ದೃಶ್ಯಕ್ಕೊಂದು ನುಡಿಗಟ್ಟು

ಛಾಯಾಗ್ರಹಣವೆಂಬ ಮಾಯೆ

ನನ್ನಮ್ಮ ಸತ್ತಕೂಡಲೇ ನನ್ನ ಅಪ್ಪ ಮಾಡಿದ ಮೊದಲ ಕೆಲಸವೆಂದರೆ ಕೋಲಾರದ ಮಹಾತ್ಮ ಗಾಂಧಿ ರಸ್ತೆಯಲ್ಲಿದ್ದ (ಮೊದಲು ಅದಕ್ಕೆ ಸ್ಪಾರ್ಕ್‌ರೋಡ್‌ ಎಂಬ ಹೆಸರಿತ್ತಂತೆ. ನಾನು ಕೋಲಾರಕ್ಕೆ ಕಾಲಿಡುವ ಕಾಲಕ್ಕೆಲ್ಲ ಅದಕ್ಕೆ ಮಹಾತ್ಮ ಗಾಂಧಿ ರಸ್ತೆಯೆಂಬ ನಾಮಕರಣವಾಗಿ ಹೋಗಿತ್ತು. ಅದೇ ರಸ್ತೆಯಲ್ಲಿ ರವೆ ದೋಸೆಗೆ ಪ್ರಖ್ಯಾತವಾಗಿದ್ದ ಗೀತಾ ರೆಸ್ಟೋರೆಂಟ್‌ ಇದ್ದದ್ದು. ಅದರ ಮಾಲಿಕ ರಾಮನಾಥ ಐಯರ್ ಹೆಸರಿನ ಮೇಲೆ ಅವರ ಹೆಸರಿನ ಹೊಟೇಲೆಂದು ಹಳಬರು ಅದನ್ನು ಕರೆಯುತ್ತಿದ್ದರು. ಯಾಕೋ ಐಯರ್‌ ಅದನ್ನು ಮಾರಿಬಿಟ್ಟರು. ಅದನ್ನು ಖರೀದಿಸಿದ ಸಾವುಕಾರರು ಅದರ ಜಾಗದಲ್ಲಿ ಜವಳಿ ಮಳಿಗೆಯೊಂದನ್ನು ನಿರ್ಮಿಸಿ ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ. ಐಯರ್‌ ದುರಾದೃಷ್ಟ ಸಾವುಕಾರರ (ಸಾಹುಕಾರರನ್ನು ಹಳ್ಳಿಯ ಜನ ಸಾವುಕಾರ ಎನ್ನುವುದೇಕೆ?)

ಅದೃಷ್ಟವಾದ ಗ್ರಹಗತಿ ನನಗೆ ಇಂದಿಗೂ ಅರ್ಥವಾಗಿಲ್ಲ.) ಫೋಟೋ ಸ್ಟುಡಿಯೋ -ಡೇ ಅಂಡ್‌ ನೈಟ್‌ ಎಂದು ಅದರ ಹೆಸರಿದ್ದಿತೇನೋ?- ಅದರಲ್ಲಿ ನನ್ನ ಅಪ್ಪ ತನ್ನ ಕಾಟನ್‌ ಕೋಟು, ಬಿಳಿ ಶರಟು ಧರಿಸಿದ ತಾನು ಮತ್ತು ಆ ಕಾಲದ ಮಡಿವಂತ ಬ್ರಾಹ್ಮಣರ ಹೆಣ್ಣುಮಗಳು ಧರಿಸುವಂಥ ವಸ್ತ್ರ ಧರಿಸಿದ ನನ್ನ ಅಮ್ಮನಿದ್ದ ಒಂದೇ ಫೋಟೋದಲ್ಲಿ ತನ್ನನ್ನು ತೆಗೆದುಹಾಕಿ ಅಮ್ಮ ಮಾತ್ರ ಉಳಿದ ಚಿತ್ರದ ಎನ್‌ಲಾರ್ಜ್‌‌ಮೆಂಟ್‌ ಮಾಡಿಸಿ ತಂದಿದ್ದು. ಅದು ಅದರ ಮೂಲ ಮಾರ್ದವತೆಯನ್ನು ಕಳೆದುಕೊಂಡು ಸ್ಕೆಚಿ ಆದ ಅಮ್ಮನ ಗುರುಣೆಗುರುಣೆಯಾದ ಮುಖವನ್ನು, ಅಪ್ಪನ ಮೈ ತಗುಲಿದ್ದ ಭಾಗವನ್ನು ಅನಾಮತ್ತು ನಯವಾಗಿ ಕತ್ತರಿಸಿದ ಸರಳ ರೇಖೆಯನ್ನು ಉಳಿಸಿಕೊಂಡು ತೋರಿಸುತ್ತಿತ್ತು.  ಅದಕ್ಕೆ ಹೂ ಮಾಲೆ ಹಾಕಿ ನನ್ನ ಅಪ್ಪ ತಾನು ಸಾಯುವವರೆಗೂ ತನ್ನ ಹತ್ತಿರ ಇಟ್ಟುಕೊಂಡಿದ್ದರು. ಆ ಮೇಲೆ ತಾವೊಂದು ಅನೈತಿಕ ಸಂಬಂಧವನ್ನು ಮನೆಯಲ್ಲೇ ಇಟ್ಟುಕೊಂಡಿದ್ದರೂ ಅದು ಹಾಗೇ ಇತ್ತು.  ಇದಾಗಿ ದಶಕಗಳು ಕಳೆದು ಅಪ್ಪ ಸತ್ತಮೇಲೆ ಅದು ಮಾಯವಾಗಿ ಹೋಯಿತು, ನನ್ನನ್ನೂ ಸೇರಿ ಅವಳ ಮಕ್ಕಳಿಗೂ ದೊರಕದೆ;  ಅದಕ್ಕೆ ಮೂಲವಾದ ಜೋಡಿ ಚಿತ್ರವೂ ಸೇರಿದಂತೆ. ನನ್ನ ಹತ್ತಿರ ಅದಲ್ಲದ ಆದರೆ ಅದರಂತಹ ಇನ್ನಷ್ಟು ಚಿತ್ರಗಳಿವೆ. ಅವುಗಳ ಹುಟ್ಟಿನ ಬಗ್ಗೆ ನಾನು ಮತ್ತೆಂದಾದರೂ ಹೇಳುತ್ತೇನೆ.

ನಾವು ಛಾಯಾ ಚಿತ್ರವನ್ನು ನೋಡುತ್ತೇವೆ. ಅದು ನಮಗೆ ಬರಿಯ ನೆನಪನ್ನಲ್ಲ, ಬೇರೆ ಏನೇನನ್ನೋ ತಂದು ಕೊಡುತ್ತದೆ. ಆ ನೆನಪು ಫೋಟೋಗ್ರಫಿಯನ್ನು ನಮ್ಮ ಮುಂದಿಡುವುದಿಲ್ಲ. ಅದು ನಮ್ಮೆದುರಿಗೆ ಇರಿಸಿರುವುದು ಕ್ಷಣವೊಂದನ್ನು ಹಿಡಿದ ಮಾಯೆ. ಬಾತೆ ಹೇಳುತ್ತಾನೆ: ಲಕಾನ್ ಕರೆಯುವಂತೆ ಸಂಕ್ಷೇಪವಾಗಿ ಅದೊಂದು ಸಂದರ್ಭ, ಒಂದು ಮುಖಾಮುಖಿ, ಒಂದು ಸತ್ಯ, ಆ ವಾಸ್ತವಕ್ಕೆ ಅಭಿಧಾನ ನೀಡಲಾದರೆ ಬೌದ್ಧಧರ್ಮ ಕರೆವಂತೆ ಶೂನ್ಯ ಎನ್ನಬಹುದು. ಅದಕ್ಕಿಂತ ಉತ್ತಮವೆಂದರೆ, ಅಲನ್ ವ್ಯಾಟ್ಸ್ ಕರೆದಂತೆ ತಥಾತ: ಇದಾಗಿರುವ, ಇಂತಿರುವ ಸತ್ಯ. ಸಂಸ್ಕೃತದಲ್ಲಿ ತಥ್ ಎಂದರೆ ಅದು. ಒಂದು ಮಗು ಬೆರಳು ತೋರಿ ಅದೋ ಅದು, ಅಲ್ಲಿರುವುದು ಎಂದು ಹೇಳುತ್ತಿರುವ ಅದು. ಅದಕ್ಕಿಂತ ಬೇರೆ ಏನನ್ನೂ ಅದು ಹೇಳುವುದಿಲ್ಲ ಎಂದು.

ಸುಸಾನ್ ಸೋಂಟಾಗ್ ಎಲ್ಲ ಫೋಟೋಗಳೂ ಮೆಮೆಂಟೋ ಮೋರಿ - ಅಂದರೆ ನಮ್ಮ ನಶ್ವರತೆಯ ನೆನಪು ಮಾಡಿಕೊಡುವವು ಎಂದು ಹೇಳುತ್ತಾರೆ. ಮುಂದುವರಿದು ಆಕೆ ಹೇಳುವುದೆಂದರೆ ಫೋಟೋ ಒಂದನ್ನು ತೆಗೆಯುವುದೆಂದರೆ ಆ ಇನ್ನೊಬ್ಬರ ಅತ್ಯತೆ, ತುತ್ತಾಗುವಿಕೆ, ಬದಲಾಗುವಿಕೆಯ ಪಕ್ರಿಯೆಗಳಲ್ಲಿ ಒಳಗೊಳ್ಳುವುದು ಎಂದು. ಈ ಕ್ಷಣವನ್ನು ತುಂಡರಿಸಿ, ಹೆಪ್ಪುಗಟ್ಟಿಸುವುದರ ಮೂಲಕ ಫೋಟೋ ಕಾಲದ ಅನಿರ್ಬಂಧಿತ ವಿಲಯಕ್ಕೆ ಸಾಕ್ಷಿಯಾಗುತ್ತದೆ ಎಂದು ಆಕೆ ಭಾವಿಸುತ್ತಾರೆ.
ಫೋಟೋಗ್ರಫಿಯೆಂದರೆ ಜನರ ಬದುಕಿನ ಅನ್ಯಾಕ್ರಮಣ. ಫೋಟೋ ಒಂದರಲ್ಲಿ ನಾವು ವ್ಯಕ್ತಿಯೊಬ್ಬರನ್ನು ಅವರ ತಮ್ಮನ್ನು ಹೇಗೆ ನೋಡಲಾಗದೋ ಹಾಗೆ ನೋಡುತ್ತೇವೆ. ಫೋಟೋ ಜನರನ್ನು ವಸ್ತುಗಳನ್ನಾಗಿ ಮಾರ್ಪಡಿಸಿಬಿಡುತ್ತದೆ. ಅದೊಂದು ಕ್ರೂರ, ವಿಪರ್ಯಾಸದ ಕಲಾ ಮಾಧ್ಯಮ. ಹಿಡಿದಿಟ್ಟ ಕ್ಷಣಗಳನ್ನು ನಾಳೆಗೊಯ್ಯುವ ಕಾರ್ಯ. ಆ ಕ್ಷಣಗಳನ್ನು ಭೂತಕ್ಕೆ ಸಂದುಹೋಗಲು ಸಮರ್ಪಿಸಿಬಿಡಬೇಕಾಗಿತ್ತು. ಆ ಕ್ಷಣಗಳು ನೆನಪಿನಲ್ಲಿ ಮಾತ್ರ ಉಳಿಯಲು ಯೋಗ್ಯವಾದವು. ಅದೊಂದು ರೀತಿ ಬಳಿಕ ಬಂದು ಸಂದವುಗಳ ತೆರೆ ತೆರೆದು ಭೂತದ ನೆನಪ ಹರಡಿದ ಹಾಗೆ ಎಂದು ಕೇಟ್ ಮಾರ್ಟನ್ ತಮ್ಮ ದಿ ಹೌಸ್ ಅಟ್ ರಿವರ‍್ಟನ್ ಕೃತಿಯಲ್ಲಿ ಬರೆಯುತ್ತಾರೆ. ಎಲ್ಲ ಚಿತ್ರಗಳೂ ಅಂಥ ಅದೃಷ್ಟಶಾಲಿಗಳಲ್ಲ.

ಛಾಯಾಗ್ರಾಹಕನೊಂದು ಕಾಡ್ ಮೀನಿನಂತೆ. ಲಕ್ಷಾಂತರ ಮೊಟ್ಟೆಗಳನ್ನಿಟ್ಟರೂ ಒಂದೇ ಒಂದು ಮಾತ್ರವೇ ಫಲದಾಯಕವಾಗಬಹುದು ಎಂಬುದು ಬನಾರ್ಡ್ ಷಾ ಅವರ ಅಭಿಮತ. ಫೋಟೋ ಒಂದು ಸೆರೆ ಹಿಡಿದಾಕ್ಷಣ ವಾಸ್ತವದಿಂದ ಆಚೆ ಸರಿದು ಅಭಿಪ್ರಾಯವಾಗಿ ಮಾರ್ಪಟ್ಟುಹೋಗುತ್ತದೆ ಎನ್ನುವ ವಿಚಾರವೂ ಇದೆ. ಎಲ್ಲ ಫೋಟೋಗಳೂ ಬಹಳ ನಿಖರವಾದವು. ಅದರಲ್ಲಿ ಸರಿಸುಮಾರು ಎನ್ನುವುದೇ ಇಲ್ಲ. ಅಲ್ಲದೆ ಅವು ಯಾವುವೂ ಸತ್ಯವಲ್ಲ ಎನ್ನುವ ರಿಚರ್ಡ್ ಅವೆದಾನ್ ಅವರ ಮಾತು ಫೋಟೋಗ್ರಫಿಯನ್ನು ಎದುರುಗೊಳ್ಳಲು ಅಗತ್ಯ ಮಾನಸಿಕ ಸ್ಥಿತಿಯನ್ನು ಒದಗಿಸುತ್ತವೆ.

ಫೊಟೋಗ್ರಫಿ ಅಮಾಯಕತನದ ಭ್ರಮೆಯನ್ನು ಹುಟ್ಟುಹಾಕುತ್ತದೆ. ಅದರಲ್ಲಿನ ಘನೀಕೃತ ಕಥಾನಕದ ವಿಪರ್ಯಾಸ ಅದರಲ್ಲಿನ ಪಾತ್ರಗಳಿಗೆ ಅವು ಸಾಯುತ್ತವೆ ಎಂದೋ, ಬದಲಾಗುತ್ತವೆ ಎಂದೋ ತೋರದಂತೆ ವಿಸ್ಮೃತಿಯನ್ನು ತಂದೊಡ್ಡುತ್ತದೆ. ಅವುಗಳ ಅಮಾಯಕತೆ ಇರುವುದು ಅವುಗಳ ಭವಿಷ್ಯದ ಬಗ್ಗೆ ಅವಕ್ಕಿರುವ ತಿಳಿವಳಿಕೆಯ ವಿಚಾರದಲ್ಲಿ. ಐವತ್ತು ವರ್ಷಗಳು ಕಳೆದ ಮೇಲೆ ನಾವು ಹೇಗೆ ಅವುಗಳನ್ನು - ಅವುಗಳನ್ನು ಕುರಿತ ಎಷ್ಟೊಂದು ಅರಿವಿನಿಂದ - ನೋಡುತ್ತೇವೆ ಎಂದರೆ ಅವರು ಏನು ಓದಿದರು, ಏನು ಮಾಡಿದರು, ಯಾರನ್ನು ಮದುವೆಯಾದರು, ಅವರು ಸತ್ತ ದಿನ ಯಾವುದು ಎಲ್ಲವೂ ಮನಃಪಟಲದಲ್ಲಿ ಚಲನಚಿತ್ರದ ನಡೆವ ಭ್ರಮೆಯ ಸ್ಥಿರಚಿತ್ರಗಳ ಸ್ಲೈಡ್ ಶೋದಂತೆ ನಡೆಯುತ್ತಿರುತ್ತದೆ, ಇಂತೆಯೇ ನಮ್ಮ ಫೋಟೋವನ್ನು ಯಾರೊಬ್ಬರು ಎದುರು ಹಿಡಿದು ಹೀಗೆಯೇ ಯೋಚಿಸಬಹುದು ಎನ್ನುವುದರ ಅರಿವೇ ಇಲ್ಲದೆ. (ಅಯಾನ್ ಮೆಕೀವನ್)

ಬಾತೆಯ ಪುಸ್ತಕವನ್ನು ಓದಿದ ಬಳಿಕ ನಾವು ನಮ್ಮೆದುರಿಗೆ ತಂತ್ರಜ್ಞಾನದ ದೆಸೆಯಿಂದ ಲಬ್ಧವಾದ ಎಲ್ಲ ಶಾಟ್‌ಗಳನ್ನು ಫೋಟೋಗಳೆಂದು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಈಗಿನ ಆಲ್ಬಂ ಯುಗದಲ್ಲಿ ವೃತ್ತಿ ಫೊಟೋಗ್ರಾಫರರ ಕಸರತ್ತುಗಳ ವೈಭವೀಕರಣ ಮಾತ್ರವೇ ಹೊಳೆಯುತ್ತ ಸಾಯುತ್ತಿರುತ್ತವೆ. ನಮಗೆ ಅದು ಆಲ್ಬಂ ಅಲ್ಲ ಹಾಳು ಬೊಮ್ಮೆಗಳ ಪುಸ್ತಕ ಎಂಬಂತೆ ತೋರುತ್ತಿರುತ್ತದೆ. ಇವಕ್ಕೆ ಬೇಕಿರುವುದು ಗಿಮಿಕ್ ಮಾಡುವ ಸಾಮರ್ಥ್ಯ. ಆದರೆ ಫೋಟೋಗ್ರಫಿ ಸರಳತೆಯನ್ನು ಬೇಡುತ್ತದೆ. ಅದು ಬೇಡವಾದುದನ್ನು ಕಿತ್ತೊಗೆಯಿರೆಂದು ಹೇಳುತ್ತದೆ. ಹಾಗೆಯೇ ಏನು ನೋಡಬೇಕು ಎನ್ನುವ ಎಚ್ಚರವನ್ನೂ ಬಯಸುತ್ತದೆ.

ಬೆಂಗಳೂರಿನ ಬಳೇಪೇಟೆಯಲ್ಲಿ ಒಂದು ವಸತಿಗೃಹವಿದೆ. ಅದರ ಗೋಡೆಗಳ ಮೇಲೆ ಅರವಿಂದರಿಂದ ಗಾಂಧೀಜಿಯವರೆಗೆ, ರವೀಂದ್ರರಿಂದ ಸುಬ್ಬುಲಕ್ಷ್ಮಿಯವರೆಗೆ ಹಲವರ ಸುಂದರ ಫೋಟೋಗಳಿವೆ. ಅದರ ಬಗ್ಗೆ ನಾವಿಬ್ಬರೂ ಸುದೀರ್ಘವಾಗಿ ಮಾತಾಡಿಕೊಂಡಿದ್ದೇವೆ. ಅಲ್ಲಿನ ಭಾವಚಿತ್ರಗಳನ್ನು ಆ ಹೊಟೇಲಿನಲ್ಲಿ ತಂಗಿದಾಗಲೆಲ್ಲ ನಾವು ಎದುರುಗೊಳ್ಳುವುದು ಈ ಪ್ರಜ್ಞೆಯಿಂದಲೇ. ಅಲ್ಲಿ ತೂಗುಹಾಕಿದ (ನೇತಾಡಿಸಿದ -ಅಲ್ಲ) ಫೋಟೋದಲ್ಲಿನ ಮಹಾತ್ಮ ಗಾಂಧಿಯ ನಗೆ ನಮ್ಮ ಮನಸ್ಸಿನಲ್ಲಿ ಆ ಕ್ಷಣವನ್ನು ಅಚ್ಚು ಹಾಕುತ್ತದೆ. ಅದು ಆ ಗಾಂಧೀಜಿಯ ಆ ಕ್ಷಣದ ಆ ಕಾಲ ಆ ದೇಶದ ಆ ಭಾವಗಳನ್ನು ಅಲ್ಲಿನ ಚಿತ್ರದಲ್ಲಿಯೂ, ನಮ್ಮ ಮನಸ್ಸಿನಲ್ಲಿಯೂ ಹೆಪ್ಪುಗಟ್ಟಿಸಿದೆ.

ಈಗ ಮತ್ತೊಮ್ಮೆ ನನ್ನ ತಾಯಿಯ ಬಳಿಗೆ ಮರಳುತ್ತೇನೆ. ಅವಳ ಫೋಟೋ ಇವತ್ತು ಚಾರಿತ್ರಿಕ ಕಾರಣಗಳಿಂದಾಗಿ ನನಗೆ -ಅಥವಾ ನನ್ನವರು ಯಾರಿಗೂ ಲಭ್ಯವಿಲ್ಲದಿದ್ದರೂ ನನ್ನ ಮನಸ್ಸಿನಲ್ಲಿರುವ ಆ ನೆಲೆಗೊಂಡ ಚಿತ್ರವನ್ನು ಯಾರೂ ಕಿತ್ತೊಯ್ಯಲು ಸಾಧ್ಯವಿಲ್ಲ. ಒಂದೋ ನನಗೆ ಆಮ್ನೀಶಿಯಾ ಒದಗಬೇಕು, ಇಲ್ಲವೇ ನಾನು ಯಾರಿಗೂ ಆ ಮಾನಸಿಕ ಚಿತ್ರವನ್ನು ಕಟ್ಟಿಕೊಡದೆ ಸಾಯಬೇಕು.  ಒಂದು ವೇಳೆ ಕೊಟ್ಟರೂ ಅದು ನನ್ನ ಸ್ಮೃತಿಯ ಚಿತ್ರದ ಚಿತ್ರವಷ್ಟೇ. ದುರಂತವೆಂದರೆ ಅದೇ.

13-10-2001

samvaada.com fan page on facebook


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು