ದೃಶ್ಯಕ್ಕೊಂದು ನುಡಿಗಟ್ಟು

ಗೊಂಬೆ ಮನೆ ಸಹೋದರಿಯರು

ಸುಮಾರು ಇಪ್ಪತ್ತಾರು ವರ್ಷಗಳ ಹಿಂದಿನ ಮಾತು. ತುಮಕೂರಿನ ಅಳಸಿಂಗಾಚಾರ್ ಮತ್ತು ಕಲ್ಯಾಣಮ್ಮನವರ ಮೂವರು ಹೆಣ್ಣುಮಕ್ಕಳು ಸಿನಿಮಾ ನೋಡಲು ಥಿಯೇಟರೊಂದಕ್ಕೆ ಹೋಗಿದ್ದರು. ಇಂಟರ್‌ವಲ್‌ನಲ್ಲಿ ತೋರಿಸಲಾಗುವ ನ್ಯೂಸ್‌ರೀಲ್‌ನ ಜತೆಯಲ್ಲಿ ಯಾರದೋ ಮನೆಯಲ್ಲಿ ಗೋಕುಲಾಷ್ಟಮಿಗೆಂದು ಇಟ್ಟಿದ್ದ ವಸುದೇವ ಕೃಷ್ಣನನ್ನು ನಂದಗೋಕುಲಕ್ಕೆ ಬುಟ್ಟಿಯಲ್ಲಿ ಹೊತ್ತೊಯ್ಯುವ ಗೊಂಬೆಗಳ ದೃಶ್ಯಾವಳಿಯನ್ನು ತೋರಿಸಲಾಯಿತು. ಮೂವರಿಗೂ ಅದು ಬಹಳವೇ ಹಿಡಿಸಿತು. ತಾವೂ ಯಾಕೆ ಹೀಗೆ ಮಾಡಬಾರದು ಎಂದುಕೊಳ್ಳುತ್ತ ಮನೆಗೆ ಬಂದವರು ಸುಮ್ಮನಿರದೆ ತಾಯಿಯನ್ನು ಪೀಡಿಸಿದರು. ಅಲ್ಲಿಯತನಕ ಸರಳವಾಗಿ ಗೋಕುಲಾಷ್ಟಮಿ ಆಚರಿಸುತ್ತಿದ್ದ ಕಲ್ಯಾಣಮ್ಮನವರು “ಸರಿ, ಪೇಟೆಗೆ ಹೋಗಿ ಒಂದೆರಡು ಗೊಂಬೆ ತೆಗೆದುಕೊಂಡು ಬನ್ನಿ. ನಾವೂ ಅಲಂಕಾರ ಮಾಡೋಣ” ಎಂದು ಮಕ್ಕಳಿಗೆ ಅನುಮತಿ ನೀಡಿದರು. ಆ ಮೂವರು ಹೆಣ್ಣುಮಕ್ಕಳೋ, ಹುರುಪಿನಲ್ಲಿ ಗೊಂಬೆಗಳಿಗೋಸ್ಕರ ಇಡೀ ತುಮಕೂರನ್ನೆ ಜಾಲಾಡಿದರು. ಹೀಗೆ ಪ್ರಾರಂಭವಾಯಿತು ಅವರ ಹಾಗೂ ಗೊಂಬೆಗಳ, ಗೋಕುಲಾಷ್ಟಮಿಯ ಮತ್ತು ನವರಾತ್ರಿಯ ನಂಟು.

ಎ.ಪದ್ಮಕುಮಾರಿ, ಎ.ರಾಧಾಮಣಿ ಹಾಗೂ ಎ.ಸುಜಾತ ಎಂಬ ಆ ಮೂವರು ಹೆಣ್ಣುಮಕ್ಕಳಿಗೆ ತುಮಕೂರಿನ ಎಂ.ಜಿ.ರೋಡಿನ ತಮ್ಮ ಪುಟ್ಟ ಮನೆಯಲ್ಲಿ ತಾವು ಇಪ್ಪತ್ತಾರು ವರುಷಗಳ ಹಿಂದೆ ನೋಡಿದ ನ್ಯೂಸ್‌ರೀಲ್ ತಮ್ಮನ್ನು ಇಲ್ಲಿ ತಂದು ನಿಲ್ಲಿಸಬಹುದು ಎಂಬ ಸಣ್ಣ ಕಲ್ಪನೆಯೂ ಇರಲಿಲ್ಲ. ಅವರು ಯಾವಾಗಲೂ ಮನೆಬಾಗಿಲಿಗೆ ಬೀಗಜಡಿದುಕೊಂಡು ತಮ್ಮದೇ ವಿಚಿತ್ರ ಪ್ರಪಂಚದಲ್ಲಿ ಮುಳುಗಿರುತ್ತಾರೆ. ಅವರಿಗೆ ತಮ್ಮ ಪ್ರೈವೆಸಿ ಪ್ರಾಣದಷ್ಡೆ ಪ್ರಿಯವೆನ್ನುವಂತೆ ತೋರುತ್ತದೆ. ಅಕ್ಕಪಕ್ಕದ ಮನೆಗಳಲ್ಲಿ ಯಾರು ವಾಸವಿದ್ದಾರೆ, ಅವರ ದೈನಂದಿನ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ಹೆಂಗಸರಿಗೆ ಸಹಜವಾದ ಯಾವ ಕುತೂಹಲವೂ ಅವರಿಗಿಲ್ಲ. ಆದರೆ ಗೋಕುಲಾಷ್ಟಮಿ, ನವರಾತ್ರಿಗಳು ಬಂದರೆ ಮಾತ್ರ ಮನೆಯ ಗೇಟಿನ ಬೀಗ ಮಾಯವಾಗುತ್ತದೆ. ಈ ಅಕ್ಕತಂಗಿಯರ ಮನೆಯ ಚಹರೆಯೇ ಬದಲಾಗಿಬಿಡುತ್ತದೆ. ಮನೆತುಂಬ ಗೊಂಬೆಗಳು, ದೃಶ್ಯಾವಳಿಗಳು, ವಿವಿಧ ರೀತಿಯ ಅಲಂಕಾರಗಳು ತುಂಬಿಕೊಳ್ಳುತ್ತವೆ. ಯಾವುದೆ ಪ್ರಚಾರವನ್ನು ಇವರು ನೀಡದಿದ್ದರೂ ಸಾವಿರಾರು ಜನ ಇವರ ಮನೆಗೆ ಧಾವಿಸುತ್ತಾರೆ. ಅಳಿದುಹೋಗುತ್ತಿರುವ ಕರ್ನಾಟಕದ ಜಾನಪದ ಪರಂಪರೆಯೊಂದನ್ನು ಅದರ ಎಲ್ಲ ಅದ್ಧೂರಿತನದೊಂದಿಗೆ ಜೀವಂತವಾಗಿಡಲು ಈ ಮೂವರು ಹಿರಿಯ ಹೆಣ್ಣುಮಕ್ಕಳು ತಮ್ಮ ಜೀವನವನ್ನೆ ಮುಡುಪಾಗಿಟ್ಟಿದ್ದಾರೆ ಮತ್ತು ಅದರ ಬಗ್ಗೆ ಯಾವುದೇ ಹಮ್ಮುಬಿಮ್ಮುಗಳಿಲ್ಲದ ಹಾಗೆ ಇದ್ದಾರೆ.

ಯಾರಿಂದಲೋ ಇವರ ಬಗ್ಗೆ ಕೇಳಿದ ನಾನು ಮನೆ ಹುಡುಕಿಕೊಂಡು ಹೋದಾಗ ಸಂಜೆ ಏಳೂವರೆ. ಮನೆಯ ಗೇಟಿಗೆ ಬೀಗ ಹಾಕಿತ್ತು. ಸುಮಾರು ಹೊತ್ತು ಬಾಗಿಲು ತಟ್ಟಿದ ಮೇಲೆ ಹಿರಿಯ ಅಕ್ಕ ಪದ್ಮಕುಮಾರಿಯವರು ಬಂದು ಬಾಗಿಲು ತೆರೆದರು. ನನ್ನ ಪರಿಚಯ ಮಾಡಿಕೊಂಡು, “ಸ್ವಲ್ಪ ಹೊತ್ತು ನನ್ನ ಜೊತೆ ಮಾತನಾಡುತ್ತೀರ?” ಎಂದು ಕೇಳಿದೆ. ಒಂದು ನಿಮಿಷ ಇರಲು ಹೇಳಿ ಹೋಗಿ ಹಿತೈಷಿಯೊಬ್ಬರನ್ನು ಬರಹೇಳಿ ಫೋನು ಮಾಡಿದರು. ಮನೆತುಂಬ ದೊಡ್ಡದೊಡ್ಡ ಶೋಕೇಸುಗಳು. ಅವುಗಳ ತುಂಬ ಅಚ್ಚುಕಟ್ಟಾಗಿ ಜೋಡಿಸಿರುವ ಮುದ್ದಾದ ದೇವರ ವಿಗ್ರಹಗಳು ಹಾಗೂ ಗೊಂಬೆಗಳು. ಪದ್ಮಕುಮಾರಿಯವರು ತುಮಕೂರಿನ ಜಿಲ್ಲಾ ಖಜಾನೆ ಇಲಾಖೆಯಲ್ಲಿ ಮುಖ್ಯ ಲೆಕ್ಕಿಗರಾಗಿದ್ದವರು. ಈಗ ಎರಡುಮೂರು ವರುಷಗಳ ಹಿಂದೆ ಬಿಪಿ, ಸಕ್ಕರೆಕಾಯಿಲೆಯ ಬಳುವಳಿಯಾದ ಬೆನ್ನುನೋವಿನಿಂದ ಹೆಚ್ಚುಸಮಯ ಕೂರಲು ಸಾಧ್ಯವಾಗದ ಕಾರಣ ಸ್ವಘೋಷಿತ ನಿವೃತ್ತಿ ಪಡೆದುಕೊಂಡು ತಂಗಿಯಂದಿರೊಡನೆ ಮನೆಯಲ್ಲಿಯೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಎರಡನೆಯವರು ರಾಧಾಮಣಿ. ಬಹಳ ನಾಚಿಕೆಯ ಸ್ವಭಾವದವರು. ಮೂರನೆಯವರು ಸುಜಾತ. ಇವರ ಕರಕುಶಲತೆ ದೃಶ್ಯಾವಳಿಗಳಲ್ಲಿ ಎದ್ದು ಕಾಣುತ್ತದೆ. ಸೂಜಿದಾರದ ಸೂಕ್ಷ್ಮ ಕೆಲಸ ಮಾಡೀ ಮಾಡೀ ಕೈಬೆರಳುಗಳು ತೂತುಬಿದ್ದು ಒರಟಾಗಿವೆ. ಸುಮಾರು ಹದಿನೈದು ವರುಷಗಳಿಂದ ವರ್ಷದಲ್ಲಿ ಎರಡು ಬಾರಿ ಗೊಂಬೆಗಳನ್ನು ಇಡುತ್ತಾರೆ. ಇದಕ್ಕೆ ಇವರ ಸೋದರಮಾವಂದಿರಾದ ರಾಜು ಹಾಗೂ ವಾಸುರವರು ಒತ್ತಾಸೆಯಾಗಿ ನಿಂತಿರುವುದೂ ಕಾರಣವಾಗಿದೆಯೆಂದು ಪದ್ಮಕುಮಾರಿ ಅಭಿಮಾನದಿಂದ ನುಡಿಯುತ್ತಾರೆ. ಮೊದಲು ಇವರು ಎಷ್ಟೆಲ್ಲ ಖರ್ಚುಮಾಡಿ ಗೊಂಬೆ ಅಲಂಕಾರ ಮಾಡಿದರೂ ಪರಿಚಯದವರನ್ನು ಬಿಟ್ಟರೆ ಯಾರಿಗೂ ಇದು ತಿಳಿದಿರಲಿಲ್ಲವಂತೆ. ಎಷ್ಟೋ ವರ್ಷಗಳವರೆಗೆ ಅವಿದಿತರಾಗಿದ್ದ ಇವರನ್ನು ಹೊರಲೋಕಕ್ಕೆ ಪರಿಚಯಿಸಿದ್ದು ಮೈಸೂರಿನ ಜಿಲ್ಲಾ ಖಜಾನೆ ಇಲಾಖೆಯ ಎಂ.ಬಿ. ಸಿದ್ಧೇಗೌಡರು. ಆಗಿನಿಂದ ದೂರದರ್ಶನದ ಹಲವಾರು ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ ಇವರ ಬಗ್ಗೆ ಮಾಹಿತಿ ಪ್ರಸಾರವಾಗಿದೆ. ಎರಡೂ ಹಬ್ಬಗಳ ಸಮಯದಲ್ಲಿ ಊಟಮಾಡಲೂ ಪುರುಸೊತ್ತು ಕೊಡದ ಹಾಗೆ ಪ್ರವಾಹದೋಪಾದಿಯಲ್ಲಿ ಜನ ಭೇಟಿ ನೀಡುತ್ತಾರೆ. ಅವರೆಲ್ಲರಿಗೂ ಈ ಮೂವರು ಸಹೋದರಿಯರು ಬೇಸರವಿಲ್ಲದೆ ಆದರ ಸತ್ಕಾರ ನಡೆಸುತ್ತಾರೆ.

“ಸರಿ, ಇದೆಲ್ಲ ಮಾಡಲು ಸಾಕಷ್ಟು ತಯಾರಿ ಬೇಕಲ್ಲ? ಹೇಗೆ ಮಾಡುತ್ತೀರಿ?” ಪದ್ಮಕುಮಾರಿಯವರನ್ನು ಕೇಳಿದೆ. ಆರು ತಿಂಗಳ ಮುನ್ನವೇ ತಯಾರಿ ಪ್ರಾರಂಭವಾಗುತ್ತದೆ. ಯಾವ ದೃಶ್ಯಾವಳಿಗಳನ್ನಿಡಬೇಕು, ಎಷ್ಟು ಸಾಮಗ್ರಿಗಳು ಬೇಕಾಗಬಹುದು ಎಂದು ಅಂದಾಜು ಹಾಕುವುದು, ಬೆಂಗಳೂರು, ಚೆನ್ನೈ ಮೊದಲಾದೆಡೆ ಹೋಗಿ ಬೇಕಾದ್ದನ್ನು ಕೊಳ್ಳುವುದು, ಇವೆಲ್ಲ ನಡೆಯುತ್ತದೆ. ಇವಕ್ಕೆಲ್ಲ ಈ ಸಹೋದರಿಯರು ಉಪಯೋಗಿಸುವುದು ಕಲ್ಕತ್ತದಲ್ಲಿ ತಯಾರಿಸಲಾಗುತ್ತಿದ್ದ ತೆಳುಪ್ಲಾಸ್ಟಿಕ್ಕಿನ ಮೌಲ್ಡ್ ಬೊಂಬೆಗಳನ್ನು. ಈಗ ಎಲ್ಲಿ ಹುಡುಕಿದರೂ ಈ ತರಹದ ಬೊಂಬೆಗಳು ದೊರೆಯುವುದಿಲ್ಲವಂತೆ. ಕೈಕಾಲು ಸಡಿಲವಾಗಿದ್ದು ಎಲ್ಲ ಅಲಂಕಾರಗಳನ್ನು ಮಾಡಲು ಅನುಕೂಲವಾಗಿರುವ ಈ ಗೊಂಬೆಗಳು ಮೊದಲು ಎಲ್ಲ ಆಕಾರಗಳಲ್ಲಿ ದೊರೆಯುತ್ತಿದ್ದುವು. ಈಗ ಕಲ್ಕತ್ತದಿಂದ ಸಪ್ಲೈ ಇಲ್ಲವೆಂದು ತಿಳಿದುಬಂದಮೇಲೆ ತಮ್ಮಲ್ಲಿರುವ ಹಳೆಯ ಮೌಲ್ಡ್ ಬೊಂಬೆಗಳನ್ನು ಚಿನ್ನದಷ್ಟು ಜೋಪಾನಮಾಡಿ ಪುನಃ ಉಪಯೋಗಿಸುತ್ತಾರೆ. ಕಡಿಮೆಯೆಂದರೂ ಮೂರುತಿಂಗಳ ಕಾಲ ಕಾರ್ಪೆಂಟರನೊಬ್ಬನಿಗೆ ೨೦೦ ರೂಪಾಯಿ ದಿನಗೂಲಿ ನೀಡಿ ಕೆಲಸ ಮಾಡಿಸುತ್ತಾರೆ. ವಿದ್ಯುತ್ ಅಲಂಕಾರವೂ ಭರ್ಜರಿಯಾಗಿ ನಡೆಯುತ್ತದೆ. ಗೊಂಬೆಯಿಟ್ಟ ತಿಂಗಳು ಹೆಚ್ಚೂಕಡಿಮೆ ಸುಮಾರು ೩,೫೦೦ ರೂಪಾಯಿಗಳಷ್ಟು ವಿದ್ಯುಚ್ಛಕ್ತಿ ಬಿಲ್ಲು ಬರುವುದೆಂದೂ, ಪದ್ಮಕುಮಾರಿಯವರು ಒಮ್ಮೊಮ್ಮೆ ಈ ದುಡ್ಡು ಕಟ್ಟಲು ತೊಂದರೆಯಾಗಿ ಇಲಾಖೆಯವರಲ್ಲಿ ವಿನಂತಿ ಮಾಡಿಕೊಂಡು ಎರಡುಮೂರು ಕಂತುಗಳಲ್ಲಿ ಬಿಲ್ಲು ಕಟ್ಟಿದ್ದೂ ಇದೆಯೆಂದೂ ಅವರ ಕುಟುಂಬದ ಹಿತೈಷಿಯೊಬ್ಬರು ನನಗೆ ತಿಳಿಸಿದರು.

“ಹಾಗಿದ್ದರೆ, ಇದಕ್ಕೆಲ್ಲ ಎಷ್ಟು ಖರ್ಚು ಬೀಳುತ್ತೆ? ನಿಮಗೆ ಬರುವ ಆದಾಯ ಇದಕ್ಕೆ ಸಾಕಾಗುತ್ತಾ?” ನನಗೆ ಕಾಡುವ ಕುತೂಹಲ. ಪದ್ಮಕುಮಾರಿ ಸುಮ್ಮನೆ ನಕ್ಕರು. “ಇದಕ್ಕೆ ಪ್ರತೀವರ್ಷ ಏನಿಲ್ಲ ಅಂದ್ರೂ ಐವತ್ತೈದು-ಅರವತ್ತು ಸಾವಿರ ರೂಪಾಯಿ ಖರ್ಚಾಗುತ್ತೆ. ನಂಗೆ ಬರೋ ಪೆನ್‌ಶನ್ ಇದಕ್ಕೇ ಅರ್ಧ ಹೋಗತ್ತೆ. ಪಿ.ಎಫ್ ದುಡ್ಡು ಎಲ್ಲ ಖಾಲಿಮಾಡಿಬಿಟ್ಟಿದೀನಿ. ಏನೂ ಇಲ್ಲ ಮನೇಲಿ. ಇರೋದು ಕೃಷ್ಣ, ಗೊಂಬೆಗಳು ಮತ್ತೆ ಅವುಗಳ ಅಲಂಕಾರದ್ ಸಾiಗ್ರಿಗಳನ್ನ ತುಂಬಿರೋ ಪೆಟ್ಟಿಗೆಗಳು ಮಾತ್ರ. ಹೇಗೋ ಕೃಷ್ಣ ಬೇಕಾದ ಸಮಯದಲ್ಲಿ ದುಡ್ಡು ಹುಟ್ಟಿಸುತ್ತಾನೆ” ಎಂದರು. ಇವರು ಇಲ್ಲಿಯವರೆಗೂ ಯಾರಿಂದಲೂ ಯಾವುದೇ ಧನಸಹಾಯವನ್ನೂ ಪಡೆದಿಲ್ಲ. ಗೊಂಬೆ ನೋಡಲು ಬಂದವರಿಗೆ ಟಿಕೇಟುಚಾರ್ಜು ಮಾಡಿ ಎಂದೆಲ್ಲ ಐಡಿಯಾಗಳನ್ನು ಸ್ನೇಹಿತರು ನೀಡಿದರೂ ಇವರು ಅದನ್ನೆಲ್ಲ ನಗುತ್ತಲೆ ಬದಿಗೆ ತಳ್ಳುತ್ತಾರೆ.

ಹಲವಾರು ಸೆಲೆಬ್ರಿಟಿಗಳು, ಅಧಿಕಾರಿಗಳು ಇವರ ಮನೆಗೆ ಭೇಟಿ ನೀಡಿ ಇವರ ಶ್ರಮವನ್ನು ಪರಿಪರಿಯಾಗಿ ಕೊಂಡಾಡಿ ಹೋಗಿದ್ದರೂ ಇಲ್ಲಿಯವರೆಗೆ ನಮ್ಮ ಈ ವಿಶಿಷ್ಟ ಪರಂಪರೆಯನ್ನು ಉಳಿಸುವುದರ ಬಗ್ಗೆ ಯಾರೂ ಆಸಕ್ತಿ ತೋರಿಲ್ಲ ಎಂಬ ದಟ್ಟ ವಿಷಾದ ಈ ಸಹೋದರಿಯರನ್ನು ಕಾಡುತ್ತಿದೆ. ಇವರು ಮಾಡುವ ಅನೇಕ ದೃಶ್ಯಾವಳಿಗಳು ಪುನರಾವರ್ತನೆಯಾಗುವುದಿಲ್ಲ. ಎಲ್ಲ ಜನರಿಗೂ ವರ್ಷವಿಡೀ ಎಲ್ಲ ರೀತಿಯ ಗೊಂಬೆ ಅಲಂಕಾರಗಳು ಒಂದೇ ಜಾಗದಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕೆನ್ನುವ ಹಂಬಲ ಇವರದು. ಮಾತನಾಡುತ್ತ ಸಮಯ ಕಳೆದಿದ್ದೇ ತಿಳಿಯಲಿಲ್ಲ. ಹೊರಡುವ ಮೊದಲು ಎಷ್ಟು ಪರಿಪರಿಯಾಗಿ ಕೇಳಿಕೊಂಡರೂ ಪದ್ಮ ಮತ್ತವರ ಸಹೋದರಿಯರು ಕ್ಯಾಮರಕ್ಕೆ ಪೋಸು ನೀಡಲು ಹೈಸ್ಕೂಲಿನ ಹೆಣ್ಣುಮಕ್ಕಳಂತೆ ಬೇಡಬೇಡ ಎನ್ನುತ್ತ ಸುಂದರವಾಗಿ ನಾಚಿಕೊಳ್ಳುತ್ತ ಇದ್ದರು. ಕೊನೆಗೆ ಅವರ ಕುಟುಂಬದ ಹಿತೈಷಿಗಳೊಬ್ಬರು ಜಬರದಸ್ತಿ ಮಾಡಿ ಮೂವರೂ ಅಕ್ಕತಂಗಿಯರು ತಮ್ಮ ಗೊಂಬೆಗಳೊಡನೆ ಕುಳಿತಿದ್ದ ಅಪರೂಪದ ಫೋಟೋವೊಂದನ್ನು ಕ್ಲಿಕ್ಕಿಸಿಕೊಟ್ಟರು. ಮೂವರೂ ಸಹೋದರಿಯರು ಮುಂದೆ ಗೊಂಬೆಗಳ ಜತೆ ಮೈಸೂರಿನ ಇಲ್ಲಿಯತನಕದ ಎಲ್ಲ ಮಹಾರಾಜರ ಚಿತ್ರಗಳನ್ನು ಇಡಬೇಕೆಂದಿದ್ದೇವೆ, ಯಾರಾದರೂ ಸಂಗ್ರಹಕಾರರು ಕೊಟ್ಟರೆ ಸಂತೋಷ. ಗೊಂಬೆಯಿಡುತ್ತೇವಲ್ಲ ಆಗ ಫೋನಾಯಿಸುತ್ತೇವೆ, ಬನ್ನಿ ಎಂದು ಬೀಳ್ಕೊಟ್ಟರು.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು