ನಾವು ಇನ್ನೊಬ್ಬರೊಂದಿಗೆ ವ್ಯವಹರಿಸುವಾಗ ಅವರನ್ನು ನೋಡುತ್ತಿರುತ್ತೇವೆ. ಅವರ ಮುಖದ ಹಾವ-ಭಾವ, ಅಂಗಾಂಗಗಳ ಚಲನೆ, ದೇಹದ ನಿಲುವು, ಆಕಾರ, ಬಣ್ಣ, ಲಿಂಗ, ವಯಸ್ಸು ಅವರಿಂದ ಸೂಸುವ ಬೆವರಿನ ವಾಸನೆ ಅಥವಾ ಸುಗಂಧ-ದುರ್ಗಂಧ ಎಲ್ಲವನ್ನೂ ಗಮನಿಸುತ್ತೇವೆ. ಅವರು ತೊಟ್ಟುಕೊಂಡ ವೇಷ-ಭೂಷಣಗಳ ಸೌಂದರ್ಯ, ವಿನ್ಯಾಸ, ಮೌಲ್ಯಗಳನ್ನೂ ಗಮನಿಸುತ್ತೇವೆ. ಸ್ಪರ್ಶಿಸಿ ಅಂದರೆ ಕೈಕುಲುಕಿ, ಆಲಂಗಿಸಿ ಅಥವಾ ಗುದ್ದಿ ನಮ್ಮ ಭಾವನೆಗಳನ್ನು ಮುಟ್ಟಿಸುತ್ತೇವೆ. ಅವರು ನಿಂತ ಪ್ರದೇಶ, ಸುತ್ತಲಿನ ವಾತಾವರಣ, ಅದು ತಿಳಿಯಾಗಿದೆಯೋ ಮೋಡಕವಿದಿದೆಯೋ ಇಲ್ಲ ಮಂಜು ಮುಸುಕಿದೆಯೋ ಎಂಬುದಲ್ಲದೆ ಸುತ್ತಲಿನ ಸದ್ದು-ಗದ್ದಲಗಳೂ, ವಾಸನೆಗಳೂ ನಮ್ಮ ಗಮನಕ್ಕೆ ಬರುತ್ತವೆ. ಇವೆಲ್ಲದರ ಹಿನ್ನೆಲೆಯಲ್ಲಿ ಅವರ ಮಾತುಗಳನ್ನು ಆಲಿಸುತ್ತೇವೆ. ಅವರ ಧ್ವನಿಯ ಏರಿಳಿತ, ಬಳಸುವ ಭಾಷೆ, ತರ್ಕ, ನಂಬಿಕೆ, ಅಭಿಪ್ರಾಯ, ತೀರ್ಮಾನಗಳನ್ನು ಗ್ರಹಿಸುತ್ತೇವೆ. ಅವರ ಮಾತಿನಲ್ಲಿರುವ ಸಂತೋಷ, ದುಃಖ, ಬೇಸರ, ಭಯ, ಕೋಪಗಳನ್ನೂ ಗ್ರಹಿಸುತ್ತೇವೆ. ಅವರು ಏನು ಯೋಚಿಸುತ್ತಿರಬಹುದೆಂದು ಊಹಿಸುತ್ತೇವೆ ಅಥವಾ ತರ್ಕಿಸುತ್ತೇವೆ. ಇವೆಲ್ಲವನ್ನು ನಾವೂ ಬಳಸಿ ಪ್ರತಿಕ್ರಿಯಿಸುತ್ತೇವೆ. ಇದನ್ನು ಒಟ್ಟಾರೆಯಾಗಿ ಸಂವಹನ ಎನ್ನುತ್ತೇವೆ. ಇದೆಲ್ಲವನ್ನೂ ಸೇರಿಸಿ ಸಂವಹನದ ಸಮಗ್ರಭಾಷೆ ಎನ್ನುತ್ತೇವೆ. ಇವನ್ನೆಲಾ ಸ್ಥೂಲವಾಗಿ ವಿಂಗಡಿಸಿದರೆ ಕಾಯಾ ವಾಚಾ ಮನಸಾ ಎಂಬ ತ್ರಿಕರಣ ಸಂವಹನ ಎಂದಾಗುತ್ತದೆ. ವಿವರವಾಗಿ ವಿಂಗಡಿಸಿದರೆ ಕಣ್ಣು, ಕಿವಿ, ಮೂಗು, ನಾಲಗೆ, ಚರ್ಮ ಮತ್ತು ಮನಸ್ಸುಗಳ ಮೂಲಕ ಗ್ರಹಿಸುವ ಇಂದ್ರಿಯಾನುಭವ ಎಂದಾಗುತ್ತದೆ. ಆದರೆ ದಿನ ನಿತ್ಯದ ವ್ಯವಹಾರದಲ್ಲಿ ಬಹಳ ಸಲ ಕಣ್ಣು ಮತ್ತು ಕಿವಿಗಳ ಮೂಲಕ ಗ್ರಹಿಸಿದ್ದನ್ನು ಮಾತ್ರ ಗುರುತಿಸಿ ಉಳಿದದ್ದನ್ನು ಉಪೇಕ್ಷಿಸುತ್ತೇವೆ ಅಥವಾ ಬೇಕಾದಾಗ ಮಾತ್ರ ಗುರುತಿಸುತ್ತೇವೆ. ಈ ಕಾರಣಕ್ಕಾಗಿ ಸಂವಹನ, ಭಾಷೆ ಎಂದರೆ ಎಲ್ಲರೂ ಮಾತು ಮತ್ತು ಧ್ವನಿಯ ಬಗ್ಗೆ ಮಾತ್ರ ಯೋಚಿಸುತ್ತಾರೆ.
ಸಿನಿಮಾ ಮತ್ತು ನಾಟಕ ಸಂವಹನದ ಸಮಗ್ರ ಭಾಷೆಯನ್ನು ಬಳಸುವುದರಿಂದ ಅವು ನಿಜ ಜೀವನಕ್ಕೆ ಹತ್ತಿರವಾಗಿವೆ. ಸ್ಪರ್ಶ ಮತ್ತು ವಾಸನೆಗಳನ್ನು ಮಾತ್ರ ಕಲ್ಪಿಸಿಕೊಂಡು ಉಳಿದೆಲ್ಲವನ್ನೂ ಇಂದ್ರಿಯಗ್ರಾಹ್ಯ ಅನುಭವವಾಗುವಂತೆ ಸಂವಹನವನ್ನು ಸೃಷ್ಟಿಸುವ ಕ್ರಮ ಸಿನಿಮಾ ಮತ್ತು ನಾಟಕಗಳಲ್ಲಿವೆ. ಆದರೆ ಇಲ್ಲಿಯೂ ಕಣ್ಣು ಮತ್ತು ಕಿವಿಗಳ ಮೂಲಕ ಗ್ರಹಿಸುವ ನೋಟ ಮತ್ತು ಮಾತುಗಳೇ ಪ್ರಧಾನವಾಗಿ ಗಮನಕ್ಕೆ ಬರುವುದರಿಂದ ಸಿನಿಮಾ ನೋಡುವುದು ನಾಟಕ ನೋಡುವುದು ಎಂದಾಗ, ಪರದೆಯ ಮೇಲೆ-ರಂಗದಮೇಲೆ ’ನೋಡುವ ಮಾತೇ’ ಸಿನಿಮಾ ಅಥವಾ ನಾಟಕ ಎಂಬಂತೆ ರೂಢಿಯಾಗಿಬಿಟ್ಟಿದೆ. ರಂಗಸ್ಥಳ ಅಥವಾ ಸಿನಿಮಾ ಪರದೆಯ ಮೇಲೆ ಮೂಡುವ ಚೌಕಟ್ಟಿನಲ್ಲಿ ಏನನ್ನು ಬೇಕಾದರೂ, ಎಷ್ಟನ್ನು ಬೇಕಾದರೂ ತೋರಿಸಲು ಸಾಧ್ಯ. ನಾಟಕದಲ್ಲಿ ಹತ್ತಿರ-ದೂರ, ಮೇಲೆ-ಕೆಳಗೆ ಎಂಬ ಅನುಭವ ಆಗುವ ಹಾಗೆ ಮಾಡುವುದು ಕಷ್ಟ, ಸಿನಿಮಾದಲ್ಲಿ ಸುಲಭ. ಈ ಕಾರಣಕ್ಕಾಗಿ ನಾಟಕಕ್ಕಿಂತಲೂ ಸಿನಿಮಾ ಹೆಚ್ಚಿನ ಸೌಲಭ್ಯವನ್ನು ಹೊಂದಿದೆ.
ಹೀಗೆ ಓದುವ-ಕೇಳುವ ಸಾಹಿತ್ಯ, ಕಿವಿಯಿಂದ ಕೇಳುವ ಸಂಗೀತ ಶ್ರವ್ಯ ಮಾಧ್ಯಮ. ಕಣ್ಣಿಂದ ನೋಡುವ ಚಿತ್ರ, ಛಾಯಾಚಿತ್ರ ದೃಶ್ಯ ಮಾಧ್ಯಮ. ಇವನ್ನು ಚಲನೆಯೊಂದಿಗೆ ಕೂಡಿಸಿಕೊಂಡರೆ ನೃತ್ಯ, ನಾಟಕ. ಇವೆಲ್ಲವನ್ನೂ ಏಕಕಾಲದಲ್ಲಿ ಬಳಸಿಕೊಂಡರೆ ಸಿನಿಮಾ.
ಅನುಭವವನ್ನು ಸ್ವಾರಸ್ಯವಾಗಿ, ಅಂದರೆ ಸಂತೋಷವಾಗುವಂತೆ, ಹಿತವಾಗುವಂತೆ, ಹೌದೆಂದು ತಲೆದೂಗುವಂತೆ ಎದುರಿಗಿರುವವರ ಮುಂದೆ ಸೃಷ್ಟಿಸಿದರೆ ಅದೇ ಕಲೆ. ಇದನ್ನು ಅನುಭವಿಸುವ ಶಕ್ತಿ ಎಲ್ಲರಲ್ಲಿಯೂ ಇರುವುದರಿಂದ ಇದಕ್ಕೆ ತರಬೇತಿ ಬೇಕಿಲ್ಲ. ನೋಡಲು ಕಣ್ಣು, ಕೇಳಲು ಕಿವಿ, ಪಡೆಯಲು ಹಣ ಮತ್ತು ವ್ಯವಧಾನ ಇದ್ದರೆ ಸಾಕು. ಈ ಮಾತು ಮೇಲುನೋಟಕ್ಕೆ ನಿಜ. ಮಕ್ಕಳು ಬೆಳೆಯುವಾಗಲೇ ಈ ಬಗ್ಗೆ ಒಂದಿಷ್ಟು ತರಬೇತಿ ಕುಟುಂಬದ ವಾತಾವರಣದಲ್ಲಿ ದೊಡ್ಡವರಿಂದ ಸಿಕ್ಕಿಬಿಡುವುದರಿಂದ ಇಷ್ಟೇ ಸಾಕೆಂದು ಅನ್ನಿಸುತ್ತದೆ.
ಓದಲು, ಬರೆಯಲು ಅಕ್ಷರ ಕಲಿಯಬೇಕು. ಅಕ್ಷರಗಳನ್ನು ಕೂಡಿಸಿ ಪದಗಳನ್ನು, ವಾಕ್ಯಗಳನ್ನು ಮಾಡುವ ಕೌಶಲ ಬೇಕು. ವಾಕ್ಯರಚನೆಗೆ ಆಧಾರವಾಗಿರುವ ಮಾತಿನ ನಿಯಮಗಳ ಅಂದರೆ ವ್ಯಾಕರಣದ ಜ್ಞಾನ ಬೇಕು. ಆದರೆ ಸಾಹಿತ್ಯವನ್ನು ಅನುಭವಿಸಲು ಇಷ್ಟೇ ಸಾಕಾಗುವುದಿಲ್ಲ. ಅಕ್ಷರ ಜ್ಞಾನದ ಜೊತೆಗೆ ಸೌಂದರ್ಯಪ್ರಜ್ಞೆ, ಜೋಡಿಸುವ ರೀತಿ, ತರ್ಕ, ಚಿಂತನೆ, ಗುಣ-ಮಟ್ಟಗಳ ತಾರತಮ್ಯ ಜ್ಞಾನವೂ ಬೇಕು. ಇವು ಮೀಮಾಂಸೆಗೆ ಸಂಬಂಧಿಸಿದ ಅಂಶಗಳು. ಅಂದರೆ ಭಾಷೆಯ ವ್ಯಾಕರಣ ಮತ್ತು ಮೀಮಾಂಸೆಯ ಪ್ರಾಥಮಿಕ ಪರಿಚಯವಾದರೂ ಇರಬೇಕು. ಇದು ಸಂಗೀತ, ನೃತ್ಯ, ಚಿತ್ರಕಲೆ, ಛಾಯಾಗ್ರಹಣ ವಿಷಯಗಳಲ್ಲೂ ಸತ್ಯ. ಅದರಲ್ಲೂ ಸಮಗ್ರ ಭಾಷೆಯನ್ನು ಬಳಸುವ ನಾಟಕ ಮತ್ತು ಸಿನಿಮಾ ವಿಷಯಗಳಮಟ್ಟಿಗಂತೂ ಮತ್ತೂ ಸತ್ಯ. ತಿಳಿದು ಅನುಭವಿಸಿದ ಸಂಗತಿಗಳ ಸ್ವಾರಸ್ಯ ತಿಳಿಯದೆ ಅನುಭವಿಸಿದ ಸಂಗತಿಗಳ ಸ್ವಾರಸ್ಯಕ್ಕಿಂತ ಯಾವಾಗಲೂ ಹೆಚ್ಚು. ಇದು ಯಾರ ಸಾಮಾನ್ಯ ಜ್ಞಾನಕ್ಕಾದರೂ ನಿಲುಕುವ ಸಂಗತಿ.
ಸಿನಿಮಾ ಆಧುನಿಕ ತಂತ್ರಜ್ಞಾನದಿಂದ ಹುಟ್ಟಿದ ಕಲೆ. ಎಲ್ಲ ಹಂತದಲ್ಲೂ ಜನಪದರನ್ನು ಒಳಗೊಳ್ಳುವುದರಿಂದ ಆಧುನಿಕ ಜಾನಪದ. ಮನುಷ್ಯನ ಸರಳ ಸಂತೋಷಗಳಿಂದ ಹಿಡಿದು ಅತ್ಯುನ್ನತ ಆಲೋಚನೆಗಳನ್ನೂ ಈ ತಂತ್ರಜ್ಞಾನದ ಮೂಲಕ ಸೃಷ್ಟಿಸುವುದರಿಂದ ಏಕಕಾಲಕ್ಕೆ ಸರಳ, ಜಟಿಲ ಮತ್ತು ಸಂಕೀರ್ಣವಾದ ಕಲೆ. ಇದರಿಂದ ಸಮಗ್ರ ಸಂವಹನ ಸಾಧ್ಯವಾಗುವುದರಿಂದ ಮನರಂಜನೆ ಪ್ರಧಾನವಾದ ಜನಪ್ರಿಯ ಚಿತ್ರ, ಚಿಂತನಾ ಪ್ರಧಾನವಾದ ಕಲಾತ್ಮಕ ಚಿತ್ರ ಮತ್ತು ಮಾಹಿತಿ-ಪ್ರಚಾರ ಪ್ರಧಾನವಾದ ಸಾಕ್ಷ್ಯ ಚಿತ್ರ ಎಂದು ಮೂರು ರೀತಿ. ಇವುಗಳಲ್ಲಿ ಒಂದೊಂದರಲ್ಲೂ ಅನೇಕ ಬಗೆ. ಸರಳವಾಗಿ ಹೇಳುವುದಾದರೆ ಚಿತ್ರಗಳು ಹಣ್ಣುಗಳಿದ್ದಹಾಗೆ. ಬಾಳೆಹಣ್ಣು ಸುಲಿದು ತಿನ್ನಲು ಸುಲಭ. ಕಿತ್ತಳೆ, ದಾಳಿಂಬೆ, ಹಲಸು ಮುಂತಾದವನ್ನು ಬಿಡಿಸಿ ತಿನ್ನುವುದು ಅಷ್ಟು ಸುಲಭವಲ್ಲ. ಜೊತೆಗೆ ಒಂದರ ರುಚಿ ಇನ್ನೊಂದಕ್ಕಿಲ್ಲ. ಆದ್ದರಿಂದ ಹೋಲಿಸಲು ಬರುವುದಿಲ್ಲ. ಯಾರಿಗೆ ಯಾವುದು ಇಷ್ಟವೋ ಅದನ್ನು ಆರಿಸಕೊಳ್ಳಬಹುದು. ಆದರೆ ಬಾಳೆಯ ಹಣ್ಣಿನಲ್ಲಿ ದಾಳಿಂಬೆಯ ರುಚಿಯನ್ನು ಬಯಸಲಾಗದು. ಹಲಸಿನ ಹಣ್ಣು ಬಾಳೆಯಹಣ್ಣಿನಂತೆ ಏಕೆ ಸುಲಭವಾಗಿರುವುದಿಲ್ಲ ಎಂದು ಆಕ್ಷೇಪಿಸಬಾರದು. ಶ್ರಮಪಡಲು ತಯಾರಿದ್ದರೆ, ಹೇಗೆ ಪಡೆಯುವುದೆಂದು ಗೊತ್ತಿದ್ದರೆ ಅನೇಕ ಹಣ್ಣುಗಳ ಸ್ವಾದವನ್ನು ಬೆರೆಸಿ ಹೊಸ ರುಚಿಯನ್ನು ಆನಂದಿಸುವುದು ಸಾಧ್ಯ. ಇದು ಉದಾಹರಣೆ ಅಷ್ಟೆ. ಹಾಗೆಯೇ ಮನರಂಜನೆಪ್ರಧಾನ ಚಿತ್ರಗಳಲ್ಲಿ ನಾವು ಬಯಸುವಂಥ ಕಲಾತ್ಮಕತೆ ಇಲ್ಲವೆಂದು ಆಕ್ಷೇಪಿಸಬಾರದು. ಕಲಾತ್ಮಕ ಸಿನಿಮಾಗಳಲ್ಲಿ ನಾವು ಬಯಸುವಂಥ ಮನರಂಜನೆಯನ್ನು ಕಾಣಲಾಗದೆ ದೂಷಿಸಬಾರದು. ಅನೇಕ ಹಣ್ಣುಗಳ ರಸಾಯನದಂತೆ ಏನೆಲ್ಲವೂ ಒಂದೇ ಚಿತ್ರದಲ್ಲಿ ಇರಬಹುದಾದರೆ ಯಾರಿಗೆ ತಾನೆ ಬೇಡ? ಆದರೆ ಅದು ಅಪರೂಪದ ಚಿತ್ರ. ಅಂಥವನ್ನು ಕ್ಲಾಸಿಕ್ ಅಥವಾ ಅತ್ಯುನ್ನತ ಚಿತ್ರಗಳು ಎನ್ನುತ್ತಾರೆ. ದಸರಾ ಚಿತ್ರೋತ್ಸವದ ಅಂಗವಾಗಿ ಭಾರತೀಯ ಪನರಾಮ ವಿಭಾಗದಲ್ಲಿ ಈಗ ಪ್ರದರ್ಶಿತಗೊಳ್ಳುತ್ತಿರುವ ಚಿತ್ರಗಳು ಅಂಥ ಪ್ರಯತ್ನಗಳೆಂದು ಚಿತ್ರೋತ್ಸವಗಳಲ್ಲಿ ಗುರುತಿಸಲ್ಪಟ್ಟವು.
ಎಲ್ಲ ಚಿತ್ರಗಳೂ ಒಂದು ಸಲ ನೋಡಿಬಿಟ್ಟರೆ ದಕ್ಕುವುದಿಲ್ಲ. ಸಿನಿಮಾ ಕವನ, ಕಾವ್ಯದಂತೆ, ಪಠ್ಯಪುಸ್ತಕದಂತೆ, ಶಾಸ್ತ್ರಗ್ರಂಥಗಳಂತೆ ಮತ್ತೆ ಮತ್ತೆ ಓದಬೇಕಾಗುತ್ತದೆ. ನೋಡಬೇಕಾಗುತ್ತದೆ. ಇದಕ್ಕೆ ಅಗತ್ಯವಾದ ಸಿದ್ಧತೆ ಮತ್ತು ವ್ಯವಧಾನ ಬೇಕು. ಆದ್ದರಿಂದ ಇಂಥ ಚಿತ್ರಗಳನ್ನು ಚಿತ್ರೋತ್ಸವಗಳಲ್ಲಿ ಪರಿಚಯಿಸಿಕೊಂಡು ಚಿತ್ರಸಮಾಜಗಳಲ್ಲಿ ಮತ್ತೆ ಮತ್ತೆ ನೋಡುತ್ತೇವೆ. ಈ ಬಗೆಯ ಚಿತ್ರಗಳೂ ನಿಮ್ಮ ಮುಂದಿವೆ.
ಸಿದ್ಧತೆ ಮತ್ತು ಆಯ್ಕೆ ನಿಮ್ಮದು.
30-09-2001
