆಗೂ ಅಶ್ಲೀಲತೆಗೂ ವ್ಯತ್ಯಾಸ ಗೊತ್ತಿಲ್ಲದವರಿಂದ ಮಾತ್ರ ಇಂತಹ ಲೇಖನಗಳು ನಿರೀಕ್ಷಿಸಲು ಸಾಧ್ಯ.