ದೃಶ್ಯಕ್ಕೊಂದು ನುಡಿಗಟ್ಟು

ಏನನ್ನೂ ಕಲಿಸದ ಗಾಂಧಿನಗರದ ಚಿತ್ರಗಳು...

(ಕನ್ನಡ ಮನಸ್ಸಿನ ಯುವ ಚಿಂತಕ, ಬರಹಗಾರ, ಒಳ್ಳೆಯ ಗೆಳೆಯರೂ ಆದ ರವಿಕೃಷ್ಣಾ ರೆಡ್ಡಿ ೨೦೦೭ರ ಸೆಪ್ಟಂಬರ್‌ನಲ್ಲಿ ಬರೆದ ಈ ಲೇಖನವನ್ನು ಪ್ರಸ್ತುತವೆನಿಸುವ ಅದರ ಆಶಯ ಗುಣಗಳನ್ನು ಓದುಗರಿಗೆ ವರ್ಗಾಯಿಸುವ ಯೋಚನೆಯಿಂದ ಇಲ್ಲಿ ಯಥಾವತ್ತಾಗಿ ಮರು ಪ್ರಕಟಿಸಲಾಗಿದೆ. ಈಗಿನ ಚಿತ್ರ-ಕಾಲಕ್ಕೂ ಲೇಖನದ ವಿಷಯಗಳು ಪ್ರಸ್ತುತವಾಗುವುದು ಆಶ್ಚರ್ಯವೆನಿಸಿದರೂ ನಿಜ. ಮರು ಪ್ರಕಟಣೆಗೆ ಅನುಮತಿ ನೀಡಿದ ಅವರಿಗೆ ಧನ್ಯವಾದಗಳು  -ಸಂ)

ನಮ್ಮಲ್ಲಿ ವ್ಯಕ್ತಿಪೂಜೆ, ವ್ಯಕ್ತಿ‌ಆರಾಧನೆ ಯಾವ ಮಟ್ಟಕ್ಕೆ ಮುಟ್ಟಿದೆ ಅಂದರೆ ಅದು ಜನರ ಪ್ರಬುದ್ಧತೆಯನ್ನೆ ಹೊಸಕಿ ಹಾಕುತ್ತಿದೆ. ಮನರಂಜನೆಯ ಹೆಸರಿನಲ್ಲಿ ಜನರ ಚಿಂತನಶಕ್ತಿಯನ್ನು, ಬೌದ್ಧಿಕ ಪ್ರಗತಿಯನ್ನು ಅಣಕಿಸುತ್ತಿದೆ. ನನಗೆ ಯಾರೂ ಒಳ್ಳೆಯ ಪಾತ್ರ ಕೊಡುತ್ತಿಲ್ಲ, ಎನ್ನುವ ವಿಷ್ಣುವರ್ಧನ್‌ರಂತಹ ಪ್ರತಿಭಾಶಾಲಿ, ಕನ್ನಡದ ಈಗಿನ ನಂಬರ್ ಒನ್ ನಟ ಅಪರೂಪಕ್ಕೊಮ್ಮೆ ಸಿಕ್ಕಿದ ಪಾತ್ರದಲ್ಲಿ ತಮ್ಮ ಇಮೇಜು, ಇಸಮುಗಳನ್ನೆಲ್ಲ ಬಿಟ್ಟು ನಟಿಸಲಾಗಲಿಲ್ಲ ಅಂದರೆ ಅದು ಯಾರ ದೌರ್ಭ್ಯಾಗ್ಯ, ಯಾರ ದೌರ್ಬಲ್ಯ? ದೆಹಲಿಯಲ್ಲಿ ಶಾರುಖ್ ಯಾವುದೆ ಮೇಕಪ್ ಇಲ್ಲದೆ, ಹೀರೋಯಿನ್ ಇಲ್ಲದೆ, ಬಣ್ಣಗೆಟ್ಟ ಮನೆಯತ್ತ ಸ್ಕೂಟರ್ ತಳ್ಳುತ್ತ ನಟಿಸುತ್ತಿರುವಾಗ ನಮ್ಮಲ್ಲಿನ ಹಿರಿಯರಿಗೆ ರೈತನ ಪಾತ್ರದಲ್ಲೂ ಸೆಕ್ಸಿಯಾಗಿ ಕಾಣುವ ಹಂಬಲ!

ಇಡೀ "ಮಾತಾಡ್ ಮಾತಾಡು ಮಲ್ಲಿಗೆ"ಯ ಚಿತ್ರತಂಡದಲ್ಲಿಯ ಯಾರೊಬ್ಬರಿಗೂ "ಕರ್ನಾಟಕದ ಯಾವೊಬ್ಬ ರೈತನ ನಡೆ-ನುಡಿ-ವೇಷ-ಭೂಷಣಗಳು ಈ ರೀತಿಯಾಗಿ ಇರುವುದಿಲ್ಲ," ಎಂದು ಹೇಳುವ ಕಾಮನ್ ಸೆನ್ಸ್ ಆಗಲಿ ಧೈರ್ಯವಾಗಲಿ ಇಲ್ಲದೆ ಹೋಗಿಬಿಡುವುದು ಒಂದು ನಾಡಿನ ಜನರ ಸ್ವತಂತ್ರ ಮನೋಭಾವದ, ಪ್ರಬುದ್ಧತೆಯ ಉದಾಹರಣೆಯೂ ಆಗಬಹುದು. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಅಂಟಿರುವ ರೋಗವಲ್ಲ. ಕನ್ನಡದ "ಅಪ್ತಮಿತ್ರ" ಎಂಬ ರಿಮೇಕ್ ಚಿತ್ರವೊಂದರ ರಿಮೇಕ್ ಆದ ತಮಿಳಿನ "ಚಂದ್ರಮುಖಿ" ಚಿತ್ರದಲ್ಲಿ ಹೆಣ್ಣೊಬ್ಬಳ ಮಾನಸಿಕ ಕಾಯಿಲೆ ಗುಣಪಡಿಸಲು ವೈದ್ಯನೊಬ್ಬ ಸಾಯಬೇಕು ಎಂದು ಕಣ್ಣೀರು ಸುರಿಸುವ ರಜನಿಕಾಂತ್ ತಮಿಳರ ಸಾಂಸ್ಕೃತಿಕ ನಾಯಕನಾಗಿ ಎಷ್ಟರ ಮಟ್ಟಿಗೆ ಪ್ರಬುದ್ಧತೆ ಮತ್ತು ಬದ್ಧತೆ ತೋರಿಸುತ್ತಿದ್ದಾರೆ? ತೆಲುಗಿನ ನಂಬರ್ ಒನ್ ನಟ ಚಿರಂಜೀವಿ ತಮ್ಮ ರಾಜಕೀಯ ಪ್ರವೇಶಕ್ಕೆ ಮುಹೂರ್ತ ಇಡುವುದರ ಬಗ್ಗೆ ಚರ್ಚೆ ಮಾಡಲು ಅಮೇರಿಕ ಪ್ರವಾಸದಲ್ಲಿ ತೊಡಗಿದ್ದರು ಎಂದು ಇತ್ತೀಚೆಗೆ ತಾನೆ ಕೆಲವು ತೆಲುಗು ಪತ್ರಿಕೆಗಳು ಹೇಳುತ್ತಿದ್ದವು. ಇಂಗ್ಲಿಷೇ ಬರದ ಹಳ್ಳಿಗನೊಬ್ಬ ಖಳನಾಯಕನನ್ನು ಹುಡುಕಿಕೊಂಡು ಅಮೇರಿಕಕ್ಕೆ ಬಂದು ಇಲ್ಲಿ ತನ್ನ ಸಾಹಸ, ಶೌರ್ಯ, ಪರಾಕ್ರಮ ಮೆರೆಸುವುದನ್ನು ಹೇಳುವ "ಜೈ ಚಿರಂಜೀವ" ಎಂಬ ಬಂಡಲ್ ಸಿನೆಮಾದಲ್ಲಿ ಎರಡು ವರ್ಷದ ಹಿಂದೆ ತಾನೆ ನಟಿಸಿರುವ ಇವರು ಯಾವ ಮಟ್ಟದಲ್ಲಿ ಜನರ ಬೌದ್ಧಿಕ ಪ್ರಗತಿಯನ್ನು ಮೇಲೆತ್ತಬಲ್ಲರು? ಏಳೂವರೆ ಕೋಟಿ ಜನಸಂಖ್ಯೆಯ ಆಂಧ್ರಕ್ಕೆ ಯಾವ ತರಹದ ಜನನಾಯಕರಾಗಬಲ್ಲರು?

ಈ ಸೂಪರ್‌ಸ್ಟಾರ್‌ಗಳಲ್ಲಿ ಕೆಲವರು ಈಗಾಗಲೆ ಕನ್ಯಾದಾನ ಮಾಡಿರುವ ಅಪ್ಪಂದಿರು; ಕೆಲವರು ತಾತಂದಿರು. ಆದರೂ ಅವರಿಗೆ ತಮ್ಮ ಮಗಳ ವಯಸ್ಸಿನ ಹಿರೋಯಿನ್‌ಗಳೆ ಬೇಕು. ತಮ್ಮ ಬೋಳು ತಲೆ ಮುಚ್ಚಿಕೊಳ್ಳಲು ಪೇಟ ಕಟ್ಟುತ್ತಾರೆ! ಬಿಳಿಯ ಕೂದಲು ಕಾಣಿಸದಂತೆ ಮೆಹಂದಿ ಹಚ್ಚುತ್ತಾರೆ. ಯಾಕೆ ಇವರು Graceful ಆಗಿ ಹಿರಿಯರಾಗುವುದಿಲ್ಲ? ರಾಜ್‌ಕುಮಾರ್ ತಮ್ಮ ಆದರ್ಶ ಎನ್ನುವ ಇವರಿಗೆ ಅಣ್ಣಾವ್ರ ಬೋಳುತಲೆ ಮತ್ತು ಸಹಜವಾಗಿ ಮುದುಕರಾದ ಅವರ ಪ್ರಬುದ್ಧತೆ ಕಾಣುವುದಿಲ್ಲವೇಕೆ?

ನಿಜಕ್ಕೂ ನಮ್ಮಲ್ಲಿ ಏನಾಗುತ್ತಿದೆ? ಅಂತರ್ಜಾತಿ ಪ್ರೇಮದ ಕತೆ ಹೇಳುವ ಜ್ಞಾನಪೀಠ ಪ್ರಶಸ್ತಿ ವಿಜೇತ ಗುಜರಾತಿ ಸಾಹಿತ್ಯಕೃತಿಯನ್ನು "ಜನುಮದ ಜೋಡಿ" ಸಿನೆಮಾ ಮಾಡುವ ನಾಗಾಭರಣ ಉದಯ ಟೀವಿಯಲ್ಲಿ ದೆವ್ವಭೂತಗಳ, ನಾಗರಹಾವಿನ ಮಹಿಮೆಯ, ಮೂಢಾತಿಮೂಢ ನಂಬಿಕೆ ಬೆಳೆಸುವ ಅವೈಚಾರಿಕ ಧಾರಾವಾಹಿ ಮಾಡುತ್ತಾರೆ. ಚಾರಿತ್ರಿಕ ಹಿನ್ನೆಲೆಯಲ್ಲಿ ಉತ್ತಮ ಎನ್ನಬಹುದಾದ ಕಾಲ್ಪನಿಕ ಕತೆಯೊಂದರಲ್ಲಿ ಕೇವಲ ಪ್ರಚಾರಕ್ಕೋಸ್ಕರ "ಕಲ್ಲರಳಿ ಹೂವಾಗಿ"ಯಲ್ಲಿ ಅಂಬರೀಷರನ್ನು "ಮದಕರಿ ನಾಯಕ" ಮಾಡುತ್ತಾರೆ. ಶುಭಮಂಗಳ ಚಿತ್ರದಲ್ಲಿ ಮೂಗನಾಗಿ ಅತಿಸಹಜವಾಗಿ ನಟಿಸಿರುವ, ಆದರೆ ಈ ಮಧ್ಯೆ ನಟನೆಯ ಅ‌ಆ‌ಇ‌ಈಯನ್ನೆ ಮರೆತಿರುವ ಅಂಬರೀಷ್ ತಮ್ಮ ಈಗಿನ ರೂಪಕ್ಕೆ, ಗಾತ್ರಕ್ಕೆ ನಾಲಾಯಕ್ ಆದ ಪಾತ್ರ ಮಾಡಿ, ಕ್ಲೈಮಾಕ್ಸ್‌ನಲ್ಲಿ "ಕಂದ, ನಾನು ಬರುವುದು ತಡವಾಯಿತೆ," ಎಂಬ ಒಂದೆ ಒಂದು ನಾಟಕದ ಡೈಲಾಗ್‌ನಿಂದಾಗಿ ಥಿಯೇಟರ್‌ನಲ್ಲಿಯ ಜನ ಸಹಾನುಭೂತಿಯಿಂದ ನಗುವಂತೆ ಮಾಡುತ್ತಾರಲ್ಲ, ಯಾಕೆ?

"ತಮಗೆ ಯಾರೂ ಒಳ್ಳೆಯ ಪಾತ್ರ ಕೊಡುತ್ತಿಲ್ಲ," ಎನ್ನುವ ಹಿರಿಯ ನಟ ವಿಷ್ಣುವರ್ಧನ್ ತಮಗೆ ಬೇಕಾದ ಪಾತ್ರದಲ್ಲಿ ನಟಿಸಲು ತಾವೆ ಚಿತ್ರ ನಿರ್ಮಿಸುವ ಯುವಕ ಸುದೀಪ್‌ರ ಉದಾಹರಣೆಯನ್ನು ಗಮನಿಸಬೇಕು. ತಮ್ಮ ಇಮೇಜು ಬದಿಗಿಟ್ಟು, ವಯಸ್ಸಿಗೆ ಸೂಕ್ತವಾದ ಪಾತ್ರ ಇರುವ ಚಿತ್ರವನ್ನು ಅವರೆ ನಿರ್ಮಿಸಬೇಕು. ಆದರೆ ಅವರು ಇಂತಹ ಪ್ರಯತ್ನ ಮಾಡುವುದು ಅಸಾಧ್ಯ ಅನ್ನಿಸುತ್ತದೆ. "ಮಾತಾಡ್ ಮಾತಾಡು ಮಲ್ಲಿಗೆ" ಬಿಡುಗಡೆಯಾಗುವುದಕ್ಕೆ ಮೊದಲು, "ರೈತರು ಚಳವಳಿ ಮಾಡಿದರೆ ಬೇಕಾದರೆ ನಾನು ಮುಂದಾಳತ್ವ ವಹಿಸುತ್ತೇನೆ," ಎಂದಿದ್ದ ಅವರು ಕಳೆದ ವಾರ ತಾನೆ "ನಾವು ಅಲ್ಲಿಗೆ ಹೋಗಿ ಏನು ಮಾಡುವುದು. ನಾವು ದೊಡ್ಡ ಫೇಲ್ಯೂರ್‌ಗಳು. ನಮ್ಮ ಚಿತ್ರರಂಗದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೇ ನಮ್ಮಿಂದ ಸಾಧ್ಯವಾಗುತ್ತಿಲ್ಲ," ಎಂದಿದ್ದಾರೆ. ಈ ಬಾಯುಪಚಾರದ ಮಾತುಗಳ ಹಿನ್ನೆಲೆಯಲ್ಲಿ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ಅವಾಸ್ತವ ಎನ್ನಿಸುವುದಿಲ್ಲವೆ?

"ಚಿಗುರಿದ ಕನಸು" ಕಮರ್ಷಿಯಲ್ ಆಗಿ ಸೋತ ಮಾತ್ರಕ್ಕೆ ಒಳ್ಳೆಯ ಸಾಮಾಜಿಕ ಸಿನೆಮಾಗಳಿಗೆ ಅಣ್ಣಾವ್ರ ಕುಟುಂಬವೂ ತಿಲಾಂಜಲಿ ಇತ್ತಂತಿದೆ. ರಿಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದಿರುವ ಶಿವರಾಜ್ ಕುಮಾರ್ ಆಗಾಗ ಕೆಲವು ಪ್ರಯೋಗಶೀಲ ನಿರ್ದೇಶಕರನ್ನು ಪ್ರೋತ್ಸಾಹಿಸುವುದು ನಿಜವಾದರೂ, ಅವರ ಇತ್ತೀಚಿನ ಅನೇಕ ಚಿತ್ರಗಳು ಇತರರಿಗಿಂತ ಭಿನ್ನವಾಗೇನೂ ಇಲ್ಲ. ಕೃತಕ ಎನ್ನಿಸುವ ಕತೆಗಳ, ಗಂಡನೆ ಸರ್ವಸ್ವ ಎನ್ನುವಂತಹ ಭಾವಪ್ರಧಾನ ಚಿತ್ರಗಳಿಗೆ ಹೆಚ್ಚಿನ ಶೆಲ್ಫ್‌ಲೈಫ್ ಇಲ್ಲ ಎನ್ನುವುದನ್ನು ಅವರು ಅರಿಯಬೇಕು.

ಶಂಕರ್‌ನಾಗ್‌ರ ತರುವಾಯ ಅವರ ರೀತಿ ಯೋಚಿಸುವ ಮಹತ್ವಾಕಾಂಕ್ಷಿ, ಪ್ರಯೋಗಶೀಲ, ಬುದ್ಧಿಜೀವಿ, ಕ್ರಿಯಾಶೀಲ ನಟರು ಬರದೆ ಹೋಗಿದ್ದು ಕನ್ನಡ ಚಿತ್ರರಂಗದ ಈಗಿನ ದುರಂತಕ್ಕೆ ಸ್ವಲ್ಪ ಮಟ್ಟಿಗೆ ಕಾರಣವೂ ಹೌದು. ಅಪರಿಚಿತ ಎಂಬ ಸಹಜವಾದ, ಅತ್ಯುತ್ತಮ ಚಿತ್ರ ಮಾಡುವ ಕಾಶಿನಾಥ್ ಈಗ ನಗೆಪಾಟಲಿಗೆ ಪರ್ಯಾಯ ಪದ ಆಗಿಹೋಗಿದ್ದಾರೆ. ಒಳ್ಳೆಯ ಕಮರ್ಷಿಯಲ್ ಚಿತ್ರ ಮಾಡುವ ತಾಕತ್ತಿರುವ ಉಪೇಂದ್ರ ಪ್ರತಿಭಾವಂತ ಮಾತ್ರವಲ್ಲದೆ ಇಮೇಜನ್ನು ಬದಿಗಿಟ್ಟು ನಟಿಸಬಲ್ಲ ಹಾಗೂ ರಿಸ್ಕ್ ತೆಗೆದುಕೊಳ್ಳಬಲ್ಲ ಧೈರ್ಯವಂತ ಸಹ. ಆದರೂ ರಿಮೇಕ್ ಚಿತ್ರಗಳ ಶಾರ್ಟ್‌ಕಟ್ ಮತ್ತು ದಿಢೀರ್ ಸಕ್ಸೆಸ್‌ನ ಹಂಬಲ ಅವರಿಗೆ.

ಇಂತಹ ಒಳ್ಳೊಳ್ಳೆಯ ನಿರ್ದೇಶಕರೆಲ್ಲ ಹೀರೋ ಆಗಿ ಮಿಂಚಬೇಕೆಂಬ ಹಂಬಲದಿಂದಾಗಿ ಇವತ್ತು ಕನ್ನಡದಲ್ಲಿ ಪ್ರತಿಭಾವಂತ ನಿರ್ದೇಶಕರ ಕೊರತೆ ಇದೆ. ಅಷ್ಟೇ ಅಲ್ಲ, ನಟರ ಕೊರತೆಯೂ ಇದೆ. ಮದಕರಿ ನಾಯಕನ ಪಾತ್ರಕ್ಕೆ ಅಂಬರೀಷರೆ ಬೇಕಾಗಿರುವುದು ಇದನ್ನೆ ಅಲ್ಲವೆ ಸಾರುವುದು? ಆಗಾಗ ಅಲ್ಲೊಂದು ಚಿತ್ರ ಇಲ್ಲೊಂದು ಚಿತ್ರ ಸಕ್ಸೆಸ್ ಕಾಣುತ್ತಿದ್ದರೂ ಒಟ್ಟಿನಲ್ಲಿ ಪ್ರತಿಭಾವಂತ ನಟ, ನಿರ್ದೇಶಕ, ತಂತ್ರಜ್ಞರ ಕೊರತೆಯಲ್ಲಿ ಕನ್ನಡ ಚಿತ್ರರಂಗವಿದೆ. ಹಾಗೆಯೆ, ಒಳ್ಳೆಯ ಚಿತ್ರಕ್ಕಾಗಿ ದುಡ್ಡು ಕಳೆದುಕೊಳ್ಳಲೂ ಸಿದ್ಧವಿರುವ ಬುದ್ಧಿಜೀವಿ ಶ್ರೀಮಂತರ ಕೊರತೆಯಂತೂ ಇದ್ದೇ ಇದೆ. ಎಲ್ಲಿಯವರೆಗೂ ಇವೆರಡರ ಕೊರತೆ ನೀಗುವುದಿಲ್ಲವೊ ಅಲ್ಲಿಯವರೆಗೂ ನಮ್ಮ ಸಿನೆಮಾಗಳು ಸಮಾಜವನ್ನು ಪ್ರತಿಬಿಂಬಿಸುವುದಿಲ್ಲ; Human Spirit ಅನ್ನು Elevate ಮಾಡುವುದಿಲ್ಲ. ಚೀಪ್ ಮನರಂಜನೆಯ ಹೊರತಾಗಿ ರಾಜ್‌ಕುಮಾರೋತ್ತರ ಸಿನೆಮಾಗಳಿಂದ ಕಲಿಯುವುದು ಏನೇನೂ ಇರುವುದಿಲ್ಲ.

31-01-2012

samvaada.com fan page on facebook




ಇಲ್ಲಿವರೆಗಿನ ಅಭಿಪ್ರಾಯಗಳು

hemanth
2012-01-31 08:39:42

ಮೇಲೆ ಹೇಳಿರುವ ಎಲ್ಲಾ ಮಾತುಗಳು ಅಕ್ಷರ ಸಹ ನಿಜವಾಗಿದ್ದರೂ ನನಗನಿಸುತ್ತದೆ, ಹೆಚ್ಚಿನ ಕ್ರಿಯಾಶೀಲ ಚಿತ್ರಗಳು ಹೊರಬರಲು ಮತ್ತು ಹೊಸ ತಂತ್ರಗಾರಿಕೆಯನ್ನು ತರಲು, ಉತ್ತಮ ಚಿತ್ರಗಳನ್ನು ತಯಾರು ಮಾಡಲು, characterisation ಸರಿಯಾಗಿ ಮಾಡಲು, ಒಂದು ಉತ್ತಮ ಕಥೆಗೆ ನ್ಯಾಯ ಒದಗಿಸಲು, ಸ್ಕ್ತಿಪ್ಟ್ ಗೆ ಒತ್ತು ನೀಡಲು, ಹೀರೋ ಅಥವಾ ಹೀರೋಯಿನ್ ಕೇಂದ್ರೀಕೃತ ಸಿನಿಮಾಗಳ ಬದಲು ಕಥೆಯ ಆಧಾರಿತ ಸಿನಿಮಾಗಳು ಬರಲು ನಮ್ಮ ನಿರ್ದೇಶಕರು, ತಂತ್ರಜ್ಹರ ಹೊಣೆ ಎಷ್ಟಿದೆಯೋ ಅಷ್ಟೇ ಮೀಡಿಯಾದವರ ಹೊಣೆಯೂ ಇದೆ ಎಂದು ನನಗನಿಸುತ್ತದೆ. ಈ ರೀತಿ ಅದಿಲ್ಲ, ಇದಿಲ್ಲ, ಅವರು ಹಾಗೆ ಇವರು ಹೀಗೆ ಎಂದು ನೆಗೆಟಿವ್ ಗಳನ್ನು ಎತ್ತಿ ತೋರಿಸುವ ಜಾಗದಲ್ಲಿ ಪ್ರತಿಯೊಂದು ಕಡೆಯೂ ಇಂತಹ ಸಿನಿಮಾದಲ್ಲಿ ಇಂತಹ ತಂತ್ರಗಾರಿಕೆ ಚೆನ್ನಾಗಿ ಮೂಡಿಬಂದಿದೆ, ಈ ರೀತಿಯ ಪಾತ್ರ ಬಳಕೆ ವಿಭಿನ್ನವಾಗಿದೆ, ಇಂತಹ ಕಥೆಗಳು ಹೆಚ್ಚು ಜನಪ್ರಿಯವಾಗಲಿದೆ, ಇಂತಹ ನಿರ್ದೇಶಕರಲ್ಲಿ ಒಳ್ಳೆಯ ಅಭಿರುಚಿಯಿದೆ, ಇಂತಹ ನಿರ್ಮಾಪಕರ ಪ್ರಯತ್ನ ಎಲ್ಲರೂ ಮೆಚ್ಚಬೇಕಾದ್ದೇ ಎಂದು ಪ್ರೋತ್ಸಾಹಿಸಿದಲ್ಲಿ ಸದಭಿರುಚಿಯ, ಮೌಲ್ಯಯುತ ಸಿನಿಮಾಗಳು ನಿರ್ಮಾಣವಾಗುವಲ್ಲಿ ನೀವು ನಾವೂ ಸಹ ಪಾತ್ರವಹಿಸಬಹುದಾ? ಎಂಬುದು ನನ್ನ ಚಿಂತನೆ. ಒಳ್ಳೆಯದನ್ನು ಉತ್ತೇಚಿಸುವ, ಕೆಟ್ಟದ್ದನ್ನು ಸುದ್ದಿ ನೀಡದೆ ಮರೆಗೆ ತಳ್ಳುವ. ಇದು ನನ್ನ ಅಭಿಪ್ರಾಯವಷ್ಟೇ.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು