ಸಿದ್ಲಿಂಗು
ಚಿತ್ರದಲ್ಲಿ ಒಂದೊಂದು ಪಾತ್ರವನ್ನು ಮೂಡಿಸಿರುವ ರೀತಿ ವಿಶಿಷ್ಟವಾಗಿದೆ. ಪಾತ್ರಗಳು ಒಂದಕ್ಕೊಂದು ಪರಿಚಯವಾಗುವುದು ಇನ್ಸಿಡೆಂಟಲ್ ಎನಿಸುತ್ತ ಸಹಜತೆಗೆ ಹತ್ತಿರವಾಗಿದೆ.ಎಲ್ಲ ಪಾತ್ರಗಳೂ ಇನ್ನೊಂದು ಪಾತ್ರಕ್ಕೆ ಸಹಾಯ ಮಾಡುತ್ತಲೇ ಹತ್ತಿರವಾಗುತ್ತವೆ, ಯಾರಿಗೆ ಯಾರೂ ಅನಿವಾರ್ಯವಲ್ಲ. ಇತ್ತೀಚಿನವರೆಗೂ ತೀರ ಭಾವುಕವೆನಿಸುತ್ತಿದ್ದ ಎಂದುಕೊಳ್ಳುತ್ತಿದ್ದ ಅಪ್ಪ ಅಮ್ಮ ಪ್ರೇಯಸಿ ಎಂಬಂತಹ ಪಾತ್ರಗಳು ಇಲ್ಲಿ ಅಷ್ಟು ಆಳವೆನಿಸದೇ ತೀರ ಹಗುರವಾಗಿ ಮೂಡಿಸಿದಂತಿದೆ. ಅಚಾನಕ್ಕಾಗಿ ಹುಟ್ಟುವ ಪಾತ್ರಗಳು ಅವು ಕಳೆದು ಹೋಗುವ ರೀತಿಯನ್ನು ಕಟ್ಟಿಕೊಡುವಲ್ಲಿ ನಿರ್ದೇಶಕರು ಸಾಕಷ್ಟು ಶ್ರಮಿಸದಿರುವುದು ತಿಳಿಯುತ್ತದೆ. ಲೆಕ್ಚರರ್ ಒಬ್ಬಳು ಕಾರಣವೇ ಇಲ್ಲದಂತೆ ತನ್ನ ವಿದ್ಯಾರ್ಥಿಯತ್ತ ಆಕರ್ಷಿತಳಾಗಿ ಮೈ ಒಪ್ಪಿಸಿಬಿಡುವ ದೃಶ್ಯ ತೀರ ಸಹಜವೆಂಬಂತೆ ಹೇಳಲಾಗಿದೆ. ಇಡೀ ಕತೆಯಲ್ಲಿ ಗಂಭೀರ ಎನಿಸುವುದು, ಭಾವನಾತ್ಮಕವಾಗಿ ತಟ್ಟುವುದು ಬಾಲಕ ಸಿದ್ಲಿಂಗುವಿನ ಪ್ರೇಮ ಪ್ರಸಂಗ. ಕಡಿಮೆ ದೃಶ್ಯಗಳಲ್ಲೇ ಆ ಪಾತ್ರಕ್ಕಿರುವ ಪ್ರಾಮುಖ್ಯತೆ ಆಳ, ಇಡೀ ಸಿನಿಮಾದ ತುಂಬಾ ಇರುವ ಯುವಕ ಸಿದ್ಲಿಂಗುವಿಗೆ ಸಿಗದಿರುವುದು ವಿಪರ್ಯಾಸ. ಪ್ರತಿ ಪಾತ್ರವನ್ನು ಹಗುರವಾಗಿ ಮೂಡಿಸಿ ಸೀರಿಯಸ್ ನೆಸ್ ನತ್ತ ತಳ್ಳುವುದು, ಮುಂಗಾರು ಮಳೆಯಿಂದಲೂ ನಡೆದು ಕೊಂಡು ಬಂದಿರುವ ಪದ್ದತಿಯೇ, ಆದರೆ ಈ ಸಿನಿಮಾದಲ್ಲಿ ಗಂಭೀರತೆಯೂ ಎಲ್ಲೂ ಪ್ರಮುಖವಾಗಿಲ್ಲ ಹಾಗಾಗಿ ಕಡೆಯಲ್ಲಿ ನಾಯಕಿ ಸತ್ತರೂ ಅದು ಕತೆ ಹೇಳುತ್ತಿರುವ ರೀತಿಗೆ, ನಡೆದಷ್ಟೇ accidental ಎನಿಸಿ ಮರೆತು ಹೋಗುತ್ತದೆ. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಗ್ರಾಮೀಣತೆಯ ಹಿನ್ನೆಲೆಯಲ್ಲಿ ಕತೆಯನ್ನು ಬಿಡಿಸುತ್ತಾ ಮುಂದುವರೆಯುವ ಚಿತ್ರ, ಕತೆಗೆ ಅನಿವಾರ್ಯವೆನಿಸುವಂತೆ ನಾಯಕನಿಗೆ ಕಾರಿನ ಬಗ್ಗೆ ಇರುವ ಗೀಳನ್ನು ತೋರಿಸುತ್ತದೆ. ಸಿದ್ಲಿಂಗುವಿನ ಜೀವನದ ಜೊತೆ ಕಾರು, ಕಾರಿನ ಬಗ್ಗೆ ಆತನ ಕನಸನ್ನು ವಿಸ್ತರಿಸುತ್ತಾ ಸಾಗುತ್ತದೆ. ಇಡೀ ಕತೆಯಲ್ಲಿ ಬಂದು ಮರೆಯಾಗುವ ಪಾತ್ರಗಳಲ್ಲಿ ಇಲ್ಲದ ಗಟ್ಟಿತನವನ್ನು ಕಾರಿಗೆ ನೀಡಲಾಗಿದೆ. ಪಾತ್ರಗಳನ್ನು ಬೇಕೆಂದಲ್ಲಿ ಸೃಷ್ಟಿಸಿ ಬೇಡವೆಂದಲ್ಲಿ ಸಾಯಿಸಿಬಿಟ್ಟಿರುವ ನಿರ್ದೇಶಕರು ಕಾರಿಗೊಂದು ಕೊನೆಯೇ ಕೊಡುವುದಿಲ್ಲ. ಯಾವ ಪಾತ್ರಕ್ಕೂ ಸ್ಪಷ್ಟನೆ ಯಾಗಲೀ ಫ್ಲಾಶ್ ಬ್ಯಾಕ್ ಆಗಲೀ ಇಲ್ಲವೇ ಇಲ್ಲ. ಎಲ್ಲರೂ ಸಿದ್ಲಿಂಗುವಿಗೆ ಪರಿಚಯವಾಗಲೆಂದೇ ಕಾಯುತ್ತಿರುವ ಪಾತ್ರಗಳು, ಸಿದ್ಲಿಂಗುವಿನೊಂದಿಗಲ್ಲದೆ ಅವಕ್ಕೆ ಬೇರೆಲ್ಲೂ ಇರವೇ ಇಲ್ಲ. ಹೀಗೆ ಅಸ್ಪಷ್ಟವಾದ ಒಂದು ಕತೆಯನ್ನು ಹೇಳಲು ಹೊರಟು, ಹೇಳುವಾಗಲೂ ಸ್ಪಷ್ಟತೆ ಕಂಡುಕೊಳ್ಳದೆ, ಕೊನೆಯನ್ನು ಪರಿಣಾಮಕಾರಿಗೊಳಿಸುವತ್ತ ಕೆಂದ್ರೀಕೃತಗೊಂಡು ಅಬ್ರಪ್ಟ್ ಆಗಿ ಮುಗಿದು ಹೋಗುತ್ತದೆ. 2012-02-20
|
|