ಕುರೋಸಾವಾ ೧೯೫೭ ರಲ್ಲಿ ಗೋರ್ಕಿಯ ಲೋವರ್ ಡೆಪ್ತ್ ಕಾದಂಬರಿಯನ್ನ ಸಿನೆಮಾ ಮಾಡುವ ೧೧ ವರ್ಷಕ್ಕೂ ಮೊದಲು ಭಾರತೀಯ ನಿರ್ದೇಶಕನೊಬ್ಬ ಲೋವರ್ ಡೆಪ್ತ್ ಕಾದಂಬರಿಯಿಂದ ಪ್ರಭಾವಿತನಾಗಿ ಹಿಂದಿ ಸಿನೆಮಾವನ್ನ ದಿಗ್ದರ್ಶಿಸಿದ್ದ.
ನೀಚಾ ನಗರ್ ಎಂಬ ಹೆಸರಿನ ಈ ಸಿನೆಮಾ ಕೇನ್ಸ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಕೂಡ ಗಳಿಸಿತ್ತು.
ಚೇತನ್ ಆನಂದ್ ಇದರ ನಿರ್ದೇಶಕ. ರಷ್ಯಾ ರಾಜಕೀಯದಿಂದ ಪ್ರಭಾವಿತರಾಗಿದ್ದ ಚೇತನ್ ಆನಂದ್, ನೀಚಾ ನಗರ್ ಚಿತ್ರದಲ್ಲಿ ಸಾಮಾಜಿಕ ವಾಸ್ತವವಾದವನ್ನು ತೆರೆದಿಡಲು ಹೈ ಮತ್ತು ಲೋ ಆಂಗಲ್ ಶಾಟ್ ಗಳನ್ನು ಬಳಸಿದ್ದ ರೀತಿ ಇಂದಿಗೂ ನೆನೆಸಿಕೊಳ್ಳಲಾಗುತ್ತದೆ. ಭಾರತೀಯ ಚಿತ್ರರಂಗದ ಪರ್ಯಾಯ ಸಿನೆಮಾ ಯುಗ ಪ್ರಾರಂಭವಾಗುವ ಎಷ್ಟೋ ವರ್ಷದ ಮೊದಲೇ ಇಂತಹ ಕ್ಲಾಸಿಕ್ ಚಿತ್ರವೊಂದು ಬಂದಿತ್ತೆಂಬುದು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ.
ಮುಂದೆ ಈತ ಮಾಡಿದ ಹಕೀಕತ್ ಸಿನೆಮಾ, ಇದುವರೆಗೆ ಬಂದ ಯುದ್ಧ ಕೇಂದ್ರಿತ ಚಿತ್ರಗಳಲ್ಲೇ ಮುಂಚೂಣಿಯಲ್ಲಿ ನಿಲ್ಲುತ್ತದೆ. ಭಾರತ-ಚೀನಾ ಯುದ್ದದ ಹಿನ್ನೆಲೆಯ ಈ ಚಿತ್ರ ದೇಶವೊಂದಕ್ಕೆ ಯುದ್ಧವೇಕೆ ಬೇಕು? ಎಂಬ ಮೂಲ ಪ್ರಶ್ನೆಯನ್ನ ತೆರೆದಿಟ್ಟ ವಿಶಿಷ್ಠ ಚಿತ್ರ. ಯುದ್ಧದ ಭಯಾನಕತೆ, ಯುದ್ಧಾನಂತರದ ಆತಂಕಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟ ಈ ಚಿತ್ರವನ್ನ ನೋಡಿದ ಜನ ಸಮೂಹ ಸನ್ನಿಗೆ ಒಳಗಾಗಿದ್ದರು. ಕೈಫ಼ಿ ಆಜ್ಮಿಯ ಸಾಹಿತ್ಯ, ಮದನ್ ಮೋಹನ್ ರ ಸಂಗೀತ ಹಕೀಕತ್ ಚಿತ್ರವನ್ನ ಶ್ರೇಷ್ಠ ಚಿತ್ರಗಳ ಸಾಲಿಗೇರಿಸಿಬಿಟ್ಟಿದ್ದವು.
ನವಕೇತನ್ ನಿರ್ಮಾಣ ಸಂಸ್ಥೆಯಲ್ಲಿ ಸಾಕಷ್ಟು ಚಿತ್ರಗಳನ್ನ ನೀಡಿದ ಚೇತನ್ ಆನಂದ್ ತನ್ನ ಸಹೋದರ ದೇವ್ ಆನಂದ್ ಸೂಪರ್ ಸ್ಟಾರ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮುಂದೆ ರಾಜ್ ಕುಮಾರ್ ರನ್ನು ಹಾಕಿಕೊಂಡು ಮಾಡಿದ ಹೀರ್ ರಂಜಾ ಚಿತ್ರದ ಸಂಭಾಷಣೆ ಪೂರ್ತಿ ಕಾವ್ಯ ರೂಪದಲ್ಲೇ ಇದ್ದದ್ದು ವಿಶೇಷ. ಮತ್ತೆ ಅವರ ಫೇವರೇಟ್ ಕೈಫ಼ಿ ಆಜ್ಮಿ ಬರೆದ ಕಾವ್ಯದ ಸಾಲುಗಳು ಈ ಚಿತ್ರವನ್ನ ಬೇರೊಂದು ಸ್ತರಕ್ಕೇರಿಸಿದ್ದವು.
ಕೇವಲ ನಾಲ್ಕು ಬಾಲ ಕಲಾವಿದರನ್ನ ಕೇಂದ್ರದಲ್ಲಿಟ್ಟುಕೊಂಡು ನಿರ್ದೇಶಿಸಿದ ’ಆಖ್ರೀ ಖತ್’, ಬಂಡವಾಳಶಾಹಿಯ ಹಲವು ಮುಖಗಳನ್ನ ತೆರೆದಿಟ್ಟ ’ಆಂಧಿಯಾ’ ಇನ್ನಿತರ ಉತ್ತಮ ಚಿತ್ರಗಳು.
೮೦ ರ ದಶಕದ ಕೊನೆಯಲ್ಲಿ ನೀವು ಟಿ.ವಿ ನೋಡುತ್ತಿದ್ದರೆ ಪರಮವೀರ್ ಚಕ್ರ ಎಂಬ ಧಾರಾವಾಹಿ ನಿಮಗೆ ನೆನಪಿರುತ್ತದೆ. ವಾರಕ್ಕೊಬ್ಬ ವೀರಯೋಧನನ್ನ ನೆನೆಸಿಕೊಳ್ಳುತ್ತಿದ್ದ ನೋಡುಗರಲ್ಲಿ ಸೈನಿಕರ ಕುರಿತು ಅಪಾರ ಗೌರವ ಹುಟ್ಟಿಸಿದ ಸರಣಿಯದು. ಅದು ಕೂಡ ಚೇತನ್ ಆನಂದರ ಕೊಡುಗೆಯೇ.
೧೯೧೫ ರಲ್ಲಿ ಲಾಹೋರ್ ನಲ್ಲಿ ಹುಟ್ಟಿದ ಚೇತನ್ ಆನಂದ್ ೩೦ ರ ದಶಕದಲ್ಲಿ ಕಾಂಗ್ರೆಸ್ ನ ಸದಸ್ಯ್ರರಾಗಿಯೂ ಸಕ್ರೀಯರಾಗಿದ್ದರು. ತನ್ನ ಪತ್ನಿ ಉಮಾರಿಂದ ಬೇರೆಯಾದ ಮೇಲೆ ಸುರಸುಂದರಿ ಪ್ರಿಯಾ ರಾಜವಂಶ್ ಜೊತೆ ಕೊನೆಯವರೆಗೂ ಸಂಬಂಧವಿರಿಸಿಕೊಂಡಿದ್ದರು. ಇವರ ಹಕೀಕತ್, ಹೀರ್ ರಂಝಾ, ಹಿಂದೂಸ್ಥಾನ್ ಕೀ ಕಸಮ್, ಹಂಸ್ತೆ ಜಖಮ್ ಚಿತ್ರಗಳಿಗೆಲ್ಲಾ ಆಕೆಯೇ ನಾಯಕಿ.
ಇಂಥಹ ಮಹತ್ವದ ನಿರ್ದೇಶಕನಿಗೆ ಸಿಗಬೇಕಾದಷ್ಟು ಮನ್ನಣೆ ನಮ್ಮಲ್ಲಿ ಸಿಗಲಿಲ್ಲ. ಇಂದು, ಜನವರಿ ೩ ಚೇತನ್ ಆನಂದ್ ಹುಟ್ಟಿದ ದಿನ. ೧೯೯೭ ರಲ್ಲಿ ಅಸುನೀಗಿದ ಚೇತನ್ ಆನಂದ್ ರಂತಹ ಮಹತ್ವದ ನಿರ್ದೇಶಕನನ್ನ ಸಂವಾದ ಡಾಟ್ ಕಾಂ ನೆನೆಸಿಕೊಳ್ಳುತ್ತಿದೆ.
ಚೇತನ್ ಆನಂದ್ ತೀರಿಕೊಂಡಾಗ ಸಹೋದರ ದೇವ್ ಆನಂದ್ "ಶಾಶ್ವತವಾದದ್ದೊಂದು ನಮ್ಮಿಂದ ದೂರವಾಗಿಬಿಟ್ಟಿದೆ." ಎಂದಿದ್ದನ್ನಿಲ್ಲಿ ನೆನಪಿಸಿಕೊಳ್ಳಬಹುದು.
03-01-2012
