ದೃಶ್ಯಕ್ಕೊಂದು ನುಡಿಗಟ್ಟು

2011: ಐದು ಉತ್ತಮ ಚಿತ್ರಗಳು

೨೦೧೧ ರಲ್ಲಿ ತೆರೆಕಂಡ ಕನ್ನಡ ಚಿತ್ರಗಳಲ್ಲಿ ಐದು ಉತ್ತಮ ಚಿತ್ರಗಳು:

೫. ಮುರಳಿ ಮೀಟ್ಸ್ ಮೀರಾ: ಧಿಮಾಕು ಅನ್ನುವ ಒಳ್ಳೆಯ ಸಿನೆಮಾ ದಿಗ್ದರ್ಶಿಸಿಯೂ ಸೋತಿದ್ದ ಮಹೇಶ್ ರಾವ್ ನಿರ್ದೇಶನದ ಮುರಳಿ ಮೀಟ್ಸ್ ಮೀರಾ ಚಿತ್ರ ಅದರ ಸ್ಕ್ರೀನ್-ಪ್ಲೇ ಮತ್ತು ನಿರ್ವಹಣೆಯ ಕಾರಣಕ್ಕಾಗಿ ಇಷ್ಟವಾಗುತ್ತದೆ. ಪ್ರಜ್ವಲ್ ನಾಯಕನಾಗಿ ನಟಿಸಿದ ಈ ಚಿತ್ರ ಹಣ ಗಳಿಕೆಯಲ್ಲಿ ಎಡವಿದರೂ ಮಹೇಶ್ ರಾವ್ ಮುಂಬರುವ ದಿನಗಳಲ್ಲಿ ಅತ್ಯುತ್ತಮ ಚಿತ್ರಗಳನ್ನ ನೀಡುವ ಭರವಸೆ ಮೂಡಿಸಿದ್ದಾರೆ.

೪. ವಿಷ್ಣುವರ್ಧನ ಮತ್ತು ಸಾರಥಿ: ವಿಷ್ಣುವರ್ಧನ ಈ ವರ್ಷದ ಸ್ಟೈಲಿಷ್ ಕನ್ನಡ ಸಿನೆಮಾ. ಪಕ್ಕಾ ಸಿನೆಮಾ ಸರಕೊಂದು ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ಈ ಚಿತ್ರ ನಿಲ್ಲುತ್ತದೆ. ತೆಲುಗು ಫಾರ್ಮುಲಾವನ್ನು ಸಮರ್ಥವಾಗಿ ಬಳಸಿಕೊಂಡು ಕನ್ನಡದ್ದೇ ಆದ ಚಿತ್ರ ಕೊಟ್ಟಿದ್ದಾರೆ ನಿರ್ಮಾಪಕ ದ್ವಾರಕೀಶ್.

ಪಕ್ಕಾ ಮಸಾಲಾ ಚಿತ್ರವಾಗಿ ಸಾರಥಿ, ವರ್ಷದಲ್ಲಿ ಅತ್ಯಂತ ಹೆಚ್ಚು ಹಣ ಮಾಡಿದ ಸಿನೆಮಾ. ಕತೆ ಮತ್ತು ಮೇಕಿಂಗ್ ನಲ್ಲಿ ಮತ್ತದೇ ತೆಲುಗಿನ ನೆರಳಿದ್ದರೂ ಸದಾ ಸೋಲುವ ಭಯದಲ್ಲಿರುವ ಕನ್ನಡ ಚಿತ್ರ ನಿರ್ಮಾಪಕರಲ್ಲಿ ಭರವಸೆ ಮೂಡಿಸಿದ ಚಿತ್ರ. ಪರಿಣಾಮ ಇಂತಹದ್ದೇ ಸಾಲು ಸಾಲು ಚಿತ್ರಗಳನ್ನು ೨೦೧೨ ರಲ್ಲಿ ನಿರೀಕ್ಷಿಸಬಹುದಾಗಿದೆ.

೩. ಲೈಫು ಇಷ್ಟೇನೆ: ಮನಸಾರೆ ಮತ್ತು ಪಂಚರಂಗಿಯಲ್ಲಿ ಚಿತ್ರ ಕಥೆಗಾರನಾಗಿದ್ದ ಪವನ್ ನಿರ್ದೇಶನದ ಚೊಚ್ಚಲ ಚಿತ್ರ. ಪ್ರಸ್ತುತ ನಗರದ ಯುವ ಬದುಕನ್ನ ಹಸಿ ಹಸಿಯಾಗಿ ತೆರೆದಿಟ್ಟ ಪರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

೨. ಪರಮಾತ್ಮ ಮತ್ತು ಪುಟ್ಟಕ್ಕನ ಹೈವೆ:

ಹಣ ಗಳಿಕೆಯ ದೃಷ್ಟಿಯಿಂದ ನಿರೀಕ್ಷೆಯಷ್ಟು ಯಶಸ್ಸು ಕಾಣದಿದ್ದರೂ ಪರಮಾತ್ಮ ಯೋಗರಾಜ್ ಭಟ್ಟರ ನಿರ್ದೇಶನದ ಇವರೆಗಿನ ಚಿತ್ರಗಳಲ್ಲೇ ಅತ್ಯುತ್ತಮವಾದದ್ದು. ಮನುಷ್ಯನೊಳಗಣ ಒಳ್ಳೆಯತನವನ್ನೂ, ಬದುಕಿನ ಕ್ಷಣ ಭಂಗುರತೆಯನ್ನೂ ಸೂಕ್ಷ್ಮವಾಗಿ ನಿರೂಪಿಸಿದ ಚಿತ್ರ, ಪರಮಾತ್ಮ. ಚಿತ್ರದ ನಾಯಕಿಯ ಪಾತ್ರಧಾರಿ ದೀಪಾ ಸನ್ನಿಧಿಯ ಪಾತ್ರ ವರ್ಷದ ಅತ್ಯುತ್ತಮ ನಟನೆಗಳಲ್ಲೊಂದು.

ಸುರೇಶ್ ನಿರ್ದೇಶಿಸಿದ ಪುಟ್ಟಕ್ಕನ ಹೈವೆ ಕೂಡ ಅದು ಎತ್ತಿಕೊಂಡ ಗಂಭೀರ ಸಮಸ್ಯೆಯಿಂದ ಬಹು ಮುಖ್ಯವಾದ ಚಿತ್ರವಾಗುತ್ತದೆ. ಸಿನೆಮಾವಾಗಿ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿಬರದಿದ್ದರೂ, ಪ್ರಸ್ತುತ ವಿಷಮ ಸನ್ನಿವೇಶಕ್ಕೆ ಸಂವೇದನಾಶೀಲ ಚಿತ್ರ ನಿರ್ದೇಶಕನೊಬ್ಬ ಪ್ರತಿಸ್ಪಂದಿಸಿರುವುದು ಗಮನಾರ್ಹವಾದದ್ದು.

೧. ಬೆಟ್ಟದ ಜೀವ: ಕಾರಂತರ ಕಾದಂಬರಿಯನ್ನಾದರಿಸಿದ ಬೆಟ್ಟದ ಜೀವಕ್ಕೆ ತಮ್ಮದೇ ಜೀವ ತುಂಬುವಲ್ಲಿ ಶೇಷಾದ್ರಿ ಯಶಸ್ವಿಯಾಗಿದ್ದರು. ಎಲ್ಲಾ ಮಿತಿಗಳ ನಡುವೆ ದತ್ತಣ್ಣನವರ ಅಭಿನಯ, ಚಿತ್ರಕ್ಕೆ ಸ್ವಾತಂತ್ರ್ಯ ಹೋರಾಟದ ಸ್ಪರ್ಶಕೊಟ್ಟ ನಿರ್ದೇಶಕರ ಪ್ರಯೋಗಶೀಲತೆಯಿಂದ ಚಿತ್ರ ಇಷ್ಟವಾಗುತ್ತದೆ. ಇನ್ನೂ ಚೆನ್ನಾಗಿ ಚಿತ್ರ ಮೂಡಿಬರಬಹುದಿತ್ತು ಎನ್ನುವ ಆಸೆಯಲ್ಲೇ , ಬಂದಿರುವ ಚಿತ್ರಗಳಲ್ಲಿ ಬೆಟ್ಟದ ಜೀವ ವರ್ಷದ ಚಿತ್ರವಾಗಿ ನಿಲ್ಲುತ್ತದೆ.

01-01-2012

samvaada.com fan page on facebook




ಇಲ್ಲಿವರೆಗಿನ ಅಭಿಪ್ರಾಯಗಳು

Vasanth
2012-01-02 01:02:17

Yes agree Bettada Jeeva deserves to be No.1. Dattana's performance is simply the best.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು