Release Date: 10 March 2011 (Germany)
IMDB Users Rating: 7.3/10
Director: Yasemin Samdereli
Writers: Yasemin Samdereli, Nesrin Samdereli
-----------------------------------------------------------
ತುಂಬಾ ದಿನಗಳ ನಂತರ ಒಂದು ಒಳ್ಳೆಯ ಸಿನಿಮಾ ನೋಡಿದೆ.
’ಅಲ್ಮನ್ಯ’ ಜರ್ಮನಿಯ ಒಂದು ಪಟ್ಟಣ. ಮಹಾಯುದ್ಧಾನಂತರದ ದಶಕಗಳಲ್ಲಿ ಜರ್ಮನಿಯಲ್ಲಿ ಕಾರ್ಮಿಕರ ಬರ ಉಂಟಾಗಿರುತ್ತದೆ. ಅಕ್ಕಪಕ್ಕದ ರಾಷ್ಟ್ರಗಳಿಂದ ಆರೋಗ್ಯವಂತ, ಕಟ್ಟುಮಸ್ತಾದ ಯುವಕರನ್ನು ಜರ್ಮನಿಗೆ ಸೆಳೆಯುವ ಏಜೆಂಟರ ದಂಡೇ ಹುಟ್ಟಿಕೊಳ್ಳುತ್ತದೆ. ಹೀಗೆ ಕೆಲಸ ಹುಡುಕಿಕೊಂಡು ವಲಸೆ ಬಂದವರಲ್ಲಿ ಟರ್ಕಿ ಮೂಲದವ
ರೇ ಹೆಚ್ಚು. ಕಥಾ ನಾಯಕ ಹುಸೇನ್ ಕೂಡಾ ಹೀಗೆ ೬೦ರ ದಶಕದಲ್ಲಿ ಕೈಗಾರಿಕಾ ಕಾರ್ಮಿಕನಾಗಿ ಟರ್ಕಿಯಿಂದ ವಲಸೆ ಬಂದವನೇ. ಇದೇ ಆರಂಭದ ದೃಶ್ಯ. ವಲಸೆಗಾರರಿಗೆ ಗುರುತುಚೀಟಿ ಕೊಡುವ ಕೇಂದ್ರದಲ್ಲಿ ಜನಜಂಗುಳಿ. ಕ್ಯೂನಲ್ಲಿ ನಿಲ್ಲುವಾಗ ಹುಸೇನ್‌ಗೆ ಮತ್ತೊಬ್ಬಾತ ಎಡತಾಕುತ್ತಾನೆ. ’ನೀವೇ ಮುಂದೆ ನಿಲ್ಲಿ ಸ್ವಾಮಿ’ ಅಂತ ಹುಸೇನ್ ಬಿಟ್ಟುಕೊಡುತ್ತಾನೆ. ’ಇಲ್ಲಾ ಸ್ವಾಮಿ ನೀವೇ ನಿಲ್ಲಿ’ ಎನ್ನುತ್ತಾನೆ ಆಸಾಮಿ. ’ಪರವಾಗಿಲ್ಲ, ನೀವೇ ನಿಲ್ಲಿ’ ಎಂದು ಹುಸೇನ್ ಒತ್ತಾಯಿಸಿ ಆತನ ಹಿಂದೆ ಕ್ಯೂ ನಿಲ್ಲುತ್ತಾನೆ. ಅದೃಷ್ಟ ಹೇಗಿರುತ್ತದೆ ನೋಡಿ. ಹೀಗೆ ಮುಂದೆ ನಿಂತವ ಗುರುತುಚೀಟಿ ಪಡೆಯಲು ಬಂದಾಗ ದೊಡ್ಡ ಸರ್‌ಪ್ರೈಸ್. ಕ್ಯಾಮರಾ ಹಿಡಿದು ಆತನತ್ತ ಫೋಕಸ್ ಮಾಡುವವರ ದಂಡು. ಏಕೆಂದರೆ ವಲಸೆ ಬಂದ ಕಾರ್ಮಿಕರ ಸಂಖ್ಯೆಯಲ್ಲಿ ಈತ ಒಂದು ಮಿಲಿಯನ್‌ನವ. ಈ ಅದೃಷ್ಟವಂತನಿಗೆ ದುಬಾರಿ ಬೈಕ್ ಉಡುಗೊರೆ ಸಿಗುತ್ತದೆ!
ಆತ ದಿನಪತ್ರಿಕೆಗಳ ಮುಖಪುಟದಲ್ಲಿ ಮೂಡಿಬರುತ್ತಾನೆ. ಹುಸೇನ್ ಹುಸಿನಗುತ್ತಲೇ ಕಳೆದುಕೊಂಡ ಅದೃಷ್ಟದ ಬಗ್ಗೆ ಹೆಚ್ಚು ಗಮನ ಕೊಡದೇ ಮುಂದುವರಿಯುತ್ತಾನೆ.
’ಪತ್ರಿಕಾ ಮುಖಪುಟಗಳಲ್ಲಿ ಒಂದು ಮಿಲಿಯನ್‌ನೇ ಕಾರ್ಮಿಕ ಮಿಂಚಿದರೂ ಈ ಸಿನಿಮಾ ಕಥೆ ಮಿಲಿಯನ್ ಒಂದನೆಯವನಾದ ಹುಸೇನ್’ನ ಕುರಿತದ್ದು ಎಂದು ನಿರೂಪಕಿ ಕಥೆ ಬಿಚ್ಚುತ್ತಾಳೆ. ಹುಸೇನ್‌ನ ಮೊಮ್ಮಗಳು (ಮಗಳ ಮಗಳು) ೨೨ರ ಹರೆಯದ ಕನಾನ್, ತನ್ನ ಸೋದರ ಸಂಬಂಧಿಗೆ -ಅಂದರೆ ಹುಸೇನ್ ಮಗನ ಮಗ ೬ ವರ್ಷದ ಕೆಂಟ್‌ನಿಗೆ ಹೇಳುವ ಕಥೆ ಇದು.
ಕೆಂಟ್‌ಗೆ ತನ್ನ ಪೂರ್ವಿಕರ ಇತಿಹಾಸ ತಿಳಿಯುವ ಕುತೂಹಲ. ಆತನ ಶಾಲೆಯಲ್ಲಿ ಶಿಕ್ಷಕಿ ತನ್ನ ವಿದ್ಯಾರ್ಥಿಗಳ ಮೂಲ ಸ್ಥಳ ಕೇಳುತ್ತಾ, ಹುಡುಗರು ಹೇಳಿದ ಸ್ಥಳವನ್ನು ಭೂಪಟದಲ್ಲಿ ಗುರುತು ಮಾಡುತ್ತಾ ಬರುವಾಗ ಕೆಂಟ್ ತನ್ನ ಮೂಲ ಟರ್ಕಿಯ ’ಅನತೋಲಿಯ’ ಎನ್ನುತ್ತಾನೆ. ಆದರೆ ಆಕೆ ತೂಗುಹಾಕಿದ ಭೂಪಟದಲ್ಲಿ ಅನತೋಲಿಯಾ ಇಲ್ಲವೇ ಇಲ್ಲ. ಮ್ಯಾಪ್‌ನಿಂದಾಚೆಗೆ, ಊಹೆ ಮಾಡಿ ಒಂದು ಸ್ಥಳ ಗುರುತು ಮಾಡುತ್ತಾಳೆ ಶಿಕ್ಷಕಿ. ಶಾಲಾ ಹುಡುಗರು ಫುಟ್‌ಬಾಲ್ ಆಡುವಾಗಲೂ ಕೆಂಟ್‌ನಿಗೆ ಇದೇ ಐಡೆಂಟಿಟಿ ಸಮಸ್ಯೆ. ಜರ್ಮನಿಯವನಲ್ಲದ ಈತನನ್ನು ಜರ್ಮನಿ ತಂಡದ ಹುಡುಗರು ಸೇರಿಸಿಕೊಳ್ಳಲಾರರು, ಇನ್ನು ತುರ್ಕಿ ಮಾತನಾಡಲು ಬರುವುದಿಲ್ಲವಾದ್ದರಿಂದ ಟರ್ಕಿ ತಂಡದವರೂ ಈತನನ್ನು ದೂರವಿಡುತ್ತಾರೆ. ಆರು ವರ್ಷದ ಹುಡುಗನಿಗೂ ಅಸ್ಮಿತೆಯ ಪ್ರಶ್ನೆ!
ಜರ್ಮನಿಯಲ್ಲಿ ಹುಸೇನ್ ಕುಟುಂಬ ನೆಲೆಸಿ ನಾಲ್ಕೈದು ದಶಕಗಳಾಗಿವೆ. ಹುಸೇನ್ ದಂಪತಿಯ ಮೂವರು ಗಂಡುಮಕ್ಕಳು, ಮಗಳು, ಕಿರಿಮಗನ ಪತ್ನಿ ಹಾಗೂ ಮೊಮ್ಮಕ್ಕಳು ಕೆಂಟ್ ಮತ್ತು ಕನಾನ್
ಒಳಗೊಂಡ ಕುಟುಂಬ ಅದು. ವೃದ್ಧ ಹುಸೇನ್ ಮತ್ತು ಆತನ ವೃದ್ಧ ಪತ್ನಿಗೆ ಇದೀಗ ತಾನೆ ಜರ್ಮನಿ ಪೌರತ್ವ ಸಿಕ್ಕಿರುತ್ತದೆ. ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರು ಬಂದು ನೆಲೆಸಿದ ಸುವರ್ಣ ವರ್ಷಾಚರಣೆಯ ಸಂದರ್ಭ ಛಾನ್ಸಲರ್ (ಜರ್ಮನಿಯ ರಾಷ್ಟ್ರಪತಿ) ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಲಸೆ ಕಾರ್ಮಿಕರ ಪರವಾಗಿ ಮಾತನಾಡಲು ಹುಸೇನ್‌ನಿಗೆ ಅಧಿಕೃತ ಆಹ್ವಾನವೂ ಬಂದಿರುತ್ತದೆ.
ಕುಟುಂಬದ ಸಂತೋಷಕೂಟದಲ್ಲಿ ಈ ಸರ್‌ಪ್ರೈಸ್ ಸುದ್ದಿಯನ್ನು ವೃದ್ಧೆ ಹೇಳುತ್ತಾಳೆ. ಆದರೆ ಅಜ್ಜ ಹುಸೇನ್ ಇದಕ್ಕಿಂತಲೂ ದೊಡ್ಡ ಸರ್‌ಪ್ರೈಸ್ ಸುದ್ದಿ ನೀಡುತ್ತಾನೆ. ತಾನು ಟರ್ಕಿಯ ತಮ್ಮ ಹಳ್ಳಿಯಲ್ಲಿ ಒಂದು ಮನೆ ಖರೀದಿಸಿದ್ದು ಎಲ್ಲರೂ ಅಲ್ಲಿಗೆ ತೆರಳಬೇಕು ಎನ್ನುತ್ತಾನೆ. ಆದರೆ ಯಾರಿಗೂ ಅಲ್ಲಿಗೆ ಹಿಂದಿರುಗಲು ಇಷ್ಟವಿಲ್ಲ.
ಪ್ರತಿಯೊಬ್ಬರಿಗೂ ಅವರದೇ ಆದ ಸಮಸ್ಯೆ ಇರುತ್ತದೆ. ಅಸಲಿಗೆ ಹುಸೇನ್‌ನ ವೃದ್ಧ ಪತ್ನಿಗೂ ಜರ್ಮನಿ ಬಿಡಲು ಇಷ್ಟವಿಲ್ಲ. ಆದರೆ ಹುಸೇನ್ ’ತಾವು ಶಾಶ್ವತವಾಗಿ ಅಲ್ಲಿಗೆ ಹಿಂದಿರುಗುತ್ತಿಲ್ಲ. ಇದೊಂದು ಪ್ರವಾಸ ಅಷ್ಟೇ’ ಎಂದು ಹೇಳಿ ಹೊರಡಿಸುತ್ತಾನೆ. 
ಯುವತಿ ಕನಾನ್‌ಗೆ ಬ್ರಿಟಿಷ್ ಯುವಕನೊಬ್ಬನೊಂದಿಗೆ ವಿವಾಹಪೂರ್ವ ಸಂಬಂಧ ಇದೆ. ತಾನು ಗರ್ಭಿಣಿ ಎಂದು ಈಗ ತಾನೇ ಅವಳಿಗೆ ಅರಿವಾಗಿದೆ. ಮನೆಯವರಿಗೆ ಈ ವಿಷಯ ಹೇಳುವಂತಿಲ್ಲ, ಬಿಡುವಂತಿಲ್ಲ. ಟರ್ಕಿ ಪ್ರವಾಸದಿಂದ ತಪ್ಪಿಸಿಕೊಳ್ಳಲು ಪರೀಕ್ಷೆಯ ನೆಪ ಒಡ್ಡುತ್ತಾಳೆ. ಆದರೆ ಅಜ್ಜ ಹುಸೇನ್ ಯಾವುದಕ್ಕೂ ಜಗ್ಗುವುದಿಲ್ಲ. ಎಲ್ಲರನ್ನೂ ಪ್ರವಾಸಕ್ಕೆ ಹೊರಡಿಸುತ್ತಾನೆ.
ವಿಮಾನ ನಿಲ್ದಾಣದಲ್ಲಿ ವಿಮಾನ ತಡವಾದಾಗ, ನಂತರ ಟರ್ಕಿಯಲ್ಲಿ ವಿಮಾನ ಇಳಿದು ಕ್ಯಾಬ್‌ನಲ್ಲಿ ಊರಿಗೆ ಪಯಣಿಸುವಾಗ, ಹೀಗೆ ಕಾಲಕ್ಷೇಪಕ್ಕೆ ಅನುಗುಣವಾಗಿ ಹಿಂದಿನ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.
ಹುಸೇನ್ ಮತ್ತು ಆತನ ಪತ್ನಿಯ ಪ್ರಣಯ-ವಿವಾಹ, ಹೆಚ್ಚಿನ ದುಡಿಮೆಗಾಗಿ ಆತ ಜರ್ಮನಿಗೆ ವಲಸೆ ಕಾರ್ಮಿಕನಾಗಿ ಬಂದು ಪಡುವ ಪಾಡು, ರಜೆ ಹಾಕಿ ಟರ್ಕಿಗೆ ಮರಳಿದಾಗ ಅಲ್ಲಿ ಕಿರಿಯ ಇಬ್ಬರು ಮಕ್ಕಳು ತನ್ನ ಗುರುತು ಮರೆತೇಬಿಟ್ಟಿರುವುದು, ಹಿರಿಯ ಮಗ ಶಾಲೆಗೆ ಚಕ್ಕರ್ ಹಾಕಿ ಅಂಡಲೆಯುತ್ತಿರುವುದು; ಇದರಿಂದ ಆತ ತನ್ನ ಕುಟುಂಬವನ್ನು ಜರ್ಮನಿಗೇ ಕರೆದುಕೊಂಡು ಬರುವುದು; ಹೀಗೆ ಪಕ್ಕಾ ಸಂಪ್ರದಾಯವಾದಿ ನಾಡಿನಿಂದ ಬಂದ ಕುಟುಂಬವೊಂದು ತಮಗೆ ಹೊಸತಾದ ಪಾಶ್ಚಾತ್ಯ ಭಾಷೆ-ಸಂಸ್ಕೃತಿಯೊಂದಕ್ಕೆ ತೆರೆದುಕೊಳ್ಳುವುದು... ಇತ್ಯಾದಿ ವಿವರಗಳನ್ನೆಲ್ಲಾ ತುಂಬಾ ತಮಾಷೆಯಾಗಿ, ವೇಗವಾಗಿ, ಲವಲವಿಕೆಯಿಂದ ಚಿತ್ರಿಸಲಾಗಿದೆ.
ಕ್ಯಾಬ್ ಪ್ರಯಾಣದ ಮಾರ್ಗ ಮಧ್ಯೆಯೇ ವೃದ್ಧ ಹುಸೇನ್ ಮರಣ ಹೊಂದುತ್ತಾನೆ. ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ಮಾಡುವುದಕ್ಕೆ ಆತನ ಮೃತಶರೀರದೊಂದಿಗೆ ಉಳಿದವರು ಪ್ರಯಾಣ ಮುಂದುವರೆಸುತ್ತಾರೆ.
ಇಡೀ ಚಿತ್ರದಲ್ಲಿ ’ನೀರು ಆವಿಯಾಗುವ ಪ್ರಕ್ರಿಯೆ’ಯನ್ನು ತುಂಬಾ ಸಾಂಕೇತಿಕವಾಗಿ, ಅರ್ಥಪೂರ್ಣವಾಗಿ ಬಳಸಿದ್ದಾಳೆ ನಿರ್ದೇಶಕಿ ಯಸೆಮಿನ್ ಸಮ್ದೆರೆಲಿ.
ಹುಸೇನ್ ಸತ್ತ ಮೇಲೆ, ಬಾಲಕ ಕೆಂಟ್, ’ಅಜ್ಜ ಎಲ್ಲಿ’ ಎಂದು ತನ್ನ ಅಪ್ಪನನ್ನು ಕೇಳುತ್ತಾನೆ. ’ಅಜ್ಜ ನನ್ನಲ್ಲಿ, ನಿನ್ನಲ್ಲಿ, ಎಲ್ಲರಲ್ಲೂ ಇದ್ದಾನೆ’ ಎಂದು ಅಪ್ಪ ಲೋಕಾರೂಢಿಯಾಗಿ ಸಮಾಧಾನದ ಮಾತು ಹೇಳುತ್ತಾನೆ. ಆದರೆ ಕೆಂಟ್ ಬಿಡದೆ ಮತ್ತೂ ಪ್ರಶ್ನಿಸುತ್ತಾನೆ. ಆಗ ಅಪ್ಪ, ಬಳಿಯಲ್ಲಿ ಸಣ್ಣ ಬಿರುಕೊಂದರಲ್ಲಿ ನಿಂತ ನೀರನ್ನು ತೋರಿಸುತ್ತಾ, ’ಈಗ ನೀರು ದ್ರವರೂಪದಲ್ಲಿದೆ ತಾನೆ? ಉಷ್ಣಾಂಶ ತೀರಾ ಕಡಿಮೆಯಾದರೆ ಅದು ಮಂಜುಗಡ್ಡೆಯಾಗುತ್ತೆ. ಉಷ್ಣಾಂಶ ಹೆಚ್ಚಾದರೆ ಆವಿಯಾಗಿಬಿಡುತ್ತದೆ. ಒಟ್ಟಿನಲ್ಲಿ ಯಾವುದೋ ಒಂದು ಸ್ಥಿತಿಯಲ್ಲಿ ಅದು ’ಇರುತ್ತದೆ’ ಎಂದು ವೈಜ್ಞಾನಿಕವಾಗಿ ವಿವರಿಸುತ್ತಾನೆ. ಬಾಲಕ ಕೆಂಟ್ ಅರಿವಾದವನಂತೆ, ’ಓಹೋ ಅಜ್ಜ ಈಗ ಆವಿಯಾಗಿಬಿಟ್ಟಿದ್ದಾನೆ’ ಎಂದು ಉದ್ಗರಿಸುತ್ತಾನೆ.
ಪತಿಯ ಶವದೊಂದಿಗೆ ತನ್ನ ಊರು ತಲುಪಿದಾಗ ಹುಸೇನ್ ಪತ್ನಿ ಗಮನಿಸುವುದು ಕೂಡಾ ತನ್ನ ಪುರಾತನ ಮನೆಯ ಎದುರು ಇದ್ದ ನೀರಿನ ತೊಟ್ಟಿಯನ್ನು. ಹಿಂದೆ ಅದು ನೀರು ಹಿಡಿಯುವ ಹೆಣ್ಣು ಮಕ್ಕಳಿಂದ ಗಿಜಿಗುಡುತ್ತಿದ್ದ
ಕೊಳ. ಆದರೀಗ ಬರಿದಾಗಿ ಬಿಕೋ ಎನ್ನುತ್ತಿದೆ. ’ನೀರು ಆವಿಯಾಗಿಬಿಟ್ಟಿದೆ’!
ಈ ಸಂಕೇತದ ಜೊತೆಗೇ ನೆಂಟರಿಷ್ಟರನ್ನು ಬೀಳ್ಕೊಡುವಾಗಿನ ಟರ್ಕಿಯ ಒಂದು ಸಾಂಪ್ರದಾಯಿಕ ವಿಧಿಯನ್ನೂ ನಿರ್ದೇಶಕಿ ತುಂಬಾ ಅರ್ಥಪೂರ್ಣವಾಗಿ ಬಳಸಿದ್ದಾಳೆ. ಅದೆಂದರೆ, ನೆಂಟರಿಷ್ಟರು ಟಾಟಾ, ಬೈ ಹೇಳಿ ಹೋಗುವಾಗ ಒಂದು ಪಾತ್ರೆಯಷ್ಟು ನೀರನ್ನು ಅವರು ಹೊರಟ ದಾರಿಗೆ ಎರಚಿ ಬೀಳ್ಕೊಡುವುದು. ಎರಚಿದ ನೀರು ಆವಿಯಾದಷ್ಟೇ ವೇಗವಾಗಿ ಅವರು ಹಿಂದಿರುಗಿ ಬರಲಿ ಎಂಬ ನಂಬಿಕೆ ಆಧರಿಸಿದ ವಿಧಿ ಇದು.
ಚಿತ್ರದ ಕೊನೆಯಲ್ಲಿ, ಅಜ್ಜನ ಗೈರುಹಾಜರಿಯಲ್ಲಿ ಆತನ ಪರವಾಗಿ ಮೊಮ್ಮಗ ಕೆಂಟ್‌ನೇ ಛಾನ್ಸಲರ್ ಸಮ್ಮುಖದಲ್ಲಿ ವಲಸೆ ಕಾರ್ಮಿಕರ ಸುವರ್ಣಾಚರಣೆಯ ಸಂದರ್ಭ ಭಾಷಣ ಮಾಡುತ್ತಾನೆ. ತುಂಬಾ ಮಾರ್ಮಿಕವಾದ ದೃಶ್ಯ ಇದು.
ಒಟ್ಟಾರೆ, ತುಂಬಾ ತಮಾಷೆಯಾಗಿ ಆರಂಭವಾಗುವ ಚಿತ್ರ, ಗಂಭೀರಕ್ಕೆ ತಿರುಗಿ ಕೊನೆಗೆ ನಮ್ಮ ಬದುಕಿಗೇ ಬರೆದ ಭಾಷ್ಯವಾಗಿಬಿಡುತ್ತದೆ.
ಇತ್ತೀಚೆಗೆ ನಡೆದ ಇಂಡೋ-ಜರ್ಮನ್ ಚಿತ್ರೋತ್ಸವದಲ್ಲಿ ಈ ಸಿನಿಮಾ ನೋಡಿದ್ದು. ಎಲ್ಲಾದರೂ ಡಿವಿಡಿ ಸಿಗಬಹುದು; ಇಲ್ಲವೇ ಮ್ಯಾಕ್ಸ್‌ಮುಲರ್ ಭವನದಲ್ಲೂ ಒಂದು ಕಾಪಿ ಇರಬಹುದು. ಬಿಡುವಿದ್ದರೆ ಒಂದೆರಡು ಸಾರಿ ನೋಡಿ.
ನಿರ್ದೇಶಕಿ ಯಸೆಮಿನ್ ಚಿತ್ರಗಳು: ರವಿ ಅರೇಹಳ್ಳಿ
30-12-2011
