ಅಗಸ್ಟ್ ೨೦೧೧ರಲ್ಲಿ ನಡೆದ ನಾಲ್ಕನೆಯ ಕೇರಳ ಸಾಕ್ಷ್ಯಚಿತ್ರ ಮತ್ತು ಕಿರು ಚಲನಚಿತ್ರೋತ್ಸವದಲ್ಲಿ ಪಾಲುಗೊಂಡ ನಂತರ, ಚಲನಚಿತ್ರಕಾರ ರಾಮಚಂದ್ರ ಪಿ. ಎನ್. ಅವರ ಹೊಸ ಚಿತ್ರ ‘ಮಿಯಾರ್ ಮನೆ’ ಈಗ ಇದೇ ಅಕ್ಟೋಬರ್ ೧೩ರಿಂದ ೨೩ರವರೆಗೆ ನಡೆಯಲಿರುವ ಹದಿಮೂರನೆಯ ಮುಂಬಯಿ ಚಲನಚಿತ್ರೋತ್ಸವದಲ್ಲಿ ‘ರಿಯಲ್ ರೀಲ್’ ವಿಭಾಗದಲ್ಲೂ ಪ್ರದರ್ಶನಗೊಳ್ಳಲಿದೆ. ಈ ‘ರಿಯಲ್ ರೀಲ್’ ಎನ್ನುವುದು ಸಾಕ್
ಷ್ಯ ಚಿತ್ರಗಳ ವಿಭಾಗ. ಅದಲ್ಲದೇ ‘ಮಿಯಾರ್ ಮನೆ’ ಚೆಕ್ ರಿಪಬ್ಲಿಕ್ ದೇಶದಲ್ಲಿ ಅಕ್ಟೋಬರ್ ೬ರಿಂದ ೯ರ ವರೆಗೆ ಪ್ರಾಗ್ ಶಹರದಲ್ಲಿ ನಡೆದ ‘ಪ್ರಾಗ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್’ ನಲ್ಲೂ ಪಾಲ್ಗೊಂಡಿದೆ. ಈ ಚಲನಚಿತ್ರೋತ್ಸವ ವರುಷಕ್ಕೊಮ್ಮೆ ನಾಲ್ಕು ವರುಷಗಳಿಂದ ನಡೆಯುತ್ತಿದ್ದು ಇದು ಭಾರತದ ಚಲನಚಿತ್ರಗಳನ್ನು ಆ ದೇಶದ ಜನರಿಗೆ ಪರಿಚಯಿಸುತ್ತದೆ.
ಮಿಯಾರ್ ಮನೆಯ ಸಾರಾಂಶ:
ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯಾರ್ ಎಂಬ ದೂರದ ಹಳ್ಳಿಯಲ್ಲಿ ಚಲನಚಿತ್ರಕಾರನ ಕುಟುಂಬಕ್ಕೆ ಸೇರಿದ ಇನ್ನೂರಕ್ಕೂ ಹೆಚ್ಚು ವರುಷಗಳ ಹಳೆಯ ಮನೆಯನ್ನು ಬೇರೊಂದೆಡೆ ಸಾಗಿಸಿ ಮರುಸೃಷ್ಟಿಸುವ ಸಲುವಾಗಿ, ಕೆಡವಲಾಗುತ್ತದೆ. ಈ ಪ್ರಕ್ರಿಯೆಯನ್ನು ದಾಖಲಿಸಲು ಹೊರಟ ಚಲನಚಿತ್ರಕಾರ ತನ್ನ ಇತಿಹಾಸದೆಡೆಗೆ ಪಯಣಿಸುತ್ತಾನೆ. ಇದು ಏಕಕಾಲಕ್ಕೆ ಆತನ ಕುಟುಂಬ ಸಾಗಿ ಬಂದಿರುವ ದಾರಿಯೂ ಹೌದು, ಭಾರತದ ಹಳ್ಳಿಗಳಲ್ಲಿ ವಾಸ ಮಾಡುವ ಅಥವಾ ಮಾಡುತ್ತಿದ್ದ ಒಂದೆರಡು ತಲೆಮಾರುಗಳ ವೃತ್ತಾಂತಕ್ಕೆ ಕನ್ನಡಿಯೂ ಹೌದು. ಪ್ರಾಯಶಃ ಇದು ತನ್ನನ್ನು ತಾನು ಆಧುನಿಕತೆಗೆ ತಳ್ಳಿಕೊಳ್ಳುತ್ತಿರುವ ಒಂದು ದೇಶದ ಪ್ರಸ್ಥಾನವೆಯೂ ಹೌದು. ಸಂಕ್ರಮಣದ ಅನಿವಾರ್ಯತೆ ಈ ಚಲನಚಿತ್ರದ ತಿರುಳು. ಮೂಲ ಪರಿಸರ ಮತ್ತು ಸಂದರ್ಭದಿಂದ ದೂರದಲ್ಲಿ ಈ ಮರುಹುಟ್ಟಿನ ಯೋಜನೆಗಳು ರೂಪುಗೊಳ್ಳುತ್ತಿರುವಂತೆ, ನಮ್ಮ ಕಣ್ಣ ಮುಂದೆಯೇ ಒಂದು ಜೀವನಕ್ರಮ ಕರಗಿ ಅವಶೇಷವಾಗುತ್ತ ಹೋಗುವುದು ಅನುಭವಕ್ಕೆ ಬರುತ್ತದೆ.
ರಾಮಚಂದ್ರ ಪಿ. ಎನ್. ಪುಣೆಯ ಫಿಲ್ಮ್ ಇನ್ಸ್ಟಿಟ್ಯೂಟಿನ ಪದವೀಧರರಾಗಿದ್ದು ಮುಂಬಯಿಯಲ್ಲಿ ನೆಲೆಸಿದ್ದಾರೆ. ಸ್ವೋಪಜ್ಞತೆಯಿಂದ ಕೂಡಿದ ಇವರ ಮೊದಲ ತುಳು ಭಾಷೆಯ ಕಥಾ ಚಲನಚಿತ್ರ ‘ಸುದ್ದ’ ೨೦೦೬ರಲ್ಲಿ ದೆಹಲಿಯಲ್ಲಿ ನಡೆದ ಓಸಿಯನ್ ಸಿನೆಫ್ಯಾನ್ ಏಶಿಯನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಚಲನಚಿತ್ರವೆಂಬ ಗೌರವಕ್ಕೆ ಪಾತ್ರವಾಯ್ತು. ಇವರ ಕನ್ನಡ ಚಲನಚಿತ್ರ ‘ಪುಟಾಣಿ ಪಾರ್ಟಿ’ ೨೦೦೯ರ ಶ್ರೇಷ್ಠ ಮಕ್ಕಳ ಚಿತ್ರ ಎಂದು ಭಾರತ ಸರ್ಕಾರ ಘೋಷಿಸಿತ್ತು. ಸಂಕಲನದ ಜವಾಬ್ದಾರಿಯನ್ನು ಸ್ವತಃ ರಾಮಚಂದ್ರ ಅವರು ನಿರ್ವಹಿಸಿದರೆ, ಈ ಚಲನಚಿತ್ರಕ್ಕೆ ಅಜಯ್ ರೈನಾ ಅವರ ಛಾಯಾಗ್ರಹಣವಿದೆ ಹಾಗೂ ಸಂತೋಷ ಕುಮಾರ್ ಅವರ ಧ್ವನಿ ಸಂಯೋಜನೆ ಇದೆ.
13-10-2001
