ಕನ್ನಡವೂ ಸೇರಿದಂತೆ ಭಾರತೀಯ ಮುಖ್ಯವಾಹಿನಿಯ ಸಿನೆಮಾಗಳಲ್ಲಿ ಪ್ರೇಮವೂ ಸೇರಿದಂತೆ ಯಾವುದೇ ಸಂಬಂಧಗಳು ಹುಟ್ಟಿ ಬೆಳೆಯುವುದಿಲ್ಲ. ಬದಲಿಗೆ ನಿಂತಲ್ಲೇ ನಿಂತಿರುತ್ತವೆ. ಅಣ್ಣ-ತಂಗಿಯಾಗಿರಬಹುದು, ಪ್ರೇಮಿಗಳಾಗಿರಬಹುದು, ಸ್ನೇಹಿತರಾಗಿರಬಹುದು ಯಾವೊಂದು ಸಂಬಂಧವೂ ಹುಟ್ಟುವ ಪ್ರಕ್ರಿಯೆಯ ಬಗ್ಗೆ ನಮ್ಮ ಸಿನೆಮಾಗಳು ಗಂಭೀರವಾಗಿ ಪರಿಗಣಿಸಿಲ್ಲ. ಕೆಲವೊಂದು ಕಡೆ ಈ ಸಂಬಂಧಗಳು ಹುಟ್ಟುವ ಪ್ರಕ್ರಿಯೆ ಕೂಡ ನಾಮಕಾವಸ್ಥೆಗೆ ಎಂಬಂತಿರುತ್ತವೆ.
ಸಿದ್ಲಿಂಗು ಸಿನೆಮಾ ಮುಖ್ಯವಾಗುವುದು ಆ ಚಿತ್ರದೊಳಗಿನ ಸಂಬಂಧಗಳು ಹುಟ್ಟಿಕೊಳ್ಳುವ ಸಹಜತೆಯಿಂದ. ಮನುಷ್ಯ ಸಂಬಂಧಗಳ ಹುಟ್ಟು ಆಕಸ್ಮಿಕವೂ, ಕೌತುಕವೂ ಆದ ಸಂಗತಿ. ಅದು ಹುಟ್ಟಿದ ಗಳಿಗೆಗಳನ್ನು ನಮ್ಮ ನಮ್ಮ ಬದುಕಿನಲ್ಲಿ ನೆನೆಸಿಕೊಂಡರೂ ಸಾಕು, ಅದರ ರಸವತ್ತತೆ ನಮಗೆ ಅರ್ಥವಾದೀತು.
ಸಿದ್ಲಿಂಗು ಎಂಬ ಹುಡುಗನ ಬದುಕಿನಲ್ಲೂ ಇಂತಹ ಸಂಬಂಧಗಳು ಹುಟ್ಟುತ್ತವೆ. ಕಳಚಿಕೊಳ್ಳುತ್ತವೆ. ಕಾರು ಕೊಳ್ಳಬೇಕೆಂಬ ಈತನ ಆಸೆಯೊಂದು ಈ ಪಡೆಯುವ-ಕಳೆದುಕೊಳ್ಳುವ ಪ್ರಕ್ರಿಯೆಗೆ ನೆಪವಾಗಿ ಬರುತ್ತದೆ.
ಕನ್ನಡ ಜನಪ್ರಿಯ ಸಿದ್ದ ಮಾದರಿಗಳನ್ನು ತಕ್ಕ ಮಟ್ಟಿಗೆ ಧಿಕ್ಕರಿಸಿ ತನ್ನದೇ ಹಾದಿಯಲ್ಲಿ ನಡೆಯುವ ಸಿದ್ಲಿಂಗು ಚಿತ್ರ ಅದೇ ಕಾರಣಕ್ಕೇ ವಿಭಿನ್ನವೂ ಎನಿಸಿಕೊಳ್ಳುತ್ತದೆ.
ಅಪ್ಪನ ಕಾಮ ತಣಿಸಲು ಬಂದವಳು ಅಮ್ಮನಾಗುತ್ತಾಳೆ, ಕಾರಿನ ಆಸೆಯಿಂದ ಸೋಡಾಬುಡ್ಡಿ ಸಹಪಾಠಿ ಸ್ನೇಹಿತೆಯಾಗುತ್ತಾಳೆ. ಕಾರಿಟ್ಟುಕೊಂಡ ಆಂಡಾಳಮ್ಮ ಮಿಸ್ ಸ್ನೇಹಿತೆಯೂ ಆಗಿ ಇವನ ಪುರುಷತ್ವವನ್ನ ಅರಳಿಸುತ್ತಾಳೆ, ಕಾರು ಮಾರಲು ಹೊರಟಿರುವ ಅಮಾನುತ್ ಅಲ್ಲಾ, ಬಡ್ಡಿ ಸಾಲ ಪಡೆಯಲು ಹೋಗಿ ಸಿಗುವ ಮಂಗಳಾ ಕಳೆದು ಹೋದ ಕಾರಿನಿಂದ ಆಪ್ತನಾಗುವ ಇನ್ಸಪೆಕ್ಟರ್ ಹೀಗೆ ಹಲವು ಪಾತ್ರಗಳು ವೈವಿಧ್ಯಮಯ ಕಾರಣಗಳಿಂದ ಸಿದ್ಲಿಂಗುವಿನ ಬದುಕಿನಲ್ಲಿ ಇಣುಕಿ ಹೋಗುತ್ತವೆ. ಆದರೆ ಎಲ್ಲವನ್ನು ಕಳೆದುಕೊಳ್ಳುವ ಸಿದ್ಲಿಂಗುವಿನದು ದುರಂತದ ಸರಮಾಲೆ.
ಸಿದ್ಲಿಂಗು ಚಿತ್ರದ ಸಮಸ್ಯೆ ಇರುವುದು ಚಿತ್ರಕಥೆಯಲ್ಲಿರುವ ವಾಚಾಳಿತನದಲ್ಲಿ. ಇದು ಸದ್ಯದ ಬಹುತೇಕ ಕನ್ನಡ ಚಿತ್ರಗಳಲ್ಲಿನ ಸಮಸ್ಯೆಯೂ ಹೌದು. ನಮ್ಮ ಹೆಚ್ಚಿನ ಸಿನೆಮಾಗಳು ಮಾತಿನ ಮಂಟಪದಿಂದ ಅಲಂಕೃತವಾಗಿದ್ದರೆ, ದೃಶ್ಯಗಳು ಸೋತು ಪೇಲವವೆನಿಸತೊಡಗಿವೆ. ಸಿದ್ಲಿಂಗು ಸಿನೆಮಾದಲ್ಲೂ ಒಳ್ಳೊಳ್ಳೆಯ ಶಾಟ್ ಗಳಿವೆ; ಆದರೀ ಶಾಟ್ ಗಳು ಅರ್ಥಗರ್ಭಿತ ದೃಶ್ಯಗಳಾಗುವಲ್ಲಿ ಸೋಲುತ್ತವೆ. ಇಷ್ಟು ಹೇಳಿದ ಮೇಲೂ ಹೆಚ್ಚು ಮಾತಿಲ್ಲದ ಅಂಡಾಳಮ್ಮ ಪಾತ್ರವೇ ಚಿತ್ರದ ನಂತರ ಪ್ರಧಾನವಾಗಿ ಪ್ರೇಕ್ಷಕನನ್ನ ಕಾಡುವುದು.
ಮಧ್ಯಂತರದ ನಂತರ ಕೈ ತಪ್ಪಿ ಹೋಗಿರುವ ಚಿತ್ರ ಕಥೆ ಚಿತ್ರದೊಳಗಿನ ಇನ್ನೊಂದು ಸಮಸ್ಯೆ. ಸಂಗೀತವೂ ಚಿತ್ರದ ಮೂಡ್ ಅನ್ನ ಹಾಳು ಮಾಡಲು ಸಾಕಷ್ಟು ನೆರವಾಗಿದೆ.
ಈ ಎಲ್ಲದರ ನಡುವೆಯೂ ಭರವಸೆ ಹುಟ್ಟಿಸಿರುವ ನಿರ್ದೇಶಕ ವಿಜಯಪ್ರಸಾದ್ ರ ಮುಂದಿನ ಸಿನೆಮಾಗಳ ಮೇಲೆ ಕನ್ನಡ ಪ್ರೇಕ್ಷಕ ಕುತೂಹಲಿಯಾಗಿದ್ದಾನೆ.
22-01-2012
