A wednesday: ನಾನು ನೋಡಿದ ಸಿನೆಮಾಇತ್ತೀಚೆಗೆ ತೆರೆಕಂಡ ಹಿಂದೀ ಸಿನೆಮಾಗಳಲ್ಲೇ ಉತ್ತಮವಾಗಿದ್ದು "ಅ ವೆನಸ್ಡೆ". ವೀಕ್ಷಕ ಮತ್ತು ವಿಮರ್ಶಕರಿಬ್ಬರಿಂದಲೂ ಪ್ರಶಂಸೆಗೆ ಪಾತ್ರವಾದ ಸಿನೆಮಾ. ಹಲವಾರು ಪ್ರಶಸ್ತಿಗಳನ್ನೂ ಪಡೆದಿದೆ. ಸಾಮಾನ್ಯವಾಗಿ ಹಾಡು, ಕುಣಿತ, ಗದ್ದಲ ಮತ್ತು ಡೌಲಿನಿಂದಲೇ ತುಂಬಿರುವ ಹಿಂದೀ ಸಿನೆಮಾಗಳ ಮಧ್ಯೆ ಅಪರೂಪಕ್ಕೊಂದು ನಮ್ಮನ್ನು ಚಿಂತನೆಗೆ ಹಚ್ಚುವ ಸಿನೆಮಾ ಬರುತ್ತದೆ. ಜನ ಮುಗಿಬಿದ್ದು ನೋಡುತ್ತಾರೆ. ನನ್ನ ಗೆಳೆಯ ಕಿರಣ ಸಿನೆಮಾ ನೋಡಿದವನು ನಾನು ಸಿಕ್ಕಾಗಲೆಲ್ಲ ಅದನ್ನು ಹೊಗಳುತ್ತಿದ್ದ. ಅಲ್ಲದೆ ಅವಿನಾಶ್ ಬೇರೆ ತಮ್ಮ "ಪರ್ಯಾಯ ಪರ್ಯಾಯವಲ್ಲ" ಪ್ರಬಂಧದಲ್ಲಿ ಇದು ವಿಷನ್ ಮತ್ತು ಎಸೆನ್ಸ್ ದೃಷ್ಟಿಯಿಂದ ಪೂರ್ಣ ಪರ್ಯಾಯ ಎಂದು ಬರೆದಿದ್ದರು. ಈ ಎಲ್ಲಾ ಕಾರಣಗಳಿಂದಾಗಿ "ಅ ವೆನಸ್ಡೆ" ಸಿನೆಮಾ ನೋಡಲೇ ಬೇಕಾಯಿತು. ಭಯೋತ್ಪಾದನೆ ಮತ್ತು ಅದರ ಅಡ್ಡ ಪರಿಣಾಮಗಳ ಬಗ್ಗೆ ಸಾಕಷ್ಟು ಸಿನೆಮಾಗಳು ಬಂದಿವೆ. ಆದರೆ ಅವ್ಯಾವೂ ಭಯೋತ್ಪಾದನೆಗೆ ತುತ್ತಾಗುವ ಸಾಮಾನ್ಯ ಭಾರತೀಯನ ನೋವು, ಹತಾಶೆಗಳನ್ನು ಇಷ್ಟು ವ್ಯವಸ್ಥಿತವಾಗಿ ನಿರೂಪಿಸಿರಲಿಲ್ಲ. ಸಿನೆಮಾದ ಮುಖ್ಯ ಪಾತ್ರದಾರಿ ಯಾರೆನ್ನುವುದನ್ನು ಶುರುವಿನಿಂದ ಅಂತ್ಯದವರೆಗೂ ರಹಸ್ಯವಾಗಿಟ್ಟು ಕೊನೆಯಲ್ಲಿ ಅವನು ನಮ್ಮ ನಿಮ್ಮಂತೆಯೇ ಒಬ್ಬ ಸಾಮಾನ್ಯ ವ್ಯಕ್ತಿಯೆಂದು ಹೇಳಿದ್ದು ಸಿನೆಮಾದ ಹೆಗ್ಗಳಿಕೆ. ಅಲ್ಲದೆ ಭಯೋತ್ಪಾದನೆಯಂತಹ ಧರ್ಮಸೂಕ್ಷ್ಮದ ಕಥೆಯನ್ನು ಹೇಳುವಾಗ ಮುಖ್ಯ ಪಾತ್ರದಾರಿ ಯಾವ ಕೌಮಿಗೂ ಸೇರದ "ಮೂರ್ಖ ಸಾಮಾನ್ಯ ವ್ಯಕ್ತಿ" ಎಂದು ಹೇಳುವುದು ನಿರ್ದೇಶಕನ ವಿಷನ್ ಯಾವ ಪ್ರಿಜುಡೈಸ್ಗೂ ಒಳಗಾಗಿಲ್ಲ ಎನ್ನುವುದನ್ನು ಪ್ರಮಾಣಿಸುತ್ತದೆ. ಅಂತೆಯೇ ಈ ಸಿನೆಮಾ ನೋಡಲು, ಚರ್ಚಿಸಲು ಮತ್ತು ವಿಮರ್ಶಿಸಲು ಯೋಗ್ಯವಾಗಿದೆ. ಸಿನೆಮಾದ ಕಥೆಯನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಸಂಕೇತಗಳನ್ನು ಬಳಸದೆ ನೇರವಾಗಿ ನಿರೂಪಿಸಲಾಗಿದೆ. ನಸೀರ್ ಹೊತ್ತು ಓಡಾಡುವ ಬ್ಯಾಗಿನ ಮೇಲೆ ಜೆ & ಕೆ ಎಂದು ಬರೆದಿರುವುದು ಮತ್ತು ಬಹಳ ಕ್ರೂರಿಯಾದ ಎ ಟಿ ಎಸ್ ನ ಪೋಲಿಸ್ ಅಧಿಕಾರಿ ಮುಸ್ಲಿಮನಾಗಿರುವುದು ಸಾಂಕೇತಿಕವಾಗಿ ಏನಾದರು ಹೇಳುತ್ತಿರಬಹುದೇ ಎನ್ನುವ ಬಗ್ಗೆ ನನಗೆ ಅನುಮಾನಗಳಿದೆ. ಚೆಂದವಾದ ಸಿನಿಮಾವನ್ನು ನೋಡುತ್ತಾ ಮತ್ತೊಮ್ಮೆ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಮತ್ತು ಸಿನೆಮಾದ ಬಗ್ಗೆ ನನ್ನಲ್ಲಿ ಹುಟ್ಟಿರುವ ಅನುಮಾನಗಳನ್ನು ಬಗೆಹರಿಸಿಕೊಳ್ಳಲು ಯತ್ನಿಸುವುದೇ ಈ ಬರಹದ ಉದ್ದೇಶ. ********* ನಾಳೆಯಷ್ಟೇ ರಿಟೈರ್ ಆಗಲಿರುವ ಮುಂಬೈನ ಅಸಿಸ್ಟಂಟ್ ಕಮೀಷನರ್ ಆಫ್ ಪೋಲಿಸ್ ಪ್ರಕಾಶ್ ರಾಥೋಡ್(ಅನುಪಮ್ ಖೇರ್) ಹೇಳುವ, ಒಂದು ಬುಧವಾರ ನಡೆದ, ತನ್ನಿಡೀ ಸರ್ವಿಸಿನಲ್ಲೇ ಅತ ನಿಭಾಯಿಸಿದ ಬಹಳ ಚಾಲೆಂಜಿಂಗ್ ಮತ್ತು ಇಂಟರೆಸ್ಟಿಂಗ್ ಅದ ಕೇಸೊಂದರಿಂದ ಸಿನೆಮಾದ ಕಥೆ ಶುರುವಾಗುತ್ತದೆ. ಈ ಕೇಸ್ ಪೋಲಿಸ್ ಇಲಾಖೆಯ ಯಾವ ಪುಸ್ತಕದಲ್ಲೂ ದಾಖಲಾಗಿಲ್ಲ ಎನ್ನುವುದು ಶುರುವಿನಲ್ಲೇ ಸಿನೆಮಾದ ಬಗ್ಗೆ ಕುತೂಹಲ ಹುಟ್ಟಿಸುತ್ತದೆ. ಹಾಗಿದ್ದಲ್ಲಿ ಈ ಘಟನೆ ಹೇಗೆ ನಡೆರಬಹುದು? ಈ ಕೇಸಿಗೆ ಕಾರಣನಾದ ವ್ಯಕ್ತಿ(ನಸೀರುದ್ದೀನ್ ಶಾಹ್)ಮುಂಬೈ ನಗರದಲ್ಲಿ ಜನ ಓಡಾಡುವ ಜಾಗದಲ್ಲಿ ಒಂದು ಬ್ಯಾಗಿಟ್ಟು ಕಾಣೆಯಾಗುತ್ತಾನೆ.[ ಸಿನೆಮಾದ ಕೊನೆಯಲ್ಲಿ ಆತ ಪ್ರಕಾಶ್ ರಾಥೋಡ್(ಅನುಪಮ್ ಖೇರ್)ಗೆ ಪೋಲಿಸ್ ಸ್ಟೇಷನ್ ಅಲ್ಲದೆ ಬೇರೆಲ್ಲೂ ಬಾಂಬ್ ಪ್ಲಾಂಟ್ ಮಾಡಿಲ್ಲ ಎಂದು ಹೇಳಿದಾಗ ಈ ಬ್ಯಾಗ್ ಕೂಡ ಅದೇ ಎಂದು ಅರ್ಥಮಾಡಿಕೊಳ್ಳಬಹುದು.] ಮತ್ತೆ ಮುಂಬೈಯಲ್ಲಿರುವ ಮಹಾರಾಷ್ಟ್ರ ಪೋಲಿಸ್ ಮುಖ್ಯಾಲಯಕ್ಕೆ ಹತ್ತಿರವಿರುವ ಕುಲಾಬಾ ಪೋಲಿಸ್ ಠಾಣೆಗೆ ಬಂದು ತನ್ನದೊಂದು ಪರ್ಸು ಕಳುವಾಯಿತೆಂದು ದೂರು ಕೊಡುತ್ತಾನೆ. ಇಲ್ಲಿ ಆತ ತನ್ನ ಬಗ್ಗೆ ಸುಳ್ಳು ಮಾಹಿತಿ [hesaru, ವಿಳಾಸ, ಮೊಬೈಲ್ ನಂಬರ್] ನೀಡುತ್ತಾನೆ. ಅಲ್ಲಿಯ ಶೌಚಾಲಯದಲ್ಲಿ ಎಲ್ಲರ ಕಣ್ಣು ತಪ್ಪಿಸಿ ಆರ್ ಡಿ ಎಕ್ಸ್ ಇರುವ ಬ್ಯಾಗೊಂದನ್ನು ಇಡುತ್ತಾನೆ. ಮುಂದೆ ಸಿನೆಮಾದಲ್ಲಿ ಬರುವ ಪಾತ್ರಗಳನ್ನು ವಿಭಿನ್ನವಾಗಿ ಪರಿಚಯಿಸಲಾಗುತ್ತದೆ. ಪೋಲಿಸ್ ಕಮೀಷನರ್ ಪ್ರಕಾಶ್ ರಾಥೋಡ್ ಗೆ, ಹುಸಿ ಬೆದೆರಿಕೆಗಳಿಗೆ ಹೆದರಿ ನಡುಗುವ ನಾಯಕ ನಟ ಹಿಂದಿ ಸಿನೆಮಾ ರಂಗದಲ್ಲಿ ನಾನೊಬ್ಬ ಮೈನಾರಿಟಿಯಾದ್ದರಿಂದಲೇ ಹೀಗೆ ಹಾಗುತ್ತಿದೆ ಎಂದು ದೂರು ಕೊಡುವುದು,ಎ ಟಿ ಎಸ್ ನ ಪೋಲಿಸ್ ಅಧಿಕಾರಿ ಆರಿಫ್ ಖಾನ್ ಇನ್ಫಾರ್ಮರ್ ಒಬ್ಬನನ್ನು ಆಸ್ಪತ್ರಗೆ ಕಳುಸಿಹಸಲು ಮೂಗಿನಲ್ಲಿ ರಕ್ತ ಬರುವಂತೆ ಹೊಡೆಯುವುದು, ಅಲ್ಲದೆ ಇನ್ಫಾರ್ಮೆರ್ನ ಮನೆಯ ಹೆಂಗಸರಿಗೆ ತೊಂದರೆ ಕೊಡುತ್ತಿರುವ ಅವರ ಸೆಕ್ಯುರಿಟಿಗೆಂದೇ ನಿಯೋಜಿಸಲಾದ ಪೇದೆಯೊಬ್ಬನಿಗೆ ಹೊಡೆಯುವುದು, ಯುಟಿವಿ ನ್ಯೂಸ್ ಚಾನೆಲ್ ರಿಪೋರ್ಟರ್ ಕರೆಂಟು ಬಾಬುವಿನ ಸಂದರ್ಶನ ಮಾಡುವುದು, ಅಜಯ್ ಸಿಂಗ್ ತನ್ನ ಹೆಂಡತಿಯನ್ನು ರೈಲಿನಲ್ಲಿ ತಾಯಿಯ ಮನೆಗೆ ಕಳುಹಿಸುವುದು,ಹೀಗೆ. ಇವರೆಲ್ಲ ತಮ್ಮ ತಮ್ಮ ಕೆಲಸಗಳಲ್ಲಿ ಮೈಮರೆತಿರುವಾಗ ನಸೀರ್, ನಿರ್ಮಾಣ ಪೂರ್ತಿಗೊಳ್ಳದ ಕಟ್ಟಡವೊಂದರ ಮೇಲೆ ಪ್ರತ್ಯಕ್ಷನಾಗುತ್ತಾನೆ. ಆತನಿಗೆ ಬರುವ ಫೋನ್ ಕರೆಯಲ್ಲಿ ಮಹಿಳೆಯೊಬ್ಬಳು "ಬಾಳೆಹಣ್ಣು, ಬಾದಾಮ್ ಮತ್ತು ಟೊಮ್ಯಾಟೋ" ತರಲು ಹೇಳುವುದು ಈತ ಯಾರಿರಬಹುದು, ನಿಜವಾಗಿಯೂ ಭಯೋತ್ಪಾದಕನೇ ಎನ್ನುವ ಸಂಶಯ ಮೂಡಿಸುತ್ತದೆ. ನಂತರ ನಸೀರ್ ನೇರವಾಗಿ ಪೋಲಿಸ್ ಕಮೀಷನರ್ ಅಜಯ್ ರಾಥೋಡ್ ಗೆ ಫೋನ್ ಮಾಡಿ ನಗರದಲ್ಲಿ ಐದು ಕಡೆ ಬಾಂಬ್ ಪ್ಲಾಂಟ್ ಮಾಡಿರುವುದಾಗಿಯೂ ಮತ್ತು ಅವು ಸಂಜೆ ಐದುವರೆಗೆ ಸರಿಯಾಗಿ ಬ್ಲಾಸ್ಟ್ ಆಗುವುದಾಗಿ ತಿಳಿಸುತ್ತಾನೆ. ಇಂತಹ ಯಾವುದೇ ಅನಿರೀಕ್ಷಿತ ಕರೆಗಳಿಗೆ, ಅವು ಒಡ್ಡುವ ತೊಂದರೆಗಳಿಗೆ, ಸಿದ್ದರಾಗಿರದ ಪೋಲಿಸ್ ಇಲಾಖೆ ಸಾಧಾರಣವಾಗಿ ಗಾಬರಿಗೊಳ್ಳುತ್ತದೆ.ಪೋಲಿಸ್ ಕಮೀಷನರ್ ಅಜಯ್ ರಾಥೋಡ್ ಮುಖ್ಯಮಂತ್ರಿಯ ಒಪ್ಪಿಗೆ ಪಡೆದು ಈ ಕೇಸನ್ನು ಸಂಪೂರ್ಣವಾಗಿ ನಿಭಾಯಿಸುತ್ತಾನೆ. ಇಲ್ಲಿಯವರೆಗೂ ಈ ಉಗ್ರರನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಕಾಣುವ ವ್ಯಕ್ತಿ ಅವರನ್ನು ನಿಜವಾಗಿ ಕೊಲ್ಲಲು ಬಯಿಸಿದ್ದನೆಂದು ಅವನ ಬಾಯಿಂದಲೇ ತಿಳಿದು ದಂಗಾಗುತ್ತೇವೆ. ಆತ ಓರ್ವ ಸಾಮನ್ಯ ಮುಂಬೈ ನಗರವಾಸಿ. ಭಯೋತ್ಪಾದನೆಯ ಬಗ್ಗೆ ಏನೂ ಮಾಡದ ಸರ್ಕಾರದಿಂದ ಬೇಸತ್ತು ತಾನೆ ಅವರನ್ನು ಸಾಯಿಸಲು ಸಂಚುಮಾಡಿರುತ್ತಾನೆ. ನಾವು ಬಹಳವಾಗಿ ದ್ವೇಷಿಸುವ ಭಯೋತ್ಪಾದಕರು ಸಾಯುವುದರಿಂದ ನಮಗೆ ಸಿನೆಮಾ ನೋಡಿದ್ದು ಸಾರ್ಥಕವೆನಿಸುತ್ತದೆ. ********* ಸಿನೆಮಾ ನೋಡುವಾಗ ಪ್ರತಿ ದೃಶ್ಯ ನೀಡುವ ರೋಚಕತೆ ಮತ್ತು ಹುಟ್ಟಿಸುವ ಕುತೂಹಲ ನಮ್ಮನ್ನು ಮೈಮರೆಸಬಹುದು. ಕಥೆಯ ನಿರೂಪಣೆಯಲ್ಲಿನ ಮಾರ್ಪಾಡುಗಳು ನಮ್ಮನ್ನು ರಂಜಸಲೆಂದೇ ಮಾಡಿದವುಗಳಾಗಿರುತ್ತವೆ. ಈ ಸಿನೆಮಾ ಕೂಡ ಇದರಿಂದ ಹೊರತಾಗಿಲ್ಲ. ಒಂದು ಕಮರ್ಷಿಯಲ್ ಸಿನೆಮಾದಲ್ಲಿರಬಹುದಾದ ಎಲ್ಲ ಗಿಮಿಕ್ಕುಗಳೂ ಈ ಸಿನೆಮಾದಲ್ಲಿವೆ. ಶುರುವಿನಿಂದ ಕೊನೆಯ ತನಕ ನಮ್ಮಲ್ಲಿ ಕುತೂಹಲವನ್ನು ಸಿನೆಮಾ ಬೆಳೆಸುತ್ತದೆ. "ಎಲ್ಲ ಒಳ್ಳೆಯದೇ ಆಯ್ತು" ಎನ್ನಿಸಿಯೇ ಸಿನೆಮಾ ಮುಗಿಯುತ್ತದೆ. ಒಬ್ಬ ಭಯೋತ್ಪಾದಕ ಹೇಗೆ ಸಂಚುಮಾಡುತ್ತಾನೋ ಹಾಗೆಯೇ ಈ ಸಾಮಾನ್ಯ ವ್ಯಕ್ತಿ ಕೂಡ ಸಂಚು ಮಾಡುತ್ತಾನೆ. ಇದೆಲ್ಲ ಒಬ್ಬ ಭಯೋತ್ಪಾದಕ ಮಾಡುವಂತಹದ್ದೆ ಎಂದು ಒಪ್ಪಿಕೊಂಡೆ ಸಿನೆಮಾ ನೋಡುವ ನಾವು ಈತ ಒಬ್ಬ ಸಾಮಾನ್ಯ ವ್ಯಕ್ತಿ ಎಂದು ತಿಳಿದ ಕೂಡಲೇ ತಕರಾರು ತೆಗೆಯುತ್ತೇವೆ. ಅದ್ಯಾಕೋ ಇದನ್ನು ನನ್ನಿಂದಲೂ ಮೊದಲಿಗೆ ಒಪ್ಪಲು ಸಾಧ್ಯವಾಗಲಿಲ್ಲ. ಕೆಲವರಿಗೆ ಇವನು ಸಾಮಾನ್ಯ ವ್ಯಕ್ತಿಯೆಂದು ತಿಳಿದಾಗ ಸ್ವಲ್ಪ ಹೆಚ್ಚಾಗೇ ಖುಷಿಯಾಗಬಹುದು. ವ್ಯವಸ್ಥೆಯ ನ್ಯೂನ್ಯತೆಗಳನ್ನು ಅರಿತವ ಅದನ್ನು ತನಗೆ ಬೇಕಾದಂತೆ ಬಳಸುತ್ತಾನೆ. ನಸೀರ್ ಕೂಡ ಪೊಲೀಸರ ಚಲನ-ವಲನಗಳನ್ನು ಗಮನಿಸಲು ಒಬ್ಬ ನ್ಯೂಸ್ ಚಾನೆಲ್ ರಿಪೋರ್ಟರ್ ಒಬ್ಬಳನ್ನು ಬಳಸಿಕೊಳ್ಳುತ್ತಾನೆ. ಸಿನೆಮಾದ ಉದ್ದಕ್ಕೂ ನಮ್ಮ ಭದ್ರತಾ ವ್ಯವಸ್ಥೆಯ ನ್ಯೂನ್ಯತೆಗಳನ್ನು ಬಯಲುಮಾಡಲಾಗುತ್ತದೆ. ಇಂಟೆಲಿಜೆನ್ಸಿನವರ ಹತ್ತಿರ ಈತನ ಬಗ್ಗೆ ಯಾವ ಮಾಹಿತಿಯು ದೊರಕುವುದಿಲ್ಲ. ಇವನನ್ನು ಭಯೋತ್ಪಾದಕನೆಂದು ತಿಳಿದು ಭಯದಿಂದಲೇ ವರ್ತಿಸುವ ಅಜಯ್ ರಾಥೋಡ್, ಇವನು ಸಾಮಾನ್ಯ ವ್ಯಕ್ತಿಯಿಂದ ತಿಳಿದ ಕೂಡಲೇ ಧೈರ್ಯದಿಂದ ಮಾತನಾಡುತ್ತಾನೆ. ಇದಕ್ಕೆ ವಿರುದ್ಧವಾಗಿ ಇವನನ್ನು ಪತ್ತೆ ಹಚ್ಚಲು ಸಹಾಯ ಮಾಡಲು ಬಂದ ಹುಡುಗ ನಸೀರ್ ಎಲ್ಲಿರುವನೆಂದು ತಿಳಿದರೂ ಹೇಳದೆ ನಸೀರ್ನನ್ನು ಬಿಟ್ಟು ಬಿಡುವಂತೆ ಮನವಿ ಮಾಡುತ್ತಾನೆ. ಭಯೋತ್ಪಾದಕರನ್ನ ನಸೀರ್ ಹೇಳಿದ ಜಾಗಕ್ಕೆ ತಲುಪಿಸಲು ಪ್ರಕಾಶ್ ರಾಥೋಡ್ ಆರಿಫ್ ಖಾನ್ ಮತ್ತು ಅಜಯ್ ಸಿಂಗ್ ರನ್ನು ನಿಯೋಜಿಸುತ್ತಾನೆ. ಇದು ತಿಳಿದಾಗ ನಸೀರ್ ನಗುತ್ತಾನೆ. ಸಿನೆಮಾದ ಉದ್ದಕ್ಕೂ ಬಹಳ ಗಂಭೀರವಾಗಿದ್ದ ನಸೀರ್ ಹೀಗೆ ನಕ್ಕಾಗ ಸ್ವಲ್ಪ ಆಶ್ಚರ್ಯವಾಯಿತು. ನಮ್ಮ ದೇಶದಲ್ಲಿ ಮಾತ್ರ ಹೀಗೆ ನಡೆಯುತ್ತದೆಯೇ? ಅಥವಾ ಇದರಲ್ಲೇನಾದರು ತಪ್ಪಿದೆಯೇ? ಸಿನೆಮಾ ವಾಸ್ತವದಿಂದ ಪೂರ್ಣವಾಗಿ ದೂರಹೊಗುವುದು ಅಜಯ್ ರಾಥೋಡ್ ಕಾನೂನನ್ನು ಗಾಳಿಗೆ ತೋರಿ ನಸೀರ್ನನ್ನು ಅರೆಸ್ಟ್ ಮಾಡದೆ ಬಿಟ್ಟಾಗ. ಇದರಿಂದ ನಮಗೆ ಖಂಡಿತ ಖುಷಿಯಾಗಬಹುದು. ********* ಹೇಗೆ ನೋಡಿದರೂ ನನಗೆ ನಸೀರರ ಪಾತ್ರ ಒಂದು ವಿಸ್ಮಯದಂತೆ ಕಾಣಿಸುತ್ತದೆ. ತಾನೊಬ್ಬ "ಮೂರ್ಖ ಸಾಮಾನ್ಯ ವ್ಯಕ್ತಿ" ಎಂದು ಹೇಳಿಕೊಳ್ಳುವ ಈತನಿಗಿರುವ ತಂತ್ರಜ್ಞಾನ, ಮೀಡಿಯಾ, ಪೋಲಿಸ್, ಟೆರರಿಸ್ಟ್ ಇವೆಲ್ಲವುಗಳ ಬಗ್ಗೆ ಈತನಿಗಿರುವ ಅಸಾಧ್ಯ ಜ್ಞಾನ ಕಂಡು ನಾನಂತೂ ಬೆರಗಾಗಿದ್ದೇನೆ. ಇಂತಹದ್ದೊಂದು ಸಂಚು ರೂಪಿಸಲು ಬೇಕಿರುವ ಚಾಣಾಕ್ಷತನ, ಸಿದ್ಧತೆ, ಸಂಯಮ. ಇದರಿಂದ ಮುಂದೊದಗಬಹುದಾದ ತೊಂದರೆಯನ್ನು ಎದುರಿಸಲು ಬೇಕಿರುವ ಆತ್ಮಸ್ಥೈರ್ಯ. ಹೇಗಾದರೂ ಈ ಭಯೋತ್ಪಾದನೆಯನ್ನು ಎದುರಿಸಿ ಅದಕ್ಕೆ ತಕ್ಕ ಉತ್ತರ ಹೇಳಬೇಕೆಂಬ ಅವನ ಸಂಕಲ್ಪ. ಭಯೋತ್ಪಾದನೆಯಿಂದ ಬೇರೆಯವರಿಗಾದ ನಷ್ಟ ಮುಂದೆ ನನಗೂ ಆಗಬಹುದೆನ್ನುವ ಮುಂದಾಲೋಚನೆ. ಆ ಇಳಿವಯಸ್ಸಿನಲ್ಲೂ ಆತನಿಗಿರುವ ತನ್ನ ದೇಶ, ಜನ ಮತ್ತು ಸಂಸ್ಕೃತಿಯ ಬಗೆಗಿನ ಕಾಳಜಿ. ತನ್ನ ಬದುಕನ್ನು ಯಾವುದೇ ಅಡ್ಡಿ, ಆತಂಕ, ಭಯಗಳಿಲ್ಲದೆ ಸಾಗಿಸಬೇಕೆಂಬ ಹಂಬಲ. ನಾವು ಸಿನೆಮಾ ನೋಡಿಬಂದು ಹೊದ್ದು ಮಲಗಬಾರದು. ಸಿನೆಮಾ ಎಷ್ಟು ವಾಸ್ತವಿಕ ಮತ್ತು ಇದು ಪ್ರಸ್ತುತ ಸಂದರ್ಭದಲ್ಲಿ ಸಾಧ್ಯವೇ ಎನ್ನುವುದನ್ನು ತಿಳಿಯಲು ಕೆಲವು ಪ್ರಯತ್ನಗಳನ್ನು ಮಾಡಬೇಕು. ಅಂಡರ್ ಕಂಸ್ಟ್ರ ಕ್ಷನ್ ಬಿಲ್ದಿನ್ಗೊಂದರ ಮೇಲೆ ಒಂದು ಮಿನಿ ಆರ್ & ಡಿ ಸೆಂಟರ್ ಸೃಷ್ಟಿಸಲು ಸಾಧ್ಯವೇ ತಿಳಿಯಬೇಕು. ಪಿ ಸಿ ಯು ಗಳಲ್ಲಿ ಕೆಲಸ ಮಾಡುವವರ ಸಹಾಯ ಪಡೆದಾದರೂ ಪೋಲಿಸ್ ಕಮೀಷನರ್, ಜರ್ನಲಿಸ್ಟ್ ಇಂತವರ ಮೊಬೈಲ್ ನಂಬರ್ ಪಡೆಯಬೇಕು. ಹೇಗಾದರೂ ಮಾಡಿ ಬೇರೆಯವರ ಮತ್ತು ಸತ್ತವರ ಸಿಮ್ ಕಾರ್ಡ್ ಸಂಗ್ರಹಿಸಬೇಕು. ಪೊಲೀಸರ ಕಣ್ಣು ತಪ್ಪಿಸಿ ಕೆಲವು ಉಗ್ರಗಾಮಿಗಳನ್ನು ಭೇಟಿ ಮಾಡಬೇಕು. ಸಾಧ್ಯವಾದರೆ ಐದಾರು ಕೆ.ಜಿ. ಆರ್ ಡಿ ಎಕ್ಸ್ ಬಾಂಬ್ ಸಂಗ್ರಹಿಸಬೇಕು. ಮುಂದೊಮ್ಮೆ ಕಾಲಕೂಡಿ ಬಂದಾಗ ನಸೀರರಂತೆ ಸಂಚು ಮಾಡಿ ಮೂರ್ನಾಲ್ಕು ಜನ ಉಗ್ರಗಾಮಿಗಳನ್ನು ಬ್ಲಾಸ್ಟ್ ಮಾಡಬೇಕು. ಇದೆಲ್ಲವನ್ನೂ ಮಾಡಲು ಒಬ್ಬ ಸಾಮಾನ್ಯ ವ್ಯಕ್ತಿಯಿಂದ ಸಾಧ್ಯವಿದೆ. ಆದರೆ ನಿತ್ಯದ ಬದುಕಿನಿಂದ ಹೊರಬಂದು, ಕಾನೂನನ್ನು ಕೈಗೆ ತೆಗೆದುಕೊಳ್ಳಲು ಅವನು ಹಿಂಜರಿಯುತ್ತಾನೆ. ********* ಈ ಸಿನೆಮಾ ನೀರಜ್ ಪಾಂಡೆಯವರ ಮೊದಲ ಸಿನೆಮಾ. ಕಥೆಯ ನಿರೂಪಣೆಯಲ್ಲಿ ಹೊಸತನವಿದೆ. ಪಾತ್ರಗಳ ಪರಿಚಯ, ಬಿಗಿಯಾದ ಚಿತ್ರಕಥೆ, ಅಚ್ಚುಕಟ್ಟಾದ ಸಂಕಲನ, ಕಥೆಗೆ ಪೂರಕವಾದ ಹಿನ್ನೆಲೆ ಸಂಗೀತ, ವಿವಿಧ ಕೋನಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದಿರುವ ಕ್ಯಾಮೆರಾ ವರ್ಕ್ ಸಿನೆಮಾಗೆ ಮೆರುಗು ನೀಡಿದೆ. ಕಥೆಯಲ್ಲಿ ನಮ್ಮನ್ನು ದಾರಿತಪ್ಪಿಸುವಂತ ಜಿಗಿತಗಳಾಗಲಿ ಅಥವಾ ಗ್ಯಾಪುಗಳಾಗಲೀ ಇರದ ಕಂಟ್ಯುನಿಟೀ ಇದೆ. ಸಿನೆಮಾದಲ್ಲಿ ಹಾಡುಗಳು ಇಲ್ಲದೆ ಇರುವುದೂ ನನಗೆ ಇಷ್ಟವಾಗಿದೆ. ಯಾವೊಬ್ಬ ನಟನ ಕಾಸ್ಟ್ಯೂಮನ್ನೂ ಸಹ ಬದಲಾಯಿಸುವಿದಿಲ್ಲ. ನೀರಜ್ ಪಾಂಡೆಯವರ ಕ್ರಿಯಾಶೀಲತೆ ಪ್ರಶಂಸೆಗೆ ಅರ್ಹವಾಗಿದೆ. ಇದೊಂದು ನಿರ್ದೇಶಕನ ಸಿನೆಮ.ಸಾಮಾನ್ಯ ವ್ಯಕ್ತಿಯ ಹೆಸರು ಮತ್ತು ಜಾತಿಗಳನ್ನು ಹೇಳದ ಕಾರಣ ಇದೊಂದು ಎಲ್ಲರೂ ಒಪ್ಪಿಕೊಳ್ಳುವಂಥ ಸಿನೆಮಾ ಆಗಿದೆ.ಅನುಪಮ್ ಖೇರ್ ಮತ್ತು ನಸೀರುದ್ದೀನ್ ಶಾಹರ ನಟನೆ ಮನೋಜ್ಞವಾಗಿದೆ. ಸಿನೆಮಾದ ಹಿನ್ನೆಲೆ ಸಂಗೀತ : ಟ್ರಾಯ್ ಸಿನೆಮಾದ ಹಿನ್ನೆಲೆ ಸಂಗೀತ ಅವಸಾನದ ಅಂಚಿನಲ್ಲಿರುವ ಟ್ರಾಯ್ ನಗರದ ಒಡಲಿನಿಂದಲೇ ಬರುತ್ತಿರುವ ಅರ್ತನಾದದಂತೆಯೇ ಭಾಸವಾಗುತ್ತದೆ. ಇಲ್ಲಿಯೂ ಕೂಡ ಭಯೋತ್ಪಾದನೆಗೆ ಸದಾ ತುತ್ತಾಗುತ್ತಿರುವ ಮುಂಬೈ ನಗರದ ಕೊರಗು, ಗಡಿಬಿಡಿ ಮತ್ತು ಒಂದು ರೀತಿಯ ಡಿಸ್ಟರ್ಬಡ ಅನಿಸುವಂತಹ ವಾತವರಣವನ್ನ, ಮುಂಬೈ ನಗರವನ್ನು ಮತ್ತಷ್ಟು ಡಿಸ್ಟರ್ಬ್ ಮಾಡಲು ಬರುವ ವ್ಯಕ್ತಿಯ ಇಂಗಿತವನ್ನ ಹಿನ್ನೆಲೆ ಸಂಗೀತ ಸೂಚಿಸುತ್ತದೆ. ಆರಿಫ್ ಖಾನನ ಕ್ರೌರ್ಯವನ್ನ ಹೇಳಲು ಸಹ ಖೈಲಾಶ್ ಖೇರನ ಧ್ವನಿಯನ್ನು ಬಳಸಲಾಗಿದೆ. ********* ಕೊನೆಯ ಮಾತು : ಭಯೋತ್ಪಾದನೆ ಇಂದಿಗೂ ಭಾರತವನ್ನು ಸುಡುತ್ತಿರುವ ಸಮಸ್ಯೆ. ಮುಂದೆಯೂ ಸುಡಬಹುದು. ಕೆಲವು ಸೂಕ್ಷ್ಮ ವಿಷಯಗಳನ್ನು ಮುಕ್ತವಾಗಿ ಚರ್ಚಿಸಲು ಭಾರತದಂತಹ ದೇಶದಲ್ಲಿ ಹಲವಾರು ತೊಡಕುಗಳಿರುತ್ತವೆ. ಇಲ್ಲಿ ಏಖಮುಖಿಯಾದ ವಾದಗಳೇ ಹೆಚ್ಚು. ಎಲ್ಲರೂ ಒಪ್ಪುವಂತಹ ವಾದಗಳು ವೆನಸ್ಡೆ ಯಂತಹ ಸಿನೆಮಾದಲ್ಲಿ ಕಂಡು ಸಂತೋಷಪಡಬೇಕಾಗಿದೆ. ಒಬ್ಬನಿಗೆ ದೇಶದ ಭದ್ರತೆ ಮತ್ತು ನಾಗರೀಕರ ಪ್ರಾಣಕ್ಕಿಂತ ತಮಗೆ ಪ್ರಶಸ್ತಿ ಸಿಗಿಸುವ ಸಿದ್ಧಾಂತಗಳೇ ಹೆಚ್ಚಾಗಿವೆ.ಯಾವ ನೈತಿಕತೆಯೂ ಇಲ್ಲದ ಇವರ ಮಧ್ಯೆ "ಅ ವೆನಸ್ಡೆ"ಯಂತಹ ಸಿನೆಮಾ ನೋಡಿ "ಮೂರ್ಖ ಸಾಮಾನ್ಯ ವ್ಯಕ್ತಿ" ಏನೂ ಮಾಡಲಾಗದ ಸ್ಥಿತಿಯಲ್ಲೂ ಖುಷಿ ಪಡುತ್ತಾನೆ. ಮನೆಗೆ ಬಂದು ಬೆಚ್ಚಗೆ ಹೊದ್ದು ಮಲಗುತ್ತಾನೆ. ನಿದ್ರೆಯಲ್ಲಿ ತಾನೇ ಆ ವ್ಯಕ್ತಿಯಾದಂತೆ ಕನಸು ಕಾಣುತ್ತಾನೆ
|
|