ದೃಶ್ಯಕ್ಕೊಂದು ನುಡಿಗಟ್ಟು

ನಾನೂ ಫೋಟೋ ಕ್ಲಿಕ್ಕಿಸುವ ಆಸೆ! - ಭಾಗ 5

ಇಷ್ಟೆಲ್ಲಾ ಹೇಳುವ ಬದಲು ಮೊದಲ ಲೇಖನದ ಮೊದಲ ಸಾಲಿನಲ್ಲಿಯೇ "ನಿಮಗೆ ನೀವೇ ಗುರುವಾಗಿಬಿಡಿ" ಅಂತ ಹೇಳಿಬಿಡಬಹುದಿತ್ತಲ್ವಾ" ಅಂತ ನನ್ನನ್ನು ಕೇಳಬಹುದು!

ಖಂಡಿತ ನಿಮ್ಮ ಪ್ರಶ್ನೆ ಸರಿಯಾಗಿಯೇ ಇದೆ. ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಇಷ್ಟೆಲ್ಲಾ ಹೇಳುವ ಅಗತ್ಯವಿದೆಯಾ ಅಂತಲೂ ನಿಮಗೆ ಅನ್ನಿಸಬಹುದು.  ಖಂಡಿತ ಅಗತ್ಯವಿದೆ. ನಿಮ್ಮ ಮನೆಯವರೋ ಅಥವ ಗೆಳೆಯರೋ ನಿಮ್ಮ ಕೈಗೆ ವಿಮಾನದ ಟಿಕೆಟ್ ಕೈಗಿಟ್ಟು ತಿರುಪತಿಗೆ ಹೋಗಿಬಾ ಅಂದಾಗ ನೀವು ವಿಮಾನದಲ್ಲಿ ಹಾರಿಹೋಗಿ ನಿಮಗಾಗಿ ಮಾಡಿರುವ ವಿ ವಿ ಐ ಪಿ ದರ್ಶನದ ವ್ಯವಸ್ಥೆಯಿಂದಾಗಿ ಕೆಲವೇ ನಿಮಷಗಳಲ್ಲಿ  ದೇವರ ದರ್ಶನ ಮಾಡಿ ಮತ್ತದೇ ವಿಮಾನದಲ್ಲಿ ನೀವು ವಾಪಸ್ಸು ಬಂದಾಗ ನಿಮಗೆ ಸ್ವಲ್ಪವೂ ಪ್ರಯಾಸವಾಗದಂತೆ ದೇವರ ದರ್ಶನ ಮಾಡಿದೆ ಅಂತ ಹಿರಿಹಿರಿ ಹಿಗ್ಗಬಹುದು.  ಆದ್ರೆ ನೀವು ಎಲ್ಲಿಯೋ ಬಸ್ ನಿಲ್ದಾಣದಲ್ಲಿ ಕ್ಯೂ ನಿಂತು ಬಸ್ ಅಥವ ರೈಲು ಟಿಕೆಟ್ ಕಾದಿರಿಸಿ ಹೊರಡುವ ದಿನ ಬಂದಾಗ ಬಸ್ಸು ಅಥವ ರೈಲಿನಲ್ಲಿ ಪ್ರಯಾಣಿಸಿ, ಅಲ್ಲಿಂದ ಸಣ್ಣ ವ್ಯಾನಿನಲ್ಲಿ ಹೊರಡು ತಿರುಮಲ ಬೆಟ್ಟಕ್ಕೆ ಹೋಗುವ ಮುನ್ನ ತಳದಲ್ಲಿ ಸಿಗುವ ಕಪಿಲ ನದಿಯಲ್ಲಿ ಸ್ನಾನಮಾಡಿ ಮಡಿಯುಟ್ಟು ಅಲ್ಲಿಂದ ನಿದಾನವಾಗಿ ಒಂದೊಂದೇ ಮೆಟ್ಟಿಲು ಹತ್ತುತ್ತಾ, ದಾರಿಯುದ್ದಕ್ಕೂ ಸಾಗುತ್ತಾ ನಡುವೆ ಆಗುವ ಅಯಾಸವನ್ನು ಹೋಗಲಾಡಿಸಲು ಕುಳಿತಾಗ ಸುತ್ತಲು ಕಾಣುವ ಪಕ್ಷಿಗಳು, ಅವುಗಳ ಇಂಚರ, ಮತ್ತೆ ಬೆಟ್ಟದ ದಾರಿಯಲ್ಲಿ ಸಾಗುವಾಗ ಕೆಲವೊಮ್ಮೆ ಕಡಿದಾಗ ಕಲ್ಲುಗಳು, ಮಣ್ಣಿನ ರಸ್ತೆಗಳು....ಕೊನೆ ಕೊನೆಗೆ ತಿರುಮಲ ಬೆಟ್ಟಕ್ಕೆ ತಲುಪುವಷ್ಟರಲ್ಲಿ ನಮ್ಮನ್ನು ಆವರಿಸಿಕೊಳ್ಳುವ ಮಂಜು, ಅಲ್ಲಿಂದ ಒಳನಡೆದು ಯಾವುದೋ ಕೌಂಟರಿನಲ್ಲಿ ದರ್ಶನದ ಟಿಕೆಟ್ ಪಡೆದು...ದರ್ಶನಕ್ಕಾಗಿ ಸುಮಾರು ಗಂಟೆಗಳನ್ನು ಕಾಯುವಿಕೆ, ಈ ಕಾಯುವಿಕೆಯಲ್ಲಿ ಅಲ್ಲೆಲ್ಲಾ ಸುತ್ತಾಟ, ತಿರುಮಲದಲ್ಲಿರುವ ಮ್ಯೂಸಿಯಂ, ಇತರ ದೇವಸ್ಥಾನಗಳಿಗೆ ಹೋಗಿಬರುವುದು, ನಂತರ ನೀವು ದರ್ಶನಕ್ಕಾಗಿ ಸರತಿಯ ಸಾಲಿನಲ್ಲಿ ನಿಲ್ಲುವುದು, ನಿದಾನವಾಗಿ ಸಾಗುವಾಗ ಅಲ್ಲಿ ನಿಮಗೆ ಸಿಗುವ ಜನರು, ಅವರ ಮಾತು ಭಾಷೆ, ಸಂಸ್ಕೃತಿ, ಇತ್ಯಾದಿಗಳನ್ನೆಲ್ಲಾ ನಿಮಗೆ ಅರಿವಿಲ್ಲದಂತೆ ತಿಳಿದುಕೊಳ್ಳುತ್ತೀರಿ...ಇದೆಲ್ಲಾ ಆಗುವಷ್ಟರಲ್ಲಿ ಅನೇಕ ಗಂಟೆಗಳು ಕಳೆದಿರುತ್ತದೆ. ಕೆಲವೊಮ್ಮೆ ದಿನಗಳು ಕಳೆದಿರುತ್ತವೆ. ಇಲ್ಲಿಂದ ಮುಂದೆ ನಿಮಗೆ ದೇವರ ದರ್ಶನದ ಅವಕಾಶ ಸಿಗುತ್ತದಲ್ಲ....ಆಗ ನಿಮ್ಮ ಮುಖ ಮತ್ತು ಮನಸ್ಸಿನ ಭಾವನೆಗಳು ಹೇಗಿರಬಹುದು!  ನಿಜಕ್ಕೂ ಅದನ್ನು ವರ್ಣಿಸಲಾಗದು ಅಲ್ವಾ...ಆ ಭಯ ಭಕ್ತಿ, ಧನ್ಯತೆ, ತೃಪ್ತಿ, ಸಾರ್ಥಕತೆ, ನೆಮ್ಮದಿ ಎಲ್ಲವೂ ಒಟ್ಟಿಗೆ ಉಂಟಾಗುವುದು ಆ ಸಮಯದಲ್ಲಿಯೇ ಅಲ್ಲವೇ? ಅದಕ್ಕಾಗಿಯೇ ಅಲ್ಲವೇ ನೂರಾರು ಸಾವಿರಾರು ಕಿಲೋಮೀಟರ್ ದೂರದ ಊರುಗಳಿಂದ ನಾವು ಇಂಥ ದರ್ಶನಕ್ಕಾಗಿ ಇಷ್ಟೇಲ್ಲ ಕಷ್ಟ ಪಡುವುದು?  ಈಗ ಹೇಳಿ ಈ ಕಷ್ಟದಲ್ಲಿ ಎಂಥ ಸುಖವಿದೆ, ಸಾರ್ಥಕತೆಯಿದೆ ಅಂತ.  ವಿಮಾನದಲ್ಲಿ ಹೋಗಿ ಬರುವ ದರ್ಶನದ ಅನುಭವಕ್ಕಿಂತ ಹೀಗೆ ಎಲ್ಲವನ್ನು ಅನುಭವಿಸಿದ ನಂತರ ಸಿಗುವ ದರ್ಶನದ ಅನುಭವದ ಧನ್ಯತೆಯ ತೂಕ ಹೆಚ್ಚಲ್ಲವೇ

    ಈಗ ನಿಮಗೆ ಗೊತ್ತಾಗಿರಬಹುದು.  ನೀವು ಕ್ಯಾಮೆರವನ್ನು ಕೈಯಲ್ಲಿ ಹಿಡಿದ ದಿನ ಅಥವ ಫೋಟೊ ತೆಗೆಯುವ ಅಲೋಚನೆ ನಿಮ್ಮ ಮನಸ್ಸಿಗೆ ಬಂದ ದಿನವೇ ನಿಮಗೆ ನೀವೇ ಗುರುವಾಗುವುದಕ್ಕಿಂತ ಇಷ್ಟೆಲ್ಲಾ ಅನುಭವಗಳನ್ನು ಪಡೆದುಕೊಂಡ ನಂತರ ನಿಮಗೆ ನೀವೇ ಗುರುವಾಗುವುದರಲ್ಲಿ ಹೆಚ್ಚು ಅರ್ಥವಿದೆಯಲ್ಲವೇ.

     ಎಲ್ಲಾ ಸರಿ ನನಗೆ ನಾನೇ ಗುರುವಾಗಿದ್ದು ಹೇಗೆ ಮತ್ತು ಯಾವಾಗ?, ಒಮ್ಮೆ ಹೀಗೆ ಎಲ್ಲರೂ ಪ್ರಶ್ನಿಸಿಕೊಂಡು ಮೊದಲಿನಿಂದ ಇಲ್ಲಿಯವರೆಗಿನ ಅನುಭವಗಳನ್ನು ಅವಲೋಕಿಸಿಕೊಂಡಾಗ ಅದರಿಂದ ಸಿಗುವ ಉತ್ತರ ಹೇಗಿರಬಹುದು ಅಂತ ಕುತೂಹಲವಿದೆಯಲ್ಲವೇ? ಹೌದು ನಿಮ್ಮಷ್ಟೇ ಕುತೂಹಲ ನನಗೂ ಇದೆ.  ಮೊದಲು ಬೆರಳುಗಳ ನಡುವೆ ದೃಶ್ಯಗಳಿಗೆ ಚೌಕಟ್ಟು ಹಾಕುವುದು,  ಅದನ್ನೇ ಸಣ್ಣ ಹೇಮ್ ಆಂಡ್ ಷೂಟ್ ಕ್ಯಾಮೆರದಲ್ಲಿ ಫೋಟೊ ತೆಗೆಯುವುದು, ನಾನು ಛಾಯಾಗ್ರಾಹಕನಾದೆ ಅಂತ ಸಂಭ್ರಮಿಸುವುದು, ನಂತರ ಛಾಯಾಗ್ರಹಣದ ವಿಭಾಗಗಳು, ನಮಗೆ ಇಷ್ಟವಾದ ವಿಚಾರದ ಆಯ್ಕೆಗಳು ಎಲ್ಲಾ ಮುಗಿದಮೇಲೆ, ನೀವು ನಿಮ್ಮ ಗೆಳೆಯರಿಗೋಸ್ಕರ ಮಾಡಿದ ಛಾಯಾಗ್ರಾಹಣ ಕೆಲವೇ ದಿನಗಳಲ್ಲಿ ಅವರಿಗೆ ಇಷ್ಟವಾಗದಿರುವುದು, ಅದರಿಂದ ನಿಮಗೆ ಭ್ರಮ ನಿರಸನವಾಗುವುದು, ಆಮೇಲೆ ನಿಮಗೆ ಅರಿವಾಗಿ ನಿಮಗೋಸ್ಕರವೇ ನೀವು ಫೋಟೊ ತೆಗೆಯುವುದು,  ನೀವು ತೆಗೆದ ಫೋಟೊಗಳೆಲ್ಲಾ ಚೆನ್ನಾಗಿದೆಯಾ ಇಲ್ಲವಾ ಅಂತ ಗುರುತಿಸಿಕೊಳ್ಳಲು ಒಬ್ಬ ಗುರುವನ್ನು ಆಯ್ಕೆ ಮಾಡಿಕೊಳ್ಳುವುದು, ಇದರ ನಡುವೆ ನಾವು ಆಯ್ಕೆ ಮಾಡಿಕೊಂಡ ಗುರುಗಳು ಹೇಗಿರುತ್ತಾರೆ ಅಂತ ತಿಳಿದು ನಮಗೆ ಎಂಥ ಗುರುಗಳು ಬೇಕು ಅಂತ ತೀರ್ಮಾನಿಸುವುದು. ಆ ಗುರುವು ಸಿಗದಾಗ....ಮುಂದಿನ ಹಂತವೇ ನಿಮಗೇ ನೀವೇ ಗುರುವಾಗುವುದು. ಅದನ್ನು ಒಂದು ಪುಟ್ಟ ಕತೆಯ ಮೂಲಕವೇ ವಿವರಿಸಿದ್ದೇನೆ.

      ಇಷ್ಟೆಲ್ಲಾ ಮುಗಿಯುವ ಹೊತ್ತಿಗೆ ನಿಮ್ಮ ಅರಿವಿಗೆ ಬರದ ವಿಚಾರವೊಂದು ನಿಮ್ಮೊಳಗೆ ಚಾಲು ಆಗಿರುತ್ತದೆ. ಅದೇನೆಂದರೆ ನೀವು ಕ್ಯಾಮೆರದ ಬಗ್ಗೆ ಮತ್ತು ಪೋಟೋಗ್ರಫಿ ಬಗ್ಗೆ ಆಸಕ್ತಿ ಬಂದಾಗಲೇ ನಿಮಗೆ ನೀವೇ ಗುರುವಾಗಿಬಿಟ್ಟಿರುವುದು. ಈ ಮಾತು ಏಕೆ ಹೇಳುತ್ತೇನೆಂದರೆ ಮೊದಲ ದಿನ ನಿಮ್ಮ ಮನಸ್ಸಿನೊಳಗಿದ್ದ ಈ ಅಮೂರ್ತ ರೂಪದ ಭಾವನೆ,  ನೀವು ಇಷ್ಟೆಲ್ಲಾ ಅನುಭವದ ದಾರಿ ಸಾಗಿಸಿದ ಮೇಲೆ ಈಗ ನಿಮಗೆ ಗೊತ್ತಾಗಿರುವುದೇನೆಂದರೆ ಈಗ ಎಲ್ಲಾ ನಿಮ್ಮ ಇಷ್ಟದಂತೆ, ನಿಮ್ಮ ಸಂತೋಷಕ್ಕಾಗಿ, ನಿಮ್ಮ ನೆಮ್ಮದಿಗಾಗಿಯೇ ಆಗುತ್ತಿರುವುದರಿಂದ ನಿಮ್ಮ ಅಮೂರ್ತ ರೂಪ ಈಗ ಸ್ಪಷ್ಟ ರೂಪ ಪಡೆದುಕೊಂಡಿದೆ ಎಂದೇ ಇದರ ಅರ್ಥ. ಇದು ಎಲ್ಲಾಕ್ಕಿಂತ ಹೆಚ್ಚು ಮುಖ್ಯ ವಿಚಾರ. ಏಕೆಂದರೆ ನೀವು ಮುಂದೆ ಸಾಗುವ ಈ ಫೋಟೊಗ್ರಫಿ ಹವ್ಯಾಸ, ವೃತ್ತಿ, .ಎನ್ನುವ ಪ್ರಯಾಣದಲ್ಲಿ ಕೊನೆಯವರೆಗೂ ಇದೇ ಮನಸ್ಥಿತಿಯಲ್ಲಿ ಇದ್ದಾಗ ನಿಮ್ಮ ಸಾಧನೆ ಅದ್ಬುತವಾಗಿರುತ್ತದೆ, ಇಡೀ ವಿಶ್ವವೇ ನಿಮ್ಮ ಕಡೆಗೆ ತಿರುಗಿ ನೋಡುವಂತಾಗಿರುತ್ತದೆ. ನೀವು ಒಬ್ಬ ಟ್ರೆಂಡ್ ಸೆಟ್ಟರ್ ಆಗಿರುತ್ತೀರಿ..

      ಈಗ ನಾವೆಲ್ಲಾ ಸ್ವಲ್ಪ ಮೈದಾನಕ್ಕಿಳಿಯೋಣವೇ?  ಹೌದು ಕಣ್ರೀ, ಇಷ್ಟೆಲ್ಲಾ ಉದಾಹರಣೆಗಳು, ಮನಸ್ಸಿನ ಪರಿಪಕ್ವತೆ, ಅನುಭವ ಪಡೆದುಕೊಂಡ ಮೇಲೆ ಫೋಟೊ ಕ್ಲಿಕ್ಕಿಸಲು ಹೋಗಬೇಕಲ್ಲವೇ? ಅದನ್ನೇ ಆಟವಾಡುವ ಮೈದಾನವೆಂದು ಹೇಳಿದ್ದು. ಈ ಮೈದಾನಕ್ಕೆ ಇಳಿಯುವ ಮೊದಲು ನೀವು ಹೇಗೆ ಆಡಬೇಕು ಅದಕ್ಕೆ ಬೇಕಾದ ಪರಿಕರಗಳೇನು, ನಿಮ್ಮ ಚಿಂತನೆ ಮತ್ತು ಯೋಜನೆಗಳೇನು, ಎಷ್ಟು ಸಮಯದವರೆಗೆ ಆಡಬೇಕು ಅನ್ನುವ ಸ್ಪಷ್ಟ ಯೋಜನೆಯನ್ನು ಹಾಕಿಕೊಳ್ಳುವಂತೆ ನಾವು ಪೋಟೋಗ್ರಫಿ ಮಾಡಲು ಹೊರಡುವ ಮುನ್ನ ನಾವು ಯಾವ ವಿಭಾಗದ ಫೋಟೊಗ್ರಫಿ ಮಾಡಲು ಇಷ್ಟಪಟ್ಟಿದ್ದೇವೆ ಎನ್ನುವ ವಿಚಾರ ನಮ್ಮ ಮನದೊಳಗೆ ಸ್ಪಷ್ಟವಾಗಿರಬೇಕು. ನೀವು ಪ್ರಕೃತಿ ಪ್ರಿಯರಾದರೆ, ಹಕ್ಕಿಗಳು, ಕೀಟಗಳು, ಪ್ರಾಣಿಗಳು...ಹೀಗೆ ಇದಕ್ಕೆ ಸಂಭಂದಿಸಿದ ನೇಚರ್ ಫೋಟೊ ತೆಗೆಯಲು ಇಷ್ಟಪಡುವಿರಾದರೆ ಮೊದಲಿಗೆ ಅದಕ್ಕೆ ತಕ್ಕಂತ ಕ್ಯಾಮೆರ ಮತ್ತು ಅತ್ಯುತ್ತಮ ಮತ್ತು ದೊಡ್ದದಾದ ಲೆನ್ಸುಗಳು, ಟೈಪಾಡ್, ಮಾನೋಪಾಡ್, ಇತ್ಯಾದಿಗಳನ್ನು ಇಟ್ಟುಕೊಂಡಿರಬೇಕು.  ಮತ್ತೆ ನೀವು ನಮ್ಮ ಬೆಂಗಳೂರಿನಂತ ನಗರವಾಸಿಯಾಗಿದ್ದಲ್ಲಿ ಕೊನೇ ಪಕ್ಷ ಮುವತ್ತು ಕಿಲೋಮೀಟರ್ ದೂರಕ್ಕೆ ಪ್ರಯಾಣಿಸಲೇಬೇಕು.  ಈ ನಗರ ವಾತಾವರಣದಲ್ಲಿ ಮೇಲೆ ವಿವರಿಸಿದ ಜೀವಿಗಳು ಕಾಣಸಿಗುವುದು ಅಪರೂಪ.  ಇಲ್ಲಿ ಅವೆಲ್ಲಾ ಏಕೆ ಕಾಣಸಿಗೋಲ್ಲವೆಂದರೆ ಇಡೀ ನಗರದಲ್ಲಿ ಎಲ್ಲಿಯೂ ಒಂದು ದೊಡ್ಡಮಟ್ಟದ ಮಣ್ಣಿನ ನೆಲವಿಲ್ಲ.  ಒಮ್ಮೆ ನೀವು ಬೆಂಗಳೂರಿನ ನಗರದ ಹೃದಯಭಾಗದ ನಿವಾಸಿಯಾಗಿದ್ದಲ್ಲಿ ನೀವು ನಿಂತ ಜಾಗದಿಂದ ನಿಮ್ಮ ಸುತ್ತ ಎಲ್ಲಾ ದಿಕ್ಕುಗಳಲ್ಲಿಯೂ ಕೇವಲ ಐದು ಕಿಲೋಮೀಟರ್ ಸುತ್ತಳತೆಯ ನೆಲವನ್ನು ಗಮನಿಸಿದಾಗ ಮೊದಲಿಗೆ ಒಂದು ಎರಡು ಅಂತಸ್ಥಿನ ಮನೆಗಳು ಹತ್ತಾರು ಅಂತಸ್ಥಿನ ಅಪಾರ್ಟುಮೆಂಟುಗಳು, ಕಛೇರಿಗಳು, ಅವುಗಳ ನಡುವೆ ರಸ್ತೆಗಳು, ಈ ರಸ್ತೆಗಳ ಎರಡೂ ಕಡೆ ಇದ್ದರೂ ಇಲ್ಲದ ಹಾಗೆ ಇರುವ ಪಾದಚಾರಿ ದಾರಿಗಳು, ಮನೆಗಳು ಹಿಂಭಾಗದ ಕನ್ಸರ್ವೆನ್ಸಿ ರಸ್ತೆಗಳಲ್ಲಿ ಒಳಚರಂಡಿಗಳು, ಜಲಮಂಡಲಿಯ ಪೈಪುಗಳು....ಕಾಣುತ್ತವೆ. ನಾನು ವಿವರಿಸಿದ ಇವೆಲ್ಲವುಗಳನ್ನು ಟಾರು[ರಸ್ತೆಗಾಗಿ], ಸಿಮೆಂಟು ಮರಳುಗಳನ್ನು ಬಳಸಿ ಕಾಂಕ್ರೀಟ್ ಮಾಡಿ ಕಟ್ಟಲಾಗಿದೆ. ಅರ್ಧಾತ್ ಭೂಮಿಯ ಮೇಲೆ ನಮ್ಮ ಕಣ್ಣಿಗೆ ಕಾಣುವ ಮಣ್ಣನ್ನು ಈ ಸಿಮೆಂಟು ಕಲ್ಲು ಇತ್ಯಾದಿಗಳಿಂದ ಮುಚ್ಚಿಬಿಡಲಾಗಿದೆ. ಭೂಮಿಯೊಳಗಿನ  ಮಣ್ಣು ಸಾವಿರಾರು ಹುಳುಗಳ ಹುಟ್ಟಿಗೆ ಕಾರಣ.  ಈ ಮಣ್ಣಿನೊಳಗೆ ಹುಟ್ಟಿದ ಅನೇಕ ಹುಳುಗಳಂತ ಕೋಟ್ಯಾಂತರ ಜೀವಿಗಳು ಮಣ್ಣಿನ ಮೇಲಕ್ಕೆ ಬಂದರೆ ಅದನ್ನು ತಿನ್ನಲು ಹತ್ತಾರು ಜಾತಿಯ ಹಕ್ಕಿಗಳು ಬರುತ್ತವೆ.  ಇಂಥ ಸ್ಥಳಗಳಲ್ಲಿ ಹಕ್ಕಿಗಳು ತಮ್ಮ ಗೂಡುಗಳನ್ನು ಕಟ್ಟಿ ತಮ್ಮ ಸಂತತಿಯನ್ನು ಬೆಳಸುತ್ತವೆ. ಹೀಗೆ ಅವೆಲ್ಲಾ ಸಮೃಧ್ಧಿಯಾಗಿ ಕಂಡಾಗ ತಾನೆ ನಾವೆಲ್ಲಾ ಫೋಟೊ ತೆಗೆಯಲು ಸಾಧ್ಯವಾಗುವುದು?  ಯಾವಾಗ ಈ ಭೂಮಿಯ ಮೇಲಿನ ಮಣ್ಣನ್ನು ಸಿಮೆಂಟು ಕಲ್ಲುಗಳಿಂದ ಮುಚ್ಚಿ ಈ ಹುಳಪ್ರಪಂಚದ ಮಟ್ಟಿಗೆ ಶಾಶ್ವತ ಗೋರಿಗಳನ್ನು ಕಟ್ಟಿ ಸ್ಮಶಾನ ಮಾಡಿಬಿಟ್ಟರೋ ಅಲ್ಲಿಗೆ ಅವುಗಳ ಕತೆ ಮುಗೀತು. ಅವು ಹುಟ್ಟಿ  ಒಂದಷ್ಟು ದಿನ ಬದುಕುವ ಅವಕಾಶ ಕಿತ್ತು ಕೊಂಡ ಮನುಷ್ಯನು ಅವುಗಳು ಹುಟ್ಟಲಿಕ್ಕೆ ಆಗದಂತೆ ನಮ್ಮ ನಗರದಂತ ಕಾಂಕ್ರೀಟ್ ಸಿಮೆಂಟನ್ನು ನೆಲಕ್ಕೆ ಶಾಶ್ವತವಾಗಿ ಅಂಟಿಸಿ ಅವುಗಳಿಗೆ ಶಾಶ್ವತ ಸ್ಮಶಾನವನ್ನೇ ಕಟ್ಟಿಬಿಟ್ಟಿದ್ದಾನೆ.  ಇನ್ನು ಅವುಗಳ ನ್ನು ಮತ್ತು ಅವುಗಳನ್ನು ತಿನ್ನಲು ಬರುವ ಹಕ್ಕಿಗಳ ಫೋಟೊತೆಗೆಯಲು ನಿಮಗೆ ಈ ನಗರದಲ್ಲಿ ಹೇಗೆ ಸಾಧ್ಯ?  ಈ ಕಾರಣಕ್ಕಾಗಿ ಕಡಿಮೆಯಿಂದರೆ ಮುವತ್ತು ಕಿಲೋಮೀಟರ್ ದೂರಕ್ಕೆ ಹೋಗಲೇಬೇಕು. ಸದ್ಯಕ್ಕೆ ಮುವತ್ತು ಕಿಲೋಮೀಟರ್ ವರ್ಷಗಳು ಕಳೆದಂತೆ ಅಲ್ಲಲ್ಲಿ ಬೆಳೆಯುತ್ತಿರುವ ನಗರಗಳು ತಮ್ಮಲ್ಲೆ ಬೆಸುಗೆಗಳನ್ನು ಹಾಕಿಕೊಂಡು ಕಾಲಿಯಿದ್ದ ಜಾಗದಲ್ಲೆಲ್ಲಾ ಸಿಮೆಂಟು ಟಾರುಗಳನ್ನು ನೆಲಕ್ಕೆ ಹಾಕಿ ಇಡೀ ಹುಳುಪ್ರಪಂಚಕ್ಕೆ ಸ್ಮಶಾನಕಟ್ಟಿಬಿಡುತ್ತಾನೇನೋ ಎನ್ನುವ ಆತಂಕ ಉಂಟಾಗುತ್ತದೆ.

          ನಮ್ಮ ಕಾಂಕ್ರೀಟು ನಗರಗಳು ಎಲ್ಲಾ ಹುಳುಗಳ ಸಾವಿಗೂ ಕಾರಣವಾಗಿರುವುದರಿಂದ ಮುಂದಿನ ಪೀಳಿಗೆ ಮಕ್ಕಳಿಗೆ ಅವುಗಳನ್ನು ಚಿತ್ರಗಳಲ್ಲಿ ಮಾತ್ರ ನೋಡಲು ಸಿಗುತ್ತದೆನೋ...ನಾವು ಚಿಕ್ಕವರಿದ್ದಾಗ ನಾವು ಹುಟ್ಟಿ ಬೆಳೆದ ಜಾಗ ಇಷ್ಟು ಕಾಂಕ್ರೀಟ್‍ ಮತ್ತು ರಸ್ತೆಮಯವಾಗಿರಲಿಲ್ಲ. ಅಲ್ಲಲ್ಲಿ ಮಣ್ಣಿನ ರಸ್ತೆಗಳು, ಇದ್ದವು. ನಮಗೆ ಇರುವೆ, ಗೊದ್ದ, ಎರಹುಳು, ಇತ್ಯಾದಿಗಳನ್ನು ನೋಡುತ್ತಿದ್ದೆವು. ಇಲ್ಲೊಂದು ತಮಾಷೆಯ ವಿಚಾರವನ್ನು ಹೇಳಬಯಸುತ್ತೇನೆ. ಅದೇನೆಂದರೆ ನಾನು ಚಿಕ್ಕಂದಿನಲ್ಲಿ ಮಣ್ಣಿನಲ್ಲಿ ಮೈಮರೆತು ಗೋಲಿಯಾಟ ಆಡುವಾಗ ನಾವೇ ಮಾಡಿದ ಪುಟ್ಟ ಗುಂಡಿಗಳಲ್ಲಿ ಅದೆಷ್ಟು ಕಪ್ಪಿರುವೆಗಳು ಗೂಡು ಮಾಡಿಕೊಳ್ಳುತ್ತಿದ್ದವೋ! ಬುಗುರಿಯಾಡುವಾಗ ಗುನ್ನ ಹೊಡೆಯುವ ರಬಸಕ್ಕೆ ಮಣ್ಣಿನಲ್ಲಿ ಆಗುವ ಸೀಳುಗಳು, ಸೋಡ ಡಬ್ಬಿ ಆಡುವ ಸಮಯದಲ್ಲಿ ಇದೇ ಮಣ್ಣಿನ ನೆಲದ ಮೇಲೆ ಕುಕ್ಕರಕಾಲಿನಲ್ಲಿ ಕೂತು ಡಬ್ಬಿಯನ್ನು ಗುರಿಯಿಟ್ಟು ಹೊಡೆಯುವಾಗ ನೆಲದೊಳಗಿನಿಂದ ಬಂದ ಕಂದು ಗೊದ್ದಗಳು ಆ ಕ್ಷಣದಲ್ಲಿ  ಕಚ್ಚಿದ್ದಕ್ಕೆ ಗುರಿತಪ್ಪಿರಲಿಲ್ಲವೇ!   ನಮ್ಮ ಮನಸ್ಸಿನ ಇಚ್ಛೆಯಂತೆ ಆಕಾಶದಲ್ಲಿ ನಾವೇ ಕ್ರಮಬದ್ದವಾಗಿ ಸೂತ್ರ ಹಾಕಿ ಹಾರಿಸಿದ್ದ ಗಾಳಿಪಟಗಳು ನಮ್ಮನ್ನು ಅವುಗಳ ಜೊತೆಯಲ್ಲೇ ತೇಲುವಂತೆ ಮಾಡುತ್ತಿದ್ದ ಕಲ್ಪನೆಯಲ್ಲಿರುವಾಗ ನಮ್ಮ ಕಾಲುಗಳನ್ನೆಲ್ಲಾ ಕಚ್ಚಿ ನಮ್ಮ ತೇಲುವ ಕಲ್ಪನೆಗೆ ಮಣ್ಣು ಹಾಕಿದ್ದು ನಾವು ನಿಂತ ನೆಲದ ಮಣ್ಣಿನ ಕೆಂಪಿರುವೆಗಳಲ್ಲವೇ!  ಆಗ ಇದ್ದ ಗಿಡಗಳು ಮತ್ತು ಮುಳ್ಳಿನ ಪೊದೆಗಳಲ್ಲಿ ಆಟವಾಡಲು ಹೋಗಿ ಅನೇಕ ರೀತಿಯ ಮುಳ್ಳುಗಳಿಂದ ಚುಚ್ಚಿಸಿಕೊಂಡಿದ್ದು ಮಾತ್ರವಲ್ಲದೇ ಗಿಡಗಳಲ್ಲಿ ಅಡಗಿ ಕುಳಿತ ಪುಟ್ಟ ದುಂಬಿಗಳು, ಕೀಟಗಳಿಂದ ಕಚ್ಚಿಸಿಕೊಂಡಿಲ್ಲವೇ! ಮನೆಗೆ ಬಂದು ಕಚ್ಚಿಸಿಕೊಂಡ ಜಾಗಕ್ಕೆಲ್ಲಾ ಸುಣ್ಣ, ಹರಿಸಿಣ ಪುಡಿಯನ್ನು ಮೆತ್ತಿಸಿಕೊಂಡಿಲ್ಲವೇ! ಆಗ ಕಚ್ಚಿಸಿ-ಚುಚ್ಚಿಸಿಕೊಂಡ ನೋವುಗಳನ್ನು ಅನುಭವಿಸಿದ್ದರಿಂದಲೇ ಈಗ ನಮಗೆ ಎಂಥ ನೋವುಗಳು ಬಂದರೂ ದೈರ್ಯವಾಗಿ ಎದುರಿಸುವ ಮನಸ್ಥಿತಿಯಿದೆ.  ಆದರೆ ಈಗಿನ ಪೀಳಿಗೆಯ ನಮ್ಮ ನಗರ ಪ್ರೇಮಿ ಮಕ್ಕಳು ಬೆಳೆಯುವ ಪರಿಯನ್ನು ಅವಲೋಕಿಸೋಣ.  ಅವರು ಎರಡು ವರ್ಷಗಳಾಗುತ್ತಿದ್ದಂತೆ ಅವರಿಗೆ ಕಾರ್ಟೂನ್ ನೋಡುವ ಚಟಕ್ಕೆ ಬಿದ್ದುಬಿಡುತ್ತವೆ. ಅವಕ್ಕೆ ಸಹಕಾರಿಯಾಗುವಂತೆ ಅವರ ತಂದೆತಾಯಿಗಳು ಮಕ್ಕಳು ಹೊರಗೆ ರಸ್ತೆಗೆ ಬಂದರೇ ಎಲ್ಲಿ ಇತರ ಮಕ್ಕಳ ಜೊತೆ ಸೇರಿ ಹಾಳಾಗಿಬಿಡುತ್ತವೋ ಎನ್ನುವ ಪೂರ್ವಪೀಡಿತ ಭಯದಿಂದಾಗಿ ಹೊರಕ್ಕೆ ಕಳಿಸುವುದಿಲ್ಲ.  ಮಕ್ಕಳ ಆಟಕ್ಕಾಗಿ ಈಗ ಕಿಂಡರ್ ಗಾರ್ಡನ್‍ಗೆ ಸೇರಿಸಿಬಿಡುತ್ತಾರೆ. ಅಲ್ಲಿ ಗಾರೆ ನೆಲ, ಅಥವ ಟೈಲ್ಸ್ ಮಾರ್ಬಲ್ಸ್ ನೆಲಗಳಿರುವುದರಿಂದ ಏನೂ ಆಗುವುದಿಲ್ಲವೆಂದು ಅವರ ನಂಬಿಕೆ. ಇಷ್ಟಕ್ಕೂ ಕೆಲವು ಮಕ್ಕಳು ಆಟವಾಡಲೇಬೇಕೆಂದು ಹೊರಬಂದರೆ ಸಿಗುವುದು ಸಿಮೆಂಟ್ ರಸ್ತೆ ಅಥವ ಟಾರ್ ರಸ್ತೆ. ಈ ರಸ್ತೆಯಲ್ಲಿ ಇರುವೆ ಗೊದ್ದ, ಎರೆಹುಳು, ಇತ್ಯಾದಿ ಕೀಟಗಳು ಇರಲು ಸಾಧ್ಯ.  ಆಟವಾಡುವಾಗ ಮಕ್ಕಳ ಕೈಕಾಲು ಕಚ್ಚಲು ಸಾಧ್ಯ?  ಈ ರೀತಿ ಮಕ್ಕಳಿಗೆ ಸಣ್ಣ ನೋವು ಆಗದಂತೆ ಬೆಳೆಸುವುದರಿಂದ ಆ ಮಕ್ಕಳು ಬೆಳದು ದೊಡ್ಡವರಾದ ಮೇಲೆ ಒಂದು ಸಣ್ಣ ಇಂಜಕ್ಷನ್ ಹಾಕಿಸಿಕೊಳ್ಳಬೇಕಾದರೂ ದಿಗಿಲುಪಡುತ್ತವೆ.  ಸಣ್ಣಸೂಜಿ ಅವುಗಳ ಕಣ್ಣಿಗೆ ದೊಡ್ಡ ದಬ್ಬಳ ಅಥವ ಕತ್ತಿಯೇ ನಮ್ಮ ದೇಹಕ್ಕೆ ಚುಚ್ಚಲಾಗುತ್ತಿದೆ ಎನ್ನುವ ಕಲ್ಪನೆ ಮಾಡಿಕೊಂಡು ಹೆದರಿಕೊಂಡು ಬದುಕಿನಲ್ಲಿ  ಇಂಥ ನೋವುಗಳನ್ನು ಎದುರಿಸುವ ಸ್ಥೈರ್ಯವನ್ನೇ ಕಳೆದುಕೊಳ್ಳುತ್ತಿರುವುದು ಆತಂಕದ ಸಂಗತಿ.

     ನೀವು ಹಳ್ಳಿಯವರಾದರೆ ನಾನು ಮೇಲೆ ಹೇಳಿದ ಆಟಗಳಲ್ಲದೇ ಮತ್ತಷ್ಟು ಹಳ್ಳಿಆಟಗಳು ಜೊತೆಗೆ ಎಲ್ಲಾ ರೀತಿಯ ಇರುವೆಗಳು, ಕೀಟಗಳು, ದುಂಬಿಗಳು ಇತ್ಯಾದಿಗಳಿಂದ ಕಚ್ಚಿಸಿಕೊಳ್ಳುವ ಅವಕಾಶ ದಾರಾಳ. ಅಲ್ಲಿ ಮನೆಯ ಹಿಂದೆಮುಂದೆ ನಿಮ್ಮ ಹೊಲ ಗದ್ದೆ, ತೋಟ ಇತ್ಯಾದಿಗಳಲ್ಲಿ ಸಾವಿರಾರು ರೀತಿಯ ಹುಳು ಹುಪ್ಪಟೆಗಳು, ಹಕ್ಕಿಗಳು ಕಣ್ಣೆದುರಿಗೆ ಕಾಣಸಿಗುವುದರಿಂದ ನಿಮಗೆ ಅವುಗಳ ಫೋಟೊಗ್ರಫಿ ಸುಲಭವಾಗುತ್ತದೆ. ಈ ಕಾರಣಕ್ಕೆ ನಾನು ಹುಳುಗಳ ಫೋಟೋ ತೆಗೆಯಲು ನನ್ನ ಬೆಂಗಳೂರಿನಿಂದ  ಗೆಳೆಯ ವಿ.ಡಿ.ಭಟ್ ಇರುವ ದೂರದ ಸುಗಾವಿ ಎನ್ನುವ ಊರಿಗೆ ಹುಳುಗಳ ಫೋಟೊ ತೆಗೆಯಲು ನಾನು ಹೋಗಿದ್ದೆ.

     ಮತ್ತೆ ಮುಖ್ಯ ವಿಚಾರಕ್ಕೆ ಬರೋಣ. ಈಗ ನಾವು ನಗರವಾಸಿಗಳು ಹುಳುಹುಪ್ಪಟೆ ಮತ್ತು ಹಕ್ಕಿಗಳ ಫೋಟೊತೆಗೆಯಲು ಸುಮಾರು ಮುವತ್ತು-ನಲವತ್ತು ಕಿಲೋಮೀಟರ್ ದೂರ ಹೋಗಲೇಬೇಕಲ್ವಾ!  ನೀವು ಇಂಥ ವಿಷಯದಲ್ಲಿ ಫೋಟೊಗ್ರಫಿ ಮಾಡಬೇಕೆಂದು ತೀರ್ಮಾನಿಸಿದ ಮೇಲೆ ಅದಕ್ಕೆ ತಕ್ಕಂತೆ ಕ್ಯಾಮೆರ, ಲೆನ್ಸು, ಬೈನಾಕ್ಯುಲರ್, ತೆಗೆದುಕೊಂಡು ಹೋಗಿದ್ದೀರಾ? ಹುಳುಗಳ ಫೋಟೊಗ್ರಫಿಗೆ ಮ್ಯಾಕ್ರೋ ಲೆನ್ಸು ತೆಗೆದುಕೊಂಡು ಹೋಗಿದ್ದೀರಾ? ಈ ಪ್ರಶ್ನೆಗಳು ಅಲ್ಲಿಗೆ ಹೋದ ಮೇಲೆ ಉದ್ಭವವಾಗುವುದಕ್ಕಿಂತ ಇಲ್ಲೇ ನಮ್ಮನ್ನು ನಾವು ಕೇಳಿಕೊಳ್ಳುವುದು ಒಳ್ಳೆಯದಲ್ಲವೇ?  ಈ ಪ್ರಶ್ನೆಗೆ ಕಾರಣ ನನ್ನ ಅನೇಕ ಫೋಟೊಗ್ರಫಿ ಗೆಳೆಯರು ಯಾವ ಕಂಪನಿಯ ಕ್ಯಾಮೆರ ಕೊಂಡುಕೊಳ್ಳಬೇಕು? ಲೆನ್ಸು ಯಾವ ಕಂಪನಿಯದು? ನಿಕಾನ್, ಕ್ಯಾನನ್, ಸಿಗ್ಮ, ಸೋನಿ, ಒಲಂಪಸ್, ಪೆಂಟಾಕ್ಸ್, ಫ಼್ಯುಜಿ, ಕೊಡಕ್, ಲುಮ್ಯಾಕ್ಸ್, ಪ್ಯಾನಸೋನಿಕ್....ಹೀಗೆ ಇವುಗಳಲ್ಲಿ ಯಾವ ಕಂಪನಿಯ ಉಪಕರಣಗಳನ್ನು ಕೊಳ್ಳಬೇಕೆನ್ನುವ ಗೊಂದಲದಲ್ಲಿ ನನಗೆ ಅನೇಕ ಪ್ರಶ್ನೆಗಳನ್ನು ಕೇಳಿರುವುದರಿಂದ ಮುಂದಿನ ಲೇಖನದಲ್ಲಿ ಇದರ ಬಗ್ಗೆಯೂ ವಿವರಣೆ ಕೊಟ್ಟು ಫೋಟೊಗ್ರಫಿ ಮೈದಾನದಲ್ಲಿ ಆಟವನ್ನು ಮುಂದುವರಿಸೋಣವೇ?





13-07-2011

samvaada.com fan page on facebook


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು