ದೃಶ್ಯಕ್ಕೊಂದು ನುಡಿಗಟ್ಟು

ಬೆಟ್ಟದ ಜೀವ: ಆತುರದ ಗರ್ಭಪಾತ

ವಿಮರ್ಶೆ ಮ್ಯಾರಥಾನ್, ಬೆಟ್ಟದ ಜೀವ, ಪಿ.ಶೇಷಾದ್ರಿ, ಸುಚೇಂದ್ರ ಪ್ರಸಾದ್, ಶಿವರಾಮ ಕಾರಂತ, bettada jeeva, shivaram karanth, p.sheshadri, cinema review

ಶಿವರಾಮ ಕಾರಂತರ ಬೆಟ್ಟದ ಜೀವ ಕಾದಂಬರಿ ಅವರ ಅನುಭವ ಮತ್ತು ಕಥೆಯ ಮಿಶ್ರರೂಪ. ಕಾದಂಬರಿಯ ಎಳೆ ಅಂದಿನ ಮಲೆನಾಡಿನ ಜೀವನ ಶೈಲಿ, ಜನರೇಷನ್ ಗ್ಯಾಪ್ ನಿಂದಾಗುವ ತೊಳಲಾಟಗಳು, ಮನುಷ್ಯನ ಮುಗಿಯದ ಹಾತೊರೆಯುವಿಕೆ, ಶ್ರಮದಿಂದ ಏನನ್ನಾದರೂ ಸಾಧಿಸಬಲ್ಲೆ ಎಂಬವನ ಎಂದಿನ ಕೆಚ್ಚು, ಇವೆಲ್ಲವನ್ನು ಸುಂದರವಾಗಿ ಹಾಗೂ ಸರಳವಾಗಿ ಕಟ್ಟಿಕೊಡುತ್ತದೆ. ಆದರ್ಶವಾದಿಯಾದ ಶಿವರಾಮು ಎಂಬ ಒಬ್ಬ ಯುವಕ ಕಾಡಿನಲ್ಲಿ ಹಾದಿ ತಪ್ಪಿ, ಮಲೆನಾಡಿನ ಕಾಡೊಳಗೆ ಅಲೆಯುತ್ತ, ಅಸಹಾಯಕನಾಗಿ ಒಂದು ವೃದ್ದ ಬ್ರಾಹ್ಮಣದಂಪತಿಗಳ ಮನೆಯಲ್ಲಿ ದಿನ ಕಳೆಯುವಂತಾಗುತ್ತದೆ. ಅಲ್ಲಿ ಕಳೆಯುವ ಸಮಯದಲ್ಲಿ ಅವನಿಗೆ ಅಲ್ಲಿನ ಪರಿಸರ, ಅದಕ್ಕೆ ಹೊಂದಿಕೊಂಡು ಬಾಳುತ್ತಿರುವ ಕೆಲವೇ ಜನಗಳ ಜೀವನ ಪರಿಚಯವಾಗುತ್ತಾ ಹೋಗುತ್ತದೆ. 

ಕಾಡನ್ನೇ ಮಣಿಸಿ, ವ್ಯವಸಾಯಕ್ಕೆ ಯೋಗ್ಯವಾಗಿಸಿ ತಾನೇ ದುಡಿದು ಬೆಳೆದು ತಿನ್ನುತ್ತಿದ್ದ ಗೋಪಾಲಯ್ಯ ಏನನ್ನಾದರೂ ಮಾಡಬಲ್ಲೆ ಎಂಬ ದಿಟ್ಟ ಮನುಷ್ಯ. ಅವನಿಗೆ ಒತ್ತಾಸೆಯಾಗಿರುವ ಅವನ ಹೆಂಡತಿ, ಮನೆಯಲ್ಲಿ ಜಗಳವಾಡಿಕೊಂಡು ದೂರಾದ ಮಗ, ಕಾಹಿಲೆಯಾಗಿ ಸತ್ತು ಹೋದ ಮಗಳು. ಸಣ್ಣ ವಯಸ್ಸಿನಿಂದ ಗೋಪಾಲಯ್ಯನ ಸಾಕು ಮಗನಾಗಿ ಜೊತೆಯಲ್ಲಿದ್ದ ನಾರಯಣ ಅವನ ಹೆಂಡತಿ ಮತ್ತು ಮಕ್ಕಳು ಕಾದಂಬರಿಯ ಮುಖ್ಯ ಪಾತ್ರಗಳು. ಅವರೊಳಗೊಳಗೇ ಹೆಣೆದುಕೊಂಡಿರುವ, ಒಬ್ಬರಿಗೊಬ್ಬರಿಗೆ ಗೊತ್ತಿರದ ರಹಸ್ಯ ವಿಷಯಗಳಿಗೆ ಅಪರಿಚಿತ ಶಿವರಾಮು ಸಾಕ್ಷಿಯಾಗುತ್ತಾನೆ. ಮತ್ತು ಈ ಎಲ್ಲಾ ಘಟನೆಗಳಿಂದ ಅವನ ಅರಿವಿನ ಮೇಲೆ ಇನ್ನಿಲ್ಲದ ಪ್ರಭಾವ ಉಂಟಾಗುತ್ತದೆ. ಹೊಸಬನೊಂದಿಗೆ ಒಂದೊಂದು ಪಾತ್ರಗಳೂ ತೆರೆದುಕೊಳ್ಳುವ ರೀತಿ, ಅವರಿಗೆ ಅವನು ಅನಿವಾರ್ಯವಾಗಿಬಿಡುವ ಪರಿಸ್ಥಿತಿ ಎಲ್ಲವೂ ಕಾದಂಬರಿಯಲ್ಲಿ ಹೊಸದೇನನ್ನೋ ಹೊಳೆಯಿಸಿ, ಮಿಂಚಿ ಮರೆಯಾಗುತ್ತದೆ.

 

ಈ ತರಹ ಮನುಷ್ಯ ಸಂಬಂಧಗಳ, ರಮಣೀಯ ಪ್ರಕೃತಿಯ, ಯುವ ಆದರ್ಶಗಳ ಸೂಕ್ಷ್ಮ ಚಿತ್ತಾರ ಬೆಟ್ಟದ ಜೀವ. ಇಂತಹ ಕಾದಂಬರಿಯನ್ನು ಸಿನಿಮಾ ಮಾಡಿದ್ದಾರೆ ಎಂದಾಗ ಪ್ರೇಕ್ಷಕರ ನಿರೀಕ್ಷೆಯು ದೊಡ್ಡದಿರುತ್ತದೆ. ಆದರೆ ಪಿ. ಶೇಷಾದ್ರಿಯವರ ಬೆಟ್ಟದ ಜೀವ ಸಿನೆಮಾ ಆರಂಭದಿಂದಲೇ ನಿರೀಕ್ಷೆಗೆ ನೀರೆರೆಚಿ ಸೋಲುತ್ತದೆ. ಶಿವರಾಮ ಕಾರಂತರ ಅಂತಹ ಅದ್ಬುತ ಕಾದಂಬರಿ ಓದಿ ಚಿತ್ರ ನೋಡುವುದಂತು ಹಿಂಸೆಯೇ, ಕಾದಂಬರಿ ಓದಿಕೊಳ್ಳದೇ ನೋಡಿದರೆ ಇನ್ನೂ ಹೆಚ್ಚು ಕಷ್ಟ. ಕೆಲವೊಂದು ದೃಶ್ಯ ಗಳು ತೀರ ಪೇಲವವಾಗಿ ಎಲ್ಲಿಯೂ ಸಿಂಕ್ ಆಗದೇ ಗೊಂದಲ ಮೂಡಿಸುತ್ತದೆ. ಚಿತ್ರದಲ್ಲಿ ಇಷ್ಟಕ್ಕೂ ಏನಿರಬೇಕಿತ್ತು? ಇದನ್ನು ಕತೆ ಆರಿಸಿಕೊಂಡ ನಿರ್ದೇಶಕರು ಮೊದಲು ಮನಗಂಡುಕೊಳ್ಳಬೇಕಿತ್ತು. ನೋಡುಗರಿಗಂತು ಏನಾದರೂ ಇದ್ದಿದ್ದರೆ ಚೆನ್ನಾಗಿತ್ತು ಎನಿಸಿಕೊನೆಗೊಂಡು ಬಿಡುತ್ತದೆ. ಸರಳ ಕಥೆಯನ್ನೇ ಅದ್ಬುತವಾಗಿ ನಿರೂಪಿಸಿ ಗೆಲ್ಲುವ ಸಿನಿಮಾಗಳಿವೆ, ಅಂತಹದರಲ್ಲಿ ಅದ್ಬುತ ಕತೆಯೊಂದನ್ನು ಈ ರೀ ಫ಼್ಲಾಟ್ ಆಗಿ ಚಿತ್ರೀಕರಿಸಿ, ಪರಿಣಾಮಕಾರಿಯಾಗಬಹುದಾದ ಚಿತ್ರವನ್ನು ನಿರೂಪಿಸುವಲ್ಲಿ ಸೋತು ನೀರಸವಾಗಿಸಿದ್ದಾರೆ.  

 

ತಮಾಶೆ ಎಂದರೆ ಬೆಟ್ಟದ ಜೀವ ಚಿತ್ರಕ್ಕೆ ಉತ್ತಮ ಪರಿಸರದ ಕತೆಯ ರಾಷ್ಟ್ರ ಪ್ರಶಸ್ತಿ ಬಂದಿದೆಯಂತೆ, ಮಲೆನಾಡಿಗೆ ಹೋಗಿ ಸಾಧಾರಣ ಮೊಬೈಲ್ ಕ್ಯಾಮೆರಾನಲ್ಲಿ ಚಿತ್ರೀಕರಿಸಿದರೂ ಬೆಟ್ಟದ ಜೀವ ಸಿನಿಮೆದಲ್ಲಿ ತೋರಿಸಿರುವಷ್ಟು ಹಸಿರು ಪರಿಸರವನ್ನು ಸೆರೆ ಹಿಡಿಯಬಹುದು, ಸ್ವಲ್ಪ ಪ್ರಯತ್ನ ಪಟ್ಟರೆ ಚಿತ್ರದಲ್ಲಿರುವುದಕ್ಕಿಂತ ಚೆನ್ನಾಗಿಯೇ ಮಾಡಬಹುದು ಎನ್ನಿ. ಅಷ್ಟು ಒಳ್ಳೆ ನಟರನ್ನಿಟ್ಟುಕೊಂಡು, ಸುಂದರ ತಾಣಗಳಿರುವ ಮಲೆನಾಡಿನಲ್ಲಿ, ಅದ್ಬುತ ಕಥೆಯೂ ಇದ್ದು ಈ ತರಹ ಸಿನಿಮಾ ಕೆಡೆಸುವುದಕ್ಕೆ ಆರ್ಟ್ ಫಿಲಂ ಎಂಬ ತಲೆ ಮರೆವು ಬೇಕೆ? ಸಿನಿಮಾ ಇಡಿಯಾಗಿ ನಿರ್ದೇಶಕರಿಗೆ ದಕ್ಕುವ ಮೊದಲೇ ಚಿತ್ರೀಕರಿಸಿ ಬಿಸಾಕಿದ ಹಾಗಿದೆ. ಒಟ್ಟಾರೆ ಬೆಟ್ಟದ ಜೀವ ಸಿನಿಮಾ ನಿರ್ದೇಶಕರ ಆತುರದ, ಪ್ರೇಕ್ಷಕರನ್ನು ನಿರಾಶೆಗೊಳಿಸುವ ಗರ್ಭಪಾತ.

 

15-07-2011

samvaada.com fan page on facebook




ಇಲ್ಲಿವರೆಗಿನ ಅಭಿಪ್ರಾಯಗಳು

Gretna b u
2011-07-15 04:11:23

A very hurried and biased review. the movie is a good cinematic expression of the novel. By depicting the present at the end, the relevance of the novel has been kept alive. On the whole bettada jeeva is a well made film


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು