ದೃಶ್ಯಕ್ಕೊಂದು ನುಡಿಗಟ್ಟು

ನಾನೂ ಫೋಟೋ ಕ್ಲಿಕ್ಕಿಸುವ ಆಸೆ! - ಭಾಗ 6

ನಾನು ಫೋಟೊಗ್ರಫಿಗೆ ಸಂಬಂಧಿಸಿದ ಸರಣಿ ಲೇಖನಗಳನ್ನು ಬರೆಯಲು ಯಾವಾಗ ಪ್ರಾರಂಭಿಸಿದನೋ ಆಗಿನಿಂದ ಅನೇಕ ಗೆಳೆಯರಿಂದ ಫೋನು. ಯಾವ ಕ್ಯಾಮೆರ, ಲೆನ್ಸು, ಇತ್ಯಾದಿಗಳನ್ನು ಕೊಂಡುಕೊಳ್ಳಬೇಕು ಎನ್ನುವುದೇ ಅವರ ಸರಣಿ ಪ್ರಶ್ನೆಗಳು.  ಕೊನೆಗೆ ಇದರ ಬಗ್ಗೆ ಬರೆಯಲೇ ಬೇಕೆಂದು ತೀರ್ಮಾನಿಸಿದರೂ ಸಾಧ್ಯವಾಗಿರಲಿಲ್ಲ. ಒಮ್ಮೆ ನನ್ನ ಆತ್ಮೀಯ ಗೆಳೆಯ[ಡಾಕ್ಟರ್]ರ ಕ್ಲಿನಿಕ್ಕಿಗೆ ಹೋದಾಗ ಅವರು ಸಹಜವಾಗಿ ಒಂದು ವಿಚಾರವನ್ನು ಪ್ರಸ್ತಾಪಿಸಿದರು. ಅದನ್ನು ಅವರ ಮಾತಿನಲ್ಲೇ ಹೇಳುತ್ತೇನೆ

"ಶಿವು ಈ ಕ್ಯಾಮೆರಗಳ ವಿಚಾರದಲ್ಲಿ ನನಗೆ ತುಂಬಾ ಕನ್‍ಪ್ಯೂಸ್ ಆಗಿಬಿಟ್ಟಿದೆ.  ಒಬ್ಬೊಬ್ಬರೂ ಒಂದೊಂದು ವಿಧದ ಅಭಿಪ್ರಾಯ ಮಂಡಿಸುತ್ತಾರೆ.  ನಾನು ಯಾವ ಕಂಪನಿಯ ಕ್ಯಾಮೆರವನ್ನು ಖರೀದಿಮಾಡಬೇಕು ಎನ್ನುವ ಗೊಂದಲದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಅಮೇರಿಕಾದಲ್ಲಿರುವ ನನ್ನ ಕಸಿನ್ ಹೇಳುತ್ತಾನೆ. ನೀನು ಕ್ಯಾನನ್ ಕಂಪನಿಯ 60D ಕ್ಯಾಮೆರವನ್ನು ಖರೀದಿ ಮಾಡು ಅದು ತುಂಬಾ ಚೆನ್ನಾಗಿದೆ, ಯಾವುದೇ ಕಾರಣಕ್ಕೂ ನಿಕಾನ್ ಕಂಪನಿಯ ಕ್ಯಾಮೆರದ ಬಗ್ಗೆ ಯೋಚಿಸಬೇಡ ಅಂತ. ಬೇಕಾದರೆ ನಾನು ನಿನಗಾಗಿ ಇಲ್ಲಿಂದಲೇ ತರುತ್ತೇನೆ ಅಂತ ಹೇಳುತ್ತಾನೆ. ಆದ್ರೆ ಇಲ್ಲಿಯೇ ಇರುವ ಮತ್ತೊಬ್ಬ ಕಸಿನ್ ಹೇಳುತ್ತಾನೆ. ನೀನು ಕ್ಯಾನನ್ ಕ್ಯಾಮೆರವನ್ನು ಖರೀದಿಸಿದ್ದರೆ ಅದನ್ನು ನೇರವಾಗಿ ಬಿಬಿಎಂಪಿ ಕಸದ ತೊಟ್ಟಿಗೆ ಹಾಕು.  ಅದೊಂದು ಡಬ್ಬ ಕಂಪನಿ, ಅದರಲ್ಲಿ ತಯಾರಾಗುವ ಕ್ಯಾಮೆರಗಳೆಲ್ಲಾ ಥೇಟ್ ಡಬ್ಬಗಳು! ನಿನಗೆ ಬುದ್ಧಿಯಿಲ್ಲವೇ! ಏನೂ ಅಲೋಚನೆ ಮಾಡದೇ ನಿಕಾನ್ ಕಂಪನಿಯ D7000 ಕ್ಯಾಮೆರವನ್ನು ಖರೀದಿ ಮಾಡು ಅಂತ ತಾಕೀತು ಮಾಡುತ್ತಾನೆ. ಇವರಿಬ್ಬರ ಮಾತುಗಳನ್ನು ಕೇಳಿ ನನಗೆ ತಲೆಕೆಟ್ಟಂತಾಗಿದೆ. ಹಾಗಂತ ಫೋಟೊಗ್ರಫಿಯನ್ನು ಬಿಡುವ ಹಾಗಿಲ್ಲ ಅದು ನನ್ನ ಹಾಭಿ. ಯಾವುದಾದರೂ ಒಂದು ಕ್ಯಾಮೆರವನ್ನು ಕೊಳ್ಳಲೇಬೇಕು.  ನಿಮ್ಮ ಬ್ಲಾಗಿನಲ್ಲಿ ಈಗ ಬರೆಯುತ್ತಿರುವ ಫೋಟೊಗ್ರಫಿ ಲೇಖನಗಳನ್ನು ಓದುತ್ತಿದ್ದೇನೆ. ದಯವಿಟ್ಟು ಇದರ ಬಗ್ಗೆ ಬರೆದರೆ ನನ್ನಂತ ನೂರಾರು ಜನರಿಗೆ ಖಂಡಿತ ಉಪಯೋಗವಾಗುತ್ತದೆ ಎಂದರು.  ಅವರ ಮಾತನ್ನು ಕೇಳಿದ ಮೇಲೆ ಹೌದು ಎನ್ನಿಸಿತು. ಖಂಡಿತ ಮುಂದಿನ ಲೇಖನವನ್ನು ಅದರ ಬಗ್ಗೇನೇ ಬರೆಯುತ್ತೇನೆ ಎಂದು ಹೇಳಿದ್ದೆ.  ಆದ್ರೆ ಯಾವಾಗ ಬರೆಯಲು ಪ್ರಾರಂಭಿಸಿದೆನೋ ಆಗ ಗೊತ್ತಾಯಿತು. ನಿಜಕ್ಕೂ ಒಂಥರ ಕಷ್ಟ ಅಂತ.                

       ಇದುವರೆಗೂ ಬರೆದ ಈ ಫೋಟೊಗ್ರಫಿ ಲೇಖನಗಳಿಗೆ ಹೋಲಿಸಿದರೆ  ಈ ಲೇಖನ ನಿಜಕ್ಕೂ ನನಗೆ ಕಷ್ಟವಾದದ್ದು ಮತ್ತು ನಿಮಗೂ ಕೂಡ. ಏಕೆಂದರೆ ಇದುವರೆಗೂ ನೀವು ಓದಿದ ವಿಚಾರಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಬಹುದು. ಮುಂದೆ ಬರೆಯುವ ಭಾಗಗಳೂ ಕೂಡ. ಆದ್ರೆ ಇದೊಂದು ಮಾತ್ರ ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವುದಿಲ್ಲ. ಕಾರಣವೇನೆಂದರೆ ಇದು ಕ್ಯಾಮೆರ ಮತ್ತು ಲೆನ್ಸುಗಳ ವಿಚಾರ. ಈ ಕ್ಯಾಮರ ಮತ್ತು ಲೆನ್ಸುಗಳು ಥೇಟ್ ನಮ್ಮ ಮನಸ್ಥಿತಿಯ ಹಾಗೆ ಕ್ಷಣಕ್ಕೊಮ್ಮೆ ಬದಲಾಗುತ್ತಿರುತ್ತವೆ. ಇವತ್ತಿನ ಹೊಸತು ನಾಳೆಗೆ ಹಳೆಯದು. ಇವತ್ತು ನೀವು ಎಲ್ಲವನ್ನು ಚೆನ್ನಾಗಿ ಪರಾಮರ್ಶಿಸಿ ಅದರ ಬಗ್ಗೆ ತಿಳಿದವರಲ್ಲಿ ವಿಚಾರಿಸಿ ಇಷ್ಟಪಟ್ಟು ಖರೀದಿ ಮಾಡಿದ ಕ್ಯಾಮೆರ, ಆ ಭಾನುವಾರದ ನಿಮ್ಮ ಮನೆಯ  ಮಗ-ಮಗಳ ಹುಟ್ಟುಹಬ್ಬದ ಅತ್ಯುತ್ತಮ ಫೋಟೊಗಳನ್ನು ಕ್ಲಿಕ್ಕಿಸಿ ಮಿಂಚಿದ್ದರೂ ಮುಂದಿನ ತಿಂಗಳ ನಿಮ್ಮ ಗೆಳಯನ ಮಗಳ ಹುಟ್ಟುಹಬ್ಬಕ್ಕೆ ಹೋದಾಗ ಆತ ಅಲ್ಲಿ ನಿಮ್ಮ ಕ್ಯಾಮೆರಕ್ಕಿಂತ ಉತ್ತಮವೆನಿಸುವ ಕ್ಯಾಮೆರದಿಂದ ಫೋಟೊಗಳನ್ನು ಕ್ಲಿಕ್ಕಿಸಿ  ಪ್ರಿಂಟ್ ಮಾಡಿ ತೋರಿಸಿದಾಗ ಅಥವ ಇಂಟರ್‍ನೆಟ್-ಫೇಸ್‍ಬುಕ್ ಇತ್ಯಾದಿಗಳಲ್ಲಿ ನೋಡಿದಾಗ ಖಂಡಿತ ನಿಮ್ಮ ಕ್ಯಾಮೆರ ಪಲಿತಾಂಶ ಸಪ್ಪೆಯೆನಿಸಿ ನಿಮಗೆ ಬೇಸರವಾಗಿರುತ್ತದೆ.

ಸ್ವಲ್ಪ ತಡ ಮಾಡಿದ್ದರೆ ಇನ್ನೂ ಸುಂದರವಾದ ಹೆಂಡತಿ ಸಿಗುತ್ತಿದ್ದಳು ಎನ್ನುವ ಗಾಧೆ ವಿಚಾರವನ್ನು ಈಗ ಹೊಸ ಮೊಬೈಲುಗಳಿಗೆ ಹೇಗೆ ಹೋಲಿಸುತ್ತೇವೋ ಅದೇ ರೀತಿ ಇದೇ ಆದುನಿಕ ಗಾಧೆ ನಮ್ಮ ಕ್ಯಾಮೆರ ಮತ್ತು ಲೆನ್ಸುಗಳಿಗೂ ಅನ್ವಯವಾಗುತ್ತದೆ.  ಅದರೂ ಈ ಗಾಧೆಯನ್ನು ಸುಳ್ಳುಮಾಡುವ ಹಾಗೆ ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ಒಮ್ಮೆ ಖರೀದಿಸಿದರೆ ಕಡಿಮೆಯೆಂದರೂ ಹತ್ತುವರ್ಷಗಳು ಮತ್ತು ಅದಕ್ಕಿಂತ ಇನ್ನೂ ಹೆಚ್ಚು ಬಾಳಿಕೆ ಬರುವ ಕ್ಯಾಮೆರಗಳನ್ನು ಕೊಂಡುಕೊಳ್ಳಬಹುದು. ಅದು ಹೇಗೆ ಸಾಧ್ಯ ಎನ್ನುವುದೇ ಈ ಲೇಖನದ ಮುಖ್ಯ ವಿಚಾರ.

 ಒಮ್ಮೆ ಕ್ಯಾಮೆರ ಕೊಳ್ಳಬೇಕೆಂದು ನಿಮ್ಮ ಮನಸ್ಸಿಗೆ ಬಂತಲ್ಲ!  ಆಗ ಸಹಜವಾಗಿಯೇ ನಿಮ್ಮ ಕಣ್ಣು ನಿತ್ಯಪತ್ರಿಕೆಯ ಜಾಹಿರಾತಿನ ಮೇಲಿರುತ್ತದೆ.  ಅದರಲ್ಲಿ ಫ್ಯೂಜಿ, ಕೊಡಕ್, ಪೆಂಟಾಕ್ಸ್, ಒಲಂಪಸ್,....ಇತ್ಯಾದಿ ಕಂಪನಿಗಳ ಕ್ಯಾಮೆರಗಳ ಚಿತ್ರವನ್ನು ಕೊಟ್ಟು ಅವುಗಳ ಖರೀದಿ ಬೆಲೆಯನ್ನು ಕೊಟ್ಟಿರುತ್ತಾರೆ. ಜೊತೆಗೆ ಒಂದಷ್ಟು ಗಿಪ್ಟ್ ಅಮಿಶವನ್ನು ತೋರಿಸಿರುತ್ತಾರೆ. ಹೀಗೆ ಜಾಹಿರಾತಿನಲ್ಲಿ ಬರುವ ಕ್ಯಾಮೆರಗಳ ಬೆಲೆ ಹತ್ತು ಸಾವಿರದ ಒಳಗೆ ಇರುತ್ತದೆ. ಕೆಲವೊಮ್ಮೆ ಹನ್ನೆರಡು...ಹದಿನೈದು ಸಾವಿರದವರೆಗೆ ಮಾತ್ರವಿರುತ್ತದೆ.  ಈ ಜಾಹೀರಾತು ಮತ್ತು ಅದರ ಜೊತೆಗೆ ಕೊಡುವ ಗಿಪ್ಟ್ ನಿಮ್ಮನ್ನು ಸೆಳೆದು ನೇರವಾಗಿ  ಆ ಷೋ ರೂಂನೊಳಗೆ ಕರೆದುಕೊಂಡು ಹೋಗಿಬಿಡುತ್ತದೆ.  ಕಣ್ಮನ ಸೆಳೆಯುವ ಲೈಟಿಂಗ್ ವಿನ್ಯಾಸದಲ್ಲಿ ಜೋಡಿಸಿದ್ದ ಕ್ಯಾಮೆರಗಳನ್ನು ಕೊಂಡು ಅವರು ಕೊಡುವ ಗಿಪ್ಟುಗಳನ್ನು ಪಡೆದುಕೊಂಡು ನಿಮ್ಮ ಮನೆಯಲ್ಲಿ ಅಥವ ಪ್ರವಾಸದಲ್ಲಿ ಫೋಟೊಗ್ರಫಿ ಮಾಡುತ್ತೀರ.  ಇಂಥ ಕ್ಯಾಮೆರಗಳು ಚಿಕ್ಕದಾಗಿ ಚೊಕ್ಕವಾಗಿರುತ್ತದೆ. ಕೈಯಲ್ಲಿ ಹಿಡಿದು ಫೋಟೊತೆಗೆಯಲು ಸೊಗಸಾಗಿರುತ್ತವೆ. ಇವುಗಳಿಗೆ "ಕಂಪ್ಯಾಕ್ಟ್" ಕ್ಯಾಮೆರಗಳೆನ್ನುತ್ತಾರೆ. ಈ ಕ್ಯಾಮೆರಗಳಲ್ಲಿ ಫೋಟೊಗ್ರಫಿ ಕಲಿಕೆಗೆ ಹೆಚ್ಚು ಅವಕಾಶವಿಲ್ಲ. ಪುಟ್ಟ ಲೆನ್ಸು ಕ್ಯಾಮೆರ ಜೊತೆಗೆ ಸೇರಿರುವುದರಿಂದ  5x... 10x....ಆಪ್ಟಿಕಲ್ ಜ್ಯೂಮ್ ಇರುವುದರಿಂದ ಅದನ್ನು ಬಳಸಿಕೊಂಡು ಮನೆಯಲ್ಲಿನ ಪುಟ್ಟ ಕಾರ್ಯಕ್ರಮ ಅಥವ ನಿಮ್ಮದೇ ಭಾವಚಿತ್ರಗಳು, ಪ್ರವಾಸದಲ್ಲಿ ನಿಮ್ಮ ತರಲೇ ಆಟಗಳು ಇತ್ಯಾದಿಗಳನ್ನು ಚೆನ್ನಾಗಿ ಸೆರೆಯಿಡಿಯಬಹುದು.  ಈಗ ಬರುವ ಪ್ರತಿಯೊಂದು ಡಿಜಿಟಲ್ ಕ್ಯಾಮೆರಗಳು ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ನಿಮಗೆ ಕೊಡುತ್ತವೆಯಾದರೂ ಇವು "ಗುರಿಯಿಟ್ಟು ಫೋಟೊ ತೆಗಿ" ಇಷ್ಟಕ್ಕೆ ಸೀಮಿತವಾಗಿರುತ್ತವೆಯಾದ್ದರಿಂದ ತಾಂತ್ರಿಕವಾಗಿ ಏನು ಕಲಿಯಲು ಸಾಧ್ಯವಿಲ್ಲ.  ಫೋಟೊಗ್ರಫಿ ಮಾಡಿ ನಾನು ಏನು ಸಾಧಿಸಬೇಕಾಗಿಲ್ಲ. ಸುಮ್ಮನೆ ಕಂಡಿದ್ದನ್ನು  ಕ್ಲಿಕ್ ಮಾಡಿದರೆ ಸಾಕಪ್ಪ ಇದನ್ನು ಪೂರ್ತಿಯಾಗಿ ಕಲಿತು ಯಾವ ದೇಶವನ್ನು ಉದ್ಧಾರ ಮಾಡಬೇಕು ಎನ್ನುವ ಭಾವನೆಯುಳ್ಳವರಿಗೆ ಇವು ಸಾಕು.  ಈಗೀಗ ಇದರಲ್ಲೂ ಕೆಲವು ಹೆಚ್ಚಿನ ಮೆಗಪಿಕ್ಸಲ್ ಕ್ಯಾಮೆರಗಳು ಬಂದಿದ್ದು ನಿಮಗೆ ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯಬಹುದು. SONY CYBERSHOT DSC H55,    CANON IXUS 120IS,    CONON IXUS 105,   NIKON COOLPIX S3100,   NIKON COOLPIX S2500,...ಇವೆಲ್ಲ ಉತ್ತಮ ಕ್ಯಾಮೆರಗಳು.

       ನೀವು ರಸ್ತೆಯಲ್ಲಿ ಹೋಗುತ್ತಿದ್ದರೆ ನಿಮ್ಮ ಕಣ್ಸೆಳೆಯುವುದು ದೀಪಿಕಾ ಪಡುಕೋಣೆ ತನ್ನ ಕೈಯಲ್ಲಿಡಿದ ಸೋನಿ ಕಂಪನಿಯ ಒಂದು ಕಂಪ್ಯಾಕ್ಟ್ ಕ್ಯಾಮೆರ.ಜಾಹಿರಾತಿನ ಒಂದು ಹೋರ್ಡಿಂಗ್.  ಸೋನಿ ಕಂಪನಿಯವರು ಏನೇ ಮಾಡಿದರೂ ದೊಡ್ಡ ಜಗಜ್ಜಾಹೀರು ಮಾಡುವುದರಿಂದ ಬೇಗನೆ ಎಲ್ಲರಿಗೂ ಅದು ಗೊತ್ತಾಗಿಬಿಡುತ್ತವೆ.  ದೀಪಿಕಾ ಪಡುಕೋಣೆ ಕೈಯಲ್ಲಿಡಿದ ಈ ಕ್ಯಾಮೆರವನ್ನು ಕೊಂಡುಕೊಳ್ಳಲಾ ಎಂಥ ಎಷ್ಟೋ ಜನ ನನಗೆ ಪೋನ್ ಮಾಡಿ ಕೇಳಿದ್ದುಂಟು. ಈ ಕ್ಯಾಮೆರವನ್ನು ಏಕೆ ಅಷ್ಟು ದೊಡ್ಡದಾಗಿ ಎಲ್ಲಾ ರಸ್ತೆಗಳಲ್ಲಿ ಜಾಹೀರಾತು ಹಾಕಿದ್ದಾರೆಂದರೆ ಇತ್ತೀಚೆಗೆ ಎಲ್ಲರಿಗೂ ವಿಡಿಯೋ ಮಾಡುವ ಕ್ರೇಜ್ ಹೆಚ್ಚಾಗಿದೆ.   ದೀಪಿಕ ಪಡುಕೋಣೆ ಕೈಯಲ್ಲಿ ಹಿಡಿದಿರುವ ಕಂಪ್ಯಾಕ್ಟ ಕ್ಯಾಮೆರ  PULL HD [HIGH DIFINITION ವಿಡಿಯೋ ರೆಕಾರ್ಡಿಂಗ್ 1920X1080p ]ವಿಡಿಯೋ ಮಾಡಿಕೊಡುತ್ತದೆ.  ಒಂದು ಪುಟ್ಟ ಅಂಗೈ ಅಗಲದ ಕಂಪ್ಯಾಕ್ಟ್ ಕ್ಯಾಮೆರ ಕೇವಲ 12000 ಕ್ಕೆ ನಿಮಗೆ PULL HD  ವಿಡಿಯೋ ಒದಗಿಸುತ್ತದೆ ಇದರಲ್ಲಿ ಅತ್ಯುತ್ತಮ ಗುಣಮಟ್ಟದ ವಿಡಿಯೋ ಮಾಡಬಹುದು. ಹಾಗೆ SONY NX 5, NX 3 ಎನ್ನುವ ಪುಟ್ಟ ಕ್ಯಾಮೆರಗಳಲ್ಲಿ ಉತ್ತಮ ಗುಣಮಟ್ಟದ ವಿಡಿಯೋ ಮಾಡುವ ಅವಕಾಶ ಇರುವುದರಿಂದ ಈ ಕ್ಯಾಮೆರಗಳನ್ನು ಫೋಟೊಗ್ರಫಿ ಜೊತೆಗೆ ವಿಡಿಯೋ ಅಭಿರುಚಿಯುಳ್ಳವರು ಕೊಂಡುಕೊಳ್ಳಬಹುದು. ಈ ಸೋನಿ ಕ್ಯಾಮೆರಗಳ ಮತ್ತೊಂದು ಉತ್ತಮ ಗುಣಮಟ್ಟವೇನೆಂದರೆ ನೀವು ಚಲಿಸುತ್ತಾ ಸೂಟಿಂಗ್ ಮಾಡುತ್ತಿದ್ದರೆ ಬದಲಾದ ವಸ್ತುವಿನ ಮೇಲೆ ನಿರಂತರವಾಗಿ ಫೋಕಸ್ ಆಗುವುದರಿಂದ ನಿಮ್ಮ ವಿಡಿಯೋ ಅಥವ ಫೋಟೊಗ್ರಫಿ ಯಾವುದೇ ಕಾರಣಕ್ಕೂ ಫೋಕಸ್ ಔಟ್ ಆಗಿರುವುದಿಲ್ಲ. ಈ ಕ್ಯಾಮೆರಗಳನ್ನು ಬಳಸಿ ಅತ್ಯುತ್ತಮ ಕಿರುಚಿತ್ರಗಳನ್ನು ವಿದೇಶಗಳಲ್ಲಿ ನಿರ್ಮಿಸುತ್ತಿದ್ದಾರೆ. ಈ ಕ್ಯಾಮೆರಗಳ ಬೆಲೆ 10000- 25000 ವರೆಗೆ ಮಾರುಕಟ್ಟೆಯಲ್ಲಿ ಇದೆ. ಗ್ರೇ ಮಾರುಕಟ್ಟೆಯಲ್ಲಿ [ರಸೀತಿಯಿಲ್ಲದೇ ಎರಡರಿಂದ ಐದುಸಾವಿರದವರೆಗೆ]ಶೋರೂಂ ರೇಟಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.

 ಮತ್ತೊಂದು ಸಣ್ಣ ಉದಾಹರಣೆಯನ್ನು ಕೊಡಲು ಇಚ್ಚಿಸುತ್ತೇನೆ. ನೀವು ಒಂದು ದೊಡ್ದ ಕಛೇರಿಯ ಒಡೆಯರಾಗಿರುತ್ತೀರಿ.  ಆ ಕಛೇರಿಯ ಕಸ ಗುಡಿಸಿ, ನೆಲವನ್ನು ಸ್ವಚ್ಚಗೊಳಿಸಲು ನಿಮಗೆ ಒಬ್ಬರು ಒಳ್ಳೆಯ ಕೆಲಸಗಾರ ಬೇಕು. ನೀವು ನೇಮಿಸಿದ ಆ ಕೆಲಸಗಾರನಿಗೆ ಇವೆರಡನ್ನೂ ಬಿಟ್ಟು ಬೇರೇನು ಗೊತ್ತಿರುವುದಿಲ್ಲ. ಆದ್ರೆ ಇವೆರಡೂ ಕೆಲಸವನ್ನು ಚೆನ್ನಾಗಿ ಮಾಡುತ್ತಾನೆ. ತನ್ನ ಸಂಬಳವನ್ನು ಪಡೆಯುತ್ತಾನೆ. ಇಲ್ಲಿ ಈ ಕಾಂಪ್ಯಾಕ್ಟ್ ಕ್ಯಾಮೆರಗಳು ಆ ಕೆಲಸಗಾರನಂತೆ ಅತ್ಯುತ್ತಮ ಗುಣಮಟ್ಟದ ಫೋಟೊವನ್ನು "ಗುರಿಯಿಡಿ ಮತ್ತು ಕ್ಲಿಕ್ಕಿಸು" ಇವೆರಡನ್ನು ಅದ್ಬುತವಾಗಿ ಮಾಡುತ್ತವೆ. ಇದನ್ನು ಬಿಟ್ಟು ಬೇರೇನು ಇವುಗಳಿಂದ ಬಯಸುವಂತಿಲ್ಲ.

      ಇವುಗಳ ನಂತರ ಬರುವಂತವೇ ಪ್ರಿಸುಮರ್ ಕ್ಯಾಮೆರಗಳು. ಇವು ಕಾಂಪ್ಯಾಕ್ಟ್ ಕ್ಯಾಮೆರಗಳಂತೆ ಇದ್ದರೂ ಅದಕ್ಕಿಂತ ಸ್ವಲ್ಪ ದೊಡ್ಡದಾಗಿರುತ್ತವೆ.  ಅವುಗಳಂತೆ ಇವುಗಳಲ್ಲಿ ಲೆನ್ಸು ಕ್ಯಾಮೆರ ಜೊತೆ ಸೇರಿರುತ್ತವೆ. ಆದರೆ ಇದರಲ್ಲಿ ಕೆಲವು ಹೊಸ ಅವಕಾಶಗಳಿವೆ. ಅವುಗಳೆಂದರೆ ಅಪೆರ್ಚೆರ್, ಷಟರ್ ಸ್ಪೀಡ್, ಮ್ಯಾನುವಲ್, ಆಟೋ, ಪುಲ್ ಆಟೋ, ಸ್ಪೋರ್ಟ್ ಮೋಡ್, ಪೋರ್ಟ್ರೇಟ್, ಒಳಾಂಗಣ, ಹೊರಾಂಗಣ, ಐಎಸ್‍ಒ ಸೆಟ್ಟಿಂಗ್,..... ಇನ್ನೂ ಅನೇಕ ಗುಣಲಕ್ಷಣಗಳಿದ್ದು ಅವುಗಳನ್ನು ಬಳಸುವ ಮತ್ತು ಕಲಿಯುವ ಅವಕಾಶವುಂಟು. ಮತ್ತೆ  ಇಂಥ ಕ್ಯಾಮೆರಗಳಲ್ಲಿ ಅದ್ಬುತ ಸಾಧನೆಯನ್ನು ಮಾಡಿದವರಿದ್ದಾರೆ. ನಮ್ಮ ಸಿರಸಿಯ ನಾಗೇಂದ್ರ ಒಲಂಪಸ್ ಕಂಪನಿಯ ಇಂಥ ಒಂದು ಪ್ರಿಸೂಮರ್ ಕ್ಯಾಮೆರದಿಂದಲೇ ನಮ್ಮ ಜೊತೆಗೆ ಕ್ಲಿಕ್ಕಿಸಿದ ಫೋಟೊಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಗಳಿಸಿವೆ.

      NIKON KOOLPIXP500- 36X APTICLE JOOM,  OLYMPUS-SP610,  CANON POWERSHOT SEARIES-SX 30IS, SONY CYBER SHOT SERIES,   ,NX SERIES,  H 1, 4, 7M,  SERIES...ಹೀಗೆ ಹತ್ತಾರು ಕ್ಯಾಮೆರಗಳು ಚೆನ್ನಾಗಿವೆ.

      ಕಾಂಪ್ಯಾಕ್ಟ್ ಕ್ಯಾಮೆರಗಳಿಗಿಂತ ಸ್ವಲ್ಪ ಮೇಲು ಮಟ್ಟದ ಇವು ನಿಮ್ಮ ಕಛೇರಿಯ ಕಸಗುಡಿಸುವ ಸ್ವಚ್ಚ ಮಾಡುವುದರ ಜೊತೆಗೆ ಫೋನುಗಳನ್ನು ಅಟೆಂಡು ಮಾಡುವ, ಮೀಟಿಂಗಿಗೆ ಟೀ ಬಿಸ್ಕಟ್ ವ್ಯವಸ್ಥೆಗೊಳಿಸುವ ಇತ್ಯಾದಿ ಕೆಲಸಗಳನ್ನು ನೋಡಿಕೊಳ್ಳುವ ಕೆಲಸಗಾರನ ಪಾತ್ರವನ್ನು ವಹಿಸುತ್ತವೆ.

      ಇವುಗಳ ನಂತರ ಬರುವ ಕ್ಯಾಮೆರಗಳೆಂದರೆ ದೊಡ್ದ ಕ್ಯಾಮೆರಗಳು. ಫೋಟೊಗ್ರಫಿಯಲ್ಲಿ ಏನಾದರೂ ಸಾಧಿಸಬೇಕಾದರೆ ಇಂಥ ಕ್ಯಾಮೆರಗಳು ಇರಲೇಬೇಕು. ಕಾಂಪ್ಯಾಕ್ಟ್ ಮತ್ತು ಪ್ರಿಸೂಮರ್ ಕ್ಯಾಮೆರಗಳಿಗಿಂತ ಇವು ಹೇಗೆ ಹೆಚ್ಚು ಉಪಯೋಗವೆಂದರೆ ಈ ಕ್ಯಾಮೆರಗಳಲ್ಲಿ ನಮಗೆ ಬೇಕಾದ ಲೆನ್ಸುಗಳನ್ನು ಬದಲಾಯಿಸಿಕೊಳ್ಳಬಹುದು. ಇವುಗಳಲ್ಲಿ ಮೊದಲಿಗೆ ಬೇಸಿಕ್ ಮಾಡಲ್ಲುಗಳನ್ನು ನೋಡೋಣ.CANON REBEL,  CANON 1000D, NIKON D3000, NIKON D3100, SONY ALPHA DSLR-A290, NIKON  D 3100, PENTOX  K-R, ಇತ್ಯಾದಿ ಕ್ಯಾಮೆರಗಳನ್ನು ಕೊಳ್ಳಬಹುದು. ಫೋಟೊಗ್ರಫಿಯನ್ನು ಕಲಿಯುವವರಿಗೆ ಇವು ಉತ್ತಮ.  ಇವು 20,000 ದಿಂದ 30,000 ದವರೆಗೆ ಮಾರುಕಟ್ಟೆಯಲ್ಲಿ ದೊರಯುತ್ತವೆ.  ಮತ್ತೆ ನಿಮಗೆ ಪ್ರಿಸೂಮರಿನಲ್ಲಿರುವ ಎಲ್ಲಾ ಗುಣಗಳ ಜೊತೆಗೆ ನೀವು ಈ ಕ್ಯಾಮೆರಗಳ ಮೇಲೆ ದೊಡ್ಡ ಪ್ಲಾಷ್‍ಗಳನ್ನು ಅಳವಡಿಸಿಕೊಂಡು ಫೋಟೊ ತೆಗೆಯಬಹುದು. ಮದುವೆ, ಮುಂಜಿ, ಪಾರ್ಟಿ, ಇವೆಂಟುಗಳು ಇತ್ಯಾದಿಗಳ ಫೋಟೊಗ್ರಫಿ ಮಾಡಿ ಹಣ ಸಂಪಾದಿಸಬಹುದು.

    ಇವು ನಿಮ್ಮ ಕಛೇರಿಯಲ್ಲಿ ಕಸಗುಡಿಸಿ, ಸ್ವಚ್ಚಮಾಡಿ, ಟೀ ಕಾಫಿ ಬಿಸ್ಕೆಟ್, ಫೋನ್ ನೋಡಿಕೊಳ್ಳುವುದಲ್ಲದೇ ಕಂಪನಿಯ ಅಕೌಂಟ್ಸ್..ಇತ್ಯಾದಿಗಳನ್ನು ನೋಡಿಕೊಳ್ಳವ ಕ್ಲರ್ಕ್‍ನಂತೆ ಕಾರ್ಯನಿರ್ವಹಿಸುತ್ತದೆ.

ಇದರ ನಂತರ ಬರುವುದೇ ಮದ್ಯಮ ವರ್ಗದ ಕ್ಯಾಮೆರಗಳು. ಇವು ಫೋಟೊಗ್ರಫಿ ಕಲಿತ ನಂತರ ಇನ್ನಷ್ಟು ಕಲಿಯಲು ಸಹಕರಿಸುವಂತವುಗಳು. ಈ ಹಂತದಲ್ಲಿ  ಕ್ಯಾಮೆರಗಳ ಜೊತೆ ಬರುವ ಕಿಟ್ ಲೆನ್ಸ್ ಸೇರಿ ಮುವತ್ತೈದು ಸಾವಿರದಿಂದ ಅರವತ್ತು ಸಾವಿರದವರೆಗೆ ಬೆಲೆ ಇರುತ್ತದೆ. ಗ್ರೇ ಮಾರುಕಟ್ಟೆಯಲ್ಲಿ ಹತ್ತರಿಂದ ಇಪ್ಪತ್ತು ಪರ್ಸೆಂಟ್ ಕಡಿಮೆಗೆ ಸಿಗುತ್ತವೆ. ಇವುಗಳ ಗುಣಲಕ್ಷಣಗಳೆಂದರೆ ಡೆಪ್ತ್ ಆಫ್ ಫೀಲ್ಡ್ ಅವಕಾಶವಿದ್ದು, ಐ ಎಸ್ ವೋ ಹೆಚ್ಚಿರುತ್ತದೆ. ಮತ್ತೆ ಒಂದು ಸೆಕೆಂಡಿಗೆ ಮೂರು-ನಾಲ್ಕು ಪ್ರೇಮ್ ಕ್ಲಿಕ್ ಮಾಡುವ ಅವಕಾಶ....ಹೀಗೆ ತುಂಬಾ ಉಪಯುಕ್ತವಾಗಿವೆ.  ಈ ಹಂತದಲ್ಲಿ ಬರುವ ಕ್ಯಾಮೆರಗಳೆಂದರೆ, Nikon D5100, D5000,  D90,  D7000, Canon 500D,  550D,  600D,  20D,  30D,  40D,  50D, ಮತ್ತೆ ಈಗ ಹೊಸದಾಗಿ ಬಂದಿರುವ 60D,,  ಅಲ್ಲದೇ Sony alpha DSLR A-560,   Sony alpha DSLR A-580, Sony alpha SLT-A55,.....  ಕ್ಯಾಮೆರಗಳು ಬರುತ್ತವೆ. ಇವು ಒಂದಕ್ಕೊಂದು ಸಮನಾದ ಗುಣಲಕ್ಷಣಗಳನ್ನು ಹೊಂದಿದ್ದರೂ  ಒಂದೊಂದು ಕಂಪನಿಯ ಕ್ಯಾಮೆರಗಳು ಅವುಗಳದೇ ವಿಶೇಷ ಲಕ್ಷಣಗಳನ್ನು ಹೊಂದಿರುತ್ತದೆ.  ನಮಗೆ ಸರಳವಾಗಿ ಅರ್ಥವಾಗಬೇಕಾದರೆ ಯುದ್ದಮಾಡುವ ಯೋದರನ್ನು ಗಮನಕ್ಕೆ ತೆಗೆದುಕೊಂಡರೆ ಒಬ್ಬ ಬಿಲ್ವಿದ್ದೆಯಲ್ಲಿ ಪರಿಣತಿ ಹೊಂದಿದ್ದರೆ, ಮತ್ತೊಬ್ಬ ಕತ್ತಿವರಸೆಯಲ್ಲಿ, ಮಗದೊಬ್ಬ ಬರ್ಜಿಯಲ್ಲಿ, ಮತ್ತೊಬ್ಬ ರಕ್ಷಣೆಯಲ್ಲಿ...ಹೀಗೆ ಈ ಕ್ಯಾಮೆರಗಳಲ್ಲೂ ಇಂಥ ವಿಶೇಷಣಗಳಿವೆ.

     ಈ ಮದ್ಯಮ ವರ್ಗದ ಕ್ಯಾಮೆರಗಳಲ್ಲಿ ಅನೇಕವನ್ನು ನಾನು ಉಪಯೋಗಿಸಿರುವುದರಿಂದ ಪ್ರತಿಯೊಂದರ ಗುಣಲಕ್ಷಣಗಳನ್ನು ಪುಟ್ಟದಾಗಿ ಅವಲೋಕಿಸಬಹುದು.

       ಮೊದಲಿಗೆ Canon 30D.  ಇದು ನಾನು ಆರುವರ್ಷ ಉಪಯೋಗಿಸಿದ ಈ ಕ್ಯಾಮೆರ ಏಳುವರ್ಷಗಳ ಹಿಂದೆ ಮಾರುಕಟ್ಟೆಗೆ ಬಂದಾಗ ಎಪ್ಪತ್ತು ಸಾವಿರಕ್ಕೆ ಕೊಂಡುಕೊಂಡಿದ್ದೆ. ಇದರಲ್ಲಿ ಮದ್ಯಮವರ್ಗವೆನ್ನುವುದಕ್ಕಿಂತ ಮೇಲ್ಮದ್ಯಮ ವರ್ಗದ ಗುಣಲಕ್ಷಣಗಳೇ ಹೆಚ್ಚು. ನನ್ನ ಫೋಟೊಗ್ರಫಿಯ ಎಪ್ಪತೈದು ಭಾಗ ಈ ಕ್ಯಾಮೆರದಲ್ಲಿಯೇ ಕ್ಲಿಕ್ಕಿಸಿದ್ದು.  ಒಂದು ಸೆಕೆಂಡಿಗೆ ಐದು ಪ್ರೇಮಿನಂತೆ ಕ್ಲಿಕ್ಕಿಸುವ ಈ ಕ್ಯಾಮೆರ ಕ್ರೀಡಾ ಛಾಯಾಗ್ರಾಹಣಕ್ಕೆ ಅತ್ಯುತ್ತಮವಾಗಿದೆ.  ಆದ್ರೆ ಈ ಕ್ಯಾಮೆರ ತಯಾರಿ ನಿಂತಿದ್ದು ಅದರ ನಂತರ ಅನೇಕ ಕ್ಯಾಮೆರಗಳು ಬಂದವು. ಅವುಗಳಲ್ಲಿ 40D ಕ್ಯಾಮೆರಾ ವೃತ್ತಿದಾರರಿಗೆ ಉತ್ತಮವೆನಿಸಲಿಲ್ಲ. ಫೋಕಸಿಂಗ್ ತೊಂದರೆ..... ಇತ್ಯಾದಿಗಳಿಂದಾಗಿ ಅದು ಕ್ಲಿಕ್ ಆಗಲಿಲ್ಲ. ಅದರ ನಂತರ ಬಂದ 50D ಕೂಡ Noice ತೊಂದರೆಯಿಂದಾಗಿ ವಿಫಲವಾಯಿತು. ಆದ್ರೆ ಈಗ ಬಂದಿರುವ Canon 60D ಕ್ಯಾಮೆರ ಅತ್ಯುತ್ತಮವಾಗಿದೆ ಅದನ್ನು ಪರೀಕ್ಷಿಸಿದ್ದೇನೆ.  ಈ ಕ್ಯಾಮೆರದ ಮತ್ತೊಂದು ವಿಶೇಷವೆಂದರೆ ಅದರಲ್ಲಿ Full HD ವಿಡಿಯೋ ಮಾಡಬಹುದು.30D ಕ್ಯಾಮೆರದ ಎಲ್ಲಾ ಕ್ವಾಲಿಟಿಗಳನ್ನು ಉಳಿಸಿಕೊಂಡಿದ್ದಲ್ಲದೇ ಅನೇಕ ಹೊಸ ಗುಣಗಳನ್ನು ಹೊಂದಿದೆ. 60D ಕ್ಯಾಮೆರ ಸದ್ಯ ಮಾರುಕಟ್ಟೆಯಲ್ಲಿ ಲೆನ್ಸ್ ಇಲ್ಲದೇ ನಲವತ್ತು ಸಾವಿರಕ್ಕೆ ದೊರೆಯುತ್ತದೆ.

ಕ್ಯಾನನ್ ಕಂಪನಿಯಲ್ಲಿ ಪ್ರಸ್ತುತ ತುಂಬಾ ಉತ್ತಮವಾದ ಮದ್ಯಮ ವರ್ಗದ ಕ್ಯಾಮೆರವೆಂದರೆ  Canon 550D.   18.1 ಮೆಗಾ ಪಿಕ್ಸಲ್ ಇರುವ ಈ ಕ್ಯಾಮೆರಾ 30D ನಂತರ ಮದ್ಯಮ ಬೆಲೆಯಲ್ಲಿ ಅತ್ಯುತ್ತಮ ಕ್ಯಾಮೆರ. ಎಲ್ಲಾ ವಿಭಾಗದಲ್ಲಿ ಪರಿಣತಿ ಹೊಂದಿ ಅತ್ಯುತ್ತಮ ಸೆನ್ಸಾರ್ ಹೊಂದಿರುವ ಇದು ಫೋಟೊಗ್ರಫಿ ಸಾಧನೆ ಮಾಡುವ ಕ್ಯಾನನ್ ಪ್ರಿಯರು ಇಟ್ಟುಕೊಳ್ಳಬೇಕಾದ ಕ್ಯಾಮೆರ. ಈ ಕ್ಯಾಮೆರಾದ ಮತ್ತೊಂದು ಹೆಗ್ಗಳಿಕೆಯೆಂದರೆ ಮದ್ಯಮವರ್ಗದಲ್ಲಿ full HD ವಿಡಿಯೋಗ್ರಫಿಯನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಮಾಡಬಹುದು. ಇದೇ ಕಂಪನಿಯ 5D Mark II ಕ್ಯಾಮೆರವನ್ನು ಬಿಟ್ಟರೆ ವಿಡಿಯೋಗ್ರಫಿಗೆ ಇದಕ್ಕಿಂತ ಉತ್ತಮ ಕ್ಯಾಮೆರ ಇನ್ನೊಂದಿಲ್ಲ. ಈ ಮಾತನ್ನು ಏಕೆ ಇಷ್ಟು ಖಚಿತವಾಗಿ ಹೇಳುತ್ತೇನೆಂದರೆ ಕಳೆದೆರಡು ತಿಂಗಳಲ್ಲಿ ಈ 550D ಕ್ಯಾಮೆರವನ್ನು ಬಳಸಿ ಒಂದು ಕಿರುಚಿತ್ರವನ್ನು ಮುಗಿಸಿದ್ದೇನೆ. ಎರಡನೆಯದು ಸದ್ಯ ಚಿತ್ರೀಕರಣವಾಗುತ್ತಿದೆ. ಇದರ ಬೆಲೆ ಕಿಟ್ ಲೆನ್ಸ್ ಜೊತೆಗೆ 40 ಸಾವಿರಕ್ಕೆ ದೊರೆಯುತ್ತದೆ. ಲೆನ್ಸ್ ಇಲ್ಲದೇ ಮುವತ್ತಾರು-ಮುವತ್ತೇಳು ಸಾವಿರಕ್ಕೆ ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದ್ರೆ ನಮ್ಮ ಛಾಯಾಗ್ರಾಹಕರಿಗೆ ನಿರಾಶೆಯ ವಿಚಾರವೆಂದರೆ ಈ ಕ್ಯಾಮೆರ ತಯಾರಿ ನಿಂತು ಅದಕ್ಕೆ ಬದಲಾಗಿ 600D ಬಂದಿದೆ.   ಈ 600D ಕ್ಯಾಮೆರ 550D ನಷ್ಟು ಉತ್ತಮವಲ್ಲವೆಂದು ಅದನ್ನು ಕೊಂಡುಕೊಂಡ ಗೆಳೆಯರು ಹೇಳುತ್ತಿದ್ದಾರೆ.  ನಾನು ಅದನ್ನು ಉಪಯೋಗಿಸಿಲ್ಲವಾದ್ದರಿಂದ ಅದರ ಬಗ್ಗೆ ಬರೆಯಲಾರೆ.

     ಇನ್ನೂ ನಿಕಾನ್ ಮದ್ಯಮವರ್ಗದ ಕ್ಯಾಮೆರಗಳ ವಿಚಾರಕ್ಕೆ ಬರೋಣ. ಮೊದಲಿಗೆ ಇಲ್ಲಿ ಸ್ವಲ್ಪ ಹಳೆಯ ಕ್ಯಾಮೆರಗಳನ್ನು ಅವಲೋಕಿಸೋಣ. ಹಳೆಯ ಕ್ಯಾಮೆರಗಳಲ್ಲಿ ಈಗಲೂ ಅತ್ಯುತ್ತಮವೆನಿಸಿರುವ ಕ್ಯಾಮೆರವೆಂದರೆ   Nikon D70S.  ಕೇವಲ 6.1 ಮೆಗಾಪಿಕ್ಸಲ್ ಇರುವ ಈ ಕ್ಯಾಮೆರವಂತೂ ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿದೆ.  ಹಣ ಸಂಪಾದನೆಗೆ ಇದಕ್ಕಿಂತ ಉತ್ತಮ ಕ್ಯಾಮೆರ ಇನ್ನೊಂದಿಲ್ಲ. ಹಾಗೆ ಹವ್ಯಾಸಕ್ಕೂ ಇದು ಉತ್ತಮ.  ಇದರ ಅನಾನುಕೂಲವೇನೆಂದರೆ LCD ಚಿಕ್ಕದಿರುವುದು. ಈಗ ಬರುವ ಕ್ಯಾಮೆರಗಳಲ್ಲಿ 2.5 ರಿಂದ 3 ಇಂಚು ಇರುವ  LCDಗಳಿಗೆ ಹೋಲಿಸಿದರೆ ಇದು ಖಂಡಿತ ಸಪ್ಪೆಯೆನಿಸುತ್ತದೆ. ಅದು ಬಿಟ್ಟಲ್ಲಿ  ನಿಜಕ್ಕೂ ಇದು ಉತ್ತಮ ಕ್ಯಾಮೆರ  ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಇದಕ್ಕೆ ಈಗಲೂ ಹದಿನೈದು ಸಾವಿರ ರೂಪಾಯಿಗಳ ಬೆಲೆಯಿದೆ. 

       ಇದರ ನಂತರ ಬಂದು ಹೋದ ಕ್ಯಾಮೆರಗಳಲ್ಲಿ D80.. ಇದು ಕ್ಲಿಕ್ಕಾಗಲಿಲ್ಲ.  ನಂತರ ಬಂದಿದ್ದು D100, D200.   D100 ವಿಫಲವಾದರೆ D200 ಉತ್ತಮವಾದ ರೀತಿಯಲ್ಲಿ  ಎಲ್ಲ ವರ್ಗದ ಜನರ ಮನಗೆದ್ದಿತ್ತು. ಮದುವೆ ಫೋಟೊಗ್ರಫಿಯಿಂದ  ಪ್ರಕೃತಿ ಛಾಯಾಗ್ರಹಣ, ಪಿಕ್ಟೋರಿಯಲ್,  ಜರ್ನಲಿಸಂ, ಟ್ರಾವಲ್.......... ಹೀಗೆ ಈ ಕ್ಯಾಮೆರ ಕಾಣದಿದ್ದ ಜಾಗವೇ ಇರಲಿಲ್ಲ.  ಐದು ವರ್ಷಗಳ ಹಿಂದೆ ಉತ್ತಮ ಹೆಸರುಗಳಿಸಿಕೊಂಡ ಈ ಕ್ಯಾಮೆರ ತಯಾರಿ ನಿಂತು ನಡುವೆ D90 ಕ್ಯಾಮೆರ ತಯಾರಾಗತೊಡಗಿತು. ಇದು ಕೂಡ ಒಂದು ಅತ್ಯುತ್ತಮ ಕ್ಯಾಮೆರ.  D200 ಕ್ಯಾಮೆರ ಬೆಲೆ ಹೆಚ್ಚಾಗಿದ್ದರಿಂದ ಅದರ ಬದಲಾಗಿ ಸ್ವಲ್ಪ ಕಡಿಮೆ ಬೆಲೆಯಲ್ಲಿ ಅದರಷ್ಟೇ ಗುಣಲಕ್ಷಣಗಳನ್ನು ತನ್ನೊಳಗೆ ಅಳವಡಿಸಿಕೊಂಡು ಬಂದ ಕ್ಯಾಮೆರವಿದು.  ಒಂಬತ್ತು ತಿಂಗಳ ಹಿಂದೆ ನಾನು ಖರೀದಿಸುವ ಸಮಯದಲ್ಲಿ ಇದಕ್ಕೆ ಯಾವ ರೀತಿಯ ಬೇಡಿಕೆಯಿತ್ತೆಂದರೆ ಕರ್ನಾಟಕದ ಎಲ್ಲಾ ಮದುವೆ ಛಾಯಾಗ್ರಾಹಕರ ಕೈಯಲ್ಲಿ ಇದೇ ಕ್ಯಾಮೆರ ಇತ್ತು. ಮತ್ತೆ ಇದನ್ನು ಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿ ಮಾರುಕಟ್ಟೆಯಲ್ಲಿ ಸಪ್ಲೆ ಕಡಿಮೆಯಾಗಿದ್ದರಿಂದ ಇದಕ್ಕೆ ಸಹಜವಾಗಿಯೇ ಬೆಲೆ ಹೆಚ್ಚಾಗಿತ್ತು. ಆ ಸಮಯದಲ್ಲಿ ನಾನು ಕೊಟ್ಟ ಬೆಲೆ ಲೆನ್ಸ್ ಇಲ್ಲದೇ 42000. ಈ ಕ್ಯಾಮೆರದ ಹೆಗ್ಗಳಿಕೆ ಏನೆಂದರೆ ಯಾರು ಹೇಗಿರುತ್ತಾರೆ ಹಾಗೆ ಸ್ವಲ್ಪವೂ ವ್ಯತ್ಸಾಸವಾಗದಂತೆ ಅವರ ಸಹಜವಾದ ಬಣ್ಣವನ್ನೇ ರೆಕಾರ್ಡು ಮಾಡುವುದು.  ಮದುವೆ ಹೆಣ್ಣು-ಗಂಡಾಗಲಿ, ಅಥವ ಮ್ಯಾಕ್ರೋ ಸಬ್ಜೆಕ್ಟಿನ ಪೆಂಟಗಾಮಿ ಬಗ್ ಆಗಲಿ ಯಾರಿಗೂ ಮೋಸ ಮಾಡದೇ ಅವುಗಳ ಒರಿಜಿನಲ್ ಚರ್ಮವನ್ನೇ ಖಚಿತವಾಗಿ ತೋರಿಸುತ್ತದೆ.  ಈ ಕ್ಯಾಮೆರವನ್ನು ಕೊಳ್ಳಬಯಸುವ ನಿಕಾನ್ ಪ್ರಿಯರು ಖಂಡಿತ ಈ ಕ್ಯಾಮೆರವನ್ನು ಕೊಳ್ಳಬಹುದು.   ಗ್ರೇ ಮಾರುಕಟ್ಟೆಯಲ್ಲಿ ಈಗ ಇದರ ಸದ್ಯದ ಬೆಲೆ 34000-35000

      ಇದಾದ ಮೇಲೆ ಬಂದ ಕ್ಯಾಮೆರ D300. ಅದು ಕೇವಲ ಒಂದು ವರ್ಷವಿತ್ತಷ್ಟೆ. ಅದನ್ನೇ ಮೇಲ್ದರ್ಜೆಗೆ ಏರಿಸಿ D300s ಅನ್ನು ನಿಕಾನ್ ಕಂಪನಿ ಬಿಡುಗಡೆ ಮಾಡಿತು. ಈ ಕ್ಯಾಮೆರ ಬಗ್ಗೆ ಮುಂದೆ ಮಾತಾಡೋಣ.  ಈ ಕ್ಯಾಮೆರ ನಂತರ D7000 ಬಿಡುಗಡೆಯಾಯಿತು. ಇದೊಂತರ D300s ಮತ್ತು D90 ಕ್ಯಾಮೆರಗಳ ನಡುವಿನ ಗುಣಲಕ್ಷಣಗಳ ಕ್ಯಾಮೆರ. ಈ ಕ್ಯಾಮೆರದ  ವಿಶೇಷವೆಂದರೆ ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಪಲಿತಾಂಶ ಕೊಡುವ ಕ್ಯಾಮೆರವೆಂದೇ ಖ್ಯಾತಿಯನ್ನು ಹೊಂದಿದೆ. 16.2 ಮೆಗಾಪಿಕ್ಸಲ್ ಹೊಂದಿರುವ ಈ ಕ್ಯಾಮೆರದ ಬೆಲೆ ಲೆನ್ಸ್ ಇಲ್ಲದೇ ಐವತ್ತು ಸಾವಿರ.   Motor drive mode ನಲ್ಲಿ  ಸೆಕೆಂಡಿಗೆ ಆರು ಪ್ರೇಮುಗಳನ್ನು ಕ್ಲಿಕ್ಕಿಸುವ ಮತ್ತು ಚಲನೆಯಲ್ಲಿ ಸತತವಾಗಿ ಫೋಕಸಿಂಗ್ ಅವಕಾಶವಿರುವ ಒಂದು ಉತ್ತಮ ಕ್ಯಾಮೆರ. ಮತ್ತೆ ಇದರಲ್ಲಿ Full HD ವಿಡಿಯೋ ಅವಕಾಶವಿದೆ.  ಉತ್ತಮ ಲೆನ್ಸುಗಳಿದ್ದಲ್ಲಿ ಕಿರುಚಿತ್ರವನ್ನು ತಯಾರಿಸಲು ಇದೂ ಕೂಡ ಉತ್ತಮವಾದ ಕ್ಯಾಮೆರ. ನಿಕಾನ್ ಪ್ರಿಯರು ಧಾರಾಳವಾಗಿ ಕೊಂಡುಕೊಳ್ಳಬಹುದು.

     ಇನ್ನೂ ಸೋನಿ ಕಂಪನಿಯಲ್ಲೂ ಕೆಲವು ಮದ್ಯಮ ವರ್ಗದ ಕ್ಯಾಮೆರಗಳು ಇವೆ. ಅವುಗಳಲ್ಲಿ ಹಳೆಯದಾದ  SOny alpha 200ಒಂದು ಅತ್ಯುತ್ತಮ ಕ್ಯಾಮೆರ.    ಇದರ ಸೆನ್ಸರಿಂಗ್ ಗುಣ ಇದೇ ವರ್ಗದ ಎಲ್ಲಾ ಕ್ಯಾಮೆರಗಳಿಗಿಂತ ಅತ್ಯುತ್ತಮವಾದುದು.  ಪಲಿತಾಂಶವು ಅತ್ತುತ್ತಮ. ಸದ್ಯ ಈ ಕ್ಯಾಮೆರ ಸಿರಸಿಯ ನಾಗೇಂದ್ರ ಮುತ್ಮರ್ಡು ಬಳಿ ಇದೆ. ಈಗ ಹೊಸದಾಗಿ ಮಾರುಕಟ್ಟೆಯಲ್ಲಿರುವ  Sony alpha DSlR A-560, ಮತ್ತು  Sony alpha DSlR A-580 ಕ್ಯಾಮೆರಗಳು ಎಲ್ಲಾ ವಿಧದಲ್ಲೂ ಅತ್ಯುತ್ತಮವೆನಿಸಿದ್ದು  Nikon D7000, Canon550D,  60D ಗೇ ಸ್ಪರ್ಧೆ ಒಡ್ಡುತ್ತಿವೆ. ಮತ್ತೆ ಸೋನಿ ಕ್ಯಾಮೆರಗಳ ಹೆಗ್ಗಳಿಕೆಯೆಂದರೆ Full HD ವಿಡಿಯೋ ಖಂಡಿತ ಇರುವುದು. ಜೊತೆಗೆ ಉಳಿದೆಲ್ಲಾ ಕ್ಯಾಮೆರಗಳಿಗಿಂತ ಅತ್ಯುತ್ತಮವೆನಿಸುವ ಸೆನ್ಸಾರಿಂಗ್, Fast focusing ಇತ್ಯಾದಿಗಳ ಅನುಕೂಲಗಳು.  Sony 560 ಮಾಡಲ್ಲಿನ ಬೆಲೆ ಲೆನ್ಸ್ ಸೇರಿ 33000,  580  ಮಾಡೆಲ್ಲಿನ ಬೆಲೆ ಲೆನ್ಸ್ ಸೇರಿ 38000 ಇದೆ.

       ಈ ಮದ್ಯಮ ವರ್ಗದ ಕ್ಯಾಮೆರಗಳೆಲ್ಲಾ ಹೇಗೆಂದರೆ ಕಚೇರಿಯಲ್ಲಿ ಕಸವನ್ನು ಗುಡಿಸಿ, ಸ್ವಚ್ಚಗೊಳಿಸಿ, ಟಿ-ಕಾಫಿ ಬಿಸ್ಕೆಟ್..ಕಾರ್ಯಕ್ರಮದ ವ್ಯವಸ್ಥೆ, ಲೆಕ್ಕಾಚಾರದ ಕೆಲಸ, ಕಂಪ್ಯೂಟರ್ ನಿರ್ವಹಣೆ...ಅಲ್ಲದೇ ನಿಮ್ಮ ಪ್ರಾಜೆಕ್ಟ್ ಇತ್ಯಾದಿಗಳ ಜವಾಬ್ದಾರಿಯನ್ನು ಹೊರುವ ಟೀಮ್ ಲೀಡರುಗಳ ಹಾಗೆ ಕೆಲಸ ಮಾಡುತ್ತವೆ. ನಿಮಗೆ ಇವುಗಳನ್ನು ಉಪಯೋಗಿಸುವ ಕಲೆ ಗೊತ್ತಾಗಿಬಿಟ್ಟರೆ ಸಾಕು ನೀವು ಈ ಕ್ಯಾಮೆರಗಳಲ್ಲೇ ಅದ್ಬುತವನ್ನು ಸಾಧಿಸಬಹುದು

    ಈ ವಿವರಣೆಗಳನ್ನು ಓದುತ್ತಿರುವಾಗಲೇ ನಿಮಗೆ ಕೆಲವೊಂದು ಸಂಶಯಗಳು ಬರಬಹುದು? ಅದೇನೆಂದರೆ ಕೇವಲ Nikon, Canon  ಕಂಪನಿಯ ಕ್ಯಾಮೆರಗಳ ಬಗ್ಗೆ ಮಾತ್ರ ನಾನು ವಿವರಿಸುತ್ತಿದ್ದೇನೆ. ಒಂದೆರಡು Sony ಕಂಪನಿಯ ಕ್ಯಾಮೆರಗಳನ್ನು ಮಾತ್ರ ಉಲ್ಲೇಕಿಸಿದ್ದೇನೆ ಉಳಿದ ಕಂಪನಿ ಕ್ಯಾಮೆರಗಳ ಬಗ್ಗೇ ಏಕೆ ತಿಳಿಸಲಿಲ್ಲವೆಂದು.

     ನಿಮ್ಮ ಪ್ರಶ್ನೆಗೆ ಉತ್ತರವಿದೆ. ಮೊದಲಿಗೆ ಎಲ್ಲಾ ಕಂಪನಿಗಳು  ಕಂಪ್ಯಾಕ್ಟ್ ಕ್ಯಾಮೆರವನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿವೆ. ಈ ಕ್ಯಾಮೆರಗಳು ಕೇವಲ ಎರಡು ಸಾವಿರದಿಂದ ಹತ್ತು ಸಾವಿರದವರೆಗೆ ಮಾತ್ರ ಇರುವುದರಿಂದ ಜನಸಾಮಾನ್ಯರು ಇಂಥ ಕ್ಯಾಮೆರಗಳನ್ನು ಕೊಳ್ಳುತ್ತಾರೆ.   ಅದಕ್ಕಾಗಿ ಈ ಕಡಿಮೆ ಬೆಲೆಯ ಕ್ಯಾಮೆರಕ್ಕಾಗಿ ನಿತ್ಯವೂ ಪತ್ರಿಕೆಯಲ್ಲಿ ವಾಹಿನಿಗಳಲ್ಲಿ ಮತ್ತು ರಸ್ತೆ ಬದಿಯ ಹೋರ್ಡಿಂಗ್ಸುಗಳಲ್ಲಿ ದೊಡ್ಡ ಜಾಹಿರಾತುಗಳಿರುತ್ತವೆ.   ಒಂದು ಲಕ್ಷ ಜನರಲ್ಲಿ  ಹತ್ತು ಸಾವಿರ ಜನರು ಇಂಥ ಕ್ಯಾಮೆರವನ್ನು ಕೊಳ್ಳುವುದರಿಂದ ಅಂತ ಮಾರುಕಟ್ಟೆಯಲ್ಲಿ ತಮ್ಮ ಹಿಡಿತ ಸಾಧಿಸಲು ಇಂಥ ಪೈಪೋಟಿ ಇರುತ್ತವೆ. ಮತ್ತೆ  ಈ ಕ್ಯಾಮೆರಗಳ ಗುಣಮಟ್ಟವೂ ಸುಮಾರಾಗಿರುತ್ತದೆ.  ಅದು ಹೇಗೆ ಗೊತ್ತಾಗುತ್ತದೆಯೆಂದರೆ ಇಂಥ ಕ್ಯಾಮೆರಗಳಲ್ಲಿ ಉತ್ತಮ ಬ್ಯಾಟರಿ ಇರುವುದಿಲ್ಲ.   ಮತ್ತು ಬಫರಿಂಗ್ ಸ್ಪೀಡ್ ಇರುವುದಿಲ್ಲ. ಕ್ಯಾಮೆರ ಒಳಗಿನ ಮೋಟರಿಂಗ್ ಸಿಸ್ಟಮ್ ಸುಮಾರಾಗಿರುತ್ತದೆ. ನಾವು ಮದುವೆ ಫೋಟೊ ತೆಗೆಯುವಾಗ ನಮ್ಮ ಪಕ್ಕ ನಿಂತು ಇಂಥ ಕ್ಯಾಮೆರಗಳು ಫೋಟೊ ಕ್ಲಿಕ್ಕಿಸುವಾಗ ಬ್ಯಾಟರಿ ಇಲ್ಲ ಅಂತಲೋ, ಕ್ಲಿಕ್ ಆಗುತ್ತಿಲ್ಲ ಅಂತಲೋ..ಇತ್ಯಾದಿ ಕಾರಣಗಳನ್ನು ಆಗಾಗ ಹೇಳುತ್ತಿರುತ್ತಾರೆ ಮತ್ತು ಇದೇನಾಗಿದೆ ನೋಡಿ ಅಂತ ನಮಗೆ ತೋರಿಸುತ್ತಿರುತ್ತಾರೆ. ಆದರೂ ಇವುಗಳಲ್ಲಿ ಕೆಲವು ಉತ್ತಮ ಕ್ಯಾಮೆರಗಳು ಧೀರ್ಘಕಾಲ ಬಾಳಿಕೆ ಬರುತ್ತವೆ.

       ಇದರ ನಂತರ ಬರುವ ಪ್ರಿಸೂಮರ್ ಕ್ಯಾಮೆರಗಳ ಬೆಲೆ ಕಂಪ್ಯಾಕ್ಟ್ ಕ್ಯಾಮೆರಗಳಿಗಿಂತ  ಹೆಚ್ಚಾಗಿರುತ್ತದಲ್ಲ..ಆದ್ದರಿಂದ ಇದು ಎಲ್ಲಾ ಜನಸಾಮಾನ್ಯರಿಗೆ ತಲುಪುವುದಿಲ್ಲ. ಕೇವಲ ಛಾಯಾಸಕ್ತರಿಗೆ ತಲುಪುವಂತದ್ದು. ಮತ್ತೆ ಲಕ್ಷ ಜನರಲ್ಲಿ ಇದನ್ನು ಕೊಳ್ಳುವವರ ಸಂಖ್ಯೆ ಸಾವಿರಕ್ಕೆ ಇಳಿಯುತ್ತದೆ.   ಆದರೂ ಅಷ್ಟು ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು ಎಲ್ಲಾ ಕಂಪನಿಗಳು ಈ ಪ್ರಿಸೂಮರ್ ಕ್ಯಾಮೆರಗಳನ್ನು ತಯಾರಿಸುತ್ತವೆ.

    ಇದರ ನಂತರ ಕ್ಯಾಮೆರಗಳಾದ ಮದ್ಯಮ ವರ್ಗದ ಲೆನ್ಸ್ ಬದಲಾಯಿಸುವ ಕ್ಯಾಮೆರಗಳನ್ನು ಕೊಳ್ಳುವವರ ಸಂಖ್ಯೆ ಲಕ್ಷ ಜನರಲ್ಲಿ  ನೂರಕ್ಕೆ ಇಳಿಯುತ್ತದೆ.  ಮತ್ತೆ ಈ ಕ್ಯಾಮೆರಗಳ ಬೆಲೆ ಹೆಚ್ಚಾಗಿರುವುದರಿಂದ ಮತ್ತು ಫೋಟೊಗ್ರಫಿ ಕಲಿತು ಏನಾದರೂ ಸಾಧಿಸಬೇಕು ಎನ್ನುವವರು ಇಂಥ ಕ್ಯಾಮೆರಗಳ ಹಿಂದೆ ಬೀಳುತ್ತಾರೆ.   ಮತ್ತೆ ಈ ಕ್ಯಾಮೆರ ಹಿಂದೆ ಬೀಳುವವರು ಅದಕ್ಕಿಂತ ಮೊದಲಿನ ಎರಡು ಹಂತದ ಕ್ಯಾಮೆರಗಳನ್ನು ಉಪಯೋಗಿಸಿ ಕಲಿತು ಅವುಗಳ ಬಂಡವಾಳಗಳನ್ನು ತಿಳಿದುಕೊಂಡು ಈ ಹಂತಕ್ಕೆ ಬಂದಿರುತ್ತಾರೆ.

     ಈ ಹಂತದಲ್ಲಿ ಕಂಪನಿಗಳಲ್ಲಿ ಸ್ಪರ್ಧೆ ಕಡಿಮೆಯಾಗುವುದು. ಎಲ್ಲಾ ಕಂಪನಿಗಳ ಕ್ಯಾಮೆರಗಳಿದ್ದರೂ Nikon ಮತ್ತು Canon ಕಂಪನಿಗಳು ಈ ವಿಚಾರದಲ್ಲಿ ಹಳೆಯ ಮತ್ತು ಪಳಗಿದ ಆಟಗಾರರು. ಅವರು ಪ್ರತಿ ಮೂರು ತಿಂಗಳಿಗೊಮ್ಮೆ ಹೊಸದಾದ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸತನ್ನು ಕೊಡುತ್ತಲೇ ಇರುತ್ತಾರೆ. ಅದೇ ರೀತಿ Sony ಕಂಪನಿ DSLR ಮಾರುಕಟ್ಟೆ ಕೇವಲ ಎರಡುವರೆ ವರ್ಷದ ಆಟಗಾರನಷ್ಟೆ.   ಅವರು ಮೊದಲಿನರೆಡು ಹಂತದ ಕ್ಯಾಮೆರಗಳನ್ನು ತಯಾರಿಸುವಲ್ಲಿ ಹಳೆಯ ಆಟಗಾರನಾದರೂ ಈ ಮದ್ಯಮ ವರ್ಗದ ಕ್ಯಾಮೆರಗಳಾದ DSLR  ತಯಾರಿಕೆಯಲ್ಲಿ ಸದ್ಯ ಎರಡುವರೆ ವರ್ಷದಷ್ಟು ಮಾತ್ರ ಹಳಬ.  ಆದಕ್ಕಾಗಿ ಸೋನಿ ಕಂಪನಿಯ ಕ್ಯಾಮೆರವನ್ನು ಕೊಳ್ಳಬೇಕಾದಲ್ಲಿ ಪಕ್ಕಾ ವೃತ್ತಿಪರರು ಅಲೋಚಿಸುತ್ತಾರೆ. ಆ ಕಂಪನಿಯ ಕೆಲವೊಂದು ಕ್ಯಾಮೆರಗಳು ನಿಕಾನ್ ಮತ್ತು ಕ್ಯಾನನ್ ಕಂಪನಿಯ ಕ್ಯಾಮೆರಗಳಿಗಿಂತ ಎಲ್ಲಾ ರೀತಿಯಲ್ಲೂ ಉತ್ತಮವಾಗಿದ್ದರೂ ವೃತ್ತಿಪರರು ಮತ್ತು ಫೋಟೊಗ್ರಫಿ ಸಾಧನೆ ಮಾಡಬೇಕೆನ್ನುವವರು ಖರೀಧಿಸಲು ಸ್ವಲ್ಪ ಹಿಂದೇಟು ಹಾಕುತ್ತಾರೆ.  ಅದಕ್ಕೆ ಮುಖ್ಯ ಕಾರಣ ಈ ಕ್ಯಾಮೆರಗಳಿಗೆ ತಕ್ಕಂತೆ ಬೇರೆ ಬೇರೆ ಕಂಪನಿಗಳಿಂದ ತಯಾರಾದ ಲೆನ್ಸುಗಳು ಇದಕ್ಕೆ ಸರಿಯಾಗಿ ಮೌಂಟ್ ಆಗದಿರುವುದು. ಚೆನ್ನಾಗಿ ಫೋಟೊಗ್ರಫಿ ಕಲಿತವನು ಮುಂದಿನ ಹಂತಕ್ಕೆ ಹೋಗುವಾಗ ಆತನ ಬಳಿ ಅತ್ಯುತ್ತಮ ಸೋನಿ ಕ್ಯಾಮೆರವಿದ್ದರೂ ಅದಕ್ಕೆ ಹೊಂದಿಕೆಯಾಗುವ ಲೆನ್ಸು ಇತರ ಕಂಪನಿಗಳಲ್ಲಿ ದೊರೆಯದೆ ನಿರಾಶೆಗೊಳ್ಳುತ್ತಾನೆ. ಆತ ವಿಧಿಯಿಲ್ಲದೇ ಸೋನಿ ಕಂಪನಿಯ ಲೆನ್ಸುಗಳನ್ನು ಕೊಳ್ಳಬೇಕಾಗುತ್ತದೆ. ಹಾಗೆ ನೋಡಿದರೆ ಸೋನಿ ಕಂಪನಿಯ ಲೆನ್ಸುಗಳು ಉಳಿದೆಲ್ಲಾ ಕಂಪನಿಯ ಲೆನ್ಸುಗಳಿಗಿಂತ  ಹೆಚ್ಚು ದುಬಾರಿ. ಆ ದುಬಾರಿಯನ್ನು ನಿಬಾಯಿಸಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕಾಗಿ ಆತ  ಸೋನಿ ಕಂಪನಿಯ ಕ್ಯಾಮೆರಗಳನ್ನು ಇಷ್ಟಪಡುವುದಿಲ್ಲ. ಹಣವಿರುವವರು ಖಂಡಿತ ಸೋನಿ ಕಂಪನಿಯ ಲೆನ್ಸು ಮತ್ತು ಕ್ಯಾಮೆರಗಳನ್ನು ಖರೀದಿಸಿ ಸಾಧನೆ ಮಾಡಬಹುದು. ಇದೇ ತೊಂದರೆಯನ್ನು ಒಲಂಪಸ್, ಕೊಡಕ್, ಫ್ಯೂಜಿ, ಕ್ಯಾಸಿಯೋ, ಸಿಗ್ಮ, ಇತ್ಯಾದಿ  ಕಂಪನಿಗಳ ಕ್ಯಾಮೆರಗಳನ್ನು ಖರೀದಿಸಿದಾಗ ಅನುಭವಿಸುವ ಪ್ರಮೇಯ ಬಂದರೆ ಯಾರು ಮುಂದೆ ಬರುತ್ತಾರೆ?

     ಆದರೆ ಇಂಥ ತೊಂದರೆ Nikon ಮತ್ತು Canon ಕಂಪನಿಗಳಿಗಿಲ್ಲ.  ಅವರು ತಮ್ಮ ಕ್ಯಾಮೆರಗಳಿಗೆ ತಕ್ಕಂತೆ ಎಲ್ಲಾ ಬೆಲೆಯಲ್ಲಿ ಲೆನ್ಸುಗಳನ್ನು ಮಾರುಕಟ್ಟೆಗೆ ಬಿಡುತ್ತಾರೆ. ಛಾಯಾಸಕ್ತರ ಜೇಬಿಗನುಗುಣವಾಗಿ ಮತ್ತು ಅಭಿರುಚಿಗನುಗುಣವಾಗಿ ವೈವಿಧ್ಯಮಯವಾದ ಲೆನ್ಸುಗಳು ದೊರೆಯುವುದರಿಂದ ಮತ್ತು ಮಾರುಕಟ್ಟೆ ಮರುಮಾರಾಟದ ಅವಕಾಶವಿರುವುದರಿಂದ ಎಲ್ಲರೂ ಕ್ಯಾನನ್ ಮತ್ತು ನಿಕಾನ್ ಕಂಪನಿಯ ಕ್ಯಾಮೆರ ಮತ್ತು ಲೆನ್ಸುಗಳನ್ನು ಕೊಳ್ಳುತ್ತಾರೆ. ಮತ್ತೆ Canon ಹಾಗೂ Nikon ಕಂಪನಿ ಮಾತ್ರವಲ್ಲದೇ  Sigma, Tamron,  Tokina ಇತ್ಯಾದಿ ಕಂಪನಿಗಳು ಕೂಡ Canon ಹಾಗೂ Nikon ಕ್ಯಾಮೆರಗಳಿಗಾಗಿ ಲೆನ್ಸುಗಳನ್ನು ಕಡಿಮೆ ಬೆಲೆಯಲ್ಲಿ ತಯಾರಿಸಿಕೊಡುತ್ತವೆ.  ಆದ್ದರಿಂದ Low budget ಲೆನ್ಸುಗಳನ್ನು ಕೊಳ್ಳುವವರಿಗೆ ಇದು ಉತ್ತಮವೆನಿಸುತ್ತದೆ.

   ಇದರ ನಂತರದ ಕ್ಯಾಮೆರಗಳೆಂದರೆ ಮೆಲ್ಮದ್ಯಮ ವರ್ಗದ ಕ್ಯಾಮೆರಗಳು. ದುಬಾರಿಯಾದ ಮತ್ತು ಪಕ್ಕಾ ವೃತ್ತಿಪರರಿಗೆ ಮತ್ತು  ಅರ್ಥಿಕವಾಗಿ ಅನುಕೂಲವುಳ್ಳವರಿಗೆ ನಿಲುಕುವಂತವು ಇವು.  ಇಂಥ ಕ್ಯಾಮೆರಗಳನ್ನು ಖರೀದಿಸುವುದು ಮುಖ್ಯವಲ್ಲ.  ಮೊದಲು ಅವನ್ನು ಉಪಯೋಗಿಸುವ ಕಲೆ ತಿಳಿದಿರಬೇಕು.  ಅದಕ್ಕೆ ಮೊದಲು ಈ ಮೊದಲಿನ ಹಂತಗಳಲ್ಲಿ ಪಳಗಿರಬೇಕು. ಈ ಕ್ಯಾಮೆರಗಳಲ್ಲಿ ನೂರಾರು ಗುಣಗಳಿರುತ್ತವೆ. ಈ ಗುಣಗಳಲ್ಲು ಅನೇಕ ವಿಭಾಗಗಳಿರುತ್ತವೆ. ಇದನ್ನೆಲ್ಲಾ ಅವುಗಳ ಕ್ಯಾಟಲಾಗ್ ಓದಿ ಕಲಿತು ಪಕ್ಕಾ ಆಗಲು ಕಡಿಮೆಯೆಂದರೂ ಮೂರು ತಿಂಗಳು ಬೇಕಾಗುತ್ತದೆ.  ಅಮೇಲೆ ನಿಮ್ಮ ಹಿಡಿತಕ್ಕೆ ಬಂದರೆ ಅದರ ಪಲಿತಾಂಶವೇ ಬೇರೆ.

   ಈ ವಿಭಾಗದಲ್ಲಿ ನಿಕಾನ್ ಕಂಪನಿಯ  D300s, Canon 7D Canon 5D Mark II Sony Alpha DSLR-A850,  ಇತ್ಯಾದಿ ಕ್ಯಾಮೆರಗಳು ಬರುತ್ತವೆ.

     Nikon D700,  Canon 5D Mark II.... Full frame ಕ್ಯಾಮೆರಗಳು. ಮತ್ತು Best ಕ್ಯಾಮೆರಗಳು.  Nikon D700, Canon 7D ಇವೆರಡು ಲೆನ್ಸ್ ಇಲ್ಲದ ಕ್ಯಾಮೆರ ಬೆಲೆ  ಒಂದು ಲಕ್ಷ ಹತ್ತು ಸಾವಿರವಿದೆ. ಗ್ರೇ ಮಾರುಕಟ್ಟೆ ಐದರಿಂದ ಏಳು ಸಾವಿರ ಕಡಿಮೆಯಿದೆ.

      Nikon D300s ಕ್ಯಾಮೆರ ಮೇಲಿನ ವರ್ಗದ ಎಲ್ಲಾ ಗುಣಗಳನ್ನು ಹೊಂದಿದ್ದರೂ Full frame ಇಲ್ಲದ ಕ್ಯಾಮೆರವಾದ್ದರಿಂದ ಇದು ಸದ್ಯ  ಎಲ್ಲಾ ವೃತ್ತಿಪರರು ಮತ್ತು ಪ್ರಖ್ಯಾತ ಹವ್ಯಾಸಿ ಛಾಯಾಗ್ರಾಹಕ ಆಸ್ತಿ.  ಹೆಚ್ಚುವರಿ ಬ್ಯಾಟರಿಯನ್ನು ಹಾಕಿಕೊಂಡರೆ ಸೆಕೆಂಡಿಗೆ ಒಂಬತ್ತು ಪ್ರೇಮು ಕ್ಲಿಕ್ಕಿಸುವ ಇದು ಕ್ರೀಡೇ ಸೇರಿದಂತೆ ಎಲ್ಲಾ ವಿಭಾಗದ ರಾಜ.  ಕಡಿಮೆ ಬೆಳಕಿನ ಫೋಟೊಗ್ರಫಿಯ ರಾಜನೆಂದೇ ಹೆಸರು ಪಡೆದ ಇದು  ಫೋಟೊದಲ್ಲಿ ವ್ಯಕ್ತಿ ಅಥವ ಪ್ರಾಣಿ, ಕೀಟ, ಮರಗಿಡ ಪ್ರಕೃತಿ ಏನೇ ಇರಲಿ ಅವುಗಳ ಮೂಲ ಬಣ್ಣಗಳನ್ನು ಹೊರತರುವಂತದ್ದು. ಈ ಕ್ಯಾಮೆರದಲ್ಲಿ ಕಾಂಪ್ಯಾಕ್ಟ್ ಕಾರ್ಡು ಮತ್ತು ಎಸ್ ‍ಡಿ ಕಾರ್ಡು ಎರಡನ್ನು ತನ್ನೊಳಗೆ ಒಟ್ಟಿಗೆ ಇಟ್ಟುಕೊಳ್ಳುತ್ತದೆ. ಒಂದು ಕಾರ್ಡುನಲ್ಲಿ ಕ್ಲಿಕ್ ಮಾಡಿದ ಫೋಟೊಗಳು ತುಂಬಿದ ನಂತರ ಸಹಜವಾಗಿ ಮತ್ತೊಂದು ಕಾರ್ಡು ತುಂಬಿಕೊಳ್ಳಲಾರಂಭಿಸುತ್ತದೆ. ಸದ್ಯ ಈ ಅವಕಾಶ ಬೇರೆ ಮದ್ಯಮವರ್ಗದ ಕ್ಯಾಮೆರಗಳಲ್ಲಿ ಇಲ್ಲ..   ಸಹಜವಾಗಿ ಎಸ್‍ಡಿ ಕಾರ್ಡಿನ ವೇಗ ಕಂಪ್ಯಾಕ್ಟ್  ಪ್ಲಾಶ್ ಕಾರ್ಡಿಗಿಂತ ಕಡಿಮೆ.   ಮೇಲು ವರ್ಗದ ಕ್ಯಾಮೆರ ಮತ್ತು ವಿವಿಐಪಿ ಕ್ಯಾಮೆರಗಳಲ್ಲಿ ಕಾಂಪ್ಯಾಕ್ಟ್ ಪ್ಲಾಶ್ ಮೆಮೊರಿ ಕಾರ್ಡು ಬಳಸುವುದರಿಂದ ಸಹಜವಾಗಿ ಇಲ್ಲಿ ಫೋಟೊಗ್ರಫಿ ವೇಗವನ್ನು ಪಡೆಯುತ್ತದೆ.  ಹೇಗೆಂದರೆ
Action photography ಯಲ್ಲಿ ಎಸ್‍ಡಿ ಕಾರ್ಡಿನಲ್ಲಿ ಕ್ಲಿಕ್ಕಿಸಿದ್ದಕ್ಕಿಂತ ಕಾಂಪ್ಯಾಕ್ಟ್ ಕಾರ್ಡಿನಲ್ಲಿ ಕ್ಲಿಕ್ಕಿಸಿದ ಫೋಟೊಗಳು ವೇಗವಾಗಿ ಧಾಖಲಾಗುತ್ತವೆ. ಇಂಥ ಅನುಕೂಲ ಈ ಕ್ಯಾಮೆರ ಮತ್ತು ಇದಕ್ಕಿಂತ ಮೇಲಿನ ವರ್ಗದ ಕ್ಯಾಮೆರಗಳಲ್ಲಿ  ಹೆಚ್ಚು.  ಎರಡು ತಿಂಗಳ ಹಿಂದೆ ನಾನು ಖರೀದಿಸಿದ ಈ ಕ್ಯಾಮೆರ ಬೆಲೆ ಗ್ರೇ ಮಾರುಕಟ್ಟೆಯಲ್ಲಿ ಎಪ್ಪತ್ತು ಸಾವಿರ ಒಂದು ವರ್ಷದ ವಾರೆಂಟಿ ಮತ್ತು ಬಿಲ್ ಜೊತೆಗೆ ಬೆಲೆ ಎಂಬತ್ತರಡು ಸಾವಿರ ಕೇವಲ ಕ್ಯಾಮೆರ ಬಾಡಿ ಮಾತ್ರ. 


    ಮತ್ತೆ Canon ಕಂಪನಿಯ 7D ಕ್ಯಾಮೆರ ಕೂಡ ಇದರ ಸರಿಸಮನಾದ ಲಕ್ಷಣಗಳನ್ನು ಹೊಂದಿದ್ದರೂ ನಿಕಾನ್ ಕಂಪನಿಯ D300s ಕ್ಯಾಮೆರದಷ್ಟು ಜನಪ್ರಿಯವಲ್ಲ. ಆದರೂ ಅದರಷ್ಟೇ ಉತ್ತಮವಾದ ಕ್ಯಾಮೆರ..

     ಇನ್ನೂ 21.6 ಮೆಗಾಪಿಕ್ಸಲ್‍ನ Canon 5D Mark II ಲೆನ್ಸ್ ಇಲ್ಲ ಕ್ಯಾಮೆರ ಬೆಲೆ ಕೇವಲ ಒಂದುಕಾಲು ಲಕ್ಷ ಮಾತ್ರ. Full frame ಕ್ಯಾಮೆರವಾಗಿರುವ ಈ ಕ್ಯಾಮೆರ ಸದ್ಯದ ಮಟ್ಟಿಗೆ ಎಲ್ಲಾ ಪ್ರಕಾರಗಳಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.  ಫೋಟೊಗ್ರಫಿಯಲ್ಲಿ ಅದ್ವಿತೀಯ. ಅಷ್ಟೇ ಅಲ್ಲದೇ ಸಿನಿಮಾ ಲೋಕಕ್ಕೂ ಕಾಲಿಟ್ಟಿದೆ. ಈ ಕ್ಯಾಮೆರವನ್ನು ಬಳಸಿ ಕೆಂಪೇಗೌಡ ಸಿನಿಮಾದ ಕ್ಲೈಮಾಕ್ಸ್ ಚಿತ್ರೀಕರಣವಾಗಿದೆ. ರಾಮಗೋಪಾಲ್ ವರ್ಮ ಕೇವಲ ಆರು ಲಕ್ಷದ ಬಜೆಟ್ಟಿನಲ್ಲಿ ಈ ಕ್ಯಾಮೆರವನ್ನು ಬಳಸಿ ಒಂದು ಸಿನಿಮಾ ಮಾಡಿದ್ದಾರೆ. ವಿದೇಶಗಳಲ್ಲಿ ಫೋಟೊಗ್ರಫಿಗೆ ಮತ್ತು ಕಿರುಚಿತ್ರಗಳಿಗೆ ಈ ಕ್ಯಾಮೆರದ ಬಳಕೆ ಹೆಚ್ಚು ಈ  ಕ್ಯಾಮೆರ ಹೊಂದಿರುವವರು ನಿಜಕ್ಕೂ ಆಹಂಕಾರ ಪಡಬೇಕು ಎನ್ನುವ ಉತ್ಕುರ್ಷ್ಟತೆಯಿಂದ ಕೂಡಿದ ಪರಿಪೂರ್ಣ ಕ್ಯಾಮೆರ. ಇದಕ್ಕೆ ಸ್ಪರ್ಧಿಯೆನ್ನುವಂತೆ Sony Company 24.6 ಮೆಗಾಪಿಕ್ಸಲ್‍ನ  Sony Alpha DSLR-A850 ಕ್ಯಾಮೆರವನ್ನು ಮಾರುಕಟ್ಟೆಗೆ ತಂದಿದೆ. ಇದರ ಬೆಲೆ ಸದ್ಯಕ್ಕೆ ಒಂದು ಲಕ್ಷವಿದೆ.

   ಇಷ್ಟು ಸಾಕೆಂದುಕೊಳ್ಳುತ್ತೇನೆ. ಆದರೂ ಕೆಲವು ವಿ.ವಿ.ಐ.ಪಿ ಕ್ಯಾಮೆರಗಳನ್ನು ಹೆಸರಿಸಲು ಇಷ್ಟಪಡುತ್ತೇನೆ. ಅವುಗಳಲ್ಲಿ  Canon EOS 1D Mark 3 ಬೆಲೆ ನಾಲ್ಕು ಲಕ್ಷ ಹತ್ತುಸಾವಿರ,  Canon EOS 1D Mark 4 ಎರಡು ಲಕ್ಷ ಅರವತ್ತು ಸಾವಿರ, Nikon D3S ಬೆಲೆ ಎರಡು ಲಕ್ಷ ಎಂಬತ್ತು ಸಾವಿರ,  Nikon D3X ಬೆಲೆ ಐದುಕಾಲು ಲಕ್ಷ. ಇವೆಲ್ಲವೂ ಲೆನ್ಸ್ ಇಲ್ಲದ ಕೇವಲ ಕ್ಯಾಮೆರಗಳ ಬೆಲೆಗಳು.

     ಅರೆರೆ...ಇದೇನಿದು ಕ್ಯಾಮೆರಗಳ ಬಗ್ಗೆ ಬರೆಯುತ್ತಾ ಲೆನ್ಸುಗಳನ್ನೇ ಮರೆತುಬಿಟ್ಟೆನಲ್ಲಾ...ಕ್ಯಾಮೆರಗಳದ್ದೇ ಇಷ್ಟು ಉದ್ದವಿರುವಾಗ ಲೆನ್ಸುಗಳ ಬಗ್ಗೆ ಅದೆಷ್ಟು ದೊಡ್ಡ ಲೇಖನವಾಗಬಹುದು ಅಂತ ನಿಮಗೆ ಬೇಸರವಾದರೆ ಖಂಡಿತ ಬರೆಯುವುದಿಲ್ಲ.  ಮತ್ತೆ ಬರೆಯಬೇಕೆಂದುಕೊಂಡರೆ  ಈ ಮಟ್ಟದ ವಿವರವನ್ನು ಕೊಟ್ಟರೆ ಮಾತ್ರ  ಸಂಭಂದಪಟ್ಟವರಿಗೆ ಉಪಯೋಗವಾಗುತ್ತದೆ. ನೀವು ಇಷ್ಟಪಟ್ಟರೆ ಮಾತ್ರ ಬರೆಯುತ್ತೇನೆ.

         ಮತ್ತೆ ಇಷ್ಟು ಮೈಲುದ್ದ ಲೇಖನವನ್ನು ಯಾರು ತಾಳ್ಮೆಯಿಂದ ಓದಿ ಮುಗಿಸಿರುವರೋ ಅವರಿಗೆ ನನ್ನ  ಅಭಿನಂದನೆಗಳು.  ಹಾಗೆ ನೋಡಿದರೆ ನಾನು ಬರೆದಿದ್ದು ಸಾಗರದ ಒಂದು ಹನಿಯಷ್ಟಿರಬಹುದು. ಪ್ರತಿಯೊಂದು ಕ್ಯಾಮೆರಗಳ  ಬಗ್ಗೆ  ನನ್ನ ತಿಳುವಳಿಕೆಯಲ್ಲೇ ಬರೆದರೆ ಅದೇ ಇನ್ನೂರು ಪುಟಗಳನ್ನು ದಾಟಬಹುದು. ಮತ್ತೆ ಈ ಲೇಖನ ಫೋಟೊಗ್ರಫಿಯನ್ನು ಅನುಭವಿಸುವವರಿಗೆ ಮಾತ್ರ.  ಆ ಕ್ಯಾಮೆರ ನೀವು ಬರೆದಂತೆ ಇಲ್ಲ ಅಂತ ಜಗಳಕ್ಕೆ ಅಥವ ವಿತಂಡ ವಾದಕ್ಕೆ ಖಂಡಿತ ಬರಬೇಡಿ. ಮತ್ತೆ ಇಲ್ಲಿ ಅನಾವರಣಗೊಂಡಿರುವ ವಿಷಯಗಳೆಲ್ಲಾ ನೂರಕ್ಕೆ ನೂರರಷ್ಟು ಪಕ್ಕಾ ಆಗಿಲ್ಲದಿರಬಹುದು.  ಮತ್ತೆ  ಈ ಕ್ಯಾಮೆರಗಳ ಬಗ್ಗೆ ಇಷ್ಟೆಲ್ಲ ಬರೆಯಲು ಕಾರಣ   ಮತ್ತೆ  ಇಲ್ಲಿ ನನ್ನ ಫೋಟೊಗ್ರಫಿ ಅನುಭವ ಮತ್ತು ಗೆಳೆಯರ ಅನುಭವ ಹಾಗು ಇರುವ ಸ್ವಲ್ಪ ತಿಳುವಳಿಕೆಯಲ್ಲೇ ಇದನ್ನು ಬರೆದಿದ್ದೇನೆ ವಿನಃ ಇದರಲ್ಲಿ ನನಗೆಲ್ಲಾ ಗೊತ್ತಿದೆಯೆಂದು ತೋರಿಸಿಕೊಳ್ಳುವುದಕ್ಕೆ ಖಂಡಿತ ಇಲ್ಲ.  ಮತ್ತೆ ಇದರಿಂದ ಛಾಯಾಸಕ್ತರಿಗೆ ಉಪಯೋಗವಾದರೆ ನನ್ನ ಪ್ರಯತ್ನ ಸಾರ್ಥಕ. 

02-08-2011

samvaada.com fan page on facebook


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು